ಅಂತಿಮ ವಿಶ್ಲೇಷಣೆ | ಯಾರೇ ಬಂದರೂ ರಾಗಿ ಬೀಸೋದು ತಪ್ಪದು ಎಂದ ಕರಾವಳಿ ಮಂದಿ

ಮೇಲ್ನೋಟಕ್ಕೆ ಕರಾವಳಿಯ ರಾಜಕಾರಣವೆಲ್ಲವೂ ಒಂದೇ ರೀತಿ ಎಂಬಂತೆ ಕಂಡುಬಂದರೂ ಇಲ್ಲಿನ ರಾಜಕಾರಣಕ್ಕೆ ಹಲವು ಪದರಗಳಿವೆ. ಮತದಾರರು ಧ್ಯಾನಿಸುವ ವಿಚಾರಗಳಲ್ಲೂ ವೈವಿಧ್ಯವಿದೆ. ಈ ಕುರಿತು, ಚುನಾವಣಾ ಪ್ರವಾಸದಲ್ಲಿ ಕಂಡುಬಂದ ಜನರ ಅಭಿಪ್ರಾಯಗಳ ಗುಚ್ಛ ಇಲ್ಲಿದೆ

ಒಂದೆಡೆ ಪಶ್ಚಿಮಘಟ್ಟದ ಮಾಲೆ. ಮತ್ತೊಂದೆಡೆ ಅರಬ್ಬಿ ಅಲೆ, ನಡುವಿನ ಸೀಳುಹಾದಿಯಲ್ಲಿ ಬೈಕಿನ ಸದ್ದು ಮೊರೆದಂತೆ ಕರಾವಳಿಯ ರಾಜಕೀಯ ಪಟವೂ ಬಿಚ್ಚಿಕೊಳ್ಳುತ್ತಿತ್ತು. ಹೊರನೋಟಕ್ಕೆ ಕರಾವಳಿಯ ರಾಜಕಾರಣ ಒಂದೇ ರೀತಿ ಎಂಬಂತೆ ಕಂಡುಬಂದರೂ ಇಲ್ಲಿನ ಪ್ರತಿ ಜಿಲ್ಲೆಗಳ ರಾಜಕಾರಣ ಭಿನ್ನ; ಜನರ ಆಲೋಚನಾ ಕ್ರಮ, ರಾಜಕೀಯ ಪ್ರಜ್ಞೆ ಕೂಡ ವೈವಿಧ್ಯಮಯ. ದಕ್ಷಿಣ ಕನ್ನಡದ ಜನರ ರಾಜಕೀಯ ನಿರೀಕ್ಷೆಗಳು ಉಡುಪಿ ಜನರಿಗಿಂತಲೂ ಬೇರೆಯಾದುದು. ಉತ್ತರ ಕನ್ನಡ ಈ ಎರಡೂ ಜಿಲ್ಲೆಗಳಿಗಿಂತ ಬೇರೆಯದೇ ನಿಟ್ಟಿನಲ್ಲಿ ರಾಜಕಾರಣವನ್ನು ಧ್ಯಾನಿಸುತ್ತಿರುವಂತೆ ತೋರುತ್ತಿದೆ.

ಉಡುಪಿ ಜಿಲ್ಲೆಯ ವಿವಿಧ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಿದ್ದಾಜಿದ್ದಿ ಎದ್ದುತೋರುತ್ತಿತ್ತು. ಕಾಪು, ಉಡುಪಿ, ಬೈಂದೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರವಾಗಿ ಮತದಾರರು ಒಲವು ವ್ಯಕ್ತಪಡಿಸಿದರು. ಕುಂದಾಪುರ, ಕಾರ್ಕಳದಲ್ಲಿ ಬಿಜೆಪಿಯತ್ತ ಜನರ ಚಿತ್ತ ನೆಟ್ಟಿರುವುದು ಹೆಚ್ಚಾಗಿ ಕಂಡುಬಂತು. ಜನರ ಈ ಅಭಿಪ್ರಾಯವೇ ಮತದಾನದ ಕೊನೆಯ ದಿನದವರೆಗೂ ಉಳಿದರೆ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ 2013ರ ಇತಿಹಾಸವೇ ಮರುಕಳಿಸುವ ಸಾಧ್ಯತೆ ಇದೆ. ಉಡುಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತು ಬಿಜೆಪಿಯ ಕೆ ರಘುಪತಿ ಭಟ್ ಅವರ ನಡುವೆ ತುರುಸಿನ ಪೈಪೋಟಿ ಇರುವುದು ಜನರ ಮಾತುಗಳ ಮೂಲಕ ವ್ಯಕ್ತವಾಗುತ್ತಿತ್ತು. ರಘುಪತಿ ಭಟ್ ಅವರ ವೈಯಕ್ತಿಕ ಜೀವನದಲ್ಲಾಗಿರುವ ಏರುಪೇರುಗಳ ಬಗ್ಗೆ ಜನ ಹೆಚ್ಚು ಆಸ್ಥೆ ವಹಿಸದಿರುವುದನ್ನು ಗಮನಿಸಿದರೆ ಅಂತಹ ವಿಷಯಗಳು ಕರಾವಳಿಯಲ್ಲಿ ಗಟ್ಟಿಯಾಗಿ ನಿಲ್ಲುವುದಿಲ್ಲ ಎಂಬಂತೆ ತೋರಿತು. ಕಾಪು ಕ್ಷೇತ್ರದ ಕಾಂಗ್ರೆಸ್ಸಿನ ವಿನಯಕುಮಾರ್ ಸೊರಕೆ ಅವರಿಗಿರುವಷ್ಟು ಒಲವು ಇತರೆ ಅಭ್ಯರ್ಥಿಗಳತ್ತ ಇರುವಂತೆ ಕಾಣಲಿಲ್ಲ.

ಹಿರಿಯ ರಾಜಕಾರಣಿ ಲಾಲಾಜಿ ಮೆಂಡನ್ ಅವರನ್ನು ಬಿಜೆಪಿ ಮತ್ತೆ ಅಭ್ಯರ್ಥಿಯನ್ನಾಗಿಸಿರುವುದು ವಿನಯ್ ಹಾದಿಯನ್ನು ಸುಲಭವಾಗಿಸಿರುವಂತೆ ತೋರುತ್ತಿದೆ. ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಪಕ್ಷೇತರರಾಗಿ ಇಲ್ಲಿಂದ ಸ್ಪರ್ಧಿಸುತ್ತಿದ್ದಾರಾದರೂ ಅವರ ಬಗ್ಗೆ ಜನ ಹೆಚ್ಚೇನೂ ಮಾತನಾಡಿಕೊಳ್ಳಲಿಲ್ಲ. ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಹಾಲಿ ಶಾಸಕ ಕೆ ಗೋಪಾಲ ಪೂಜಾರಿ ಅವರ ಪರವಾಗಿ ಹೆಚ್ಚಿನ ಧ್ವನಿ ಕೇಳಿ ಬಂತು. ಬಿ ಸುಕುಮಾರ ಶೆಟ್ಟಿ ಬಿಜೆಪಿಯಿಂದ ಇಲ್ಲಿ ಕಣಕ್ಕಿಳಿದಿದ್ದರೂ ಅವರು ಹೋರಾಟ ನಡೆಸಿದರೆ ಗೆಲುವು ಕಬ್ಬಿಣದ ಕಡಲೆಯೇನೂ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಕಾರ್ಕಳದ ಈದು ಗ್ರಾಮದಲ್ಲಿ ಮಾತನಾಡಿದ ಜನತೆ, ಅಭಿವೃದ್ಧಿ ಕುಂಠಿತವಾಗಿರುವುದರ ಬಗ್ಗೆ ಹೆಚ್ಚು ಪ್ರಸ್ತಾಪಿಸಿದರು. “ಯಾರೇ ನಿಂತರೂ ಮತ ಚಲಾಯಿಸುವುದಿಲ್ಲ ಎಂದು ಕೆಲವರು ಹೇಳಿದರೆ, ಕೆಲವರು ‘ಮನುಷ್ಯನ ಆಸೆಗಳಿಗೆ ಮಿತಿ ಇಲ್ಲ, ರಸ್ತೆ ಸರಿ ಮಾಡಿದಷ್ಟೂ ಕೆಡುತ್ತಲೇ ಇರುತ್ತದೆ, ಇಂಥದ್ದನ್ನೆಲ್ಲ ಸಾಧನೆಯ ಅಳತೆಗೋಲಾಗಿ ಪರಿಗಣಿಸಬಾರದು,” ಎಂದು ಹೇಳಿದರು. ಇದರ ನಡುವೆ, ನಗರಗಳ ಅಭಿವೃದ್ಧಿ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿ ಕುರಿತಂತೆಯೂ ಚರ್ಚೆಗಳು ನಡೆದವು. ಕಾರ್ಕಳ ನಗರಕ್ಕೆ ಹೋಲಿಸಿದರೆ ಹಳ್ಳಿಗಳ ಸ್ಥಿತಿ ಸುಧಾರಣೆಯಾಗಿಲ್ಲ ಎಂಬ ಮಾತುಗಳು ಕೇಳಿಬಂದವು. ಇಷ್ಟಾದರೂ ಇಲ್ಲಿ ಬಿಜೆಪಿಯ ವಿ ಸುನಿಲ್ ಕುಮಾರ್ ಬಗ್ಗೆ ಅನೇಕ ಮತದಾರರು ಒಲವು ವ್ಯಕ್ತಪಡಿಸಿದರು. ಕುಂದಾಪುರದ ವಾಜಪೇಯಿ ಎಂದೇ ಬಿಂಬಿತರಾಗಿರುವ ಬಿಜೆಪಿಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರೂ ಇದೇ ಬಗೆಯ ಜನಪ್ರೀತಿ ಉಳಿಸಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಅಸಮಾಧಾನದ ಹೊರತಾಗಿಯೂ ಇಲ್ಲಿ ಶೆಟ್ಟಿ ಅವರ ಪರವಾದ ಅಲೆ ಜೋರಾಗಿ ಇರುವಂತೆ ಭಾಸವಾಗುತ್ತಿದೆ. ಕಾಂಗ್ರೆಸ್ಸಿನ ರಾಕೇಶ್ ಮಲ್ಲಿ ಕ್ಷೇತ್ರದಲ್ಲಿ ಹೆಚ್ಚು ಓಡಾಡಿದ್ದರೂ ಅವರು ಹೊಸಬರು, ಕ್ಷೇತ್ರದ ಹೊರಗಿನವರು ಎಂಬ ಅಭಿಪ್ರಾಯ ದಟ್ಟವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಕಡಲತಡಿಯ ಊರುಗಳಲ್ಲಿ ಪರೇಶ್ ಮೇಸ್ತಾ ಸಾವಿನ ವಿಚಾರ ಪ್ರಸ್ತಾಪವಾಯಿತು. ಅದೇ ಕಾರಣಕ್ಕೆ ಸುದ್ದಿಯಲ್ಲಿದ್ದ ಸೂರಜ್ ನಾಯ್ಕ ಸೋನಿ ಅವರಿಗೆ ಕುಮಟಾದಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿರುವುದು, ಅವರು ಅದನ್ನು ಸವಾಲಾಗಿ ಪರಿಗಣಿಸಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದು ಪಕ್ಷಕ್ಕೆ ಮಾರಕವಾಗಿ ಪರಿಣಮಿಸಿದೆ. ಬಿಜೆಪಿಯ ದಿನಕರ ಕೇಶವ ಶೆಟ್ಟಿ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದರೂ, ಮತಗಳು ವಿಭಜನೆಯಾಗುವ ಕಾರಣದಿಂದ ಅವರ ಹಾದಿ ಕಠಿಣವಾಗಿರುವಂತೆ ತೋರುತ್ತಿದೆ. ಇತ್ತ ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಯಶೋಧರ್ ನಾಯಕ್ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವುದು ಕೂಡ ಬಿಜೆಪಿಗೆ ನುಂಗಲಾರದ ತುತ್ತಾಗಬಹುದು ಎಂಬುದು ಜನಾಭಿಪ್ರಾಯ. ಇದು ಹಾಲಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಅವರಿಗೆ ವರದಾನವಾಗಿ ಪರಿಣಮಿಸಲಿದೆಯೇ ಅಥವಾ ಆ ಮೂವರಲ್ಲೇ ಒಬ್ಬರು ಗೆಲುವು ಸಾಧಿಸಲಿದ್ದಾರೆಯೇ ಎಂಬ ಕುತೂಹಲವಿದೆ. ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದ ಮಂಕಾಳ ವೈದ್ಯ ಈ ಬಾರಿ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ.

ಹೆಚ್ಚಿನ ಜನ ಮಂಕಾಳ ವೈದ್ಯರ ಪರವಾಗಿರುವುದು ಮೇಲ್ನೋಟಕ್ಕೆ ಕಂಡುಬಂತಾದರೂ ಸುನಿಲ್ ನಾಯಕ್ ಕೂಡ ತೀವ್ರ ಪೈಪೋಟಿ ಒಡ್ಡುವ ಸಾಧ್ಯತೆಗಳಿವೆ. ಕಾರವಾರ-ಅಂಕೋಲ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿರುವ ಸತೀಶ್ ಸೈಲ್, ಬಿಜೆಪಿಯ ರೂಪಾಲಿ ನಾಯಕ್ ಹಾಗೂ ಜೆಡಿಎಸ್ಸಿನ ಆನಂದ್ ಅಸ್ನೋಟಿಕರ್ ಬಗ್ಗೆ ಮಿಶ್ರಾಭಿಪ್ರಾಯಗಳು ಕೇಳಿಬಂದವು. ಕೆಲವರು, ಹಾಲಿ ಶಾಸಕ ಸತೀಶ್ ಸೈಲ್ ಅವರ ಅಭಿವೃದ್ಧಿ ಕೆಲಸಗಳ ಪರ ನಿಂತರೆ, ಮತ್ತೆ ಕೆಲವರು ಅಭಿವೃದ್ಧಿ ಶೂನ್ಯ ಎಂದರು. ಮುಖ್ಯವಾಗಿ, ಅಸ್ನೋಟಿಕರ್ ಅವರ ಪಕ್ಷಾಂತರದ ವಿಚಾರ ಹಲವೆಡೆ ಪ್ರಸ್ತಾಪವಾಯಿತು. ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿ ನೆಲೆ ಕಂಡುಕೊಳ್ಳಲಾರದೆ ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಅವರ ಬಗ್ಗೆ, “ಹೀಗೆ ಪಕ್ಷ ಬದಲಿಸಿದರೆ ಜನ ನಂಬುತ್ತಾರೆಯೇ?” ಎಂಬರ್ಥದ ಮಾತುಗಳು ಕೇಳಿಬಂದವು. ಅಕ್ರಮ ಅದಿರು ಸಾಗಣಿಕೆಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಬೇಲೆಕೇರಿಯಲ್ಲಿ, “ಇಲ್ಲಿಂದ ಮ್ಯಾಂಗನೀಸ್ ರಫ್ತು ಮಾಡಿದವರು ನಮಗೆ ಮಣ್ಣನ್ನಷ್ಟೇ ಉಳಿಸಿಹೋದರು. ಬಂದರಿನಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶವಿಲ್ಲ. ಯಾಂತ್ರೀಕೃತ ಮೀನುಗಾರಿಕೆ, ಬೆಳಕು ಮೀನುಗಾರಿಕೆಯಿಂದ ನಾಡದೋಣಿ ನಡೆಸುವವರಿಗೆ ತೊಂದರೆಯಾಗುತ್ತಿದೆ,” ಎಂದು ಅಲವತ್ತುಕೊಂಡರು.

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ಸಿನ ವಸಂತ ಬಂಗೇರ ಆಡಳಿತ ವೈಖರಿ ಕುರಿತಂತೆ ಮಿಶ್ರ ಅಭಿಪ್ರಾಯ ಕೇಳಿಬಂತು. ಅವರ ಅನುಭವಿ ರಾಜಕಾರಣದ ಹೊರತಾಗಿಯೂ ಕ್ಷೇತ್ರ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಿಜೆಪಿಯ ಹೊಸಮುಖ ಹರೀಶ್ ಪೂಂಜ ಪರವಾಗಿ ಉತ್ತಮ ಅಭಿಪ್ರಾಯವಿದೆ ಎನ್ನುತ್ತಿರುವ ಜನತೆ, ಅವರೊಬ್ಬ ಭವಿಷ್ಯದ ರಾಜಕಾರಣಿ ಎನ್ನುವುದನ್ನು ಒಗಟಿನ ರೂಪದಲ್ಲಿ ಹೇಳಿದರು. ಮುಲ್ಕಿ-ಮೂಡುಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸುತ್ತಿರುವ ಹಿರಿಯ ರಾಜಕಾರಣಿ ಅಭಯಚಂದ್ರ ಜೈನ್ ಅವರಿಗೆ ಪಕ್ಷದೊಳಗೆ ಇದ್ದಂತಿರುವ ಅಸಹಕಾರ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಕಾಂಗ್ರೆಸ್ಸಿನಿಂದ ಮಿಥುನ್ ರೈ ಕಣಕ್ಕಿಳಿದಿದ್ದರೆ ಗೆಲ್ಲಬಹುದಿತ್ತು ಎಂದು ಬಿಜೆಪಿಯ ಕೆಲ ಬೆಂಬಲಿಗರೂ ಹೇಳುತ್ತಿದುದು ಕಂಡುಬಂತು. ಉಮಾನಾಥ್ ಕೋಟ್ಯಾನ್ ಪರ ಕೆಲವರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಕೂಡ ಇಲ್ಲಿಂದ ಕಣಕ್ಕಿಳಿಯಲು ಬಯಸಿದ್ದರು. ಈ ಬೆಳವಣಿಗೆಗಳು ಜೈನ್ ಅವರಿಗೆ ಗೆಲುವು ತಂದುಕೊಡಲಿವೆಯೇ ಎಂಬ ಪ್ರಶ್ನೆ ಇದೆ. ಕೋಟ್ಯಾನ್ ವಿರುದ್ಧವೂ ತೆರೆಮರೆಯ ರಾಜಕಾರಣ ನಡೆಯುತ್ತಿರುವುದನ್ನು ಜನ ಪ್ರಸ್ತಾಪಿಸಿದರು. ಜಗದೀಶ್ ಅಧಿಕಾರಿ ಅವರಂತಹ ಅತೃಪ್ತರು ಕೋಟ್ಯಾನ್ ಅವರಿಗೆ ಅಡ್ಡಗಾಲು ಹಾಕುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ, ಮೇ 12ರವರೆಗೆ ಇಲ್ಲಿ ಎಲ್ಲವೂ ನಿಗೂಢವಾಗಿರಲಿದೆ.

ಮಂಗಳೂರು ಉತ್ತರ ಕ್ಷೇತ್ರದಲ್ಲಿ (ಸುರತ್ಕಲ್) ಕಾಂಗ್ರೆಸ್ಸಿನಿಂದ ಕಣಕ್ಕಿಳಿದಿರುವ ಹಾಲಿ ಶಾಸಕ ಮೋಹಿಯುದ್ದೀನ್ ಬಾವಾ ಪರವಾಗಿಯೇ ಅಲೆ ಇದ್ದಂತಿದೆ. ಕೆಲ ವಿವಾದಗಳು, ದೀಪಕ್ ರಾವ್ ಹತ್ಯೆಯಂತಹ ವಿಚಾರಗಳು ಅಡ್ಡಿಯುಂಟುಮಾಡಬಹುದು ಎನ್ನುವ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಅವರ ಜನಪ್ರಿಯತೆ ಮುಂದುವರಿದಿದೆ. ಬಿಜೆಪಿಯ ಭರತ್ ಶೆಟ್ಟಿ ಅವರ ವಿರುದ್ಧ ಕೇಳಿಬರುತ್ತಿರುವ ಲೈಂಗಿಕ ಹಗರಣ, ದಂತವೈದ್ಯಕೀಯ ಹಗರಣಗಳು ಅವರಿಗೆ ಮುಳುವಾಗುವ ಸಾಧ್ಯತೆ ಇದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಕ್ಷೇತ್ರಕ್ಕೆ ಅವರು ಹೊಸ ಪರಿಚಯ ಎಂಬುದು ಮತ್ತೊಂದು ಸವಾಲು. ಇತ್ತ ಸಿಪಿಎಂನಿಂದ ಸ್ಪರ್ಧಿಸಿರುವ ಮುನೀರ್ ಕಾಟಿಪಳ್ಳ ಎರಡೂ ಪಕ್ಷಗಳಿಗೆ ಬಿಸಿತುಪ್ಪವಾಗಿ ಪರಿಣಮಿಸಿದ್ದಾರೆ. ಜನಪರ ಹೋರಾಟಗಳು, ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಅವರ ಪರವಾಗಿ ಮತ ಚಲಾಯಿಸಲು ಕೆಲವರು ಉತ್ಸಾಹ ತೋರುತ್ತಿದ್ದಾರೆ. ಆದರೆ, ಇದರಿಂದ ಮುಸ್ಲಿಂ ಸಮುದಾಯದಲ್ಲಿ ಮತ ವಿಭಜನೆ ಉಂಟಾಗಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಹೀಗಾಗಿ, ಬಾವಾ ಅವರಿಗೇ ಮತ ಚಲಾಯಿಸಲು ಕೆಲವರು ನಿರ್ಧರಿಸಿದ್ದಾರೆ. ಇದರ ನಡುವೆಯೂ ಮುನೀರ್ ತೀವ್ರ ಪೈಪೋಟಿ ಒಡ್ಡುವುದರಲ್ಲಿ ಯಾವುದೇ ಅನುಮಾನಗಳು ಕಂಡುಬರುತ್ತಿಲ್ಲ.

ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ವೇದವ್ಯಾಸ ಕಾಮತ್ ಅವರನ್ನು ಬಾಳಿಗ ಹತ್ಯೆ ಪ್ರಕರಣ ಸುತ್ತಿಕೊಂಡಿದೆ. ಹಂತಕರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪ ದಿನೇದಿನೇ ಹೆಚ್ಚು ಮುನ್ನಲೆಗೆ ಬರುತ್ತಿದೆ. ಅಲ್ಲದೆ, ಪಕ್ಷೇತರರಾಗಿ ಕಣಕ್ಕಿಳಿದಿರುವ ಶ್ರೀಕರ ಪ್ರಭು ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆಗಳಿವೆ. ಇದು ಹಾಲಿ ಶಾಸಕ ಕಾಂಗ್ರೆಸ್ಸಿನ ಲೋಬೊ ಅವರಿಗೆ ಧನಾತ್ಮಕವಾಗಬಹುದು ಎನ್ನಲಾಗುತ್ತಿದೆ. ಆದರೆ, ಲೋಬೊ ಅವರ ವಿರುದ್ಧ ಇರುವ ಭ್ರಷ್ಟಾಚಾರ ಆರೋಪಗಳು ಹೇಗೆ ಕೆಲಸ ಮಾಡಲಿವೆ ಎಂಬ ಕೌತುಕ ಕ್ಷೇತ್ರದಲ್ಲಿದೆ.

ಮಂಗಳೂರು ಕ್ಷೇತ್ರದಲ್ಲಿ (ಉಳ್ಳಾಲ) ಸಚಿವ ಯು ಟಿ ಖಾದರ್ ಪರವಾದ ಅಲೆ ಇದ್ದಂತಿದೆ. ಬಿಜೆಪಿ ಇಲ್ಲಿ ಗೆಲ್ಲಲೇಬೇಕೆಂದು ನಿರ್ಧರಿಸಿ ಆರೆಸ್ಸೆಸ್ ಮಾಡಿದ ತಂತ್ರಗಳು ಅಷ್ಟೇನೂ ಫಲ ನೀಡಿದಂತೆ ಕಂಡುಬರುತ್ತಿಲ್ಲ. ಸಂತೋಷ್ ಕುಮಾರ್ ರೈ ಇದೇ ಮೊದಲ ಬಾರಿಗೆ ಇಲ್ಲಿಂದ ಸ್ಪರ್ಧಿಸುತ್ತಿರುವುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಜೆಡಿಎಸ್ಸಿನಿಂದ ಕೆ ಅಶ್ರಫ್ ಸಿಪಿಎಂನಿಂದ ನಿತಿನ್ ಕುತ್ತಾರ್ ಸ್ಪರ್ಧಿಸಿದ್ದಾರಾದರೂ ಹೆಚ್ಚಿನ ಮತ ಸೆಳೆಯುವುದು ಕಷ್ಟಕರ ಎಂಬುದು ಕ್ಷೇತ್ರದ ಮತದಾರರ ಮಾತು. ಖಾದರ್ ತಮ್ಮ ತಂದೆಯ ಕಾಲದಿಂದಲೂ ಉಳಿಸಿಕೊಂಡು ಬಂದಿರುವ ಜನಪ್ರಿಯತೆ ಈ ಬಾರಿಯೂ ಜನಾಶೀರ್ವಾದವಾಗಿ ಪರಿಣಮಿಸಬಹುದು ಎಂಬ ಲೆಕ್ಕಾಚಾರವಿದೆ.

ಇದನ್ನೂ ಓದಿ : ಅಂತಿಮ ವಿಶ್ಲೇಷಣೆ | ಗೌಡ-ಸಿದ್ದರಾಮಯ್ಯ ಪ್ರತಿಷ್ಠೆಯ ಕಣವಾದ ಕಾವೇರಿ ಕಣಿವೆ-1

ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿತವಾಗಿರುವ ಬಂಟ್ವಾಳದಲ್ಲಿ ಬಿಜೆಪಿಯ ಪ್ರಯತ್ನಗಳು ಫಲ ನೀಡುವುದು ಅನುಮಾನ ಎನ್ನುತ್ತಾರೆ ಇಲ್ಲಿಯ ಜನ. ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರು ಬಿಜೆಪಿ ಬಿಲ್ಲವರಿಗೆ ರಾಜಕೀಯ ಪ್ರಾಶಸ್ತ್ಯ ನೀಡಿಲ್ಲ ಎಂದು ಹೊಸ ಬಾಣ ಹೂಡಿದ್ದಾರೆ. ಇದು ಸಚಿವ ರಮಾನಾಥ್ ರೈ ಅವರ ಬಲವನ್ನು ಹೆಚ್ಚಿಸಿದಂತಿದೆ. ಪೂಜಾರಿ ದಾಳವನ್ನು ಉರುಳಿಸುವ ಮೂಲಕ ರೈ ಅವರನ್ನು ಮಣಿಸಬಹುದು ಎಂಬ ಬಿಜೆಪಿ-ಆರೆಸ್ಸೆಸ್ಸಿನ ಎಣಿಕೆ ತನಗೇ ತಿರುಗುಬಾಣವಾದಂತಿದೆ. ರೈ ಮುಸ್ಲಿಂ ಪರ ಎಂಬ ಅದರ ತಥಾಕಥಿತ ಪ್ರಚಾರವೂ ಉಲ್ಟಾ ಹೊಡೆದಿದೆ. ಮುಸ್ಲಿಮರ ಪರವಾಗಿರುವವರಿಗೆ ಮತಗಳಿಲ್ಲ ಎಂದು ಕೆಲ ದಿನಗಳ ಹಿಂದೆ ಬಿಜೆಪಿ ಅಭಿಮಾನಿಗಳು ತಮ್ಮ ಮನೆಯ ಮುಂದೆ ಫಲಕಗಳನ್ನು ಹಾಕಿದ್ದರು. ಆದರೆ ಹಿಂದೂಗಳನ್ನೇ ಹತ್ಯೆ ಮಾಡಿದ ಬಿಜೆಪಿಗರಿಗೆ ಬೆಂಬಲವಿಲ್ಲ ಎಂಬ ಫಲಕವೂ ಎದ್ದುನಿಂತು ಬಿಜೆಪಿ ಇರುಸುಮುರುಸು ಅನುಭವಿಸುವಂತಾಗಿದೆ. ರೈಯವರ ಅಭಿವೃದ್ಧಿ ಕಾರ್ಯಗಳನ್ನು ಜನರು ಕೊಂಡಾಡುತ್ತಿರುವುದರಿಂದ ಅವರ ಗೆಲುವಿಗೆ ಸದ್ಯಕ್ಕಂತೂ ಯಾವುದೇ ಅಡ್ಡಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾನದ ದಿನ ಹತ್ತಿರವಾಗುತ್ತಿದ್ದರೂ ಕೆಲವು ಗೊಂದಲಗಳು ಹಾಗೆಯೇ ಉಳಿದಿವೆ. ಶಕುಂತಲಾ ಶೆಟ್ಟಿ ಪರವಾಗಿ ಇಲ್ಲಿ ಜನಾಭಿಪ್ರಾಯವಿರುವಂತೆ ತೋರುತ್ತಿದೆಯಾದರೂ ಕಾಂಗ್ರೆಸ್ ಒಳಗಿನ ಭಿನ್ನಾಭಿಪ್ರಾಯ ಹೇಗೆ ಕೆಲಸ ಮಾಡಬಹುದು ಎಂಬ ಪ್ರಶ್ನೆ ಇದೆ. ಅವರ ವಿರುದ್ಧ ಸ್ಪರ್ಧಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅವರ ಬಗ್ಗೆ ಉತ್ತಮ ಪ್ರತಿಕ್ರಿಯೆ ಇದೆಯಾದರೂ ಅದು ಮತವಾಗಿ ಪರಿವರ್ತನೆಗೊಳ್ಳುವ ಬಗ್ಗೆ ಅನುಮಾನಗಳಿವೆ. ಅಲ್ಲದೆ, ಅವರು ಕೂಡ ಪಕ್ಷದ ಆಂತರಿಕ ಬೇಗುದಿಯನ್ನು ಅನುಭವಿಸಲೇಬೇಕಾದ ಸ್ಥಿತಿಯಲ್ಲಿದ್ದಾರೆ.

ಸುಳ್ಯ ಕ್ಷೇತ್ರದಲ್ಲಿ ಬಿಜೆಪಿಯ ಅಂಗಾರ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರನ್ನೇ ಪಕ್ಷ ಕಣಕ್ಕಿಳಿಸಿದೆಯಾದರೂ ಕಳೆದ ಬಾರಿಯ ಗೆಲುವಿನ ಅಂತರ ಕಡಿಮೆ ಇದ್ದುದು ಪಕ್ಷಕ್ಕೆ ಸವಾಲಾಗಿ ಪರಿಣಮಿಸಿದೆ. ಮೊದಮೊದಲು ಕ್ಷೇತ್ರದ ಬಗ್ಗೆ ಅಷ್ಟೇನೂ ಆಸಕ್ತಿ ವಹಿಸಿದಂತೆ ತೋರದಿದ್ದ ಕಾಂಗ್ರೆಸ್, ಈಗ ಮೈಕೊಡವಿಕೊಂಡು ನಿಂತಿದೆ. ಸುಳ್ಯ ಸೇರಿ ಜಿಲ್ಲೆಯ ಎಲ್ಲ ಎಂಟು ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಅದು ತೊಟ್ಟಿರುವ ಪಣ ಪಕ್ಷದ ಅಭ್ಯರ್ಥಿ ರಘು ಅವರಿಗೆ ಶುಭ ತರುವುದೇ ಎಂಬ ಕುತೂಹಲವಿದೆ. ಇತ್ತ ಬಿಜೆಪಿ ಕೂಡ ಸುಳ್ಯವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ. ಹೀಗಾಗಿ, ಈ ಬಾರಿಯೂ ಜಿದ್ದಾಜಿದ್ದಿನ ಪೈಪೋಟಿಗೆ ಇಲ್ಲಿನ ಮತದಾರರು ಸಾಕ್ಷಿಯಾಗುತ್ತಿದ್ದಾರೆ.

ಜನಾಭಿಪ್ರಾಯದ ವಿಡಿಯೋಗಳು

ಛಾಯಾಗ್ರಹಣ: ಬಿ ಜಿ ಜನಾರ್ಧನ್

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More