ತುಮಕೂರು ಆಹಾರ ಸಂಸ್ಕರಣ ಘಟಕದ ನೈಜ ಉದ್ಯೋಗಿಗಳೆಷ್ಟು, ಮೋದಿ ಹೇಳಿದ್ದೆಷ್ಟು?

“ನಾನು ಬಿಜೆಪಿಗೆ ವೋಟಾಕಲ್ಲ. ಆದ್ರೂ ಬಂದಿಲ್ವೇ? ಹಂಗೇ ಎಷ್ಟೋ ಜನ ನೋಡಾಕ್ ಬಂದೌರೆ ಅಷ್ಟೆಯಾ,” ಎಂದು ಊರ್ಡಿಗೆರೆಯಿಂದ ಬಂದಿದ್ದ ಹಿರಿಯರೊಬ್ಬರು ಹೇಳುತ್ತಿದ್ದದ್ದು ತುಮಕೂರು ಬಿಜೆಪಿ ಸಮಾವೇಶದ ವಸ್ತುಸ್ಥಿತಿಗೆ ಹಿಡಿದ ಕನ್ನಡಿ. ಹಾಗಾಗಿ ಸಮಾವೇಶಕ್ಕೆ ಬಂದವರೆಲ್ಲ ಮತ ಹಾಕುತ್ತಾರೆಂಬುದು ನಿಜವಲ್ಲ

ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ಪ್ರಚಾರ ಭಾಷಣ ಮಾಡಿ ಸ್ಥಳೀಯ ವಿಷಯಗಳಿಗೆ ಪ್ರಾಧಾನ್ಯತೆ ನೀಡಿದರು. ಆಹಾರ ಸಂಸ್ಕರಣ ಘಟಕ, ಎಚ್‌ಎಎಲ್ ಸ್ಥಾಪನೆ ಮಾಡಿದ್ದರಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾದವು. ಆಹಾರ ಸಂಸ್ಕರಣ ಘಟಕವೊಂದರಲ್ಲೇ ಆರು ಸಾವಿರ ಉದ್ಯೋಗಗಳು ಸೃಷ್ಟಿಯಾಗಿವೆ ಎಂಬ ಮಾಹಿತಿಯನ್ನು ನೆರೆದಿದ್ದ ಸಾವಿರಾರು ಮಂದಿಗೆ ಹೇಳಿದರು. ಇದರ ಕುರಿತು ಸತ್ಯಾಸತ್ಯತೆ ತಿಳಿಯಲು ‘ದಿ ಸ್ಟೇಟ್’ ಕೆಲವು ಕಾರ್ಮಿಕ ಮುಖಂಡರನ್ನು ಮಾತನಾಡಿಸಿದಾಗ ಮಹತ್ವದ ಅಂಶಗಳು ಬೆಳಕಿಗೆ ಬಂದವು.

“ಪ್ರಧಾನಿ ನರೇಂದ್ರ ಮೋದಿ ೨೦೧೪ರಲ್ಲಿ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ತುಮಕೂರು ಹೊರವಲಯದ ವಸಂತನರಸಾಪುರದಲ್ಲಿ ಆಹಾರ ಸಂಸ್ಕರಣ ಘಟಕ ಉದ್ಘಾಟನೆ ಮಾಡಿದ್ದರು. ಆಹಾರ ಸಂಸ್ಕರಣಾ ಘಟಕದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಹೇಳಿ ಹೋಗಿದ್ದರು. ಇದಾದ ನಾಲ್ಕು ವರ್ಷಗಳ ಬಳಿಕ ಮೇ ೫ರ ಶನಿವಾರ ನಡೆದ ಸಭೆಯಲ್ಲಿ ಮೋದಿ, ಈ ಘಟಕದಿಂದ ಆರು ಸಾವಿರ ಉದ್ಯೋಗ ಸೃಷ್ಟಿಯಾಗಿವೆ ಎಂದು ಹೇಳಿರುವುದು ಈ ವರ್ಷದ ದೊಡ್ಡ ಜೋಕ್,” ಎಂದು ಕಾರ್ಮಿಕ ಮುಖಂಡ ಸೈಯದ್ ಮುಜೀಬ್ ಲೇವಡಿ ಮಾಡಿದ್ದಾರೆ.

“ಮೋದಿ ಆರಂಭದಲ್ಲೂ ಸುಳ್ಳು ಹೇಳಿದ್ದರು. ಈಗಲೂ ಸುಳ್ಳು ಹೇಳಿದ್ದಾರೆ. ವಸಂತನರಸಾಪುರದಲ್ಲಿರುವ ಆಹಾರ ಸಂಸ್ಕರಣ ಘಟಕದಲ್ಲಿ ಧಾನ್ಯಗಳು, ಬೇಳೆಕಾಳುಗಳು ಮತ್ತು ತರಕಾರಿಗಳು ಕೆಡದಂತೆ ಸಂರಕ್ಷಣೆ ಮಾಡಲಾಗುತ್ತಿದೆ. ಕಾಳುಗಳು, ತರಕಾರಿ, ಕಡಲೆಕಾಯಿ ಬೀಜ, ಮೆಣಸಿನ ಪುಡಿ, ಮೆಂತ್ಯೆಪುಡಿ, ಧನಿಯಾ ಮೊದಲಾದ ವಸ್ತುಗಳಿಗೆ ಕ್ರಿಮಿನಾಶಕ ಸಿಂಪಡಿಸಿ ಅವುಗಳು ಕೆಡದಂತೆ ಪ್ಯಾಕ್ ಮಾಡಿ ಇಡುವ ವ್ಯವಸ್ಥೆ ಇದೆ. ಇದರಲ್ಲಿ ಬಹುತೇಕರು ಉತ್ತರ ಭಾರತದವರು. ಕಸ ಹೊಡೆಯುವುದು ಮತ್ತಿತರ ಸಣ್ಣ ಕೆಲಸಗಳಿಗೆ ಸ್ಥಳೀಯರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ. ಘಟಕದಲ್ಲಿ ೧೨ರಿಂದ ೧೮ ಮಂದಿ ಮಾತ್ರ ಕಾಯಂ ನೌಕರರು ಇರುವುದು. ಇನ್ನುಳಿದ ಮೂರಂಕಿ ದಾಟದಷ್ಟಿರುವ ಕಾರ್ಮಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇಡೀ ಘಟಕದಲ್ಲಿ ೧೫೦-೧೬೦ ಕಾರ್ಮಿಕರು ಇದ್ದಾರೆ ಅಷ್ಟೆ,” ಎಂದು ಘಟಕದಲ್ಲಿನ ಕಾರ್ಯಚಟುವಟಿಕೆಗಳ ಕುರಿತು ಸಾದ್ಯಂತವಾಗಿ ವಿವರಿಸಿದರು ಕಾರ್ಮಿಕ ಮುಖಂಡ ಮುಜೀಬ್.

ತುಮಕೂರಿನಲ್ಲಿ ಆಯೋಜಿಸಿದ್ದ ಮೋದಿಯವರ ಪ್ರಚಾರ ಸಭೆಗೆ ೧೮ ವಿಧಾನಸಭಾ ಕ್ಷೇತ್ರಗಳ ಜನರನ್ನು ಕರೆತರಲಾಗಿತ್ತು. ಎಲ್ಲ ಕ್ಷೇತ್ರಗಳಿಗೂ ಹೋಗಿ ಪ್ರಚಾರ ನಡೆಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಬಿಜೆಪಿ ೧೮ ಕ್ಷೇತ್ರಗಳನ್ನು ಒಂದು ಕ್ಲಸ್ಟರ್ ಎಂದು ಪರಿಗಣಿಸಿ ಜನರನ್ನು ಸೇರಿಸುವ ಕೆಲಸ ಮಾಡಿದೆ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಪ್ರಧಾನಿ ಮೋದಿಯ ಪ್ರಚಾರ ಸಭೆಗೆ ತುಮಕೂರು ಜಿಲ್ಲೆಯ ಹತ್ತು ತಾಲೂಕುಗಳಿಂದಲೂ ಪಕ್ಷದ ಕಾರ್ಯಕರ್ತರು ಮತ್ತು ಸಾಮಾನ್ಯ ಜನರನ್ನು ಕರೆತರಲಾಗಿತ್ತು. ೫೦೦ ವಾಹನಗಳಲ್ಲಿ ಪಾವಗಡದಿಂದ ಕುಣಿಗಲ್‌ವರೆಗೆ ಮತ್ತು ತುಮಕೂರಿನಿಂದ ತಿಪಟೂರುವರೆಗೆ ಎಲ್ಲ ದಿಕ್ಕಿನಿಂದಲೂ ಹಿರಿಯರು, ಯುವಕರನ್ನು ಖಾಸಗಿ ಬಸ್‌ಗಳಲ್ಲಿ ಕರೆತಂದಿದ್ದರು.

“ನಾನು ಬಿಜೆಪಿಗೆ ವೋಟಾಕಲ್ಲ. ಆದ್ರೂ ಬಂದಿಲ್ವೇ? ಹಂಗೆ ಎಷ್ಟೋ ಜನ ನೋಡಾಕ್ ಬಂದೌರೆ ಅಷ್ಟೆಯಾ,” ಎಂದು ಊರ್ಡಿಗೆರೆಯಿಂದ ಬಂದಿದ್ದ ಹಿರಿಯರೊಬ್ಬರು ಹೇಳುತ್ತಿದ್ದು ಅಲ್ಲಿನ ವಸ್ತುಸ್ಥಿತಿಗೆ ಹಿಡಿದ ಕನ್ನಡಿಯಾಗಿತ್ತು. ಪ್ರಧಾನಿಯನ್ನು ನೋಡುವ ಜನರ ಕುತೂಹಲವನ್ನು ಮತಗಳನ್ನಾಗಿ ಪರಿಗಣಿಸುವ ಬಗ್ಗೆ ಅನುಮಾನ ಮೂಡಿಸಿದೆ. ಈ ಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಬಂದಿರುವ ಬಗ್ಗೆ ಬಿಜೆಪಿ ಸಂತೃಪ್ತಿ ವ್ಯಕ್ತಪಡಿಸಬಹುದು. ಆದರೆ, ಇವರಲ್ಲಿ ಬಹುತೇಕರು ಕುತೂಹಲದಿಂದ ಪ್ರಧಾನಿ ಮೋದಿಯವರನ್ನು ನೋಡಲಷ್ಟೇ ಬಂದಿದ್ದಾರೆ. ಹೀಗೆ ಬಂದವರಿಗೂ ದೂರದ ವೇದಿಕೆ ಮೇಲಿದ್ದ ಮೋದಿಯವರ ದರ್ಶನ ಸರಿಯಾಗಿ ಆಗಿಲ್ಲ ಎಂಬ ಅಸಮಾಧಾನವಿತ್ತು.

ಇದನ್ನೂ ಓದಿ : ಎತ್ತಿನಹೊಳೆ ಬಗ್ಗೆ ಮಾತಾಡಿದ ಮೋದಿ ಕಟೀಲು, ಕಾರ್ಣಿಕ್‌ ವಿರೋಧ ಮರೆತುಬಿಟ್ಟರೇ?

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಕೂಡ ಬಂದಿದ್ದರು. ಅವರನ್ನು ಮಾತನಾಡಿಸಿದರೆ ಬಿಜೆಪಿಗೆ ಮತ ನೀಡುವ ಬಗ್ಗೆ ಯಾವ ಭರವಸೆಗಳನ್ನು ನೀಡದೆ ಇದ್ದರೂ, ತಮ್ಮ ಒಲವನ್ನು ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಸಾಮಾನ್ಯವಾಗಿ ಯಾವುದೇ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರ್ಯಕರ್ತರು ತಮ್ಮ ಮತವನ್ನು ಅದೇ ಪಕ್ಷಕ್ಕೆ ನೀಡುವುದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಾರೆ. ಅಲ್ಲದೆ, ಪಕ್ಷದ ಸಾಧನೆಗಳ ಬಗ್ಗೆ ಮಾಧ್ಯಮದವರ ಬಳಿ ಮಾತನಾಡುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಬಹುತೇಕರು, “ಕಾರ್ಯಕ್ರಮವನ್ನು ನೋಡಲು ಬಂದಿದ್ದೇವೆ” ಎಂದಷ್ಟೇ ವಿವರವನ್ನು ಸಭೆಯಿಂದ ಹೊರಗೆ ಬರುತ್ತಾ ನೀಡಿದ್ದಾರೆ. ಬಿಜೆಪಿಗೆ ಮತ ಹಾಕಲಿದ್ದೇವೆ ಎಂದು ಹೇಳಿದವರ ಸಂಖ್ಯೆ ಬಹಳ ಕಡಿಮೆ. ಹೀಗಾಗಿ ಮೋದಿಯವರ ಕಾರ್ಯಕ್ರಮಕ್ಕೆ ಆಗಮಿಸುವವರ ಮತಗಳು ಬಿಜೆಪಿಗೆ ಬೀಳಲಿವೆ ಎನ್ನುವ ಭರವಸೆ ಸಿಗದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More