ಕಾಂಗ್ರೆಸ್ಸಷ್ಟೇ ಎದುರಾಳಿ ಎಂದುಕೊಂಡಿದ್ದ ಗೌಡರು ಈಗ ಬಿಜೆಪಿಗೂ ಮದ್ದು ಅರೆಯುವರೇ?

ಮೋದಿ ಹೂಡಿರುವ ಹೊಸ ತಂತ್ರ ದೇವೇಗೌಡರ ನಿದ್ದೆಗೆಡಿಸಿದೆ. ಇಷ್ಟು ದಿನ ಬಿಜೆಪಿಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದಿದ್ದ, ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಶಕ್ತಿ ಕಡಿಮೆ ಮಾಡುವುದರಲ್ಲಷ್ಟೆ ನಿರತರಾಗಿದ್ದ ದೇವೇಗೌಡರು ಈಗ ಬಿಜೆಪಿ ತಂತ್ರಗಳಿಗೂ ಪ್ರತಿತಂತ್ರ ರೂಪಿಸಬೇಕಾಗಿದೆ

ರಾಜ್ಯ ನಾಯಕರು ಬಿಟ್ಟ ಎಲ್ಲ ಬಾಣಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಡಿಪುಡಿ ಮಾಡಿಬಿಟ್ಟಿದ್ದರಿಂದ ಬಿಜೆಪಿ‌ ಪಾಳೆಯಕ್ಕೆ ಮೋದಿ ಎನ್ನುವ ಬ್ರಹ್ಮಾಸ್ತ್ರ ಬಳಸದೆ ವಿಧಿಯೇ ಇಲ್ಲ ಎಂಬಂತಾಗಿತ್ತು. ಮೋದಿ ಎಂಬ ಬ್ರಹ್ಮಾಸ್ತ್ರ ಕಾಂಗ್ರೆಸ್ ಪಕ್ಷವನ್ನು ಸುಟ್ಟು ಭಸ್ಮ ಮಾಡಿಬಿಡುತ್ತದೆ ಎನ್ನುವ ಅಪಾರ ನಿರೀಕ್ಷೆಗಳಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು ಮಾಡಿದ್ದು ಮಾತ್ರ ಜೆಡಿಎಸ್‌ಗೆ ಈಗಾಗಲೇ ಆಗಿದ್ದ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು.

ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿಯ ಮುಖಾಂತರ ತಮ್ಮ ಪ್ರಚಾರ ಆರಂಭಿಸಿದ ಮೋದಿ, ಅಲ್ಲಿ ಜೆಡಿಎಸ್ ಬಗ್ಗೆ ಸಕಾರಾತ್ಮಕವಾಗಿಯಾಗಲೀ, ನಕಾರಾತ್ಮಕವಾಗಿಯಾಗಲೀ ಒಂದೇ ಒಂದು ಪದ ಬಳಸಿರಲಿಲ್ಲ. ರಾಜ್ಯ ಬಿಜೆಪಿ ನಾಯಕರಿಗೆ ಅದು ಒಂದರ್ಥದಲ್ಲಿ ನಿರೀಕ್ಷಿತವಾಗಿಯೇ ಇತ್ತು. ಸಂತೆಮರಹಳ್ಳಿಯಿಂದ ಉಡುಪಿಗೆ ತೆರಳುವಷ್ಟರಲ್ಲಿ ತಂತ್ರಗಳು ಬದಲಾಗಿರಬಹುದು. ಜೆಡಿಎಸ್ ವರಿಷ್ಠ, ಕರ್ನಾಟಕದ ಚುನಾವಣೆಗಳ ಚಾಣಾಕ್ಷ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಅವರೇ ನಾಚುವಂತೆ ಹೊಗಳಿ ಅಟ್ಟಕ್ಕೇರಿಸಿದರು. ದೇವೇಗೌಡರೆಡೆಗೆ ತಮಗಿರುವ ಸೌಜನ್ಯ, ಗೌರವ, ಪ್ರೀತಿ, ಔದಾರ್ಯಗಳೆಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟರು. ಮೋದಿ ಮೊದಲ ದಿನವೇ ದೇವೇಗೌಡರನ್ನು ಮನದುಂಬಿ ಹೊಗಳಿದ್ದರ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹೊರತಾಗಿ ಉಳಿದೆಲ್ಲರಿಗೂ ಅಪ್ಯಾಯಮಾನವಾಗಿತ್ತು. ಬಿಜೆಪಿ ಏಕಾಂಗಿಯಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವ ಸದ್ಯದ ಪರಿಸ್ಥಿತಿಯಲ್ಲಿ ಮೋದಿಯ ಮಾತುಗಳು 'ಮಾಸ್ಟರ್ ಸ್ಟ್ರೋಕ್' ಎಂಬಂತೆ ಗೋಚರಿಸಿದವು. ಮೋದಿ ಮತ್ತು ಬಿಜೆಪಿ ನಾಯಕರು ಜೆಡಿಎಸ್ ಬೆಂಬಲಕ್ಕೆ ಹಂಬಲಿಸಿಯೇ ಈ ರೀತಿ ಹೇಳಿದ್ದಾದರೂ, ಬೆಂಬಲ ನೀಡಬೇಕಾದ ಜೆಡಿಎಸ್‌ಗೆ ಮಾತ್ರ ಇದು ನುಂಗಲಾರದ ತುತ್ತಾಗಿ ಪರಿಣಮಿಸಿತು.

ಮೋದಿ ಮಾತುಗಳನ್ನು ಅನುಮೋದಿಸಿದರೆ ಈಗಾಗಲೇ ಚಾಲ್ತಿಯಲ್ಲಿರುವ, 'ಅಮಿತ್ ಶಾ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವೆ ಒಳ ಒಪ್ಪಂದವಾಗಿದೆ, ಇಬ್ಬರೂ ಜೊತೆಯಲ್ಲಿ ವಿಮಾನ ಪ್ರಯಾಣ ಮಾಡಿ ಅಲ್ಲೇ ಮಾತುಕತೆ ನಡೆಸಿದ್ದಾರೆ' ಎಂಬ ವದಂತಿಯನ್ನು ಅಧಿಕೃತಗೊಳಿಸಿದಂತೆಯೇ ಆಗುತ್ತದೆ. ಜೊತೆಗೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದ, "ಜೆಡಿಎಸ್ ಎಂದರೆ ಬಿಜೆಪಿ ಪಕ್ಷದ ಬಿ ಟೀಮ್,” ಎಂಬ ಮಾತನ್ನು ಋಜುವಾತು ಮಾಡಿದಂತಾಗುತ್ತದೆ. ಬದಲಾಗಿ, ಅಷ್ಟೊಂದು ಪ್ರೀತಿ, ಔದಾರ್ಯತೆಯಿಂದ ಆಡಿದ ಮಾತುಗಳನ್ನು ಖಂಡಿಸಿದರೆ ಮೋದಿ ಜೊತೆಗಿನ ಗೆಳೆತನಕ್ಕೆ ಧಕ್ಕೆ ಆಗಬಹುದು ಅಥವಾ ಮೋದಿ ಟೀಕಿಸುವ ಮೂಲಕ ಬಿಜೆಪಿಯ ಬಾಗಿಲು ಬಂದ್ ಮಾಡಿಕೊಂಡುಬಿಟ್ಟರೆ ಮತ್ತೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಕದವನ್ನೇ ತಟ್ಟಬೇಕಾಗಬಹುದು ಎಂಬ ಆತಂಕ ಜೆಡಿಎಸ್‌ಗೆ ಶುರುವಾಯಿತು.

ಇಷ್ಟೆಲ್ಲ ಆದ ಮರುದಿನವೇ ಬೆಂಗಳೂರು ಪ್ರೆಸ್ ಕ್ಲಬ್ ಸಂವಾದದಲ್ಲಿ ಪಾಲ್ಗೊಂಡ ದೇವೇಗೌಡರು, ಮೋದಿ ಆಡಿದ್ದ ಮಾತುಗಳಿಗೆಲ್ಲ ಸ್ಪಷ್ಟೀಕರಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅಷ್ಟರಮಟ್ಟಿಗೆ ಮೋದಿ, ದೇವೇಗೌಡರನ್ನು ಅಡಕತ್ತರಿಗೆ ಸಿಲುಕಿಸಿದ್ದರು. ಇಂಥ ನೂರಾರು ಕ್ಲಿಷ್ಟಕರ ಪರಿಸ್ಥಿತಿಗೆ ಮುಖಾಮುಖಿ ಆಗಿರುವ ಗೌಡರು, ಇದೇ ಪರಿಸ್ಥಿತಿಯನ್ನು ತಮ್ಮ ಪರವಾಗಿ ಮಾಡಿಕೊಳ್ಳಲು ಮುಂದಾದರು. 'ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ' ಎಂದು ಬಿಂಬಿಸಿಕೊಳ್ಳುವಂತೆ ಮೋದಿಯ ಮೆಚ್ಚುಗೆಯ ಮಾತುಗಳನ್ನು ಮತ್ತೊಂದು ಮಗ್ಗುಲಿಗೆ ಹೊರಳಿಸಿ ಲಾಭ ಮಾಡಿಕೊಳ್ಳಲು ಯತ್ನಿಸಿದರು. "ಪ್ರಧಾನಿ ಸ್ಥಾನದಲ್ಲಿರುವ ಮೋದಿಯಂಥ ಮೋದಿ ನನಗೆ ಮರ್ಯಾದೆ ಕೊಡುತ್ತಾರೆ. ಆದರೆ, ಸಿದ್ದರಾಮಯ್ಯ ನನ್ನನ್ನು ಅಪಮಾನಗೊಳಿಸುತ್ತಾರೆ. ವಿಧಾನಸೌಧದಿಂದ ನನ್ನ ಫೋಟೋ ತೆಗೆದುಹಾಕಿಸಿದರು,” ಎಂಬ ಭಾವನಾತ್ಮಕ ಬಾಣ ಬಿಟ್ಟರು. ಡ್ಯಾಮೇಜ್ ಕಂಟ್ರೋಲ್ ಮಾಡಲು ಶಕ್ತಿಮೀರಿ ಪ್ರಯತ್ನಿಸಿದರು.

ದೇವೇಗೌಡರ ಕಸರತ್ತಿನ ಮರುದಿನ ಬೆಂಗಳೂರಿಗೆ ದಾಂಗುಡಿ ಇಟ್ಟ ಮೋದಿ, ಮತ್ತೊಂದು ಬಾಂಬ್ ಎಸೆದರು. ಅದು ಕೂಡ ಜೆಡಿಎಸ್ ಅನ್ನೇ ಗುರಿಯಾಗಿಸಿಕೊಂಡಿದ್ದಾಗಿತ್ತು. "ಜೆಡಿಎಸ್ ಪಕ್ಷಕ್ಕೆ ಹಾಕುವ ಒಂದೊಂದು ಮತವೂ ವ್ಯರ್ಥ.‌ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಜೆಡಿಎಸ್ ಅಸಮರ್ಥ. ಬುದ್ದಿವಂತ ಆದವರ್ಯಾರೂ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದಿಲ್ಲ,” ಎಂದು ನೇರವಾಗಿ ವಾಗ್ದಾಳಿ ಮಾಡಿದರು. ಈ ಎರಡು ವರಸೆಗಳ ಮುಖಾಂತರ ಮೋದಿ ಬೇರೆ ಸಂದೇಶಗಳನ್ನು ರವಾನಿಸುವ ಪ್ರಯತ್ನ ಮಾಡಿದ್ದಾರೆ. ಲಿಂಗಾಯತ ಮತಗಳು ಈ ಬಾರಿ ಚದುರಿಹೋಗುವ ಸಾಧ್ಯತೆ ಇರುವುದರಿಂದ ಇನ್ನೊಂದು ದೊಡ್ಡ ಸಮುದಾಯವಾದ ಒಕ್ಕಲಿಗರನ್ನು ಓಲೈಸಲು ಬಿಜೆಪಿ ಮೊದಲಿಂದಲೂ ಬಹಳ ಪ್ರಯತ್ನಪಟ್ಟಿತ್ತು. ಅಮಿತ್ ಶಾ ಕರ್ನಾಟಕದಲ್ಲಿ ಮತಬೇಟೆ ಆರಂಭಿಸಿದ್ದೇ ಆದಿಚುಂಚನಗಿರಿ ಮಠದಿಂದ. ಇದಾದ ಬಳಿಕ ನಾಥ ಪಂಥದ ಹಿನ್ನೆಲೆಯುಳ್ಳ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಖಾಂತರವೂ ಒಕ್ಕಲಿಗರನ್ನು ಒಲಿಸಿಕೊಳ್ಳಲು ಪ್ರಯತ್ನಿಸಲಾಗಿತ್ತು. ಆ ಪ್ರಯತ್ನಗಳು ಫಲಿಸಿ ಫಸಲು ತಂದುಕೊಡುವ ಲಕ್ಚಣಗಳು ಗೋಚರಿಸುತ್ತಿಲ್ಲವಾದ್ದರಿಂದ ದೇವೇಗೌಡರ ಮೂಲಕವೇ ಒಕ್ಕಲಿಗರ ಮತಬುಟ್ಟಿಗೆ ಕೈ ಹಾಕುವ ಹೊಸ ಅಸ್ತ್ರವನ್ನು ಮೋದಿ ಪ್ರಯೋಗಿಸಿದ್ದಾರೆ.

ಬಿಜೆಪಿ ಮತ್ತು ಮೋದಿ ಒಕ್ಕಲಿಗರ ಬಗ್ಗೆ ಈ ಹೊಸ ತಂತ್ರ ಹೂಡುವುದಕ್ಕೂ ಒಂದು ಹಿನ್ನೆಲೆ ಇದೆ. ಅದು ಸದ್ಯದ ಒಕ್ಕಲಿಗರ ಮತ್ತು ಜೆಡಿಎಸ್ ಪಕ್ಷದ ಪರಿಸ್ಥಿತಿ. ಎಸ್ ಎಂ ಕೃಷ್ಣ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಕಾಲಕ್ಕೆ ಒಕ್ಕಲಿಗರಿಗೆ ಎರಡು ಆಯ್ಕೆಗಳಿದ್ದವು. ಪರಿಸ್ಥಿತಿಗನುಗುಣವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬೆಂಬಲ ಸೂಚಿಸಲಾಗುತ್ತಿತ್ತು. ಆದರೀಗ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಯಾಗುವಂತಹ ಒಕ್ಕಲಿಗ ನಾಯಕನಿಲ್ಲ. ಯಡಿಯೂರಪ್ಪ ನೇತೃತ್ವದ ಬಿಜೆಪಿಯನ್ನು ಬೆಂಬಲಿಸುವಂತಿಲ್ಲ; ಜೆಡಿಎಸ್ ಅನಿವಾರ್ಯ ಎನ್ನುವಂತಾಗಿದೆ.

ಇನ್ನು, ಜೆಡಿಎಸ್ ಬಗ್ಗೆ ಹೇಳುವುದಾದರೆ, ಹಳೆ ಮೈಸೂರು ಭಾಗದಾಚೆಗೆ ಪಕ್ಷದ ಬೆಳವಣಿಗೆ ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಕೌಟುಂಬಿಕ ಕಲಹದಿಂದ ಪಕ್ಷ ಜರ್ಜರಿತಗೊಂಡಿದೆ. ಎಲ್ಲಕ್ಕಿಂತ ಮಿಗಿಲಾಗಿ, ಹೊಸ ತಲೆಮಾರಿನ ಕುಮಾರಸ್ವಾಮಿಗಿಂತ ಹಿರಿಯರಾದ ದೇವೇಗೌಡರೇ ಪರವಾಗಿಲ್ಲ ಎನ್ನುವಂತಾಗಿದೆ. ದೇವೇಗೌಡರ ಬಗ್ಗೆ ಗೌರವೂ ಜಾಸ್ತಿ ಇದೆ. ಇದೇ ವೇಳೆ, "ಮುಖ್ಯಮಂತ್ರಿ ಸಿದ್ದರಾಮಯ್ಯ ದೇವೇಗೌಡರಿಗೆ ಗೌರವ ತೋರುವುದಿಲ್ಲ. ಆ ಕಾರಣಕ್ಕೆ ಒಕ್ಕಲಿಗರಲ್ಲಿ ಕೆಲವರಿಗೆ ಸಿದ್ದರಾಮಯ್ಯ ಬಗ್ಗೆ ಸಿಟ್ಟಿದೆ. ಆದರೆ, ಆ ಸಿಟ್ಟನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳಲು ಕುಮಾರಸ್ವಾಮಿ ಅವರಿಂದ ಸಾಧ್ಯವಾಗುತ್ತಿಲ್ಲ,” ಎನ್ನುವ ಮಾತುಗಳಿವೆ. ಇದೇ ಹಿನ್ನೆಲೆಯಿಂದ ಮೋದಿ, ಒಂದು ಕಡೆ ದೇವೇಗೌಡರಿಗೆ ಗೌರವ ಕೊಟ್ಟಂತೆ ಮಾಡಿ ಜೊತೆಜೊತೆಗೆ ಜೆಡಿಎಸ್ ಮಿತಿಯನ್ನು ಘಂಟಾಘೋಷವಾಗಿ ಸಾರಿ ಹೇಳಿ, 'ಜೆಡಿಎಸ್‌ನಲ್ಲಿ ಇರಲಾರದೆ ಕಾಂಗ್ರೆಸ್ ಕಡೆ ಹೋಗಲಾಗದೆ' ಇರುವ ಮತಗಳನ್ನು ಸೆಳೆಯುವ ದಾಳ ಉರುಳಿಸಿದ್ದಾರೆ.

ಇದನ್ನೂ ಓದಿ : ಗೌಡರ ಬಗ್ಗೆ ಪ್ರೀತಿ ತೋರಿದ 50 ಗಂಟೆಯೊಳಗೆ ಜೆಡಿಎಸ್‌ಗೆ ಪೆಟ್ಟು ಕೊಟ್ಟ ಮೋದಿ!

ಮೋದಿ ಹೂಡಿರುವ ಈ ಹೊಸ ತಂತ್ರ ದೇವೇಗೌಡರ ನಿದ್ದೆಗೆಡಿಸಿದೆ. ಇಷ್ಟು ದಿನ ಬಿಜೆಪಿಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸದಿದ್ದ ಮತ್ತು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಶಕ್ತಿಯನ್ನು ಕಡಿಮೆ ಮಾಡುವುದಕ್ಕಷ್ಟೇ ನಿರತರಾಗಿದ್ದ ದೇವೇಗೌಡರು ಈಗ ಬಿಜೆಪಿ ಹಾಗೂ ಮೋದಿ ತಂತ್ರಗಳಿಗೂ ಪ್ರತಿತಂತ್ರ ರೂಪಿಸಬೇಕಾಗಿದೆ. ಅದೂ ಬಹಳ ಕಡಿಮೆ ಸಮಯದಲ್ಲಿ. ಬಿಜೆಪಿ ಜೊತೆ ಅಂತರ ಕಾಯ್ದುಕೊಳ್ಳುವ ಜೊತೆಜೊತೆಗೆ ಜಾತ್ಯತೀತ ನಿಲುವನ್ನು ಕಾಪಾಡಿಕೊಳ್ಳುವ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡಬೇಕಿದೆ. ದೇವೇಗೌಡರೀಗ ಮೋದಿ ಮಾತುಗಳಿಗೆ ತಕ್ಕ ಉತ್ತರ ನೀಡದಿದ್ದರೆ ಮತ್ತು ತಂತ್ರಗಳಿಗೆ ಪಕ್ವ ಪ್ರತಿತಂತ್ರ ರೂಪಿಸದಿದ್ದರೆ ಅವರ ಜೆಡಿಎಸ್ ಪಕ್ಷ ಅಧಿಕಾರದಿಂದ ಬಹಳ ದೂರ ಉಳಿಯುವುದು ಮಾತ್ರವಲ್ಲ, ಅವರ ಜಾತ್ಯತೀತ ನಿಲುವುಗಳ ಬಗೆಗಿನ ಅನುಮಾನಗಳು ಇನ್ನೂ ಹೆಚ್ಚಾಗುತ್ತವೆ. ಬಹುಶಃ ದೇವೇಗೌಡರು, ಮೋದಿ ತಮ್ಮನ್ನು ಇಂಥ ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದು ಅಂದಾಜು ಮಾಡಿರಲಿಲ್ಲವೇನೋ?

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More