ಅಂತಿಮ ವಿಶ್ಲೇಷಣೆ | ಗೌಡ-ಸಿದ್ದರಾಮಯ್ಯ ಪ್ರತಿಷ್ಠೆಯ ಕಣವಾದ ಕಾವೇರಿ ಕಣಿವೆ-1

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಐದು ಜಿಲ್ಲೆಗಳಲ್ಲಿ, ೮೦೦ ಕಿಲೋಮೀಟರ್ ಸಂಚರಿಸಿ ನಡೆಸಿದ ಸಾಕ್ಷಾತ್‌ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿದ ಕಣ ಚಿತ್ರಣವಿದು. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಕದನ ಕಾವೇರಿ ಕಣಿವೆಯ ಚುನಾವಣಾ ವಿಶೇಷ

ಕಾಡು, ಕಣಿವೆ, ಬಯಲು-ಬರ ಪ್ರದೇಶ, ಮಳೆನಾಡು, ಸಮೃದ್ಧ ಹಸಿರು ಹೀಗೆ ಕೆಲವು ಮೈಲು ಕ್ರಮಿಸುವಷ್ಟರಲ್ಲಿ ಚಹರೆ ಬದಲಿಸಿಕೊಳ್ಳುವ ನಿಸರ್ಗ ಭಿನ್ನತೆಯನ್ನು,ಆಚಾರ ವಿಚಾರ, ಭಾಷಾ ವೈವಿಧ್ಯವನ್ನು ಹೊಂದಿರುವ ಕಾವೇರಿ ಕಣಿವೆ ವ್ಯಾಪ್ತಿಯ ಮೈಸೂರು,ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಜಾತಿ-ಮತ ಸಮೀಕರಣ ಪ್ರಧಾನ ರಾಜಕೀಯ ಹವಾಮಾನ ಕೂಡ ಭಿನ್ನ-ಭಿನ್ನ ಚಹರೆಗಳನ್ನು ಪ್ರಕಟಿಸುತ್ತದೆ. ಒಕ್ಕಲಿಗ ಜಾತಿ ಬಾಹುಳ್ಯ ಇರುವ ಊರುಗಳಲ್ಲಿ ನಿಂತರೆ ಜೆಡಿಎಸ್-ಕುಮಾರಸ್ವಾಮಿ ಸದ್ದು ಮೊಳಗುತ್ತದೆ. ಕುರುಬರ ಹುಂಡಿ, ಇತರ ಹಿಂದುಳಿದ ವರ್ಗಗಳಿರುವ ಕಡೆಗಳಲ್ಲಿ ಕಾಂಗ್ರೆಸ್-ಸಿದ್ದರಾಮಯ್ಯ ಹೆಸರು ಪ್ರತಿಧ್ವನಿಸುತ್ತದೆ. ಲಿಂಗಾಯಿತ ಬಾಹುಳ್ಯದ ಪ್ರದೇಶಗಳಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಪರ ಅಚಲ ವಿಶ್ವಾಸ ಕೇಳಿಸುತ್ತದೆ. ಆದರೆ, ಎಲ್ಲ ಒಕ್ಕಲಿಗರೂ ಜೆಡಿಎಸ್‌ಗೇ ಮತ ಹಾಕುತ್ತಾರೆನ್ನುವುದನ್ನು ಆ ಪಕ್ಷದವರೇ ನಂಬುವುದಿಲ್ಲ. ವರುಣಾ ವಿಷಯದಲ್ಲಿ ಪಕ್ಷವೇ ಮಾಡಿಕೊಂಡ ಬಾನಗಡಿಯಿಂದ ಬಿಜೆಪಿ ಮೇಲಿನ ಲಿಂಗಾಯಿತರ ವಿಶ್ವಾಸದಲ್ಲಿ ಗಮನಾರ್ಹ ಕದಲಿಕೆ ಕಂಡಿದೆ. ಅಂತೆಯೇ, ಕುರುಬರ ಹೊರತು ಅಹಿಂದ ವರ್ಗಗಳ ಮತಗಳು ಸಾರಸಗಟು ತನ್ನ ಬುಟ್ಟಿಯಲ್ಲಿವೆ ಎಂದು ಹೇಳಲಾಗದ ಸ್ಥಿತಿಯನ್ನು ಕಾಂಗ್ರೆಸ್ ತಂದುಕೊಂಡಿದೆ.

ಆಯಾ ಪಕ್ಷಗಳ ಸಾರಥ್ಯ ವಹಿಸಿರುವ ನಾಯಕರ ಜಾತಿ ಬಲದ ಜೊತೆ ಉಳಿದ ಜಾತಿ-ಮತಗಳ ವಿಶ್ವಾಸವನ್ನು ಯಾರು ಹೆಚ್ಚು ಗಿಟ್ಟಿಸಬಲ್ಲರೋ ಅವರು ಫಲಿತಾಂಶದಲ್ಲಿ ಮುಂಚೂಣಿ ಕಾಯ್ದುಕೊಳ್ಳುತ್ತಾರೆ ಎನ್ನುವುದು ಈ ಭಾಗದಲ್ಲಿ ಚರ್ಚಿತ ಲೆಕ್ಕಾಚಾರ. ಪ್ರಬಲ ಕೋಮುಗಳು ಒಂದೊಂದು ಪಕ್ಷಕ್ಕೆ ನಿಷ್ಠೆ ತೋರುತ್ತಿರುವಾಗ ಉಳಿದ ದುರ್ಬಲ ಜಾತಿ, ವರ್ಗಗಳು ಸುಮ್ಮನೆ ಇಲ್ಲ. ಅವು ಕೂಡ ತಮ್ಮ ಜಾತಿಯ ಜನನಾಯಕರಲ್ಲಿ, ಅವರು ಅನುಸರಿಸುವ ಪಕ್ಷಗಳಲ್ಲಿ ಗುರುತಿಸಿಕೊಳ್ಳಲು ತುಡಿಯುತ್ತಿವೆ. ಹಾಗಾಗಿ, “ಒಂದೇ ಜಾತಿ ನಂಬಿ ಯಾರೂ/ಯಾವ ಪಕ್ಷವೂ ಗೆಲ್ಲಲಾಗದು. ಯಾವುದೇ ಒಂದು ಜಾತಿ ಬಲ ಒಂದೆರಡು ಕ್ಷೇತ್ರಗಳಲ್ಲಿ ಗೆಲುವಿನ ಲಾಭ ತಂದುಕೊಡಬಹುದು. ಉಳಿದೆಲ್ಲ ಜಾತಿ, ಕೋಮಿನ ಜನರು ಸಂಘಟಿತವಾಗಿ ಹಕ್ಕು ಚಲಾಯಿಸಿದರೆ ಪ್ರಬಲ ಕೋಮನ್ನಷ್ಟೇ ನಂಬಿದವರು ನೆಲಕಚ್ಚಲೂಬಹುದು,’’ ಎನ್ನುವ ವಿಶ್ಲೇಷಣೆಯೂ ನಡೆದಿದೆ. ಅದರಾಚೆ, ಯಾವುದೇ ಊರು-ಕೇರಿಯ ರಸ್ತೆ, ವೃತ್ತ, ಅರಳಿಕಟ್ಟೆಗಳನ್ನು ದಾಟಿ ಜನಸಾಮಾನ್ಯರನ್ನು ಎದುರುಗೊಂಡರೆ ಅಲ್ಲಿ ಅಭಿವೃದ್ಧಿ ವಿಷಯ, ಸರ್ಕಾರಗಳ ಜನ ಕಲ್ಯಾಣ ಕಾರ್ಯಕ್ರಮ, ಜನಪ್ರತಿನಿಧಿ ಆದವರ ನಡುವಳಿಕೆ ಮುಂತಾದ ಸಂಗತಿಗಳು ಚರ್ಚಿತವಾಗುತ್ತವೆ.

ಯೋಜನೆಗಳ ಲಾಭ-ನಷ್ಟಗಳನ್ನು, ಕಷ್ಟ-ಸಂಕಷ್ಟಗಳನ್ನು ತಮ್ಮದೇ ಧಾಟಿಯಲ್ಲಿ ಜನ ವಿವರಿಸುವರು. “ನಮ್ಮ ಅಳಲು ಕೇಳದ ಪ್ರತಿನಿಧಿ ನಮಗೆ ಬೇಡ. ಯಾರು ಒಳ್ಳೇದು ಮಾಡಿದ್ದಾರೋ ಅವರಿಗೆ ನಮ್ಮ ಮತ,’’ ಎಂದು ನಿಷ್ಠೂರವಾಗಿ ಹೇಳುವರು. “ಈಗ ಬಲಾಬಲ ಇಂತಿದೆ. ಕೊನೆ ಒಂದೆರಡು ದಿನಗಳಲ್ಲಿ ಏನೂ ಆಗಬಹುದು,’’ ಎಂದು ಗೌಪ್ಯತೆ ಕಾಯ್ದುಕೊಳ್ಳುವರು. ಮಾತಿನ ಮಂಟಪ ಕಟ್ಟಿ, ಆಶ್ವಾಸನೆ ರೂಪದ ವಿಗ್ರಹ ಕೂರಿಸುವುದರಿಂದ ಪ್ರಯೋಜನವಿಲ್ಲ. ಕೊನೆಯ ಎರಡು ದಿನಗಳ ಗೌಪ್ಯ ಚಮತ್ಕಾರಗಳೇ ನಿರ್ಣಾಯಕ ಎನ್ನುವುದು ಬಹುಪಾಲು ಜನರ ಅಭಿಪ್ರಾಯ.

ಐದು ಜಿಲ್ಲೆಯ ಒಟ್ಟು ೩೧ ಕ್ಷೇತ್ರಗಳ ಪೈಕಿ ಮೂರ್ನಾಲ್ಕರಲ್ಲಿ, ‘ಇವರದ್ದೇ ಗೆಲುವು’ ಎಂದು ಸಾರಿ ಹೇಳುವಷ್ಟು ಕಣಚಿತ್ರಣ, ಮತದಾರರ ಒಲವು ನಿಚ್ಚಳವಾಗಿದೆ. ಉಳಿದೆಲ್ಲೆಡೆ ನೇರ ಹಣಾಹಣಿ, ಇಲ್ಲವೇ ತ್ರಿಕೋನ ಸ್ಪರ್ಧೆ. ಕಳೆದ ಅವಧಿಯಲ್ಲಿ ೧೬ ಕಡೆ ಕಾಂಗ್ರೆಸ್, ೧೨ರಲ್ಲಿ ಜೆಡಿಎಸ್, ೨ ಕ್ಷೇತ್ರಗಳಲ್ಲಿ ಬಿಜೆಪಿ, ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಅಭ್ಯರ್ಥಿ ಗೆಲುವು ದಾಖಲಿಸಿದ್ದರು. ಈ ಬಾರಿ ಹೆಚ್ಚು ಮತ ಫಸಲಿನ ನಿರೀಕ್ಷೆಯಲ್ಲಿರುವ ಜೆಡಿಎಸ್, ಸಿದ್ದರಾಮಯ್ಯಗೆ ‘ಒಕ್ಕಲಿಗ ವಿರೋಧಿ' ಪಟ್ಟ ಕಟ್ಟಿ, ತನ್ನ ಮತಬ್ಯಾಂಕ್‌ ಗಟ್ಟಿ ಮಾಡಿಕೊಳ್ಳುತ್ತಿದೆ. “ವೀರಶೈವ ಧರ್ಮವನ್ನು ಒಡೆದದ್ದೇ ಸಿದ್ದರಾಮಯ್ಯ. ಡಿಸಿಎಂ ಮಾಡದೆ ದಲಿತರನ್ನು ವಂಚಿಸಿದರು,’’ ಮುಂತಾದ ಆಪಾದನೆ ಮಾಡಿ, ಆಯಾ ಜಾತಿ-ಸಮುದಾಯದ ಮತ ವಿಭಜಿಸುವ ಪ್ರಯತ್ನವನ್ನು ಎದುರಾಳಿಗಳು ಮಾಡುತ್ತಿದ್ದಾರೆ. ಆದರೆ, ದೇವರಾಜ ಅರಸು ನಂತರ ಐದು ವರ್ಷ ಅಧಿಕಾರ ಪೂರೈಸಿದ್ದು, ಹಲವು ಭಾಗ್ಯಗಳನ್ನು ನೀಡಿದ್ದು ಮತ್ತು ಅವಕಾಶ ಒದಗಿದರೆ ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇರುವುದನ್ನು ಸಿದ್ದರಾಮಯ್ಯ ತಮ್ಮ ಪಾಲಿನ ಶಕ್ತಿಯನ್ನಾಗಿಸಿಕೊಂಡಿದ್ದಾರೆ. “ನನ್ನಿಂದ ಬೆಳೆದ ಸಿದ್ದರಾಮಯ್ಯ ಬೆನ್ನಿಗೆ ಚೂರಿ ಇರಿದರು,’’ ಎನ್ನುವ ದೇವೇಗೌಡರ ಏಟು, “ನನ್ನನ್ನು ಗುರುತಿಸಿ, ಬೆಳೆಸಿದ್ದು ಗೌಡರಲ್ಲ. ರಾಮಕೃಷ್ಣ ಹೆಗಡೆ,’’ ಎನ್ನುವ ಸಿದ್ದರಾಮಯ್ಯ ತಿರುಗೇಟು, ಈ ಇಬ್ಬರೂ ಹಳೆಯ ಒಡನಾಡಿಗಳು ತಮ್ಮ ಪ್ರತಿಷ್ಠೆಯನ್ನು ಮತ್ತೊಮ್ಮೆ ಪಣಕ್ಕೆ ಒಡ್ಡಿದ್ದನ್ನು ಬಿಂಬಿಸುವಂತಿವೆ. ದೇವೇಗೌಡರ ಕುಟುಂಬದ ಜೊತೆ ಸಂಬಂಧ ಹೊಂದಿರುವ ನಾಲ್ವರು (ಎಚ್‌ ಡಿ ರೇವಣ್ಣ-ಹೊಳೆನರಸೀಪುರ, ಕೆ ಎಸ್ ರಂಗಪ್ಪ-ಚಾಮರಾಜ, ಸಿ ಎನ್‌ ಬಾಲಕೃಷ್ಣ-ಶ್ರವಣಬೆಳಗೊಳ, ಡಿ ಸಿ ತಮ್ಮಣ್ಣ-ಮದ್ದೂರು) ಈ ಭಾಗದಲ್ಲಿ ಕಣದಲ್ಲಿರುವುದು; ಇವರೆಲ್ಲರ ಗೆಲುವನ್ನು ಈ ಕುಟುಂಬ ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವುದು ಇನ್ನೊಂದು ವಿಶೇಷ.

ಮೈಸೂರು ಜಿಲ್ಲೆಯಲ್ಲಿ ಕೈ-ದಳ ಹಣಾಹಣಿ

ಜಿಲ್ಲೆಯಲ್ಲಿ ಒಂದೆರಡು ಕ್ಷೇತ್ರ ಹೊರತು ಬಹುತೇಕ ಕಡೆ ಕಾಂಗ್ರೆಸ್-ಜೆಡಿಎಸ್‌ ನೇರ ಹಣಾಹಣಿ ಇದೆ. ಪೈಪೋಟಿ ನೀಡಬಹುದಾಗಿದ್ದ ಕ್ಷೇತ್ರಗಳಲ್ಲೂ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವ ಬಿಜೆಪಿ, ಜೆಡಿಎಸ್ ಜೊತೆ ಒಳಮೈತ್ರಿ ಸಾಧಿಸಿದೆ ಎನ್ನುವುದು ಬಹಿರಂಗ ಚರ್ಚೆಯ ಸಂಗತಿ. ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯಗೆ ಜೆಡಿಎಸ್‌ ಅಭ್ಯರ್ಥಿ ಜಿ ಟಿ ದೇವೇಗೌಡ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಒಕ್ಕಲಿಗ ಮತ ಬಾಹುಳ್ಯ ಇರುವ ಕಾರಣಕ್ಕೆ ಇಲ್ಲಿ ಜೆಡಿಎಸ್ ಗೆಲುವು ಸುಲಭ ಎನ್ನುವುದು ದಳಪತಿಗಳ ಲೆಕ್ಕಾಚಾರ. ಗೋಪಾಲ‌ ರಾವ್‌ ಎನ್ನುವ ಸಂಘ ಕಾರ್ಯಕರ್ತನನ್ನು ಕಣಕ್ಕಿಳಿಸಿರುವ ಬಿಜೆಪಿ ಈ ಮೂಲಕ ಜೆಡಿಎಸ್‌ಗೆ ಪರೋಕ್ಷ ಅನುಕೂಲ ಮಾಡಿದೆ. ವರುಣಾದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಸಮರ್ಥ ಎದುರಾಳಿಗಳೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದು ಇಲ್ಲಿ ಮಾತ್ರವಲ್ಲ ಸುತ್ತಲಿನ ಹಲವು ಕ್ಷೇತ್ರಗಳ ಬಿಜೆಪಿ ಹುರಿಯಾಳುಗಳ ಮೇಲೂ ಘಾತುಕ ಪರಿಣಾಮ ಬೀರಿದಂತಿದೆ. ನಂಜನಗೂಡಿನಲ್ಲಿ ಕಾಂಗ್ರೆಸ್‌ ನ ಕಳಲೆ ಕೇಶವಮೂರ್ತಿಗೆ ವಿ.ಶ್ರೀನಿವಾಸ ಪ್ರಸಾದ್ ಅಳಿಯ, ಬಸವಲಿಂಗಪ್ಪ ಮೊಮ್ಮಗ ಹರ್ಷವರ್ದನ್‌ ಎದುರಾಳಿ. ಉಪಚುನಾವಣೆಯಲ್ಲಿ ಬಲಾಢ್ಯ ಮಾವನನ್ನೇ ಮಣಿಸಿರುವಾಗ ಅಳಿಯ ಯಾವ ಲೆಕ್ಕ ಎನ್ನುವುದು ಕಾಂಗ್ರೆಸ್ಸಿಗರ ವಿಶ್ವಾಸ.

ತಿ ನರಸೀಪುರ ಮೀಸಲು ಕ್ಷೇತ್ರದಲ್ಲಿ ಸಚಿವ ಎಚ್ ಸಿ ಮಹದೇವಪ್ಪ ಗೆ ಜೆಡಿಎಸ್‌ನ ಅಶ್ವಿನ್‌ ಕುಮಾರ್, ಜೆಡಿಎಸ್ ಟಿಕೆಟ್ ವಂಚಿತರಾಗಿ ಬಿಜೆಪಿ ಸೇರಿ, ಅಭ್ಯರ್ಥಿಯಾಗಿರುವ ಎಸ್ ಶಂಕರ್‌ ಸವಾಲೊಡ್ಡಿದ್ದಾರೆ. ಜೆಡಿಎಸ್ ಜೊತೆ ಮಹದೇವಪ್ಪ ಮ್ಯಾಚ್ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆನ್ನುವ ಅನುಮಾನ ಕೂಡ ಇದೆ. ನಗರದ ಕೃಷ್ಣರಾಜದಲ್ಲಿ ಶಾಸಕ ಎಂ ಕೆ ಸೋಮಶೇಖರ್‌ಗೆ ಬಿಜೆಪಿಯ ಎಸ್‌ ಎ ರಾಮದಾಸ್ ಸವಾಲೊಡ್ಡಿದ್ದಾರೆ. ಹಾಲಿ ಮತ್ತು ಮಾಜಿ ಶಾಸಕರ ಬಗ್ಗೆ ಇರುವ ಅಸಮಾಧಾನವನ್ನು ನಗದು ಮಾಡಿಕೊಳ್ಳಲು ಬಿಎಸ್ಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್‌ ಯತ್ನಿಸುತ್ತಿದ್ದಾರೆ. ಚಾಮರಾಜದಲ್ಲಿ ಶಾಸಕ ವಾಸುಗೆ ಬಿಜೆಪಿ (ನಾಗೇಂದ್ರ), ಜೆಡಿಎಸ್ (ಕೆ ಎಸ್‌ ರಂಗಪ್ಪ) ಎದುರಾಳಿಗಳು. ಬೀಗರಾದ ರಂಗಪ್ಪ ಅವರನ್ನು ಗೆಲ್ಲಿಸಿಕೊಳ್ಳಲು ದೇವೇಗೌಡರ ಕುಟುಂಬ ಟೊಂಕಕಟ್ಟಿದೆ. ಆದರೆ, ಜೆಡಿಎಸ್ ಟಿಕೆಟ್ ವಂಚಿತರಾಗಿ ಬಂಡೆದ್ದಿರುವ ರೇವಣ್ಣ ಆಪ್ತ ಹರೀಶ್ ಗೌಡ, ರಂಗಪ್ಪಗೆ ಮುಳುವಾಗುವ ಸೂಚನೆ ರವಾನಿಸಿದ್ದಾರೆ. ಸಚಿವ ತನ್ವೀರ್‌ ಸೇಠ್ ಮತ್ತೊಮ್ಮೆ ಆಯ್ಕೆ ಬಯಸಿರುವ ನರಸಿಂಹ ರಾಜದಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಬ್ದುಲ್‌ ಮಜೀದ್‌ ಸಮರ್ಥ ಸ್ಪರ್ಧೆ ಒಡ್ಡಿದ್ದಾರೆ. ಜೆಡಿಎಸ್ (ಅಬ್ದುಲ್ಲಾ), ಬಿಜೆಪಿ (ಸಂದೇಶ್ ಸ್ವಾಮಿ) ಎರಡೂ ಪಕ್ಷಗಳು ಇಲ್ಲಿ ಬಂಡಾಯ ಎದುರಿಸುತ್ತಿವೆ. ಜೆಡಿಎಸ್ ಟಿಕೆಟ್ ವಂಚಿತ ಸಂದೇಶ್ ಸ್ವಾಮಿ ಬಿಜೆಪಿಯಿಂದ ಸ್ಪರ್ಧಿಸಿದರೆ, ಬಿಜೆಪಿ ಟಿಕೆಟ್ ಬಯಸಿದ್ದ ನಟರಾಜ್‌ ಸಮಾಜವಾದಿ ಪಕ್ಷದಿಂದ ಸೈಕಲ್‌ ತುಳಿಯುತ್ತಿದ್ದಾರೆ.

ಕೆ ಆರ್‌ ನಗರದಲ್ಲಿ ಜೆಡಿಎಸ್ ಶಾಸಕ ಸಾ ರಾ ಮಹೇಶ್‌ಗೆ ಕಾಂಗ್ರೆಸ್‌ನ ರವಿಶಂಕರ್ ಎದುರಾಳಿ. ಭವಾನಿ ರೇವಣ್ಣ ಸಾರಾ ಸೋಲಿಗೆ ಕರೆ ನೀಡಿದ್ದಾರೆನ್ನುವುದು ಚರ್ಚೆಯ ಸಂಗತಿಯಾಗಿತ್ತು. ಬಿಜೆಪಿ ದುರ್ಬಲ ಅಭ್ಯರ್ಥಿ (ಶ್ವೇತಾ) ಕಣಕ್ಕಿಳಿಸಿದ್ದು, ಟಿಕೆಟ್ ಆಕಾಂಕ್ಷಿ ಹೊಸಹಳ್ಳಿ ವೆಂಕಟೇಶ್ ಬಂಡೆದಿದ್ದಾರೆ. ದೇವೇಗೌಡರ ಕುಟುಂಬವನ್ನು ಜರೆದು, ಕಳೆದ ಸಂಸತ್‌ ಚುನಾವಣೆಯಲ್ಲಿ ಸೋತಿದ್ದ ಎಚ್‌ ವಿಶ್ವನಾಥ್‌, ಈಗ ಅದೇ ಗೌಡರ ಪಾಳೆಯ ಸೇರಿ ಹುಣಸೂರಿನಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದು, ಕಾಂಗ್ರೆಸ್ ಶಾಸಕ ಎಚ್‌ ಪಿ ಮಂಜುನಾಥ್‌ಗೆ ಸವಾಲಾಗಿದ್ದಾರೆ. ಪಿರಿಯಾಪಟ್ಟಣದಲ್ಲಿ ಕಾಂಗ್ರೆಸ್ ಶಾಸಕ ಕೆ ವೆಂಕಟೇಶ್‌ಗೆ ಜೆಡಿಎಸ್‌ನ‌ ಕೆ ಮಹದೇವ ಸತತ ೩ನೇ ಬಾರಿ ಎದುರಾಳಿಯಾಗಿದ್ದಾರೆ. ಈ ಇಬ್ಬರೂ ಒಕ್ಕಲಿಗರು. ಬಿಜೆಪಿ ಕುರುಬ ಸಮುದಾಯದ ಮಂಜುನಾಥ್ ಅವರನ್ನು ಕಣಕ್ಕಿಳಿಸಿದ್ದು ವೆಂಕಟೇಶ್ ತಲ್ಲಣಕ್ಕೆ ಕಾರಣವಾಗಿದೆ. ಹೆಗ್ಗಡದೇವನಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ಮತ್ತು ಮಾಜಿ ಶಾಸಕ ಚಿಕ್ಕಣ್ಣ ಮಧ್ಯೆ ಪೈಪೋಟಿ ಇದೆ. ತಂದೆಯ ನಿಧನದ ಅನುಕಂಪ ಅನಿಲ್‌ ಪರವಾಗಿದ್ದರೆ, ಸ್ಥಳೀಯರು ಎನ್ನುವುದು ಚಿಕ್ಕಣ್ಣ ಟ್ರಂಪ್‌ ಕಾರ್ಡ್ ಆಗಿದೆ.

ಜಿಲ್ಲೆಯ ಹನ್ನೊಂದು ಸ್ಥಾನಗಳ ಪೈಕಿ, ಕಳೆದ ಅವಧಿ ೮ ರಲ್ಲಿ ಕಾಂಗ್ರೆಸ್, ಮೂರರಲ್ಲಿ ಜೆಡಿಎಸ್ ಗೆದ್ದಿದ್ದವು. ಹೆಚ್ಚುಗಾರಿಕೆ ಕಾಯ್ದಿಟ್ಟುಕೊಳ್ಳಲು ಕಾಂಗ್ರೆಸ್ ಹೆಣಗುತ್ತಿದೆ. ಸಿದ್ದರಾಮಯ್ಯ ಬಲ ಮುರಿದು, ತಾನು ಬಲಗೊಳ್ಳುವ ತವಕ ಜೆಡಿಎಸ್‌ಗೆ. ಶೂನ್ಯದಿಂದ ಸೃಷ್ಟಿಸಿಕೊಳ್ಳಬೇಕಾದ ಅನಿವಾರ್ಯತೆ ಬಿಜೆಪಿ ಮುಂದಿದೆ.

ಚಾಮರಾಜನಗರ; ಕಾಂಗ್ರೆಸ್‌ಗೆ ಬಿಜೆಪಿ, ಬಿಎಸ್ಪಿ ಸವಾಲು

ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಳೆದ ಅವಧಿಗೆ ಕಾಂಗ್ರೆಸ್ ಶಾಸಕರಿದ್ದರು. ಈ ಬಾರಿ, ಚಾಮರಾಜನಗರ ಕ್ಷೇತ್ರದಲ್ಲಿ ಶಾಸಕ ಪುಟ್ಟರಂಗಶೆಟ್ಟರಿಗೆ ಬಿಜೆಪಿಯ ಕೆ ಆರ್ ಮಲ್ಲಿಕಾರ್ಜುನಪ್ಪ, ವಾಟಾಳ್ ನಾಗರಾಜ್‌ ಸ್ಪರ್ಧೆ ಒಡ್ಡಿದ್ದಾರೆ. ಕೊಳ್ಳೇಗಾಲ ಮೀಸಲು ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಸೋತಿರುವ ಬಿಎಸ್ಪಿ ಅಭ್ಯರ್ಥಿ ಮಹೇಶ್‌ ಕಾಂಗ್ರೆಸ್‌ನ‌ ಎ ಆರ್‌ ಕೃಷ್ಣಮೂರ್ತಿಯವರಿಗೆ ಪ್ರಬಲ ಸಡ್ಡು ಹೊಡೆದಿದ್ದಾರೆ. ಸಂತೇಮರಹಳ್ಳಿ ಕ್ಷೇತ್ರ ಇದ್ದಾಗ ೧ ಮತದ ಅಂತರದಿಂದ ಸೋತು, ನಂತರ ಸತತ ಸೋಲನುಭವಿಸುತ್ತಿರುವ ಕೃಷ್ಣಮೂರ್ತಿ ಒಂದು ಗೆಲುವಿಗಾಗಿ ಹಂಬಲಿಸುತ್ತಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ತಂದುಕೊಡಬಹುದೆನ್ನುವುದು ಬಿಜೆಪಿ ಅಭ್ಯರ್ಥಿ ನಂಜುಂಡಸ್ವಾಮಿ ನಿರೀಕ್ಷೆ.

ವರ್ಷದ ಹಿಂದೆ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಸೆಣಸಿದ್ದ ಬಿಜೆಪಿಯ ನಿರಂಜನಕುಮಾರ್‌ ಅವರನ್ನು ಸಚಿವೆ ಗೀತಾ ಮಹದೇವಪ್ರಸಾದ್ ಮತ್ತೊಮ್ಮೆ ಎದುರುಗೊಂಡಿದ್ದಾರೆ. ಪತಿ ಮಹದೇವ ಪ್ರಸಾದ್ ನಿಧನದ ಅನುಕಂಪವನ್ನು ಪೂರ್ಣಾವಧಿಗೆ ವಿಸ್ತರಿಸಿಕೊಳ್ಳುವ ಪ್ರಯತ್ನ ಗೀತಾ ಅವರದ್ದು. ಸತತ ಸೋಲಿನ ಅನುಕಂಪವನ್ನು ಮತದಾರರ ಮುಂದಿಟ್ಟು, ಅವಕಾಶ ಕೇಳುತ್ತಿದ್ದಾರೆ ನಿರಂಜನ್. ಹನೂರು ಕ್ಷೇತ್ರದಲ್ಲಿ ೨ ಅವಧಿಗೆ ಗೆದ್ದ ಆರ್‌ ನರೇಂದ್ರಗೆ ಮಾಜಿ ಸಚಿವ ನಾಗಪ್ಪ ಪುತ್ರ, ಬಿಜೆಪಿ ಅಭ್ಯರ್ಥಿ ಪ್ರೀತನ್‌ ನಾಗಪ್ಪ ಎದುರಾಳಿ. ಒಮ್ಮೆ ಗೆದ್ದು, ಎರಡು ಬಾರಿ ಸೋತ ಪರಿಮಳಾ, ಈ ಬಾರಿ ಪುತ್ರನನ್ನು ಅಖಾಡಕ್ಕಿಳಿಸಿದ್ದಾರೆ. ನರೇಂದ್ರರ ತಂದೆ ರಾಜೂಗೌಡ ಮತ್ತು ನಾಗಪ್ಪ ಇಲ್ಲಿ ದಶಕಗಳ ಕಾಲ ಎದುರಾಳಿಗಳಾಗಿದ್ದವರು. ಈಗ ಮಕ್ಕಳಿಬ್ಬರು ಸೆಣಸಿಗೆ ನಿಂತಿದ್ದಾರೆ. “ಹಳೆ ಮುಖ ಬೇಡ. ಹೊಸಬರಿಗೆ ಆದ್ಯತೆ ನೀಡಿ,’’ ಕೋರಿಕೆಯೊಂದಿಗೆ ಸೆಣಸುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ ಮಂಜುನಾಥ್.

ಇದನ್ನೂ ಓದಿ : ಅಂತಿಮ ವಿಶ್ಲೇಷಣೆ | ಗೌಡ-ಸಿದ್ದರಾಮಯ್ಯ ಪ್ರತಿಷ್ಠೆಯ ಕಣವಾದ ಕಾವೇರಿ ಕಣಿವೆ-2

‘ದಿ ಸ್ಟೇಟ್’ ಚುನಾವಣಾ ಪ್ರವಾಸದಲ್ಲಿ ಕಂಡುಬಂದ ಜನಾಭಿಪ್ರಾಯ

ಛಾಯಾಗ್ರಹಣ: ನೇತ್ರರಾಜು

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More