‘ನಾಯಿ ಧರ್ಮದೇವತೆ’ ಎಂಬ ಹಿಂದೂ ಧರ್ಮದ ವ್ಯಾಖ್ಯಾನವನ್ನೇ ಮರೆತ ಬಿಜೆಪಿ

ಪ್ರಧಾನಿ ಮೋದಿ ಆದಿಯಾಗಿ ಬಿಜೆಪಿ ನಾಯಕರು ವಿರೋಧಿಗಳ ಕುರಿತು ಟೀಕೆ ಅಥವಾ ವ್ಯಂಗ್ಯದ ಮಾತುಗಳನ್ನು ಆಡಬೇಕಾದ ಸಂದರ್ಭದಲ್ಲಿ ನಾಯಿಯನ್ನು ಮುಂದೆ ಮಾಡುವುದೇತಕ್ಕೆ? ಹಿಂದೂ ಧರ್ಮದಲ್ಲಿ ಬಹಳ ಗೌರವಯುತವಾಗಿ ಕಾಣಲಾಗುವ ನಾಯಿ ಬಗ್ಗೆ ಬಿಜೆಪಿಗೇಕೆ ಸಮಸ್ಯೆ?

ಪ್ರಧಾನಿ ನರೇಂದ್ರ ಮೋದಿಯವರು ಜಮಖಂಡಿಯಲ್ಲಿ ಮಾತನಾಡುತ್ತ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮುಧೋಳ ನಾಯಿಯಿಂದ ದೇಶಭಕ್ತಿ ಕಲಿಯುವಂತೆ ಸಲಹೆ ನೀಡಿದರು. “ಮಹಾತ್ಮ ಗಾಂಧಿ ಅಥವಾ ತಮ್ಮ ಪೂರ್ವಜರಿಂದ ದೇಶಭಕ್ತಿಯನ್ನು ಕಲಿಯದೆ ಇದ್ದರೂ ತೊಂದರೆ ಇಲ್ಲ, ಕನಿಷ್ಠ ಮುಧೋಳ ನಾಯಿಯಿಂದಲಾದರೂ ರಾಹುಲ್ ಗಾಂಧಿ ದೇಶಭಕ್ತಿಯ ಪಾಠ ಕಲಿಯಲಿ,” ಎನ್ನುವುದು ಪ್ರಧಾನಿ ಅಭಿಪ್ರಾಯ.

ಸೇನೆಗಾಗಿ ಮುಧೋಳ ನಾಯಿಯ ಬೆಟಾಲಿಯನ್ ಸಿದ್ಧ ಮಾಡಲಿದ್ದೇವೆ ಎಂಬುದನ್ನು ತಿಳಿಸುವ ಸಂದರ್ಭ ಮೋದಿಯವರು ಈ ಮಾತು ಹೇಳಿದ್ದಾರೆ. ಮೂಲತಃ ನಾಯಿಗಳು ಸ್ವಾಮಿ ನಿಷ್ಠೆಗೆ ಹೆಸರಾಗಿವೆ. ಆದರೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ನಾಯಿಗಳ ದೇಶಭಕ್ತಿಯನ್ನು ಕೊಂಡಾಡಿದ್ದಾರೆ. ಪೊಲೀಸರ ಜೊತೆಗೆ ಮೊದಲೇ ಕೆಲಸ ಮಾಡುತ್ತಿದ್ದ ಬೇಟೆಗೆ ಪ್ರಸಿದ್ಧಿ ಪಡೆದ ಮುಧೋಳ ನಾಯಿಗಳು ಈಗ ದೇಶಸೇವೆಗೂ ಇಳಿದಿರುವ ಕಾರಣ ಅವುಗಳ ದೇಶಭಕ್ತಿಯನ್ನು ಕೊಂಡಾಡಿದರೆ ತಪ್ಪಾಗದು. ಆದರೆ, ರಾಹುಲ್ ಗಾಂಧಿ ಅವರ ನಾಯಿಪ್ರೀತಿಯನ್ನು ಕೆಣಕುವ ಉದ್ದೇಶದಿಂದಲೇ ಪ್ರಧಾನಿ ಮೋದಿಯವರು ‘ದೇಶಭಕ್ತಿ ಪಾಠ’ ಹೇಳಲು ಮುಧೋಳ ನಾಯಿಗಳನ್ನು ರಾಜಕೀಯಕ್ಕೆ ಎಳೆದುತಂದಿದ್ದರೆ ತಪ್ಪಾಗುತ್ತದೆ.

ಬಿಜೆಪಿಗರು ನಾಯಿಗಳನ್ನು ತಮ್ಮ ಭಾಷಣಗಳಿಗೆ ಆಹಾರವಾಗಿಸುವುದು ಇದೇ ಮೊದಲೇನಲ್ಲ. ನರೇಂದ್ರ ಮೋದಿಯವರೇ ಇರಲಿ ಅಥವಾ ಇತರ ಬಿಜೆಪಿ ಮುಖಂಡರಿಗೇ ಇರಲಿ, ಎದುರಾಳಿಗಳನ್ನು ಹೀಯಾಳಿಸುವ ಸಂದರ್ಭದಲ್ಲಿ ನಾಯಿಗಳು ನೆನಪಾಗುತ್ತವೆ. ರಾಹುಲ್ ಗಾಂಧಿಯವರ ದೇಶಭಕ್ತಿಯನ್ನು ಹೀಯಾಳಿಸಲು ನರೇಂದ್ರ ಮೋದಿಯವರು ಮುಧೋಳ ನಾಯಿಯ ದೇಶಭಕ್ತಿಯನ್ನು ಮುಂದಿಟ್ಟಿರುವುದು ಮುಧೋಳ ನಾಯಿಗೆ ನೀಡಿದ ಗೌರವವೆಂದು ಹೇಳುವವರೂ ಸಾಕಷ್ಟಿರಬಹುದು. ಆದರೆ, ಪರೋಕ್ಷವಾಗಿ ರಾಹುಲ್ ಗಾಂಧಿಯವರನ್ನು 'ನಾಯಿಗಿಂತಲೂ ಕೀಳು' ಎನ್ನುವ ಅರ್ಥದಲ್ಲಿ ಮೋದಿಯವರು ಅಣಕಿಸಿರುವುದು ಸತ್ಯ. ಮೋದಿಯವರ ಮಾತಿನ ವರಸೆಯನ್ನು ಬಲ್ಲವರಿಗೆ ಈ ಅಣಕವನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗದು.

ಹೀಗೆ, ತಮ್ಮ ವಿರೋಧಿಯನ್ನು ಮಾತಿನಲ್ಲೇ ಮಣಿಸುವ ಭರದಲ್ಲಿ ಮುಧೋಳ ನಾಯಿಯ ವ್ಯಾಖ್ಯಾನ ಮಾಡುತ್ತಿರುವಾಗ ನರೇಂದ್ರ ಮೋದಿಯವರು ಮತ್ತೊಮ್ಮೆ ‘ನಾಯಿ’ ಪ್ರಬೇಧವನ್ನು ಕೀಳಾಗಿ ವ್ಯಾಖ್ಯಾನಿಸುವ ಪ್ರಯತ್ನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿಯವರ ಮುಧೋಳ ಟೀಕೆ ಬಗ್ಗೆ ಹೆಚ್ಚು ಗಮನ ನೀಡದೆ ಇರಬಹುದು. ಆದರೆ, ಪ್ರಧಾನಿ ಮೋದಿಯವರು ನಾಯಿಯನ್ನು ಉದಾಹರಣೆಗೆ ತೆಗೆದುಕೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಇಂಗ್ಲಿಷ್ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತ, ಮುಸ್ಲಿಂ ಸಮುದಾಯವನ್ನು ವಿಶ್ಲೇಷಿಸುವಾಗಲೂ ನಾಯಿಯನ್ನು ಮುಂದಿಟ್ಟಿದ್ದರು. “ನನ್ನ ಕಾರಿನ ಮುಂದೆ ಒಂದು ನಾಯಿಮರಿ ಬಂದರೂ ನಾನು ಕಾರನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತೇನೆ,” ಎಂದು ಗುಜರಾತಿನಲ್ಲಿ ಮುಸ್ಲಿಂ ಸಮುದಾಯದವರ ಹತ್ಯಾಕಾಂಡದ ಬಗ್ಗೆ ತಮ್ಮ ಮೇಲಿದ್ದ ಆರೋಪವನ್ನು ಪ್ರಧಾನಿ ಮೋದಿಯವರು ನಿರಾಕರಿಸಿದ್ದರು. ಆ ಸಂದರ್ಭದಲ್ಲೂ ಅವರು ಮುಸ್ಲಿಂ ಸಮುದಾಯವನ್ನು ನಾಯಿಮರಿಗೆ ಹೋಲಿಸಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ಅಮಿತ್ ಶಾ ಅವರೂ ಇತ್ತೀಚೆಗೆ ವಿರೋಧಪಕ್ಷಗಳು ಮೈತ್ರಿ ಮಾಡಿಕೊಳ್ಳುವುದನ್ನು ಕಂಡಾಗ ‘ಬೆಕ್ಕುಗಳು ಮತ್ತು ನಾಯಿಗಳು ಮತ್ತು ಇಲಿಗಳು ಒಂದಾಗಿವೆ” ಎಂದು ಟೀಕಿಸುವ ಮೂಲಕ ಸುದ್ದಿಯಾಗಿದ್ದರು. ವಿರೋಧ ಪಕ್ಷಗಳು ಈ ಟೀಕೆಗೆ ಖಾರವಾದ ಪ್ರತಿಕ್ರಿಯೆಗಳನ್ನೇ ನೀಡಿದ್ದರು ಎನ್ನೋಣ.

ರಾಹುಲ್ ಗಾಂಧಿ ಒಮ್ಮೆ ತಮ್ಮ ಸಾಕು ನಾಯಿ ‘ಪೀಡಿ’ ಬಗ್ಗೆ ಟ್ವಿಟರ್‌ನಲ್ಲಿ ತಮಾಷೆಯಾಗಿ ಬರೆದುಕೊಂಡು ಟ್ವೀಟ್ ಮಾಡಿದ್ದರು. ಈ ಟ್ವೀಟ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಯ ಮುಖಂಡರು ತೀವ್ರ ಟೀಕೆಗಳ ಮೂಲಕ ಮುಗಿಬಿದ್ದರು. ರಾಹುಲ್ ಗಾಂಧಿ ಅವರು ನಾಯಿಗೆ ಕೊಡುವ ಪ್ರಾಮುಖ್ಯವನ್ನು ನಾಯಕರಿಗೆ ಕೊಡುವುದಿಲ್ಲ ಎನ್ನುವವರೆಗೂ ರಾಷ್ಟ್ರೀಯ ಮಟ್ಟದಲ್ಲಿ ಈ ಸುದ್ದಿ ವಿಶ್ಲೇಷಣೆಯಾಯಿತು. ಬಿಜೆಪಿ ಈ ವಿಚಾರವನ್ನು ಗಂಭೀರವಾಗಿ ಚರ್ಚೆಯ ವಸ್ತುವಾಗಿಸಿ, ರಾಹುಲ್ ಗಾಂಧಿ ಅವರ ‘ನಾಯಿಪ್ರೀತಿ ತಪ್ಪು’ ಎನ್ನುವ ಮಟ್ಟಿಗೆ ರಾಷ್ಟ್ರೀಯ ವ್ಯಾಖ್ಯಾನವೊಂದನ್ನು ಬೆಳೆಸುವ ಪ್ರಯತ್ನ ಮಾಡಿತು.

ಕರ್ನಾಟಕದ ವಿಚಾರಕ್ಕೆ ಬಂದರೆ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರು ದಲಿತರನ್ನು ನಾಯಿಗೆ ಹೋಲಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಳ್ಳಾರಿ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಅನಂತ ಕುಮಾರ್ ಅವರ ಕಾರನ್ನು ತಡೆದು ದಲಿತರು ಪ್ರತಿಭಟನೆ ವ್ಯಕ್ತಪಡಿಸಿದ್ದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡುತ್ತ ಅನಂತ ಕುಮಾರ್ ಅವರು, “ನಾನು ಪ್ರಧಾನಿ ಮೋದಿಯವರ ಯೋಜನೆಗಳನ್ನು ಜನರ ಬಳಿಗೆ ತಲುಪಿಸಲು ಬಂದಿದ್ದೇನೆ. ಕೆಲವು ಬೀದಿನಾಯಿಗಳು ಬೊಗಳಿದಲ್ಲಿ ಚಿಂತಿಸುವುದಿಲ್ಲ,” ಎಂದು ಹೇಳಿಕೆ ನೀಡಿದ್ದು ದಲಿತ ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿತ್ತು.

ಗೋವಿನ ವಿಚಾರಕ್ಕೆ ಬಂದಾಗ ಭಾವನಾತ್ಮಕವಾಗಿ ಸ್ಪಂದಿಸುವ ಬಿಜೆಪಿಯವರು ‘ಗೋಮಾತೆ’ ಎನ್ನುತ್ತಾ ಒಂದಾಗುತ್ತಾರೆ. ಆದರೆ ದತ್ತಗುರುವಿನ ಸಹಚಾರಿಯಾದ ನಾಯಿ, ಗಣೇಶನ ವಾಹನವಾಗಿರುವ ಇಲಿಯ ಬಗ್ಗೆ ಕೀಳಾಗಿ ಮಾತನಾಡುವುದೇಕೆ? ಬಿಜೆಪಿಯ ಹಿಂದುತ್ವದ ಕಲ್ಪನೆಯಲ್ಲಿ ನಾಯಿ ಇಷ್ಟೊಂದು ಕೀಳು ಪ್ರಾಣಿಯಾಗಲು ಕಾರಣವೇನು? ಪುರಾಣ ಗ್ರಂಥಗಳು ಮತ್ತು ಧಾರ್ಮಿಕ ನಾಯಕರು ಹಿಂದೂ ಧರ್ಮದಲ್ಲಿ ನಾಯಿಗೆ ಗೌರವದ ಸ್ಥಾನವನ್ನು ನೀಡಿರುವುದನ್ನು ಬಿಜೆಪಿ ಮರೆತಿರುವಂತಿದೆ. ಹಾಗೆ ನೋಡಿದರೆ ನರೇಂದ್ರ ಮೋದಿಯಾದಿಯಾಗಿ ಬಿಜೆಪಿ ನಾಯಕರು ಆಗಾಗ್ಗೆ ಹಲವು ವಿಚಾರಗಳ ಬಗ್ಗೆ ಹೇಳುವಾಗ ಮಹಾಭಾರತದ ಉಲ್ಲೇಖ ಮಾಡುವುದು ಇದೆ. ಆದರೆ, ಮಹಾಭಾರತದಲ್ಲಿ ನಾಯಿಯನ್ನು ಧರ್ಮದೇವತೆ ಎಂದು ಕಾಣಲಾಗಿದೆ. ಹಾಗಿದ್ದರೆ ವಿಪಕ್ಷಗಳನ್ನು ನಾಯಿಗೆ ಹೋಲಿಕೆ ಮಾಡುವ ಬಿಜೆಪಿಗರು ಮಹಾಭಾರತವನ್ನು ಓದಿಲ್ಲವೆ?

ಮಹಾಭಾರತದ ಮುಕ್ತಾಯದ ಅಧ್ಯಾಯಗಳಲ್ಲಿ ಯುದಿಷ್ಟಿರ ಮತ್ತು ಆತನ ನಾಯಿಯ ವಿಚಾರ ಬರುತ್ತದೆ. ಸ್ವರ್ಗಕ್ಕೆ ಹೋಗುವ ಹಾದಿಯಲ್ಲಿ ರಾಜ ಯುದಿಷ್ಟಿರ ತಮ್ಮ ಸಹೋದರರ ಜೊತೆಗೆ ಪ್ರಯಾಣಿಸುತ್ತಾರೆ. ಈ ನಡುವೆ ನಾಯಿಯೊಂದು ಅವರ ಜೊತೆಗೂಡುತ್ತದೆ. ನಿಧಾನವಾಗಿ ದ್ರೌಪದಿ, ಸಹದೇವ, ನಕುಲ, ಅರ್ಜುನ, ಭೀಮ ಹೀಗೆ ಯುದಿಷ್ಟಿರನ ಸಹೋದರರು ಒಬ್ಬೊಬ್ಬರಾಗಿ ತಮ್ಮ ತಪ್ಪುಗಳಿಗಾಗಿ ಪ್ರಾಣ ಕಳೆದುಕೊಳ್ಳುತ್ತಾರೆ. ಯುದಿಷ್ಟಿರನ ಜೊತೆಗೆ ಪ್ರಾಮಾಣಿಕವಾದ ನಾಯಿ ಮಾತ್ರ ಪ್ರಯಾಣದಲ್ಲಿ ಉಳಿದುಕೊಳ್ಳುತ್ತದೆ. ಯುದಿಷ್ಟಿರನನ್ನು ಸ್ವರ್ಗಕ್ಕೆ ಆಹ್ವಾನಿಸಲು ಇಂದ್ರ ತನ್ನ ರಥದ ಜೊತೆಗೆ ಕಾಣಿಸಿಕೊಂಡಾಗ, “ನಾಯಿಯೂ ನನ್ನ ಜೊತೆಗೆ ಬರಬೇಕು,” ಎಂದು ಯುದಿಷ್ಟಿರ ವಾದಿಸುತ್ತಾನೆ. “ಎಲ್ಲರಿಗೂ ಸ್ವರ್ಗ ಸಿಗಲಾರದು,” ಎಂದು ಇಂದ್ರ ಅದಕ್ಕೆ ಒಪ್ಪದೆ ಇದ್ದಾಗ, “ನಾಯಿ ನನ್ನ ಪ್ರಾಮಾಣಿಕ ಸಹಪಯಣಿಗನಾಗಿತ್ತು. ಅದು ನನಗೆ ಸ್ವಾರ್ಥರಹಿತ ಪ್ರೇಮ ನೀಡಿ ಸಹಾಯ ಬೇಡಿದೆ. ನಾಯಿಯನ್ನು ತೊರೆಯುವ ನೋವಿನ ಮುಂದೆ ಸ್ವರ್ಗದ ಸುಖಗಳು ಏನೂ ಅಲ್ಲ. ನಾಯಿಯನ್ನು ತೊರೆಯಬೇಕಾದಂತಹ ತಪ್ಪು ಅದೇನೂ ಮಾಡಿಲ್ಲ. ನನ್ನ ಪತ್ನಿ ಮತ್ತು ಸಹೋದರರಿಗಿದ್ದ ದೌರ್ಬಲ್ಯವೂ ಅದಕ್ಕಿಲ್ಲ. ಅದಕ್ಕೆ ಸ್ವರ್ಗದಲ್ಲಿ ಜಾಗವಿಲ್ಲದಿದ್ದಲ್ಲಿ ನಾನೂ ಬರುವುದಿಲ್ಲ,” ಎಂದು ಯುದಿಷ್ಟಿರ ಪಟ್ಟುಹಿಡಿಯುತ್ತಾನೆ. ನಂತರ, ಧರ್ಮದೇವತೆಯೇ ನಾಯಿಯ ಸ್ವರೂಪದಲ್ಲಿ ಯುದಿಷ್ಟಿರನ ಜೊತೆಗಿದ್ದರು ಎನ್ನುವುದನ್ನು ಇಂದ್ರ ವಿವರಿಸುತ್ತಾನೆ. ಸ್ವರ್ಗಕ್ಕೆ ಸೇರಿಸುವ ಮೊದಲು ಇಂದ್ರ ಯುದಿಷ್ಟಿರನ ನೈತಿಕ ಮೌಲ್ಯವನ್ನು ಹೀಗೆ ಪರೀಕ್ಷೆಗೆ ಒಡ್ಡಿರುತ್ತಾನೆ. ಮಹಾಭಾರತದಲ್ಲಿ ಮಾತ್ರವಲ್ಲ, ಹಿಂದೂ ಧರ್ಮದಲ್ಲೂ ನಾಯಿಗೆ ಗೌರವದ ಸ್ಥಾನ ಕೊಟ್ಟಿರುವುದಕ್ಕೆ ಹಲವು ಉದಾಹರಣೆಗಳಿವೆ.

ಕರ್ನಾಟಕದಲ್ಲೇ ಗಮನಿಸಿದಲ್ಲಿ, ಬಿಜೆಪಿಯು ಚಿಕ್ಕಮಗಳೂರಿನ ದತ್ತಪೀಠಕ್ಕಾಗಿ ಬಹಳ ದೊಡ್ಡ ಹೋರಾಟವನ್ನು ಮಾಡಿರುವುದನ್ನು ಹೇಳಿಕೊಳ್ಳುತ್ತಲೇ ಇದೆ. ಇಂದಿಗೂ ದತ್ತಪೀಠದ ಹೆಸರಿನಲ್ಲಿ ರಾಜ್ಯದಲ್ಲಿ ಬಿಜೆಪಿ ರಾಜಕೀಯ ಹೋರಾಟ ನಡೆದೇ ಇದೆ. ಆದರೆ ದತ್ತರ ಜೊತೆಗಾರರಾಗಿರುವ ನಾಲ್ಕು ನಾಯಿಗಳ ಬಗ್ಗೆ ಬಿಜೆಪಿ ನಾಯಕರಿಗೆ ಏಕೆ ಇಷ್ಟೊಂದು ಕೀಳು ಭಾವನೆ? ಗುರುದತ್ತನ ಚಿತ್ರವನ್ನು ಸದಾ ನಾಲ್ಕು ವಿಭಿನ್ನ ಬಣ್ಣದ ನಾಯಿಗಳ ಜೊತೆಗೇ ಕಾಣಬಹುದು. ಈ ನಾಲ್ಕು ನಾಯಿಗಳು ನಾಲ್ಕು ವೇದಗಳನ್ನು, ನಾಲ್ಕು ಯುಗಗಳನ್ನು ಮತ್ತು ಪರ, ಪಶ್ಯಂತಿ, ಮದ್ಯಮ, ವಿಖಾರಿ ಜಗತ್ತಿನ ನಾಲ್ಕು ಸ್ಥಿತಿಗಳನ್ನು ಸೂಚಿಸುತ್ತವೆ ಎನ್ನಲಾಗುತ್ತದೆ. ಹಾಗೆಯೇ ಅಸ್ತಿತ್ವ, ಜಾಗೃತಿ, ಆಲೋಚನೆ ಮತ್ತು ಕಾರ್ಯವನ್ನೂ ಈ ನಾಲ್ಕು ನಾಯಿಗಳು ಪ್ರತಿನಿಧಿಸುತ್ತವೆ ಎನ್ನಲಾಗಿದೆ.

ಇದನ್ನೂ ಓದಿ : ಅರಣ್ಯ ಇಲಾಖೆಗೆ ಸೇರಿದ ಶ್ರೀಗಂಧ ನೆಡುತೋಪಿನ ಪಹರೆಗೆ ಮುಧೋಳ ನಾಯಿ

ಭಾರತದಲ್ಲಿ ವೇದ ಯುಗಕ್ಕಿಂತಲೂ ಹಿಂದೆಯೇ ನಾಯಿಗಳನ್ನು ಬಹಳ ಶುಭಶಕುನವೆಂದು ತಿಳಿಯಲಾಗಿತ್ತು. ದೇವತೆಗಳು ನಾಯಿಗಳ ರೂಪದಲ್ಲಿ ಸಂಚರಿಸುತ್ತಾರೆ ಎನ್ನುವ ಮಟ್ಟಿಗೆ ಪ್ರೀತಿಯಿತ್ತು. ಭಾರತದಲ್ಲಿ ನಾಯಿಗಳನ್ನು ಶೌರ್ಯದ ಪ್ರತೀಕವಾಗಿಯೂ ಕಾಣುತ್ತಿದ್ದ ಯುಗವಿತ್ತು. ವೀರಯೋಧರ ಒಡನಾಡಿಗಳಾಗಿದ್ದ ನಾಯಿಗಳನ್ನು ಸ್ವಾಮಿಭಕ್ತಿ ಸ್ವರೂಪವಾಗಿ ಮತ್ತು ಪ್ರಾಮಾಣಿಕತೆಯ ಸ್ವರೂಪವಾಗಿ ನೋಡಲಾಗುತ್ತದೆ. ನಾಯಿಗಳಿಗೆ ಮಾನವರನ್ನು ಮೀರಿಸಿದ ಗ್ರಹಣ ಶಕ್ತಿ ಇದೆಯೆನ್ನುವುದೂ ಸಾಬೀತಾಗಿರುವ ವಿಚಾರ. ಗ್ರೀಕ್ ಪೌರಾಣಿಕ ಕತೆಗಳಲ್ಲಿ ಮೂರು ತಲೆಯ ನಾಯಿ ಹೈಡ್ರಾ ಸ್ವರ್ಗ ಮತ್ತು ನರಕದ ಬಾಗಿಲನ್ನು ಕಾಯುತ್ತಿರುವ ಉಲ್ಲೇಖವಿದೆ. ಇಂದಿಗೂ ಕಾವಲು ಮತ್ತು ಜಾಗೃತಿ ಎನ್ನುವುದು ನಾಯಿಯ ಮತ್ತೊಂದು ಹೆಸರಾಗಿವೆ.

ಕೇವಲ ಸ್ವರ್ಗದಲ್ಲಿ ಮಾತ್ರವಲ್ಲ, ನಾಯಿಗಳಿಗೆ ಪ್ರೀತಿ ತೋರಿಸಿದರೆ ಅವುಗಳು ನರಕಕ್ಕೂ ನಮ್ಮ ಜೊತೆಗೆ ಬರಲು ಸಿದ್ದವಾಗುತ್ತವೆ. ನಾಯಿಗಳಿಗೆ ಮಾತ್ರವೇ ಇರುವ ವಿಶೇಷ ಗುಣವಿದು. ತಮ್ಮ ಹೃದಯವನ್ನೇ ಮಾಲೀಕನಿಗೆ ಕೊಟ್ಟುಬಿಡುತ್ತವೆ. ಹೀಗಾಗಿ, ಅವುಗಳನ್ನು ತೊರೆಯುವುದು ಅಥವಾ ಹೀಯಾಳಿಸಲು ಉದಾಹರಣೆಯಾಗಿ ತೆಗೆದುಕೊಳ್ಳುವುದು ಧರ್ಮದೇವತೆಗೆ ಮಾಡಿದ ಅವಹೇಳನ ಎನ್ನಬಹುದು. ಆದ್ದರಿಂದ ಮೋದಿಯವರೇ, ನಾಯಿಗಳನ್ನು ಗೌರವಿಸಲು ನೀವು ನಾಯಿ ಪ್ರೇಮಿ ಆಗಿರಬೇಕಿಲ್ಲ, ಆದರೆ ಮತ್ತೊಬ್ಬರು ಅದನ್ನು ಪ್ರೀತಿಸುವುದನ್ನು ಸೂಚ್ಯವಾಗಿ ಅವಹೇಳನ ಮಾಡುವ ಅಧಿಕಾರವೂ ನಿಮಗಿರುವುದಿಲ್ಲ, ಅಲ್ಲವೇ?

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More