ಚಾಣಕ್ಯಪುರಿ | ಪ್ರಮಾಣವಚನಕ್ಕೆ ಸಿದ್ಧರಾದ ಬಿಎಸ್‌ವೈ ಕಂಡು ಬಿಜೆಪಿಯೇ ದಂಗು!

ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸ್ಥಳ ಮತ್ತು ದಿನಗಳನ್ನು ಹೇಳುತ್ತಿರುವುದನ್ನು ಕಂಡು ಬಿಜೆಪಿಯ ದಿಲ್ಲಿ ನಾಯಕರೇ ದಂಗಾಗಿದ್ದಾರೆ ಎನ್ನಲಾಗಿದೆ. ಆದರೆ, ಸಮೀಕ್ಷೆಗಳ ಮಾಹಿತಿ ಬದಲಾಗುತ್ತಿರುವುದು ಕಾಂಗ್ರೆಸ್ ಪಾಳೆಯಕ್ಕೆ ‘ಇವಿಎಂ ಭಯ’ ತಂದಿದೆ

ಕಳೆದ ಎಂಟ್ಹತ್ತು ದಿನಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ಮಾತನಾಡುತ್ತಿರುವ ರೀತಿ ಸ್ವತಃ ಅವರದೇ ಪಕ್ಷ ಬಿಜೆಪಿಯಲ್ಲಿ ಭಯ ಉಂಟುಮಾಡಿದೆ. ಪಕ್ಷ ಅಧಿಕಾರಕ್ಕೆ ಬಂದರೂ ತನಗೆ ಅದು ದಕ್ಕುತ್ತದೋ, ಇಲ್ಲವೋ ಎಂಬ ಆತಂಕದಲ್ಲಿರುವ ಯಡಿಯೂರಪ್ಪ, ಪದೇ ಪದೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರದ ಮಾತನಾಡುವ ಮೂಲಕ, ಅದರಲ್ಲೂ ದಿನಾಂಕ, ಸ್ಥಳ, ಅತಿಥಿಗಳ ಬಗ್ಗೆ ನಿಖರವಾಗಿ ಹೇಳುವ ಮೂಲಕ ತಮ್ಮಲ್ಲಿರುವ ಆತಂಕವನ್ನು ಪಕ್ಷದೊಳಗಿನ ವಿರೋಧಿಗಳಿಗೆ ವರ್ಗಾಯಿಸಿದ್ದಾರೆ. ದಿಢೀರನೆ ಬದಲಾದ ಯಡಿಯೂರಪ್ಪ ಅವರ ಮಾತಿನ ವೈಖರಿಗೆ ದಿಲ್ಲಿ ನಾಯಕರು ಕೂಡ ದಂಗಾಗಿದ್ದಾರಂತೆ. ಇನ್ನು, ರಾಜ್ಯ ನಾಯಕರ ಕತೆಯನ್ನು ಕೇಳಲೇಬೇಡಿ!

“ಪಕ್ಷ ಅಧಿಕಾರಕ್ಕೆ ಬಂದರೂ ನನ್ನನ್ನು ಮುಖ್ಯಮಂತ್ರಿ ಮಾಡುವುದು ಕಷ್ಟ; ಮಾಡಿದರೂ ಬಹುಕಾಲ ಬಾಳಗೊಡರು. ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಮಾತ್ರವೇ ನನಗೂ ಅಧಿಕಾರ, ಇಲ್ಲದಿದ್ದರೆ 'ಜೆಡಿಎಸ್ ಒಪ್ಪುತ್ತಿಲ್ಲ' ಎಂಬ ನೆಪ ಮಾಡಿಕೊಂಡು ನನ್ನನ್ನು ನೇಪಥ್ಯಕ್ಕೆ ಸರಿಸಲಾಗುತ್ತದೆ,” ಎಂಬಿತ್ಯಾದಿ ಅನುಮಾನಗಳು ಯಡಿಯೂರಪ್ಪ ಅವರಿಗೆ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಟಿಕೆಟ್ ಹಂಚಿಕೆಯ ನಿರ್ಣಾಯಕ ಸಂದರ್ಭದಲ್ಲೇ ಮೇಲುಗೈ ಸಾಧಿಸಬೇಕೆಂದು ಪ್ರಯತ್ನಿಸಿದ್ದರು. ಟಿಕೆಟ್ ಹಂಚಿಕೆ ವೇಳೆಯೇ ದಾಳ ಉರುಳಿಸುವುದರ ಹಿಂದೆಯೂ ತಂತ್ರ ಅಡಗಿತ್ತು. ತಮ್ಮ ಬೆಂಬಲಿಗರಿಗೆ ಹೆಚ್ಚು ಟಿಕೆಟ್ ಕೊಡಿಸಿ, ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಂತೆ ನೋಡಿಕೊಂಡರೆ ತನ್ನ ಮುಖ್ಯಮಂತ್ರಿ ಗಾದಿಯ ಹಾದಿ ಸುಗಮ ಎಂಬ ನಂಬಿಕೆ ಇತ್ತು. ಆದರೆ, ಆ ಪ್ರಯತ್ನ ನಿರೀಕ್ಷಿತ ಫಲ ತಂದುಕೊಟ್ಟಿರಲಿಲ್ಲ. ಮುಖ್ಯವಾಗಿ, ತಮ್ಮ ಪರಮಾಪ್ತೆ ಶೋಭಾ ಕರಂದ್ಲಾಜೆ ಮತ್ತು ಪುತ್ರ ವಿಜಯೇಂದ್ರನಿಗೆ ಟಿಕೆಟ್ ಕೊಡಿಸುವ ವಿಷಯದಲ್ಲಿ ತೀವ್ರ ಹಿನ್ನಡೆ ಅನುಭವಿಸಬೇಕಾಯಿತು. "ಬಿಜೆಪಿಯಲ್ಲಿ ಯಡಿಯೂರಪ್ಪ ಅವರದು ಏನೂ ನಡೆಯುವುದಿಲ್ಲ,” ಎಂಬ ಸಂದೇಶ ರವಾನಿಸಲೆಂದೇ ಶೋಭಾ ಮತ್ತು ವಿಜಯೇಂದ್ರಗೆ ಟಿಕೆಟ್ ತಪ್ಪಿಸಿದ್ದಾರೆ ಎನ್ನುವುದು ಯಡಿಯೂರಪ್ಪ ಅವರ ಬಲವಾದ ನಂಬಿಕೆ.

ಇನ್ನೊಂದೆಡೆ, ಪಕ್ಷ ನಡೆಸಿರುವ ಎಲ್ಲ ಸಮೀಕ್ಷೆಗಳು ಬಿಜೆಪಿ 70ರಿಂದ 75 ಸೀಟು ಗೆಲ್ಲಲಷ್ಟೇ ಸಾಧ್ಯ ಎಂಬ ಅಂದಾಜು ನುಡಿಯುತ್ತಿವೆ. ಯಡಿಯೂರಪ್ಪ ತಮ್ಮದೇ ಮೂಲಗಳಿಂದ ಸಂಗ್ರಹಿಸುತ್ತಿರುವ ಮಾಹಿತಿಗಳು ಕೂಡ ಈ ಸಮೀಕ್ಷೆಗಳು ಹೊರಹಾಕುತ್ತಿರುವ ಸಂಖ್ಯೆಗಿಂತ ಭಿನ್ನವಾಗಿಲ್ಲ. ಅದರಿಂದಾಗಿಯೇ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ 'ಫ್ರೆಂಡ್ಲಿ ಮ್ಯಾಚ್' ಆಡಲಾರಂಭಿಸಿದೆ. ಸ್ವತಃ ಪ್ರಧಾನಿ ಮೋದಿ, ದೇವೇಗೌಡರನ್ನು ಹೊಗಳಿದ್ದಾರೆ. ಬಿಜೆಪಿ ಸ್ವತಂತ್ರವಾಗಿ ಸರ್ಕಾರ ರಚಿಸುತ್ತದೆ ಎನ್ನುವ ವಾತಾವರಣವೇ ಮರೀಚಿಕೆಯಾಗುತ್ತಿದೆ. ಒಟ್ಟಾರೆ ಜೆಡಿಎಸ್ ಜೊತೆ ಕೈಜೋಡಿಸಲು ಮಾನಸಿಕವಾಗಿ ಸಿದ್ಧಗೊಂಡಾಗಿದೆ.

ಈ ಎರಡೂ ಕಾರಣಗಳಿಂದ ಯಡಿಯೂರಪ್ಪ ತಮ್ಮ ತಂತ್ರ ಬದಲಿಸಿದ್ದಾರೆ. ತಮಗೆ ಅಧಿಕಾರ ಸಿಗದಿರಬಹುದೆಂಬ ಅನುಮಾನದಿಂದ 'ತಾನೇ ಮುಂದಿನ ಮುಖ್ಯಮಂತ್ರಿ' ಎಂದು ಬಹಿರಂಗವಾಗಿ ಪದೇಪದೇ ಹೇಳಿ, ಹೈಕಮಾಂಡ್ ತಮಗೆ ಕೊಟ್ಟಿರುವ ವಚನವನ್ನು ನೆನಪಿಸುವ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದರೂ ತನ್ನನ್ನು ಉಪೇಕ್ಷಿಸುವಂತಿಲ್ಲ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಯಡಿಯೂರಪ್ಪ ಅವರ ಈ ವರಸೆ ಬಿಜೆಪಿ ಪಾಳೆಯಕ್ಕೆ ಬಂಡಾಯದ ಸುಳಿವಿನಂತೆ ಕಾಣುತ್ತಿದೆ. ಮತದಾನ ಮನೆಬಾಗಿಲಲ್ಲೇ ಇರುವುದರಿಂದ ಹೈಕಮಾಂಡ್ ನಾಯಕರಿಗೆ ಕಸಿವಿಸಿಯಾಗಿದೆ. ಏನನ್ನೂ ಮಾಡಲು ಸಾಧ್ಯವಿಲ್ಲದಿರುವುದರಿಂದ ಕಡೇಪಕ್ಷ ಯಡಿಯೂರಪ್ಪ ತಾನೇ ಮುಂದಿನ ಮುಖ್ಯಮಂತ್ರಿ ಅಂತ ಹೇಳುತ್ತಿರುವುದರಿಂದ ಲಿಂಗಾಯತ ಮತಗಳ ಧ್ರುವೀಕರಣ ಸಾಧ್ಯವಾಗುವುದಾದರೆ ಆಗಲಿ ಎಂಬ ನಿರ್ಧಾರಕ್ಕೆ ಬರಲಾಗಿದೆಯಂತೆ.

ಜೆಡಿಎಸ್ ವಿಚಾರದಲ್ಲಿ ಬಿಜೆಪಿ ಕತೆ ಎತ್ತು ಏರಿಗೆಳೆದರೆ ಎಮ್ಮೆ ನೀರಿಗೆಳೆದಂತೆ

ಜೆಡಿಎಸ್ ಸಹಕಾರ ಇಲ್ಲದೆ ಸರ್ಕಾರ ರಚನೆ ಅಸಾಧ್ಯ ಎಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಮನವರಿಕೆಯಾಗಿದೆ. ಆದರೆ, ಚುನಾವಣೆಗೂ ಮುನ್ನ ಜೆಡಿಎಸ್ ಬಗ್ಗೆ ಯಾವ ನಿಲುವು ತೆಳೆಯಬೇಕು, ಯಾವ ನಡೆ ಇಟ್ಟರೆ ಏನಾಗಬಹುದು ಎಂಬ ವಿಷಯದಲ್ಲಿ ಮಾತ್ರ ವಿಪರೀತ ಗೊಂದಲ ಉಂಟಾಗಿದೆಯಂತೆ. ಈ ರೀತಿ ಗೊಂದಲ ಸೃಷ್ಟಿಯಾಗಲು ಕಾರಣ ರಾಜ್ಯ ಬಿಜೆಪಿ ನಾಯಕರು. ಯಡಿಯೂರಪ್ಪ ಪಾಳೆಯ ಬಹಳ ಸ್ಪಷ್ಟವಾಗಿ ಜೆಡಿಎಸ್ ಜೊತೆ ಅಂತರ ಕಾಯ್ದುಕೊಳ್ಳಬೇಕು ಎನ್ನುತ್ತಿದೆ. ವಿರೋಧಿ ಪಾಳೆಯವು ಜೆಡಿಎಸ್ ಜೊತೆ ಹೊಂದಿಕೊಂಡು ಹೋಗುವ ಪರಿಹಾರ ಸೂಚಿಸುತ್ತಿದೆ. "ಎತ್ತು ಏರಿಗೆ, ಎಮ್ಮೆ ನೀರಿಗೆಳದಂತಾಗಿದೆ ಅಮಿತ್ ಶಾ ಪರಿಸ್ಥಿತಿ,” ಎನ್ನುತ್ತಾರೆ ಬಿಜೆಪಿ ನಾಯಕರೊಬ್ಬರು.

ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದಾಗಲೂ ಇದೇ ಗೊಂದಲ ಮುಂದುವರಿದಿದೆ. ರಾಜ್ಯದ ನಾಯಕರು ಮೊದಲು ಒಂದು ರೀತಿ, ಆಮೇಲೆ ಇನ್ನೊಂದು ಬಗೆಯ ಮಾಹಿತಿ ನೀಡಿದ್ದರ ಪರಿಣಾಮವಾಗಿ ಮೊದಲ ಭೇಟಿಯಲ್ಲಿ ದೇವೇಗೌಡರನ್ನು ಮೋದಿ ಹೊಗಳಿದರು. ಎರಡನೇ ಭೇಟಿಯಲ್ಲಿ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಏನೇನೂ ಅಲ್ಲ ಎನ್ನುವಂತೆ ವಾಗ್ದಾಳಿ ಮಾಡಿದರು. "ರಾಜ್ಯ ನಾಯಕರು ಮೂಡಿಸಿದ ಗೊಂದಲದಿಂದ ಮೋದಿ ಬಾಯಲ್ಲೂ ದ್ವಂದ್ವದ ಹೇಳಿಕೆಗಳು ಬರುವಂತಾಯಿತು. ಅಂತಿಮವಾಗಿ ಮತದಾರರಿಗೆ ಜೆಡಿಎಸ್ ಬಗ್ಗೆ ತಮ್ಮ ನಿಲುವನ್ನು ತಿಳಿಸಲು ಸಾಧ್ಯವಾಗಲಿಲ್ಲ. ರಾಜ್ಯ ನಾಯಕರ ನಿಲುವುಗಳು ಯಥಾಸ್ಥಿತಿಯಲ್ಲೇ ಇರುವುದರಿಂದ ಮುಂದೆಯೂ ಇದು ಸಾಧ್ಯವಿಲ್ಲ. ಇಲ್ಲಿಯವರು ಏನಾದರೂ ಹೇಳಿಕೊಳ್ಳಲಿ, ಮೋದಿ ಈ ರೀತಿ ಎಡವಟ್ಟು ಹೇಳಿಕೆಗಳನ್ನು ನೀಡಿದರೆ ಹೊಡೆತ ಬೀಳುವುದು ಗ್ಯಾರಂಟಿ. ಮೋದಿ ಎಲ್ಲ ವಿಷಯಕ್ಕೂ ತಯಾರಿ ಮಾಡಿಕೊಂಡಿರುತ್ತಾರೆ. ಅವರನ್ನೂ ಯಾಮಾರಿಸಿದ್ದಾರೆ ರಾಜ್ಯ ನಾಯಕರು,” ಎನ್ನುತ್ತಾರೆ ಸದ್ಯದ ಬೆಳವಣಿಗೆಗಳ ಬಗ್ಗೆ ಭಯಭೀತರಾಗಿರುವ ಬಿಜೆಪಿ ನಾಯಕರು.

ಕಾಂಗ್ರೆಸ್‌ಗೆ ಕಾಡುತ್ತಿದೆ ಇವಿಎಂ ಭಯ

ಇಷ್ಟು ದಿನ ಕರ್ನಾಟಕದಲ್ಲಿ ಗೆದ್ದೇಬಿಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದರು. ಈಗ ಮತದಾನಕ್ಕೆ ವಾರ ಒಪ್ಪೊತ್ತಿದೆ ಎನ್ನುವ ವೇಳೆ ಬರುತ್ತಿರುವ ಚುನಾವಣಾ ಸಮೀಕ್ಷೆಗಳಿಂದಾಗಿ ಬೆದರುತ್ತಿದ್ದಾರೆ. ಕಾಂಗ್ರೆಸ್ ನಾಯಕರ ಭಯ ಪರಿಸ್ಥಿತಿ ಬದಲಾಯಿತು ಎಂದಲ್ಲ, ಬಿಜೆಪಿ ಪರವಾದ ಅಲೆ ಶುರುವಾಗಿದೆ ಎಂದೂ ಅಲ್ಲ. ಹಾಗೆ ಬಿಂಬಿಸಲಾಗುತ್ತಿದೆ ಎನ್ನುವುದೇ ಕಾಂಗ್ರೆಸ್‌ಗೆ ಭೀತಿ ತಂದಿದೆ.

ಈಗ ಪ್ರತಿದಿನ ಒಂದಿಲ್ಲೊಂದು ಸಮೀಕ್ಷೆ ಬರುತ್ತಿವೆ. ಎಲ್ಲವೂ ಬಿಜೆಪಿ ಪರವಾಗಿವೆ. ಒಂದು ತಿಂಗಳಿಂದೀಚೆಗೆ ಬಿಜೆಪಿ ಪರವಾದ ಯಾವ ಬೆಳವಣಿಗೆಯೂ ಆಗಿಲ್ಲ. ಹಾಗೆ ನೋಡಿದರೆ, ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ತಪ್ಪಿಸಿರುವುದು ಹಾಗೂ ಬಿಜೆಪಿ ಹೈಕಮಾಂಡ್ ಅಣತಿಯನ್ನೂ ಮೀರಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಕೈಜೋಡಿಸಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆ ಉಂಟುಮಾಡಿದೆ. ಆದರೂ ಎಲ್ಲ ಸಮೀಕ್ಷೆಗಳಲ್ಲಿ ಬಿಜೆಪಿ ಮುಂದಿದೆ. ಈ ಸಮೀಕ್ಷೆಗಳ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡ ಇರಬಹುದು. ಬಿಜೆಪಿ ಪರವಾಗಿ ಅಲೆ ಸೃಷ್ಟಿಸಲೆಂದೇ ಇಂಥ ಸಮೀಕ್ಷೆ ಮಾಡಿಸುತ್ತಿರಬಹುದು. ಇದಲ್ಲದೆ, ಪ್ರಧಾನಿ ಮೋದಿ ಈಗ ಕರ್ನಾಟಕಕ್ಕೆ ದಾಂಗುಡಿ ಇಟ್ಟಿದ್ದಾರೆ. ಅವರು ಬಂದದ್ದರಿಂದಲೇ ಬಿಜೆಪಿ ಪರವಾದ ಅಲೆ ನಿರ್ಮಾಣವಾಗುತ್ತಿದೆ ಎಂಬುದಾಗಿ ಕೂಡ ಬಿಂಬಿಸಲಾಗುತ್ತಿದೆ. “ಅಂತಿಮವಾಗಿ ವಿದ್ಯುನ್ಮಾನ ಮತಯಂತ್ರಗಳ ಸಹಾಯದಿಂದ ಬಿಜೆಪಿ ಚುನಾವಣೆಯನ್ನು ಗೆದ್ದು, ಮೊದಲೇ ಪೂರಕ ವಾತಾವರಣ ಇತ್ತು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಈ ರೀತಿಯ ನಾಟಕ ನಡೆಯುತ್ತಿದೆ,” ಎನ್ನುವುದು ಕಾಂಗ್ರೆಸ್ ನಾಯಕರ ಅಂದಾಜು. ಬಿಜೆಪಿಯ ಈ ತಾಂತ್ರಿಕ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಪರಿತಪಿಸುತ್ತಿದೆ. ತಂತ್ರಜ್ಞರ ಮೊರೆಹೋಗಿದೆ. ಆದರೆ, ಪರಿಹಾರ ಗೋಚರಿಸಿರುವ ಸುಳಿವುಗಳು ಮಾತ್ರ ಸಿಗುತ್ತಿಲ್ಲ.

ಇದನ್ನೂ ಓದಿ : ಚಾಣಕ್ಯಪುರಿ | ಬಿಜೆಪಿಯ ಮೋದಿ ಬ್ರಹ್ಮಾಸ್ತ್ರ ಎದುರಿಸಲು ಕಾಂಗ್ರೆಸ್ ತಂತ್ರ

ಬಹುಮತ ನಿರೀಕ್ಷೆಯಲ್ಲಿ ಡಿ ಕೆ ಶಿವಕುಮಾರ್

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೊರತುಪಡಿಸಿದರೆ ಕಾಂಗ್ರೆಸ್ ಮತ್ತು ಬಿಜೆಪಿಯ ಉಳಿದವರೆಲ್ಲರೂ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲೆಂಬ ನಿರೀಕ್ಷೆಯಲ್ಲಿದ್ದಾರೆ. ಏಕೆಂದರೆ, ಕಾಂಗ್ರೆಸ್‌ಗೆ ಬಹುಮತ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿಗೆ ಬಹುಮತ ಬಂದರೆ ಯಡಿಯೂರಪ್ಪ ಅವರಿಗೆ ಅದೃಷ್ಟ ಖುಲಾಯಿಸುತ್ತದೆ. ಅದಕ್ಕಾಗಿಯೇ ಕಾಂಗ್ರೆಸ್-ಬಿಜೆಪಿ ಪಕ್ಷಗಳಲ್ಲಿ ಮುಖ್ಯಮಂತ್ರಿ ಹುದ್ದೆಯ ಕನಸು ಕಾಣುತ್ತಿರುವವರು ಅತಂತ್ರವಾಗಲಿ ಎಂದು ಆಶಿಸುತ್ತಿದ್ದಾರೆ. ಆದರೆ, ಸ್ವತಃ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರೂ, ಪೂರ್ಣ ಬಹುಮತ ಬಂದರೆ ಸಿದ್ದರಾಮಯ್ಯ ಅವರನ್ನು ಬಿಟ್ಟು ತನ್ನ ಪಾಲಿಗೆ ಪಟ್ಟ ಬರಲಾರದು ಎಂದು ಗೊತ್ತಿದ್ದರೂ ಡಿ ಕೆ ಶಿವಕುಮಾರ್ ನಡೆ ಮಾತ್ರ ಭಿನ್ನ. ಡಿ ಕೆ ಶಿವಕುಮಾರ್ ಕೂಡ ಸಿದ್ದರಾಮಯ್ಯ-ಯಡಿಯೂರಪ್ಪ ಅವರಂತೆ ಬಹುಮತದ ನಿರೀಕ್ಷೆಯಲ್ಲಿದ್ದಾರಂತೆ.

ಒಂದೊಮ್ಮೆ ಅತಂತ್ರ ಸ್ಥಿತಿ ನಿರ್ಮಾಣವಾಗಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೆ ತಾನಂತೂ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಆಗುವುದಿರಲಿ, ಕನಿಷ್ಟ ಸಚಿವ ಸ್ಥಾನವೂ ಸಿಗುವುದಿಲ್ಲ. ದೇವೇಗೌಡರು ಯಾವುದೇ ಕಾರಣಕ್ಕೂ ನನ್ನನ್ನು ಸರ್ಕಾರದ ಭಾಗವಾಗಲು ಅವಕಾಶ ಮಾಡಿಕೊಡುವುದಿಲ್ಲ. ಈ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಇದ್ದಂತೆ ಮುಂದೆಯೂ 'ಟ್ವೆಲ್ತ್ ಪ್ಲೇಯರ್' (ಕ್ರಿಕೆಟ್ ಭಾಷೆಯ ೧೨ನೇ ಆಟಗಾರ-ಅಂದರೆ ಲೆಕ್ಕಕ್ಕುಂಟು, ಆಟಕ್ಕಿಲ್ಲ) ಆಗಬೇಕಾಗುತ್ತದೆ ಎನ್ನುವುದು ಡಿ ಕೆ ಶಿವಕುಮಾರ್ ಆತಂಕ. ಇದಲ್ಲದೆ, ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಬಂದು ಮುಂದೆ ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಬಂದುಬಿಟ್ಟರೆ 'ಐಟಿ ದಾಳಿಯೂ ಸೇರಿದಂತೆ ಎಷ್ಟೇ ಬೆದರಿಸಿದರೂ ಜಗ್ಗದೆ ತಮ್ಮ ಪಕ್ಷ ಸೇರಲಿಲ್ಲ ಎಂದು ಸಿಟ್ಟು ಮಾಡಿಕೊಂಡಿರುವ ಬಿಜೆಪಿ ಹೈಕಮಾಂಡ್, ಇನ್ನಷ್ಟು ಕಿರುಕುಳ ನೀಡುತ್ತೆ' ಎಂಬ ಭಯ. ಇದರ ಬದಲು ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಕಡೇಪಕ್ಷ ಸಚಿವ ಸ್ಥಾನಕ್ಕಂತೂ ಮೋಸವಿಲ್ಲ. ರಾಜ್ಯ ರಾಜಕಾರಣದಲ್ಲಿ ಈಗಿರುವ ಪ್ರಭಾವಕ್ಕೆ ಧಕ್ಕೆ ಇರುವುದಿಲ್ಲ. ಸಾಧ್ಯವಾದರೆ, ಸ್ವಲ್ಪದಿನಗಳ ನಂತರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೇಮ್ ಮಾಡಬಹುದು, ಮುಂದಿನ ಅವಧಿಗಾದರೂ ಮುಖ್ಯಮಂತ್ರಿ ಸ್ಥಾನವನ್ನು ಖಾತರಿಪಡಿಸಿಕೊಳ್ಳಬಹುದು, ತಮ್ಮ ವಾಣಿಜ್ಯ ವ್ಯವಹಾರಗಳ ಲೋಪದೋಷಗಳನ್ನು ಸರಿಪಡಿಸಿಕೊಳ್ಳಬಹುದು ಎಂಬುದು ಡಿ ಕೆ ಶಿವಕುಮಾರ್ ಲೆಕ್ಕಾಚಾರ. ಹಾಗಾಗಿ, ಅವರು ಕಾಂಗ್ರೆಸ್ ಪಕ್ಷಕ್ಕೆ ಪೂರ್ಣ ಬಹುಮತ ಬರಲಿ ಎಂದು ಪ್ರಾರ್ಥಿಸುತ್ತಿದ್ದಾರಂತೆ, ಜೊತೆಗೆ ಪ್ರಯತ್ನಿಸುತ್ತಿದ್ದಾರಂತೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More