ಅಂತಿಮ ವಿಶ್ಲೇಷಣೆ | ಬಯಲುಸೀಮೆಯಲ್ಲಿ ಪಕ್ಷಗಳ ಎದೆಬಡಿತ ಹೆಚ್ಚಿಸಿದೆ ಬಂಡಾಯ

ತುಮಕೂರು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬಂಡಾಯ ಮತ್ತು ಹೊಂದಾಣಿಕೆ ರಾಜಕಾರಣ ಜೆಡಿಎಸ್‌ ಬಲ ಕುಗ್ಗಿಸಿದರೆ ಆಶ್ಚರ್ಯವಿಲ್ಲ. ಹಲವೆಡೆ ಒಡೆದ ಮನೆಯಾದ ಕಾಂಗ್ರೆಸ್‌ಗೂ ಇದರ ಲಾಭ ಧಕ್ಕುತ್ತದೆ ಎನ್ನಲಾಗದು. ಹಾಗಾಗಿ ಕಾಂಗ್ರೆಸ್‌, ಜೆಡಿಎಸ್‌ನ ನಿರೀಕ್ಷೆ ಆಚೀಚೆ ಆಗುವುದು ಸ್ಪಷ್ಟ

ಕುಡಿಯುವ ನೀರಿನ ಸಮಸ್ಯೆಯಿಂದ ಕಂಗೆಟ್ಟಿರುವ ಬಯಲು ಸೀಮೆಯ ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಚುನಾವಣೆಯ ಕಾವು ತುಸು ಹೆಚ್ಚೇ ಎನ್ನುವಷ್ಟಿದೆ. ಬರಪೀಡಿತ ಈ ಜಿಲ್ಲೆಗಳಲ್ಲಿ ಬಂಡಾಯ, ಭಿನ್ನಮತ, ಹೊಂದಾಣಿಕೆ ರಾಜಕಾರಣವು ಹಲವು ಕ್ಷೇತ್ರಗಳಲ್ಲಿ ಅಚ್ಚರಿಯ ಫಲಿತಾಂಶ ನೀಡಿದರೆ ಆಶ್ಚರ್ಯವಿಲ್ಲ ಎಂಬುದು ಸಾಮಾನ್ಯವಾಗಿ ಕೇಳಿಬರುವ ಅಭಿಪ್ರಾಯವಾಗಿದೆ.

ಕುಡಿಯುವ ನೀರು, ರಸ್ತೆ, ಕೆರೆ ತುಂಬಿಸುವ ಭರವಸೆ, ಶಾಸಕರ ಜನ ಸಂಪರ್ಕ ಮತ್ತಿತರ ವಿಚಾರಗಳು ಚುನಾವಣಾ ವಿಷಯಗಳು ಎಂಬುದನ್ನು ಜನರು ಸ್ಪಷ್ಟವಾಗಿ ಹೇಳುತ್ತಲೇ ಪಕ್ಷಕ್ಕಿಂತ ಅಭ್ಯರ್ಥಿ ಮುಖ್ಯ ಎಂದು ಪ್ರತಿಪಾದಿಸುತ್ತಾರೆ. ಹಳೆಯ ಮೈಸೂರು ಕರ್ನಾಟಕ ವ್ಯಾಪ್ತಿಗೆ ಬರುವ ಈ ಮೂರು ಜಿಲ್ಲೆಗಳ ೨೨ ಕ್ಷೇತ್ರಗಳ ಪೈಕಿ ಬಹುತೇಕ ಹಾಲಿ ಶಾಸಕರು ಹಾಗೂ ಕಳೆದ ವರ್ಷ ಸೋತ ಅಭ್ಯರ್ಥಿಗಳೇ ಟಿಕೆಟ್‌ ಗಿಟ್ಟಿಸಿದ್ದಾರೆ. ಬಹುತೇಕ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನಡುವೆ ತೀವ್ರ ಪೈಪೋಟಿಯಿದ್ದು, ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸ್ಪರ್ಧೆ ನೆಪಮಾತ್ರ. ಮೂರೂ ಪಕ್ಷಗಳನ್ನು ಬಂಡಾಯದ ಬಿಸಿ ಜೋರಾಗಿ ಸುಡುತ್ತಿದ್ದು, ಯಾರನ್ನು ಆಹುತಿ ಪಡೆಯಲಿದೆ ಎಂದು ಅಂದಾಜಿಸುವುದು ಕಷ್ಟಸಾಧ್ಯ. ನೇತ್ರಾವತಿ ಉಪನದಿಯಾದ ಎತ್ತಿನಹೊಳೆಯಿಂದ ನೀರು ತರುವ ಯೋಜನೆಯು ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದಿದ್ದು, ಜಾತಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ನಿರ್ವಿವಾದ.

ಮೂರು ಜಿಲ್ಲೆಗಳ ಪೈಕಿ ೧೧ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಕಲ್ಪತರು ನಾಡು ತುಮಕೂರಿನಲ್ಲಿ ಕಳೆದ ಬಾರಿ ಜೆಡಿಎಸ್‌ ಆರು, ಕಾಂಗ್ರೆಸ್‌ ನಾಲ್ಕು ಮತ್ತು ಬಿಜೆಪಿ ಒಂದು ಸ್ಥಾನ ಗೆದ್ದಿತ್ತು. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿ ಪರಮೇಶ್ವರ್‌, ಕಾನೂನು ಸಚಿವ ಜಯಚಂದ್ರ ಅವರ ತವರು ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್‌ ಬಲ ಹೆಚ್ಚಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಇದರಿಂದ ಜೆಡಿಎಸ್‌ ಪ್ರಾಬಲ್ಯ ತಗ್ಗುವ ಸಾಧ್ಯತೆ ಇದ್ದು, ಬಿಜೆಪಿ ಕಳೆದ ಬಾರಿಯ ನಿರ್ವಹಣೆ ತೋರುವುದು ದುರ್ಲಭ ಎನ್ನುವ ಚರ್ಚೆ ಬಿರುಸಾಗಿದೆ. ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಟಿಕೆಟ್‌ ತಪ್ಪಿಸಿರುವುದು ಬಿಜೆಪಿಗೆ ದುಬಾರಿಯಾಗಲಿದೆ. ಮಾಜಿ ಸಂಸದ ಬಸವರಾಜು ಅವರ ಪುತ್ರ ಜ್ಯೋತಿ ಗಣೇಶ್‌ ಅವರು ಬಿಜೆಪಿಯ ಹುರಿಯಾಳಾಗಿ ತುಮಕೂರು ನಗರದಲ್ಲಿ ಕಣಕ್ಕಿಳಿದಿದ್ದಾರೆ. ಅವರನ್ನು ಸೋಲಿಸಲು ಸೊಗಡು ಶಿವಣ್ಣ ಟೊಂಕ ಕಟ್ಟಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಕೇಂದ್ರ ಸಚಿವ ಅನಂತಕುಮಾರ್‌ ಬಣಕ್ಕೆ ಜಿಗಿದಿರುವ ತುಮಕೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್‌ಗೌಡ ಅವರಿಗೆ ಮಾಜಿ ಸಚಿವ ಚೆನ್ನಗಪ್ಪ ಅವರ ಪುತ್ರ ಗೌರಿ ಶಂಕರ್ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ.

ಕಾಂಗ್ರೆಸ್‌ ರಾಜ್ಯ ಘಟಕದ ಅಧ್ಯಕ್ಷ ಪರಮೇಶ್ವರ್‌ ಅವರಿಗೆ ಆಘಾತ ನೀಡಿದ್ದ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಅವರು ಗೆಲುವಿಗೆ ಸಾಕಷ್ಟು ಬೆವರು ಹರಿಸಬೇಕಿದೆ. ಶಿರಾ ಕ್ಷೇತ್ರದಲ್ಲಿ ಟಿ ಬಿ ಜಯಚಂದ್ರ ಅವರು ಉತ್ತಮ ಕೆಲಸ ಮಾಡಿದ್ದಾರೆ ಎನ್ನುವ ಅಭಿಪ್ರಾಯದ ಹೊರತಾಗಿಯೂ ಜೆಡಿಎಸ್‌ ಅಭ್ಯರ್ಥಿಯಿಂದ ಭಾರಿ ಪೈಪೋಟಿ ಎದುರಿಸುತ್ತಿದ್ದಾರೆ. ಬೃಹತ್‌ ಸೋಲಾರ್‌ ಪಾರ್ಕ್‌ ಹೊಂದುವ ಮೂಲಕ ಜಗತ್ಪ್ರಸಿದ್ಧವಾದ ತುಮಕೂರು ಜಿಲ್ಲೆಯ ಉತ್ತರ ಭಾಗದ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ ಇದೆ. ಆದರೆ, ಅದನ್ನು ಸಮರ್ಥವಾಗಿ ಬಳಸಿದರೆ ಮಾತ್ರ ಗೆಲುವಿನ ಗುರಿ ಮುಟ್ಟಲು ಸಾಧ್ಯ. ಇಲ್ಲವಾದಲ್ಲಿ ಅದು ಜೆಡಿಎಸ್‌ ಪಾಲಾಗುವ ಸಾಧ್ಯತೆ ಇದೆ. ಕನಕಪುರ ಜಿಲ್ಲೆಯೊಂದಿಗೆ ತುಮಕೂರಿಗೆ ಸಾಮ್ರಾಜ್ಯ ವಿಸ್ತರಿಸಲು ಯತ್ನಿಸುತ್ತಿರುವ ಇಂಧನ ಸಚಿವ ಡಿ ಕೆ ಶಿವಕುಮಾರ್‌ ಅವರು ತಮ್ಮ ಸಂಬಂಧಿ ರಂಗನಾಥ್‌ ಅವರನ್ನು ಕುಣಿಗಲ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ್ದಾರೆ. ಸಹೋದರರಾದ ಜೆಡಿಎಸ್‌-ಬಿಜೆಪಿ ಅಭ್ಯರ್ಥಿಗಳ ಹೋರಾಟವು ಶಿವಕುಮಾರ್ ಸಂಬಂಧಿಗೆ ಅನುಕೂಲ ಮಾಡಿಕೊಡಲಿದೆ ಎನ್ನುವ ನಂಬಿಕೆ ಕಾಂಗ್ರೆಸ್‌ ಕಾರ್ಯಕರ್ತರದ್ದು.

ದಶಕದ ಹಿಂದೆ ಹೊಸ ಜಿಲ್ಲೆಯಾಗಿ ರೂಪುಗೊಂಡಿರುವ ಚಿಕ್ಕಬಳ್ಳಾಪುರದ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಗೆದ್ದಿತ್ತು. ಇನ್ನೆರಡು ಜೆಡಿಎಸ್‌ ಪಾಲಾಗಿದ್ದು, ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಶಕ್ತಿ ಪ್ರದರ್ಶಿಸಿದ್ದರು. ೨೦೦೮ರಲ್ಲಿ ಐದರ ಪೈಕಿ ನಾಲ್ಕು ಸ್ಥಾನ ಗೆದ್ದಿದ್ದ ಕಾಂಗ್ರೆಸ್‌, ಈ ಬಾರಿ ಬಲವೃದ್ಧಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ಚಿಕ್ಕಬಳ್ಳಾಪುರ ನಗರ ಕ್ಷೇತ್ರದಲ್ಲೇ ಕಾಂಗ್ರೆಸ್‌ ಬಂಡಾಯದ ಬಿಸಿ ಎದುರಿಸುತ್ತಿದೆ. ಬಂಡಾಯ ಅಭ್ಯರ್ಥಿ ಪಡೆಯುವ ಮತಗಳು ಜೆಡಿಎಸ್‌ನ ಬಚ್ಚೇಗೌಡರಿಗೆ ಅನುಕೂಲಕರ ವಾತಾವರಣ ಸೃಷ್ಟಿಸುವ ಸಾಧ್ಯತೆ ಇದೆ. ಶಿಡ್ಲಘಟ್ಟದಲ್ಲಿ ಟಿಕೆಟ್‌ ನೀಡುವ ವಿಚಾರದಲ್ಲಿ ಜೆಡಿಎಸ್‌ ಮಾಡಿಕೊಂಡಿರುವ ಯಡವಟ್ಟು ಕಾಂಗ್ರೆಸ್‌ಗೆ ವರದಾನವಾಗಲಿದೆ ಎನ್ನಲಾಗುತ್ತಿದೆ. ಇಬ್ಬರಿಗೆ ಬಿ ಫಾರಂ ಹಂಚಿಕೆ ಮಾಡಿ ಕೊನೆಗೆ ಹಾಲಿ ಶಾಸಕ ರಾಜಣ್ಣ ಅವರಿಗೆ ಜೆಡಿಎಸ್‌ ಟಿಕೆಟ್‌ ತಪ್ಪಿಸಿದೆ. ರಾಜಣ್ಣ ಬಂಡಾಯ ಸಾರಿದ್ದು, ಇದು ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪಗೆ ನೆರವಾಗುವ ಸಾಧ್ಯತೆ ಇದೆ.

ತೆಲುಗು ಭಾಷಿಕರ ಪ್ರಭಾವ ಹೆಚ್ಚಾಗಿರುವ ಗೌರಿಬಿದನೂರಿನಲ್ಲಿ ಉಪಸಭಾಪತಿಯಾಗಿರುವ ಶಿವಶಂಕರ ರೆಡ್ಡಿ ಅವರು ಸತತ ಐದನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಶಿವಶಂಕರ ರೆಡ್ಡಿ ವಿರುದ್ಧದ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ಅಭ್ಯರ್ಥಿ ಇಲ್ಲದಿರುವುದು ಅವರಿಗೆ ಅನುಕೂಲಕರವಾಗಿದೆ ಎನ್ನಲಾಗುತ್ತಿದೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿನಿ ತಾರೆ ಸಾಯಿಕುಮಾರ್‌ ಅವರು ಕಣಕ್ಕಿಳಿದಿರುವುದು ಅಲ್ಲಿನ ರಾಜಕಾರಣಕ್ಕೆ ರಂಗು ತಂದಿದೆ. ಜೆಡಿಎಸ್ ಬಂಡಾಯಕ್ಕೆ ನಲುಗುತ್ತಿದೆ. ಸಿಪಿಐ ಮುಖಂಡ ಶ್ರೀರಾಮರೆಡ್ಡಿ ಹಾಗೂ ಹಾಲಿ ಕಾಂಗ್ರೆಸ್‌ ಶಾಸಕ ಎನ್‌ ಎಸ್‌ ಸುಬ್ಬಾರೆಡ್ಡಿ ಅವರು ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಪಂಚಕೋನ ಸ್ಪರ್ಧೆಯಲ್ಲಿ ಜೆಡಿಎಸ್‌ ಬಂಡಾಯ ಅಭ್ಯರ್ಥಿ ಕಸಿಯುವ ಮತಗಳು ಯಾರಿಗೆ ಗೆಲುವಿಗೆ ಮಾಲೆ ಹಾಕಿಸುತ್ತದೆ ಎಂಬುದು ನಿಗೂಢವಾಗಿದೆ. ಚಿಂತಾಮಣಿಯಲ್ಲಿ ಜೆಡಿಎಸ್‌ ಶಾಸಕ ಜೆ ಕೆ ಸುಬ್ಬಾರೆಡ್ಡಿ ಹಾಗೂ ಕಾಂಗ್ರೆಸ್‌ನಿಂದ ಬಂಡಾಯ ಸಾರಿರುವ ಡಾ ಸುಧಾಕರ್ ಅವರ ನಡುವೆ ಭಾರಿ ಪೈಪೋಟಿ ಇದೆ. ಕಾಂಗ್ರೆಸ್‌ ಮತ ವಿಭಜನೆಯಲ್ಲಿ ಕೃಷ್ಣಾರೆಡ್ಡಿ ಅವರು ತಮ್ಮ ಗೆಲುವು ಅರಸುತ್ತಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಇದುವರೆಗೂ ಬಿಜೆಪಿಗೆ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಈ ಬಾರಿಯೂ ಅವಕಾಶ ಕ್ಷೀಣ.

ಚಿಕ್ಕಬಳ್ಳಾಪುರ ಮತ್ತು ತುಮಕೂರಿಗಿಂತಲೂ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿರುವ, ಬಹುಸಂಖ್ಯಾತ ತಮಿಳು ಭಾಷಿಕರಿರುವ ಕೋಲಾರ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಬಾರಿ ತಲಾ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರು, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರವಾಗಿ ಆಯ್ಕೆಯಾಗಿದ್ದ ಕೊತ್ತೂರು ಜಿ. ಮಂಜುನಾಥ್‌ ಆನಂತರ ಕಾಂಗ್ರೆಸ್ ಸೇರಿದ್ದರು.

ಮಾಜಿ ಸಚಿವ ಎಚ್ ಕೆ‌ ಮುನಿಯಪ್ಪ, ಆರೋಗ್ಯ ಸಚಿವ ಕೆ ಆರ್‌ ರಮೇಶ್‌ ಕುಮಾರ್‌, ವರ್ತೂರು ಪ್ರಕಾಶ್‌ ಅವರಂಥ ಘಟಾನುಘಟಿಗಳಿಂದ ಕೋಲಾರ ಜಿಲ್ಲೆಯು ರಾಜಕೀಯವಾಗಿ ಪ್ರಾಮುಖ್ಯ ಗಳಿಸಿಕೊಂಡಿದೆ. ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ ಬಲೆಗೆ ಬಿದ್ದು ಅಪಖ್ಯಾತಿಗೆ ಗುರಿಯಾಗಿದ್ದ ಕೆಜಿಎಫ್‌ ಬಿಜೆಪಿ ಮಾಜಿ ಶಾಸಕ ವೈ ಸಂಪಗಿ, ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದ ಬಿಜೆಪಿಯ ಕೃಷ್ಣಯ್ಯ ಶೆಟ್ಟಿ ಹಾಗೂ ಜಾತಿ ಪ್ರಮಾಣ ಪತ್ರ ವಿವಾದದಿಂದ ಉಮೇದುವಾರಿಕೆ ಸಲ್ಲಿಸಿದ ನಂತರ ಕೋರ್ಟ್ ತೀರ್ಪಿನಿಂದ ಸ್ಪರ್ಧಾ ಅರ್ಹತೆ ಕಳೆದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಕೊತ್ತೂರು ಜಿ. ಮಂಜುನಾಥ್ ಮುಜುಗರಕ್ಕೀಡಾಗಿದ್ದಾರೆ. ಇದರ ಜೊತೆಗೆ ಹಲವು ಕಾರಣಗಳಿಗೆ ಕೋಲಾರ ಜಿಲ್ಲಾ ರಾಜಕಾರಣವು ಈ ಬಾರಿ ಕುತೂಹಲ ಸೃಷ್ಟಿಸಿದೆ.

ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ. ಕೋಲಾರ ರಾಜಕಾರಣವನ್ನು ಕಾಂಗ್ರೆಸ್‌ ಹಿರಿಯ ಮುಖಂಡ ಮುನಿಯಪ್ಪ ನಿಯಂತ್ರಿಸುತ್ತಾರೆ ಎನ್ನುವ ಆರೋಪವಿದ್ದು, ಮೊದಲ ಪುತ್ರಿ ರೂಪಾ ಶಶಿಧರ್‌ ಅವರಿಗೆ ಕೆಜಿಎಫ್‌ನಿಂದ ಸ್ಪರ್ಧೆಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದ್ದಾರೆ. ಮತ್ತೊಬ್ಬ ಪುತ್ರಿಯನ್ನು ಮುಳಬಾಗಿಲಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದರು. ಜನರಿಂದ ಭಾರಿ ವಿರೋಧ ವ್ಯಕ್ತವಾದುದರಿಂದ ಮುಳಬಾಗಿಲಿನಲ್ಲಿ ಎರಡನೇ ಪುತ್ರಿಯ ಉಮೇದುವಾರಿಕೆಯನ್ನು ಮುನಿಯಪ್ಪ ಪುತ್ರಿ ಹಿಂಪಡೆದಿದ್ದಾರೆ. ಮಂಜುನಾಥ್‌ ಅವರ ವಿರುದ್ಧ ಮುನಿಯಪ್ಪ ಅವರೇ ಷಡ್ಯಂತ್ರ ನಡೆಸಿದ್ದಾರೆ ಎಂಬ ಕೂಗು ವ್ಯಾಪಕವಾಗಿದೆ. ಕಳೆದ ಬಾರಿ ತಾಯಿ ರಾಮಕ್ಕ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡಿದ್ದ ಸಂಪಗಿ ಈ ಬಾರಿ ಪುತ್ರಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿದ್ದ ಅಶ್ವಿನಿ ಅವರನ್ನು ಕಣಕ್ಕೆ ಇಳಿಸಿದ್ದಾರೆ. ಅಶ್ವಿನಿ ವಿರುದ್ಧ ರೂಪ ಶಶಿಧರ್‌ ಸೆಣಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ರೂಪಾ ಅವರನ್ನು ಮಣಿಸಿ ಅಶ್ವಿನಿ ಬೀಗಿದ್ದರು. ಈ ಬಾರಿ ಸ್ಥಳೀಯ ಕಾಂಗ್ರೆಸ್‌ ಮುಖಂಡ ಶ್ರೀನಿವಾಸ್‌ ಅವರಿಗೆ ಟಿಕೆಟ್‌ ತಪ್ಪಿದ್ದು, ಮುನಿಯಪ್ಪ ಪುತ್ರಿಗೆ ದುಬಾರಿಯಾಗಲಿದೆ ಎನ್ನಲಾಗುತ್ತಿದೆ.

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಸಚಿವ ಕೆ ಆರ್‌ ರಮೇಶ್‌ಕುಮಾರ್‌ ಹಾಗೂ ಜೆಡಿಎಸ್‌ ಅಭ್ಯರ್ಥಿ ಜಿ ಕೆ ವೆಂಕಟ ಶಿವರೆಡ್ಡಿ ನಡುವೆ ಐದು ವರ್ಷಕ್ಕೊಮ್ಮೆ ಶಾಸಕ ಸ್ಥಾನ ಬಿಟ್ಟುಕೊಡುವ ಪ್ರತೀತಿ ಇದೆ. ಇದು ಈ ಬಾರಿಯೂ ಮುಂದುವರಿಯುವ ಸಾಧ್ಯತೆ ಇದೆ. ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕ ಎಸ್‌ ಎನ್‌ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಅಭ್ಯರ್ಥಿ ವೆಂಕಟ ಮುನಿಯಪ್ಪ ಎದುರು ಪೈಪೋಟಿ ಇದೆ. ದಲಿತ ಸಮುದಾಯದ ಎಡಗೈ ಮತಗಳು ಹೆಚ್ಚಿದ್ದು, ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಿಲ್ಲ ಎನ್ನುವ ಅಂಶವನ್ನು ಬಿಜೆಪಿ ಪ್ರಬಲವಾಗಿ ಪ್ರಸ್ತಾಪಿಸುತ್ತಿರುವುದು ಕಾಂಗ್ರೆಸ್‌ ಅಭ್ಯರ್ಥಿಯನ್ನು ಚಿಂತೆಗೀಡು ಮಾಡಿದೆ. ಆದರೆ, ಹೊಂದಾಣಿಕೆ ರಾಜಕಾರಣ ಬಲ್ಲ ನಾರಾಯಣಸ್ವಾಮಿ ಈಜಿ ದಡ ಸೇರುವ ಸಾಮರ್ಥ್ಯ ಹೊಂದಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಪಾಯಿಂಟ್‌ ಟು ಪಾಯಿಂಟ್‌ | ದಿನ ೪ | ಮೂಲಸೌಕರ್ಯ ಇಲ್ಲದ ಕೋಲಾರ ಕ್ಷೇತ್ರಗಳು

ಕೋಲಾರದಲ್ಲಿ ಸತತ ಮೂರನೇ ಬಾರಿಗೆ ಗೆಲುವಿನ ಕನಸು ಕಾಣುತ್ತಿರುವ ಕುರುಬ ಸಮುದಾಯದ ವರ್ತೂರು ಪ್ರಕಾಶ್‌ ಅವರು ‘ನಮ್ಮ ಕಾಂಗ್ರೆಸ್‌ ಪಕ್ಷ’ ಸ್ಥಾಪಿಸಿ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ ದುರ್ಬಲ ಅಭ್ಯರ್ಥಿ ನಜೀರ್‌ ಅಹ್ಮದ್‌ ಎಂಬವರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ನ ಶ್ರೀನಿವಾಸಗೌಡ ಅವರು ಪ್ರಕಾಶ್‌ಗೆ ಸ್ವಲ್ಪಮಟ್ಟಿಗೆ ಸ್ಪರ್ಧೆ ಒಡ್ಡುವ ಸಾಧ್ಯತೆ ಇದೆ. ಆದರೆ, ಜನಸಂಪರ್ಕ ಹೊಂದಿರುವ ವರ್ತೂರು ಪ್ರಕಾಶ್‌ಗೆ ಗೆಲುವಿನ ಹಾದಿ ಕಷ್ಟವಲ್ಲ ಎನ್ನುವ ಅಭಿಪ್ರಾಯವಿದೆ. ಕೋಲಾರ ಜಿಲ್ಲಾಧಿಕಾರಿಯಾಗಿ ಹೆಸರು ಗಳಿಸಿದ್ದ ಐಎಎಸ್‌ ಅಧಿಕಾರಿ ಡಿ ಕೆ ರವಿ ಅವರ ತಾಯಿ ಗೌರಮ್ಮ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಳಿದಿರುವುದು ವಿಶೇಷ. ರವಿ ಅವರ ಆತ್ಮಹತ್ಯೆಯ ಸುತ್ತ ವಿರೋಧ ಪಕ್ಷಗಳಾದ ಜೆಡಿಎಸ್‌ ಹಾಗೂ ಬಿಜೆಪಿ ನಡೆಸಿದ ರಾಜಕಾರಣ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ರವಿ ಅವರ ಸಾವಿನ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಬೆಂಬಲ ನೀಡಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರು ಗೌರಮ್ಮ ಅವರಿಗೆ ಟಿಕೆಟ್‌ ನೀಡಬೇಕಿತ್ತು. ಇಲ್ಲವೇ ಪರೋಕ್ಷ ಬೆಂಬಲವನ್ನಾದರೂ ನೀಡಬೇಕಿತ್ತು ಎಂಬ ಅಭಿಪ್ರಾಯವಿದೆ.

ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ಜೈಲು ಸೇರಿದ್ದ ಕೃಷ್ಣಯ್ಯ ಶೆಟ್ಟಿ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರು ಜೆಡಿಎಸ್‌ ಹಾಲಿ ಶಾಸಕ ಕೆ ಎಸ್‌ ಮಂಜುನಾಥಗೌಡ ಅವರಿಂದ ಪ್ರಬಲ ಪೈಪೋಟಿ ಎದುರಿಸುತ್ತಿದ್ದಾರೆ. ಮೂರೂ ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಲೋಕಸಭಾ ಸದಸ್ಯರಿದ್ದು, ಸಿದ್ದರಾಮಯ್ಯ ಸರ್ಕಾರದ ಪರವಾಗಿ ಅಹಿಂದ ಸಮುದಾಯದ ಒಲವು ವ್ಯಕ್ತವಾಗುತ್ತಿರುವುದು ಕಾಂಗ್ರೆಸ್‌ ಅಭ್ಯರ್ಥಿಗಳ ಪಾಲಿಗೆ ಆಶಾದಾಯಕ ಬೆಳವಣಿಗೆ. ಆದರೆ, ಅದೊಂದೇ ಗೆಲುವು ತಂದುಕೊಡುತ್ತದೆ ಎಂಬುದನ್ನು ನಂಬಿಕೂರಲು ಅಭ್ಯರ್ಥಿಗಳೂ ಸಿದ್ಧರಿಲ್ಲ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More