ಸುಳ್ಳು ಹೇಳಿದವರು ಬಾಗಲಕೋಟೆ ಪ್ರವೇಶಿಸಲು ಬಿಡುತ್ತೀರಾ? ಮೋದಿ ಪ್ರಶ್ನೆ

ಭಾನುವಾರ ಜಮಖಂಡಿಯಲ್ಲಿ ಪ್ರಧಾನಿ ಮೋದಿ ಚುನಾವಣಾ ಭಾಷಣ ಮಾಡಿದರು. ಬಾಗಲಕೋಟೆಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸುವುದಾಗಿ ಸಿಎಂ ಸುಳ್ಳು ಹೇಳಿರುವುದಾಗಿ ಟೀಕಿಸಿದ ಅವರು, ಸುಳ್ಳು ಹೇಳಿದ ಸಿಎಂಗೆ ಬುದ್ಧಿ ಕಲಿಸಲು ಜನತೆಗೆ ಕರೆನೀಡಿದರು. ಭಾಷಣದ ಮುಖ್ಯಾಂಶ ಇಲ್ಲಿದೆ

  • ಕಾಂಗ್ರೆಸಿಗರು ೬೦ ವರ್ಷ ಅಧಿಕಾರ ಅನುಭವಿಸಿ ಅಹಂಕಾರಿಗಳಾಗಿದ್ದಾರೆ. ೨೦೧೪ರ ಚುನಾವಣೆ ಸಂದರ್ಭ ತಾಯಿ, ಮಗ ಟಿವಿಯಲ್ಲಿ ಕನಿಷ್ಠ ಅಭಿನಂದನೆಯನ್ನೂ ಹೇಳಲಿಲ್ಲ. ಇಲ್ಲಿನ ಜನರಿಂದಲೂ ಅವರು ದೇಶಪ್ರೇಮ ಕಲಿಯುವರೆಂಬ ವಿಶ್ವಾಸವಿಲ್ಲ. ನಾವು ದೇಶಭಕ್ತಿಯ ಹೆಸರಲ್ಲಿ ಆಡಳಿತ ನಡೆಸುತ್ತಿದ್ದೇವೆ.
  • ಭಾರತದ ರಾಷ್ಟ್ರಪತಿ ಬಡ ತಾಯಿಯ ಮಗ, ದಲಿತರು. ದಲಿತರನ್ನು ಸದಾ ಕಡೆಗಣಿಸಿಕೊಂಡೇ ಬಂದಿರುವ ಕಾಂಗ್ರೆಸಿಗರಿಗೆ ಅವರ ಕುರಿತು ಮಾತನಾಡಲು ನೈತಿಕತೆ ಇದೆಯೇ?
  • ಕಾಂಗ್ರೆಸ್‌ಗೆ ರೈತರು, ದಲಿತರ ಬಗ್ಗೆ ಕಾಳಜಿ ಇದ್ದರೆ ಇಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ. ಇದು ಕಾಂಗ್ರೆಸ್ ಆಡಳಿತ ಮತ್ತು ರೈತರೆಡೆಗಿನ ಅವರ ನಿಲುವಿನ ಪರಿಣಾಮ.
  • ಚುನಾವಣೆಗಾಗಿ ಕಾಂಗ್ರೆಸ್ ಜಾತಿ, ಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುತ್ತಿದೆ. ಕರ್ನಾಟಕದ ಜನರೇ, ಎಚ್ಚರವಾಗಿರಿ. ಚುನಾವಣೆ ಬರುತ್ತದೆ, ಸರಕಾರ ಬರುತ್ತದೆ. ಆದರೆ, ಕರ್ನಾಟಕ ಅಜರಾಮರವಾಗಿರಬೇಕು. ನಾವು ಕರ್ನಾಟಕವನ್ನು ಒಡೆಯಲು ಬಿಡುವುದಿಲ್ಲ. ಕುವೆಂಪು ಹೇಳಿದ ಹಾಡನ್ನು ನೆನಪಿಸಿಕೊಳ್ಳಿ; 'ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ.’ ಇದನ್ನು ಮತ್ತೊಮ್ಮೆ ಯೋಚಿಸಿ.
  • ಬಸವಣ್ಣನವರನ್ನು ಕಾಂಗ್ರೆಸಿಗರು ‘ನುಡಿದಂತೆ ನಡೆ’ ಎಂಬ ವಚನಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಅವರಿಗೆ ಬಸವಣ್ಣನವರ ವಿಚಾರಗಳ ಕುರಿತು ಪ್ರಜ್ಞೆ ಇಲ್ಲ. ಕಾಂಗ್ರೆಸಿಗರಿಗೆ ಚುನಾವಣೆ ಬಂದಾಗ ಬಸವಣ್ಣ ನೆನಪಾದರು. ಆದರೆ, ವಾಜಪೇಯಿಯವರು ಸಂಸತ್ತಿನಲ್ಲಿ ಬಸವಣ್ಣನವರ ಮೂರ್ತಿ ಸ್ಥಾಪಿಸಿದರು. ೨೦೧೫ರಲ್ಲಿ ಲಂಡನ್‌ನ ಥೇಮ್ಸ್ ನದಿ ತೀರದಲ್ಲಿ ಬಸವಣ್ಣನ ಮೂರ್ತಿ ಅನಾವರಣಗೊಳಿಸುವ ಸೌಭಾಗ್ಯ ನನಗೆ ಸಿಕ್ಕಿತು.
  • ಬಾಗಲಕೋಟೆಯಲ್ಲಿ ಟೆಕ್ಸ್‌ಟೈಲ್‌ ಪಾರ್ಕ್‌ ನಿರ್ಮಿಸುತ್ತೇವೆ ಎಂದ ಮುಖ್ಯಮಂತ್ರಿಗಳು ಅದನ್ನು ನಿರ್ಮಿಸಿದರೇ? ಸುಳ್ಳು ಹೇಳುವವರು ಬಾಗಲಕೋಟೆಗೆ ಹೇಗೆ ಬರುತ್ತಾರೆ? ಅವರನ್ನು ಬಾಗಲಕೋಟೆ ಪ್ರವೇಶಿಸಲು ಬಿಡಬೇಡಿ.
  • ಇಳಕಲ್ ಸೀರೆ ಅತ್ಯಂತ ಜನಪ್ರಿಯ. ಇಂತಹ ಕೈಮಗ್ಗ ಉತ್ಪಾದನೆಗಳಿಗೆ ಪ್ರೋತ್ಸಾಹ ನೀಡಿ, ಉತ್ಪಾದನೆ ಹೆಚ್ಚಿಸಿ, ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಸರಕಾರ ಈಗಾಗಲೇ ಯೋಜನೆ ಕೈಗೆತ್ತಿಕೊಂಡಿದೆ. ನೇಕಾರರಿಗೆ ಸಾಲವನ್ನೂ ನೀಡಲಾಗುತ್ತದೆ.
  • ‘ಬೇಟಿ ಬಚಾವೋ ಬೇಟಿ ಪಡವೋ’ ಕುರಿತು ಕಾಂಗ್ರೆಸ್ ತಮಾಷೆ ಮಾಡುತ್ತಿದೆ. ನಮ್ಮ ಸರಕಾರ ಮಹಿಳೆಯರಿಗಾಗಿ ಶೌಚಾಲಯ ನಿರ್ಮಿಸಿದೆ. ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುವವರಿಗೆ ಮರಣದಂಡನೆ ವಿಧಿಸುವಂತಹ ಕಾನೂನು ರೂಪಿಸಿದೆ.
  • ೧೨ನೇ ತಾರೀಕಿನಂದು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಮತದಾನ ಮಾಡಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿ.
  • ಇಲ್ಲಿ ನೆರೆದಿರುವವರ ಸಂಖ್ಯೆ ಕಾಂಗ್ರೆಸ್‌ಗೆ ಉಳಿಗಾಲ ಇಲ್ಲ ಎಂಬುದನ್ನು ತೋರಿಸುತ್ತದೆ. ನಾನು ನಿಮಗೆ ಋಣಿಯಾಗಿರುತ್ತೇನೆ. ೧೫ನೇ ತಾರೀಕಿನಂದು ಯಡಿಯೂರಪ್ಪ ಅವರು ಪೂರ್ಣ ಬಹುಮತದೊಂದಿಗೆ ಸರಕಾರ ನಿರ್ಮಿಸಲಿದ್ದಾರೆ.
ಇದನ್ನೂ ಓದಿ : ರಾಜ್ಯಕ್ಕೆ ವಿದ್ಯುತ್ ಕೊಡುವ ರಾಯಚೂರಲ್ಲಿ ಬೆಳಕು ಇಲ್ಲದಂತಾಗಿದೆ; ಮೋದಿ ಟೀಕೆ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More