ಬಾದಾಮಿಯ ಲಿಂಗಾಯತ ಮತ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗುವುದೇ?

ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದಾರಾದರೂ ಬಾದಾಮಿ ಕ್ಷೇತ್ರ ನಾನಾ ಕಾರಣಕ್ಕೆ ಗಮನ ಸೆಳೆದಿದೆ. ಸಿದ್ದರಾಮಯ್ಯ ಅವರ ಆಪ್ತ ದೇವರಾಜ್ ಪಾಟೀಲ ಅವರಿಗೆ ಬಾದಾಮಿಯಲ್ಲಿ ಟಿಕೆಟ್ ಸಿಕ್ಕಿರುವುದು ಈ ಕ್ಷೇತ್ರದ ಹಣಾಹಣಿಯ ತೀವ್ರತೆ ಹೆಚ್ಚಿಸಿದೆ

ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿ ಆತಂಕ ಮನೆ ಮಾಡಿತ್ತು. ಒಂದೆಡೆ, ಲಿಂಗಾಯತ ಮತಗಳನ್ನು ಕಳೆದುಕೊಳ್ಳುವ ಭೀತಿ, ಇನ್ನೊಂದೆಡೆ ಉತ್ತರ ಕರ್ನಾಟಕದಲ್ಲಿ ಸಿಎಂ ಸ್ಪರ್ಧೆಯಿಂದ ಹೆಚ್ಚಿನ ಪೆಟ್ಟು ಬೀಳಲಿದೆ ಎಂಬ ತಲೆನೋವು; ಹಾಗಾಗಿ ಸೂಕ್ತ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿತ್ತು.

ಆದರೆ, ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಸ್ಪರ್ಧೆ ಮಾಡುವಂತೆ ಸೂಚಿಸಿದ್ದರಿಂದಾಗಿ ಬಿಜೆಪಿಗೆ ಸ್ವಲ್ಪ ಮಟ್ಟಿಗೆ ಉಸಿರಾಡುವಂತಾಗಿತ್ತಾದರೂ ಸಿದ್ದರಾಮಯ್ಯ ಅವರ ಒಳತಂತ್ರಕ್ಕೆ ಮತ್ತಷ್ಟು ಕಂಗಾಲಾಗಿದೆ. ಬಾದಾಮಿಯಿಂದ ಸಿಎಂಗೆ ಟಿಕೆಟ್ ಕೈ ತಪ್ಪಿದರೂ ತಮ್ಮ ಆಪ್ತ ದೇವರಾಜ್ ಪಾಟೀಲ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿರುವುದೇ ಬಿಜೆಪಿಯ ಕಂಗಾಲಿಗೆ ಕಾರಣ.

ಸಿಎಂ ಸ್ಪರ್ಧೆ ಮಾಡುತ್ತಾರೆ ಎನ್ನುತ್ತಿದ್ದಂತೆ ತಮ್ಮ ಕ್ಷೇತ್ರವನ್ನೇ ಬಿಟ್ಟುಕೊಡಲು ಮುಂದಾಗಿದ್ದ ಶಾಸಕ ಬಿ ಬಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ಸಿಗದ ಕಾರಣಕ್ಕೆ ಹಲವರಿಗೆ ಬೇಸರವಾಗಿರಬಹುದು. ಸ್ವತಃ ಚಿಮ್ಮನಕಟ್ಟಿ ಅವರಿಗೂ ಇದು ಬೇಸರದ ಸಂಗತಿ. ಆದರೆ, ಅಳೆದು ತೂಗಿ ನೋಡಿಯೇ ಸಿಎಂ, ಬಾದಾಮಿಯಲ್ಲಿ ತಮ್ಮ ಆಪ್ತನಿಗೆ ಟಿಕೆಟ್ ನೀಡಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತಿವೆ.

“ಅನಾರೋಗ್ಯದಿಂದ ಬಳಲುತ್ತಿರುವುದರಿಂದ ನನಗಲ್ಲದಿದ್ದರೂ ನನ್ನ ಕುಟುಂಬದ ಬೇರಾರಿಗಾದರೂ ಟಿಕೆಟ್ ನೀಡಿ,” ಎಂದು ಚಿಮ್ಮನಕಟ್ಟಿ ಹಲವು ದಿನಗಳಿಂದ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡುತ್ತಿದ್ದರು. ಆದರೆ, ಚಿಮ್ಮನಕಟ್ಟಿ ಅವರ ಕುಟುಂಬದ ಬೇರಾರಿಗೂ ಟಿಕೆಟ್ ಸಿಕ್ಕಿಲ್ಲ. ಕಾರಣ, ಕ್ಷೇತ್ರದಲ್ಲಿನ ಆಡಳಿತ ವಿರೋಧಿ ಅಲೆ. ಚಿಮ್ಮನಕಟ್ಟಿ ಅವರ ಗೆಲುವಿನ ಇತಿಹಾಸ ನೋಡಿದರೆ, ಅವರು ಒಂದು ಬಾರಿ ಸೋತು, ಮತ್ತೊಂದು ಬಾರಿ ಗೆದ್ದಿದ್ದೇ ಹೆಚ್ಚು. ಈ ಬಾರಿ ಲಿಂಗಾಯತ ಮತಗಳಿಗಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದೆ. ಲಿಂಗಾಯತ ಮತಗಳನ್ನೇ ನಂಬಿಕೊಂಡಿದ್ದ ಬಿಜೆಪಿಗೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮೂಲಕ ಕಾಂಗ್ರೆಸ್ ಪೆಟ್ಟು ನೀಡಿದೆ. ಹೀಗಾಗಿ, ಲಿಂಗಾಯತ ಮತಗಳಿಗಾಗಿ ಬಿಜೆಪಿ ಮಠಾಧೀಶರ ಮೊರೆಹೋಗಿದೆ.

ಉತ್ತರ ಕರ್ನಾಟಕದ ಬಹುತೇಕ ಮಠಗಳ ಮಠಾಧೀಶರು ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಹಿಂದೆ ಗುರುತಿಸಿಕೊಂಡ ಕಾರಣದಿಂದಾಗಿಯೇ ಬಿಜೆಪಿಯು ಮಠಾಧೀಶರ ಮನವೊಲಿಸುವ ಪ್ರಯತ್ನ ನಡೆಸಿತ್ತು. ಇದು ಫಲ ನೀಡದಾದಾಗ, ಬಾದಾಮಿ ಹತ್ತಿರದ ಶಿವಯೋಗ ಮಂದಿರದ ಮೇಲೆ ತನ್ನ ದೃಷ್ಟಿ ನೆಟ್ಟಿತ್ತು. ಬಾದಾಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಶಿವಯೋಗ ಮಂದಿರ ಮಠಾಧೀಶರನ್ನು ತರಬೇತಿಗೊಳಿಸುವ ಕೇಂದ್ರ. 1904ರಲ್ಲಿ ಹಾನಗಲ್ಲ ಗುರುಕುಮಾರಸ್ವಾಮಿ, ಬಾದಾಮಿಯಿಂದ 12 ಕಿಮೀ ದೂರದಲ್ಲಿ ಶಿವಯೋಗ ಮಂದಿರ ನಿರ್ಮಿಸಿ, ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ್ದರು. ಇಲ್ಲಿ ತರಬೇತಿ ಪಡೆದ ಬಹುತೇಕ ಸ್ವಾಮೀಜಿಗಳು ಲಿಂಗಾಯತ ಮಠಗಳ ಮಠಾಧೀಶರಾಗಿದ್ದಾರೆ. ಸದ್ಯ ಸಿದ್ದರಾಮಯ್ಯ ವಿರುದ್ಧ ದೊಡ್ಡ ಧ್ವನಿಯಲ್ಲಿ ಹೋರಾಟ ಮಾಡುತ್ತಿರುವ ಪಂಚಪೀಠಾಧಿಪತಿಗಳು ಸೇರಿದಂತೆ ರಾಜ್ಯದ ವೀರಶೈವ ಲಿಂಗಾಯತ ಮಠಗಳಲ್ಲಿರುವ ಬಹುತೇಕ ಪೀಠಾಧಿಪತಿಗಳು ಶಿವಯೋಗ ಮಂದಿರದಿಂದಲೇ ತರಬೇತಿ ಪಡೆದವರು. ಅಲ್ಲದೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿರುವ ಬಹುತೇಕ ಸ್ವಾಮೀಜಿಗಳು ಸಹ ಶಿವಯೋಗ ಮಂದಿರದ ವಿದ್ಯಾರ್ಥಿಗಳು. ಇಲ್ಲಿವರೆಗೂ ಸುಮಾರು 10 ಸಾವಿರ ಮಠಾಧೀಶರನ್ನು ಶಿವಯೋಗ ಮಂದಿರ ತಯಾರು ಮಾಡಿದೆ. ಈ ಪೈಕಿ ಒಂದು ಸಾವಿರಕ್ಕೂ ಅಧಿಕ ಲಿಂಗಾಯತ ಮಠಾಧೀಶರರೇ ಇದ್ದಾರೆ ಎಂಬುದು ಗಮನಾರ್ಹ.

ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ರಾಜ್ಯದಲ್ಲಿ ಕೇಳುತ್ತಿದ್ದಂತೆ ಇದು ಕಾಂಗ್ರೆಸ್ ಕೃಪಾಪೋಷಿತ ಎಂದು ಬಿಜೆಪಿ ಆರೋಪಿಸಿತ್ತು. ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೆ ಉತ್ತರ ಕರ್ನಾಟಕದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಸದ್ಯ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಠಾಧೀಶರನ್ನು, ಮುಖಂಡರನ್ನು ಸೆಳೆಯುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮುಂಬೈ-ಕರ್ನಾಟಕ ಹಾಗೂ ಹೈದರಾಬಾದ್-ಕರ್ನಾಟಕಕ್ಕೆ ಆಗಮಿಸಿದ ಪ್ರತಿ ಸಂದರ್ಭದಲ್ಲಿಯೂ ಮತದಾರನ್ನು ಉದ್ಧೇಶಿಸಿ ಮಾತನಾಡುವುದಕ್ಕಿಂತ ಹೆಚ್ಚಾಗಿ ಮಠಾಧೀಶರನ್ನೇ ಭೇಟಿಯಾಗಿ ಓಲೈಕೆ ಮಾಡಲು ಪ್ರಯತ್ನಿಸುತ್ತಿರುವುದು ಕೂಡ ಇದೇ ಕಾರಣಕ್ಕೆ. ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಾದಾಮಿ ಶಿವಯೋಗ ಮಂದಿರ ವಿರಕ್ತಮಠಕ್ಕೆ ಭೇಟಿ ನೀಡಿ ಲಿಂಗಾಯತ ಸ್ವಾಮೀಜಿಗಳ ಮನವೊಲಿಕೆಗೆ ಪ್ರಯತ್ನಿಸಿದ್ದರು.

ಶಿವಯೋಗ ಮಂದಿರದಲ್ಲಿ ವ್ಯಾಸಂಗ ಮಾಡಿರುವ ಎಲ್ಲ ಮಠಾಧೀಶರನ್ನು ಒಂದುಗೂಡಿಸುವ ಪ್ರಯತ್ನ ಬಿಜೆಪಿಯಿಂದ ಒಳಗೊಳಗೇ ನಡೆಯುತ್ತಿತ್ತು. ಹೀಗಾಗಿಯೇ ಬಾದಾಮಿ ಕ್ಷೇತ್ರದಿಂದ ಸಿಎಂ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಇಡೀ ಬಿಜೆಪಿಯೇ ತಳಮಳಗೊಂಡಿತ್ತು. ಒಂದು ವೇಳೆ, ಚಿಮ್ಮನಕಟ್ಟಿ ಅಥವಾ ಚಿಮ್ಮನಕಟ್ಟಿ ಕುಟುಂಬಸ್ಥರಿಗೆ ಟಿಕೆಟ್ ನೀಡಿದರೆ, ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಕಾಂಗ್ರೆಸ್ ಗೆ ಸೋಲಾದರೆ, ಇಲ್ಲಿ ಗೆಲ್ಲುವ ಅವಕಾಶವಿರುವುದು ಬಿಜೆಪಿಗೆ. ಹೀಗಾಗಿ, ಬಿಜೆಪಿ ಸಂಪೂರ್ಣವಾಗಿ ಶಿವಯೋಗ ಮಂದಿರದ ಮೇಲೆ ಹಿಡಿತ ಸಾಧಿಸಿ, ಅದನ್ನು ವಿಭಿನ್ನವಾಗಿ ಅಭಿವೃದ್ಧಿಗೊಳಿಸುವುದರ ಮೂಲಕ ಲಿಂಗಾಯತ ಮಠಾಧೀಶರನ್ನು ತನ್ನತ್ತ ಸೆಳೆದು, ಲಿಂಗಾಯತ ಮತಗಳನ್ನೆಲ್ಲ ಮತ್ತೆ ತನ್ನತ್ತ ಬರುವಂತೆ ಮಾಡುವುದು ಬಿಜೆಪಿಯ ಆಶಯವಾಗಿತ್ತು.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ‘ಬಾದಾಮಿ ರಣತಂತ್ರ’ ಹೆಣೆಯುತ್ತಿದೆ ಬಿಜೆಪಿ ಪಡೆ

ಆದರೆ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಭಾಗಿಯಾಗಿದ್ದ ಮಠಾಧೀಶರ ಬೆನ್ನಿಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ಸಾರುವುದಕ್ಕಾಗಿ ಸಿದ್ದರಾಮಯ್ಯ ತಮ್ಮ ಆಪ್ತ ಹಾಗೂ ಕುರುಬ ಸಮುದಾಯದ ಇನ್ನೊಬ್ಬ ಪ್ರಬಲ ವ್ಯಕ್ತಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೇ ಕುರುಬ ಸಮಾಜದ ದೇವರಾಜ್ ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ಆಗ ಶಾಸಕ ಚಿಮ್ಮನಕಟ್ಟಿ ಅವರ ಬೆಂಬಲಿಗರು ಬೀದಿಗೆ ಇಳಿದು ಹೋರಾಟ ಮಾಡಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಆಗ ಬಿಜೆಪಿಯ ವಿರೋಧಿ ಅಲೆಯಲ್ಲಿ ಚಿಮ್ಮನಕಟ್ಟಿ ಗೆಲುವು ಸಾಧಿಸಿದ್ದರು. ಆದರೆ, ಈಗ ಕಾಂಗ್ರೆಸ್ ವಿರೋಧಿ ಅಲೆಯಿದೆ. ಕಾಂಗ್ರೆಸ್ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹೀಗಾಗಿ ದೇವರಾಜ ಪಾಟೀಲ್ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸೋಲೊಪ್ಪಿಕೊಳ್ಳುತ್ತಿರುವ ಬಿಜೆಪಿ, ಏನೇ ಆದರೂ ಬಾದಾಮಿ ಕ್ಷೇತ್ರವನ್ನು ಬಿಟ್ಟುಕೊಡಬಾರದು ಎಂಬ ಲೆಕ್ಕಾಚಾರದಲ್ಲಿದೆ. ಈ ಕಾರಣಕ್ಕಾಗಿಯೇ ಬಾದಾಮಿ ಸ್ಪರ್ಧೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದರೆ, ಪಟ್ಟುಬಿಡದ ಸಿದ್ದರಾಮಯ್ಯ ಮಾತ್ರ ಛಲದಂಕ ಮಲ್ಲನಂತೆ ಬಿಜೆಪಿಯ ಪ್ರತಿ ತಂತ್ರಕ್ಕೂ ಮರುತಂತ್ರ ಹೆಣೆಯುತ್ತಿದ್ದಾರೆ. ಕೊನೆಯದಾಗಿ ಇಲ್ಲಿ ಗೆಲ್ಲುವವರು ಯಾರು ಎಂಬುವುದನ್ನು ಕಾಯ್ದುನೋಡಬೇಕಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More