‘ದಯವಿಟ್ಟು ಮಾತನಾಡಿ, ದೇಶವನ್ನು ಉಳಿಸಿ’ ಎಂದರು ಯಶವಂತ ಸಿನ್ಹಾ

ಕೇಂದ್ರ ಸರ್ಕಾರದ ಭಾಗವಾಗಿದ್ದವರು ನಾಲ್ಕು ವರ್ಷ ಮಾಡಿದ್ದೇನು, ಮಾತನಾಡಬೇಕಾದಾಗ ಸುಮ್ಮನಿದ್ದದ್ದು ಏಕೆ ಎಂದು ಪ್ರಶ್ನಿಸಿದ್ದಾರೆ ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ. ಅವರು ಬಿಜೆಪಿ ಮಾರ್ಗದರ್ಶಕರಿಗೆ ಬರೆದ, ‘ಇಂಡಿಯನ್ ಎಕ್ಸ್‌ಪ್ರೆಸ್‌’ನಲ್ಲಿ ಪ್ರಕಟವಾದ ಬಹಿರಂಗ ಪತ್ರದ ಯಥಾರೂಪ ಇಲ್ಲಿದೆ

ಕಳೆದ ೨೦೧೪ರ ಸಂಸತ್ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ನಾವೆಲ್ಲ ಬಹಳ ಶ್ರಮಪಟ್ಟಿದ್ದೇವೆ. ಯುಪಿಎ ಸರ್ಕಾರದ ವಿರುದ್ಧ ನಾವೆಲ್ಲ ಕೆಲವರು ೨೦೦೪ರಲ್ಲಿ ಅದು ಅಧಿಕಾರಕ್ಕೆ ಬಂದಾಗಿನಿಂದ ಸಂಸತ್ತಿನ ಒಳ-ಹೊರಗೆ ಹೋರಾಡುತ್ತಲೇ ಇದ್ದೆವು. ಮತ್ತೆ ನಮ್ಮಲ್ಲೇ ಕೆಲವರು, ತಮ್ಮ-ತಮ್ಮ ರಾಜ್ಯಗಳಲ್ಲಿ ತಮ್ಮ ಪಾಡಿಗೆ ತಾವು ಅಧಿಕಾರ ಸವಿ ಉಣ್ಣುತ್ತಿದ್ದರು. ಆದರೂ, ೨೦೧೪ರ ಚುನಾವಣೆಯ ಫಲಿತಾಂಶ ಕಂಡು ನಾವೆಲ್ಲ ಬಹಳ ಖುಷಿಯಾಗಿದ್ದೆವು. ಆ ಅಭೂತಪೂರ್ವ ಜನಾದೇಶ ದೇಶದ ಇತಿಹಾಸದಲ್ಲಿ ಹೊಸ ವೈಭವದ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದೆ ಎಂದೇ ನಾವೆಲ್ಲ ಸಂಭ್ರಮಿಸಿದ್ದೆವು. ಆ ನಿರೀಕ್ಷೆಯಲ್ಲೇ ನಾವು ಪ್ರಧಾನಿ ಮತ್ತು ಅವರ ತಂಡದ ಮೇಲೆ ನಂಬಿಕೆ ಇಟ್ಟು, ಅವರನ್ನು ಸಂಪೂರ್ಣವಾಗಿ ಬೆಂಬಲಿಸಿ ಬೆನ್ನಿಗೆ ನಿಂತಿದ್ದೆವು. ಸರ್ಕಾರ ಈಗ ಹೆಚ್ಚೂಕಡಿಮೆ ನಾಲ್ಕು ವರ್ಷ ಪೂರೈಸಿದೆ, ಐದು ಬಜೆಟ್‌ ಮಂಡಿಸಿದೆ ಮತ್ತು ತನ್ನ ಸಾಧನೆಗಳ ಛಾಪು ಮೂಡಿಸಲು ಸಾಕಷ್ಟು ಅವಕಾಶವನ್ನೂ ಪಡೆದಾಗಿದೆ. ಆದರೆ, ಈಗ ಸರ್ಕಾರದ ಕೊನೆಯ ವರ್ಷದಲ್ಲಿ ನಿಂತು ನೋಡಿದರೆ, ನಾವು ನಮ್ಮ ಹಾದಿ ತಪ್ಪಿದ್ದೇವೆ ಮತ್ತು ಮತದಾರರ ವಿಶ್ವಾಸವನ್ನೂ ಕಳೆದುಕೊಂಡಿದ್ದೇವೆ ಎನಿಸುತ್ತದೆ.

ಜಗತ್ತಿನ ಅತಿವೇಗದ ಬೆಳವಣಿಗೆಯ ಅರ್ಥವ್ಯವವಸ್ಥೆ ನಮ್ಮದು ಎಂಬ ಸರ್ಕಾರದ ಹೇಳಿಕೆಗಳ ಹೊರತಾಗಿಯೂ ದೇಶದ ಆರ್ಥಿಕ ಪರಿಸ್ಥಿತಿ ಆತಂಕಕಾರಿಯಾಗಿದೆ. ಏಕೆಂದರೆ, ಯಾವುದೇ ಕ್ಷಿಪ್ರಗತಿಯ ಅರ್ಥವ್ಯವಸ್ಥೆಯಲ್ಲೂ, ನಮ್ಮಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವಂತೆ ಬ್ಯಾಂಕುಗಳ ಅನುತ್ಪಾದಕ ಆಸ್ತಿ ಮಿತಿಮೀರಿ ಬೆಳೆಯಲಾರದು. ಕ್ಷಿಪ್ರಗತಿಯ ಅರ್ಥವ್ಯವಸ್ಥೆಯಲ್ಲಿ ರೈತರು ನೇಣಿಗೆ ಕೊರಳೊಡ್ಡುವುದಿಲ್ಲ ಮತ್ತು ಯುವಕರು ನಿರುದ್ಯೋಗಿಗಳಾಗಿ ಅಲೆಯುವುದಿಲ್ಲ, ಸಣ್ಣ ಉದ್ದಿಮೆದಾರರು ದಿವಾಳಿಯಾಗುವುದಿಲ್ಲ, ಉಳಿತಾಯ ಮತ್ತು ಹೂಡಿಕೆಗಳು ಕಳೆದ ನಾಲ್ಕು ವರ್ಷದಲ್ಲಿ ಕಂಡಿರುವಂತಹ ಕುಸಿತವನ್ನು ಕಾಣುವುದಿಲ್ಲ. ಅದಕ್ಕಿಂತ ಹೀನಾಯವೆಂದರೆ, ಭ್ರಷ್ಟಾಚಾರ ಎಂಬುದು ಮತ್ತೆ ತಲೆ ಎತ್ತಿದೆ. ಒಂದಾದ ಮೇಲೆ ಒಂದರಂತೆ ಬ್ಯಾಂಕಿಂಗ್ ಹಗರಣಗಳು ಹೊರಬರುತ್ತಲೇ ಇವೆ. ಅಷ್ಟೇ ಅಲ್ಲ, ಆ ವಂಚಕರು ಯಶಸ್ವಿಯಾಗಿ ಇಲ್ಲಿಂದ ಕಾಳುಕೀಳುತ್ತಲೂ ಇದ್ದಾರೆ ಮತ್ತು ಅವರು ಪರಾರಿಯಾಗುವುದನ್ನು ನೋಡಿಯೂ ನೋಡದಂತೆ ಸರ್ಕಾರ ಕೈಕಟ್ಟಿ ಕೂತಿದೆ.

ಮಹಿಳೆಯರಂತೂ ದೇಶದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕ್ಕೆ ಈಡಾಗಿದ್ದಾರೆ. ಅತ್ಯಾಚಾರಗಳು ನಿತ್ಯದ ವಿಷಯವಾಗಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬದಲು ನಾವು ಅಪರಾಧಿಗಳ ಪರ ವಕಾಲತ್ತು ವಹಿಸುತ್ತಿದ್ದೇವೆ. ಬಹಳಷ್ಟು ಪ್ರಕರಣಗಳಲ್ಲಿ ನಮ್ಮವರೇ ಇಂತಹ ಅತ್ಯಂತ ಹೀನ ಅಪರಾಧಗಳನ್ನು ಎಸಗಿದ್ದಾರೆ. ಅಲ್ಪಸಂಖ್ಯಾತರು ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿಯುತ್ತಿದ್ದಾರೆ. ಅದಕ್ಕಿಂತ ದುರಂತವೆಂದರೆ; ನಮ್ಮ ಸಮಾಜದ ದುರ್ಬಲ ವರ್ಗಗಳಾದ ಪರಿಶಿಷ್ಟ ವರ್ಗ ಮತ್ತು ಜಾತಿಯ ಸಮುದಾಯಗಳ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯಗಳು ಹೆಚ್ಚುತ್ತಿವೆ. ಜೊತೆಗೆ, ಅವರಿಗೆ ವಿಶೇಷ ಅಭಯದ ಖಾತ್ರಿ ನೀಡಿದ ದೇಶದ ಸಂವಿಧಾನ ಕೂಡ ಅಪಾಯದಲ್ಲಿದೆ.

ಇನ್ನು, ನಮ್ಮ ವಿದೇಶಾಂಗ ನೀತಿಯ ಒಟ್ಟಾರೆ ಫಲ, ಕೇವಲ ನಮ್ಮ ಪ್ರಧಾನಿಗಳ ನಿರಂತರ ವಿದೇಶ ಪ್ರವಾಸ ಮತ್ತು ವಿದೇಶಿ ಗಣ್ಯರಿಗೆ ಇಷ್ಟವಿದ್ದರೂ ಇಲ್ಲದಿದ್ದರೂ ಅವರನ್ನು ಆಲಂಗಿಸುವುದಕ್ಕೆ ಮಾತ್ರ ಸೀಮಿತವಾದಂತಿದೆ. ನಮ್ಮ ವಿದೇಶಾಂಗ ವ್ಯವಹಾರ ನೀತಿ ಎಷ್ಟು ನಿಷ್ಪ್ರಯೋಜಕವಾಗಿದೆ ಎಂದರೆ, ತೀರಾ ನೆರೆಹೊರೆಯ ದೇಶಗಳೊಂದಿಗಿನ ನಮ್ಮ ನಂಟು ಕೂಡ ಹದಗೆಟ್ಟಿದೆ. ನಮ್ಮ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಚೀನಾ ನಮ್ಮ ನೆರೆಹೊರೆಯನ್ನು ಬಳಸಿಕೊಳ್ಳುತ್ತಿದ್ದರೂ ನಾವೇನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ನಮ್ಮ ವೀರ ಯೋಧರು ಪಾಕಿಸ್ತಾನದ ವಿರುದ್ಧ ಅತ್ಯಂತ ಚಾಣಾಕ್ಷತನದಿಂದ ನಡೆಸಿದ ದಿಟ್ಟ ಸರ್ಜಿಕಲ್ ದಾಳಿ ಕೂಡ ನೀರಿನಲ್ಲಿ ಹೋಮವಾಗಿದ್ದು, ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಯನ್ನು ಗಡಿಯಾಚೆಯಿಂದ ರವಾನಿಸುತ್ತಲೇ ಇದೆ. ನಾವು ಅದನ್ನು ನೋಡಿಯೂ ಮೂಕರಾಗಿ ಕೈಕಟ್ಟಿಕೊಂಡು ಕೂತಿದ್ದೇವೆ. ಜಮ್ಮು-ಕಾಶ್ಮೀರ ಹೊತ್ತಿ ಉರಿಯುತ್ತಲೇ ಇವೆ. ಎಡಪಂಥೀಯ ನಕ್ಸಲ್ ತೀವ್ರವಾದ ಕೂಡ ವ್ಯವಸ್ಥೆಗೆ ಮಣಿಯುತ್ತಿಲ್ಲ. ಒಟ್ಟಾರೆ, ದೇಶದ ಜನಸಾಮಾನ್ಯರು ಹಿಂದೆಂದಿಗಿಂತಲೂ ಸಂಕಷ್ಟಕ್ಕೆ ಈಡಾಗಿದ್ದಾರೆ.

ಇನ್ನೊಂದೆಡೆ, ಪಕ್ಷದ ಒಳಗಿನ ಆಂತರಿಕ ಪ್ರಜಾಪ್ರಭುತ್ವ ಎಂಬುದನ್ನೂ ಸಂಪೂರ್ಣ ಕುಸಿದುಬಿದ್ದಿದೆ. ಪಕ್ಷದ ಸಂಸದೀಯ ಮಂಡಳಿ ಸಭೆಯ ವೇಳೆ ಕೂಡ, ಹಿಂದಿನಂತೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಸಂಸದರಿಗೆ ಅವಕಾಶ ಸಿಗುತ್ತಿಲ್ಲ ಎಂದು ಮಿತ್ರರು ಹೇಳುತ್ತಾರೆ. ಪಕ್ಷದ ಇತರ ಸಭೆಗಳಲ್ಲೂ ಸದಾ ಒಮ್ಮುಖ ಸಂವಹನಕ್ಕೆ ಮಾತ್ರ ಅವಕಾಶ. ಅವರು ಮಾತನಾಡುತ್ತಾರೆ, ನೀವು ಕೇಳಬೇಕು ಎಂಬುದೇ ನಿಯಮ. ಪ್ರಧಾನಿಗಳಿಗೆ ಸಂಸದರೊಂದಿಗೆ ಮಾತನಾಡಲು ಸಮಯವಿಲ್ಲ. ಪಕ್ಷದ ಕೇಂದ್ರ ಕಚೇರಿಯಂತೂ ಕಾರ್ಪೊರೆಟ್ ಕಚೇರಿಯಂತಾಗಿದ್ದು, ಅಲ್ಲಿನ ಸಿಇಒ ಯಾರ ಭೇಟಿಗೂ ಲಭ್ಯವಿರುವುದಿಲ್ಲ.

ಕಳೆದ ನಾಲ್ಕು ವರ್ಷಗಳಲ್ಲಿ ಬಹಳ ದೊಡ್ಡ ಅಪಾಯ ಎದುರಾಗಿರುವುದು ನಮ್ಮ ಪ್ರಜಾಪ್ರಭುತ್ವಕ್ಕೇ. ಈ ಅವಧಿಯಲ್ಲಿ ಒಂದೋ ನಮ್ಮ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಸಂಸ್ಥೆಗಳು ತಮ್ಮ ಘನತೆ ಕಳೆದುಕೊಂಡಿವೆ, ಇಲ್ಲವೇ ಅವುಗಳನ್ನು ಮೂಲೆಗುಂಪು ಮಾಡಲಾಗಿದೆ. ಸಂಸತ್ತನ್ನು ಒಂದು ಪ್ರಹಸನದ ತಾಣ ಎಂದು ಹೀಗಳೆಯುವ ಮಟ್ಟಕ್ಕೆ ಇಳಿಸಲಾಗಿದೆ. ಇದೀಗ ತಾನೇ ಮುಗಿದಿರುವ ಬಜೆಟ್‌ ಅಧಿವೇಶನ ಇಡಿಯಾಗಿ ವ್ಯರ್ಥ್ಯವಾಗಿಹೋಗಿದ್ದರೂ, ಪ್ರತಿಭಟನೆನಿರತ ಪ್ರತಿಪಕ್ಷಗಳ ಮುಖಂಡರೊಂದಿಗೆ ಕೂತು ಮಾತನಾಡಿ ವ್ಯವಸ್ಥೆ ಸುಸೂತ್ರಗೊಳಿಸುವ ಕನಿಷ್ಠ ವ್ಯವಧಾನವನ್ನೂ ನಮ್ಮ ಪ್ರಧಾನಿ ಒಮ್ಮೆಯೂ ತೋರಲಿಲ್ಲ. ಆದರೆ, ಅಧಿವೇಶನ ಮುಗಿದ ಬಳಿಕ ಉಪವಾಸ ಮಾಡುವ ಮೂಲಕ ಉಳಿದವರ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದರು. ಅಧಿವೇಶನ ಕೂಡ ಇದೇ ಮೊದಲ ಬಾರಿಗೆ ಅತ್ಯಂತ ಕಡಿಮೆ ಅವಧಿಗೆ ಸೀಮಿತವಾಗಿತ್ತು. ಇಂದಿನ ಈ ಪರಿಸ್ಥಿತಿಯನ್ನು ಅಟಲ್‌ ಬಿಹಾರಿ ವಾಜಪೇಯಿ ಅವರ ದಿನಗಳಿಗೆ ಹೋಲಿಸಿದರೆ, ನಾವೆಲ್ಲ ಆಗ ಪ್ರತಿಪಕ್ಷಗಳ ವಿರೋಧ, ಆಕ್ಷೇಪಗಳಿಗೆ ಎಷ್ಟೊಂದು ಅವಕಾಶ ನೀಡುತ್ತಿದ್ದೆವು ಎಂಬುದು ನೆನಪಾಗದೆ ಇರದು. ಆಗ ಪ್ರತಿಪಕ್ಷಗಳಿಗೆ ಹೆಚ್ಚಿನ ಅವಕಾಶ ನೀಡಬೇಕು ಮತ್ತು ಆ ಮೂಲಕ ಸಂಸತ್ ಸುಗಮ ಕಲಾಪಕ್ಕೆ ಪೂರಕವಾಗಿರಬೇಕು ಎಂಬ ಸೂಚನೆಯೇ ನಮಗಿರುತ್ತಿತ್ತು. ಹಾಗಾಗಿಯೇ ಆಗ ಅವಿಶ್ವಾಸ ಗೊತ್ತುವಳಿ ಸೇರಿದಂತೆ ಪ್ರತಿಪಕ್ಷಗಳ ಯಾವುದೇ ಬೇಡಿಕೆಗಳಿಗೆ ಅವಕಾಶ ಇದ್ದೇ ಇತ್ತು.

ಇದನ್ನೂ ಓದಿ : ಪ್ರಧಾನಿ ಕಾರ್ಯವೈಖರಿ ಪ್ರಶ್ನಿಸಲು ‘ರಾಷ್ಟ್ರಮಂಚ್‌’ ಸ್ಥಾಪಿಸಿದ ಯಶವಂತ್ ಸಿನ್ಹಾ

ಇನ್ನು, ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದ್ದಂತೂ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಮೊದಲು. ನಮ್ಮ ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯೊಳಗಿನ ಕೊಳಕನ್ನು ಅದು ಮೊದಲ ಬಾರಿಗೆ ಹೊರಹಾಕಿತು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂಬುದನ್ನು ಆ ನ್ಯಾಯಾಧೀಶರು ಪದೇಪದೆ ಹೇಳುತ್ತಲೇ ಇದ್ದಾರೆ.

ಇವತ್ತು ಬಹುಶಃ, ಮಾಧ್ಯಮ, ಅದರಲ್ಲೂ ಸಾಮಾಜಿಕ ಜಾಲತಾಣಗಳ ಮೇಲೆ ಹಿಡಿತ ಸ್ಥಾಪಿಸುವ ಮೂಲಕ ಚುನಾವಣೆಗಳನ್ನು ಗೆಲ್ಲುವುದೇ ನಮ್ಮ ಪಕ್ಷದ ಏಕೈಕ ಘನ ಉದ್ದೇಶ ಎಂಬಂತೆ ಕಾಣುತ್ತಿದೆ. ಹಾಗೆ ನೋಡಿದರೆ, ಪಕ್ಷ ಕೂಡ ಇಂದು ಅಪಾಯಕ್ಕೆ ಈಡಾಗಿದೆ. ನಿಮ್ಮಲ್ಲಿ ಎಷ್ಟು ಮಂದಿ ಮತ್ತೆ ಮುಂದಿನ ಲೋಕಸಭಾ ಚುಣಾವಣೆಗೆ ಸ್ಪರ್ಧಿಸಲು ಟಿಕೆಟ್ ಪಡೆಯುತ್ತೀರೋ ಗೊತ್ತಿಲ್ಲ. ಆದರೆ, ಹಿಂದಿನ ಅನುಭವದ ಮೇಲೆ ಹೇಳುವುದಾದರೆ, ನಿಮ್ಮಲ್ಲಿ ಕನಿಷ್ಠ ಅರ್ಧದಷ್ಟು ಮಂದಿ ಟಿಕೆಟ್‌ ಪಡೆಯಲಾರಿರಿ. ನೀವು ಟಿಕೆಟ್‌ ಪಡೆದರೂ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ತೀರಾ ಕಡಿಮೆ. ಏಕೆಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೇವಲ ಶೇ.೩೧ರಷ್ಟು ಮತ ಮಾತ್ರ ಪಡೆದಿತ್ತು. ಇನ್ನುಳಿದ ಶೇ.೬೯ರಷ್ಟು ಮತ ಪಕ್ಷದ ವಿರುದ್ಧ ಬಿದ್ದಿದ್ದವು. ಹಾಗಾಗಿ ಒಂದು ವೇಳೆ ಪ್ರತಿಪಕ್ಷಗಳು ಒಂದಾದರೆ, ನೀವು ಲೆಕ್ಕಕ್ಕೇ ಸಿಗಲಾರಿರಿ.

ಸದ್ಯದ ಪರಿಸ್ಥಿತಿಯಲ್ಲಿ ನೀವು ಮಾತನಾಡಲೇಬೇಕಿದೆ. ಅದು ನಿಮ್ಮ ಹಿತಕ್ಕಾಗಿ ಮಾತ್ರವಲ್ಲ, ದೇಶದ ಹಿತಕ್ಕಾಗಿ ಕೂಡ. ಈ ನಡುವೆ, ಪಕ್ಷದ ಕನಿಷ್ಠ ಐವರು ದಲಿತ ಸಂಸದರು, ಸರ್ಕಾರ ದಲಿತ ಸಮುದಾಯದ ವಿಷಯದಲ್ಲಿ ನೀಡಿದ್ದ ತನ್ನ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂಬ ಬಗ್ಗೆ ತಮ್ಮ ಅಸಮಾಧಾನವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ ಎಂಬುದು ಸಮಾಧಾನದ ಸಂಗತಿ. ಅದೇ ಮಾದರಿಯಲ್ಲಿ ನೀವುಗಳು ನಿಮ್ಮ ಅಹವಾಲು, ಅತೃಪ್ತಿಗಳನ್ನು ಕೂಡ ಯಾವ ಹಿಂಜರಿಕೆ ಇಲ್ಲದೆ ‘ದೊಡ್ಡವರ’ ಮುಂದೆ ಹೇಳಿಕೊಳ್ಳಿ ಎಂಬುದು ನನ್ನ ಸಲಹೆ. ಈಗಲೂ ನೀವು ಮೌನ ವಹಿಸಿದರೆ, ಈ ದೇಶಕ್ಕೆ ನೀವು ದ್ರೋಹ ಬಗೆದಂತೆಯೇ ಸರಿ. ದೇಶದ ಭವಿಷ್ಯದ ಜನಾಂಗ ನಿಮ್ಮನ್ನು ಕ್ಷಮಿಸಲಾರದು. ವ್ಯಕ್ತಿಯ ಹಿತಕ್ಕಿಂತ ಪಕ್ಷದ ಹಿತ ಹೇಗೆ ಮುಖ್ಯವೋ ಹಾಗೆಯೇ ಪಕ್ಷದ ಹಿತಕ್ಕಿಂತ ದೇಶದ ಹಿತ ದೊಡ್ಡದು. ಆ ಹಿನ್ನೆಲೆಯಲ್ಲಿ, ನಾನು ವಿಶೇಷವಾಗಿ ಆಡ್ವಾಣಿಜೀ ಮತ್ತು ಮುರಳಿ ಮನೋಹರ ಜೋಷಿ ಅವರಿಗೆ, ದೇಶದ ಹಿತಕ್ಕಾಗಿ ಒಂದು ದಿಟ್ಟ ನಿಲುವು ತೆಗೆದುಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ. ತಮ್ಮ ಅಪಾರ ತ್ಯಾಗ ಮತ್ತು ಶ್ರಮದ ಮೂಲಕ ಕಟ್ಟಿದ ಮೌಲ್ಯಗಳ ಉಳಿವಿಗಾಗಿ ಮತ್ತು ಮುಂದಿನ ತಲೆಮಾರಿಗೆ ಆ ಮೌಲ್ಯಗಳನ್ನು ದಾಟಿಸುವ ಸಲುವಾಗಿ ಸಕಾಲಿಕ ಸರಿ ಹೆಜ್ಜೆ ಇಡುವಂತೆಯೂ ಅವರಿಗೆ ಮನವಿ ಮಾಡುತ್ತಿದ್ದೇನೆ.

ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಯಶಸ್ಸುಗಳಿವೆ. ಆದರೆ, ದೊಡ್ಡ ವೈಫಲ್ಯಗಳು, ಪ್ರಮಾದಗಳು ಆ ಯಶಸ್ಸುಗಳನ್ನು ಸಂಪೂರ್ಣ ಮುಚ್ಚಿಹಾಕಿವೆ. ಈ ಪತ್ರದಲ್ಲಿ ನಾವು ಎತ್ತಿರುವ ಗಂಭೀರ ಆತಂಕಗಳ ಬಗ್ಗೆ ನೀವು ಗಮನಹರಿಸುತ್ತೀರಿ ಎಂದು ನಂಬಿದ್ದೇನೆ. ದಯವಿಟ್ಟು ಧೈರ್ಯ ತಂದುಕೊಳ್ಳಿ, ಮಾತನಾಡಿ; ಪ್ರಜಾಪ್ರಭುತ್ವ ಮತ್ತು ದೇಶವನ್ನು ಉಳಿಸಿ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More