ಲೈವ್ ವಿತ್ ಸಂಧ್ಯಾ | ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಸುರೇಶ್ ಕುಮಾರ್

ಬಿಜೆಪಿ ವಶದಲ್ಲಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡರೆ, ಹಾಲಿ ಶಾಸಕ ಸುರೇಶ್ ಕುಮಾರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ಕಾಂಗ್ರೆಸ್ ಸರ್ಕಾರದ ಸಮರ ಸಾರಿದ್ದಾರೆ

ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ. ಸದ್ಯ ಬಿಜೆಪಿ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಬೇಕು ಎಂದು ಪಣತೊಟ್ಟಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡರೆ, ಹಾಲಿ ಶಾಸಕ ಸುರೇಶ್ ಕುಮಾರ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ರಾಜಾಜಿನಗರ ಕ್ಷೇತ್ರವನ್ನು ಶತಾಯಗತಾಯ ನಮ್ಮ ವಶಕ್ಕೆ ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಮೇಯರ್ ಪದ್ಮಾವತಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದು, ಇವರಿಗೆ ಸ್ಥಳೀಯ ಯುವಕರು ಸಾಥ್ ನೀಡಿದ್ದಾರೆ. ಜೆಡಿಎಸ್‌ನಿಂದ ಜೇಡರಹಳ್ಳಿ ಕೃಷ್ಣಪ್ಪ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಮೆಜೆಸ್ಟಿಕ್‌ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಈ ಭಾಗದಲ್ಲಿ ಮೆಟ್ರೋ ಸಂಚಾರ ಲಭ್ಯವಿದ್ದು, ಸಂಚಾರ ದಟ್ಟಣೆ ಸಮಸ್ಯೆ ಕೊಂಚ ನೀಗಿದೆ ಎನ್ನಬಹುದು. ದಯಾನಂದ ಸಾಗರ, ಪ್ರಕಾಶ್ ನಗರ, ರಾಜಾಜಿನಗರ, ಬಸವೇಶ್ವರ ನಗರ, ಕಾಮಾಕ್ಷಿಪಾಳ್ಯ, ಶಿವನಗರ, ರಾಮಮಂದಿರ ವಾರ್ಡ್‌ಗಳನ್ನು ಒಳಗೊಂಡಿರುವ ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಹತ್ತರ ಅಭಿವೃದ್ಧಿ ಕಾರ್ಯಗಳು ಆಗದಿದ್ದರೂ, ಹೇಳಿಕೊಳ್ಳುವಂತಹ ಸಮಸ್ಯೆಗಳೂ ಇಲ್ಲ.

“ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಡಯಾಗ್ನಿಸ್ಟಿಕ್ ಸೆಂಟರ್, ಡಯಾಲಿಸಿಸ್ ಸೆಂಟರ್, ಡಯಾಬಿಟಿಸ್ ಸೆಂಟರ್ ಆರಂಭಿಸಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ರೋಗಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಸ್ಲಮ್ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಿಬಿಎಸ್‌ಸಿ ಶಾಲೆ ಆರಂಭಿಸಲಾಗಿದೆ. ಬಡಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಿಶೇಷ ತರಬೇತಿ ನೀಡುವ 'ವಿಕಸನ' ಸಂಸ್ಥೆಯನ್ನು ಆರಂಭಿಸಿದ್ದು, ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಅಷ್ಟೇ ಅಲ್ಲದೆ, ಓಕಳಿಪುರಂನಲ್ಲಿ ಸಿಗ್ನಲ್ ಫ್ರೀ ಕಾರಿಡಾರ್ ಮಾಡಿರುವುದು ಅತ್ಯಂತ ಖುಷಿ ಕೊಟ್ಟಿರುವ ಯೋಜನೆಯಾಗಿದೆ,” ಎನ್ನುತ್ತಾರೆ ಹಾಲಿ ಶಾಸಕ ಸುರೇಶ್ ಕುಮಾರ್.

ಆದರೆ, “ಸುರೇಶ್ ಕುಮಾರ್ ಉತ್ತಮ ವ್ಯಕ್ತಿಯಾಗಿದ್ದರೂ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳ ಕಡೆಗೆ ಹೆಚ್ಚು ಗಮನಹರಿಸಿಲ್ಲ,” ಎಂಬುದು ಸ್ಥಳೀಯರ ಆರೋಪ. ಅಷ್ಟೇ ಅಲ್ಲದೆ, “ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಚುನಾವಣೆ ಸಂದರ್ಭದಲ್ಲಷ್ಟೇ ಅವರಿಗೆ ರಾಜಾಜಿನಗರದ ಜನತೆ ನೆನಪಾಗುತ್ತಾರೆ,” ಎಂಬುದು ಮತ್ತೆ ಕೆಲವರ ಆರೋಪ.

ಇದನ್ನೂ ಓದಿ : ಲೈವ್ ವಿತ್ ಸಂಧ್ಯಾ | ಹ್ಯಾಟ್ರಿಕ್ ವಿಜಯ ಸಾಧಿಸುವರೇ ಕೃಷ್ಣ ಬೈರೇ ಗೌಡ?

ಸ್ಪರ್ಧೆಯ ಬಗ್ಗೆ ಜೇಡರಹಳ್ಳಿ ಕೃಷ್ಣಪ್ಪ ಪ್ರತಿಕ್ರಿಯಿಸುತ್ತ, “ರಾಜಾಜಿನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಬಾಕಿ ಉಳಿದಿದ್ದು, ಹಾಲಿ ಶಾಸಕರು ಕಳೆದ 10 ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಹೀಗಾಗಿ ಈ ಬಾರಿ ರಾಜಾಜಿನಗರ ಜನತೆ ತಮ್ಮನ್ನು ಆಶೀರ್ವದಿಸಬೇಕು. ರಾಜಾಜಿನಗರವನ್ನು ಮಾದರಿ ಕ್ಷೇತ್ರವನ್ನಾಗಿ ರೂಪಿಸುವುದೇ ನನ್ನ ಗುರಿ,” ಎನ್ನುತ್ತಾರೆ.

ಒಟ್ಟಾರೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿರುವ ಈ ಕ್ಷೇತ್ರದಲ್ಲಿ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕಾದುನೋಡಬೇಕಿದೆ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More