ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಮಹದಾಯಿ ಸಮಸ್ಯೆ ಪರಿಹಾರ: ಅಮಿತ್ ಶಾ

ಕರ್ನಾಟಕ ಚುನಾವಣೆಯ ಮತ ಓಲೈಕೆಯ ತಂತ್ರಗಾರಿಕೆಗಳು ಪಕ್ಷದಲ್ಲಿ ನಡೆಯುತ್ತಲೇ ಇವೆ. ಮಹದಾಯಿ ಸಮಸ್ಯೆ ಸಾವಿರಾರು ದಿನಗಳಿಂದ ಹಾಗೇ ಇದೆ. ಹಾಗಾಗಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಉ.ಕರ್ನಾಟಕದಲ್ಲಿ ಹೊಸ ಬಾಣ ಬಿಟ್ಟಿದ್ದು, ಆರೇ ತಿಂಗಳಲ್ಲಿ ಮಹದಾಯಿ ವಿವಾದ ಬಗೆಹರಿಸುತ್ತೇವೆ ಎಂದಿದ್ದಾರೆ

ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಹದಾಯಿ ಹೋರಾಟ ಮೂರು ವರ್ಷಗಳತ್ತ ಮುನ್ನುಗ್ಗುತ್ತಿದೆ. ಆದರೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಈಗ ಬಿಜೆಪಿಗೆ ಮಹದಾಯಿ ವಿವಾದ ಅಸ್ತ್ರವಾದಂತೆ ಕಾಣುತ್ತಿದೆ. ಇತ್ತೀಚೆಗೆ ಮೇ.5ರಂದು ಗದಗ ನಗರಕ್ಕೆ ಬಿಜೆಪಿ ಅಭ್ಯರ್ಥಿಗಳ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದರು. ಈ ವೇಳೆ ಮಹದಾಯಿ ವಿವಾದದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೂ ಕಾರಣವಾಗಿತ್ತು. ಆದರೆ, ಇಂದು ಮತ್ತೆ ಮಹದಾಯಿ ಕೇಂದ್ರ ಸ್ಥಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಹದಾಯಿ ಜಪ ಮಾಡಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಆರು ತಿಂಗಳಲ್ಲಿ ಮಹದಾಯಿ ವಿವಾದ ಬಗೆ ಹರಿಸುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಶ್ವಾಸನೆ ಕೊಟ್ಟಿದ್ದಾರೆ. ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಸಿ ಪಾಟೀಲ್ ಪರ ಮತಯಾಚನೆ ಸಭೆಯಲ್ಲಿ ಈ ಬಗ್ಗೆ ಶಾ ಹೇಳಿಕೆ ನೀಡಿದರು. ಪ್ರಧಾನಿ ಮೋದಿ ಹೇಳಿಕೆ ಬೆನ್ನಲ್ಲೇ ಈಗ ಅಮಿತ್ ಶಾ ಕೂಡ ನರಗುಂದದ ಸಭೆಯಲ್ಲಿ ಮಹದಾಯಿ ಬಗ್ಗೆ ಮಾತನಾಡಿದರು. “ನಮಗೆ ಅಧಿಕಾರ ಸಿಕ್ಕ ಆರು ತಿಂಗಳೊಳಗೆ ಪ್ರತಿಯೊಬ್ಬರ ಮನೆ ನಲ್ಲಿ ತಿರುವಿದರೆ ಸಾಕು ನೀರು ಲಭಿಸುವಂತೆ ಮಾಡುತ್ತೇವೆ. ಅಧಿಕಾರಕ್ಕೆ ಬಂದರೆ ಸೌಹಾರ್ದಯುತ ಮಾತುಕತೆ ಮೂಲಕ ಮಹದಾಯಿ ನೀರು ಒದಗಿಸಲಾಗುವುದು ಹಾಗೂ ಈ ಭಾಗದ ರೈತರ ಭೂಮಿಗೆ ನೀರು ಹರಿಸುತ್ತೇವೆ. ಮಹದಾಯಿ ನೀರಿನ ಮೂಲಕ ಈ ಭಾಗದ ಜನರ ಬಾಳನ್ನು ಹಸನಾಗಿಸುತ್ತೇವೆ,” ಎಂದು ಹೇಳಿದರು. ಈ ಮೂಲಕ, ಬಿಜೆಪಿಗೆ ಮಹದಾಯಿ ವಿವಾದ ಚುನಾವಣಾ ಅಸ್ತ್ರವಾಗಿದೆಯೇ ಅನ್ನೋ ಪ್ರಶ್ನೆಗೂ ಕಾರಣವಾಗಿದೆ.

ಮತ್ತೊಂದೆಡೆ, ಬಿಜೆಪಿ ಘಟಾನುಘಟಿ ನಾಯಕರು ನರಗುಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದು, ಈ ಹಿಂದೆ ಮಹದಾಯಿ ವಿಚಾರ ಕುರಿತು ಹುಬ್ಬಳ್ಳಿಯಲ್ಲಿ ಯಡಿಯೂರಪ್ಪ ಪತ್ರ ಓದಿದ್ದು, ಜೊತೆಗೆ ಪ್ರಧಾನಿ ಮೋದಿ ಗದಗನಲ್ಲಿ ತಮ್ಮ ಭಾಷಣದಲ್ಲಿ ಮಹದಾಯಿ ವಿಚಾರ ಪ್ರಸ್ತಾಪಿಸಿದ್ದು, ಈ ಭಾಗದ ಮಹದಾಯಿ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಈಗ ಶಾ ನರಗುಂದ ಭೇಟಿ ಮಹದಾಯಿ ಬಗ್ಗೆ ಈ ಭಾಗದ ಜನರಲ್ಲಿರೋ ಅಸಮಾಧಾನ ಸರಿಪಡಿಸಲಿದೆಯೇ ಎಂಬ ಪ್ರಶ್ನೆ ಹುಟ್ಟಿಸಿದೆ. ಏನೇ ಆಗಲಿ, ರಾಜಕೀಯ ಪಕ್ಷಗಳಿಗೆ ದಾಳವಾಗಿ ಮೂರು ದಶಕಗಳಿಂದ ಮಹದಾಯಿ ವಿವಾದ ಕಗ್ಗಂಟಾಗೇ ಉಳಿದಿದೆ. ಈಗಲೂ ಹೋರಾಟ ಮುಂದುವರಿದಿದ್ದು, ಚುನಾವಣೆ ದಾಳವಾಗಿ ಮಹದಾಯಿ ವಿವಾದ ಬಳಕೆಯಾಗದಿರಲಿ ಎನ್ನುವುದು ಪ್ರಜ್ಞಾವಂತರ ಆಗ್ರಹ.

ಇದನ್ನೂ ಓದಿ : ನಿಂತಲ್ಲೇ ನಿಂತ ಮಹದಾಯಿ, ಸುಳ್ಳಿಗೆ ಸಿಕ್ಕ ಕಪ್ಪತಗುಡ್ಡ; ಮೋದಿ ಮಾತಿಗೆ ಜನಾಕ್ರೋಶ

ಮಹದಾಯಿ ಬಗ್ಗೆ ಶಾ ಆಡಿದ ಮಾತುಗಳು

  • ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆರು ತಿಂಗಳಲ್ಲಿ ಮಹದಾಯಿ ನೀರು ಮನೆಗಗಳಿಗೆ ಹರಿಸುತ್ತೇವೆ.
  • ಅಧಿಕಾರಕ್ಕೆ ಬಂದರೆ ಸೌಹಾರ್ದಯುತ ಮಾತುಕತೆ ಮೂಲಕ ಮಹದಾಯಿ ಸಮಸ್ಯೆ ಪರಿಹರಿಸುತ್ತೇವೆ.
  • ಪ್ರತಿಯೊಂದು ಮನೆಗಳಿಗೂ ನಲ್ಲಿ ಮೂಲಕ ನೀರು ಹರಿಸುತ್ತೇವೆ.
  • ರೈತರ ಭೂಮಿಗೂ ಮಹದಾಯಿ ನೀರು ಹರಿಸುತ್ತೇವೆ.
  • ಮಹದಾಯಿ ನೀರಿನ ಮೂಲಕ ಈ ಭಾಗದ ಜನರ ಬಾಳನ್ನು ಹಸನಾಗಿಸುತ್ತೇವೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More