ಅಂತಿಮ ವಿಶ್ಲೇಷಣೆ | ಗೌಡ-ಸಿದ್ದರಾಮಯ್ಯ ಪ್ರತಿಷ್ಠೆಯ ಕಣವಾದ ಕಾವೇರಿ ಕಣಿವೆ-2

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಐದು ಜಿಲ್ಲೆಗಳಲ್ಲಿ, ೮೦೦ ಕಿಲೋಮೀಟರ್ ಸಂಚರಿಸಿ ನಡೆಸಿದ ಸಾಕ್ಷಾತ್‌ ಸಮೀಕ್ಷೆಯಲ್ಲಿ ಕಂಡುಬಂದ ಅಂಶಗಳನ್ನು ಆಧರಿಸಿದ ಕಣ ಚಿತ್ರಣವಿದು. ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವಿನ ಕದನ ಕಾವೇರಿ ಕಣಿವೆಯ ಚುನಾವಣಾ ವಿಶೇಷ

ಎಚ್‌ ಡಿ ದೇವೇಗೌಡರ ತವರು ಹಾಸನದಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಜಿದ್ದಾಜಿದ್ದಿನ ಹೋರಾಟ ಜಾರಿಯಲ್ಲಿದೆ. ಮೈಸೂರು ಕಣದಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ದೇವೇಗೌಡ ಮತ್ತು ಕುಮಾರಸ್ವಾಮಿ ಕಾರ್ಯತಂತ್ರ ಹೊಸೆದರೆ, ಸಿದ್ದರಾಮಯ್ಯ ಕೂಡ ಬಹಿರಂಗ ಮತ್ತು ಗೌಪ್ಯಾಸ್ತ್ರಗಳ ಮೂಲಕ ಹಾಸನ ನೆಲದಲ್ಲೇ ಗೌಡರ ಕುಟುಂಬವನ್ನು ಕಟ್ಟಿಹಾಕಲು ಪ್ರತಿತಂತ್ರ ರೂಪಿಸಿದ್ದಾರೆ. ಇದು ಸಹಜವಾಗಿ ಕಾಂಗ್ರೆಸ್ ಪಡೆಯಲ್ಲಿ ಉತ್ಸಾಹವನ್ನು, ದಳ ಬೆಂಬಲಿಗರಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ. ಕಳೆದ ಅವಧಿಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಜೆಡಿಎಸ್, ಎರಡು ಕಡೆ ಕಾಂಗ್ರೆಸ್ ಶಾಸಕರಿದ್ದರು. ಈ ಬಾರಿ ಕೂಡ ಎರಡೂ ಪಕ್ಷಗಳು ನೇರ ಸೆಣಸುತ್ತಿವೆ. ಒಂದೆರಡು ಕಡೆ ಬಿಜೆಪಿಯೂ ಪ್ರಬಲ ಸೆಣಸು ಒಡ್ಡುತ್ತಿದೆ. ಒಕ್ಕಲಿಗ ಪ್ರಾಬಲ್ಯ ಇದ್ದರೂ ಈ ಬಾರಿ ಮುಳ್ಳು ಒಕ್ಕಲಿಗ-ದಾಸ ಒಕ್ಕಲಿಗ ಎನ್ನುವ ಒಳಜಾತಿ ರಾಜಕಾರಣ ಪರಿಣಾಮಕಾರಿ ಸ್ವರೂಪದಲ್ಲಿ ಮುನ್ನೆಲೆಗೆ ಬಂದಿದ್ದು, ಕೆಲವು ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಲಕ್ಷಣ ಗೋಚರಿಸುತ್ತಿದೆ.

ಹೆಚ್ಚು ಕುತೂಹಲ ಕೆರಳಿಸಿರುವುದು ರೇವಣ್ಣ ಪಾರುಪತ್ಯ ಇರುವ ಹೊಳೆನರಸೀಪುರ ಕ್ಷೇತ್ರ. ಮಧುರ ಸಂಬಂಧ ಹೊಂದಿದ್ದ ರೇವಣ್ಣ ವಿರುದ್ಧವೇ ಸಿದ್ದರಾಮಯ್ಯ ಬಿ ಪಿ ಮಂಜೇಗೌಡ ಎನ್ನುವ ಪ್ರಬಲ ಅಸ್ತ್ರವನ್ನು ಪ್ರಯೋಗಿಸಿ, ಅವರ ನಿದ್ದೆ ಕೆಡಿಸಿದ್ದಾರೆ. ಮುಳ್ಳು ಒಕ್ಕಲಿಗ (ರೇವಣ್ಣ) ಮತ್ತು ದಾಸ ಒಕ್ಕಲಿಗ (ಮಂಜೇಗೌಡ) ರಾಜಕೀಯ ಇಲ್ಲಿ ಪ್ರಖರವಾಗಿ ಕೇಳಿಬರುತ್ತಿದೆ. ಇಬ್ಬರ ಮೇಲಾಟ ರಣಸಂಘರ್ಷಕ್ಕೆ ಕಾರಣವಾಗಿದೆ. ಶ್ರವಣಬೆಳಗೊಳದಲ್ಲಿ ಶಾಸಕ ಸಿ ಎನ್ ಬಾಲಕೃಷ್ಣಗೆ ಕಾಂಗ್ರೆಸ್‌ನ ಸಿ ಎಸ್ ಪುಟ್ಟೇಗೌಡ ಮತ್ತೆ ಸವಾಲಾಗಿದ್ದಾರೆ. ಬೀಗರಾದ ಬಾಲಕೃಷ್ಣರನ್ನು ಚುನಾಯಿಸಿಕೊಳ್ಳುವುದು ಗೌಡರ ಕುಟುಂಬಕ್ಕೆ ಪ್ರತಿಷ್ಠೆಯ ಪ್ರಶ್ನೆ. ಇನ್ನೊಂದು ಕದನ ಕುತೂಹಲ ಸೃಷ್ಟಿಸಿರುವ ಕ್ಷೇತ್ರ ಅರಕಲಗೂಡು. ದೇವೇಗೌಡರ ಕುಟುಂಬದ ವಿರುದ್ಧ ತೊಡೆ ತಟ್ಟಿರುವ ಸಚಿವ ಎ ಮಂಜು ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ರಾಜ್ಯಾದ್ಯಂತ ನಡೆದ ಭೂಅಕ್ರಮ ಬಯಲಿಗೆಳೆದ ಸದ್ದು ಮಾಡಿದ ಎ ಟಿ ರಾಮಸ್ವಾಮಿ ಅವರನ್ನು ಜೆಡಿಎಸ್ ಮತ್ತೊಮ್ಮೆ ಮಂಜು ವಿರುದ್ಧ ಹೂಡಿದೆ. ಎರಡು ಅವಧಿ ಸೋತಿರುವ ರಾಮಸ್ವಾಮಿ ಪ್ರಾಮಾಣಿಕ ರಾಜಕೀಯವನ್ನು ಜನರ ಮುಂದಿಟ್ಟು, “ಒಮ್ಮೆ ಅವಕಾಶ ಕೊಡಿ,’’ ಎಂದು ಭಾವುಕವಾಗಿ ಬೇಡುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕೂಡ ಅಮಿತ್ ಶಾ ಅವರನ್ನು ಕರೆಸಿ, ಹವಾ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ.

ಹಾಸನ ಕ್ಷೇತ್ರವನ್ನು ನಾಲ್ಕು ಅವಧಿಗೆ ಪ್ರತಿನಿಧಿಸುತ್ತಿರುವ ಜೆಡಿಎಸ್‌ನ ಎಚ್‌ ಎಸ್‌ ಪ್ರಕಾಶ್‌ಗೆ ಕಾಂಗ್ರೆಸ್‌ನ ಎಚ್‌ ಕೆ ಮಹೇಶ್ ಸವಾಲೊಡ್ಡಿದ್ದಾರೆ. ಸಕಲೇಶಪುರದಲ್ಲಿ ಶಾಸಕ ಎಚ್ ಕೆ ಕುಮಾರಸ್ವಾಮಿ ವಿರುದ್ಧ ನಿವೃತ್ತ ಐಎಎಸ್ ಅಧಿಕಾರಿ ಬಿ ಸಿದ್ದಯ್ಯ ಅವರನ್ನು ಕಾಂಗ್ರೆಸ್ ಹೂಡಿದೆ. ಚುನಾವಣೆ ಘೊಷಣೆಗೆ ಕೆಲವೇ ದಿನ ಮೊದಲು ನಿಧನರಾದ ಬೇಲೂರು ಶಾಸಕ ವೈ ಎನ್‌ ರುದ್ರೇಶ ಗೌಡರ ಪತ್ನಿ ಕೀರ್ತನಾ ಅವರನ್ನು ಕಣಕ್ಕಿಳಿಸಿರುವ ಕಾಂಗ್ರೆಸ್, ಅನುಕಂಪದ ಲಾಭ ಪಡೆಯಲು ಮುಂದಾಗಿದೆ. ಕೆ ಎಸ್ ಲಿಂಗೇಶ್ ಇಲ್ಲಿ ಜೆಡಿಎಸ್ ಅಭ್ಯರ್ಥಿ. ಅರಸೀಕೆರೆಯಲ್ಲಿ ಜೆಡಿಎಸ್‌ನ ಕೆ ಎಂ ಶಿವಲಿಂಗೇ ಗೌಡ ವಿರುದ್ಧ ಯಡಿಯೂರಪ್ಪ ಸಂಬಂಧಿ ಮರಿಸ್ವಾಮಿಯನ್ನು ಬಿಜೆಪಿ ಕಣಕ್ಕಿಳಿಸಿದೆ. ಕಾಂಗ್ರೆಸ್‌ನಿಂದ ಜಿ ಬಿ ಶಶಿಧರ್ ಸ್ಪರ್ಧೆ ಒಡ್ಡಿದ್ದಾರೆ.

ಮಂಡ್ಯದಲ್ಲಿ ಕ್ಷೇತ್ರಕ್ಕೊಂದು ಲೆಕ್ಕಾಚಾರ

ಜಾತ್ಯತೀತ ಜನತಾದಳದ ಮತ್ತೊಂದು ಭದ್ರಕೋಟೆ ಮಂಡ್ಯ ಜಿಲ್ಲೆ. ಇಲ್ಲಿ ಕಳೆದ ಬಾರಿ ಜೆಡಿಎಸ್ ಅಸ್ತ್ರಗಳಾಗಿದ್ದವರು ಈಗ ಕಾಂಗ್ರೆಸ್ ಬತ್ತಳಿಕೆ ಸೇರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸೋತಿದ್ದವರು ದಳ ಪಾಳಯ ಸೇರಿ ಮತ್ತೆ ಶಕ್ತಿ ಪ್ರದರ್ಶನಕ್ಕಿಳಿದಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡಿದರೂ, ಸ್ಪರ್ಧಿಸಲು ಒಪ್ಪದೆ ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದಿರುವ ನಟ ಅಂಬರೀಶ್ ಒಲವು-ನಿಲುವು ಯಾರ ಪರ ಎನ್ನುವ ಕುತೂಹಲಕ್ಕೆ ಇನ್ನೂ ತೆರೆ ಬಿದ್ದಿಲ್ಲ.

ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ೪ರಲ್ಲಿ ಜೆಡಿಎಸ್, ಎರಡು ಕಡೆ ಕಾಂಗ್ರೆಸ್, ಮೇಲುಕೋಟೆಯಲ್ಲಿ ಸರ್ವೋದಯ ಕರ್ನಾಟಕ ಪ್ರತಿನಿಧಿ ಆಯ್ಕೆಯಾಗಿದ್ದರು. ಈ ಬಾರಿ ಮೇಲುಕೋಟೆಯಲ್ಲಿ ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಸ್ವರಾಜ್‌ ಇಂಡಿಯಾದಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್ ನೇರ ಬೆಂಬಲ ಘೊಷಿಸಿದೆ. ಸಂಸದ ಸ್ಥಾನ ತೊರೆದು, ರಾಜ್ಯ ರಾಜಕೀಯಕ್ಕೆ ಬರಲು ಹವಣಿಸುತ್ತಿರುವ ಜೆಡಿಎಸ್‌ನ ಸಿ ಎಸ್ ಪುಟ್ಟರಾಜು ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಪುಟ್ಟಣಯ್ಯ ಹಠಾತ್ ಅಗಲಿಕೆಯ ಅನುಕಂಪ, ವಿದ್ಯಾವಂತ ಯುವಕ ಎನ್ನುವ ಅಂಶಗಳು ದರ್ಶನ್‌ ಬೆಂಬಲಕ್ಕಿವೆ. ಕ್ಷೇತ್ರದ ಒಳಸುಳಿಗಳನ್ನೆಲ್ಲ ಬಲ್ಲ ಪುಟ್ಟರಾಜು ಉರುಳಿಸುವ ದಾಳಗಳು ಹೇಗಿರುತ್ತವೆನ್ನುವುದು ಕುತೂಹಲ.

ನಾಗಮಂಗಲ ಮತ್ತು ಶ್ರೀರಂಗಪಟ್ಟಣ ಕ್ಷೇತ್ರಗಳಲ್ಲಿ ಕಳೆದ ಅವಧಿ ಜೆಡಿಎಸ್‌ನಿಂದ ಗೆದ್ದಿದ್ದ ಎನ್‌ ಚಲುವರಾಯ ಸ್ವಾಮಿ ಮತ್ತು ರಮೇಶ್ ಬಂಡೀಸಿದ್ದೇಗೌಡ ಈಗ ಕಾಂಗ್ರೆಸ್ ಅಭ್ಯರ್ಥಿಗಳು. ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದ ಕೆ ಸುರೇಶ್ ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಈಗ ತೆನೆ ಹೊತ್ತು ನಿಂತಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆದಿದೆ. ಪಕ್ಷಕ್ಕೆ ವಂಚಿಸಿ ಹೋದವರನ್ನು ಸೋಲಿಸಲು ಜೆಡಿಎಸ್‌ ಕಟ್ಟಾ ಬೆಂಬಲಿಗರು ಶಪಥ ಮಾಡಿದ್ದು, ‘ಅಭಿವೃದ್ಧಿಯ ಅಲಕ್ಷ್ಯ’ವನ್ನು ಎತ್ತಿ ತೋರಿಸುತ್ತಿದ್ದಾರೆ. ಇವರಿಬ್ಬರನ್ನು ಗೆಲ್ಲಲು ಬಿಟ್ಟರೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಉಳಿಗಾಲ ಇರದು ಎನ್ನುವ ಆತಂಕ ದಳಪತಿಗಳನ್ನು ಕಾಡುತ್ತಿರುವಂತಿದೆ. ಆದರೆ, ವೈಯಕ್ತಿಕ ವರ್ಚಸ್ಸು, ಜಾತಿ ಬಲದ ಜೊತೆ ಕಾಂಗ್ರೆಸ್ ಮತ-ಶಕ್ತಿ ಸೇರಿರುವುದರಿಂದ ಗೆಲುವು ನಮ್ಮದೇ ಎನ್ನುತ್ತಿದ್ದಾರೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಈ ಇಬ್ಬರು ಬಂಡುಕೋರರು.

ದೇವೇಗೌಡರ ಕುಟುಂಬಕ್ಕೆ ಮತ್ತೊಂದು ಪ್ರತಿಷ್ಠೆಯ ಕ್ಷೇತ್ರ ಮದ್ದೂರು. ಇಲ್ಲಿ ಅವರ ಬೀಗರಾದ ಡಿ ಸಿ ತಮ್ಮಣ್ಣ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಮೂರು ಬಾರಿ ಸೋತಿದ್ದ ಮಧು ಜಿ ಮಾದೇಗೌಡ ಕಾಂಗ್ರೆಸ್ ಹುರಿಯಾಳು. ಬಿಜೆಪಿಯಿಂದ ಸತೀಶ್ ಕಣದಲ್ಲಿದ್ದಾರೆ. ತಮ್ಮ ನಾಯಕ ಹೇಳಿದವರಿಗೆ ಬಿಜೆಪಿ ಇಲ್ಲಿ ಟಿಕೆಟ್ ನೀಡಿಲ್ಲ ಎಂದು ಬೇಸರಗೊಂಡಿರುವ ಎಸ್‌ ಎಂ ಕೃಷ್ಣ ಅಭಿಮಾನಿಗಳು, “ಜೆಡಿಎಸ್‌-ಬಿಜೆಪಿ ಮ್ಯಾಚ್‌ ಫಿಕ್ಸಿಂಗ್ ನಡೆದಿದೆ,” ಎಂದು ಆರೋಪಿಸಿ, ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದಾರೆ. ಕೃಷ್ಣ ಸಹೋದರ ಮತ್ತು ಮಾಜಿ ಸಚಿವ ನಾಗೇಗೌಡರ ಕುಟುಂಬಗಳು ಬಹಿರಂಗ ಬೆಂಬಲ ನೀಡಿರುವುದು ಮಧು ಅವರ ಶಕ್ತಿ ಹೆಚ್ಚಿಸಿದೆ. ಕಾಂಗ್ರೆಸ್ ಟಿಕೆಟ್‌ವಂಚಿತ ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು ಜೆಡಿಎಸ್‌ಗೆ ಮರಳಿದ್ದು ತಮ್ಮಣ್ಣಗೆ ಬಲ ತಂದಿದೆ.

ಮಂಡ್ಯ ಕ್ಷೇತ್ರದಲ್ಲಿ ಅಂಬರೀಶ್‌ಗಾಗಿ ಕೊನೆಯ ಕ್ಷಣದವರೆಗೆ ಟಿಕೆಟ್ ಕಾಯ್ದಿರಿಸಿದ್ದ ಕಾಂಗ್ರೆಸ್, ಮನವೊಲಿಕೆಯಲ್ಲಿ ಸೋತ ನಂತರ ಗಣಿಗ ರವಿಕುಮಾರ್ ಗೌಡ ಕೈಗೆ ಬಿ ಫಾರ್ಮ್‌ ನೀಡಿ ಕೈತೊಳೆದುಕೊಂಡಿದೆ. ಎರಡು ಅವಧಿಗೆ ಶಾಸಕರಾಗಿದ್ದ ಎಂ ಶ್ರೀನಿವಾಸ್ ಅವರನ್ನು ಜೆಡಿಎಸ್ ಕಣಕ್ಕಿಳಿಸಿದ್ದು, ಬಂಡಾಯ ವ್ಯಕ್ತವಾಗಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಐದು ರುಪಾಯಿ ಡಾಕ್ಟರ್ ಖ್ಯಾತಿಯ ಎಸ್‌ ಸಿ ಶಂಕರೇಗೌಡ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಮತ್ತೊಬ್ಬ ಆಕಾಂಕ್ಷಿ ಚಂದಗಾಲು ಶಿವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದೆ. ಮಳವಳ್ಳಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿಗೆ ಜೆಡಿಎಸ್‌ನ ಅನ್ನದಾನಿ ಮತ್ತೊಮ್ಮೆ ಸವಾಲೊಡ್ಡಿದ್ದಾರೆ. ಮಾಜಿ ಸಚಿವ ಬಿ ಸೋಮಶೇಖರ್‌ ಬಿಜೆಪಿಯಿಂದ ಕಣದಲ್ಲಿದ್ದರೂ, ಪೈಪೋಟಿ ನೀಡುವಂತೆ ಕಾಣುತ್ತಿಲ್ಲ. ಕೆ ಆರ್‌ ಪೇಟೆಯಲ್ಲಿ ಜೆಡಿಎಸ್ ಶಾಸಕ ನಾರಾಯಯಣ ಗೌಡ ಮತ್ತು ಮಾಜಿ ಶಾಸಕ ಕೆ ಬಿ ಚಂದ್ರಶೇಖರ್ ಮತ್ತೊಮ್ಮೆ ಬಲಾಬಲ ಪ್ರದರ್ಶನ ನಡೆಸಿದ್ದಾರೆ.

ಕೊಡಗಿನಲ್ಲಿ ಬಿಜೆಪಿಗೆ ದಳ-ಕೈ ಸಡ್ಡು

ಕೊಡಗಿನ ಎರಡೂ ಕ್ಷೇತ್ರಗಳಲ್ಲಿ (ಮಡಿಕೇರಿ, ವಿರಾಜಪೇಟೆ) ಕಳೆದ ಬಾರಿ ಬಿಜೆಪಿಯೇ ಗೆದ್ದದ್ದು. ಈ ಬಾರಿ ಮಡಿಕೇರಿಯಲ್ಲಿ ಶಾಸಕ ಅಪ್ಪಚ್ಚು ರಂಜನ್‌ಗೆ ಜೆಡಿಎಸ್‌ನ ಜೀವಿಜಯ ಪ್ರಬಲ ಸ್ಪರ್ಧೆ ಒಡ್ಡಿದ್ದಾರೆ. ಟಿಕೆಟ್ ಹಂಚಿಕೆ ಗೊಂದಲದ ನಂತರ ಕೆ ಪಿ ಚಂದ್ರಕಲಾ ಕಾಂಗ್ರೆಸ್ ಹುರಿಯಾಳು ಎನ್ನಿಸಿಕೊಂಡಿದ್ದಾರೆ. ಒಕ್ಕಲಿಗರು ಹೆಚ್ಚಿರುವ ಸೋಮವಾರಪೇಟೆ ಭಾಗದಲ್ಲಿ ಜೀವಿಜಯ ಪರ ಅಲೆ ಇದೆ. ಮಡಿಕೇರಿ ವ್ಯಾಪ್ತಿಯಲ್ಲಿ ರಂಜನ್‌ ಮುಂದಿದ್ದಾರೆ. ಜೀವಿಜಯ, ಚಂದ್ರಕಲಾ ಒಂದೇ ಸಮುದಾಯಕ್ಕೆ ಸೇರಿದ್ದು, ಮತವಿಭಜನೆ ತಮಗೆ ಲಾಭ ತಂದುಕೊಡಬಹುದೆನ್ನುವುದು ರಂಜನ್‌ ನಿರೀಕ್ಷೆ. ವಿರಾಜಪೇಟೆಯಲ್ಲಿ ಮಾಜಿ ಸ್ಪೀಕರ್‌ ಕೆ ಜಿ ಬೋಪಯ್ಯ (ಅರೆಭಾಷೆ ಗೌಡ) ಅವರಿಗೆ ಕರಾಟೆ ಪಟು ಅರುಣ್‌ ಮಾಚಯ್ಯ (ಕೊಡವ) ಮತ್ತೊಮ್ಮೆ ಸವಾಲೆಸೆದಿದ್ದಾರೆ. ಬೋಪಯ್ಯ ಒಕ್ಕಲಿಗ, ಅರೆಭಾಷೆ ಗೌಡ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್ ಅಭ್ಯರ್ಥಿ ಸಂಕೇತ್ ಪೂವಯ್ಯ ಕೂಡ ಕೊಡವ ಸಮುದಾಯಕ್ಕೆ ಸೇರಿರುವುದು ಅರುಣ್‌ ಮಾಚಯ್ಯ ಗೆ ಸವಾಲೆನಿಸಿದೆ. ಬೋಪಯ್ಯ-ಮಾಚಯ್ಯ ಮಧ್ಯೆ ತುರಿಸಿನ ಹಣಾಹಣಿ ನಡೆದಿದೆ. ಅಭಿವೃದ್ಧಿ, ಕಾಡಾನೆ ಸಮಸ್ಯೆ, ಮಳೆ-ಬೆಳೆ ಸಮಸ್ಯೆ ಜೊತೆಗೆ ಟಿಪ್ಪು ಜಯಂತಿ ವಿಷಯ ಕೂಡ ಅಲ್ಲಲ್ಲಿ ಹಣಕಿ ಹಾಕುತ್ತಿದೆ.

‘ದಿ ಸ್ಟೇಟ್’ ಚುನಾವಣಾ ಪ್ರವಾಸದಲ್ಲಿ ಕಂಡುಬಂದ ಜನಾಭಿಪ್ರಾಯ

ಛಾಯಾಗ್ರಹಣ: ನೇತ್ರರಾಜು

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More