ಅಂತಿಮ ವಿಶ್ಲೇಷಣೆ | ಭಾರಿ ಹಣಾಹಣಿಯ ಕುದಿಕಣವಾಗಿರುವ ಮಧ್ಯ ಕರ್ನಾಟಕ

ಮಧ್ಯ ಕರ್ನಾಟಕದ ದಾವಣಗೆರೆ, ಚಿತ್ರದುರ್ಗ ಹಾಗೂ ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಸುತ್ತಾಟದಲ್ಲಿ ಕಂಡದ್ದು ಸಾಂಪ್ರದಾಯಿಕ ವಿಷಯಗಳನ್ನು ಮೀರಿದ ಕೆಲವು ಸೂಕ್ಷ್ಮ, ಸ್ಥಳೀಯ ಸಂಗತಿಗಳು. ಅಂತಹ ವಿಷಯಗಳೇ ಈ ಬಾರಿ ಚುನಾವಣಾ ಫಲಿತಾಂಶದ ನಿರ್ಣಾಯಕ ಅಂಶಗಳು ಕೂಡ

ಮಲೆನಾಡು ಮತ್ತು ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಚುನಾವಣಾ ಹವಾ ಹಿಂದಿನ ಯಾವ ವರ್ಷವೂ ಕಾಣದ ಮಟ್ಟಿಗೆ ಈ ಬಾರಿ ಜೋರಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹಿಂದೂ-ಮುಸ್ಲಿಂ ಶ್ರದ್ಧಾಭಕ್ತಿಯ ಕೇಂದ್ರ ಹಣಗೆರೆ ಕಟ್ಟೆಯ ಭೂತರಾಯ ಚೌಡೇಶ್ವರಿ ಸೈಯದ್ ಸಾದತ್ ದರ್ಗಾ ದೇವಾಲಯದ ಕ್ಷೇತ್ರದಿಂದ ಆರಂಭವಾದ ನಮ್ಮ ‘ಪಾಯಿಂಟ್ ಟು ಪಾಯಿಂಟ್’ ಚುನಾವಣಾ ಪಯಣ, ಮೂರು ದಿನಗಳ ಕಾಲ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಗಿ ಅಂತಿಮವಾಗಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಮುಕ್ತಾಯವಾಯಿತು.

ಈ ಪಯಣದುದ್ದಕ್ಕೂ ಭೇಟಿ ಮಾಡಿದ ೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಮುಖ ಅಭ್ಯರ್ಥಿಗಳ ನಡುವೆ ಬಹುತೇಕ ಸಮಬಲದ ಪೈಪೋಟಿ ಇರುವುದು ಮೇಲ್ನೋಟಕ್ಕೆ ಕಂಡುಬಂದಿತು. ಅದರಲ್ಲೂ ರಾಜ್ಯ ಸರ್ಕಾರದ ಪ್ರಮುಖ ಸಚಿವರು, ಮಾಜಿ ಸಚಿವರು ಕಣದಲ್ಲಿರುವ ಕಡೆಯೇ ಭಾರೀ ಹಣಾಹಣಿಯ ಸನ್ನಿವೇಶ ನಿರ್ಮಾಣವಾಗಿದೆ.

ಪ್ರಮುಖವಾಗಿ ಸಾಮಾನ್ಯ ಮತದಾರರ ಮನಸ್ಸಿನಲ್ಲಿ, ಮತದಾನದ ಕ್ಷಣಗಣನೆಯ ಹೊತ್ತಲ್ಲಿ ರಾಜ್ಯ ಸರ್ಕಾರದ ಜನಪರ ಯೋಜನೆಗಳು, ಅಭಿವೃದ್ಧಿ ಕಾರ್ಯಗಳು ಇರುವಂತೆಯೇ ಕೇಂದ್ರ ಸರ್ಕಾರದ ಘೋಷಣೆಗಳು, ಅಭಿವೃದ್ಧಿಯ ಭರವಸೆಗಳೂ ಗಿರಕಿಹೊಡೆಯುತ್ತಿವೆ. ಒಂದು ಕಡೆ ಅನ್ನಭಾಗ್ಯ, ವಿದ್ಯಾಸಿರಿ, ರೈತ ಸಾಲ ಮನ್ನಾ, ಐದು ವರ್ಷಗಳ ಸದೃಢ ಸರ್ಕಾರವನ್ನು ಕೊಟ್ಟಿರುವ ಬಗ್ಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷವನ್ನು ಮೆಚ್ಚುವ ಮತದಾರ, ಮತ್ತೊಂದು ಕಡೆ ಭ್ರಷ್ಟಾಚಾರರಹಿತ, ದೇಶದ ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಿದ ಹೆಗ್ಗಳಿಕೆಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವನ್ನೂ ಹೊಗಳಿದ್ದಾನೆ.

ಕೃಷಿ ಉತ್ಪನ್ನ ಬೆಲೆಕುಸಿತಕ್ಕೆ ಕಾರಣವಾದ ಜಿಎಸ್‌ಟಿ, ನೋಟ್‌ಬಂದಿಯಂತಹ ಕ್ರಮಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ಅದೇ ಮತದಾರ, ಮತ್ತೊಂದು ಕಡೆ ಸ್ಥಳೀಯವಾಗಿ ಕುಡಿಯುವ ನೀರು, ಚರಂಡಿ, ರಸ್ತೆಯಂತಹ ಮೂಲ ಸೌಕರ್ಯ ಒದಗಿಸುವ ವಿಷಯದಲ್ಲಿ ರಾಜಕೀಯ ಬೆರೆಸುವ, ತಾರತಮ್ಯ ಮಾಡುವ ಸ್ಥಳೀಯ ನಾಯಕರ ವಿರುದ್ಧ, ನಾಯಕರ ಹಿಂಬಾಲಕರ ವಿರುದ್ಧವೂ ಕೆಂಡಕಾರುತ್ತಾನೆ.

ಮಲೆನಾಡು ಭಾಗದಲ್ಲಿ ನಿರೀಕ್ಷೆಯಂತೆ ಪ್ರತ್ಯೇಕ ಲಿಂಗಾಯತ ಧರ್ಮ ವಿಷಯದ ಚುನಾವಣಾ ವಿಷಯವಾಗಿಲ್ಲ. ಬಹುತೇಕ ಮತದಾರರು ಅದನ್ನೊಂದು ಚರ್ಚಿಸಬೇಕಾದ ಸಂಗತಿ ಎಂದೇ ಭಾವಿಸಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಪ್ರಸ್ತಾವನೆಗೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿರುವ ರಂಭಾಪುರಿ ಸ್ವಾಮೀಜಿಯ ಮಠದ ಕೇಂದ್ರ ಬಾಳೆಹೊನ್ನೂರಿನಲ್ಲಿ ಕೂಡ ಅದೊಂದು ಚುನಾವಣಾ ಸಂಗತಿಯಾಗಿಯಾಗಲೀ, ಸಾರ್ವಜನಿಕ ಚರ್ಚೆಯ ವಿಷಯವಾಗಿಯಾಗಲೀ ಉಳಿದಿಲ್ಲ.

ಅದೇ ಹೊತ್ತಿಗೆ, ಐದು ವರ್ಷಗಳ ಅವಧಿಗೆ ಸಧೃಢ ಸರ್ಕಾರ ನೀಡಿದ ಮತ್ತು ಕಳೆದ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಬಹುತೇಕ ಈಡೇರಿಸಿದ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ಅವಧಿ ನೀಡುವ ಮಾತನಾಡುವ ಮತದಾರ, “ದೇಶದ ಪ್ರಗತಿಯ ವಿಷಯದಲ್ಲಿ ಹೊಸಹೊಸ ಯೋಜನೆಗಳನ್ನು ಹಾಕಿಕೊಂಡಿರುವ ಮೋದಿ ಸರ್ಕಾರ ಕೂಡ ತಮಗೆ ಇಷ್ಟ,” ಎನ್ನುತ್ತಿದ್ದಾನೆ. ಅದೇ ಹೊತ್ತಿಗೆ, ವಿದೇಶಗಳಲ್ಲಿ ಬಚ್ಚಿಟ್ಟಿರುವ ಕಪ್ಪುಹಣವನ್ನು ತಂದು ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ ತಲಾ ೧೫ ಲಕ್ಷ ಜಮಾ ಮಾಡುವ ಕಳೆದ ಲೋಕಸಭಾ ಚುನಾವಣೆಯ ಮೋದಿ ಭರವಸೆ ಮಾತ್ರ ನಿಜವಾಗಿಲ್ಲ ಎಂಬುದನ್ನೂ ನೆನಪಿಸಿಕೊಳ್ಳುತ್ತಿದ್ದಾನೆ.

ದಲಿತ ಸಮುದಾಯ ಬಾಹುಳ್ಯದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಒಳ ಮೀಸಲಾತಿ ವ್ಯವಸ್ಥೆಯನ್ನು ಜಾರಿಗೊಳಿಸದ ರಾಜ್ಯ ಸರ್ಕಾರದ ವಿರುದ್ಧವೂ ದನಿ ಜೋರಾಗಿದೆ. ಲಿಂಗಾಯಿತ ಧರ್ಮದ ವಿಷಯದಲ್ಲಿ ಬಹಳ ತರಾತುರಿಯಲ್ಲಿ ನಡೆದುಕೊಂಡ ಸರ್ಕಾರ ದಶಕದ ತಮ್ಮ ಬೇಡಿಕೆಯ ವಿಷಯದಲ್ಲಿ ಯಾಕೆ ನಿರ್ಲಕ್ಷ್ಯವಹಿಸಿದೆ ಎಂಬುದು ಅವರ ಪ್ರಶ್ನೆ. ಆ ಭಾಗದ ಮೀಸಲು ಕ್ಷೇತ್ರಗಳಲ್ಲಂತೂ ಈ ವಿಷಯದ ಪ್ರಮುಖ ಚುನಾವಣಾ ವಿಷಯವೇ ಆಗಿದೆ. ಹಿರಿಯೂರು, ಮೊಳಕಾಲ್ಮುರು, ಚಳ್ಳಕೆರೆ, ಹೊಳಲ್ಕೆರೆ, ಜಗಳೂರು, ಮಾಯಕೊಂಡ, ಹರಪನಹಳ್ಳಿ ಭಾಗದಲ್ಲಿ ಒಳಮೀಸಲಾತಿ ಚುನಾವಣಾ ಕಣದಲ್ಲಿ ಅಂತರ್ಗಾಮಿಯಾಗಿ ಹರಿಯುತ್ತಿದೆ.

ಇನ್ನು ಶಿಕಾರಿಪುರ, ಸೊರಬ, ಸಾಗರ ಭಾಗದಲ್ಲಿ ಪ್ರಮುಖವಾಗಿ ಸಾಲ ಮನ್ನಾ ಮತ್ತು ಬಗರ್‌ಹುಕುಂ ಹಾಗೂ ಅರಣ್ಯ ಕಾಯ್ದೆ ಅನುಷ್ಠಾನ ವಿಷಯಗಳು ಕಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿವೆ. “ರಾಜ್ಯ ಸರ್ಕಾರ ರೈತ ಸಾಲ ಮನ್ನಾ ಮಾಡಿ, ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡುವಂತೆ ಹೇಳಿದ್ದಾಗ ಮೋದಿ ಸರ್ಕಾರ ನಾವೇನು ನೋಟು ಪ್ರಿಂಟ್ ಮಾಡ್ತಿದೀವಾ ಎಂದಿತ್ತು. ಆದರೆ, ಅದೇ ನೀರವ್ ಮೋದಿ, ಲಲಿತ್ ಮೋದಿಯವಂತಹವರು ಸಾವಿರಾರು ಕೋಟಿ ಲೂಟಿ ಹೊಡೆದು ಪರಾರಿಯಾದರೆ ಸರ್ಕಾರ ಕಣ್ಣುಮುಚ್ಚಿಕೊಂಡಿತ್ತು. ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ, ಬಡ ರೈತರನ್ನು ಮಾತ್ರ ಕಡೆಗಣಿಸಿದೆ. ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಕೇಂದ್ರ ಸರ್ಕಾರವೇ ಅಡ್ಡಗಾಲು ಹಾಕಿದೆ” ಎಂಬ ಮಾತುಗಳು ಕೇಳಿಬರುತ್ತಿವೆ.

ಹಾಗೇ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ ಕೆಲಸಗಾರರೋ ಅಥವಾ ಇಲ್ಲವೋ ಎಂಬುದಕ್ಕಿಂತ ಆತ ಸಭ್ಯನೋ ಅಥವಾ ಇಲ್ಲವೋ ಎಂಬುದನ್ನು ಮತದಾರ ಲೆಕ್ಕಹಾಕತೊಡಗಿದ್ದಾನೆ. ಅದರಲ್ಲೂ ಕೇವಲ ಅಭ್ಯರ್ಥಿಯಷ್ಟೇ ಸಭ್ಯನಾದರೆ ಸಾಲದು, ಆತನ ಅಕ್ಕಪಕ್ಕದಲ್ಲಿರುವ ಮಂದಿಯೂ ಸಭ್ಯರಾಗಿರಬೇಕು. ಇಲ್ಲದೇ ಹೋದರೆ, ಜನರ ಪಾಲಿಗೆ ಅವರೇ ಕೀಚಕರಾಗಿಬಿಡುತ್ತಾರೆ ಎಂಬ ಭಯ ಕೂಡ ಮತದಾರನ ಮನದಲ್ಲಿದೆ. ಅದಕ್ಕೊಂದು ಉದಾಹರಣೆ ತೀರ್ಥಹಳ್ಳಿ ಕ್ಷೇತ್ರ.

ಬಹಳ ಸಭ್ಯ ರಾಜಕಾರಣದ ಮಾದರಿ ಎಂದೇ ಬಿಂಬಿತರಾಗಿರುವ ಶಾಸಕ ಕಿಮ್ಮೆನೆ ರತ್ನಾಕರ ಅವರ ಕುರಿತು “ಅವರು ಕೆಲಸ ಮಾಡಿದ್ದಾರೆ. ಒಂದು ಕಡೆ ಹೆಚ್ಚು, ಒಂದು ಕಡೆ ಕಡಿಮೆಯಾಗಿರಬಹುದು. ಆದರೆ, ಕೆಲಸವನ್ನೇ ಮಾಡಿಲ್ಲ ಎಂದು ನಾವು ಹೇಳಲಾರೆವು. ಆದರೆ, ಅವರಷ್ಟೇ ಬಿಳಿ ಬಟ್ಟೆ ತೊಟ್ಟರೆ ಸಾಲದು, ಜೊತೆಗಿರುವವರೂ ಅಷ್ಟೇ ಸಭ್ಯರಾಗಿರಬೇಕಲ್ಲವೆ?” ಎನ್ನುವ ಮಾತುಗಳು ಸಾಕಷ್ಟು ಕೇಳಿಬರುತ್ತಿವೆ. ತೀರ್ಥಹಳ್ಳಿಯ ಮರಳು ಮತ್ತು ಕಲ್ಲುಗಣಿ ಮಾಫಿಯಾ ಜನರಲ್ಲಿ ಹುಟ್ಟಿಸಿರುವ ಆಕ್ರೋಶಕ್ಕೆ ಈ ಮಾತು ಸಾಕ್ಷಿಯಾಗಿತ್ತು.

ಹಾಗೇ, ಹಾಲಿ ಶಾಸಕರು, ಸಚಿವರು ಮತ್ತು ಅವರ ಹಿಂಬಾಲಕರ ದಬ್ಬಾಳಿಕೆ, ತಾರತಮ್ಯ, ನಿರ್ಲಕ್ಷ್ಯಕ್ಕೆ ತಕ್ಕ ಉತ್ತರಕೊಡುವ ಉಮೇದಿನಲ್ಲಿರುವ ಮತದಾರನಿಗೆ ಸೂಕ್ತ ಪರ್ಯಾಯ ವ್ಯಕ್ತಿಯೇ ಸಿಗದಿರುವ ಒಂದು ರೀತಿಯ ಅಸಹಾಯಕ ಪರಿಸ್ಥಿತಿ ಕೂಡ ಕೆಲವೆಡೆ ಇದೆ. ಅದಕ್ಕೊಂದು ಉದಾಹರಣೆ ಎಂದರೆ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ. ಮೂರು ಅವಧಿಗೆ ಶಾಸಕರಾಗಿರುವವರ ವಿರುದ್ಧದ ಆಡಳಿತ ವಿರೋಧಿ ಅಲೆಯ ಲಾಭ ಪಡೆಯುವ ಸ್ಥಿತಿಯಲ್ಲಿ ಇತರರು ಇದ್ದಂತಿಲ್ಲ. ಜನರಿಗೆ ಪ್ರಬಲ ಆಯ್ಕೆಯನ್ನು ನೀಡುವಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಳೆರಡೂ ವಿಫಲವಾಗಿವೆ.

ಇದಕ್ಕೆ ತದ್ವಿರುದ್ಧವಾದ ಪರಿಸ್ಥಿತಿಯಲ್ಲಿ; ಸಮರ್ಥ ಮತ್ತು ಪ್ರಾಮಾಣಿಕ ಶಾಸಕ, ಜನಸಾಮಾನ್ಯರೊಂದಿಗೆ ಸಂಪರ್ಕದಲ್ಲಿರುವ ನಾಯಕನಾಗಿದ್ದರೂ ಮತದಾರ ಬದಲಾವಣೆಯ ಮನಸ್ಸು ಮಾಡುತ್ತಿರುವ ವಿಚಿತ್ರ ಸ್ಥಿತಿ ಕೂಡ ಕಣದಲ್ಲಿದೆ. ಅಂತಹ ಬಹಳ ಕುತೂಹಲಕಾರಿ ಪರಿಸ್ಥಿತಿ ಕಡೂರು ವಿಧಾನಸಭಾ ಕ್ಷೇತ್ರದ್ದು. ಅಲ್ಲಿನ ಶಾಸಕ ವೈಎಸ್‌ ವಿ ದತ್ತ ಅವರ ಜನಾನುರಾಗಿ ಗುಣಗಳನ್ನು ಹಾಡಿಹೊಗಳುವ ಮತದಾರನೇ, ಅದೇ ಕ್ಷಣದಲ್ಲಿ ಹೊಸ ಆಯ್ಕೆಯ ಮನಸ್ಸು ಮಾಡಿರುವುದಾಗಿಯೂ ಹೇಳಿ ಬೇಸ್ತುಬೀಳಿಸುತ್ತಾನೆ.

ಭಾರೀ ಹಣ, ತೋಳ್ಬಲ, ಪ್ರಭಾವಗಳ ಹೊರತಾಗಿಯೂ ಹಣವೊಂದೇ ಸಾಲದು, ಇವತ್ತು ಹಣ ಕೊಟ್ಟು ಗೆದ್ದು ಹೋದವರು ನಾಳೆ ಕೈಗೆ ಸಿಗುವುದಿಲ್ಲ. ಹಾಗಾಗಿ ಅವರು ಎಷ್ಟೇ ದುಡ್ಡು ಚೆಲ್ಲಿದರೂ ನಾವು ನಮ್ಮವರನ್ನೇ ನೋಡಿಕೊಳ್ಳುತ್ತೇವೆ ಎಂಬ ಜಾಣ್ಮೆಯ ಮಾತನಾಡುವ ಮಂದಿ ಕೂಡ ಕಡಿಮೆ ಇಲ್ಲ. ಇಂತದ್ದೊಂದು ಸ್ವಾರಸ್ಯ ಇರುವುದು ಗಣಿ ಧಣಿ ಶ್ರೀರಾಮುಲು ಕಣದಲ್ಲಿರುವ ಮೊಳಕಾಲ್ಮುರು ಕ್ಷೇತ್ರದಲ್ಲಿ. ಶ್ರೀರಾಮುಲು ಕಾರಣಕ್ಕಾಗಿ ರಾಜ್ಯದ ಗಮನ ಸೆಳೆದಿರುವ ಅಲ್ಲಿ, ಅವರು ಹೊರಗಿನವರು, ಬಿಜೆಪಿಯ ಬಂಡಾಯ ಅಭ್ಯರ್ಥಿ ಎಸ್ ತಿಪ್ಪೇಸ್ವಾಮಿ ಸೇರಿದಂತೆ ಉಳಿದವರು ಸ್ಥಳೀಯರು ಎಂಬುದು ಕೂಡ ಚುನಾವಣಾ ವಿಷಯವಾಗಿದೆ.

ಹಾಗೇ, ಸರ್ಕಾರದ ಜನಪರ ಯೋಜನೆಗಳನ್ನು ಮೆಚ್ಚಿಕೊಳ್ಳುವ ಹೊರತಾಗಿಯೂ ಜನಸಾಮಾನ್ಯರೊಂದಿಗೆ ಒಡನಾಟವಿರದ ಸ್ಥಳೀಯ ಶಾಸಕರ ವರಸೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಮತದಾರ. ಜನಸಂಪರ್ಕದಿಂದ ದೂರವೇ ಉಳಿಯುವ ಉದ್ಯಮಿ, ಶಾಸಕ ವಡ್ನಾಳ್ ರಾಜಣ್ಣ ವಿರುದ್ಧದ ಅಸಮಾಧಾನ ಕ್ಷೇತ್ರದ ಹಲವೆಡೆ ಚರ್ಚೆಯಲ್ಲಿದೆ. ಸ್ಥಳೀಯರಾಗಿಯೂ ಕೂಡ ಶಾಸಕರೊಬ್ಬರು ಜನರ ಕೈಗೆ ಸಿಗದಿರುವ ಉದಾಹರಣೆ ಇದು.

ಹಾಗೇ, ಸ್ವತಃ ಅಭಿವೃದ್ಧಿಯ ಹರಿಕಾರ ಎಂದೇ ಬಿಂಬಿರಾಗಿದ್ದರೂ, ವಾಸ್ತವವಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರೂ, ಅಂತಹ ಅಭಿವೃದ್ಧಿ ಕಾರ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕನ್ನು ಸುಧಾರಿಸದೇ ಹೋದರೆ ಏನಾಗಬಹುದು ಎಂಬುದಕ್ಕೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕಣಕ್ಕಿಳಿದಿರುವ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರವೇ ನಿದರ್ಶನ.

ಇದನ್ನೂ ಓದಿ : ಅಂತಿಮ ವಿಶ್ಲೇಷಣೆ | ಬಯಲುಸೀಮೆಯಲ್ಲಿ ಪಕ್ಷಗಳ ಎದೆಬಡಿತ ಹೆಚ್ಚಿಸಿದೆ ಬಂಡಾಯ

ಬಗರ್‌ಹುಕುಂ ರೈತರೇ ಹೆಚ್ಚಿರುವ ಕ್ಷೇತ್ರದಲ್ಲಿ ಭೂಮಿ ಹಕ್ಕುಪತ್ರ, ನೀರಾವರಿ ಮತ್ತು ಮೆಕ್ಕೆಜೋಳ, ಭತ್ತದ ಬೆಂಬಲ ಬೆಲೆ ವಿಷಯದಲ್ಲಿ ಕೃಷಿ ಸಮುದಾಯ ಆಕ್ರೋಶಗೊಂಡಿದೆ. ತಾಲೂಕಿನ ರಸ್ತೆ, ಸರ್ಕಾರಿ ಕಚೇರಿಗಳನ್ನು ಝಗಮಘಗೊಳಿಸಿದರೆ ಸಾಲದು, ಬಡವರ ಬದುಕು ಹಸನಾಗಬೇಕು ಎಂಬುದು ಅಲ್ಲಿನ ಮತದಾರರ ಮನದಾಳ. ಹಕ್ಕು ಪತ್ರ ವಿಷಯದಲ್ಲಿ ಜನಾಂಗವಾರು ತಾರತಮ್ಯ ಮಾಡಲಾಗಿದೆ. ಪ್ರಭಾವಿ ಜಾತಿಗಳಿಗೆ ಮಾತ್ರ ಹಕ್ಕುಪತ್ರ ನೀಡಿ, ತಳ ಸಮುದಾಯಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಮಾತು ಕೂಡ ಇದೆ. ಆದರೆ, ತಳ ಸ್ತರದ ಜನಸಮುದಾಯದ ಆ ಅಸಮಾಧಾನಕ್ಕೆ ಪೂರಕವಾಗಿ ಕಣದಲ್ಲಿ ಜನರಿಗೆ ಪ್ರಬಲ ಆಯ್ಕೆ ಕಾಣುತ್ತಿಲ್ಲ. ಜೊತೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವ ಅವಕಾಶ ಎಂಬ ಭಾವನಾತ್ಮಕ ಅಂಶ ಕೂಡ ಸದ್ಯ ಜನರ ಆಕ್ರೋಶವನ್ನು ತಣಿಸುತ್ತಿದೆ.

ಒಟ್ಟಾರೆ ಕಣದಲ್ಲಿ, ಧರ್ಮ, ಮತೀಯ ಭಾವನೆಗಳಿಗಿಂತಲೂ, ಹಾಲಿ ಶಾಸಕರು ಜನರೊಂದಿಗೆ ಹೊಂದಿರುವ ಸಂಬಂಧ, ರಾಜ್ಯ ಸರ್ಕಾರದ ಜನಪರ ಕಾರ್ಯಗಳು, ಕೃಷಿಕರ ಸಮಸ್ಯೆಗಳು, ಸಾಲ ಮನ್ನಾ ವಿಷಯದಲ್ಲಿನ ಕೇಂದ್ರ ಬಿಜೆಪಿ ಸರ್ಕಾರದ ಧೋರಣೆ, ಪೊಳ್ಳು ಭರವಸೆಗಳು, ಅಭ್ಯರ್ಥಿಯ ಸ್ಥಳೀಯತೆ ಮುಂತಾದ ವಿಷಯಗಳು ಪ್ರಮುಖವಾಗಿ ಮತಗಳ ದಿಕ್ಕು ನಿರ್ಧರಿಸುವ ಅಂಶಗಳಂತೆ ಗೋಚರಿಸುತ್ತಿವೆ. ಸಾಂಪ್ರದಾಯಿಕ ರಾಜಕೀಯ ವಿಷಯಗಳನ್ನು ಮೀರಿ ಈ ಬಾರಿ ಇಂತಹ ಹಲವು ಸೂಕ್ಷ್ಮ ಮತ್ತು ಸ್ಥಳೀಯ ಸಂಗತಿಗಳೇ ಫಲಿತಾಂಶದ ನಿರ್ಣಾಯಕ ಅಂಶಗಳು ಎಂಬುದು ವಿಶೇಷ.

ಚುನಾವಣಾ ಪ್ರವಾಸದಲ್ಲಿ ಕಂಡುಬಂದ ಜನಾಭಿಪ್ರಾಯದ ವಿಡಿಯೋಗಳು

ಛಾಯಾಗ್ರಹಣ: ಹೇಮಂತ್

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More