ಪ್ರಧಾನಿ ಮೋದಿಯವರು ತಮ್ಮದೇ ಪರಿವಾರದ ಐಕಾನ್‌ಗಳನ್ನು ಬದಿಗೆ ಸರಿಸಿದ್ದೇಕೆ?

ಬಿಜೆಪಿ-ಸಂಘಪರಿವಾರದಲ್ಲಿ ಸಾಕಷ್ಟು ಐಕಾನ್‌ಗಳು ಇದ್ದಾರೆ. ಹಾಗಿದ್ದರೂ ಅವರನ್ನು ಮರೆತು ಪ್ರಧಾನಿ ನರೇಂದ್ರ ಮೋದಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್‌, ಬಿ ಆರ್‌ ಅಂಬೇಡ್ಕರ್‌ ಮಾತ್ರವಲ್ಲದೆ, ಎಸ್ ನಿಜಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಸ್ಮರಿಸುತ್ತಿರುವುದು ಚರ್ಚೆಗೆ ಕಾರಣವಾಗಿದೆ

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಕಳೆದ ಎರಡು ವಾರಗಳಲ್ಲಿ ೧೪ ಚುನಾವಣಾ ರ‍್ಯಾಲಿಗಳಲ್ಲಿ ಮಾತನಾಡಿದ್ದಾರೆ. ಈ ಭಾಷಣದತ್ತ ಒಂದು ಕಣ್ಣು ಹಾಯಿಸಿದಲ್ಲಿ ಬಹುತೇಕ ಕಾಂಗ್ರೆಸ್ ಹೈಕಮಾಂಡ್ ಮೇಲೆಯೇ ಅವರ ವಾಗ್ದಾಳಿ ಹರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರದ ಮೇಲೂ ಕೆಲವೊಂದು ಮಾತಿನ ಬಾಣಗಳನ್ನು ಅವರು ನೆಟ್ಟಿರುವುದೂ ನಿಜ. ಆದರೆ ಪ್ರಧಾನಿ ಮೋದಿಯವರು ಕೆಲವು ಅಪ್ರಸ್ತುತವೆನಿಸಿದ ವಿಷಯಗಳನ್ನು ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸಿರುವುದು ಈಗ ಬಹಳ ಚರ್ಚೆಯ ವಿಷಯವಾಗಿದೆ. ಮುಖ್ಯವಾಗಿ ಸೇನಾ ಇತಿಹಾಸ, ಸ್ವಾತಂತ್ರ್ಯ ಹೋರಾಟಗಾರರು, ಕಾಂಗ್ರೆಸ್‌ನ ಹಿಂದಿನ ಪ್ರಧಾನಿಗಳು ಯಾರನ್ನು ಗೌರವಿಸಿಲ್ಲ ಮತ್ತು ಯಾರನ್ನು ಅವಮಾನಿಸಿದ್ದಾರೆ ಎಂಬ ವಿಚಾರ, ರಾಷ್ಟ್ರೀಯ ನಾಯಕರೆಂದೇ ಮನ್ನಣೆ ಪಡೆದವರನ್ನು ಕಾಂಗ್ರೆಸ್ ಕಡೆಗಣಿಸಿದೆ ಎನ್ನುವ ಆರೋಪಗಳಿಗೂ ರಾಜ್ಯ ಚುನಾವಣೆಗೂ ಏನು ಸಂಬಂಧ ಎನ್ನುವ ಪ್ರಶ್ನೆಗಳು ಎದ್ದಿವೆ.

ಕರ್ನಾಟಕದಲ್ಲಿ ಆಡಳಿತದಲ್ಲಿದ್ದ ಹಿಂದಿನ ಬಿಜೆಪಿ ಸರ್ಕಾರ ಮತ್ತು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಸರ್ಕಾರದ ಸಾಧನೆಗಳ ಬಗ್ಗೆ ಪ್ರಧಾನಿ ಮೋದಿಯವರು ಹೆಚ್ಚು ಒತ್ತುಕೊಟ್ಟು ಏನೂ ಹೇಳಿಲ್ಲ. ಆದರೆ, ಕರ್ನಾಟಕಕ್ಕೆ ಅಪ್ರಸ್ತುತವೆನಿಸುವ ವಿಚಾರಗಳನ್ನು ಜನರ ಮನಮುಟ್ಟುವಂತೆ ಭಾವನಾತ್ಮಕವಾಗಿ ಬೆಸೆದು ಹೇಳುವುದು ತಮ್ಮೆಲ್ಲ ಭಾಷಣಗಳಲ್ಲಿ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿಯವರು ಕರ್ನಾಟಕ ಚುನಾವಣೆಗೆ ಸಂಬಂಧಿಸಿದಂತೆ ಇಂತಹ ಬಾದರಾಯಣ ಸಂಬಂಧಗಳನ್ನು ಹೆಣೆದು ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ ಕೆಲವು ಉದಾಹರಣೆಗಳನ್ನು ನೋಡಬಹುದು.

ಮೊದಲನೆಯದಾಗಿ, ದೇಶಭಕ್ತಿಯನ್ನು ಮುಂದಿಟ್ಟುಕೊಂಡು ಜನರನ್ನು ಪ್ರಚೋದಿಸಲು ಪ್ರಧಾನಿ ನರೇಂದ್ರ ಮೋದಿಯವರು ಹಲವು ಪ್ರಯತ್ನಗಳನ್ನು ಮಾಡಿದ್ದಾರೆ. ರಾಷ್ಟ್ರಭಕ್ತಿಗೂ ಕರ್ನಾಟಕದ ಚುನಾವಣೆಗೂ ಏನು ಸಂಬಂಧವಿದೆ ಎನ್ನುವುದನ್ನು ಪ್ರಧಾನಿಯವರೇ ಹೇಳಬೇಕು! ಆದರೆ, ಅವರ ಭಾಷಣದ ಕೆಲವು ತುಣುಕುಗಳನ್ನು ಗಮನಿಸೋಣ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ವಿವರವನ್ನು ಮುಂದಿಟ್ಟ ಅವರು, “ಕರ್ನಾಟಕದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಮೊದಲಾದ ವೀರ ಸೇನಾನಿಗಳಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಅವರಿಗೆ ಅಗೌರವ ತೋರಿಸಿರುವುದನ್ನು ಇತಿಹಾಸವೇ ಹೇಳುತ್ತದೆ. ೧೯೪೮ರಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಜನರಲ್ ತಿಮ್ಮಯ್ಯರನ್ನು ಪ್ರಧಾನಿ ನೆಹರು ಮತ್ತು ಆಗಿನ ರಕ್ಷಣಾ ಸಚಿವ ಕೃಷ್ಣ ಮೆನನ್ ಅವರು ಅವಹೇಳನ ಮಾಡಿದ್ದರು,” ಎಂದು ಕಲಬುರಗಿಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದರು. “ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ‘ವಂದೇ ಮಾತರಂ’ಗೆ ಅವಮಾನ ಮಾಡಿದ್ದಾರೆ. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಜವಹರಲಾಲ್ ನೆಹರು ಅನ್ಯಾಯ ಮಾಡಿದ್ದಾರೆ. ಜನರಲ್ ತಿಮ್ಮಯ್ಯ ಬಗ್ಗೆ ಅವರಿಗೆ ಗೌರವವಿಲ್ಲ. ಈಗಿನ ಸೇನಾ ಮುಖ್ಯಸ್ಥರ ಬಗ್ಗೆಯೂ ಕಾಂಗ್ರೆಸ್ ನಾಯಕರಿಗೆ ಗೌರವವಿಲ್ಲ,” ಎನ್ನುವುದು ಪ್ರಧಾನಿ ಮೋದಿ ಆರೋಪ. ಸಿದ್ದರಾಮಯ್ಯನವರು ಈ ಟೀಕೆಗೆ ಉತ್ತರಿಸಿ, “ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪರನ್ನು ಕರ್ನಾಟಕ ಬಹಳ ಗೌರವದಿಂದ ಕಂಡಿದೆ. ಅವರು ಇತಿಹಾಸ ತಿರುಚಲು ಪ್ರಯತ್ನಿಸುತ್ತಿದ್ದಾರೆ,” ಎಂದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಕೊಡಗಿನ ವೀರರು ಎನ್ನುವುದನ್ನು ಬಿಟ್ಟರೆ, ಈಗಿನ ಕರ್ನಾಟಕದ ಚುನಾವಣೆಗೂ ಅವರಿಗೆ ಯಾವುದೇ ಸಂಬಂಧವಿಲ್ಲ. ಅಲ್ಲದೆ, ಸೇನೆ ಮತ್ತು ಆಡಳಿತದ ತಿಕ್ಕಾಟ ಮತ್ತು ಕೆಲವೊಂದು ಅಸಮಧಾನಗಳು ಎಲ್ಲ ರಾಷ್ಟ್ರಗಳ ಇತಿಹಾಸದಲ್ಲೂ ನಿಗೂಢ ರಹಸ್ಯವಾಗಿ ಉಲ್ಲೇಖವಾಗಿ ಇದ್ದೇ ಇರುತ್ತದೆ. ಪ್ರಧಾನಿ ಮೋದಿಯವರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರ ಬಗ್ಗೆ ಹೇಳಿದ ಮಾತುಗಳು ಸತ್ಯಕ್ಕೆ ದೂರವಾಗಿದೆ ಎಂದು ಹಲವು ಇತಿಹಾಸಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಪ್ರಧಾನಿ ನಿಜವೇ ಹೇಳಿದ್ದರೂ, ಇತಿಹಾಸದ ಪರಿಸ್ಥಿತಿಯನ್ನು ಪ್ರಸ್ತುತ ಸ್ಥಿತಿಗೆ ಹೋಲಿಸುವುದು ಸರಿಯಲ್ಲ. ಆಗಿನ ಸಂದರ್ಭ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಆಗಿನ ಆಡಳಿತ ಪ್ರತಿಕ್ರಿಯಿಸಿರುತ್ತದೆ. ಅದನ್ನು ಚುನಾವಣಾ ವಿಷಯವಾಗಿಸುವುದರಿಂದ ಜನರಿಗೆ ಏನು ಉಪಯೋಗವಾಗಲಿದೆ ಎನ್ನುವುದನ್ನು ಬಿಜೆಪಿಯೇ ವಿವರಿಸಬೇಕು.

ದೇಶಭಕ್ತಿಯ ವಿಚಾರವನ್ನು ಕರ್ನಾಟಕ ಚುನಾವಣಾ ವಿಷಯವಾಗಿ ಮುಂದಿಡಲು ಪ್ರಧಾನಿಯವರು ಪದೇಪದೇ ಪ್ರಯತ್ನಿಸಿದ್ದಾರೆ. ಜಮಖಂಡಿಯಲ್ಲಿ ಭಾಷಣ ಮಾಡುತ್ತ ರಾಹುಲ್ ಗಾಂಧಿ ಅವರು ಮುಧೋಳ ನಾಯಿಯಿಂದ ದೇಶಭಕ್ತಿಯ ಪಾಠವನ್ನು ಕಲಿಯಬೇಕು ಎಂದು ನರೇಂದ್ರ ಮೋದಿಯವರು ಸಲಹೆ ನೀಡಿದ್ದಾರೆ. ಮುಧೋಳ ನಾಯಿಗಳ ಬೆಟಾಲಿಯನ್ ಮಾಡಿ ಸೇನೆಗೆ ಸೇರಿಸಿಕೊಳ್ಳುವ ವಿಚಾರವನ್ನು ಮುಂದಿಡುತ್ತಾ ಬಹಳ ಜಾಣತನದಿಂದ ರಾಹುಲ್ ಗಾಂಧಿ ಅವರ ದೇಶಭಕ್ತಿಯ ಜೊತೆಗೆ ಅದನ್ನು ತಳಕು ಹಾಕಿ ಸ್ಥಳೀಯವಾಗಿ ಜನರನ್ನು ಸೆಳೆಯುವ ಪ್ರಯತ್ನ ಅವರದ್ದಾಗಿತ್ತು. ಕೇಂದ್ರ ಸರ್ಕಾರವು ಸ್ಥಳೀಯವಾಗಿ ಹೇಗೆ ಉದ್ಯೋಗಗಳನ್ನು ಕಲ್ಪಿಸಲಿದೆ, ಅಭಿವೃದ್ಧಿಗೆ ಹೇಗೆ ನೆರವಾಗಲಿದೆ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ ಮುಧೋಳ ನಾಯಿಗೂ ದೇಶಭಕ್ತಿಗೂ ಸಂಬಂಧ ಕಲ್ಪಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಯಶಸ್ವಿಯಾದರು. ಪ್ರಧಾನಿ ನರೇಂದ್ರ ಮೋದಿಯವರು ತಾವು ಕರ್ತವ್ಯದಿಂದ ಹೆಸರು ಮಾಡಿದವರು ಎಂದು ಹೇಳುತ್ತಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಕುಟುಂಬದ ಹೆಸರಿನಿಂದ ಪ್ರಚಲಿತದಲ್ಲಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರ ಭಾಷೆ ಬಗ್ಗೆಯೂ ತಮ್ಮ ಭಾಷಣದಲ್ಲಿ ಕಮೆಂಟ್ ಮಾಡಿದ್ದಾರೆ. ಸದ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿದಿರುವ ಸೋನಿಯಾ ಗಾಂಧಿ ಅವರು ಭಾರತದಲ್ಲಿ ಜನಿಸಿದವರಲ್ಲ ಎನ್ನುವ ವಿಷಯ ಕರ್ನಾಟಕ ಚುನಾವಣೆಯಲ್ಲಿ ಹೇಗೆ ಪ್ರಸ್ತುತವೆನಿಸಲಿದೆ?

ಮುಖ್ಯವಾಗಿ, ರಾಷ್ಟ್ರೀಯ ಐಕಾನ್‌ಗಳಾಗಿ ಕಾಂಗ್ರೆಸ್ ಇತಿಹಾಸದ ಜೊತೆಗೆ ಗುರುತಿಸುವ ಕೆಲವು ವ್ಯಕ್ತಿಗಳನ್ನು ಕಾಂಗ್ರೆಸ್‌ನಿಂದ ದೂರ ಮಾಡುವ ಪ್ರಯತ್ನವನ್ನೂ ಅವರು ತಮ್ಮ ಭಾಷಣದಲ್ಲಿ ಮಾಡಿದರು. ಈ ವಿಷಯವೂ ಕರ್ನಾಟಕದ ಮಟ್ಟಿಗೆ ಅಪ್ರಸ್ತುತವಾಗಿತ್ತು ಎನ್ನುವುದು ಬೇರೆ ವಿಷಯ. “ಕಾಂಗ್ರೆಸ್ ಐತಿಹಾಸಿಕವಾಗಿ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಿತು, ಅವರಿಗೆ ಸಲ್ಲಬೇಕಾದ ಭಾರತರತ್ನವನ್ನು ತಪ್ಪಿಸಿತು. ಕಾಂಗ್ರೆಸೇತರ ಸರ್ಕಾರ ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿತು. ಕಾಂಗ್ರೆಸ್ ಈ ಕೆಲಸ ಮಾಡಲಿಲ್ಲ,” ಎಂದು ಒಂದು ಭಾಷಣದಲ್ಲಿ ಹೇಳಿದರೆ, ಮತ್ತೊಂದು ಭಾಷಣದಲ್ಲಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಮಾಜಿ ಪ್ರಧಾನಿ ದೇವೇಗೌಡರನ್ನು ಗೌರವಿಸಿಲ್ಲ ಎಂದು ಹೇಳುವ ಜೊತೆಗೆ ಅವರನ್ನು ಬಾಯ್ತುಂಬಿ ಹೊಗಳಿದರು. “ನಾವು ಜಾತಿ, ಧರ್ಮ ನೋಡುವುದಿಲ್ಲ, ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂರನ್ನು ರಾಷ್ಟ್ರಪತಿ ಮಾಡಿದೆವು. ನಾನು ಪ್ರಧಾನಿ ಅದ ಬಳಿಕ, ಬಡ ದಲಿತ ಸಮುದಾಯದಲ್ಲಿ ಹುಟ್ಟಿದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿ ನಮ್ಮ ಬದ್ಧತೆ ತೋರಿಸಿದ್ದೇವೆ. ಆದರೆ, ಕಾಂಗ್ರೆಸ್ ದಲಿತ ರಾಷ್ಟ್ರಪತಿಯನ್ನು ವಿರೋಧಿಸಿದೆ,” ಎನ್ನುವ ಮೂಲಕ ಮುಸ್ಲಿಂ ಹಾಗೂ ದಲಿತ ಮತದಾರರಿಗೆ ಹತ್ತಿರವಾಗಲು ಪ್ರಯತ್ನಿಸಿದರು. ವಾಸ್ತವದಲ್ಲಿ ರಾಂನಾಥ್ ಕೋವಿಂದ್ ವಿರುದ್ಧ ಕಾಂಗ್ರೆಸ್ ದಲಿತ ಮತ್ತು ಮಹಿಳಾ ಅಭ್ಯರ್ಥಿಯನ್ನೇ ಕಣಕ್ಕಿಳಿಸಿತ್ತು. ದಲಿತ ಮತ್ತು ಮಹಿಳಾ ಅಭ್ಯರ್ಥಿಯಾಗಿದ್ದ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕೆ ಬಿಜೆಪಿ ಬೆಂಬಲಿಸಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದಲಿತ ಸಮುದಾಯದ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲಾಗಿದೆ ಎನ್ನುವ ಪ್ರಧಾನಿ ಮೋದಿಯವರ ಮಾತು ಸತ್ಯಕ್ಕೆ ದೂರವಾದುದು. ಭಾರತದಲ್ಲಿ ಈ ಮೊದಲೇ ದಲಿತ ರಾಷ್ಟ್ರಪತಿ ಬಂದು ಹೋಗಿದ್ದಾರೆ. ಕೆ ಆರ್ ನಾರಾಯಣ್ ಅವರು ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿಯೇ ಉಪರಾಷ್ಟ್ರಪತಿಯಾಗಿ ನಂತರ ರಾಷ್ಟ್ರಪತಿಯಾದರು. ಹಾಗೆಯೇ ಅಬ್ದುಲ್ ಕಲಾಂ ಅವರು ಮೊದಲ ಮುಸ್ಲಿಂ ರಾಷ್ಟ್ರಪತಿ ಎನ್ನುವುದೂ ಸುಳ್ಳು. ಫಕ್ರುದ್ದೀನ್ ಅಲಿ ಅಹಮದ್ ಅವರು ೧೯೭೪ರಿಂದ ೧೯೭೭ರ ಅವಧಿಯಲ್ಲಿ ರಾಷ್ಟ್ರಪತಿಯಾಗಿದ್ದರು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೇ ದಲಿತ, ಮುಸ್ಲಿಂ ಅಭ್ಯರ್ಥಿ ಮತ್ತು ಮಹಿಳೆ ರಾಷ್ಟ್ರಪತಿಯಾಗಿದ್ದಾರೆ.

ಇಂತಹ ಅರ್ಧಸತ್ಯಗಳನ್ನು ಮುಂದಿಟ್ಟೇ ವಾಸ್ತವವನ್ನು ತಿರುಚುವ ಮೂಲಕ ಪ್ರಧಾನಿ ಮೋದಿಯವರು ‘ಪರ್ಸೆಪ್ಷನ್ ಪಾಲಿಟಿಕ್ಸ್’ (ಪರಿಕಲ್ಪನಾತ್ಮಕ ರಾಜಕೀಯ) ಮಾಡುತ್ತಲೇ ಜನಮೆಚ್ಚುಗೆ ಪಡೆದುಕೊಳ್ಳುವುದು ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಕರ್ನಾಟಕದ ಚುನಾವಣೆಯಲ್ಲಿ ಯಾವ ರೀತಿಯಲ್ಲಿ ಸಲ್ಲುತ್ತಾರೆ ಎನ್ನುವುದನ್ನು ಬಿಜೆಪಿ ಕರ್ನಾಟಕದ ಜನತೆಗೆ ವಿವರಿಸಬೇಕಿದೆ. “ವಲ್ಲಭಭಾಯಿ ಪಟೇಲ್ಗೂ ಕಲಬುರಗಿಗೂ ವಿಶೇಷ ಸಂಬಂಧವಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಜಾಮರನ್ನು ಓಡಿಸಿ ಈ ಪ್ರದೇಶವನ್ನು ಭಾರತದಲ್ಲಿ ವಿಲೀನಗೊಳಿಸಿದರು. ಜಲಿಯನ್ ವಾಲಾಬಾಗ್ನಲ್ಲಿ ಹಿಂಸೆ ನಡೆಸಿದಂತೆ ನಿಜಾಮರು ಇಲ್ಲಿ ಹಿಂಸೆ ನಡೆಸಿದ್ದರು. ಇದಕ್ಕೆ ವಲ್ಲಭಭಾಯಿ ಪಟೇಲ್ ಇತಿಶ್ರೀ ಹಾಡಿದರು. ಆದರೆ, ಕಾಂಗ್ರೆಸ್ ಮೊದಲಿನಿಂದಲೂ ವಲ್ಲಭಭಾಯಿ ಪಟೇಲ್ ಬಗ್ಗೆ ನಿರ್ಲಕ್ಷ್ಯ ತಳೆದಿದೆ,” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ : ಸಿದ್ದರಾಮಯ್ಯ ವಿರುದ್ಧ ನೇರ ದಾಳಿ ಮಾಡದೆ ಜಾರುತ್ತಿದ್ದಾರೆಯೇ ಮೋದಿ

ವಲ್ಲಭಭಾಯಿ ಈ ಚುನಾವಣೆಯಲ್ಲಿ ಯಾವ ರೀತಿ ಪ್ರಸ್ತುತತೆ ಪಡೆದಿದ್ದಾರೆ ಎನ್ನುವುದೂ ಸ್ಪಷ್ಟವಾಗಿಲ್ಲ. ಅಲ್ಲದೆ, ಎಸ್ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳುವ ಮೂಲಕ ಒಂದು ವರ್ಗವನ್ನು ಪ್ರಚೋದಿಸುವ ಪ್ರಯತ್ನವೂ ಕಂಡುಬಂತು. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್ ಮುಖ್ಯಮಂತ್ರಿ ಸ್ಥಾನ ನೀಡಿಲ್ಲ ಎಂದೂ ಆರೋಪಿಸಿದ್ದಾರೆ. ಎಲ್ಲ ಕಡೆ ಅವರು ಕಾಂಗ್ರೆಸ್ ಐಕಾನ್‌ಗಳನ್ನು ಆ ಪಕ್ಷದಿಂದ ದೂರ ಮಾಡಿ ಬಿಜೆಪಿ ಜೊತೆಗೆ ಅವರನ್ನು ತಳಕು ಹಾಕಲು ಪ್ರಯತ್ನಿಸಿರುವುದು ಕಂಡುಬಂದಿದೆ. ಹಾಗಿದ್ದರೆ, ಕಳೆದ ೬೦ ವರ್ಷಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರ ತಮ್ಮ ಕಡೆಗೊಂದು ಹೆಸರು ಹೇಳಬಹುದಾದ ಐಕಾನ್‌ ಬೆಳೆಸಲು ಸಾಧ್ಯವಾಗಿಲ್ಲವೇ? ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರಧಾನಿಯವರಾದ ಅಟಲ್ ಬಿಹಾರ್ ವಾಜಪೇಯಿ, ಉಪ ಪ್ರಧಾನಿ ಆಡ್ವಾಣಿ, ಪ್ರಮುಖ ಸಚಿವರು ಬಿಜೆಪಿಯ ಐಕಾನ್‌ ಆಗಿ ಏಕೆ ಬೆಳೆದಿಲ್ಲ ಅಥವಾ ಪ್ರಧಾನಿ ಮೋದಿಯವರು ಅವರನ್ನು ಐಕಾನ್‌ಗಳಾಗಿ ನೋಡಲು ಇಷ್ಟಪಡುವುದಿಲ್ಲವೇ? ಅಥವಾ ಬಿಜೆಪಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ರಾಷ್ಟ್ರಕ್ಕಾಗಿ ಏನೂ ಮಾಡಿಲ್ಲವೆ? ಈ ಐಕಾನ್‌ಗಳು ಈಗ ಬಿಜೆಪಿಗೆ ಸವಕಲು ನಾಯಕರಾಗಿದ್ದು ಏಕೆ ಎನ್ನುವ ಪ್ರಶ್ನೆಗೂ ತಮ್ಮ ಅಪ್ರಸ್ತುತ ಭಾಷಣದಲ್ಲಿ ನರೇಂದ್ರ ಮೋದಿಯವರು ಉತ್ತರಿಸಿದರೆ ಚೆನ್ನಾಗಿರುತ್ತದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More