ಚಾಣಕ್ಯಪುರಿ | ಮುನಿಯಪ್ಪನವರ ಗ್ರಾಫು ಕೂಡ ಏರುಗತಿಯಲ್ಲಿ ಸಾಗಿದೆಯಂತೆ

ರಾಜ್ಯ ಕಾಂಗ್ರೆಸ್‌ನಲ್ಲಿ ಮುನಿಯಪ್ಪನವರ ಕಿಮ್ಮತ್ತು ಹೆಚ್ಚಾಗಿದ್ದು, ಎಡಗೈ ಸಮುದಾಯದಲ್ಲಿ ಅವರು ಪ್ರಶ್ನಾತೀತ ನಾಯಕರಾಗಿ ರೂಪುಗೊಂಡಿದ್ದಾರೆ.‌ ಈಗ ಟಿಕೆಟ್ ಹಂಚಿಕೆಯ ಪ್ರಕ್ರಿಯೆಯಲ್ಲಿ ಕೂಡ ಅವರ ಪ್ರಭಾವ ಋಜುವಾತು ಆಗಿದ್ದು, ಮುನಿಯಪ್ಪ ಹೇಳಿದ ಬಹುತೇಕರಿಗೆ ಟಿಕೆಟ್ ಸಿಕ್ಕಿದೆ

ಸಂಸದ ಕೆ ಎಚ್ ಮುನಿಯಪ್ಪ ತುಂಬಾ ಖುಷಿಯಾಗಿದ್ದಾರಂತೆ. ಅದು ಅವರ ಪುತ್ರಿ ರೂಪಾ ಅವರಿಗೆ ಕೆಜಿಎಫ್ ಟಿಕೆಟ್ ಲಭಿಸಿತು ಎಂಬ ಏಕಮಾತ್ರ ಕಾರಣಕ್ಕಲ್ಲ. ಇಡೀ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂತರ ಅತಿ ಹೆಚ್ಚು ಮಾನ್ಯತೆ ಸಿಕ್ಕಿದೆ ಎನ್ನುವ ಕಾರಣಕ್ಕೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಪು ಮಾತ್ರ ಏರುಮುಖದಲ್ಲಿ ಸಾಗಿಲ್ಲ. ಆ ಪಟ್ಟಿಯಲ್ಲಿ ಮುನಿಯಪ್ಪ ಹೆಸರು ಕೂಡ ಇದೆ. ಮುನಿಯಪ್ಪ ಕೆಪಿಸಿಸಿ ಅಧ್ಯಕ್ಷರಾಗಲು ಇನ್ನಿಲ್ಲದಂತೆ ಪ್ರಯತ್ನಪಟ್ಟಿದ್ದರು. ಅದು ಸಾಧ್ಯವಾಗದಿದ್ದಾಗ ಅವರು ಸುಮ್ಮನಾಗಲಿಲ್ಲ. ಸುಮ್ಮನಾಗುವ ವ್ಯಕ್ತಿತ್ವವೂ ಅಲ್ಲ ಅವರದು. ಸದಾಶಿವ ಆಯೋಗದ ವರದಿಯ ಪ್ರತಿಗಳನ್ನು ತೆಗೆದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಹೋದರು. ಆಯೋಗದ ವರದಿಯನ್ನು ಒಪ್ಪಿ ಜಾರಿಗೊಳಿಸಿ ಎಂದು ಪಟ್ಟುಹಾಕಿದರು.

ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಕಡೆ ತೋರಿಸಿ ಜಾರಿಕೊಳ್ಳುವ ಪ್ರಯತ್ನ ಮಾಡಿದಾಗ ಖುದ್ದು ಖರ್ಗೆ ಮನೆಗೂ ತಾವೇ ದಾಂಗುಡಿ ಇಟ್ಟರು. ಖರ್ಗೆ ಅವರಿಂದ ಪೂರಕ ಪ್ರತಿಕ್ರಿಯೆ ಬಾರದಾದಾಗ ಎಡಗೈ ಸಮುದಾಯದ ಎಲ್ಲ ಮುಖಂಡರನ್ನು ಒಂದು ತಕ್ಕಡಿಗೆ ತಂದರು. ಈಗಾಗಲೇ ಹೆಣೆದಿದ್ದ ಒತ್ತಾಯದ ಕುಣಿಕೆಯನ್ನು ಬಿಗಿಗೊಳಿಸಲು ಆರಂಭಿಸಿದರು. ಇದರ ಪರಿಣಾಮ, ಆದಿಜಾಂಬವ ಪ್ರಾಧಿಕಾರ ಅಸ್ತಿತ್ವಕ್ಕೆ ಬರುವಂತಾಯಿತು. ಎಡಗೈ ಸಮುದಾಯದ ಎಲ್ ಹನುಮಂತಯ್ಯ ಅನಾಯಸವಾಗಿ ರಾಜ್ಯಸಭೆ ಪ್ರವೇಶಿಸುವಂತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ಎಡಗೈ ಸಮುದಾಯದಲ್ಲಿ ಮು‌ನಿಯಪ್ಪ ಪ್ರಶ್ನಾತೀತ ನಾಯಕರಾಗಿ ಪ್ರತಿಷ್ಠಾಪಿತಗೊಂಡರು.‌ ಈಗ ಟಿಕೆಟ್ ಹಂಚಿಕೆಯ ಪ್ರಕ್ರಿಯೆಯಲ್ಲಿ ಅದು ಋಜುವಾತು ಕೂಡ ಆಯಿತು. ಮುನಿಯಪ್ಪ ಹೇಳಿದ ಬಹುತೇಕರಿಗೆ ಟಿಕೆಟ್ ಸಿಕ್ಕಿದೆ. ಟಿಕೆಟ್ ಕೇಳಿಕೊಂಡು ಬಂದ ಎಡಗೈ ಸಮುದಾಯದ ಆಕಾಂಕ್ಷಿಗಳಿಗೆ ಸ್ವತಃ ಸಿದ್ದರಾಮಯ್ಯ, "ಮುನಿಯಪ್ಪ ಬಳಿ ಹೋಗಿ, ಅವರಿಂದ ಸಿಂಗಲ್ ನೇಮ್ ಲಿಸ್ಟ್ ತೆಗೆದುಕೊಂಡು ಬನ್ನಿ,” ಎಂದು ಹೇಳುತ್ತಿದ್ದರಂತೆ.

ರಾಜಕಾರಣಿಗಳ ದೆಹಲಿ ನಾಟಕ

ರಾಜಕಾರಣಿಗಳು ತಾವು ಪ್ರಭಾವಿ ಎಂದು ಬಿಂಬಿಸಿಕೊಳ್ಳಲು ಪಡುವ ಪಡಿಪಾಟಿಲುಗಳು ಅಷ್ಟಿಷ್ಟಲ್ಲ. ಅರ್ಹತೆಗಿಂತಲೂ ಅಪಾರವಾದುದನ್ನು ಅಪೇಕ್ಷಿಸುವ, ಸಾಮರ್ಥ್ಯವಿಲ್ಲದಿದ್ದರೂ ನಿರೀಕ್ಷಿಸುವ ಈ ರಾಜಕಾರಣಿಗಳು ತಮಗೆ ಆ ಅರ್ಹತೆ, ಯೋಗ್ಯತೆ, ಸಾಮರ್ಥ್ಯಗಳು ಇವೆ ಎಂದು ಸಾಬೀತುಪಡಿಸಲು ಹೆಣಗಾಡುತ್ತಾರೆ. ಚುನಾವಣೆ ವೇಳೆ ಟಿಕೆಟ್ ಪಡೆಯುವ ಮತ್ತು ಕೊಡಿಸುವ ವಿಷಯ ಈ ನಾಯಕರಿಗೆ ಅಗ್ನಿಪರೀಕ್ಷೆ. ಆಗ ಅವರೆಲ್ಲರೂ ನೋಡುವುದು ದೆಹಲಿಯತ್ತ. ಹೀಗೆ ದೆಹಲಿ ನೋಡುವವರಲ್ಲಿ ಎರಡು ವಿಧ. ಒಂದು, ನಿಜಕ್ಕೂ ಗಂಭೀರವಾಗಿ ಟಿಕೆಟ್ ಪಡೆಯುವ ಮತ್ತು ಕೊಡಿಸುವ ವರ್ಗ; ಇಂಥವರ ಸಂಖ್ಯೆ ಕಡಿಮೆ. ಎರಡನೆಯದು; ಟಿಕೆಟ್ ಪಡೆಯುವಂತೆ ಮತ್ತು ಕೊಡಿಸುವಂತೆ ನಟಿಸಿ, ನಂಬಿಸುವ ವರ್ಗ.

ಎರಡನೇ ವರ್ಗದವರ ಕತೆ ಕುತೂಹಲಕಾರಿ ಕೂಡ. ಕ್ಷೇತ್ರದಲ್ಲಾಗಲೀ, ಜಿಲ್ಲೆಯಲ್ಲಾಗಲೀ, ರಾಜ್ಯ ಮಟ್ಟದಲ್ಲಾಗಲೀ ಅವರಿಗೆ ನಿಜವಾದ ಸಾಮರ್ಥ್ಯ ಇರುವುದೇ ಇಲ್ಲ, ಇದ್ದರೂ ಕಡಿಮೆ ಪ್ರಮಾಣದಲ್ಲಿರುತ್ತದೆ. ಆದರೆ, ತಾವು ತುಂಬಾ ಪ್ರಭಾವಿ ಎಂದು ಬಿಂಬಿಸಿಕೊಳ್ಳುತ್ತಾರೆ. ಹೀಗೆ, ಬಿಂಬಿಸಿಕೊಳ್ಳಲು ಇವರಿಗೆ ದೆಹಲಿ ಎನ್ನುವುದು ಅಸ್ತ್ರ. ಹಾಗಾಗಿಯೇ ಈ ನಾಯಕರಿಗೆ ಟಿಕೆಟ್ ಹಂಚಿಕೆ ದೆಹಲಿಯಲ್ಲಿ ನಡೆಯುತ್ತದೆ ಎಂದರೆ ಸಮಾಧಾನ. ಸ್ಥಳೀಯವಾಗಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಹುಕುಂ ಹೊರಡಿಸಿಬಿಟ್ಟರೆ ಈ ಎಲ್ಲ ನಾಯಕರ ನಿಜವಾದ ಬಣ್ಣ ಬಯಲಾಗುತ್ತದೆ. ಅವರು ನಿಜಕ್ಕೂ ಕೂಡ ಯಾರ ಪರ? ಯಾರ ವಿರೋಧ? ಎಂದು ತಿಳಿಯುತ್ತದೆ. ಅವರ ಜಾತಿಯವರಿಗೆ ಏನು ಮಾಡಿದರು? ಪರಜಾತಿಯವನ ಪರಿಸ್ಥಿತಿ ಏನೆಂದು ಗೊತ್ತಾಗುತ್ತದೆ. ದೆಹಲಿಯಲ್ಲಿ ಯಾರಿಗೋ ಕೊಡಬೇಕು ಎಂದು ಹೇಳಿಕೊಂಡು ದುಡ್ಡು ವಸೂಲಿ ಮಾಡುವ ಸುವರ್ಣಾವಕಾಶ ತಪ್ಪಿಹೋಗುತ್ತದೆ. ಜೊತೆಗೆ ರಾಜ್ಯದ ಇತರ ನಾಯಕರ ಜೊತೆಗೆ ಇವರ ಅಡ್ಜೆಸ್ಟ್‌ಮೆಂಟ್ ಎಂಥದ್ದು ಎಂಬುದು ಗೊತ್ತಾಗುತ್ತದೆ. ಅದರ ಬದಲು, ದೆಹಲಿ ಎಂದುಬಿಟ್ಟರೆ ಒಂದೇ ಏಟಿಗೆ ಈ ಎಲ್ಲ ಸಂಕಟಗಳು ಮರೆಯಾಗಿಬಿಡುತ್ತವೆ.

ಟಿಕೆಟ್ ಸಿಕ್ಕಿದರೆ ತಾನು ಕೊಡಿಸಿದೆ ಎಂಬ ಹೆಚ್ಚುಗಾರಿಕೆಗೆ ಪಾತ್ರರಾಗುತ್ತಾರೆ‌. ಸಿಗದಿದ್ದರೆ, 'ಎಲ್ಲವೂ ಆಗಿತ್ತು. ಅವರು ಹುಳಿ ಹಿಂಡಿದರು. ಇನ್ನೊಬ್ಬರು ಕೈಕೊಟ್ಟರು. ದೆಹಲಿ ನಾಯಕರು ಕಡೆ ಗಳಿಗೆಯಲ್ಲಿ ಕೆಲಸ ಮಾಡಲಿಲ್ಲ. ಕಡೆ ಗಳಿಗೆವರೆಗೂ ಪಟ್ಟಿಯಲ್ಲಿ ನಿನ್ನ ಹೆಸರೇ ಇತ್ತು' ಎಂಬಿತ್ಯಾದಿ ನೆಪ ಹೇಳುತ್ತಾರೆ. ಈ ಮೂಲಕ ದೆಹಲಿಯಲ್ಲಿ ತಮಗೆ ಯಾವುದೇ ಪ್ರಭಾವ ಇಲ್ಲದಿದ್ದರೂ, ಇದೆ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವರು ದುಡ್ಡು ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಭೂಪರಿರುತ್ತಾರೆ. ಅವರಿಗೆ ಏನೇನೂ ಕೆಲಸವಿಲ್ಲದಿದ್ದರೂ ದೆಹಲಿಗೆ ಬರುತ್ತಾರೆ. ಒಂದೆರಡು ದಿನ ಕರ್ನಾಟಕ ಭವನದಲ್ಲಿ ಮಲಗಿ, ಜಿಮ್ ಮಾಡಿ, ಶಾಪಿಂಗ್ ಮಾಡ್ಕೊಂಡು ವಾಪಸ್ ಆಗುತ್ತಾರೆ. ಇದು 'ತಮಗೆ ದೆಹಲಿ ಸಂಪರ್ಕ ತುಂಬಾ ಚೆನ್ನಾಗಿದೆ' ಎಂದು ಬಿಂಬಿಸಿಕೊಳ್ಳುವ ಇನ್ನೊಂದು ವರಸೆ. ಸಹಕಾರ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಒಬ್ಬ ಸಚಿವರಿದ್ದಾರೆ. ಪ್ರತಿಸಲ ಮುಖ್ಯಮಂತ್ರಿ ದೆಹಲಿಗೆ ಬಂದಾಗ ಈ ಸಚಿವರು ಕೂಡ ಬರುತ್ತಾರೆ‌; ಅಗೈನ್, ಮಲಗಿ ಎದ್ದು ಹೊರಡುತ್ತಾರೆ. ಆದರೆ, ತಮ್ಮ ಕ್ಷೇತ್ರದ ಜನರಿಗೆ ಮಾತ್ರ "ಮುಖ್ಯಮಂತ್ರಿ ಕರೆದಿದ್ದರು, ಅದಿಕ್ಕೆ ದೆಹಲಿಗೆ ಹೋಗಿದ್ದೆ,” ಎಂದು ಹೇಳುತ್ತಾರಂತೆ.

ಇದನ್ನೂ ಓದಿ : ಚಾಣಕ್ಯಪುರಿ | ‘ಆರೆಸ್ಸೆಸ್‌ನವ್ರು ನಿರ್ದೇಶಕರಿದ್ದಂತೆ, ಬಿಜೆಪಿಯವ್ರು ನಟರು’

ಕಟ್ಟಾ ಬೆಂಬಲಿಗನ ಪಟ್ಟು

ಹಾನಗಲ್ ಹಾಲಿ ಶಾಸಕ ಮನೋಹರ್ ತಹಶಿಲ್ದಾರ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುತ್ತದೆ ಎನ್ನುವುದು ಮೊದಲೇ ಗೊತ್ತಿತ್ತು. ಈ ವಾಸ್ತವ ಅರಿತೂ ಅವರು ಸುಮ್ಮನಾಗಿದ್ದರು. ಆದರೆ, ಅವರ ಕಟ್ಟಾ ಬೆಂಬಲಿಗನಿಗೆ ಇದು ಸರಿ ಕಾಣಿಸಲಿಲ್ಲ. ಮನೋಹರ್ ತಹಶಿಲ್ದಾರ್ ಅವರಿಗೆ ಟಿಕೆಟ್ ಕೊಡಿಸಲೇಬೇಕು ಎಂದು ದೆಹಲಿಗೆ ಬಂದರು. ಕೆಲ ನಾಯಕರನ್ನು ಭೇಟಿ ಮಾಡಿದರು. ತಹಶಿಲ್ದಾರ್ ಅವರಿಗೆ ಟಿಕೆಟ್ ತಪ್ಪಿಸಬೇಡಿ ಎಂದು ಮನವಿ ಮಾಡಿದರು. ಆಗ ಸಮೀಕ್ಷೆಗಳು ಮನೋಹರ್ ತಹಶಿಲ್ದಾರ್ ಪರ ಇಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ. ಇದು ಗೊತ್ತಾದ ಕೂಡಲೇ ಕಟ್ಟಾ ಬೆಂಬಲಿಗನ ಪಟ್ಟು ಬದಲಾಗಿದೆ. ಮನೋಹರ್ ತಹಶಿಲ್ದಾರ್ ಹೆಸರು ಕೆಟ್ಟಿದ್ದರೆ ನನಗೇ ಟಿಕೆಟ್ ಕೊಡಿ ಎಂದು ಕೇಳಿದ್ದಾರೆ. ದೆಹಲಿ ಪತ್ರಕರ್ತರ ಮುಂದೆ ಮಾತನಾಡುತ್ತಿದ್ದ ಈ ಕಟ್ಟಾ ಬೆಂಬಲಿಗ, ಅಕಸ್ಮಾತ್ ಆಗಿ ಸತ್ಯ ಬಿಚ್ಚಿಟ್ಟರು. ದಿಕ್ಕೆಡುವ ಸರದಿ ಮನೋಹರ್ ತಹಶಿಲ್ದಾರ್ ಅವರದು!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More