ಆಂಧ್ರಕ್ಕೆ ಅನ್ಯಾಯವಾಗಿದೆ ಎಂದು ಬಿಜೆಪಿಯಿಂದ ದೂರವಾದ ತೆಲುಗು ಭಾಷಿಕರು

ಬಿಜೆಪಿ ಮತ್ತು ಟಿಡಿಪಿ ಸಂಬಂಧ ಹಳಸಿರುವುದು ಚುನಾವಣೆಯಲ್ಲಿ ಪರಿಣಾಮ ಬೀರದು ಎಂದು ಬಿಜೆಪಿ ತಿಳಿದಿದ್ದರೆ, ಮೂಲಮಟ್ಟದಲ್ಲಿ ಬೇರೆಯೇ ಚಿತ್ರಣ ಕಾಣುತ್ತಿದೆ. ಬಳ್ಳಾರಿಯಿಂದ ತೊಡಗಿ ಬೆಂಗಳೂರಿನವರೆಗೆ ತೆಲುಗು ಬಾಷಿಕರು ಬಿಜೆಪಿಯಿಂದ ದೂರ ಸರಿದಿರುವುದನ್ನು ಹಲವು ಸಮೀಕ್ಷೆಗಳು ಹೇಳಿವೆ

ಇತ್ತೀಚೆಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರುವ ಬೆಂಗಳೂರಿನ ತೆಲುಗು ಸಂಘಟನೆಯ ಉಪಾಧ್ಯಕ್ಷ ಮದುಸೂಧನ್ ಚಂಗಲ್‌ವಾಡ ಅವರು, ಬೆಂಗಳೂರಿನ ತೆಲುಗು ಸಮುದಾಯ ಬಿಜೆಪಿಯಿಂದ ದೂರವಾಗುತ್ತಿರುವ ಸ್ಪಷ್ಟ ಸೂಚನೆ ನೀಡಿದ್ದಾರೆ. “ವೈದ್ಯರು, ಐಟಿ ಕಾರ್ಯಕರ್ತರು ಅಥವಾ ಇನ್ಯಾರೇ ಇರಲಿ, ಪ್ರತಿಯೊಬ್ಬರೂ ಬಿಜೆಪಿ ಆಂಧ್ರಪ್ರದೇಶಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎನ್ನುವ ಅಭಿಪ್ರಾಯ ಹೊಂದಿದ್ದಾರೆ. ತೆಲುಗು ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಚುನಾವಣೆಯಲ್ಲಿ ಏಕತೆ ಪ್ರದರ್ಶಿಸುತ್ತೇವೆ. ಬಹಳಷ್ಟು ಮಂದಿ ಬಿಜೆಪಿಗೆ ಈ ಬಾರಿ ಪಾಠ ಕಲಿಸಬೇಕು ಎಂದುಕೊಂಡಿದ್ದಾರೆ,” ಎಂದು ಮದುಸೂಧನ್ ಚಂಗಲ್‌ವಾಡ ಹೇಳಿದ್ದಾರೆ.

ಇದು ಬೆಂಗಳೂರಿನಲ್ಲಿ ಮಾತ್ರ ಕೇಳಿಬರುವ ಮಾತಲ್ಲ. ದೂರದ ಬಳ್ಳಾರಿಯಲ್ಲಿಯೂ ತೆಲುಗು ಬಾಷಿಕರು ಬಿಜೆಪಿಯಿಂದ ದೂರವಾಗುತ್ತಿದ್ದಾರೆ. ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ತೆಲುಗು ಸಮುದಾಯವನ್ನು ಉದ್ದೇಶಿಸಿ ಒಂದು ಪತ್ರವೂ ಹರಿದಾಡಿತ್ತು. ಈ ಬಾರಿ ತೆಲುಗು ಬಾಷಿಕರು ಬಿಜೆಪಿಗೆ ಪಾಠ ಕಲಿಸಬೇಕು ಮತ್ತು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎನ್ನುವುದು ಆ ಪತ್ರದ ಒಕ್ಕಣೆಯಾಗಿತ್ತು. ಆದರೆ, ನಂತರ ಮುಖ್ಯಮಂತ್ರಿ ಕಚೇರಿಯು, ಈ ಪತ್ರಕ್ಕೂ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿತ್ತು.

ವಾಸ್ತವದಲ್ಲಿ ಉತ್ತರ ಕರ್ನಾಟಕದ ಬೀದರ್‌ನಿಂದ ದಕ್ಷಿಣದ ಕೋಲಾದವರೆಗೆ ಬರುವ ತೆಲುಗು ಪ್ರಭಾವಿತ ಪ್ರದೇಶಗಳು ಆಂಧ್ರಪ್ರದೇಶದ ಯಾವುದೇ ನಾಯಕರ ಆಕರ್ಷಣೆಗೆ ಒಳಗಾಗಿಲ್ಲ. ಕರ್ನಾಟಕದ ಪೂರ್ವ ಭಾಗದಲ್ಲಿ ಬರುವ ಜಿಲ್ಲೆಗಳಲ್ಲಿ ಬಳ್ಳಾರಿ ಹೊರತುಪಡಿಸಿ ಬೇರೆ ಯಾವ ಜಿಲ್ಲೆಗಳಲ್ಲೂ ಬಿಜೆಪಿಗೆ ಜನ ಬೆಂಬಲವಿಲ್ಲದಿರುವುದು ಮತ್ತು ಆ ಭಾಗದ ಜನತೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾಹಿತಿ ಹಲವು ಮೂಲಗಳಿಂದ ಬಂದಿದೆ. ಇದು ಒಂದು ಕಡೆಯಾದರೆ, ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ ಬಂದು ಬೆಂಗಳೂರಿನಲ್ಲಿ ನಲೆಸಿರುವ ತೆಲುಗು ಭಾಷಿಕರ ಮೇಲೆ ಆಂಧ್ರ ರಾಜಕಾರಣದ ದಟ್ಟ ಪ್ರಭಾವಿರುವುದನ್ನು ನಾವು ಕಾಣಬಹುದು. ಇವರು ಬೆಂಗಳೂರಿನಲ್ಲಿ ವಾಸವಿದ್ದರೂ ಆಂಧ್ರ ಶೈಲಿಯಲ್ಲೇ ಜೀವನ ನಡೆಸುತ್ತ ಅಲ್ಲಿನ ಸಿನಿಮಾ ನಟರು, ರಾಜಕೀಯ ವ್ಯಕ್ತಿಗಳನ್ನು ಅನುಸರಿಸುತ್ತಿದ್ದಾರೆ. ಹಾಗಾಗಿ ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗರು ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ ಎಂಬ ಅಂಶ ಬೆಳಕಿಗೆ ಬಂದಿದೆ.

ರಾಜ್ಯದ ಶೇಕಡ ೧೫ರಷ್ಟು ಮಂದಿಯ ಮನೆಯ ಮಾತು ತೆಲುಗು. ರಾಜ್ಯದಲ್ಲಿ ಕನ್ನಡ ಮೊದಲ ಸ್ಥಾನ, ಉರ್ದು ೨ನೇ ಸ್ಥಾನ ಹೊಂದಿದ್ದರೆ ತೆಲುಗು ಮಾತನಾಡುವವರು ಮೂರನೇ ಸ್ಥಾನ ಹೊಂದಿದ್ದಾರೆ. ಉತ್ತರ ಕರ್ನಾಟಕದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ ಜಿಲ್ಲೆಗಳು ಹೈದರಾಬಾದ್‌ನ ದಟ್ಟಪ್ರಭಾವಕ್ಕೆ ಒಳಗಾಗಿ ತೆಲುಗುಮಯವಾಗಿದ್ದರೂ ಶಿಕ್ಷಣ ಮಾಧ್ಯಮ ಕನ್ನಡವಾಗಿದೆ. ಈ ಭಾಗದಲ್ಲಿ ತೆಲುಗು ಮಾತನಾಡಿದರೂ ಕಳೆದ ಚುನಾವಣೆಗಳು ಸೇರಿದಂತೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ ಕಡೆಗೆ ಇಲ್ಲಿನ ಜನ ಒಲವು ಹೊಂದಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. “ಇವರು ಹೆಚ್ಚಿನದಾಗಿ ತೆಲುಗು ಸಿನಿಮಾಗಳನ್ನು ನೋಡುತ್ತಿದ್ದರೂ ಅದು ಕೇವಲ ನಾಯಕನ ಅಭಿಮಾನಕ್ಕೆ ಮಾತ್ರ ಸೀಮಿತವಾಗಿದೆ. ಇಲ್ಲಿ ತೆಲುಗು ಚಿತ್ರನಟರು ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಲಕ್ಷಣಗಳೇ ಇಲ್ಲ,” ಎನ್ನುತ್ತಾರೆ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು.

ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಆಂಧ್ರಪ್ರದೇಶದ ರಾಜಕೀಯ ನಾಯಕರು ಮತ್ತು ಪಕ್ಷಗಳೊಂದಿಗೆ ನಿಕಟ ಸಂಬಂಧವಿದೆ. ಹೀಗಾಗಿಯೇ ಗಣಿ ಮಾಲಿಕರಾದ ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮತ್ತು ಶ್ರೀರಾಮುಲು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದರು. ಬಳ್ಳಾರಿ ಮತ್ತು ಗ್ರಾಮಾಂತರದಲ್ಲಿ ಅವರು ತೀವ್ರ ಪೈಪೋಟಿ ನೀಡುತ್ತಿದ್ದರು. ಆದರೆ, ಗಣಿ ಹಗರಣದಲ್ಲಿ ರೆಡ್ಡಿ ಅಪರಾಧಿಯಾಗಿ ಜೈಲು ಸೇರಿದ ನಂತರ ಅವರ ಸಾಮಾಜ್ಯ ಕುಸಿದುಹೋಯಿತು. ಕಳೆದ ಚುನಾವಣೆಯ ಫಲಿತಾಂಶವೇ ಇದಕ್ಕೆ ನಿದರ್ಶನ.

ಸಾಮಾಜಿಕ ಚಿಂತಕ ಟಿ ಜಿ ವಿಠ್ಠಲ್ ಅವರು ಈ ಕುರಿತು ಹೇಳುವುದು ಹೀಗೆ: “ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೆ ಇರುವುದು ಬಳ್ಳಾರಿ, ರಾಯಚೂರು ಭಾಗದಲ್ಲಿ ಪ್ರಭಾವ ಬೀರಲಿದೆ. ಚಂದ್ರಬಾಬು ನಾಯ್ಡು ಅವರು ಎನ್‌ಡಿಎಯಿಂದ ಹೊರಬಂದ ನಂತರ ಅದು ಇಲ್ಲಿನ ಪ್ರದೇಶದ ಜನರ ಮೇಲೂ ಪ್ರಭಾವ ಬೀರಿದ್ದು, ಬಿಜೆಪಿಗೆ ಹೊಡೆದ ಬೀಳಲಿದೆ. ಬಳ್ಳಾರಿ ಭಾಗದಲ್ಲಿ ಆಂಧ್ರದಿಂದ ವಲಸೆ ಬಂದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.”

“ಹಿಂದೆ ಗಣಿ ವ್ಯವಹಾರದ ಮೂಲಕ ರಾಜಕೀಯ ಪ್ರವೇಶವಿತ್ತು. ಆಂಧ್ರದಿಂದ ವಲಸೆ ಬಂದವರು ಕ್ಯಾಂಪ್‌ಗಳನ್ನು ಹಾಕಿಕೊಂಡು ಕೆಲಸ ಮುಗಿದ ನಂತರ ಮರಳುತ್ತಿದ್ದರು. ಇಲ್ಲಿ ಆಂಧ್ರದವರು ದೊಡ್ಡ ಕ್ಯಾಂಪ್‌ಗಳನ್ನು ಹಾಕಿಕೊಂಡಿದ್ದಾರೆ. ಇವರ ಮೇಲೆ ಸೂರ್ಯನಾರಾಯಣ ರೆಡ್ಡಿಯವರ ಪ್ರಭಾವವಿದೆ. ಅವರು ಕಾಂಗ್ರೆಸ್ ಸೇರಿರುವುದರಿಂದ ಆ ದೊಡ್ಡ ಕ್ಯಾಂಪುಗಳು ಕಾಂಗ್ರೆಸ್‌ಗೆ ಒಲವು ವ್ಯಕ್ತಪಡಿಸಿವೆ. ಹೀಗಾಗಿ ಕಾಂಗ್ರೆಸ್‌ಗೆ ಲಾಭವಾಗಲಿದೆ. ಕಂಪ್ಲಿ ಭಾಗದಲ್ಲಿ ಈ ಪ್ರಭಾವ ಹೆಚ್ಚಾಗಿದೆ,” ಎಂದು ಹೇಳುತ್ತಾರೆ ಸಾಹಿತಿ ಟಿ ಆರ್ ವೆಂಕಟೇಶ್.

“ದಕ್ಷಿಣ ಕರ್ನಾಟಕದ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಬಂದರೆ ಇಲ್ಲಿ ತೆಲುಗು ಪ್ರಭಾವ ಹೆಚ್ಚಾಗಿಯೇ ಇದೆ. ಮನೆಯಲ್ಲಿ ಮತ್ತು ವ್ಯವಹಾರಿಕವಾಗಿ ತೆಲುಗನ್ನೇ ಬಳಸುವುದು ಇಲ್ಲಿ ಕಂಡುಬರುತ್ತದೆ. ತೆಲುಗು ಚಿತ್ರಗಳು ಹೆಚ್ಚು ದಿನ ಪ್ರದರ್ಶನಗೊಳ್ಳುತ್ತವೆ. ಅಂದಮಾತ್ರಕ್ಕೆ ಜನರು ನಮ್ಮನ್ನು ಆಂದ್ರಕ್ಕೆ ಸೇರಿಸಬೇಕೆಂದು ಎಂದಿಗೂ ಹೇಳಿಲ್ಲ. ಚಿರಂಜೀವಿ, ಬಾಲಕೃಷ್ಣ, ಪವನ್ ಕಲ್ಯಾಣ್ ಸೇರಿದಂತೆ ತೆಲುಗು ಸಿನಿಮಾ ನಾಯಕರ ಪ್ರಭಾವ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ, ಬೀರುವುದೂ ಇಲ್ಲ. ನಮ್ಮಲ್ಲಿ ಏನಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಹೆಚ್ಚಿನ ಒಲವು ಇದೆ. ಹಿಂದೆ ಎನ್ ಟಿ ರಾಮರಾವ್ ಇದ್ದಾಗ ಮಾತ್ರ ಸ್ವಲ್ಪಮಟ್ಟಿಗೆ ಅವರ ಪ್ರಭಾವ ಮತದಾರರ ಮೇಲೆ ಇರುತ್ತಿತ್ತು. ಅವರು ಗತಿಸಿದ ಮೇಲೆ ಅಂತಹ ಅಲೆ ಇಲ್ಲ. ಇತ್ತೀಚೆಗೆ ಚಿರಂಜೀವಿ ಮತ್ತು ಪವನ್‌ ಕಲ್ಯಾಣ್ ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಬಂದುಹೋಗಿದ್ದರೂ ಅದು ಮತವಾಗಿ ಪರಿವರ್ತಿತವಾಗುವುದಿಲ್ಲ,” ಎನ್ನುತ್ತಾರೆ ಹಿರಿಯ ಪತ್ರಕರ್ತರಾದ ಚಂದ್ರಶೇಖರ್ ಮತ್ತು ಬಾಲಕೃಷ್ಣ.

ಇದನ್ನೂ ಓದಿ : ಚುನಾವಣಾ ಕಣ | ಕರ್ನಾಟಕ - ಅವಿಭಜಿತ ಆಂಧ್ರ ಗಡಿಯಲ್ಲಿ ಬಿಜೆಪಿ ವಿರೋಧಿ ಅಲೆ

ಆದರೆ, ಬೆಂಗಳೂರು ದಕ್ಷಿಣದಲ್ಲಿ ಅತಿ ಹೆಚ್ಚು ತೆಲುಗರು ಬಂದು ನೆಲೆಸಿದ್ದು ವ್ಯಾಪಾರ, ವಹಿವಾಟು, ವಿವಿಧ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರು ದಕ್ಷಿಣವೊಂದರಲ್ಲೇ ಸುಮಾರು ೩೦ ಲಕ್ಷ ತೆಲುಗು ಭಾಷಿಕರು ವಾಸವಿದ್ದು, ಅವರೆಲ್ಲರೂ ಚಂದ್ರಬಾಬು ನಾಯ್ಡು, ಚಿರಂಜೀವಿ, ಬಾಲಕೃಷ್ಣ, ಪವನ್‌ ಕಲ್ಯಾಣ್ ಸೇರಿದಂತೆ ರಾಜಕೀಯ ಮತ್ತು ಸಿನಿಮಾ ನಾಯಕರ ದಟ್ಟ ಪ್ರಭಾವಕ್ಕೆ ಒಳಗಾಗಿದ್ದಾರೆ. “ಇತ್ತೀಚೆಗೆ ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದಾಗ, ‘ಪ್ರಧಾನಿ ನರೇಂದ್ರ ಮೋದಿ ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಪ್ರಮಾಣ ಮಾಡಿ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುತ್ತೇನೆ ಎಂದು ಹೇಳಿದ್ದರು. ಆದರೆ ನುಡಿದಂತೆ ನಡೆದಿಲ್ಲ. ನಾನು ಮೋದಿ ಒಳ್ಳೆಯ ವ್ಯಕ್ತಿ ಎಂದು ನಂಬಿ ಮೋಸಹೋದೆ. ಹಾಗಾಗಿ ಬಿಜೆಪಿಗೆ ವೋಟು ಮಾಡಬೇಡಿ’ ಎಂದು ಮನವಿ ಮಾಡಿ ಹೋಗಿರುವುದು ಈ ಚುನಾವಣೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ,” ಎನ್ನುತ್ತಾರೆ ಬೆಂಗಳೂರು ನಿವಾಸಿ ಸೋಮಶೇಖರ್.

ಒಟ್ಟಾರೆ, ಬೆಂಗಳೂರಿನಲ್ಲಿ ನೆಲೆನಿಂತಿರುವ ತೆಲುಗು ಭಾಷಿಕರು ಕಾಂಗ್ರೆಸ್ ಬೆಂಬಲಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಹಲವು ಬಾರಿ ಬೆಂಗಳೂರಿನಲ್ಲಿ ಸಭೆ, ಸಮಾರಂಭ ನಡೆಸಿರುವ ತೆಲುಗು ಬಿಲ್ಡರ್‌ಗಳು, ಉದ್ಯಮಿಗಳು ಮತ್ತು ವ್ಯಾಪಾರಗಾರರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More