ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭಾವಿ ನಾಯಕರದ್ದೇ ಕಾರುಬಾರು

ಕನಕಪುರ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿರುವ ಪಿಜಿಆರ್‌ ಸಿಂಧ್ಯಾ, ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದವರು. ಇದೇ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಡಿ ಕೆ ಶಿವಕುಮಾರ್‌, ನಾಡಿನ ಪ್ರಭಾವಿ ಕಾಂಗ್ರೆಸ್‌ ನಾಯಕರಲ್ಲೊಬ್ಬರು. ಈ ಕ್ಷೇತ್ರದ ಚುನಾವಣಾ ದತ್ತಾಂಶ ಇಲ್ಲಿ ಕೊಡಲಾಗಿದೆ

ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಕನಕಪುರ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದೆ. ಜನತಾ ಪರಿವಾರದ ಹಿರಿಯ ನಾಯಕ ಪಿಜಿಆರ್‌ ಸಿಂಧ್ಯಾ ಅವರು ಆರು ಬಾರಿ ಹಾಗೂ ಕಾಂಗ್ರೆಸ್‌ನ ಡಿ ಕೆ ಶಿವಕುಮಾರ್‌ ಅವರು ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಈ ಕ್ಷೇತ್ರದಿಂದ ಆರು ಬಾರಿ ಆಯ್ಕೆಯಾಗಿರುವ ಪಿಜಿಆರ್‌ ಸಿಂಧ್ಯಾ ಅವರು ರಾಜ್ಯ ಸರ್ಕಾರದ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಇದೇ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿರುವ ಡಿ ಕೆ ಶಿವಕುಮಾರ್‌ ಅವರು ಸಹ ನಾಡಿನ ಪ್ರಭಾವಿ ಕಾಂಗ್ರೆಸ್‌ ನಾಯಕರಲ್ಲೊಬ್ಬರು ಮತ್ತು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

1983ರಲ್ಲಿ ಮೊದಲ ಬಾರಿಗೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಮೂಲಕ ಸ್ಪರ್ಧಿಸಿದ ಪಿಜಿಆರ್ ಸಿಂಧ್ಯಾ, ಕಾಂಗ್ರೆಸ್‌ನ ಸಿ ಅಪ್ಪಾಜಿ ಅವರನ್ನು 12,864 (ಶೇ.20.07) ಮತಗಳ ಅಂತರದಲ್ಲಿ ಪರಾಭವಗೊಳಿಸಿ ಶಾಸಕರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಜನತಾ ಪಕ್ಷವು ದೊಡ್ಡ ಪಕ್ಷವಾಗಿ ಹೊರಹೊಮ್ಮಿ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ರಾಜ್ಯದ ಚುಕ್ಕಾಣಿ ಹಿಡಿಯಿತು. ಈ ಸಮಯದಲ್ಲಿ ಪಿಜಿಆರ್‌ ಸಿಂಧ್ಯಾ ಅವರು ಆರೋಗ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

1985ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ ಪಿಜಿಆರ್‌ ಸಿಂಧ್ಯಾ, ಕಾಂಗ್ರೆಸ್‌ ಅಭ್ಯರ್ಥಿ ಎಂ ವಿ ರಾಜಶೇಖರನ್‌ ಅವರನ್ನು 27,135 (ಶೇ.33.57) ಮತಗಳ ಅಂತರದಲ್ಲಿ ಸೋಲಿಸಿದರು. ಈ ಮೂಲಕ, ಎರಡನೇ ಬಾರಿ ಶಾಸಕರಾಗಿ ವಿಧಾನಸಭೆಗೆ ಪ್ರವೇಶ ಪಡೆದರು. ಈ ಚುನಾವಣೆಯಲ್ಲಿ ಜನತಾ ಪಕ್ಷವು ಸ್ಪಷ್ಟ ಬಹುಮತ ಪಡೆಯುವ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿಯಿತು. ರಾಮಕೃಷ್ಟ ಹೆಗಡೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಹೆಗಡೆ ಸಚಿವ ಸಂಪುಟದಲ್ಲಿ ಪಿಜಿಆರ್ ಸಿಂಧ್ಯಾ ಸ್ಥಾನ ಗಿಟ್ಟಿಸಿಕೊಂಡರು.

1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮರಿಲಿಂಗೇಗೌಡರ ವಿರುದ್ಧ ಸ್ಪರ್ಧಿಸಿದ ಪಿಜಿಆರ್ ಸಿಂಧ್ಯಾ, 4,369 (ಶೇ.4.8.5) ಮತಗಳ ಅಂತರದಲ್ಲಿ ಜಯ ಗಳಿಸಿದರು. ಆದರೆ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದ್ದರಿಂದ ಪಿಜಿಆರ್‌ ಸಿಂಧ್ಯಾ ವಿರೋಧ ಪಕ್ಷದಲ್ಲಿ ಶಾಸಕರಾಗಿ ತೃಪ್ತಿಪಡುವಂತಾಯಿತು.

1994ರ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಲ್ಲಿ ಜನತಾದಳದಿಂದ ಕಣಕ್ಕಿಳಿದ ಸಿಂಧ್ಯಾ, ಕಾಂಗ್ರೆಸ್‌ ಅಭ್ಯರ್ಥಿ ಕೆ ಟಿ ಚೆನ್ನಬಸವೇಗೌಡರನ್ನು 19,559 (ಶೇ.20.14) ಪರಾಭವಗೊಳಿಸಿದರು. ಈ ಮೂಲಕ, 1994ರಲ್ಲಿ ಅಧಿಕಾರದ ಗದ್ದುಗೆ ಹಿಡಿದ ಜನತಾದಳ ಸರ್ಕಾರದಲ್ಲಿ ಸಿಂಧ್ಯಾ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾದರು.

1999ರ ವಿಧಾನಸಭಾ ಚುನಾವಣೆ ವೇಳೆಗೆ ಜನತಾದಳವು ಇಬ್ಬಾಗವಾಗಿ ಜಾತ್ಯತೀತ ಜನತಾದಳ (ಜೆಡಿಎಸ್) ಹಾಗೂ ಸಂಯುಕ್ತ ಜನತಾದಳ (ಜೆಡಿಯು) ಹೆಸರಲ್ಲಿ ಅಸ್ತಿತ್ವಕ್ಕೆ ಬಂದವು. ಪಿಜಿಆರ್‌ ಸಿಂಧ್ಯಾ ಅವರು ಜೆಡಿಯುನಲ್ಲಿ ಗುರುತಿಸಿಕೊಂಡರು. ಈ ಚುನಾವಣೆಯಲ್ಲಿ ಜೆಡಿಯು ಮೂಲಕ ಕನಕಪುರ ಕ್ಷೇತ್ರದಿಂದ ಕಣಕ್ಕಿಳಿದ ಸಿಂಧ್ಯಾ, ಜೆಡಿಎಸ್ ಅಭ್ಯರ್ಥಿ ನಾರಾಯಣಗೌಡರನ್ನು 23,728 (ಶೇ.23.83) ಮತಗಳ ಅಂತರದಲ್ಲಿ ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ದೊರೆತು ಎಂ ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾದರು.

2004ರ ಚುನಾವಣೆ ವೇಳೆಗೆ ಜೆಡಿಎ‌ಸ್‌ ಮೂಲಕ ಕನಕಪುರ ಕ್ಷೇತ್ರದಿಂದ ಕಣಕ್ಕಿಳಿದ ಸಿಂಧ್ಯಾ, ಕಾಂಗ್ರೆಸ್‌ನ ನಾರಾಯಣಗೌಡ ಅವರನ್ನು ಪರಾಭವಗೊಳಿಸುವ ಮೂಲಕ ಸತತ ಐದನೇ ಬಾರಿ ಶಾಸಕರಾಗಿ ವಿಧಾನಸಭಾ ಪ್ರವೇಶ ಪಡೆದರು. ಈ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಸಿಗದ ಕಾರಣ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿತು. ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಸಿಂಧ್ಯಾ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

2008ರಲ್ಲಿ ನಡೆದ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್‌ನ ಡಿ ಕೆ ಶಿವಕುಮಾರ್‌ ಅವರು ಕನಕಪುರ ಕ್ಷೇತ್ರದಿಂದ ಕಣಕ್ಕಿಳಿದರು. ಈ ಚುನಾವಣೆಯಲ್ಲಿ ಸಿಂಧ್ಯಾ ಸ್ಪರ್ಧಿಸಲಿಲ್ಲ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಡಿ ಕೆ ಶಿವಕುಮಾರ್‌, ಜೆಡಿಎಸ್‌ನ ಡಿ ಎಂ ವಿಶ್ವನಾಥ ಅವರನ್ನು 7,179 (ಶೇ5.1) ಮತಗಳ ಅಂತರದಲ್ಲಿ ಪರಾಭವಗೊಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ರಾಜ್ಯದ ಅಧಿಕಾರ ಹಿಡಿಯಿತು.

ಇದನ್ನೂ ಓದಿ : ಎಂ ಪಿ ಪ್ರಕಾಶ್ ರಾಜಕೀಯ ಬದುಕಿನ ಏಳುಬೀಳು ತೆರೆಡಿಡುವ ಹಡಗಲಿ ಮತಕ್ಷೇತ್ರ

2013ರ ವಿಧಾನಸಭಾ ಚುನಾವಣೆಯಲ್ಲಿ ಡಿ ಕೆ ಶಿವಕುಮಾರ್ ಹಾಗೂ ಪಿಜಿಆರ್‌ ಸಿಂಧ್ಯಾ ನಡುವೆ ನೇರ ಹಣಾಹಣಿ ನಡೆಯಿತು. ಕನಕಪುರ ಕ್ಷೇತ್ರದಿಂದ ಐದು ಬಾರಿ ಸ್ಪರ್ಧಿಸಿ ಜಯ ಗಳಿಸಿದ್ದ ಸಿಂಧ್ಯಾ ಅವರನ್ನು 31,424 (ಶೇ.17.84) ಮತಗಳ ಅಂತರದಲ್ಲಿ ಕಾಂಗ್ರೆಸ್‌ನ ಡಿ ಕೆ ಶಿವಕುಮಾರ್ ಅವರು ಪರಾಭವಗೊಳಿಸಿದರು. ಈ ಚುನಾವಣೆಯಲ್ಲಿ ಬಹುಮತ ಗಳಿಸಿದ ಕಾಂಗ್ರೆಸ್ ಪಕ್ಷವು‌ ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಡಿ ಕೆ ಶಿವಕುಮಾರ್‌ ಅವರು ಇಂಧನ ಸಚಿವರಾಗಿ ಆಯ್ಕೆಯಾದರು.

ಪಿಜಿಆರ್‌ ಸಿಂಧ್ಯಾ ಹಾಗೂ ಡಿ ಕೆ ಶಿವಕುಮಾರ್‌ ಅವರಂಥ ಪ್ರಬಲ ನಾಯಕರನ್ನು ಆಯ್ಕೆ ಮಾಡಿದ ಕನಕಪುರ ಕ್ಷೇತ್ರ ರಾಜ್ಯದಲ್ಲಿ ಮಹತ್ವದ ವಿಧಾನಸಭಾ ಕ್ಷೇತ್ರವೆಂದೇ ಹೇಳಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More