ಅಂತಿಮ ವಿಶ್ಲೇಷಣೆ | ಮುಂಬೈ ಕರ್ನಾಟಕದಲ್ಲಿ ತಾರಕಕ್ಕೇರಿದ ಕೈ-ಕಮಲ ಪೈಪೋಟಿ

ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರವಾಸ ಕೈಗೊಂಡು, ಅಲ್ಲಿಯ ಮತದಾರರ ರಾಜಕೀಯ ನಿಲುವು, ಜನರ ಆಯ್ಕೆ ಅರಿಯಲು ‘ದಿ ಸ್ಟೇಟ್’ ಯತ್ನಿಸಿದೆ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಎರಡು ಹಗಲು ಬಾಕಿ ಉಳಿದಿವೆ. ಗೆಲ್ಲಲು ಹಠ ತೊಟ್ಟಿರುವ ಮೂರು ಪಕ್ಷಗಳ ರಾಜ್ಯ, ರಾಷ್ಟ್ರೀಯ ನಾಯಕರು ಚುನಾವಣೆಯ ಅಂತಿಮ ಪ್ರಚಾರದಲ್ಲಿ ಮಿಂದೆದ್ದಿದ್ದು, ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತಿನಲ್ಲಿದ್ದಾರೆ. ರಾಜ್ಯಾದ್ಯಂತ ಆಯಾ ಪಕ್ಷದ ಸ್ಟಾರ್ ನಾಯಕರಿಂದ ಕೊನೆ ಕ್ಷಣದ ಬಿರುಸಿನ ಪ್ರಚಾರ ನಡೆಯುತ್ತಿರುವ ಈ ಹೊತ್ತಿನಲ್ಲಿ ‘ದಿ ಸ್ಟೇಟ್’ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ಜಿಲ್ಲೆಯ ಪ್ರಮುಖ ನಾಲ್ಕು ಕ್ಷೇತ್ರಗಳಲ್ಲಿ ಎರಡು ದಿನಗಳ ಕಾಲ ಚುನಾವಣಾ ಪ್ರವಾಸ ಕೈಗೊಂಡು, ಅಲ್ಲಿಯ ಮತದಾರರ ರಾಜಕೀಯ ನಿಲುವು, ಜನರ ಆಯ್ಕೆಯನ್ನು ಸ್ಥೂಲವಾಗಿ ಅರಿಯಲು ಯತ್ನಿಸಿದೆ.

ರಾಜಧಾನಿಯಿಂದ ಗೊಮ್ಮಟನಗರಿ ವಿಜಯಪುರ ತಲುಪುವ ಹೊತ್ತಿಗೆ ಕತ್ತಲು ಸರಿದು ಬೆಳಕು ಆವರಿಸುತ್ತಿತ್ತು. ಎಳೆ ಬಿಸಿಲಿಗೆ ಮೈಯೊಡ್ಡಿಕೊಂಡು ಸಾಗಿ, ವಿಜಯಪುರ ಜಿಲ್ಲೆಯಲ್ಲೇ ಈ ಬಾರಿ ಕುತೂಹಲ ಕೆರಳಿಸಿರುವ ಬಬಲೇಶ್ವರ ಕ್ಷೇತ್ರದ ಚುನಾವಣಾ ಪ್ರವಾಸಕ್ಕೆ ಅಣಿಯಾಗುವ ಹೊತ್ತಿಗೆ ಬಿಸಿಲು ಬಲಿಯತೊಡಗಿತ್ತು. ಹಲವು ಕುತೂಹಲದೊಂದಿಗೆ ಬಬಲೇಶ್ವರ ಕ್ಷೇತ್ರದತ್ತ ಮುಖಮಾಡಿದಾಗ ಮೊದಲಿಗೆ ಕಾಣಿಸಿಕೊಂಡ ಹಳ್ಳಿ ಸಾರವಾಡ. ಇಲ್ಲಿಯ ಮತದಾರರನ್ನು ಮೊದಲಿಗೆ ಮಾತನಾಡಿಸಿ ನಂತರ ಬಬಲೇಶ್ವರ ಕ್ಷೇತ್ರದ ಸಂದಿಗೊಂದಿ ತಿರುಗಿ ಎದರುರಿಗೆ ಸಿಕ್ಕ ಸುಮಾರು ಜನರ ಅಭಿಪ್ರಾಯ ಕೇಳಿದಾಗ ಅಂತಿಮವಾಗಿ ಅನಿಸಿದ್ದು, ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಸಮಬಲದ ಹೋರಾಟದ ವೇದಿಕೆ ಸಿದ್ಧವಾಗಿದೆ.

ಕಾಂಗ್ರೆಸ್ ನಿಂದ ಎಂ ಬಿ ಪಾಟೀಲ್, ಬಿಜೆಪಿಯಿಂದ ವಿಜುಗೌಡ (ವಿಜಯಕುಮಾರ್ ಎಸ್ ಪಾಟೀಲ) ಹಾಗೂ ಪಕ್ಷೇತರದಿಂದ ಮಹಾದೇವಿ ನಾಟಿಕಾರ ಕಣದಲ್ಲಿದ್ದಾರೆ. ಇಲ್ಲಿ ಜೆಡಿಎಸ್ ಪಕ್ಷ ಅಭ್ಯರ್ಥಿಯನ್ನೇ ನಿಲ್ಲಿಸಿಲ್ಲ. ಈ ವಿಚಾರವಾಗಿ ಸ್ಥಳೀಯವಾಗಿ ಕೇಳಿಬಂದ ಅಭಿಪ್ರಾಯ ದೇವೇಗೌಡರಿಗೆ ಎಂ ಬಿ ಪಾಟೀಲ್ ಅವರು ಆತ್ಮೀರಾಗಿದ್ದು, ಅವರ ಗೆಲುವಿಗಾಗಿ ಅಭ್ಯರ್ಥಿಯನ್ನು ನಿಲ್ಲಿಸಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ವಾಸ್ತವದಲ್ಲಿ ಸತತವಾಗಿ ಎರಡು ಬಾರಿ ಈ ಕ್ಷೇತ್ರದಿಂದ ಆಯ್ಕೆಯಾದ ಎಂ ಬಿ ಪಾಟೀಲ್ ವಿರುದ್ಧ ಹಿಂದಿನ ಚುನಾವಣೆಯಲ್ಲಿ ವಿಜುಗೌಡ ಅವರು ಜೆಡಿಎಸ್ ನಿಂದ ಸ್ಪರ್ಧಿಸಿ ರನ್ನರ್ ಅಪ್ ಆಗಿದ್ದರು. ಈಗ ಬಿಜೆಪಿ ಸೇರಿರುವ ವಿಜುಗೌಡ ಬಗ್ಗೆ ಸ್ಥಳೀಯವಾಗಿ ಅಸಮಾಧಾನವೂ ಇದ್ದು, ಈ ಕಾರಣಕ್ಕಾಗಿ ಜೆಡಿಎಸ್ ನ ಕೆಲವು ನಾಯಕರು ಎಂ ಬಿ ಪಾಟೀಲ್ ಅವರಿಗೆ ಬೆಂಬಲ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಲಿಂಗಾಯತ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ಮತದಾರರನ್ನು ಮಾತನಾಡಿಸಿದಾಗ ಎಂ ಬಿ ಪಾಟೀಲ್ ಅವರ ಲಿಂಗಾಯತ ಧರ್ಮದ ಹೋರಾಟದ ನಡೆಯನ್ನು ಸಮರ್ಥಿಸಿಕೊಂಡವರೇ ಹೆಚ್ಚು. ಲಿಂಗಾಯತ ಪ್ರತ್ಯೇಕ ಧರ್ಮ ಆಗುವುದರಲ್ಲಿ ತಪ್ಪಿಲ್ಲ ಎಂಬ ಭಾವನೆ ಅವರಲ್ಲಿ ಇದೆ. ಪಂಚಮಸಾಲಿ ಸಮುದಾಯದ ಅನೇಕರಲ್ಲಿ ಈ ವಿಚಾರಕ್ಕೆ ವಿರೋಧವಿದೆ. ಪಂಚಮಸಾಲಿ ಸಮುದಾಯದ ಕೆಲವರು ಬಿಜೆಪಿನ್ನು ಬೆಂಬಲಿಸಿ ಮಾತನಾಡಿ, ಲಿಂಗಾಯತ ಧರ್ಮ ವಿಚಾರ ಚುನಾವಣೆಗಾಗಿ ಮಾಡಿದ ಹುನ್ನಾರ ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಕಂಡುಬಂತು.

ಎಂ ಬಿ ಪಾಟೀಲ್ ಅವರ ಬಗ್ಗೆ ತೆಗಳಿಕೆಗಿಂತ ಕ್ಷೇತ್ರದಲ್ಲಿ ಅಭಿಮಾನದ ಮಾತುಗಳನ್ನು ಆಡಿದವರೇ ಹೆಚ್ಚು. ಜಲಸಂಪನ್ಮೂಲ ಸಚಿವರಾಗಿ ಜಿಲ್ಲೆಯಲ್ಲಿ ಅವರು ಮಾಡಿದ ನೀರಾವರಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಹೆಮ್ಮೆಯಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳ ಮೇಲೆ ನಾಯಕರ ಆಯ್ಕೆ ಇರಬೇಕೆಂಬ ನಿಲುವು ಬಹುತೇಕ ಜನರ ಬಾಯಿಂದ ಕೇಳಿಬಂತು. ಒಟ್ಟಾರೆ ಗೆಲುವಿಗೆ ಹತ್ತಿರ ವಿದ್ದಂತೆ ತೋರುವ ಎಂ ಬಿ ಪಾಟೀಲ್ ಅವರ ಸ್ಪರ್ಧೆ ಸರಳವಾಗಿಲ್ಲ. ವಿಜುಗೌಡ ಕೂಡ ಪ್ರಬಲ ಪೈಪೋಟಿ ನೀಡಲು ಕ್ಷೇತ್ರದಲ್ಲಿ ಸಿದ್ಧತೆ ಮಾಡಿಕೊಂಡಿದ್ದಾರೆ.

ಬಬಲೇಶ್ವರ ಸಂಚಾರ ಮುಗಿಸಿ ನಾಗಠಾಣ ಕ್ಷೇತ್ರದತ್ತ ಮುಖಮಾಡುವ ಹೊತ್ತಿಗೆ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ದಾರಿಗುಂಟ ಹೊರಟಾಗ ಬೆಂಕಿಯ ಜಳದಲ್ಲಿ ಹೊರಟಿದ್ದೇವೇನೋ ಎನ್ನುವಷ್ಟು ಬಿಸಿಲಿನ ತಾಪ! ಉರಿ ಬಿಸಿಲಿಗೆ ಮೈಯೊಡ್ಡಿಕೊಂಡೇ ಬಬಲೇಶ್ವರದಿಂದ ೪೬ ಕಿಮೀ ದೂವವಿರುವ ಎಸ್ಸಿ ಮೀಸಲು ಕ್ಷೇತ್ರ ನಾಗಠಾಣ ಹಾಗೂ ಸೆರಗಂಚಿನ ಊರುಗಳ ಜನರ ಅಭಿಪ್ರಾಯಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹೆಚ್ಚು ಕೇಳಿಬಂದವು. ಜನರ ಅಭಿಪ್ರಾಯ ನೋಡಿದರೆ ನಾಗಠಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಕಳೆದ ಬಾರಿ ಈ ಕ್ಷೇತ್ರದಿಂದ ರಾಜು ಅಲ್ಗೂರು ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದರು. ೨೦೦೮ ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ ಆಗಿದ್ದ ವಿಠ್ಠಲ್ ಕಟಕದೊಂಡ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಗಠಾಣ ಪ್ರತಿನಿಧಿಸಿದ್ದಾರೆ. ೨೦೧೩ ರಲ್ಲಿ ರನ್ನರ್ ಅಪ್ ಆಗಿದ್ದ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌವ್ಹಾನ್ ಅದೇ ಪಕ್ಷದಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ಗೋಪಾಲ ಕಾರಜೋಳ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.

‘ದಿ ಸ್ಟೇಟ್’ಗೆ ಪ್ರತಿಕ್ರಿಯಿಸಿದ ಕೆಲ ಮತದಾರರು ಜೆಡಿಎಸ್‌ನ ದೇವಾನಂದ ಅವರು ಈ ಬಾರಿ ಅವರು ಗೆಲ್ಲಲೇ ಬೇಕು ಎನ್ನುವ ಮಾತುಗಳನ್ನು ಬಹಿರಂಗವಾಗಿ ಹೇಳುತ್ತಿದ್ದಾರೆ. ಮುಂದುವರೆದು ಕಳೆದ ಬಾರಿ ಅವರು ಶಾಸಕರಾಗದಿದ್ದರೂ ಕ್ಷೇತ್ರದಲ್ಲಿ ಓಡಾಡಿ ಸಾಮಾನ್ಯರಿಗೂ ಸಿಗುತ್ತಿದ್ದರು. ಬಡವರ ಕಷ್ಟಗಳಿಗೆ ಮಿಡಿಯುತ್ತಿದ್ದರು ಎನ್ನುವ ಭಾವನಾತ್ಮಕ ವಿಷಯಗಳನ್ನು ತೆರೆದಿಟ್ಟರು. ಕಾಂಗ್ರೆಸ್ ಬಗ್ಗೆ ಕೂಡ ಇಂಥದೇ ಅಭಿಪ್ರಾಯಗಳು ಇವೆ. ಕೆಲವೊಂದಿಷ್ಟು ಜನ ಇಬ್ಬರೂ ಒಳ್ಳೇ ಕೆಲಸಗಳನ್ನು ಮಾಡುತ್ತಾರೆ. ಇವರಿಬ್ಬರಲ್ಲಿ ಯಾರ ಬಂದರೂ ನಮಗೆ ಸಂತೋಷ ಎನ್ನುವವರು ಇದ್ದಾರೆ. ಆದರೆ, ಬಿಜೆಪಿಯ ಗೋಪಾಲ ಕಾರಜೋಳ ಅವರ ಕುರಿತು ಮಾತನಾಡಲು ಜನ ಅಷ್ಟೊಂದು ಒಲವು ತೋರಲಿಲ್ಲ. ಜೊತೆಗೆ ಲಿಂಗಾಯತ ವಿಚಾರ ಬಗ್ಗೆ ಕೂಡ ಮಾತನಾಡಲು ಜನರು ಅಷ್ಟಾಗಿ ಮುಂದೆ ಬರಲಿಲ್ಲ.

ನಾಗಠಾಣದಿಂದ ೨೬ ಕಿ ಮೀ ದೂರವಿರುವ ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗತವಾಗಿ ಜನರು ಮಾತನಾಡಿದ್ದೇ ಹೆಚ್ಚು. ಈ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ಸಿನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಯಶವಂತರಾಯಗೌಡ ಪಾಟೀಲ್ ಅವರು ಮತ್ತೆ ಈ ಬಾರಿ ಸ್ಪರ್ಧೆಯಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ದಯಾಸಾಗರ ಪಾಟೀಲ್, ಜೆಡಿಎಸ್ ನಿಂದ ಬಸವರಾಜ್ ಪಾಟೀಲ್ ಕಣದಲ್ಲಿದ್ದಾರೆ. ಕಳೆದ ಬಾರಿ ಕೆಜೆಪಿ ಯಿಂದ ಸ್ಪರ್ಧಿಸಿ ರನ್ನರ್ ಅಪ ಆಗಿದ್ದ ರವಿಕಾಂತ ಪಾಟೀಲ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಂಡಾಯ ಸಾರಿ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದಾರೆ.

ಒಟ್ಟಾರೆ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಈ ಕ್ಷೇತ್ರದಲ್ಲಿ ಸ್ಪರ್ಧೆ ಏರ್ಪಡುವ ಸಾಧ್ಯತೆ ಜನರ ಬಾಯಿಂದ ಕೇಳಿಬಂದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಯೋಜನೆಗಳ ಬಗ್ಗೆ ಕಲವರು ಅಭಿಮಾನದಿಂದ ಮಾತನಾಡಿದ್ದು ಇದೆ. ಇತ್ತ, ಸೈಕಲ್ ಪಂಚರ್ ಶಾಪ್, ಪಾನ್ ಶಾಪ್, ಬೀದಿ ವ್ಯಾಪಾರಿಗಳು ಪಕ್ಷೇತರ ಅಭ್ಯರ್ಥಿ ರವಿಕಾಂತ ಅವರ ಬಗ್ಗೆ ಒಲವು ತೋರಿದ್ದು ಕಂಡುಬಂತು. ಎದುರಿಗೆ ಸಿಕ್ಕ ಇನ್ನು ಕೆಲವರು ಕಾಂಗ್ರೆಸ್ ಬಂದರೆ ನಮಗೆ ಅನುಕೂಲ ಆಗುತ್ತೆ ಎನ್ನುವ ಮಾತುಗಳನ್ನು ಆಡಿದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿರುವ ದಯಾಸಾಗರ್ ಅವರ ಬಗ್ಗೆ ಇಂಡಿಯಲ್ಲಿ ಮಾತ್ರ ಜನರು ಮಾತನಾಡಲು ಆಸಕ್ತಿ ತೋರಲಿಲ್ಲ. ಆದರೆ, ಅಥರ್ಗ ಹಾಗೂ ರೂಗಿ ಗ್ರಾಮಗಳಲ್ಲಿ ಬಿಜೆಪಿ ಬಗ್ಗೆ ವಿಶೇಷ ಒಲವು ತೋರಿಸಿದ್ದು ಕಂಡು ಬಂತು. ಗಮನಾರ್ಹ ಸಂಗತಿ ಎಂದರೆ ದಯಾಸಾಗರ್ ಅವರು ಊರು ಅಥರ್ಗ. ಇಲ್ಲಿಯ ಜನರು ದಯಾಸಾಗರ್ ಬಗ್ಗೆ ಒಲವು ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿದರು. ಮೋದಿ ಅವರು ಕೇವಲ ಮಾತುಗಾರ, ಅವರಿಂದ ಏನೂ ಕೆಲಸ ಆಗುತ್ತಿಲ್ಲ ಎನ್ನುವ ಅರ್ಥದಲ್ಲಿ ಹಳ್ಳಿಗರು ಮಾತನಾಡಿದ್ದು ವಿಶೇಷವಾಗಿತ್ತು.

ಇಂಡಿ ಕ್ಷೇತ್ರ ಮುಗಿಸಿ ನೇರವಾಗಿ ವಿಜಯಪುರ ನಗರ ಕ್ಷೇತ್ರಕ್ಕೆ ತಲುಪುವ ಹೊತ್ತಿಗೆ ಸೂರ್ಯನ ಉರಿ ತಾಪ ತಣ್ಣಗಾಗಿ ಪಶ್ಚಿಮದ ಅಂಚಿಗೆ ಸರಿದಿದ್ದ ಇಳಿಸಂಜೆಯಲ್ಲಿ ಮೊದಲಿಗೆ ಸಿಕ್ಕವರು ಆಟೋ ಚಾಲಕರು. ಇವರ ಪೈಕಿ ಸೋಮಶೇಖರ್ ಅರಭಾವಿ ಮಾತನಾಡುತ್ತ, “ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು” ಎಂದು ಕಡ್ಡಿಮುರಿದ ಹಾಗೆ ಹೇಳಿದರು. ಮುಂದುವರೆದು ಮಾತನಾಡಿ “ಸಂವಿಧಾನ ವಿರೋಧಿ ಹೇಳಿಕೆ ನೀಡುವ ನಾಯಕರಿರುವ ಪಕ್ಷ ದೇಶಕ್ಕೆ ಆತಂಕಕಾರಿ. ಸಂವಿಧಾನ ಉಳಿವುದಕ್ಕಾಗಿ ಕಾಂಗ್ರೆಸ್ ಬರಲಿ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಲಿ,” ಎಂದು ವಿವರಿಸಿದರು. ಹೆಸರು ಹೇಳಲು ಇಚ್ಚಿಸದ ಮಹಿಳೆಯೊಬ್ಬರು ಬಿಜೆಪಿಯನ್ನು ಸ್ಥಳೀಯವಾಗಿ ಒಪ್ಪಿಕೊಳ್ಳುತ್ತಲೇ ನರೇಂದ್ರ ಮೋದಿ ಅವರ ಬಗ್ಗೆ ಕಟು ಶಬ್ದಗಳಲ್ಲಿ ಮಾತನಾಡಿದರು. “ಬ್ಯಾಂಕ್ ಖಾತೆ ಮಾಡಿಸಿಕೊಂಡು ಎಷ್ಟು ದಿನ ಆಯಿತು, ಒಂದು ರೂಪಾಯಿ ಕೂಡ ಹಾಕಿಲ್ಲ ಮೋದಿ,” ಎಂದು ಏಕವಚನದಲ್ಲೇ ತರಾಟೆಗೆ ತಗೆದುಕೊಂಡರು.

ಬಿಜೆಪಿಯಿಂದ ಸ್ಪರ್ಧಿಸಿರುವ ಬಸನಗೌಡ ಯತ್ನಾಳ ಅವರ ಬಗ್ಗೆ ಕೆಲವರು ಒಲವು ತೋರಿದ್ದು ಕಂಡು ಬಂತು. ಜೆಡಿಎಸ್ ನಿಂದ ಸ್ಪರ್ಧಿಸಿರುವ ಸಂಗಪ್ಪ ಬೆಳ್ಳುಬ್ಬಿ ಅವರ ಬಗ್ಗೆ ಜನರು ಮಾತನಾಡಲು ಅಷ್ಟಾಗಿ ವಿಶೇಷ ಆಸಕ್ತಿ ತೋರಲಿಲ್ಲ. ಕಾಂಗ್ರೆಸ್ ನಿಂದ ಸ್ಪರ್ಧಿಸಿರುವ ಅಬ್ದುಲ್ ಹಮ್ಮೀದ್ ಬಗ್ಗೆ ಮುಸ್ಲಿಮರು ಆಸಕ್ತಿ ತೋರಿದರು. ಹಿಂದುತ್ವ ಸಂಘರ್ಷಗಳು ಇಲ್ಲಿ ಜೀವಂತವಾಗಿರುವುದರಿಂದ ಕೋಮುರಾಜಕಾರಣವೂ ಕೂಡ ಇಲ್ಲಿ ಹೆಚ್ಚಳವಾಗಿದೆ. ಈ ಕಾರಣಕ್ಕಾಗಿಯೇ ಏನೋ ಕೆಲವು ಮುಸ್ಲಿಂ ನಾಯಕರು ಬಿಜೆಪಿ ಬಗ್ಗೆ ಮಾತನಾಡಲು ಹಿಂಜರಿದರು. ಒಟ್ಟಾರೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಸ್ಥಳೀಯರ ಅಭಿಪ್ರಾಯ ಪ್ರಕಾರ ಕಾಂಗ್ರೆಸ್ ಗೆಲುವಿಗೆ ಹತ್ತಿರವಿದೆ ಎನ್ನುವ ಮಾತುಗಳೇ ಹೆಚ್ಚಾಗಿವೆ.

ವಿಜಯಪುರ ಚುನಾವಣಾ ಪ್ರವಾಸ ಮುಗಿಸಿ ಮರುದಿನ ನೇರವಾಗಿ ಐತಿಹಾಸಿಕ ಕ್ಷೇತ್ರ ಬಾದಾಮಿ ವಿಧಾನಸಭಾ ಕ್ಷೇತ್ರಕ್ಕೆ ಕಾಲಿಟ್ಟೆವು. ಇಡೀ ದಿನವನ್ನು ಬಾದಾಮಿ ಸೇರಿದಂತೆ ಸುತ್ತಲಿನ ಹಳ್ಳಿಗಳಲ್ಲಿ ಸಂಚರಿಸಿದಾಗ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬೆಂಬಲಿಸುವವರು ಹೆಚ್ಚಾಗಿ ಕಂಡುಬಂದರು. ಇಡೀ ಬಾದಾಮಿ ಕ್ಷೇತ್ರದಲ್ಲಿ ಈ ಬಾರಿ ತಾಲೂಕು ಆಗಿರುವ ಗುಳೆದಗುಡ್ಡ ಮತಗಳು ನಿರ್ಣಾಯಕ. ಇಲ್ಲಿಯವರೇ ಆದ ಜೆಡಿಎಸ್ ಅಭ್ಯರ್ಥಿ ಹನಮಂತ ಮಾವಿನಮರದ ಬಗ್ಗೆ ಗುಳೆದಗುಡ್ಡದ ಜನತೆ ಪೂರ್ತಿಯಾಗಿ ಒಪ್ಪಿಕೊಂಡಿಲ್ಲ. ಈ ವಿಚಾರವಾಗಿ ಇಲ್ಲಿಯ ಬಸವರಾಜ ಎಂಬುವರು ಮಾತನಾಡುತ್ತ, “ಮಾವಿನಮರದ ನಮ್ಮ ಮನೆಯ ಅಣ್ಣನಾದರೂ ನಾವು ಅವರನ್ನು ಒಪ್ಪಿಕೊಳ್ಳುವುದಿಲ್ಲ. ನಮಗೆ ಪಕ್ಷ ಮುಖ್ಯ. ಹೀಗಾಗಿ ಗುಳೆದಗುಡ್ಡದ ನೂರಾರು ಜನರು ಸೇರಿ ಸಿದ್ದರಾಮಯ್ಯ ಅವರನ್ನು ಖುದ್ದು ಭೇಟಿಯಾಗಿ ಬಾಂಡ್ ಬರೆಸಿಕೊಂಡು ಬಂದಿದ್ದೇವೆ. ಚಾಮುಂಡೇಶ್ವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿಕೊಂಡು ಬರುವುದಾಗಿ ಅವರಿಗೆ ವಚನಕೊಟ್ಟಿದ್ದೇವೆ. ಸದ್ಯದ ವಾತಾವರಣ ಸಿದ್ದರಾಮಯ್ಯ ಪರವಿದೆ. ಸಿದ್ದರಾಮಯ್ಯ ಅವರು ೭೫ ಸಾವಿರಕ್ಕಿಂತಲೂ ಅಧಿಕ ಮತ ಪಡೆದು ಗೆದ್ದೇ ಗೆಲ್ಲುತ್ತಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಿಎಂ ಬಾದಾಮಿ ಸ್ಪರ್ಧೆಯು ಮುನ್ನೆಲೆಗೆ ತಂದ ಕನ್ನಡ ಸಾಮ್ರಾಟ ಪುಲಿಕೇಶಿಯ ಚರಿತೆ

ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಮುಲು ಅವರ ಬಗ್ಗೆ ಕೂಡ ಒಲವು ಸಾಕಷ್ಟು ಮತದಾರರು ತೋರಿಸಿದ್ದಾರೆ. ಆದರೆ, ರಾಮುಲು ಅವರ ಬಗ್ಗೆ ಒಲವು ತೋರಿಸಿದವರೇ ಎಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಸ್ವಲ್ಪ ಮತದಲ್ಲಿ ಹಿನ್ನಡೆ ಆಗಬಹುದು ಎನ್ನುವ ಆತಂಕವನ್ನು ಕೂಡ ವ್ಯಕ್ತಪಡಿಸಿದ್ದು ಕಂಡುಬಂತು.

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಮಾತನಾಡಲು ಬಾದಾಮಿ ಜನತೆ ಅಷ್ಟಾಗಿ ಆಸಕ್ತಿ ತೋರಲಿಲ್ಲ. ಗಮನಾರ್ಹ ಸಂಗತಿ ಮುತ್ತಲಗೆರೆ ಗ್ರಾಮದ ಕೆಲವರು ಮಾತನಾಡಿ, “ಬಳ್ಳಾರಿಯಿಂದ ಕೆಲವು ಜನರು ಬಂದು ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿ ಎಂದು ಹಳ್ಳಿ ಹಳ್ಳಿಗೆ ಹೋಗಿ ಹೇಳುತ್ತಿದ್ದಾರೆ,” ಎಂದು ತಿಳಿಸಿದರು. ಬಳ್ಳಾರಿಯವರೇ ರಾಮುಲು ಅವರ ವಿರುದ್ಧ ಕೆಲಸ ಮಾಡುತ್ತಿರುವುದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ ಗೆದ್ದುಬಂದರೆ ಬಾದಾಮಿ ಅಭಿವೃದ್ಧಿ ಆಗುತ್ತೆ ಎನ್ನುವ ಊಹೆ ಬಹಳ ಜನರಲ್ಲಿ ಇದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More