ತಮ್ಮ ಸಚಿವರೇ ವೈದ್ಯರ ಮೇಲೆ ಹಲ್ಲೆ ಮಾಡಿದನ್ನು ಮರೆತುಬಿಟ್ಟರೇ ಮೋದಿ?

ಹುಬ್ಬಳ್ಳಿಯಲ್ಲಿ ಮಾತನಾಡುತ್ತ, ಸ್ಥಳೀಯ ಕಾಂಗ್ರೆಸ್ ಶಾಸಕರಾದ ವಿನಯ್ ಕುಲಕರ್ಣಿ ವೈದ್ಯರ ಮೇಲೆ ಹಲ್ಲೆ ಮಾಡಿರುವ ಆರೋಪವನ್ನು ಪ್ರಧಾನಿ ಮೋದಿ ಹೊರಿಸಿದ್ದಾರೆ. ಆದರೆ, ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವೈಯಕ್ತಿಕ ಕಾರಣಕ್ಕೆ ವೈದ್ಯರ ಮೇಲೆ ಹಲ್ಲೆ ಮಾಡಿರುವುದನ್ನು ಮರೆತರೇ?

ಪ್ರಧಾನಿ ಮೋದಿ ಅವರು ತಮ್ಮ ಚುನಾವಣಾ ಪ್ರಚಾರ ಭಾಷಣದಲ್ಲಿ ವಿಷಯ ತಿರುಚುವುದು, ಕಟ್ಟುಕತೆ ಹೇಳುವುದು ಮಾಮೂಲು ಎಂಬ ಆರೋಪವಿದೆ. ತುಮಕೂರು ಆಹಾರ ಸಂಸ್ಕರಣ ಘಟಕದ ಉದ್ಯೋಗಿಗಳ ಸಂಖ್ಯೆ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕುರಿತ ಸುಳ್ಳುಗಳು ಇದಕ್ಕೆ ತಾಜಾ ಉದಾಹರಣೆ. ಇದೇ ಧೋರಣೆ ಭಾನುವಾರ ಚಿತ್ರದುರ್ಗ, ಬಾಗಲಕೋಟೆ, ಹುಬ್ಬಳ್ಳಿಯ ಮತಯಾಚನೆ ಭಾಷಣಗಳಲ್ಲೂ ಮುಂದುವರಿಯಿತು.

“ಧಾರವಾಡ‌ದ ಸಚಿವರೊಬ್ಬರು ವೈದ್ಯರನ್ನೇ ಹೊಡೆದು ದೌರ್ಜನ್ಯ ಎಸಗಿದ್ದಾರೆ. ವೈದ್ಯರ ಕೊರಳ‌ಪಟ್ಟಿ ಹಿಡಿದು ವೈದ್ಯರ ಮೇಲೆ ದೌರ್ಜನ್ಯ ಎಸಗುವ ಇಂಥ ಜನನಾಯಕರು ಬೇಕೇ? ಇವರಿಂದ ಜನಕಲ್ಯಾಣ ಅಸಾಧ್ಯ,” ಎಂದು ಹೆಸರು ಉಲ್ಲೇಖಿಸದೆಯೇ ಸಚಿವ ವಿನಯ್‌ ಕುಲಕರ್ಣಿ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ಆದರೆ, ಸಚಿವ ವಿನಯ ಕುಲಕರ್ಣಿಯವರು ಮೋದಿಯವರಿಂದ ಅಥವಾ ಬಿಜೆಪಿಯಿಂದ ಈ ಮಾತುಗಳನ್ನು ನಿರೀಕ್ಷಿಸಿದ್ದರೆಂದು ತೋರುತ್ತದೆ. ಅವರು ಇತ್ತೀಚೆಗೆ ನಡೆದ ಪ್ರಚಾರ ಕಾರ್ಯಕ್ರಮವೊಂದರಲ್ಲಿ, “ನಾನು ಜನರ ಜೊತೆಗೆ ಭಾವನಾತ್ಮಕವಾಗಿ ಬೆರೆತಿದ್ದೇನೆ. ನನ್ನ ಜನರು ಕಷ್ಟದಲ್ಲಿದ್ದರೆ ಅದನ್ನು ಕಂಡು ಸಹಿಸಿಕೊಳ್ಳಲಾಗುವುದಿಲ್ಲ. ಹುಬ್ಬಳ್ಳಿಯಲ್ಲಿನ ಕಿಮ್ಸ್‌ನಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿಯೇ ಮಗು ಸಾವನ್ನಪ್ಪಿತ್ತು. ಈ ಕಾರಣದಿಂದ ನಾನು ಕೋಪಗೊಂಡು ವೈದ್ಯರ ಮೇಲೆ ಕೈ ಮಾಡಿದ್ದೆ,” ಎಂದು ಸಮಜಾಯಿಷಿ ನೀಡಿದ್ದರು. ಮುಂದುವರಿದು, “ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರಂತೆ ತಮ್ಮ ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂಬ ಕಾರಣಕ್ಕೆ ವೈದ್ಯರ ಮೇಲೆ ಕೈ ಮಾಡಿಲ್ಲ,” ಎಂಬ ಮಾತನ್ನು ಹೇಳಿ, ಬಿಜೆಪಿಯ ವಾಗ್ದಾಳಿಗೆ ಮೊದಲೇ ಮರುತಂತ್ರ ರೂಪಿಸಿದ್ದರು. ಆದರೆ, ಮೋದಿಯವರು ವಿನಯ ಕುಲಕರ್ಣಿಯವರನ್ನು ದೂಷಿಸುವ ಸಂದರ್ಭದಲ್ಲಿ ತಮ್ಮದೇ ಸಂಪುಟದ ಸಚಿವರು ಅದೇ ಕೆಲಸವನ್ನು ಮಾಡಿರುವುದನ್ನು ಮರೆತಂತಿತ್ತು. ವೈದ್ಯರ ಮೇಲೆ ಹಲ್ಲೆ ವಿಚಾರದಲ್ಲಿ ಅನಂತ್ ಕುಮಾರ್ ಹೆಗಡೆ ಅವರೂ ಜನರಿಂದಟೀಕೆಗೆ ಒಳಗಾಗಿದ್ದರು.

ಅಲ್ಲದೇ, ಪ್ರಧಾನಿ ನರೇಂದ್ರ ಮೋದಿ ಅವರು ಮುಂದುವರಿದು ತಮ್ಮ ಭಾಷಣದಲ್ಲಿ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಹಿಮದ ರಾಶಿಯ ಮಧ್ಯೆ 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೆ, ಕಾಂಗ್ರೆಸ್ ಆ ಯೋಧನಿಗೆ ಅವಮಾನ ಮಾಡಿತು ಎಂಬ ಸುಳ್ಳು ಆರೋಪ ಮಾಡಿದರು. ಈ ಮೂಲಕ ಹುಬ್ಬಳ್ಳಿ-ಧಾರವಾಡ ಜನತೆ ಕಾಂಗ್ರೆಸ್ ವಿರೋಧಿಸುವಂತೆ ಪ್ರೇರೇಪಿಸಲು ಪ್ರಯತ್ನಿಸಿದರು. ಆದರೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಹ್ಲಾದ ಜೋಶಿ ಅವರ ನಿವಾಸದವರೆಗೂ ತೆರಳಿ ಸಹಾಯಕ್ಕೆ ಅಂಗಲಾಚಿದ್ದ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಸೇರಿದಂತೆ ಈ ಭಾಗದ ಜನರಿಗೆ ಮೋದಿ ಅವರ ಮಾತು ಬೇಸರ ತರಿಸಿತು.

ಹನುಮಂತಪ್ಪ ಕೊಪ್ಪದ್ ಅವರ ಧರ್ಮಪತ್ನಿ, ಜಗದೀಶ ಶೆಟ್ಟರ್ ಹಾಗೂ ಪ್ರಹ್ಲಾದ ಜೋಶಿ ಅವರಿಗೆ ಹತ್ತಾರು ಬಾರಿ ಸಹಾಯಕ್ಕಾಗಿ ಅಂಗಲಾಚಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಮಾತ್ರ ಸಹಾಯ ಮಾಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹಾಗೂ ಕುಂದಗೋಳ ಶಾಸಕ ಸಿ ಎಸ್ ಶಿವಳ್ಳಿಯವರು ಕೊಪ್ಪದ್ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ ಎಂಬ ಮಾತು ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿದೆ. ಆದರೂ ಮೋದಿ ಈ ವಿಷಯವನ್ನೇ ತಿರುಚಿ ಬಿಜೆಪಿ ಪರ ಅನುಕಂಪ ಗಳಿಸಲು ಪ್ರಯತ್ನಿಸಿದರು ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಸರ್ಕಾರವಿದ್ದ ಸಂದರ್ಭದಲ್ಲಿ ಬಿ ಎಸ್ ಯಡಿಯೂರಪ್ಪ ಹಾಗೂ ಹುಬ್ಬಳ್ಳಿಯವರೇ ಆದ ಜಗದೀಶ ಶೆಟ್ಟರ್ ಕೂಡ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಕಾಮಗಾರಿ ಕೈಗೊಳ್ಳಲು ಆಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು. ಆದರೆ, ಈಗ ಮೋದಿ ಹುಬ್ಬಳ್ಳಿಗರ ಮನ ಗೆಲ್ಲುವ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರದ ಮೇಲೆ ದೋಷಾರೋಪಣೆ ಮಾಡಿದ್ದಾರೆ. ಅಲ್ಲದೆ, ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ ಈ ಯೋಜನೆಗೆ ಚಾಲನೆ ನೀಡಿದ್ದರು ಎಂದು ಹಸಿ ಸುಳ್ಳನ್ನೂ ಹೇಳಿದ್ದಾರೆ!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಅವರ ತಾಯಿ ಸೋನಿಯಾ ಗಾಂಧಿ ಮೇಲೆ 5 ಸಾವಿರ ಕೋಟಿ ಅಕ್ರಮದ ಆಧಾರರಹಿತ ಆರೋಪವನ್ನು ಮೋದಿ ಮಾಡಿದರು. “ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗಾಗಲೇ ಕೇಂದ್ರ ಸರ್ಕಾರ 8 ಸಾವಿರ ಕೋಟಿ ರು. ಅನುದಾನ ನೀಡಿದೆ. ಆದರೆ, ನಿದ್ರೆಯಲ್ಲಿರುವ ಕಾಂಗ್ರೆಸ್ ಸರ್ಕಾರ ಕೇವಲ 1,200 ಕೋಟಿ ರೂ. ಹಣ ಮಾತ್ರ ಬಳಸಿದೆ. ಬಾಕಿ ಹಣ ಹಾಗೆ ಉಳಿದಿದೆ. ಕಮಿಷನ್ ಕೊಡದೆ ಇರುವ ಕಾರಣಕ್ಕೆ ಈ ಹಣವನ್ನು ಅಭಿವೃದ್ಧಿಗೆ ಬಳಸಲಾಗಿಲ್ಲ,” ಎಂದು ಮತ್ತೊಮ್ಮೆ ಕಾಂಗ್ರೆಸ್ ಕಮೀಷನ್ ಸರ್ಕಾರ ಎಂಬ ಹಣೆಪಟ್ಟಿ ಕಟ್ಟಲು ಪ್ರಯತ್ನಿಸಿದರು.

“ಸಿಎಂ ಸಿದ್ದರಾಮಯ್ಯ ಅವರು ಮೂಢನಂಬಿಕೆಯ ಕೂಪದಲ್ಲಿ ಮುಳುಗಿದ್ದಾರೆ. ತಮ್ಮ‌ ಕಾರಿನ ಮೇಲೆ‌ ಕಾಗೆ ಕುಳಿತಿತು ಎಂದು ಕಾರನ್ನೇ ಬದಲಾಯಿಸಿದರು. ತಮ್ಮ ಕಿಸೆಯಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ಓಡಾಡುತ್ತಿದ್ದಾರೆ,” ಎಂದು ವ್ಯಂಗ್ಯವಾಡುವುದರೊಂದಿಗೆ ಮೂಢನಂಬಿಕೆ ನಿಷೇಧ ಕಾಯ್ದೆಗೆ ಮುಂದಾಗಿದ್ದ ಕಾಂಗ್ರೆಸ್‌ಗೆ ಹಿನ್ನಡೆ ಮಾಡಲು ಮೋದಿ ಪ್ರಯತ್ನಿಸಿದರು. ಅಲ್ಲದೆ, ಮತ್ತೊಮ್ಮೆ ಜಯಂತಿಗಳ ವಿಷಯ ಮಾತನಾಡುವುದರೊಂದಿಗೆ ಕೋಮುವಾದದ ಹಾದಿಯಲ್ಲಿ ಮೋದಿ ನಡೆದಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, “ವೋಟಿಗಾಗಿ ಇತಿಹಾಸ ತಿರುಚುವ ಕೆಲಸ ಮಾಡುತ್ತಿದೆ ಕಾಂಗ್ರೆಸ್. ಇಲ್ಲಿನ ವೀರ ಮದಕರಿ ನಾಯಕ, ಒನಕೆ ಓಬವ್ವರ ನೆನಪೇ ಮಾಡಿಕೊಳ್ಳುತ್ತಿಲ್ಲ. ಮತಕ್ಕಾಗಿ ಸುಲ್ತಾನರ ಜಯಂತಿ ಆಚರಿಸುತ್ತಿದೆ. ಚಿತ್ರದುರ್ಗದ ಜನರಿಗೆ ವಿಷ ಕೊಟ್ಟವರ, ಓಬವ್ವನವರನ್ನು ಮೋಸದಿಂದ ಕೊಂದವರ ಜಯಂತಿ ಆಚರಣೆ ಮಾಡುತ್ತಿರುವ ಕಾಂಗ್ರೆಸ್, ಇಲ್ಲಿನ ಜನರ ಭಾವನೆಗಳ ಜೊತೆ ಆಟವಾಡುತ್ತಿದೆ. ಯಾರು ನಾಡಿಗೆ ಕೊಡುಗೆ ನೀಡಿದ್ದಾರೋ ಅಂತಹವರ ಜಯಂತಿಗಳನ್ನು ಆಚರಿಸಲು ಕಾಂಗ್ರೆಸ್‌ ಮರೆತಿದೆ,” ಎಂಬ ಭಾವನಾತ್ಮಕ ವಿಚಾರಗಳನ್ನು ಪ್ರಸ್ತಾಪಿಸಿ ಹಿಂದುತ್ವದ ಅಜೆಂಡಾ ಎತ್ತಿಹಿಡಿಯುವ ಪ್ರಯತ್ನ ಮೋದಿ ಅವರಿಂದ ನಡೆಯಿತು. ಆದರೆ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸುಲ್ತಾನರ ಜಯಂತಿ ಮಾತ್ರವಲ್ಲ, ಅಬ್ಬಕ್ಕ ಉತ್ಸವ ಮತ್ತು ಕಿತ್ತೂರು ಉತ್ಸವದಂತಹ ಕಾರ್ಯಕ್ರಮಗಳನ್ನೂ ಮಾಡಿರುವುದನ್ನು ಮರೆಮಾಚಿ ಮಾತನಾಡಿದ್ದಾರೆ.

“ಅಂಬೇಡ್ಕರ್‌ ಅವರನ್ನೂ ಕಾಂಗ್ರೆಸ್‌ ಅವಮಾನ ಮಾಡಿತ್ತು. ಅಂಬೇಡ್ಕರ್‌ ಅವರು ನಮ್ಮನ್ನಗಲಿ ಎಷ್ಟೋ ವರ್ಷಗಳ ನಂತರ ಬಿಜೆಪಿ ಅಧಿಕಾರದಲ್ಲಿದ್ದಾಗ ಅವರಿಗೆ ಭಾರತರತ್ನ ನೀಡಬೇಕಾಯಿತು, ಕಾಂಗ್ರೆಸ್‌ ಆ ಕೆಲಸ ಮಾಡಲಿಲ್ಲ,” ಎಂದು ಹೇಳಿ ದಲಿತರ ಓಲೈಕೆಯ ಪ್ರಯತ್ನವನ್ನೂ ಮೋದಿ ಮಾಡಿದರು. ಅಲ್ಲದೆ, ಎಸ್ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂದು ಹೇಳುವ ಮೂಲಕ ಒಂದು ವರ್ಗವನ್ನು ಪ್ರಚೋದಿಸುವ ಪ್ರಯತ್ನವೂ ಕಂಡುಬಂತು. “ನಾವು ಜಾತಿ, ಧರ್ಮ ನೋಡುವುದಿಲ್ಲ, ಮಹಾನ್‌ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂರನ್ನು ರಾಷ್ಟ್ರಪತಿ ಮಾಡಿದೆವು. ನಾನು ಪ್ರಧಾನಿ ಅದ ಬಳಿಕ, ಬಡ ದಲಿತ ಸಮುದಾಯದಲ್ಲಿ ಹುಟ್ಟಿದ ರಾಮ್‌ನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಮಾಡಿ ನಮ್ಮ ಬದ್ಧತೆ ತೋರಿಸಿದ್ದೇವೆ,” ಎನ್ನುವ ಮೂಲಕ ಮುಸ್ಲಿಂ ಹಾಗೂ ದಲಿತ ಮತದಾರರಿಗೆ ಹತ್ತಿರವಾಗಲು ಪ್ರಯತ್ನಿಸಿದರು.

ಇದನ್ನೂ ಓದಿ : ತುಮಕೂರು ಆಹಾರ ಸಂಸ್ಕರಣ ಘಟಕ ಕುರಿತ ಮೋದಿ ಮಾತಿನ ಸತ್ಯಶೋಧನಾ ವಿವರ

“ಹರಿದಾಸರು ಹಾಗೂ ವಚನಕಾರರ ಭೂಮಿ ರಾಯಚೂರು. ಸೋನಾ ಮಸೂರಿಯ ತವರು. ಕಾಂಗ್ರೆಸ್ ಪಕ್ಷ ಇದ್ಯಾವುದನ್ನೂ ಕಲಿತಿಲ್ಲ. ಬದಲಾಗಿ ಜಾತಿಯ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ. ದೇಶದಲ್ಲಿ ದಲಿತರು, ಬಡವರು, ಶೋಷಿತರು ಹಾಗೂ ಆದಿವಾಸಿಗಳ ಅಭಿವೃದ್ಧಿಗಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವು ದಲಿತರು, ಆದಿವಾಸಿಗಳು ಹಾಗೂ ಒಬಿಸಿ ವಿರೋಧಿ ಆಗಿರುವುದರಿಂದ ಲೋಕಸಭೆಯಲ್ಲಿ ಯಾವುದೇ ಚರ್ಚೆಯಾಗಲು ಬಿಡಲಿಲ್ಲ,” ಎನ್ನುವ ಮೂಲಕ ರಾಯಚೂರಿನಲ್ಲಿ ಮತದಾರರನ್ನು ಸೆಳೆಯುವ ಕೆಲಸ ಮಾಡಿದರು.

ಪ್ರಧಾನಿ ಭಾಗವಹಿಸಿದ ಪ್ರತಿಯೊಂದು ಸಮಾವೇಶದಲ್ಲಿಯೂ, “ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮೋಸ ಮಾಡಿದೆ,” ಎಂದು ಹೇಳುವುದರ ಮೂಲಕ ದಲಿತರನ್ನು ಸೆಳೆಯುವುದು ಪ್ರಮುಖವಾಗಿ ಕಂಡುಬರುತ್ತಿತ್ತು. ಅಲ್ಲದೆ, ಎಸ್ ನಿಜಲಿಂಗಪ್ಪ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ ಎಂಬ ಹೊಸ ಅಸ್ತ್ರ ಈ ಬಾರಿಯ ಪ್ರವಾಸದಲ್ಲಿ ಪ್ರಯೋಗಿಸಿದರು. ಅಲ್ಲದೆ, ಬಿಜೆಪಿ ನವಭಾರತ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ ಎನ್ನುವ ಹೊಸ ಭರವಸೆಯೊಂದನ್ನು ಜನರಲ್ಲಿ ತುಂಬಲು ಪ್ರಯತ್ನಿಸಿದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More