ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ, ಎಚ್‌ಡಿಕೆ ಮುಖಾಮುಖಿಗೆ ತುತ್ತಾದ ಓವೈಸಿ

ಕದನ ಕುತೂಹಲ ಮೂಡಿಸಿರುವ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ,ಕುಮಾರಸ್ವಾಮಿ ಮುಖಾಮುಖಿಯಾಗಿದ್ದಾರೆ. ಓವೈಸಿ ನೀಡಿದ ಬೆಂಬಲವನ್ನು ಎಚ್ಡಿಕೆ ಸಮರ್ಥಿಸಿಕೊಂಡರೆ, ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತಿದೆ ಜೆಡಿಎಸ್‌ ವರ್ತನೆ ಎಂದು ಸಿಎಂ ಛೇಡಿಸಿದ್ದಾರೆ

ಕದನ ಕುತೂಹಲ ಮೂಡಿಸಿರುವ ಚಾಮುಂಡೇಶ್ವರಿ ಕಣದಲ್ಲಿ ಕಾಂಗ್ರೆಸ್ ಚುನಾವಣಾ ಸಾರಥಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ಕಟ್ಟಾಳು, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸೋಮವಾರ (ಏ.೧೬) ಮುಖಾಮುಖಿಯಾಗಿದ್ದರು. ಕಳೆದ ಎರಡು ದಿನಗಳಿಂದ ಚಾಮುಂಡೇಶ್ವರಿ ಕ್ಷೇತ್ರವನ್ನೇ ಕೇಂದ್ರೀಕರಿಸಿ, ಬಿಡುವಿಲ್ಲದೆ ಪ್ರಚಾರ ಪ್ರವಾಸ ಮಾಡಿದ ಕುಮಾರಸ್ವಾಮಿ, ಮೂರನೆ ದಿನ ಇಲವಾಲ ಹೋಬಳಿ ವ್ಯಾಪ್ತಿಯ ಮೂವತ್ತಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡ ಪರ ಮತ ಯಾಚಿಸಿದರು. ಕಾಂಗ್ರೆಸ್ ಪಟ್ಟಿ ಅಖೈರುಗೊಳಿಸುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದ ಸಿದ್ದರಾಮಯ್ಯ ಎರಡೆರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆನ್ನುವ ವದಂತಿಗಳಿಗೆ ತೆರೆ ಎಳೆದು, ಚಾಮುಂಡೇಶ್ವರಿಯಲ್ಲಷ್ಟೆ ಸ್ಪರ್ಧಿಸುವ ‘ಏಕ ಮನಸ್ಸಿನಿಂದ’ ಸೋಮವಾರ ಮತ್ತೊಂದು ಸುತ್ತಿನ ಪ್ರಚಾರ ಯಾತ್ರೆ ಕೈಗೊಂಡರು. ಇಬ್ಬರೂ ನಾಯಕರು ತಮ್ಮ ಬೆಂಬಲಗರ ಜೊತೆ ಭಿನ್ನ ಧಿಕ್ಕುಗಳಲ್ಲಿ ಸಂಚರಿಸಿದರಾದರೂ, ಮಾತಿನ ಕೊಡು- ಕೊಳ್ಳುವಿಕೆಯಲ್ಲಿ ಯಾರೂ ಹಿಂದೆ ಬೀಳಲಿಲ್ಲ. ಆಯಾ ಪ್ರದೇಶದ ದೇವಾಲಯ, ಮುಖಂಡರ ಮನೆಗಳನ್ನು ಎಡೆತಾಕಿ ‘ಆಶೀರ್ವಾದ’ ಪಡೆಯುವಲ್ಲಿಯೂ ಮೇಲಾಟ ನಡೆಸಿದರು.

ಭಾನುವಾರದ ಪ್ರಚಾರ ವೇಳೆ ಕುಮಾರಸ್ವಾಮಿ, “ನಾನು ಮತ್ತೆ ಮುಖ್ಯಮಂತ್ರಿಯಾದರೆ ಉದ್ಬೂರು ಗ್ರಾಮವನ್ನು ದತ್ತು ಪಡೆಯುತ್ತೇನೆ. ಮೈಸೂರು ಜಿಲ್ಲೆಯನ್ನು ಮಾದರಿ ಜಿಲ್ಲೆ ಮಾಡುತ್ತೇನೆ. ಜಿ.ಟಿ. ದೇವೇಗೌಡರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡುತ್ತೇನೆ,’’ ಮುಂತಾದ ಹಲವು ಭರವಸೆ ನೀಡಿದ್ದರು. ಸಿದ್ದರಾಮಯ್ಯ ವಿರುದ್ಧ ಎಂದಿನಂತೆ ಎಲ್ಲೆಡೆ ವಾಗ್ದಾಳಿ ನಡೆಸಿದ ಅವರು, “ವ್ಯಾಪಕ ಭ್ರಷ್ಟಾಚಾರ ನಡೆಸಿ, ಲೂಟಿ ಮಾಡಿದ ಹಣವನ್ನು ಈಗ ನಿಮಗೆ ಹಂಚಲು ಬರುತ್ತಾರೆ. ಹುಷಾರಾಗಿರಿ,’’ ಎಂದು ಮತದಾರರನ್ನು ಎಚ್ಚರಿಸಿದರು. “ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಗೆಲ್ಲುವುದಿಲ್ಲ,’’ ಎಂದೂ ಪುನರುಚ್ಚರಿಸಿದರು. ಕುರುಬ ಸಮುದಾಯದ ಬಾಹುಳ್ಯ ಇರುವ ಗ್ರಾಮವೊಂದರಲ್ಲಿ ಯುವಕರು ಕಾಂಗ್ರೆಸ್ ಬಾವುಟ ಪ್ರದರ್ಶಿಸಿ, ಸಿದ್ದರಾಮಯ್ಯಗೆ ಜಯಕಾರ ಹಾಕಿ ಮುಜುಗರವನ್ನೂ ಉಂಟು ಮಾಡಿದ್ದರು. ಸೋಮವಾರ ಹೂಟಗಳ್ಳಿಯಿಂದ ಪ್ರವಾಸ ಆರಂಭಿಸಿದ ಕುಮಾರಸ್ವಾಮಿಗೆ ವ್ಯಾಪಕ ಜನ ಬೆಂಬಲ ವ್ಯಕ್ತವಾಯಿತು. ಬೆಳವಾಡಿಯಲ್ಲಿ ಮಾತನಾಡಿದ ಅವರು, “ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜೆಡಿಎಸ್‌ ಬೆಂಬಲಿಸಿ,’’ ಎಂದು ಕೋರಿದರು.

ಓವೈಸಿ ಬೆಂಬಲ ಸಮರ್ಥನೆಗೆ ತಿಣುಕಾಟ

ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್ಡಿಕೆ, ಜೆಡಿಎಸ್‌ಗೆ ಓವೈಸಿ ಬೆಂಬಲ ವ್ಯಕ್ತಪಡಿಸಿದ್ದನ್ನು ಸ್ವಾಗತಿಸುತ್ತಲೇ ಅದನ್ನು ಸಮರ್ಥಿಸಿಕೊಳ್ಳಲು ತಿಣುಕಿದರು. “ಓವೈಸಿ ನಮ್ಮ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುವುದಾಗಿ ತಿಳಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಸ್ತಾಪ ಮಾಡಿಲ್ಲ. ಮುಸಲ್ಮಾನ‌ ಬಂಧುಗಳ ಭಾವನೆಗಳನ್ನು ಕಾಂಗ್ರೆಸ್ ಆವರಿಸಿದೆ. ಓವೈಸಿ ಬೆಂಬಲದ ಮೂಲಕ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ,’’ ಎಂದು ಭರವಸೆ ವ್ಯಕ್ತಪಡಿಸಿದರು. “ಕೆಲವು ಕಾಣದ ಕೈಗಳ ಕಾರಣದಿಂದ ರಾಜ್ಯದಲ್ಲಿ ಕೋಮುಗಲಭೆಗಳು ನಡೆದಿವೆ. ಅದಕ್ಕಾಗಿ ಓವೈಸಿ ಬೆಂಬಲವನ್ನು ಕೆಲವರು ವಿರೋಧಿಸುತ್ತಿದ್ದಾರೆ. ಆದರೆ, ಓವೈಸಿ ಕರ್ನಾಟಕಕ್ಕೆ ಬಂದು ಯಾವತ್ತೂ ಭಾವನಾತ್ಮಕ ವಿಷಯಗಳನ್ನು ಕೆರಳಿಸುವ ಮಾತನಾಡಿಲ್ಲ. ಮುಂದೆಯೂ ಮಾತನಾಡಲ್ಲ ಎಂದುಕೊಂಡಿದ್ದೇನೆ,’’ ಎಂದು ಸ್ಷಷ್ಟಪಡಿಸುವ ಪ್ರಯತ್ನ ಮಾಡಿದರು. “ಸಮಾಜದಲ್ಲಿ ಶಾಂತಿ ಕದಡಲು, ಕೋಮುಗಲಭೆ ಸೃಷ್ಟಿಸಲು ನಮ್ಮ ಪಕ್ಷ ಆಸ್ಪದ ನೀಡುವುದಿಲ್ಲ. ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ದೇಶದ ಯಾವುದೇ ಪಕ್ಷ ಸಹಕಾರ ನೀಡಿದರೆ ಸ್ವಾಗತವಿದೆ. ಅಂತೆಯೇ, ರಾಜ್ಯದ ಅಭಿವೃದ್ಧಿ ಸಲುವಾಗಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಕಿತ್ತೊಗೆಯುವ ಸಲುವಾಗಿ ಓವೈಸಿ ಸಹಕಾರ ನೀಡುತ್ತಿದ್ದಾರೆ,’’ ಎಂದೂ ವಿವರಿಸಿದರು. ಅವರ ಮಾತುಗಳು, ಓವೈಸಿ ಬೆಂಬಲ ನೀಡಿದ್ದರ ಸಂತೋಷದ ಜೊತೆಗೆ ಸಂಭವನೀಯ ಸಂದಿಗ್ಧ ಸ್ಥಿತಿಗಳನ್ನು ಎದುರಿಸಲು ಸಿದ್ಧತೆ ನಡೆಸಿದಂತೆಯೂ ತೋರಿತು.

ಜೆಡಿಎಸ್‌ ಓವೈಸಿ ಬೆಂಬಲದ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆಯನ್ನೂ ನೀಡಿದರು. “ನಮ್ಮದು ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ಜೆಡಿಎಸ್‌ ನವರು ಕೋಮುವಾದಿ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಓವೈಸಿಯ ಯಾವುದೇ ಪ್ರಭಾವ ಇಲ್ಲ. ಅವರ ಜೊತೆಗಿನ ಮೈತ್ರಿಯಿಂದ ಯಾವುದೇ ಪ್ರಭಾವ ಉಂಟಾಗುವುದೂ ಇಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ, ಅವರ ಜೊತೆ ಕೈ ಜೋಡಿಸಿರುವುದರಿಂದ ಅವರನ್ನು ಕುಮಾರಸ್ವಾಮಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ,’’ ಎಂದು ಛೇಡಿಸಿದರು.

ಮತಗಳೇನು ಕುಮಾರಸ್ವಾಮಿ ಜೇಬಲ್ಲಿವೆಯೇ?

“ಸಿಎಂ ಬಂದು ಪ್ರಚಾರ ಮಾಡಿದರೂ ನನ್ನನ್ನು ಸೋಲಿಸಲಾಗಲ್ಲ,’’ ಮತ್ತು “ಚಾಮುಂಡೇಶ್ವರಿಯಲ್ಲೇ ಸಿದ್ದರಾಮಯ್ಯ ಮೋಕ್ಷ’’ ಎನ್ನುವ ಕುಮಾರಸ್ವಾಮಿ ಹೇಳಿಕೆಗಳಿಗೆ ಸಿದ್ದರಾಮಯ್ಯ,“ಮತಗಳೇನು ಕುಮಾರಸ್ವಾಮಿಯ ಜೇಬಿನಲ್ಲಿವೆಯೇ. ಹಾಗಿದ್ದರೆ ಚಿಕ್ಕಬಳ್ಳಾಪುರ ಸಂಸತ್‌ ಕ್ಷೇತ್ರದಲ್ಲಿ ವೀರಪ್ಪ ಮೊಯ್ಲಿ ವಿರುದ್ಧ ಅವರು (ಕುಮಾರಸ್ವಾಮಿ) ಸೋತದ್ದೇಕೆ, ಚನ್ನಪಟ್ಟಣದಲ್ಲಿ ಅನಿತಾ ಕುಮಾರಸ್ವಾಮಿ ಸೋಲಲಿಲ್ಲವೇ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನು ಗೆಲ್ಲಿಸಬೇಕು ಎನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಇಂಥ ಲಘು ಹೇಳಿಕೆಗಳನ್ನು ನೀಡಬಾರದು,’’ ಎಂದು ತಿರುಗೇಟು ನೀಡಿದರು. “ಒಂದು ಪಕ್ಷದ ಅಧ್ಯಕ್ಷರಾಗಿ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಂದು ಪ್ರಚಾರ ಮಾಡಿದ್ದಾರೆ, ಮಾಡಲಿ ಬಿಡಿ. ೨೦೦೬ರ ಉಪಚುನಾವಣೆಯಲ್ಲೂ ಪ್ರಚಾರ ಮಾಡಿದ್ದರೂ ಗೆದ್ದದ್ದು ನಾನೇ. ಈಗಲೂ ಅದೇ ರೀತಿ ಆಗುತ್ತೆ,’’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಚಾಮುಂಡೇಶ್ವರಿಯಲ್ಲಷ್ಟೆ ಸಿಎಂ ಸ್ಪರ್ಧೆ ನಿರ್ಧಾರದ ಹಿಂದಿನ ಲಾಭ-ನಷ್ಟಗಳೇನು? 

ಮೈಸೂರಿನ ಹೊರವಲಯದ ಲಿಂಗಾಂಬುದಿ ಪಾಳ್ಯದಿಂದ ಪ್ರಚಾರ ಆರಂಭಿಸಿದ ಸಿಎಂ, ಸಿದ್ದಪ್ಪಾಜಿ, ಮಂಟೇಸ್ವಾಮಿ ದೇವಾಲಯ, ರಾಮಮಂದಿರಗಳಿಗೆ ಭೇಟಿ ನೀಡಿದರು. ವೀರಭದ್ರ ಕುಣಿತ ಹಾಕುತ್ತಿದ್ದವರಿಂದ ವೀರಕತ್ತಿಯನ್ನು ಪಡೆದು, ಹೆಜ್ಜೆ ಹಾಕಿದರು. ನಂತರ ಶ್ರೀರಾಂಪುರ, ರಮಾಬಾಯಿ ನಗರ ಸಹಿತ ಅನೇಕ ಬಡಾವಣೆ, ಗ್ರಾಮಗಳಲ್ಲಿ ತೆರೆದ ವಾಹನದಲ್ಲಿ ತೆರಳಿ ಮತಯಾಚಿಸಿದರು. ಲಿಂಗಾಂಬುದಿ ಪಾಳ್ಯದಲ್ಲಿ ಗ್ರಾಮಸ್ಥರು ಮತ್ತು ಬೋವಿ ಸಮಾಜದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, “ಬೋವಿ ಜನಾಂಗದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಈ ಬಾರಿ ಈ ಸಮುದಾಯದ ಏಳು ಮಂದಿಗೆ ಟಿಕೆಟ್‌ ನೀಡಲಾಗಿದೆ. ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ತುಳಿತಕ್ಕೊಳಗಾದ ಸಮುದಾಯಕ್ಕೆ ಧ್ವನಿ ನೀಡುವ ಕೆಲಸ ಮಾಡಿದ್ದೇವೆ. ಆದ್ದರಿಂದ ನಮ್ಮನ್ನು ಮತ್ತೆ ಬೆಂಬಲಿಸಿ,’’ ಎಂದು ಕೋರಿದರು.

ಚಂದ್ರಲೋಕ ತೋರುವವರನ್ನು ನಂಬಬೇಡಿ

“ಕೆಲವರು ಅಧಿಕಾರದಲ್ಲಿ ಇದ್ದಾಗ ಏನೂ ಮಾಡದೆ ಈಗ ಬಂದು ಚಂದ್ರಲೋಕವನ್ನು ತೋರಿಸುತ್ತಾರೆ. ಅಂಥವರನ್ನು ನಂಬಬೇಡಿ. ನಾವು ಚಂದ್ರಲೋಕವನ್ನು ತೋರಿಸುವುದಿಲ್ಲ. ಕೆಲಸ ಮಾಡಿ ತೋರಿಸಿದ್ದೇವೆ,’’ ಎಂದು ಜೆಡಿಎಸ್ ನಾಯಕರನ್ನು ತಿವಿದರು. “ಯಾರೇ ಮತ ಕೇಳಲು ಬಂದರೆ, ಗದ್ದಲ ಎಬ್ಬಿಸದೆ ಸುಮ್ಮನೆ ಅವರ ಮಾತು ಕೇಳಿಸಿಕೊಳ್ಳಿ. ಮತವನ್ನು ಕಾಂಗ್ರೆಸ್‌ ಗೆ ಹಾಕಿ,’’ ಎಂದೂ ಕೋರಿದರು. ಇಬ್ಬರೂ ನಾಯಕರು ಸೋಮವಾರ ಇಳಿಸಂಜೆಯವರೆಗೂ ಕ್ಷೇತ್ರದಲ್ಲಿ ಸುತ್ತಿ ಮತದಾರರ ಒಲವು ಗಿಟ್ಟಿಸುವ ಪ್ರಯತ್ನ ಮಾಡಿದರು. ಸಿದ್ದರಾಮಯ್ಯ ಮಂಗಳವಾರ ವರುಣಾ ಕ್ಷೇತ್ರದಲ್ಲಿ ಸಂಚರಿಸಿ ಪುತ್ರನ ಪರ ಮತ ಯಾಚಿಸಲಿದ್ದಾರೆ. ಸಿದ್ದರಾಮಯ್ಯ, ಜಿಟಿ ದೇವೇಗೌಡ ಮತ್ತು ಯತೀಂದ್ರ ಮೂವರೂ ಏ.೨೦ರಂದು ನಾಮಪತ್ರ ಸಲ್ಲಿಸುವುದು ನಿಶ್ಚಿತವಾಗಿದೆ. ಆದರೆ, ಈ ಎರಡು ಪ್ರತಿಷ್ಠಿತ ಕಣಗಳಲ್ಲಿ ಬಿಜೆಪಿ ಹುರಿಯಾಳುಗಳು ಯಾರು ಎನ್ನುವುದು ಆ ಪಕ್ಷದ ಎರಡನೇ ಪಟ್ಟಿಯಲ್ಲೂ ಪ್ರಕಟವಾಗಿಲ್ಲ. ಈ ಕ್ಷೇತ್ರಗಳ ವಿಷಯದಲ್ಲಿ ಬಿಜೆಪಿ ಹೆಣೆಯುತ್ತಿರುವ ‘ತಂತ್ರ’ ಏನು, ಯಾರನ್ನು ಅಭ್ಯರ್ಥಿಯನ್ನಾಗಿ ಹೂಡುತ್ತಾರೆ ಎನ್ನುವುದರ ಮೇಲೆ ಎರಡೂ ಕ್ಷೇತ್ರಗಳ ಕಣ-ಚಿತ್ರಣ ಅಖೈರುಗೊಳ್ಳುವ ಸಾಧ್ಯತೆ ಇದೆ.

ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ
ಅಳೆದು ತೂಗಿ ರಚಿಸಿದ ರಾಹುಲ್ ನೇತೃತ್ವದ ಸಿಡಬ್ಲ್ಯುಸಿ ಸಾರಿರುವ ಸಂದೇಶವೇನು?
ಮತ್ತೆ ಮುನ್ನೆಲೆಗೆ ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ?
Editor’s Pick More