ಗಬ್ಬರ್ ಸಿಂಗ್ ಟ್ಯಾಕ್ಸ್‌ನಿಂದ ಶೋಲೇ ಗ್ಯಾಂಗ್‌ವರೆಗೆ ರಾಹುಲ್ ಚುನಾವಣಾ ವ್ಯಂಗ್ಯ

ಕರ್ನಾಟಕದ ಚುನಾವಣಾ ಪ್ರವಾಸದ ಸಂದರ್ಭ ರಾಹುಲ್ ಗಾಂಧಿ ಹಲವು ಶಬ್ದಗಳನ್ನು ರಾಜಕೀಯ ಗ್ರಂಥಭಂಡಾರಕ್ಕೆ ನೀಡಿದ್ದಾರೆ. ಅದರಲ್ಲಿ ‘ಶೋಲೇ ಗ್ಯಾಂಗ್’ ಮತ್ತು ‘ಸೆಂಟ್ರಲ್ ಬ್ಯೂರೋ ಆಫ್ ಇಲ್ಲೀಗಲ್ ಮೈನಿಂಗ್‌’ನಂತಹ ವಿವರಣೆಗಳು ಸೇರಿವೆ. ಅಂತಹ ವ್ಯಂಗ್ಯದ ಬಾಣಗಳ ಝಲಕ್ ಇಲ್ಲಿದೆ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮೇಲೆ ಅವರು ಸಾಕಷ್ಟು ವಾಗ್ದಾಳಿ ಮಾಡಿದ್ದಾರೆ. ಅವುಗಳ ಕೆಲವು ಝಲಕ್ ಇಲ್ಲಿ ನೀಡಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ಭ್ರಷ್ಟರನ್ನು ಪೋಷಿಸುತ್ತಿದೆ ಎನ್ನುವ ವಿಚಾರವಾಗಿ ಬಹುತೇಕ ತಮ್ಮ ಎಲ್ಲ ಭಾಷಣಗಳಲ್ಲೂ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹರಿಯಬಿಟ್ಟ ವ್ಯಂಗ್ಯಗಳು ಹೀಗಿವೆ:

 • ನರೇಂದ್ರ ಮೋದಿಯವರು ಭ್ರಷ್ಟಾಚಾರದ ವಿರುದ್ಧ ನಿಂತಿದ್ದೇನೆ ಎಂದು ಭಾಷಣದಲ್ಲಿ ಹೇಳುತ್ತಾರೆ. ಆದರೆ, ಅವರ ಎಡಭಾಗದಲ್ಲಿ ಯಡಿಯೂರಪ್ಪ ಕುಳಿತಿರುತ್ತಾರೆ. ಮತ್ತೊಂದು ಭಾಗದಲ್ಲಿ ಕುಳಿತ ನಾಲ್ಕು ಸಚಿವರು ಜೈಲಿನ ಆಹಾರ ಸೇವಿಸಿ ಬಂದವರಾಗಿರುತ್ತಾರೆ.
 • ಶೋಲೆಯ ಸಂಪೂರ್ಣ ಗ್ಯಾಂಗ್ ಕರ್ನಾಟಕ ಬಿಜೆಪಿಯಲ್ಲಿದೆ. ಗಬ್ಬರ್ ಸಿಂಗ್, ಕಾಲಾ, ಸಾಂಬಾ ಎಲ್ಲರೂ ಒಂದೇ ಪಕ್ಷದೊಳಗೆ ಸೇರಿದ್ದಾರೆ. ಎಲ್ಲರನ್ನೂ ವಿಧಾನಸಭೆಗೆ ಕರೆದೊಯ್ಯುವ ಪ್ರಯತ್ನದಲ್ಲಿರುವ ನರೇಂದ್ರ ಮೋದಿಯವರು, ಭಾಷಣದಲ್ಲಿ ಭ್ರಷ್ಟಾಚಾರದ ವಿರುದ್ಧ ನಿಂತಿರುವುದಾಗಿ ಹೇಳುತ್ತಾರೆ!
 • ಎಂಟು ಜನ ರೆಡ್ಡಿ ಸಹೋದರರು ಕರ್ನಾಟಕ ವಿಧಾನಸಭೆಗೆ ಹೋಗಲು ಏಕೆ ಅನುವು ಮಾಡಿಕೊಡುತ್ತೀರಿ ಎಂದು ಮೋದಿಯವರನ್ನು ಕೇಳಿದರೆ, ಒಂದೇ ಉತ್ತರ ಸಿಗುತ್ತದೆ; “ಲೂಟಿಕೋರ ಸಹೋದರರನ್ನು ರಾಜ್ಯವನ್ನು ಲೂಟಿ ಮಾಡಲು ಕಳುಹಿಸುತ್ತೇನೆ,” ಎನ್ನುವುದು. ಈ ಲೂಟಿಯ ಹಣವನ್ನು ಬಿಜೆಪಿ ಪ್ರಚಾರಕ್ಕೆ ಬಳಸಿಕೊಳ್ಳಲಿದೆ.
 • ಅಮಿತ್ ಶಾ ಮಗ ಜೇ ಶಾ ಮೂರು ತಿಂಗಳಲ್ಲಿ ಐವತ್ತು ಸಾವಿರವನ್ನು ೮೦ ಕೋಟಿಯಾಗಿ ಪರಿವರ್ತಿಸುತ್ತಾರೆ. ದೇಶದ ಕಾವಲುಗಾರ (ಚೌಕೀದಾರ್) ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ನೇಹಿತನ ಕಳ್ಳತನವನ್ನು ತಡೆಯುವುದಿಲ್ಲ.
ಇದನ್ನೂ ಓದಿ : ಬಿಜೆಪಿಯಲ್ಲಿ ಗಬ್ಬರ್‌ ಮಾತ್ರವಲ್ಲ ಸಾಂಬಾಗಳೂ ಇದ್ದಾರೆ ಎಂದ ರಾಹುಲ್ ಗಾಂಧಿ

ಇನ್ನು, ಕೇಂದ್ರ ಸರ್ಕಾರದ ಕೆಲವು ನೀತಿಗಳ ಬಗ್ಗೆಯೂ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ವ್ಯಂಗ್ಯದ ಮಾತುಗಳನ್ನು ಹರಿಯಬಿಟ್ಟಿದ್ದಾರೆ. ರೈತರಿಗೆ ಸಾಲ ಮನ್ನಾ ಮಾಡಲು ನಿರಾಕರಿಸಿರುವುದು, ಜಿಎಸ್ಟಿ ಯೋಜನೆಯನ್ನು ವ್ಯವಸ್ಥಿತವಾಗಿ ಅಳವಡಿಸದೆ ಇರುವುದು ಮತ್ತು ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಬಗ್ಗೆಯೂ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

 • ಈ ದೇಶದ ಸಾಮಾನ್ಯ ಜನರ ಮೇಲೆ ಗಬ್ಬರ್ ಸಿಂಗ್ ಟ್ಯಾಕ್ಸ್ (GST) ಹಾಕಿದ್ದು ಪ್ರಧಾನಿ ಮೋದಿ.
 • ಚೀನಾ ಅಧ್ಯಕ್ಷ ಭಾರತಕ್ಕೆ ಬಂದಾಗ ಮೋದಿಯವರು ಅವರ ಜೊತೆಗೆ ಉಯ್ಯಾಲೆಯಾಡುತ್ತಾರೆ, ಕೈ-ಕೈ ಹಿಡಿದು ಉಯ್ಯಾಲೆಯಾಡುತ್ತಾರೆ. ನಂತರ ವಾಪಾಸು ಮನೆಗೆ ಹೋಗಿ ದೋಖ್ಲಾಮ್ನಲ್ಲಿ ಚೀನಾದ ಸೈನಿಕರನ್ನು ಕಳುಹಿಸಿಸುತ್ತಾರೆ. ಸ್ವತಃ ಪ್ರಧಾನಿಯವರೇ ಚೀನಾಗೆ ಹೋದರೂ ದೋಖ್ಲಾಮ್ ಬಗ್ಗೆ ಒಂದೂ ಮಾತಾಡುವುದಿಲ್ಲ.
 • ಚೀನಾಗೆ ತೆರಳಿ ‘ಮನ್ ಕಿ ಬಾತ್’ ಆಡುವ ಮೋದಿ, ಅಲ್ಲಿ ದೋಖ್ಲಾಮ್ ವಿಚಾರದ ಬಗ್ಗೆ ಮಾತನಾಡುವುದಿಲ್ಲವೇಕೆ?
 • “ರೈತರ ಸಾಲವನ್ನು ಮನ್ನಾ ಮಾಡಿ ಎಂದು ಪ್ರಧಾನಿ ಮೋದಿಯವರಿಗೆ ಹೇಳಿದರೆ ಹೀಗೆ ಮೌನವೇ ಅವರ ಉತ್ತರವಾಯಿತು,” ಎಂದು ಒಂದು ಕಾಲ ಮೌನವಾಗಿರುವಂತೆ ನಟಿಸಿ ರಾಹುಲ್ ಗಾಂಧಿ ಹಾಸ್ಯ ಮಾಡಿದರು.
 • ಬಿಜೆಪಿಯು ದೇಶದಲ್ಲಿರುವ ೧೦-೧೫ ಶ್ರೀಮಂತ ಉದ್ಯಮಿಗಳ ಸಾಲ ಮನ್ನಾ ಮಾಡುತ್ತದೆ. ಸೂಟು, ಬೂಟು ಹಾಕಿದ ಉದ್ಯಮಿಗಳು ಪ್ರಧಾನಿಯವರ ಕಚೇರಿಗೆ ಹೋಗಿ ಸಾಲ ಮನ್ನಾ ಮಾಡಿಸಿಕೊಳ್ಳುತ್ತಾರೆ. ಆದರೆ ಎಷ್ಟೇ ರೈತರು ಆತ್ಮಹತ್ಯೆ ಮಾಡಿದರೂ ಪ್ರಧಾನಿ ರೈತರ ಸಾಲ ಮನ್ನಾ ಮಾಡಲು ತಯಾರಿಲ್ಲ.

ಪ್ರಧಾನಿ ಮೋದಿ ಸರ್ಕಾರದ ಕೆಲವು ಯೋಜನೆಗಳು ಮತ್ತು ಘೋಷಣೆಗಳ ಬಗ್ಗೆಯೂ ರಾಹುಲ್ ಗಾಂಧಿ ತಮ್ಮ ಮಾತಿನ ಬಾಣಗಳನ್ನು ಹರಿಯಬಿಟ್ಟಿದ್ದಾರೆ. ಪ್ರಮುಖ ಆಡಳಿತ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸಿರುವ ಬಗ್ಗೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಹಿಂತೆಗೆಯುವ ಆರೋಪ ದೇಶದಲ್ಲಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿಯೂ ತಮ್ಮ ಭಾಷಣಗಳಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

 • ನರೇಂದ್ರ ಮೋದಿಯವರಿಗೆ ಹೆಸರು ಬದಲಿಸುವುದು ಬಹಳ ಪ್ರಿಯವಾದ ಕೆಲಸ. ಪ್ಲಾನಿಂಗ್ ಕಮಿಷನ್ ಅನ್ನು ನೀತಿ ಆಯೋಗ ಎಂದು ಬದಲಿಸಿದಂತೆ, ಸಿಬಿಐ ಹೆಸರನ್ನು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನಿಂದ ‘ಸೆಂಟ್ರಲ್ ಬ್ಯೂರೋ ಆಫ್ ಇಲ್ಲೀಗಲ್ ಮೈನಿಂಗ್’ ಎಂದು ಬದಲಿಸಿದ್ದಾರೆ. ಇದೀಗ ಅದು ರೆಡ್ಡಿ ಸಹೋದರರನ್ನು ಖುಲಾಸೆ ಮಾಡುವ ಸಂಸ್ಥೆ. ಮೋದಿ ಹೇಳಿದಂತೆ ಮಾಡುವ ಸಂಸ್ಥೆ.
 • ‘ಬೇಟಿ ಬಚಾವೋ ಬೇಟಿ ಪಡಾವೋ’ ಎನ್ನುವ ಘೋಷಣೆಯನ್ನು ಈಗ ಬಿಜೆಪಿಯು ‘ಬೇಟಿ ಬಚಾವೋ, ಬಿಜೆಪಿಯ ರಾಜಕಾರಣಗಳಿಂದ’ ಎಂದು ಬದಲಿಸಿದೆ.
 • ಬಿಜೆಪಿಯ ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಮತ್ತು ಬಸವಣ್ಣನವರ ತತ್ವದರ್ಶಗಳನ್ನು ಪಾಲಿಸದೆ ಇರುವ ಬಗ್ಗೆಯೂ ಪ್ರಧಾನಿ ಮೋದಿ ಹಾಗೂ ಬಿಜೆಪಿ ಮೇಲೆ ವ್ಯಂಗ್ಯದ ಬಾಣಗಳನ್ನು ಬಿಟ್ಟಿದ್ದಾರೆ ರಾಹುಲ್ ಗಾಂಧಿ.
 • ಬಿಜೆಪಿಯ ಪ್ರಣಾಳಿಕೆ ಪೂರ್ಣವಾಗಿ ರೆಡ್ಡಿ ಸಹೋದರರ ಐಡಿಯಾಗಳಿಂದ ತುಂಬಿರುತ್ತದೆ. ಭ್ರಷ್ಟಾಚಾರ ಅಲ್ಲಿ ಅಡಗಿರುತ್ತದೆ. ಅದು ಜನರ ಪ್ರಣಾಳಿಕೆಯಾಗದೆ ಆರೆಸ್ಸೆಸ್ ಪ್ರಣಾಳಿಕೆಯಾಗಿರುತ್ತದೆ. ಆದರೆ ಕಾಂಗ್ರೆಸ್ಸಿನ ಪ್ರಣಾಳಿಕೆಯಲ್ಲಿ ನಿಜವಾಗಿಯೂ ಜನರ ‘ಮನ್ ಕಿ ಬಾತ್’ ಇರುತ್ತದೆ.
 • ಕಾಂಗ್ರೆಸ್ ಬಸವಣ್ಣನರ ಬಗ್ಗೆ ಮಾತನಾಡಿದರೆ ಅದನ್ನು ಕಾರ್ಯದಲ್ಲೂ ಅಳವಡಿಸಿಕೊಳ್ಳುತ್ತದೆ. ಆದರೆ ಮೋದಿಯವರು ಬಸವಣ್ಣ ಮತ್ತು ಅಂಬೇಡ್ಕರ್ ಮೂರ್ತಿಗಳಿಗೆ ಹಾರ ಹಾಕುತ್ತಾರೆ. ಆದರೆ, ಅವರ ತತ್ವಾದರ್ಶಗಳನ್ನು ಪಾಲಿಸುವುದಿಲ್ಲ. ಎಲ್ಲೆಡೆ ದಲಿತರ ಮೇಲೆ ಹಲ್ಲೆ ನಡೆದರೂ ಮೌನ ಧರಿಸುತ್ತಾರೆ.
 • ಜನತಾದಳ ಪಕ್ಷದ ಹೆಸರಿನ ಜೊತೆ ‘ಎಸ್’ ಸೇರಿಕೊಂಡಿದೆ. ಅದು ಜಾತ್ಯಾತೀತವೇ ಅಥವಾ ಸಂಘ ಪರಿವಾರವೇ ಎಂಬುದನ್ನು ಜನತಾದಳದ ನಾಯಕರು ಕರ್ನಾಟಕದ ಜನರಿಗೆ ಸ್ಪಷ್ಟಪಡಿಸಬೇಕು.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More