ಅಂಕಿ-ಅಂಶಗಳ ಮೂಲಕ ಮೋದಿ ಸರ್ಕಾರದ ಆರ್ಥಿಕ ವೈಫಲ್ಯ ಬಿಚ್ಚಿಟ್ಟ ಮನಮೋಹನ್ ಸಿಂಗ್‌

ಕಾಂಗ್ರೆಸ್‌ ವಿರುದ್ಧ ಮುಗಿಬೀಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ವೈಫಲ್ಯವನ್ನು ಅಂಕಿ-ಅಂಶಗಳ ಮೂಲಕ ಬಯಲು ಮಾಡುವ ಯತ್ನ ನಡೆಸಿದ್ದಾರೆ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌. ಮೋದಿ ಅವರು ಪ್ರಧಾನಿ ಸ್ಥಾನದ ಘನತೆ ಹಾಳು ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವು ಪ್ರಚಾರ ನಡೆಸುತ್ತಿರುವ ಎಲ್ಲ ಭಾಗಗಳಲ್ಲೂ ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗೆ ೭೦ ವರ್ಷದ ಕಾಂಗ್ರೆಸ್ ಆಡಳಿತ ಕಾರಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು, “ಮೋದಿ ಅವರು ಸಾರ್ವಜನಿಕ ಸಭೆಗಳಲ್ಲಿ ಎದುರಾಳಿಗಳ ಬಗ್ಗೆ ಬಳಸುತ್ತಿರುವ ಪದಗಳನ್ನು ದೇಶದ ಯಾವುದೇ ಪ್ರಧಾನ ಮಂತ್ರಿ ಮಾಡಿಲ್ಲ. ಮೋದಿ ಅವರು ಪ್ರಧಾನಿ ಕಾರ್ಯಾಲಯದ ಘನತೆಗೆ ತಗ್ಗಿಸಿದ್ದಾರೆ. ಇದು ರಾಷ್ಟ್ರದ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ,” ಎಂದು ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಆರ್ಥಿಕತೆ ತಲುಪಿರುವ ಹೀನಾಯ ಸ್ಥಿತಿಯನ್ನು ಅಂಕಿ-ಅಂಶಗಳ ಸಹಿತ ಮೋದಿ ಅವರಿಗೆ ನೆನಪಿಸಿರುವ ಮನಮೋಹನ್‌ ಸಿಂಗ್‌ ಅವರು, “ಹಸಿರು ಕ್ರಾಂತಿ, ಆರ್ಥಿಕತೆಯ ಉದಾರೀಕರಣ, ಆಹಾರದ ಹಕ್ಕು, ಮಾಹಿತಿ ಹಕ್ಕು ಸೇರಿದಂತೆ ಹಲವು ಕ್ರಾಂತಿಕಾರಕ ಕಾಯ್ದೆಗಳ ಅನುಷ್ಠಾನ ಜಾರಿಗೊಳಿಸಿದ್ದು ಯಾರ ಸರ್ಕಾರ ಎಂಬುದನ್ನು ಮೋದಿ ಮರೆತುಬಿಟ್ಟರೇ?” ಎಂದು ಪ್ರಶ್ನಿಸಿದ್ದಾರೆ.

ಆರ್ಥಿಕ ವಿಚಾರಗಳು ಉಂಟು ಮಾಡುವ ರಾಜಕೀಯ ಪರಿಣಾಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿರುವ ಮನಮೋಹನ್‌ ಸಿಂಗ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಆರ್ಥಿಕ ಶಿಸ್ತು, ಮೌಲಸೌಕರ್ಯ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಬೆಳವಣಿಗೆಯಲ್ಲಿ ಬೆಂಗಳೂರಿನ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸಿರುವ ಮಾಜಿ ಪ್ರಧಾನಿ, “ರಾಜಕೀಯ ಕಾರಣಕ್ಕಾಗಿ ಬೆಂಗಳೂರಿಗೆ ಮೋದಿ ಅವರು ಅವಮಾನ ಮಾಡಿದ್ದಾರೆ,” ಎಂದು ದೂರಿದ್ದಾರೆ.

“ಸಿದ್ದರಾಮಯ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಪಡಿಸುವಲ್ಲಿ ವಿಫಲವಾಗಿದೆ, ಕರ್ನಾಟಕ ಸರ್ಕಾರ ಕೊಲೆಗಡುಕರಿಗೆ ನೆರವಾಗುತ್ತಿದೆ. ರಾಜ್ಯದ ಬೊಕ್ಕಸವನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದ್ದು, ರಾಜ್ಯದ ಆರ್ಥಿಕ ಸ್ಥಿತಿ ಅಧೋಗತಿಗೆ ಇಳಿದಿದೆ ಎನ್ನುತ್ತಲೇ ಬಿಜೆಪಿ ಅಧಿಕಾರಕ್ಕೆ ಬಂದರೆ ೨೦೨೨ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳುತ್ತಿರುವ ಮೋದಿ ಅವರಿಗೆ ದೇಶದ ಆರ್ಥಿಕತೆಯ ತಿಳಿವಳಿಕೆ ಇದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಸಮಚಿತ್ತದಿಂದ ಅಂಕಿ-ಅಂಶಗಳ ಸಮೇತ ತರ್ಕಬದ್ಧವಾಗಿ ತಮ್ಮ ವಾದದ ಮೂಲಕ ಕೇಂದ್ರ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುವ ಯತ್ನ ಮಾಡಿದ ಸಿಂಗ್, ಎಲ್ಲಿಯೂ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಯತ್ನವನ್ನು ಮಾಡಲಿಲ್ಲ. ನಿಷ್ಕ್ರಿಯ ಸಾಲ, ರೈತರ ಸಮಸ್ಯೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆಯಾದರೂ ಅದನ್ನು ಬಳಸಿಕೊಂಡು ಜನರ ಮೇಲಿನ ತೆರಿಗೆ ಹೊರೆ ಇಳಿಸಲು ಮೋದಿ ಸರ್ಕಾರ ವಿಫಲವಾಗಿದೆ ಎಂದಿರುವ ಅವರು, ಮೋದಿಯವರ ಚುನಾವಣಾ ಆರೋಪಗಳಿಗೆ ಉತ್ತರಿಸುತ್ತಲೇ ದೇಶದ ಆರ್ಥಿಕ ಸ್ಥಿತಿಗೆ ಕನ್ನಡಿ ಹಿಡಿದಿದ್ದಾರೆ. ಮನಮೋಹನ್‌ ಸಿಂಗ್‌ ಅವರ ಸುದ್ದಿಗೋಷ್ಠಿಯ ಸಾರಸಂಗ್ರಹ ಇಂತಿದೆ.

 • ಭಾರತವು ಜಾಗತಿಕವಾಗಿ ಮೂರನೇ ದೊಡ್ಡ ಆರ್ಥಿಕತೆ ಹೊಂದಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ವ್ಯವಸ್ಥಿತವಾಗಿ ಹಾಳುಮಾಡುತ್ತಿದೆ. ದೇಶವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ಎತ್ತಿತೋರಿಸಿದವರನ್ನೆ ಮಾತನಾಡದಂತೆ ಮಾಡಲು ಯತ್ನಿಸಲಾಗುತ್ತಿದೆ. ದೇಶದಲ್ಲಿ ಹೊಸ ವಿಚಾರಗಳ ಚರ್ಚೆ ಮತ್ತು ಸಂವಾದಕ್ಕೆ ಬೇಕಾದ ವಾತಾವರಣ ಮಾಯವಾಗುತ್ತಿದೆ.
 • ದೇಶದ ಆರ್ಥಿಕ ನೀತಿಗಳು ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಆದ್ದರಿಂದ ಅತ್ಯಂತ ಎಚ್ಚರದಿಂದ ಆರ್ಥಿಕ ನೀತಿ, ನಿರೂಪಣೆ ಜಾರಿ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರದ ಆಘಾತಕಾರಿ ನೀತಿಗಳ ಬಗ್ಗೆ ನಾವು ಉತ್ತರ ಬಯಸಿದಾಗಲೆಲ್ಲಾ ಸಕಾರಾತ್ಮಕ ಉದ್ದೇಶ ಹೊಂದಲಾಗಿದೆ ಎನ್ನಲಾಗುತ್ತಿದೆ. ಆದರೆ, ಮೋದಿ ಸರ್ಕಾರ ಹೇಳುವಂತೆ ಉದ್ದೇಶ ಉತ್ತಮವಾಗಿದ್ದರೆ ದೇಶದ ಆರ್ಥಿಕ ಸ್ಥಿತಿ ಯಾಕೆ ಇಷ್ಟು ಕೆಳಮಟ್ಟಕ್ಕೆ ಇಳಿದಿದೆ?
 • ಯೋಜನೆಗಳ ಸಾಧಕ-ಬಾಧಕಗಳನ್ನು ಸರಿಯಾಗಿ ತೂಕ ಮಾಡಿ ಅನುಷ್ಠಾನಗೊಳಿಸದೇ ಇರುವುದರಿಂದ ಹೊಸ ಪೀಳಿಗೆ ಇದಕ್ಕೆ ತಕ್ಕ ಬೆಲೆ ತೆರುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಕೂಲ ಸಂದರ್ಭದಲ್ಲೂ ಯುಪಿಎ ನೇತೃತ್ವದ ಕೇಂದ್ರ ಸರ್ಕಾರವು ಶೇ.೭.೮ರಷ್ಟು ಅಭಿವೃದ್ಧಿ ದರ ಸಾಧಿಸಿತ್ತು. ಆದರೆ, ಅಂತಾರಾಷ್ಟ್ರೀಯ ಪರಿಸ್ಥಿತಿ ಅನುಕೂಲಕರವಾಗಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾಗಿದ್ದರೂ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರಕ್ಕಿಂತಲೂ ಕಡಿಮೆ ಅಭಿವೃದ್ಧಿ ದರ ಸಾಧಿಸಿರುವುದು ಏಕೆ?
 • ಅಪನಗದೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆಯಂಥ ಕ್ರಮಗಳಿಂದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸಾವಿರಾರು ಉದ್ಯೋಗ ನಷ್ಟವಾಗಿವೆ. ಇದರ ಜೊತೆಗೆ ರಫ್ತಿನ ಪ್ರಮಾಣವು ಕಳೆದ ೧೪ ವರ್ಷಗಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ವಿಯಾಟ್ನಾಂನಂಥ ಸಣ್ಣ ದೇಶಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯ ಪೂರಕ ವಾತಾವರಣದ ಲಾಭ ಪಡೆದು ರಫ್ತು ಹೆಚ್ಚಿಸಿರುವ ಸಂದರ್ಭದಲ್ಲಿ ಭಾರತ ಸಾಕಷ್ಟು ಹಿಂದೆ ಬಿದ್ದಿರುವುದು ಏಕೆ?
 • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಹೆಚ್ಚಾಗಿದೆ. ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ತೈಲ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇ.೬೭ರಷ್ಟು ಕಡಿಮೆಯಾಗಿತ್ತು. ಆದರೆ, ಭಾರತದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಶೇ.೧೧೦ ರಷ್ಟು ಏರಿಕೆಯಾಗಿದೆ.
 • ಹೆಚ್ಚುವರಿ ತೆರಿಗೆಯಿಂದ ೧೦ ಲಕ್ಷ ಕೋಟಿ ರುಪಾಯಿ ಸಂಗ್ರಹವಾಗುತ್ತದೆ ಎಂದು ಬಿಜೆಪಿ ಸರ್ಕಾರ ಅಂದಾಜಿಸಿದೆ. ಆದರೆ, ಈ ಹಣವನ್ನು ಯಾವುದರಲ್ಲಿ ತೊಡಗಿಸಲಾಗುತ್ತಿದೆ ಎಂಬುದಕ್ಕೆ ಬಿಜೆಪಿ ದೇಶದ ಜನರಿಗೆ ಉತ್ತರಿಸಬೇಕಿದೆ.
 • ಬ್ಯಾಂಕಿಂಗ್‌ ವಲಯ ಸುಭದ್ರವಾಗಿದ್ದರೆ ಮಾತ್ರ ಆರ್ಥಿಕತೆ ಆರೋಗ್ಯಕರವಾಗಿರಲು ಸಾಧ್ಯ. ಆದರೆ, ಮೋದಿ ಸರ್ಕಾರದ ಕೆಟ್ಟ ನಿರ್ವಹಣೆಯಿಂದ ಹೊಸ ಹೂಡಿಕೆಗಾಗಿ ಬ್ಯಾಂಕ್‌ಗಳು ಹಣ ನೀಡುವ ಅಥವಾ ಖಾಸಗಿ ವಲಯ ಹೂಡಿಕೆ ಮಾಡಲಾಗದ ಹಂತ ತಲುಪಿವೆ.
 • ೨೦೧೩ರ ಸೆಪ್ಟೆಂಬರ್‌ನಲ್ಲಿ ೨೮,೪೧೬ ಕೋಟಿ ರುಪಾಯಿಯಷ್ಟಿದ್ದ ನಿಷ್ಕ್ರಿಯ ಸಾಲದ ಪ್ರಮಾಣವು ೨೦೧೭ರ ಸೆಪ್ಟೆಂಬರ್‌ ವೇಳೆಗೆ ೧.೧೧ ಲಕ್ಷ ಕೋಟಿಗೆ ಏರಿಕೆಯಾಗಿದೆ. ಆರ್ಥಿಕ ವಂಚನೆ ಮಾಡಿರುವವರು ದೇಶ ತೊರೆಯುತ್ತಿದ್ದಾರೆ. ಮೋದಿ ಏನು ಮಾಡುತ್ತಿದ್ದಾರೆ?
 • ಕೆಟ್ಟ ಆರ್ಥಿಕ ನಿರ್ವಹಣೆಯಿಂದ ಜನರು ಬ್ಯಾಂಕಿಂಗ್‌ ವಲಯದ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅತ್ಯಂತ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ಈಚೆಗೆ ಎಟಿಎಂಗಳಲ್ಲಿ ಹಣದ ಅಭಾವ ಸೃಷ್ಟಿಯಾಗಿದ್ದನ್ನು ಸರ್ಕಾರ ಸಮರ್ಥವಾಗಿ ನಿಭಾಯಿಸಬಹುದಿತ್ತು. ಆದರೆ, ಸರ್ಕಾರ ಅದನ್ನು ಮಾಡಲಿಲ್ಲ. ಇದಕ್ಕೆ ಬದಲಾಗಿ ಸರ್ಕಾರ ನೆಪ ಮತ್ತು ಪಿತೂರಿಗೆ ಮುಂದಾಗುತ್ತಿದೆ.
 • ಕಳೆದ ಮೂರು ವರ್ಷಗಳಲ್ಲಿ ೨.೪೧ ಲಕ್ಷ ಕೋಟಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ (ಪಿಎಸ್‌ಯು) ಸಾಲಮನ್ನಾ ಮಾಡಲಾಗಿದೆ. ಆದರೆ, ರೈತರ ಸಾಲಮನ್ನಾ ಮಾಡಲು ಸರ್ಕಾರ ಚಿಂತನೆ ಮಾಡುತ್ತಿಲ್ಲ. ಪಿಎಸ್‌ಯು ಸಾಲಮನ್ನಾ ಮಾಡಿದ ಮೇಲೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಬಂಡವಾಳ ಎಲ್ಲಿಂದ ಬರುತ್ತದೆ?
 • ಸಾಕಷ್ಟು ವರ್ಷಗಳ ಶ್ರಮದಿಂದ ಕಟ್ಟಿ ನಿಲ್ಲಿಸಿದ್ದ ದೇಶದ ಆರ್ಥಿಕತೆಯನ್ನು ವಿವೇಚನಾರಹಿತವಾಗಿ ಕೆಡವಲಾಗಿದೆ. ಕಳೆದ ಮೂರು ವರ್ಷಗಳ ಆಡಳಿತದಲ್ಲಿ ಮೋದಿ ಸರ್ಕಾರವು ಯುಪಿಎ ಸರ್ಕಾರದ ಸಾಧನೆಯನ್ನು ಪಾತಾಳಕ್ಕಿಳಿಸಿದೆ. ೨೦೨೨ರ ವೇಳೆಗೆ ರೈತರ ಆದಾಯವನ್ನು ದ್ವಿಗೊಣಗೊಳಿಸುವ ಕೇಂದ್ರ ಸರ್ಕಾರದ ಭರವಸೆ ವಾಸ್ತವಕ್ಕೆ ದೂರವಾಗಿದೆ.
 • ಯುಪಿಎ-೨ ಅಧಿಕಾರಾವಧಿಯಲ್ಲಿ ಎಂಎಸ್‌ಪಿ ವಾರ್ಷಿಕ ಬೆಳವಣಿಗೆ ದರ ಶೇ.೧೯.೩ರಷ್ಟಿತ್ತು. ಎನ್‌ಡಿಎ ಅವಧಿಯಲ್ಲಿ ಅದು ಶೇ.೩.೬ಕ್ಕೆ ಕುಸಿದಿದೆ. ಕೃಷಿ ಬೆಳವಣಿಗೆ ದರವು ಯುಪಿಎ ಅವಧಿಯಲ್ಲಿದ್ದ ಅರ್ಧದಷ್ಟಕ್ಕೆ ಕುಸಿದಿದೆ. ಶೇ. ೨೬ರಷ್ಟಿದ್ದ ಕೃಷಿ ಉತ್ಪನ್ನ ರಫ್ತು ಶೇ.೨೧ಕ್ಕೆ ಕುಸಿದಿದೆ. ಇದೇ ಸಂದರ್ಭದಲ್ಲಿ ಕೃಷಿ ಆಮದು ಶೇ.೬೦ರಷ್ಟು ಏರಿಕೆಯಾಗಿದೆ. ೨೦೨೨ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸಲಾಗುವುದು ಎನ್ನುವುದಕ್ಕೆ ಮೋದಿ ಸರ್ಕಾರ ಜನರಿಗೆ ಉತ್ತರಿಸಬೇಕು.
 • ದೇಶದ ಎಲ್ಲ ಸಮಸ್ಯೆಗಳಿಗೂ ಕೇಂದ್ರ ಸರ್ಕಾರದ ೭೦ ವರ್ಷಗಳ ಆಡಳಿತ ಕಾರಣ ಎಂದು ಮೋದಿ ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರದ ಜಾರಿಗೊಳಿಸಿದ ಹಸಿರು ಕ್ರಾಂತಿಯಿಂದಾಗಿ ದೇಶದ ಕೃಷಿ ಕ್ಷೇತ್ರದ ಸುಧಾರಣೆಯಾಗಿದೆ. ಇದರಿಂದ ದೇಶದ ಆಹಾರ ಉತ್ಪನ್ನಗಳ ರಫ್ತು ಹೆಚ್ಚಾಗಿದೆ. ೧೯೯೧-೯೬ರ ಅವಧಿಯಲ್ಲಿ ಪಿ ವಿ ನರಸಿಂಹ ರಾವ್‌ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ತಾವು ಹಣಕಾಸು ಮಂತ್ರಿಯಾಗಿದ್ದಾಗ ಜಾರಿಗೊಳಿಸಿದ ಆರ್ಥಿಕ ಉದಾರೀಕರಣ, ತಾವು ಪ್ರಧಾನಿಯಾಗಿ ಜಾರಿಗೊಳಿಸಿದ ಮಾಹಿತಿ ಹಕ್ಕು, ಶಿಕ್ಷಣ ಹಕ್ಕು, ಆಹಾರ ಭದ್ರತಾ ಹಕ್ಕು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಭೂಸ್ವಾದೀನ ಹಾಗೂ ಪರಿಹಾರ ಕಾಯ್ದೆ, ಎಸ್‌ಟಿ ಮತ್ತು ಇತರ ಸಮುದಾಯಗಳಿಗೆ ಅರಣ್ಯ ಹಕ್ಕು, ಹೈದರಾಬಾದ್‌ ಕರ್ನಾಟಕದ ಬೆಳವಣಿಗೆಗೆ ವಿಶೇಷ ಮಾನ್ಯತೆ ನೀಡುವ ೩೭೧ಜೆ ಬಗ್ಗೆ ಮೋದಿ ಅವರಿಗೆ ತಿಳಿದಿಲ್ಲವೇ?
 • ನಗರಾಭಿವೃದ್ಧಿಗೆ ಸಂಬಂಧಿಸಿದಂತೆ ಜವಹರಲಾಲ್‌ ನೆಹರೂ ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆ-ನರ್ಮ್) ಯೋಜನೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿಲು ಪ್ರೇರಣೆಯಾಗಿದ್ದು ಬೆಂಗಳೂರು. ಸಾಮಾಜಿಕ ಉದ್ಯಮಿಗಳಿಂದ ಈ ಐಡಿಯಾ ದೊರೆತಿದ್ದು, ಅದನ್ನು ಜಾರಿಗೆ ತರಲಾಯಿತು. ಇದನ್ನು ಅನುಷ್ಠಾನಗೊಳಿಸಲು ಸಾಕಷ್ಟು ಅನುದಾನದ ಅಗತ್ಯವಿದೆ. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರ ಅಮೃತ್‌, ಸ್ಮಾರ್ಟ್‌ ಸಿಟಿಯಂಥ ಪದಪುಂಜಗಳನ್ನು ಸೃಷ್ಟಿಸಿದೆ. ಆದರೆ, ಅವುಗಳು ಅತ್ಯಂತ ಕೆಟ್ಟದಾಗಿ ಅನುಷ್ಠಾನಗೊಂಡಿವೆ.
 • ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಟೆಂಡರ್‌ ಶ್ಯೂರ್ ವ್ಯವಸ್ಥೆ ಜಾರಿಗೊಳಿಸುವ ಮೂಲಕ ನಗರಾಭಿವೃದ್ಧಿಗೆ ಆದ್ಯತೆ ನೀಡಿದೆ. ಮೆಟ್ರೋ ಸಂಪರ್ಕ ಗಣನೀಯವಾಗಿ ಹೆಚ್ಚಾಗಿದೆ. ಉಪನಗರ ರೈಲು ಯೋಜನೆಗೆ ರಾಜ್ಯ ಸರ್ಕಾರ ಶೇ.೮೦ರಷ್ಟು ಹೂಡಿಕೆ ಮಾಡುತ್ತಿದೆ. ಈ ಮೂಲಕ ಬೆಂಗಳೂರಿನಲ್ಲಿ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
 • ಉದ್ಯಮಶೀಲತೆಗೆ ಅನುಕೂಲಕರವಾದ ವಾತಾವರಣ ಕರ್ನಾಟಕದಲ್ಲಿದೆ. ಅದಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆವಿಷ್ಕಾರಕ ಎಲವೇಟ್‌ ಎಂಬ ನೀತಿ ಜಾರಿಗೊಳಿಸಿದ್ದು, ಬೆಂಗಳೂರು ದೇಶದ ಸ್ಟಾರ್ಟ್‌ಅಪ್‌ ನಗರ ಎಂಬ ಹಿರಿಮೆಗೆ ಪಾತ್ರವಾಗಿದೆ. ಕೈಗಾರಿಕೆಗಳಿಗೆ ಉತ್ತೇಜನ ನೀಡಿದ್ದರಿಂದ ರಾಜ್ಯದಲ್ಲಿ ಸಾಕಷ್ಟು ಹೂಡಿಕೆ ಪ್ರಸ್ತಾವಗಳು ವಾಸ್ತವ ರೂಪ ಪಡೆದಿವೆ. ಇದು ಗುಜರಾತ್‌ ಸೇರಿದಂತೆ ಬೇರೆಲ್ಲಾ ರಾಜ್ಯಗಳನ್ನು ಕರ್ನಾಟಕ ಹಿಂದಿಕ್ಕಿದೆ.
 • ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಹೇಳಿದ್ದರು. ಆದರೆ, ೧೫-೨೪ ವಯೋಮಾನದಲ್ಲಿ ೭೪ ಲಕ್ಷ ಉದ್ಯೋಗಗಳನ್ನು ನಾಶ ಮಾಡಲಾಗಿದೆ. ಉದ್ಯಮಕ್ಕೆ ಅನುಕೂಲಕರ ವಾತಾವರಣವಿಲ್ಲದೇ ಇರುವುದಕ್ಕೆ ಈ ಸಮಸ್ಯೆಯಾಗಿದೆ. ಉದ್ಯೋಗ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಮಾನವ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸದೇ ಇದ್ದರೆ ಅದು ವಿನಾಶಕ್ಕೆ ಕಾರಣವಾಗಬಹುದು ಎಂಬುದನ್ನು ಅರಿಯಬೇಕು.
 • ನವೋದ್ಯಮ (ಸ್ಟಾರ್ಟಪ್‌) ನೀತಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಬದಲಾಗುತ್ತಿರುವ ಬೇಡಿಕೆ ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಿದ ಈ ನೀತಿಯಿಂದಾಗಿ ಬೆಂಗಳೂರು ನಗರವು ದೇಶದ ಒಟ್ಟಾರೆ ಸಾಫ್ಟ್‌ವೇರ್‌ ರಫ್ತಿನಲ್ಲಿ ೫೦ ಬಿಲಿಯನ್‌ ಡಾಲರ್‌ ಪಾಲು ಹೊಂದಿದೆ.
 • ೨೦೧೫-೧೬ ಅವಧಿಯಲ್ಲಿ ಸ್ಟಾಫ್ಟ್‌ವೇರ್ ರಫ್ತು ಶೇ.೭.೩ಕ್ಕೆ ಕುಸಿದಿದ್ದು, ಬೆಂಗಳೂರು ಐಟಿ ರಾಜಧಾನಿ ಎಂಬ ಹಿರಿಮೆಗೆ ಹೊಡೆತ ಬಿದ್ದಿದೆ. ಅಮೆರಿಕಾದ ವೀಸಾ ನೀತಿಯಿಂದ ದೇಶದ ಸಾಫ್ಟ್‌ವೇರ್‌ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಮೋದಿ ಸರ್ಕಾರವು ಎಚ್‌೧, ಎಚ್‌೪ ಮತ್ತು ಎಲ್‌೧ ಸೇರಿದಂತೆ ವಿವಿಧ ಮಾದರಿಯ ವೀಸಾ ಕೊಡಿಸಲು ಕ್ರಮಕೈಗೊಳ್ಳಬೇಕು. ಈ ಮೂಲಕ ದೇಶದ ಎಂಜಿನಿಯರ್‌ಗಳ ಹಿತಾಶಕ್ತಿ ಕಾಯಲು ಮೋದಿ ಅವರು ಬದ್ಧತೆ ತೋರಬೇಕು.
 • ಭಾರತದ ಸಂವಿಧಾನದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು ಎಂದು ಉಲ್ಲೇಖಿಸಲಾಗಿದೆ. ಆದರೆ, ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಇದನ್ನು ನಾಶಪಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಮೋದಿ ಸರ್ಕಾರದ ಮಂತ್ರಿಗಳು ಕಂದಾಚಾರಿ ಹೇಳಿಕೆ ನೀಡುತ್ತಿದ್ದಾರೆ. ಇದನ್ನು ತಡೆಯುವ ಬದ್ಧತೆಯನ್ನು ಪ್ರಧಾನಿ ಮೋದಿ ಅವರು ಪ್ರದರ್ಶಿಸಬೇಕಿದೆ.
ಇದನ್ನೂ ಓದಿ : ದೇಶದ ಕರಾಳ ವಾತಾವರಣ ಖಂಡಿಸಿ ಮೋದಿಗೆ ಪತ್ರ ಬರೆದ ನಿವೃತ್ತ ಅಧಿಕಾರಿಗಳು
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More