ಸಿದ್ದರಾಮಯ್ಯರನ್ನು ಸೋಲಿಸುವ ಪಣ ತೊಟ್ಟ ಬಿಜೆಪಿಗೆ ಅಭ್ಯರ್ಥಿ ಆಯ್ಕೆಯ ತಲೆಬೇನೆ

ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸುವ ಪಣ ತೊಟ್ಟಿರುವ ಬಿಜೆಪಿ ನಾಯಕರು, ಯಾರಿಗೇ ಟಿಕೆಟ್ ಕೊಟ್ಟರೂ ಬಂಡಾಯ ಏಳುವುದು ನಿಶ್ಚಿತ ಎಂಬ ಸನ್ನಿವೇಶ ಎದುರಿಸುತ್ತಿದ್ದಾರೆ. ಈಗಾಗಲೇ ಅಭ್ಯರ್ಥಿಗಳನ್ನು ಘೋಷಿಸಿದ ಕ್ಷೇತ್ರಗಳ ಪೈಕಿ ಕೆಲವೆಡೆ ಬಂಡಾಯ ಸ್ಫೋಟಿಸಿದೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರನ್ನು ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದಲ್ಲಿ ಸೋಲಿಸುವ ಪಣ ತೊಟ್ಟಿರುವ ಬಿಜೆಪಿ ನಾಯಕರು, ಪಕ್ಷದಿಂದ ಕಣಕ್ಕಿಳಿಯಲಿರುವ ಹುರಿಯಾಳು ಯಾರೆನ್ನುವುದನ್ನು ಅಂತಿಮಗೊಳಿಸುವುದಕ್ಕೇ ಪ್ರಯಾಸಪಡುವ ಸ್ಥಿತಿ ನಿರ್ಮಿಸಿಕೊಂಡಂತಿದೆ. ಕದನ ಕುತೂಹಲ ಕೆರಳಿಸಿರುವ ಎರಡು ಕ್ಷೇತ್ರಗಳಷ್ಟೇ ಅಲ್ಲದೆ, ಮೈಸೂರು ಭಾಗದಲ್ಲಿ ಪಕ್ಷದ ಗೆಲುವಿನ ಸಾಧ್ಯತೆ ಹೆಚ್ಚಿರುವ (ಈ ಹಿಂದೆ ಪಕ್ಷ ಗೆಲುವು ದಾಖಲಿಸಿದ್ದ ಕಾರಣಕ್ಕೆ ಈ ನಿರೀಕ್ಷೆ ) ಕೃಷ್ಣರಾಜ, ಚಾಮರಾಜ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವಿಷಯವೂ ಪಕ್ಷದ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿದೆ.

ಕೆಲವು ಕ್ಷೇತ್ರಗಳಲ್ಲಿ ಹೊರಗಿನಿಂದ ಬಂದವರಿಗೆ ಟಿಕೆಟ್ ಪ್ರಕಟಿಸಿರುವ ಪಕ್ಷ, ಪಕ್ಷದ ಕಟ್ಟಾಳುಗಳೇ ಹೆಚ್ಚು ಪೈಪೋಟಿ ನಡೆಸಿರುವ ಪ್ರಮುಖ ಕ್ಷೇತ್ರಗಳ ಟಿಕೆಟ್ ಹಂಚಿಕೆ ವಿಷಯದಲ್ಲಿ ಅಳೆದು, ತೂಗುವ ಮತ್ತು ಕಾಯ್ದುನೋಡುವ ತಂತ್ರಕ್ಕೆ ಮೊರೆಹೋದಂತಿದೆ. ಯಾರಿಗೇ ಟಿಕೆಟ್ ಕೊಟ್ಟರೂ ಉಳಿದ ಕೆಲವರು ಬಂಡಾಯ ಏಳುವುದು ನಿಶ್ಚಿತ ಎನ್ನುವ ಸ್ಥಿತಿ ಇರುವುದು ಇದಕ್ಕೆ ಕಾರಣ. ಈಗಾಗಲೇ, ಅಭ್ಯರ್ಥಿಗಳ ಹೆಸರು ಘೋಷಿಸಿದ ಕ್ಷೇತ್ರಗಳ ಪೈಕಿ ಕೆಲವೆಡೆ ಬಂಡಾಯದ ಕಹಳೆ ಮೊಳಗಿದೆ ಕೂಡ.

ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಲ್ಲಿ ಮಾಜಿ ಸಚಿವ ಎಸ್‌ ಎ ರಾಮದಾಸ್, ಎಚ್‌ ವಿ ರಾಜೀವ್, ಶ್ರೀವತ್ಸ, ಮಾಳವಿಕಾ ಅವಿನಾಶ್ ಸಹಿತ ಅನೇಕರು ಪೈಪೋಟಿ ನಡೆಸಿದ್ದಾರೆ. ಕೆಜೆಪಿ ಕಟ್ಟಿದಾಗ ತಮ್ಮ ಜೊತೆ ಬಂದಿದ್ದ ರಾಜೀವ್‌ಗೆ ಟಿಕೆಟ್ ಕೊಡಿಸಬೇಕೆನ್ನುವುದು ಯಡಿಯೂರಪ್ಪ ಬಯಕೆ. ಆದರೆ, ಅನಂತ ಕುಮಾರ್‌ ಮೂಲಕ ಟಿಕೆಟ್ ಪಟ್ಟು ಹಾಕಿದ್ದಾರೆ ಎಸ್‌ ಎ ರಾಮದಾಸ್. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಬಹುದೆನ್ನುವುದು ಉಳಿದವರ ನಿರೀಕ್ಷೆ. ಈ ಮಧ್ಯೆ,ರಾಮದಾಸ್‌ಗೆ ಟಿಕೆಟ್ ತಪ್ಪಿಸಲೇಬೇಕೆಂದು ಅನೇಕರು ಪ್ರಯತ್ನಿಸುತ್ತಿದ್ದಾರೆ. ಹಿರಿಯ ಮುಖಂಡ ಗೋ ಮಧುಸೂಧನ್ ಈ ಕುರಿತು ಬಹಿರಂಗ ಹೇಳಿಕೆ ನೀಡಿದ್ದಾರೆ ಕೂಡ. ಪ್ರೇಮಾಕುಮಾರಿ ಪ್ರೇಮ ಪ್ರಕರಣವನ್ನು ಮುನ್ನೆಲೆಗೆ ತಂದು ರಾಮದಾಸ್ ಮತ್ತು ಪಕ್ಷವನ್ನು ಮುಜುಗರಕ್ಕೆ ಈಡುಮಾಡುವ ಪ್ರಯತ್ನಗಳೂ ನಡೆದಿವೆ. ಆದರೆ, ಇದಕ್ಕಿಂತ 'ಘನ ಗಂಭೀರ' ಪ್ರಕರಣ ಎದುರಿಸಿದವರಿಗೇ ಪಕ್ಷ ಟಿಕೆಟ್ ನೀಡಿರುವುದು ರಾಮದಾಸ್‌ ನಿರೀಕ್ಷೆಯನ್ನು ಜೀವಂತ ಇಟ್ಟಿದೆ.

ಎಚ್‌ ಎಸ್‌ ಶಂಕರಲಿಂಗೇಗೌಡರು ನಿರಂತರ ನಾಲ್ಕು ಬಾರಿ ಗೆದ್ದಿದ್ದ ಚಾಮರಾಜ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ಹೆಚ್ಚು ಪೈಪೋಟಿ ಇದೆ. ಬಿಜೆಪಿ ನಗರಾಧ್ಯಕ್ಷ ಮಂಜುನಾಥ್, ಮಾಜಿ ಮುಡಾ ಅಧ್ಯಕ್ಷರಾದ ನಾಗೇಂದ್ರ, ಸಿ ಬಸವೇಗೌಡ, ಟಿಕೆಟ್ ನಿರೀಕ್ಷೆಯಲ್ಲೇ ಬಿಜೆಪಿ ಸೇರಿರುವ ಪ್ರಸನ್ನ ಗೌಡ ಮತ್ತಿತರರು ತಮ್ಮದೇ ಪ್ರಭಾವ ಬಳಸಿ ಪ್ರಯತ್ನಶೀಲರಾಗಿದ್ದಾರೆ. ಈ ಮಧ್ಯೆ, ಎಸ್‌ ಎಂ ಕೃಷ್ಣ ಅವರನ್ನು ತೃಪ್ತಿಪಡಿಸಲು, ಅವರ ಶಿಫಾರಸಿನ ಮೇರೆಗೆ ಹಿರಿಯ ರಾಜಕಾರಣಿ ಡಿ ಮಾದೇಗೌಡರಿಗೆ ಟಿಕೆಟ್ ನೀಡಲು ಹೈಕಮಾಂಡ್‌ ತೀರ್ಮಾನಿಸಿದೆ ಎನ್ನುವ ಸುದ್ದಿ ಪಕ್ಷದ ವಲಯದಲ್ಲಿ ಬೇಗುದಿ ಮೂಡಿಸಿದೆ. ಈ ಎರಡು ಕ್ಷೇತ್ರಗಳಲ್ಲಿ ಯಾರಿಗೇ ಟಿಕೆಟ್ ನೀಡಿದರೂ, ಉಳಿದವರು ಬಂಡೇಳುವ ಸೂಚನೆ ವ್ಯಕ್ತವಾಗುತ್ತಿರುವುದರಿಂದಲೇ ಮೊದಲೆರಡು ಪಟ್ಟಿಯಲ್ಲಿ ಇವು ಸೇರಿಲ್ಲ ಎನ್ನಲಾಗಿದೆ.

ಈ ಮಧ್ಯೆ, ಟಿಕೆಟ್‌ ಸಿಗಲಿಲ್ಲ ಎನ್ನವ ಕಾರಣಕ್ಕೆ ಈಚೆಗಷ್ಟೇ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದ ಮಾಜಿ ಮೇಯರ್ ಸಂದೇಶ್ ಸ್ವಾಮಿಗೆ ನರಸಿಂಹ ರಾಜ ಕ್ಷೇತ್ರದಲ್ಲಿ ಟಿಕೆಟ್ ಪ್ರಕಟಿಸಿದ್ದು, ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರ ಅಸಮಾಧಾನಕ್ಕೆ ಕಾರಣವಾಗಿದೆ. ೧೯೯೪ರಲ್ಲಿ ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದ ಇ ಮಾರುತಿ ರಾವ್‌ ಪವಾರ್‌ ಸಿಟ್ಟಿಗೆದ್ದಿದ್ದು, “ಪಕ್ಷಕ್ಕಾಗಿ ದುಡಿದ ನನ್ನನ್ನು ಹೈಕಮಾಂಡ್ ಪರಿಗಣಿಸದಿರುವುದು ಬೇಸರ ಮೂಡಿಸಿದೆ. ಕಾರ್ಯಕರ್ತರು,ಹಿತೈಷಿಗಳ ಜೊತೆ ಚರ್ಚಿಸಿ ಬಂಡಾಯ ಸ್ಪರ್ಧೆ ಮಾಡುವ ನಿರ್ಧಾರ ಕೈಗೊಳ್ಳುತ್ತೇನೆ,’’ ಎಂದು ಹೇಳಿದ್ದಾರೆ. ನಂಜನಗೂಡು ಕ್ಷೇತ್ರದಲ್ಲಿ ಮಾಜಿ ಸಚಿವ ವಿ ಶ್ರೀನಿವಾಸ ಪ್ರಸಾದ್‌ ಅಳಿಯ ಹರ್ಷವರ್ಧನ್‌ಗೆ ಟಿಕೆಟ್ ನೀಡಿರುವುದು, ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಎಂ ಶಿವಣ್ಣ ಮತ್ತು ಎಸ್‌ ಮಹದೇವಯ್ಯ ಅಸಮಾಧಾನಕ್ಕೆ ಕಾರಣವಾಗಿದೆ. ಎಸ್‌ ಮಹದೇವಯ್ಯ ೨೦೦೮ರಲ್ಲಿ ವಿ ಶ್ರೀನಿವಾಸ ಪ್ರಸಾದ್‌ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕೇವಲ ೭೦೩ ಮತಗಳ ಅಂತರದಲ್ಲಿ ಸೋತಿದ್ದರು.

೨೦೧೩ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದು ಮೂರನೇ ಸ್ಥಾನ ಪಡೆದಿದ್ದರು. ಪ್ರಸಾದ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಆದಾಗ ಮುಕ್ತ ಮನಸ್ಸಿನಿಂದ ಒಪ್ಪಿದ್ದರು. ಆದ್ದರಿಂದ, ಸಹಜವಾಗಿಯೇ ಈ ಬಾರಿ ತಮಗೆ ಟಿಕೆಟ್ ದೊರೆಯುತ್ತದೆ ಎಂದುಕೊಂಡಿದ್ದ ಅವರು ತೀವ್ರ ಬೇಸರ ಪ್ರಕಟಿಸಿದ್ದಾರೆ. “ನನಗೆ ಟಿಕೆಟ್ ಕೈತಪ್ಪಲು ಶ್ರೀನಿವಾಸ ಪ್ರಸಾದ್ ಅವರೇ ಕಾರಣ. ಅಳಿಯನಿಗೋಸ್ಕರ ಪಕ್ಷಕ್ಕಾಗಿ ದುಡಿದ ನನ್ನನ್ನು ಕಡೆಗಣಿಸಿದ್ದಾರೆ. ಶ್ರೀನಿವಾಸ ಪ್ರಸಾದ್ ಸ್ವಾರ್ಥಿ. ಯಾವ ದಲಿತ ನಾಯಕರನ್ನೂ ಬೆಳೆಯಲು ಬಿಡುವುದಿಲ್ಲ,’’ ಎಂದು ಕಣ್ಣೀರು ಹಾಕುತ್ತಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಹಿರಿತನವನ್ನು ಬಿಜೆಪಿ ನಾಯಕರು ಗೌರವಿಸಿಲ್ಲ. ನಾನು ಎಲ್ಲ ಪಕ್ಷಗಳಲ್ಲೂ ಮಣ್ಣು ಹೊತ್ತು ಬಂದಿದ್ದೇನೆ. ನಂಜನಗೂಡಿನಲ್ಲಿ ಬಿಜೆಪಿ ಟಿಕೆಟ್ ನೀಡಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ಯಡಿಯೂರಪ್ಪ ಜೊತೆ ಚರ್ಚಿಸಿ, ರಾಜಕೀಯ ನಿವೃತ್ತಿ ಪಡೆಯುವೆ,’’ ಎಂದಿದ್ದಾರೆ ಎಂ ಶಿವಣ್ಣ. ದಶಕಗಳ ಹಿಂದೆಯೇ ಶಿವಣ್ಣ ಎಚ್‌ ಡಿ ಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಮಂತ್ರಿಯಾಗಿದ್ದರು. ನಂತರ ಜೆಡಿಎಸ್‌ ಸೇರಿ, ಭ್ರಮನಿರಸನಗೊಂಡು ಬಿಜೆಪಿ ಮೂಲಕ ರಾಜಕೀಯ ಭವಿಷ್ಯ ಅರಸುವ ಪ್ರಯತ್ನ ಮಾಡುತ್ತಿದ್ದರು. ಅದೂ ಹುಸಿಯಾಗಿದ್ದರಿಂದ ರಾಜಕೀಯ ನಿವೃತ್ತಿಯ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ : ಚಾಮುಂಡೇಶ್ವರಿ ಕದನ ಕಣದಲ್ಲಿ ಸಿದ್ದರಾಮಯ್ಯ ಶಕ್ತಿ, ಸವಾಲುಗಳೇನು?

ಬಿಜೆಪಿಯ ಟಿಕೆಟ್ ಬಂಡಾಯ ಶುರುವಾಗಿದ್ದು ಈಗಲ್ಲ. ಚುನಾವಣೆ ದಿನಾಂಕ ಪ್ರಕಟಣೆಗೆ ಮುನ್ನವೇ ಪಿರಿಯಾಪಟ್ಟಣ ಕ್ಷೇತ್ರದ ಟಿಕೆಟ್ ವಿಷಯದಲ್ಲಿ ಬೇಸರಗೊಂಡು ಸಿ ಎಚ್‌ ವಿಜಯಶಂಕರ್‌ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಅವರು ನಿರೀಕ್ಷಿಸಿದ್ದಂತೆ ಆ ಕ್ಷೇತ್ರದಲ್ಲಿ ಉದ್ಯಮಿ ಎಸ್‌ ಮಂಜುನಾಥ್‌ಗೆ ಬಿಜೆಪಿ ಟಿಕೆಟ್ ನೀಡಿದೆ. ಕೃಷ್ಣರಾಜ, ಚಾಮರಾಜ ಮಾತ್ರವಲ್ಲ, ಮುಖ್ಯಮಂತ್ರಿ ಮತ್ತು ಅವರ ಪುತ್ರ ಸ್ಪರ್ಧಿಸುವ ಚಾಮುಂಡೇಶ್ವರಿ ಮತ್ತು ವರುಣಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲೂ ಬಿಜೆಪಿ ಅಳೆದು ತೂಗುವ ಲೆಕ್ಕಾಚಾರಕ್ಕೆ ಮೊರೆಹೋದಂತಿದೆ. ಹೀಗೆ, ತನ್ನ ಮಡಿಲಲ್ಲೇ ಕೆಂಡ ಇಟ್ಟುಕೊಂಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಪುತ್ರ ಯತೀಂದ್ರ ಅವರನ್ನು ಸೋಲಿಸುವ ಪಣ ತೊಟ್ಟಿದೆ.

ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಕಣಕ್ಕಿಳಿಯುತ್ತಾರೆ ಎನ್ನಲಾಗಿದ್ದರೂ, ಎರಡನೇ ಪಟ್ಟಿಯಲ್ಲಿ ಅವರ ಹೆಸರಿಲ್ಲ. “ಒಂದೊಮ್ಮೆ ವಿಜಯೇಂದ್ರಗೆ ಟಿಕೆಟ್ ನೀಡಿದರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸಿಟ್ಟಿಗೇಳುವ ಸಾಧ್ಯತೆ ಇದೆ,’’ ಎನ್ನಲಾಗುತ್ತಿದೆ. ಹೊರಗಿನ ಅಭ್ಯರ್ಥಿ ಎನ್ನುವ ಸಂಗತಿ ಕಾಂಗ್ರೆಸ್‌ಗೆ ಪೂರಕ ಆಗಬಹುದೆನ್ನುವುದು ಕೆಲವರ ಅಂದಾಜು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ, “ನಾನು ಈ ಮಣ್ಣಿನ ಮಗ. ಯತೀಂದ್ರ ನನ್ನ ಮಗ. ಇಲ್ಲಿ ಸ್ಪರ್ಧೆ ಮಾಡಲು ಬರುವ ಅವರ್ಯಾರು?’’ ಎಂದು ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಈ ಕಾರಣಕ್ಕೇ, ವಿಜಯೇಂದ್ರ ಉಮೇದುವಾರಿಕೆಯನ್ನು ಪ್ರಕಟಿಸಲು ಬಿಜೆಪಿ ಕಾಯ್ದು ನೋಡುವ ತಂತ್ರ ಮಾಡುತ್ತಿದೆ ಎನ್ನಲಾಗಿದೆ. ಮಾತ್ರವಲ್ಲ, ಚಾಮುಂಡೇಶ್ವರಿ ಕ್ಷೇತ್ರದ ಅಭ್ಯರ್ಥಿ ವಿಷಯದಲ್ಲೂ ಬಿಜೆಪಿ ನಾಯಕರು ತುಟಿಬಿಚ್ಚುತ್ತಿಲ್ಲ. ಇದರಿಂದ, ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿ ಜೆಡಿಎಸ್‌ ಜೊತೆ ಒಳಮೈತ್ರಿ ಮಾಡಿಕೊಳ್ಳಬಹುದು ಎನ್ನುವ ಶಂಕೆ ಇನ್ನೂ ಜೀವಂತವಾಗಿದೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಮತ್ತು ಅವರ ಪುತ್ರನನ್ನು ಸೋಲಿಸುವುದಕ್ಕಿಂತ, ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳಲ್ಲಿನ ಸಂಭವನೀಯ ಬಂಡಾಯವನ್ನು ನಿಭಾಯಿಸಿ, ಅಭ್ಯರ್ಥಿಗಳನ್ನು ಹೂಡುವುದೇ ಸದ್ಯ ಬಿಜೆಪಿ ನಾಯಕರಿಗೆ ದೊಡ್ಡ ತಲೆಬೇನೆಯ ಸಂಗತಿ ಆದಂತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More