ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಆಗುವ ಯಾವ ಅರ್ಹತೆ ಇದೆ? ರಾಹುಲ್‌ ಪ್ರಶ್ನೆ

ಮಾಲೂರಿನಿಂದ ಹೊಸಕೋಟೆಗೆ ಬಂದ ರಾಹುಲ್‌ ಗಾಂಧಿ ಬೃಹತ್‌ ಬಹಿರಂಗ ಸಮಾವೇಶದಲ್ಲಿ ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡಿದರು. ಇದೇ ವೇಳೆ, ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗುವ ಯಾವ ಅರ್ಹತೆ ಇದೆ ಎಂದೂ ಪ್ರಶ್ನಿಸಿದರು. ಭಾಷಣದ ಮುಖ್ಯಾಂಶಗಳು ಇಲ್ಲಿವೆ

 • ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಯುದ್ಧ. ಎಲ್ಲರೂ ಒಂದಾಗಿ ಜಾತಿ ಭೇದವಿಲ್ಲದೆ ಬದುಕಲು ಬಸವಣ್ಣ ಹೇಳಿದರು. ಬಸವಣ್ಣನವರ, ಇಂದಿರಾ ಗಾಂಧಿಯವರ, ಕಾಂಗ್ರೆಸಿಗರ ಸಿದ್ಧಾಂತ ಒಂದು ಕಡೆಯಾದರೆ, ಅದಕ್ಕೆ ಎದುರಾಗಿ ಬಿಜೆಪಿ ಸಿದ್ಧಾಂತವಿದೆ.
 • ರಾಜ್ಯ ಬಡಜನರಲ್ಲಿ, ರೈತರಲ್ಲಿ, ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಶಕ್ತಿ ಇದೆ. ಕರ್ನಾಟಕವನ್ನು ಪ್ರಗತಿಪರ ರಾಜ್ಯವಾಗಿ ಕೊಂಡೊಯ್ಯಬೇಕಾದರೆ ಅಧಿಕಾರ ಅವರ ಕೈಗೆ ಬರಬೇಕು.
 • ರೈತರಿಗೆ ಸಹಾಯ ಮಾಡದಿದ್ದರೆ ಅದು ರಾಜ್ಯಕ್ಕೆ ದೊಡ್ಡ ನಷ್ಟ. ಯಾರು ರಾಜ್ಯದಲ್ಲಿ ಬೆವರು, ರಕ್ತ ಸುರಿಸಿ ದುಡಿಯುತ್ತಾರೋ ಅವರಿಗೆ ನ್ಯಾಯ ಸಿಗಬೇಕು. ಈ ಸರಕಾರ ರೈತರು ಹಾಗೂ ಬಡವರ ಪರವಾಗಿ ಕೆಲಸ ಮಾಡಬೇಕು; ಕಳ್ಳರು, ದಲ್ಲಾಳಿಗಳ ಪರವಾಗಿ ಅಲ್ಲ.
 • ಮೋದಿ ಭಾಷಣ ಮಾಡುತ್ತ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದೇನೆ ಎನ್ನುತ್ತಾರೆ. ಆದರೆ ಮೋದಿ ಪಕ್ಕದಲ್ಲಿಯೇ ಪರಪ್ಪನ ಅಗ್ರಹಾರದ ಆಹಾರ ತಿಂದವರಿದ್ದಾರೆ.
 • ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಒಂದೇ ಒಂದು ಸಲ ಸತ್ಯ ಮಾತನಾಡಿದ್ದಾರೆ. ಹಿಂದೊಮ್ಮೆ ಸಾರ್ವಜನಿಕ ವೇದಿಕೆಯಲ್ಲಿಯೇ ಯಡಿಯೂರಪ್ಪನವರದು ಭ್ರಷ್ಟ ಸರಕಾರ ಎಂದಿದ್ದರು.
ಇದನ್ನೂ ಓದಿ : ಬಿಜೆಪಿಯಲ್ಲಿ ಗಬ್ಬರ್‌ ಮಾತ್ರವಲ್ಲ ಸಾಂಬಾಗಳೂ ಇದ್ದಾರೆ ಎಂದ ರಾಹುಲ್ ಗಾಂಧಿ
 • ಕರ್ನಾಟಕದ ನೈಸರ್ಗಿಕ ಸಂಪತ್ತು ಲೂಟಿ ಮಾಡಿದವರು ರೆಡ್ಡಿ ಸಹೋದರರು. ಅವರಿಗೆ ೮ ವಿಧಾನಸಭೆ ಟಿಕೆಟ್ ನೀಡಿದ್ದಾರೆ ಮೋದಿ. ಅವರ ಉದ್ದೇಶವೇ ಕರ್ನಾಟಕವನ್ನು ಲೂಟಿ ಮಾಡುವುದು. ರೆಡ್ಡಿ ಸಹೋದದರು ೩೫ ಸಾವಿರ ಕೋಟಿ ಸಂಪತ್ತು ಲೂಟಿ ಮಾಡಿದ್ದಾರೆ.
 • ಯಾವ ಅರ್ಹತೆ ಇದೆ ಎಂದು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆರಿಸಿದ್ದಾರೆ? ಯಡಿಯೂರಪ್ಪ, ರೆಡ್ಡಿ ಸಹೋದರರು ಹಾಗೂ ೪ ಜನ ಸೇರಿ ಕರ್ನಾಟಕದ ಜನರನ್ನು ಲೂಟಿ ಮಾಡಿ ಮೋದಿ ಮಾರ್ಕೆಟಿಂಗ್‌ಗೆ ಹಣ ಒದಗಿಸುತ್ತಾರೆ. ಅದೇ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ.
 • ‘ನುಡಿದಂತೆ ನಡೆ’ ಎಂಬುದು ಬಸವಣ್ಣನ ವಚನ, ಇನ್ನೊಂದೆಡೆ ಮೋದಿ ಇದ್ದಾರೆ. ೨೦೧೪ರ ಚುನಾವಣೆ ಸಂದರ್ಭದಲ್ಲಿ ರಾಷ್ಟ್ರದಲ್ಲಿ ಪ್ರವಾಸ ಮಾಡಿ ತೈಲ ಬೆಲೆ ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪಟ್ರೋಲ್‌ ಬೆಲೆ ಕಡಿಮೆ ಆಗಿದೆ. ಆದರೆ, ಇಲ್ಲಿ ಮಾತ್ರ ಕಡಿಮೆ ಆಗಿಲ್ಲ. ಮೋದಿ ಸ್ಕೂಟರ್, ಆಟೋ, ಟ್ರಾಕ್ಟರ್ ಎಲ್ಲದರಿಂದ ಹಣ ತೆಗೆದು ಬಂಡವಾಳಶಾಹಿಗಳ ಜೇಬು ತುಂಬುತ್ತಿದ್ದಾರೆ.
 • ಸಿದ್ದರಾಮಯ್ಯ ರೈತರ ೮ ಸಾವಿರ ಕೋಟಿ ಸಾಲ ಮನ್ನಾ ಮಾಡಿದರು. ಇದಕ್ಕೆ ಯಡಿಯೂರಪ್ಪ ಹಾಗೂ ಮೋದಿ ಯಾಕೆ ಒಂದು ರುಪಾಯಿಯನ್ನೂ ನೀಡಲಿಲ್ಲ?
 • ಮೋದಿ ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ರು. ಜಮಾ ಮಾಡುವ ಭರವಸೆ ನೀಡಿದ್ದರು. ಇಲ್ಲಿರುವ ಜನತೆ ಯಾರಾದರೂ ಒಬ್ಬರು ಹೇಳಿ, ಮೋದಿ ತಮ್ಮ ಖಾತೆಗೆ ೫ ರುಪಾಯಿ ಆದರೂ ಹಾಕಿದ್ದಾರಾ? ಮೋದಿಯವರೇ ಬಸವಣ್ಣನವರ ವಚನ ಪಾಲಿಸಿ.
 • ಪ್ರತಿ ಪಟ್ಟಣ ನಗರದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗುತ್ತಿದೆ. ಉತ್ತಮ ಆಹಾರ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಕ್ಷೀರಭಾಗ್ಯದಲ್ಲಿ ೫ ರುಪಾಯಿ ಬೋನಸ್ ನೀಡಿದ್ದೇವೆ. ಮಾತೃಪೂರ್ಣ ಯೋಜನೆಯಲ್ಲಿ ಗರ್ಭಿಣಿ ಸ್ತ್ರೀಯರಿಗೆ ಭೋಜನ ಒದಗಿಸಿದ್ದೇವೆ. ರೈತರಿಗೆ ೨ ಲಕ್ಷ ಕೃಷಿ ಹೊಂಡಗಳನ್ನು ನಿರ್ಮಿಸಿದ್ದೇವೆ.
 • ನೀರಾವರಿಗಾಗಿ ಬಿಜೆಪಿಗಿಂತ ಮೂರು ಪಟ್ಟು ಖರ್ಚು ಮಾಡಿದ್ದೇವೆ. ನಾವೇನು ಹೇಳಿದೆವೋ ಅದನ್ನು ಮಾಡಿ ತೋರಿಸಿದ್ದೇವೆ. ಮೋದಿಯವರು ಸಾಲ ಮನ್ನಾ ಮಾಡುವುದಿಲ್ಲ, ಆದರೆ ನಾವು ಮಾಡುತ್ತೇವೆ. ೨೦೧೯ರಲ್ಲಿ ಲೋಕಸಭೆಯಲ್ಲಿ ಚುನಾವಣೆ ನಂತರ ಕಾಂಗ್ರೆಸ್ ಗೆಲ್ಲುತ್ತದೆ. ಅನಂತರ ೧೦ ದಿನದಲ್ಲಿ ದೇಶದ ರೈತರ ಸಾಲಮಾನ್ನಾ ಮಾಡಲಾಗುತ್ತದೆ.
 • ಮುಂದಿನ ೫ ವರ್ಷದಲ್ಲಿ ೫೦ ಲಕ್ಷ ಮನೆ ಕಟ್ಟಿಕೊಡುತ್ತೇವೆ. ನಮ್ಮದು ಮೋದಿಯಂತಹ ಆಶ್ವಾಸನೆ ಅಲ್ಲ, ಇದು ಕಾಂಗ್ರೆಸ್‌ನ ಆಶ್ವಾಸನೆ.
 • ಪ್ರತಿ ವರ್ಷ ೨ ಕೋಟಿ ಉದ್ಯೋಗ ಮಾಡುವುದಾಗಿ ಹೇಳಿದರು. ೪ ವರ್ಷದಲ್ಲಿ ೮ ಕೋಟಿ ಉದ್ಯೋಗವಿರಲಿ, ೧ ಕೋಟಿ ಉದ್ಯೋಗವನ್ನೂ ಸೃಷ್ಟಿಸಲಿಲ್ಲ. ನಾವು ಮುಂದೆ ೫ ವರ್ಷದಲ್ಲಿ ರಾಜ್ಯದ ಯುವಕರಿಗೆ ಉದ್ಯೋಗ ಕೊಡಲು ಶಕ್ತಿ ಮೀರಿ ದುಡಿಯುತ್ತೇವೆ. ೧ ಕೋಟಿ ಯುವಕರಿಗೆ ಉದ್ಯೋಗ ಕೊಡುವ ಭರವಸೆ ನೀಡುತ್ತೇವೆ.
 • ರೈತರು ತಮ್ಮ ಉತ್ಪನ್ನ ಫುಡ್ ಪ್ರೋಸೆಸಿಂಗ್ ಕೇಂದ್ರದಲ್ಲಿ ಮಾರಲಿದ್ದಾರೆ. ಮಹಿಳೆಯರಿಗೆ ಸರಕಾರಿ ಉದ್ಯೋಗದಲ್ಲಿ ಶೇ.೩೩ರಷ್ಟು ಮೀಸಲು ನೀಡಲಾಗುವುದು.
 • ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ ನಡೆಯುತ್ತಿದೆ. ಮೋದಿಯವರ ಒಬ್ಬ ಮಂತ್ರಿಯಂತೂ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಮೋದಿಯವರೇ, ಸರಿಯಾಗಿ ಕೇಳಿಸಿಕೊಳ್ಳಿ, ನೀವು ಅಂಬೇಡ್ಕರ್ ಸಂವಿಧಾನವನ್ನು ಬದಲಾಯಿಸಲಾಗುವುದಿಲ್ಲ. ಇದಕ್ಕೆ ಕಾಂಗ್ರೆಸ್‌ ಅವಕಾಶ ನೀಡುವುದಿಲ್ಲ.
 • ನಾನು ಮೋದಿಯವರ ವಿರುದ್ಧ ವೈಯಕ್ತಿಕವಾಗಿ ಆರೋಪ ಮಾಡುವುದಿಲ್ಲ. ಆದರೆ ಮೋದಿ ನನ್ನ ಬಗ್ಗೆ ವೈಯಕ್ತಿಕಾವಗಿ ಟೀಕಿಸುತ್ತಾರೆ, ತಮಾಷೆ ಮಾಡುತ್ತಾರೆ. ನಾನು ಹಿರಿಯರನ್ನು ಗೌರವಿಸುತ್ತೇನೆ. ನರೇಂದ್ರ ಮೋದಿ ನನಗಿಂತ ಹಿರಿಯರು. ಹಾಗಾಗಿ ಅವರನ್ನು ವೈಯಕ್ತಿಕವಾಗಿ ಟೀಕಿಸುವುದಿಲ್ಲ.
 • ತಾವು ಭ್ರಷ್ಟಾಚಾರದ ವಿರುದ್ಧ ಎನ್ನುತ್ತಾರೆ, ಮೋದಿ ಪಕ್ಕದಲ್ಲಿ ಯಡಿಯೂರಪ್ಪ ಇರುತ್ತಾರೆ, ರೈತರ ಬಗ್ಗೆ ಮಾತಾಡುತ್ತಾರೆ, ಸಾಲ ಮನ್ನಾ ಮಾಡುವುದಿಲ್ಲ. ದಲಿತರ ಪರ ಎನ್ನುತ್ತಾರೆ, ರೋಹಿತ್ ವೇಮುಲನನ್ನು ಮೋದಿಯ ಜನರು ಕೊಂದರು. ಮಹಿಳೆ ಪರ ಎನ್ನುತ್ತಾರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಚೀನಾ ಬಗ್ಗೆ ಮಾತನಾಡುವಂತಿಲ್ಲ, ಅಲ್ಲಿ ಹೋದಾಗ ಡೋಕಲಾ ಕುರಿತು ಮಾತನಾಡಲಿಲ್ಲ. ಮೋದಿಗೆ ಭಾಷಣ ಮಾಡಲು ಇನ್ನೇನೂ ಇಲ್ಲ. ಹಾಗಾಗಿ, ನನ್ನ ವಿರುದ್ಧ, ಸಿದ್ದರಾಮಯ್ಯ ವಿರುದ್ಧ, ಖರ್ಗೆ ವಿರುದ್ಧ ಮಾತಾಡುತ್ತಾರೆ. ಇವು ಪ್ರಧಾನಿಗೆ ಶೋಭೆ ನೀಡುವುದಿಲ್ಲ. ಆದರೆ ಇದು ಅವರಿಗೆ ಅಭ್ಯಾಸ ಆಗಿಹೋಗಿದೆ.
 • ಒಂದಂತೂ ಸತ್ಯ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಕರ್ನಾಟಕದ ಜನ ನೋಟು ರದ್ದು, ಗಬ್ಬರ್‌ ಸಿಂಗ್‌ ಟ್ಯಾಕ್ಸ್‌, ನೀರವ್ ಮೋದಿಯನ್ನು ಮರೆತಿಲ್ಲ. ನಾವು ೫ ವರ್ಷದಲ್ಲಿ ಕೆಲಸ ಮಾಡಿ ತೋರಿಸಿದ್ದೇವೆ. ಅದಕ್ಕಿಂತ ಹೆಚ್ಚು ಕೆಲಸ ಮಾಡುತ್ತೇವೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More