ಫಲಿತಾಂಶಕ್ಕೆ ಮೊದಲ ಎರಡು ದಿನ ಬಿಡುವಿನಲ್ಲಿ ರಾಜಕೀಯ ನಾಯಕರ ಪ್ಲಾನ್ ಏನು?

ಕರ್ನಾಟಕದ ಚುನಾವಣಾ ಭರಾಟೆ ಈಗ ಕೊನೆಯಾಗಿದೆ. ಮತದಾನ ಮುಗಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಕಾರ್ಯಕರ್ತರು, ಮುಖಂಡರು ಎರಡು ದಿನಗಳ ರಜಾ ತೆಗೆದುಕೊಳ್ಳುವಂತೆ ಅಧಿಕೃತವಾಗಿ ಘೋಷಿಸಿವೆ. ಬಿಜೆಪಿ ಮಾತ್ರ ಚಟುವಟಿಕೆ ಮುಂದುವರಿಸಿದೆ!

ಕಳೆದ ಕೆಲವು ತಿಂಗಳಿಂದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ವ್ಯಸ್ತರಾಗಿದ್ದ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಕೊನೆಗೂ ಮತದಾನ ಮುಗಿಸಿದ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಒಮ್ಮೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಚಟುವಟಿಕೆಗಳತ್ತ ಗಮನಿಸಿದರೆ, ಮಂಗಳವಾರದ ಚುನಾವಣಾ ಫಲಿತಾಂಶಕ್ಕಾಗಿ ಕಾತರದಿಂದ ಕಾಯುವ ಜೊತೆಗೆ ವಿಶ್ರಾಂತಿಯತ್ತ ಮನಸ್ಸು ಮಾಡಿರುವುದೂ ಕಂಡುಬಂದಿದೆ.

ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಅಧಿಕೃತವಾಗಿಯೇ ವಿಶ್ರಾಂತಿಯನ್ನು ಘೋಷಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಖಾತೆ ಮೂಲಕ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಎರಡು ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವಂತೆ ಅಧಿಕೃತವಾಗಿ ಸೂಚಿಸಿದ್ದಾರೆ. “ಕಾಂಗ್ರೆಸ್ ಪಕ್ಷದ ಪ್ರೀತಿಯ ಕಾರ್ಯಕರ್ತರೇ ಮತ್ತು ಹಿತಚಿಂತಕರೇ, ಚುನಾವಣಾ ಪ್ರಚಾರದಲ್ಲಿ‌ ತೊಡಗಿದ್ದ ನೀವು ನನ್ನಂತೆಯೇ ದಣಿದಿದ್ದೀರಿ ಎಂದು ಗೊತ್ತು. ಎಕ್ಸಿಟ್‌ ಪೋಲ್ ಬಗ್ಗೆ ಹೆಚ್ಚು‌ ತಲೆಕೆಡಿಸಿಕೊಳ್ಳಬೇಡಿ. ಆರಾಮವಾಗಿರಿ, ಕುಟುಂಬದ ಜೊತೆ ಕಾಲ ಕಳೆಯಿರಿ. ಮೇ ೧೫ರಂದು‌ ಸಿಗೋಣ. ಹಿರಿಯರ ಆಶೀರ್ವಾದ ಮತ್ತು ಕಿರಿಯರ ಹಾರೈಕೆಯಿಂದ ಒಳ್ಳೆಯದೇ ಆಗುತ್ತದೆ,” ಎಂದು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದಾರೆ.

ವಾಸ್ತವದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ತಮ್ಮ ಕರ್ನಾಟಕ ವಿಧಾನಸಭಾ ಚುನಾವಣಾ ತಂಡಕ್ಕೆ ಎರಡು ದಿನ ರಜಾ ಘೋಷಿಸಿದ್ದಾರೆ ಎನ್ನಲಾಗಿದೆ. ಮಾಧ್ಯಮಗಳಿಗೆ ವೃಥಾ ಹೇಳಿಕೆ ಕೊಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳನ್ನು ಹರಿಯಬಿಡುವ ಬದಲಾಗಿ ಮೇ ೧೫ರವರೆಗೆ ಕಾದು ನಂತರ ಪ್ರತಿಕ್ರಿಯೆ ನೀಡುವುದು ಒಳಿತು ಎಂದು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಇದೇ ಕಾರಣದಿಂದ ಕಳೆದ ಕೆಲ ತಿಂಗಳಿಂದ ಸದಾ ಚಟುವಟಿಕೆಯಿಂದ ಇದ್ದ ಅಧಿಕೃತ ಕಾಂಗ್ರೆಸ್ ಟ್ವಿಟರ್ ತಾಣಗಳು ಇದೀಗ ಮೌನ ಸಾರಿವೆ.

ಇತ್ತ, ಜೆಡಿಎಸ್‌ ಪಾಳಯದಲ್ಲೂ ಇದೇ ರೀತಿಯ ವಿಶ್ರಾಂತಿಯ ಮನೋಭಾವ ಕಂಡುಬಂದಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರು ಎರಡು ದಿನಗಳ ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಗ ನಿಖಿಲ್ ಜೊತಗೆ ಸಿಂಗಾಪುರಕ್ಕೆ ಹೋಗಿರುವ ಕುಮಾರಸ್ವಾಮಿ ಅವರು, ಸೋಮವಾರ ರಾತ್ರಿ ಬೆಂಗಳೂರಿಗೆ ಮರಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ಹೇಳಿವೆ. ಅಲ್ಲದೆ, ಜೆಡಿಎಸ್ ಸಾಮಾಜಿಕ ಜಾಲತಾಣಗಳೂ ಸಹ ಮೌನ ತಾಳಿವೆ.

ಇದನ್ನೂ ಓದಿ : ರಾಜ್ಯ ಕಂಡ ದಾಖಲೆಯ ಮತದಾನ ಪ್ರಮಾಣ ಕಾಂಗ್ರೆಸ್‌ ಪಾಲಿಗೆ ಲಾಭವಾಗಲಿದೆಯೇ?

ಆದರೆ, ಚುನಾವಣೆ ಮುಗಿದ ನಂತರವೂ ರಾಜಕೀಯ ಚರ್ಚೆಗಳು ಮತ್ತು ಚಟುವಟಿಕೆಯಿಂದ ದೂರ ಇರದ ಪಕ್ಷವೆಂದರೆ ಬಿಜೆಪಿ ಮಾತ್ರ. ಬಿಜೆಪಿಯ ಟ್ವಿಟರ್ ಮತ್ತು ಇತರ ಸಾಮಾಜಿಕ ತಾಣಗಳು ಇನ್ನೂ ವಿಶ್ರಾಂತಿಯ ಸ್ಥಿತಿಗೆ ಹೋಗಿಲ್ಲ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ಅವರೂ ಮಾಧ್ಯಮ ಹೇಳಿಕೆಗಳನ್ನು ಕೊಡುತ್ತಲೇ ಇದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಚುನಾವಣೋತ್ತರ ಸಮೀಕ್ಷೆಗಳನ್ನು ನಾನು ನೋಡಿದ್ದೇನೆ. ಬಿಜೆಪಿ 125ರಿಂದ 130 ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 70ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲುವುದಿಲ್ಲ ಹಾಗೂ ಜೆಡಿಎಸ್ 24ರಿಂದ 25 ಸೀಟು ಗೆಲ್ಲಬಹುದು. ಬಿಜೆಪಿ ಪರ ರಾಜ್ಯದಲ್ಲಿ ಅಲೆ ಇದೆ. ಮಂಗಳವಾರ ಫಲಿತಾಂಶ ಹೊರಬೀಳಲಿದೆ. ಸ್ಪಷ್ಟ ಬಹುಮತದೊಂದಿಗೆ ಬಿಜೆಪಿ ಅಧಿಕಾರ ಹಿಡಿಯಲಿದೆ,” ಎಂದವರು ಹೇಳಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರು ಮೇ ೧೫ರಂದು ನವದೆಹಲಿಗೆ ಹೋಗುವುದಾಗಿ ಹೇಳಿಕೆ ನೀಡಿದ್ದು, ಅಧಿಕಾರ ಸ್ವೀಕಾರಕ್ಕೆ ಸಂಬಂಧಿಸಿ ಬಿಜೆಪಿ ಹೈಕಮಾಂಡ್ ಜೊತೆಗೆ ಮಾತುಕತೆಗೆ ಸಿದ್ಧತೆಯನ್ನೂ ನಡೆಸುತ್ತಿದ್ದಾರೆ.

ಮತ್ತೊಂದೆಡೆಯಲ್ಲಿ ಅವರ ಟ್ವಿಟರ್ ತಾಣವೂ ತಾಯಂದಿರ ದಿನ ಮತ್ತು ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನಕ್ಕೆ ಶುಭಾಶಯ ಕೋರುವ ಸಂದೇಶಗಳನ್ನು ನೀಡುತ್ತ ಚಟುವಟಿಕೆಯಿಂದ ಇದೆ. ಬಿಜೆಪಿಯ ಅಧಿಕೃತ ಖಾತೆಯೂ ರಾಜಕೀಯ ಸಂದೇಶಗಳನ್ನು ಟ್ವಿಟರ್ ಮತ್ತು ಇತರ ಸಾಮಾಜಿಕ ಜಾಲತಾಣಗಳ ಮೂಲಕ ಹರಿಯಬಿಟ್ಟಿದೆ. ಅಲ್ಲದೆ, ಬಿಜೆಪಿ ಮುಖಂಡರ ಅಧಿಕೃತ ಸಾಮಾಜಿಕ ಜಾಲತಾಣಗಳೂ ಬಹಳ ಸಕ್ರಿಯವಾಗಿಯೇ ಇವೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More