ಅಮಿತ್‌ ಶಾ ಹುಬ್ಬಳ್ಳಿಗೆ ಬಂದೂ ಶೆಟ್ಟರ್ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲವೇಕೆ?

ಜಗದೀಶ್ ಶೆಟ್ಟರ್ ಪ್ರಭಾವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಹಳವಿದೆ ಎಂದು ಸತತ ಗೆಲುವುಗಳು ಸೂಚಿಸುತ್ತದೆ. ಆದರೆ, ಈ ಬಾರಿ ಅಮಿತ್ ಶಾ ಸೆಂಟ್ರಲ್ ಕ್ಷೇತ್ರಕ್ಕೆ ಭೇಟಿ ನೀಡದಿರಲು ಕಾರಣವೇನು? ಮತದಾರರು ಶೆಟ್ಟರ್ ಮೇಲೆ ಮುನಿಸಿಕೊಂಡಿರುವುದು ಶಾ ಅರಿವಿಗೆ ಬಂದಿದೆಯೇ?

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎರಡು ದಿನಗಳ ಕಾಲ ಮುಂಬೈ-ಕರ್ನಾಟಕದಲ್ಲಿ ಪ್ರವಾಸ ಕೈಗೊಂಡರೂ ಮಾಜಿ ಸಿಎಂ ಜಗದೀಶ ಶೆಟ್ಟರ್ ಅವರ ಕ್ಷೇತ್ರಕ್ಕೆ ಭೇಟಿ ನೀಡದಿರುವುದು ಚರ್ಚೆಗೆ ಕಾರಣವಾಗಿದೆ.

ಅಮಿತ್ ಶಾ ಏ.12ರಂದು ಧಾರವಾಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ಪೂರ್ವ ಹಾಗೂ ಪಶ್ಚಿಮ ಕ್ಷೇತ್ರಗಳಲ್ಲಿ ರೋಡ್ ಶೋ ನಡೆಸುವುದರೊಂದಿಗೆ ಸಮಾವೇಶದಲ್ಲಿಯೂ ಭಾಗವಹಿಸಿದ್ದರು. ಆದರೆ, ಈ ಎರಡು ಕ್ಷೇತ್ರಗಳ ಮಧ್ಯದಲ್ಲಿರುವ ಸೆಂಟ್ರಲ್ ಕ್ಷೇತ್ರಕ್ಕೆ ಮಾತ್ರ ಅಮಿತ್ ಶಾ ಭೇಟಿ ನೀಡಲಿಲ್ಲ. ಈ ಕ್ಷೇತ್ರವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರತಿನಿಧಿಸುತ್ತಿದ್ದಾರೆ. 'ಶೆಟ್ಟರ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ಸಹಜವಾಗಿ ಬಿಜೆಪಿ ಆತ್ಮವಿಶ್ವಾಸದಲ್ಲಿ ತೇಲುತ್ತಿದೆ. ಹೀಗಾಗಿಯೇ ಬೇರೆ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡಿರಬಹುದು’ ಎಂದರೆ, ಊಹೆ ಖಂಡಿತ ತಪ್ಪು. ಕ್ಷೇತ್ರದಲ್ಲಿ ಬಿಜೆಪಿ ಆತ್ಮವಿಶ್ವಾಸದಿಂದೇನೂ ತೇಲುತ್ತಿಲ್ಲ. ಈ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪ್ರಬಲವಾಗಿ ಕಾಣುತ್ತಿವೆ.

ಕಳೆದ 5 ಬಾರಿಯಿಂದ ಶೆಟ್ಟರ್, ಈ ಕ್ಷೇತ್ರವನ್ನು ಪ್ರತನಿಧಿಸುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ಹೇಳಿಕೊಳ್ಳುವಷ್ಟು ನಡೆದಿಲ್ಲ ಎಂದು ಪ್ರತಿದಿನ ಶೆಟ್ಟರ್ ವಿರುದ್ಧ ಕ್ಷೇತ್ರಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮಾಜಿ ಮುಖ್ಯಮಂತ್ರಿಯ ಅಭಿವೃದ್ಧಿ ಕಾರ್ಯಗಳನ್ನು ಬ್ಯಾನರ್ ಹಾಗೂ ಬಂಟಿಂಗ್ಸ್‌ಗಳಲ್ಲಿ ಮಾತ್ರ ಕಾಣಬಹುದೇ ಹೊರತು, ಕ್ಷೇತ್ರದಲ್ಲಿ ಕಾಣಲಾಗದು ಎಂದು ಕ್ಷೇತ್ರದ ಮತದಾರರೇ ಆರೋಪಿಸುತ್ತಿದ್ದಾರೆ.

ಸದ್ಯ ರಾಜ್ಯದಲ್ಲಿ ನೀತಿಸಂಹಿತೆ ಜಾರಿಯಾಗಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಚಾರಕಾರ್ಯ ಜೋರಾಗಿಯೇ ನಡೆದಿದೆ. ಶೆಟ್ಟರ್ ಕೂಡ ಪ್ರಚಾರ ಕಾರ್ಯದಲ್ಲಿ ಹಿಂದೆ ಬಿದ್ದಿಲ್ಲ. ಅವರ ಮಕ್ಕಳು, ಪತ್ನಿ, ಸಹೋದರ ಸೇರಿದಂತೆ ಬೆಂಬಲಿಗರು ಗುಂಪುಗುಂಪಾಗಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಪ್ರತಿ ಪ್ರದೇಶಕ್ಕೆ ಹೋದಾಗಲೂ ಮತದಾರರು ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹತ್ತಾರು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಶೆಟ್ಟರ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿ ರಸ್ತೆಗಳನ್ನು ಸಂಪೂರ್ಣ ಅಗೆಯಲಾಗಿದೆ. ಚರಂಡಿಗಳು ರಸ್ತೆಯ ಮೇಲೆಯೇ ಹರಿಯುತ್ತಿವೆ. ಕಸವಂತೂ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಧೂಳು ನುಂಗುವುದು ಜನರ ದಿನನಿತ್ಯದ ಕರ್ಮವಾಗಿದೆ ಎಂದು ಮತದಾರರು ಬೇಸರಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್‌ವೈ ಅಥವಾ ಅಮಿತ್ ಶಾ?

ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಗಾಗಿ ಆಯ್ಕೆಯಾದ ಪ್ರದೇಶದಲ್ಲಿನ ಹೆಚ್ಚಿನ ಭಾಗ ಶೆಟ್ಟರ್ ಪ್ರತಿನಿಧಿಸುತ್ತಿರುವ ಕ್ಷೇತ್ರದಲ್ಲಿಯೇ ಬರುತ್ತಿದೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಪಟ್ಟಿಗೆ ಆಯ್ಕೆಯಾಗಿ ಎರಡು ವರ್ಷಗಳೇ ಗತಿಸುತ್ತಿದ್ದರೂ ಸ್ಮಾರ್ಟ್ ಎಂಬುವುದು ಮಾತ್ರ ಜನರಿಗೆ ಪರಿಚಯವಾಗುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಬೇಸತ್ತಿರುವ ಮತದಾರರು, ಮತ ಕೇಳಲು ಹೋಗುವವರ ಬೆವರಿಳಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೊ ಏನೋ ಶೆಟ್ಟರ್, ತಮ್ಮ ಕಾರ್ಯಕರ್ತರನ್ನು ಹಾಗೂ ಕುಟುಂಬಸ್ಥರನ್ನು ಮನೆಮನೆಗೆ ಮತ ಕೇಳಲು ಹೆಚ್ಚಾಗಿ ಕಳುಹಿಸುತ್ತಿದ್ದು, ತಾವು ಮಾತ್ರ ವಾಣಿಜ್ಯ ಕೇಂದ್ರಗಳಿಗೆ, ಮಾಲ್‌ಗಳಿಗೆ, ಅಂಗಡಿಗಳು ಸೇರಿದಂತೆ ಮಾರುಕಟ್ಟೆಯಲ್ಲಿಯೇ ಹೆಚ್ಚಾಗಿ ಮತದಾರರನ್ನು ಭೇಟಿ ಮಾಡುತ್ತಿದ್ದಾರೆ ಎಂದು ಮತದಾರರು ಲೇವಡಿ ಮಾಡುತ್ತಿದ್ದಾರೆ.

ಹೀಗಾಗಿಯೇ, ತಮ್ಮ ಕ್ಷೇತ್ರಕ್ಕೆ ಅಮಿತ್ ಶಾ ಬಾರದಂತೆ ಸ್ವತಃ ಶೆಟ್ಟರ್ ಅವರು ನೋಡಿಕೊಂಡಿದ್ದಾರೆ ಎಂಬ ಮಾತಿದೆ. ಒಂದು ವೇಳೆ, ಶಾ ಬಂದಾಗ ಮತದಾರರು ಆಕ್ರೋಶ ವ್ಯಕ್ತಪಡಿಸಿದರೆ ಮುಜಗರ ಆಗಬಹುದು ಎಂದು ಮಾಜಿ ಸಿಎಂ ಈ ರೀತಿ ಮಾಡಿರಬಹುದು ಎನ್ನುತ್ತವೆ ಬಿಜೆಪಿ ಮೂಲಗಳು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More