ಲೈವ್ ವಿತ್ ಸಂಧ್ಯಾ | ಮಹಾಲಕ್ಷ್ಮೀ ಲೇಜೌಟ್ ಜನರ ಸಮಸ್ಯೆಗಳಿಗೆ ಪರಿಹಾರವಿಲ್ಲ

ಮಧ್ಯಮ ವರ್ಗದವರೇ ಹೆಚ್ಚಿರುವ ಮಹಾಲಕ್ಷ್ಮೀ ಲೇಜೌಟ್ ನಲ್ಲಿ ಚುನಾವಣಾ ಕಾವು ಜೋರಾಗಿದೆ. ಮೇಲ್ನೋಟಕ್ಕೆ ಮಹಾಲಕ್ಷ್ಮೀ ಲೇಜೌಟ್ ನಲ್ಲಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಕಂಡುಬಂದರೂ, ಮತದಾರರು ಮಾತ್ರ ತಮ್ಮ ಗುಟ್ಟು ಬಿಟ್ಟುಕೊಡುತ್ತಿಲ್ಲ

ಮಧ್ಯಮ ವರ್ಗದವರೇ ಹೆಚ್ಚಿರುವ ಮಹಾಲಕ್ಷ್ಮೀ ಲೇಜೌಟ್ ನಲ್ಲಿ ಚುನಾವಣಾ ಕಾವು ಜೋರಾಗಿದೆ. ಸದ್ಯ ಜೆಡಿಎಸ್ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆಯಲು ಬಿಜೆಪಿ ಹಾಗೂ ಕಾಂಗ್ರೆಸ್ ಪ್ರಯತ್ನದಲ್ಲಿವೆ . ಕಾಂಗ್ರೆಸ್ ಅಭ್ಯರ್ಥಿ ಎಚ್ ಎಸ್ ಮಂಜುನಾಥ್ ಹಾಗೂ ಬಿಜೆಪಿ ಅಭ್ಯರ್ಥಿ ನೆ ಲ ನರೇಂದ್ರಬಾಬು ಪರ ಪ್ರಚಾರ ಮಾಡಲು, ಘಟಾನುಘಟಿ ನಾಯಕರೆೇ ಕಣಕ್ಕಳಿದಿದ್ದು, ಭರ್ಜರಿ ರೋಡ್ ಶೋಗಳ ಮೂಲಕ ಮತದಾರರ ಗಮನ ಸೆಳೆಯಲು ಯತ್ನಿಸುತ್ತಿದ್ದಾರೆ. ಹಾಲಿ ಶಾಸಕ, ಕೆ ಗೋಪಾಲಯ್ಯ, ಪತ್ನಿ ಸಮೇತರಾಗಿ ಮನೆ ಮನೆ ಪ್ರಚಾರದಲ್ಲಿ ತೊಡಗಿದ್ದು, ಈ ಬಾರಿಯೂ ಗೆಲುವು ತನ್ನದೇ ಎನ್ನುತ್ತಿದ್ದಾರೆ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಪಕ್ಷದಿಂದ ಅಮಾನತ್ತುಗೊಂಡು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಜೆಡಿಎಸ್ ಶಾಸಕ ಗೋಪಾಲಯ್ಯ, ಸೀಮಂತ ಕಾರ್ಯಕ್ರಮ, ಪ್ರವಾಸ ಭಾಗ್ಯಗಳನ್ನು ಕಲ್ಪಿಸುವ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಹೀಗಾಗಿ ಮತ್ತೊಮ್ಮೆ ಗೋಪಾಲಯ್ಯ ಅವರಿಗೆ ಅವಕಾಶ ಕೊಟ್ಟರೆ, ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆಯಾಗಲಿದೆ ಎಂಬುದು ಕೆಲವರ ಅಭಿಪ್ರಾಯ

ಮೇಲ್ನೋಟಕ್ಕೆ ಮಹಾಲಕ್ಷ್ಮೀ ಲೇಜೌಟ್ ನಲ್ಲಿ, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಕಂಡುಬಂದರೂ, ಮತದಾರರು ಮಾತ್ರ ತಮ್ಮ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮಹಾಲಕ್ಷ್ಮೀ ಲೇಔಟ್, ಶಾರದಾ ಕಾಲನಿ, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರದ ಕೆಲ ಭಾಗ, ಕಾಮಾಕ್ಷಿಪಾಳ್ಯ, ಸುಮನಹಳ್ಳಿ ಬ್ರಿಡ್ಜ್, ಡಾ. ರಾಜ್ ಸಮಾಧಿ, ನಂದಿನ ಲೇಔಟ್, ಕುರುಬರ ಹಳ್ಳಿ ಸೇರಿದಂತೆ ಕೆಲವು ಭಾಗಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯಗಳು ಆಗದೇ ಇದ್ದರು, ರಸ್ತೆ, ನೀರಿನ ವ್ಯವಸ್ಥೆ ತಕ್ಕ ಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಈ ಭಾಗದ ಜನರಿಗೆ ಇಲ್ಲಿ ಕಸ ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಈ ಬಗ್ಗೆ ಈ ಭಾಗದ ಜನರು ಕೂಡ ಬೇಸರಗೊಂಡಿದ್ದಾರೆ. 'ಫೋಟೋ ತೆಗೆದು ಕಳುಹಿಸಿದರೂ ಪ್ರಯೋಜನವಿಲ್ಲ, ದೂರು ನೀಡಿದರೂ ಈ ಬಗ್ಗೆ ಪ್ರತಿನಿಧಿಗಳು ಗಮನ ಹರಿಸುತ್ತಿಲ್ಲ. ಮನೆಬಾಗಿಲಲ್ಲಿ ರಾಶಿ ರಾಶಿ ಕಸ ಬಿದ್ದಿರುತ್ತದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೂ ದೂರು ನೀಡಿದ್ದಾಯಿತು. ಶಾಸಕರ ಬಳಿಯೂ, ಮನವಿ ಮಾಡಿದ್ದಾಯಿತು. ಆದರೆ ಪ್ರಯೋಜನ ಮಾತ್ರ ಶೂನ್ಯ' ಎನ್ನುತ್ತಾರೆ ನಾಗರೀಕರು.

ಒಕ್ಕಲಿಗ ಪ್ರಾಬಲ್ಯವಿರುವ ಮಹಾಲಕ್ಷ್ಮೀ ಲೇಜೌಟ್ ಅನ್ನು ತಮ್ಮ ವಶಕ್ಕೆ ಪಡೆಯಲು ಕಸರತ್ತಿನಲ್ಲಿ ತೊಡಗಿರುವ, ನೆ ಲ ನರೇಂದ್ರಬಾಬು ಬೆಂಬಲಕ್ಕೆ ಬಿಜೆಪಿಯ ಘಟಾನುಘಟಿ ನಾಯಕರು ನಿಂತಿದ್ದಾರೆ. ನೆ ಲ ನರೇಂದ್ರಬಾಬು ಜೊತೆ ರೋಡ್ ಶೋ ನಡೆಸಿದ ಕೇಂದ್ರ ಸಚಿವ ಅನಂತ್ ಕುಮಾರ್, ' ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಬಿಜೆಪಿಯನ್ನು ಬೆಂಬಲಿಸಿ' ಎಂದು ಜನತೆಯನ್ನು ಕೋರಿದ್ದಾರೆ.

ಇನ್ನೂ ಪತ್ನಿಸಮೇತರಾಗಿ ಮನೆಮನೆ ಪ್ರಚಾರ ನಡೆಸುತ್ತಿರುವ ಜೆಡಿಎಸ್ ಅಭ್ಯರ್ಥಿ ಗೋಪಾಲಯ್ಯ, 'ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ವರ್ಷಗಳಿಂದ ಉತ್ತಮ ಕೆಲಸ ಮಾಡಿದ್ದು ಈ ಭಾಗದ ಜನ ನನ್ನನ್ನು ಬೆಂಬಲಿಸಲಿದ್ದಾರೆ ಎಂದರು'.

7 ಬಿಬಿಎಂಪಿ ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರ ಮಹಾಲಕ್ಷ್ಮೀ ಲೇಔಟ್. 4 ವಾರ್ಡ್‌ಗಳಲ್ಲಿ ಜೆಡಿಎಸ್ ಸದಸ್ಯರಿದ್ದಾರೆ. ಇದು ಜೆಡಿಎಸ್ ಗೆಲುವಿಗೆ ಸಹಕಾರಿಯಾಗಲಿದೆ ಎಂಬುದು ಜೆಡಿಎಸ್ ನಾಯಕರ ಲೆಕ್ಕಾಚಾರ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More