ರಾಜ್ಯದ ಗಮನ ಸೆಳೆದ ೨೫ ವಿಐಪಿ ಕ್ಷೇತ್ರಗಳಲ್ಲಿ ಗೆದ್ದು ಬೀಗುವವರು ಯಾರು?

ಬಹುನಿರೀಕ್ಷಿತ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟವಾಗಲಿದೆ. ೨೨೨ ವಿಧಾನಸಭಾ ಕ್ಷೇತ್ರಗಳಿಂದ ೨,೫೦೦ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ನಾನಾ ಕಾರಣಗಳಿಗೆ ೨೫ ಕ್ಷೇತ್ರಗಳು ರಾಜ್ಯದ ಗಮನ ಸೆಳೆದಿವೆ. ಆ ಕ್ಷೇತ್ರಗಳ ವಿಶೇಷತೆಗಳು ಇಲ್ಲಿದೆ

೧೫ನೇ ವಿಧಾನಸಭೆಗೆ ಪ್ರವೇಶಿಸುವ ಶಾಸಕರ ಹೆಸರು ಕೆಲವೇ ತಾಸುಗಳಲ್ಲಿ ಅಧಿಕೃತಗೊಳ್ಳಲಿದೆ. ಈ ನಡುವೆ ಅಪ್ಪ-ಮಕ್ಕಳು, ಸಹೋದರರು, ಮಾಜಿ ಮುಖ್ಯಮಂತ್ರಿಗಳು, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಗುರುತಿಸಿಕೊಂಡವರು ಹೀಗೆ ನಾನಾ ಕಾರಣಗಳಿಗಾಗಿ ರಾಜ್ಯದ ಗಮನಸೆಳೆದ ನಾಯಕರ ಸ್ಪರ್ಧೆಯಿಂದ ಕೆಲವು ಕ್ಷೇತ್ರಗಳು ಪ್ರಾಮುಖ್ಯ ಗಳಿಸಿಕೊಂಡಿವೆ. ಇಂಥ ೨೦ ವಿಐಪಿ ಕ್ಷೇತ್ರಗಳ ಪಟ್ಟಿ ಇಂತಿದೆ.

ಚಾಮುಂಡೇಶ್ವರಿಯಲ್ಲಿ ಸಿಎಂ-ಜಿಟಿಡಿ ಹಣಾಹಣಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಅಭ್ಯರ್ಥಿ ಜಿ ಟಿ ದೇವೇಗೌಡ ಅವರ ಸ್ಪರ್ಧೆಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರವು ದೇಶದ ಗಮನಸೆಳೆದಿದೆ. ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿರುವ ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರಿಗೆ ಜಿ ಟಿ ದೇವೇಗೌಡರು ತೀವ್ರ ಪೈಪೋಟಿ ಒಡ್ಡಿದ್ದಾರೆ. ೧೯೮೯ರಲ್ಲಿ ಇದೇ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟಿದ್ದ ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದ ಮೂಲಕ ಕೊನೆಯ ಚುನಾವಣೆ ಎದುರಿಸುವ ಮಾತುಗಳನ್ನಾಡುತ್ತಿದ್ದಾರೆ. ಮುಖ್ಯಮಂತ್ರಿಯವರ ಸ್ಪರ್ಧೆ ಹಾಗೂ ನೇರ ಹಣಾಹಣಿ ಈ ಕ್ಷೇತ್ರಕ್ಕೆ ತಾರಮೌಲ್ಯ ತಂದಿದೆ.

ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲು

ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜೊತೆಗೆ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲಿನ ಆತಂಕದಿಂದಾಗಿ ಅವರು ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಬಲ ತುಂಬಲು ಬಾದಾಮಿಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಹೇಳುತ್ತಿದ್ದಾರೆ. ಇಲ್ಲಿ ಬಿಜೆಪಿಯ ಬಿ ಶ್ರೀರಾಮುಲು ಅವರು ಸಿಎಂಗೆ ಸ್ಪರ್ಧೆಯೊಡ್ಡಿದ್ದಾರೆ.

ರಾಮನಗರ ಮತ್ತು ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಸ್ಪರ್ಧೆ

ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಎರಡೂ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ. ರಾಮನಗರದಲ್ಲಿ ಸುಲಭವಾಗಿ ಗೆಲ್ಲಲಿರುವ ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣದಲ್ಲಿ ಬಿಜೆಪಿಯ ಸಿ ಪಿ ಯೋಗೇಶ್ವರ್‌ ಹಾಗೂ ಕಾಂಗ್ರೆಸ್‌ನ ಎಚ್‌ ಎಂ ರೇವಣ್ಣ ಅವರಿಂದ ಪ್ರಬಲ ಸ್ಪರ್ಧೆ ಎದುರಾಗಿದೆ.

ಕೊರಟಗೆರೆಯಲ್ಲಿ ಗೆಲುವು ಅರಸುತ್ತಿರುವ ಪರಮೇಶ್ವರ್‌

ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದ ಬಾರಿ ಸೋತು ಮುಖ್ಯಮಂತ್ರಿ ಹುದ್ದೆಯ ರೇಸ್‌ನಿಂದ ಹೊರಬಿದ್ದಿದ್ದ ಪರಮೇಶ್ವರ್‌ಗೆ ಜೆಡಿಎಸ್‌ನ ಸುಧಾಕರ್‌ ಲಾಲ್‌ ಹಾಗೂ ಬಿಜೆಪಿಯ ಹುಚ್ಚಯ್ಯ ಸವಾಲು ಎಸೆದಿದ್ದಾರೆ.

ಶಿಕಾರಿಪುರದಲ್ಲಿ ಯಡಿಯೂರಪ್ಪ ಹವಾ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್‌ ಯಡಿಯೂರಪ್ಪ ಅವರ ಸ್ಪರ್ಧೆಯಿಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರ ಗಮನಸೆಳೆದಿದೆ. ಹಲವು ಚುನಾವಣೆಗಳಲ್ಲಿ ಯಡಿಯೂರಪ್ಪ ಇಲ್ಲಿಂದ ಗೆದ್ದು ಬೀಗಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಎಸ್‌ವೈ ಜೇಷ್ಠ ಪುತ್ರ ಬಿ ವೈ ರಾಘವೇಂದ್ರ ಇಲ್ಲಿಂದ ಗೆದ್ದುಬಂದಿದ್ದರು.

ಬಬಲೇಶ್ವರದಲ್ಲಿ ಎಂ ಬಿ ಪಾಟೀಲ್‌ ಸ್ಪರ್ಧೆ

ಕಾಂಗ್ರೆಸ್‌ನ ನಾಯಕ ಎಂ ಬಿ ಪಾಟೀಲ್‌ ವಿಜಯಪುರ ಜಿಲ್ಲೆಯ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಪಾಟೀಲ್‌, ರಾಜ್ಯದ ಗಮನಸೆಳೆದಿದ್ದರಲ್ಲದೇ ಲಿಂಗಾಯತ ಸಮುದಾಯ ಹೊಸ ನಾಯಕನಾಗಿ ಗುರುತಿಸಿಕೊಂಡಿದ್ದರು.

ಶಿವಮೊಗ್ಗದಲ್ಲಿ ಈಶ್ವರಪ್ಪ ಪ್ರತಿಷ್ಠೆ ಪಣಕ್ಕೆ

ಬಿಜೆಪಿಯ ಹಿರಿಯ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರು ಶಿವಮೊಗ್ಗದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಈಶ್ವರಪ್ಪ ಪರಾಭವಗೊಂಡಿದ್ದರು.

ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಪ್ರತಿಷ್ಠೆ ಪಣಕ್ಕೆ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ ಶ್ರೀರಾಮುಲು ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಬಾದಾಮಿಯಲ್ಲೂ ಕಣಕ್ಕಿಳಿದಿರುವ ಶ್ರೀರಾಮುಲುಗೆ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ತಿಪ್ಪೇಸ್ವಾಮಿ ಕಣಕ್ಕಿಳಿದಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಧಾರವಾಡದಲ್ಲಿ ವಿನಯ ಕುಲಕರ್ಣಿ

ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಸಚಿವ ವಿನಯ ಕುಲಕರ್ಣಿ ಅವರಿಗೆ ಬಿಜೆಪಿಯ ಅಮೃತ ದೇಸಾಯಿ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್‌ಗೆ ಈ ಕ್ಷೇತ್ರದಲ್ಲಿ ಅದರ ಲಾಭ-ನಷ್ಟದ ಬಲ ತಿಳಿಯಲಿದೆ.

ಹೊಳೆನರಸೀಪುರದಲ್ಲಿ ಎಚ್‌ ಡಿ ರೇವಣ್ಣಗೆ ಗೆಲುವಿನ ಹಂಬಲ

ಮಾಜಿ ಪ್ರಧಾನ ಮಂತ್ರಿ ಎಚ್‌ ಡಿ ದೇವೇಗೌಡ ಅವರ ಹಿರಿಯ ಪುತ್ರ ಎಚ್‌ ಡಿ ರೇವಣ್ಣ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಅರಸುತ್ತಿದ್ದಾರೆ. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯ ಅವರ ಬೆಂಬಲಿಗ ಕಾಂಗ್ರೆಸ್‌ನ ಮಂಜೇಗೌಡ ಸ್ಪರ್ಧೆಗೆ ಇಳಿದಿದ್ದಾರೆ.

ಸೊರಬದಲ್ಲಿ ಸಹೋದರರ ಸವಾಲ್‌

ಮಾಜಿ ಮುಖ್ಯಮಂತ್ರಿ ಎಸ್‌ ಬಂಗಾರಪ್ಪ ಪುತ್ರರಾದ ಕುಮಾರ ಬಂಗಾರಪ್ಪ ಅವರು ಬಿಜೆಪಿಯಿಂದ ಮಧು ಬಂಗಾರಪ್ಪ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದ ಕುಮಾರ್‌ ಬಂಗಾರಪ್ಪ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಮಧು ಬಂಗಾರಪ್ಪ ಅವರು ಸತತ ಎರಡನೇ ಬಾರಿ ಶಾಸಕರಾಗುವ ಹಂಬಲ ಹೊಂದಿದ್ದಾರೆ.

ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ ಚೆಲುವರಾಯಸ್ವಾಮಿ

ಜೆಡಿಎಸ್‌ ವಿರುದ್ಧ ಬಂಡಾಯ ಸಾರಿರುವ ಎನ್‌ ಚೆಲುವರಾಯ ಸ್ವಾಮಿ ಅವರು ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ವಿರುದ್ಧವಾಗಿ ಕಾಂಗ್ರೆಸ್‌ ಅಭ್ಯರ್ಥಿ ಬೆಂಬಲಿಸುವ ಮೂಲಕ ಜೆಡಿಎಸ್‌ನ ಎಚ್‌ ಡಿ ದೇವೇಗೌಡ ಹಾಗೂ ಎಚ್‌ ಡಿ ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿರುವ ಪೈಕಿ ಚೆಲುವರಾಯಸ್ವಾಮಿ ಒಬ್ಬರು.

ಚಾಮರಾಜಪೇಟೆಯಲ್ಲಿ ಜಮೀರ್‌ ಅಹ್ಮದ್

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಜಮೀರ್‌ ಅಹ್ಮದ್‌ ಖಾನ್‌ಗೆ ಗೆಲುವು ಪ್ರತಿಷ್ಠೆಯಾಗಿದೆ. ಚಾಮರಾಜಪೇಟೆಯಲ್ಲಿ ಜೆಡಿಎಸ್‌ನ ಅಭ್ಯರ್ಥಿ ಅಲ್ತಾಫ್‌ ಖಾನ್‌ ಅವರು ಜಮೀರ್‌ಗೆ ಭಾರಿ ಸವಾಲು ಒಡ್ಡಿದ್ದಾರೆ.

ವರುಣಾದಲ್ಲಿ ಯತೀಂದ್ರ ಸ್ಪರ್ಧೆ

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಸ್ಪರ್ಧೆಯಿಂದ ವರುಣಾ ಕ್ಷೇತ್ರ ಗಮನಸೆಳೆದಿದೆ. ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್‌ ಯಡಿಯೂರಪ್ಪ ಅವರ ದ್ವಿತೀಯ ಪುತ್ರ ವಿಜಯೇಂದ್ರ ಅವರು ಇಲ್ಲಿ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಿಜೆಪಿ ಮುಖಂಡರು ಕೈಗೊಂಡ ನಿರ್ಣಯದಿಂದ ಅವರು ಸ್ಪರ್ಧೆಯಿಂದ ಹಿಂದೆ ಸರಿಯುವಂತಾಯಿತು. ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಎರಡು ಬಾರಿ ಗೆದ್ದಿದ್ದಾರೆ.

ಚಿತ್ತಾಪುರದಲ್ಲಿ ಪ್ರಿಯಾಂಕ್‌ ಖರ್ಗೆ ಸ್ಪರ್ಧೆ

ಕಾಂಗ್ರೆಸ್‌ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪುರದ ಮೀಸಲು ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮಾಲೀಕಯ್ಯ ಗುತ್ತೇದಾರ್‌ ಅವರು ಜೂನಿಯರ್‌ ಖರ್ಗೆಗೆ ಸೋಲುಣಿಸಲು ಹವಣಿಸುತ್ತಿರುವುದು ಈ ಕ್ಷೇತ್ರ ಎಲ್ಲರ ಗಮನಸೆಳೆದಿದೆ.

ಬೀದರ್‌ ದಕ್ಷಿಣದಲ್ಲಿ ಗೆಲ್ಲುವರೇ ಖೇಣಿ?

ಕರ್ನಾಟಕ ಪಕ್ಷದ ಸ್ಥಾಪಕ ಹಾಗೂ ಉದ್ಯಮಿ ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರಿದ್ದು, ಬೀದರ್‌ ದಕ್ಷಿಣ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಖೇಣಿ ಕಾಂಗ್ರೆಸ್‌ ಸೇರ್ಪಡೆಗೆ ಹೈದರಾಬಾದ್‌ ಕರ್ನಾಟಕದಲ್ಲಿ ಪ್ರಭಾವಿಯಾದ ಮಲ್ಲಿಕಾರ್ಜುನ ಖರ್ಗೆ ಅವರು ಸೇರಿದಂತೆ ಹಲವು ನಾಯಕರು ಪ್ರತಿರೋಧ ದಾಖಲಿಸಿದ್ದರು. ಅಲ್ಲದೇ ಕಾಂಗ್ರೆಸ್‌ನ ಹಲವು ಮುಖಂಡರು ಖೇಣಿಗೆ ಸೋಲಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿರುವುದರಿಂದ ನೈಸ್‌ ವಿವಾದದಲ್ಲಿ ಸಿಲುಕಿರುವ ಖೇಣಿಗೆ ಕಠಿಣ ಸವಾಲು ಎದುರಾಗಿದೆ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್‌ ಶೆಟ್ಟರ್‌ ಅವರ ಸ್ಪರ್ಧೆಯಿಂದ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಗಮನಸೆಳೆದಿದೆ. ಕಾಂಗ್ರೆಸ್‌ನ ಮಹೇಶ್ ನಾಲವಾಡ ಅವರು ಶೆಟ್ಟರ್‌ಗೆ ತೀವ್ರ ಸ್ಪರ್ಧೆಯೊಡ್ಡಿದ್ದಾರೆ.

ಹುಕ್ಕೇರಿಯಲ್ಲಿ ಕತ್ತಿ ದಾಖಲೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ವಿಧಾನಸಭಾ ಕ್ಷೇತ್ರವು ವಿಶಿಷ್ಟ ದಾಖಲೆಗೆ ಸಿದ್ಧವಾಗಿದೆ. ಬಿಜೆಪಿ ಹಾಲಿ ಶಾಸಕ ಉಮೇಶ್‌ ಕತ್ತಿ ಅವರು ೮ ಬಾರಿ ಸ್ಪರ್ಧಿಸಿ ಏಳು ಬಾರಿ ಗೆದ್ದಿದ್ದಾರೆ. ಒಂಬತ್ತನೇ ಬಾರಿ ಅವರು ಕಣಕ್ಕಿಳಿದಿದ್ದಾರೆ. ಕತ್ತಿ ಜಯಗಳಿಸಿದರೆ ಅತ್ಯಂತ ಹೆಚ್ಚು ಬಾರಿ ಗೆದ್ದು ವಿಧಾನಸಭೆಗೆ ಆರಿಸಿ ಬಂದ ಖ್ಯಾತಿ ಗಳಿಸಲಿದ್ದಾರೆ.

ಗದಗದಲ್ಲಿ ಎಚ್‌ ಕೆ ಪಾಟೀಲ್

ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌ ಕೆ ಪಾಟೀಲ್‌ ಅವರು ಗದಗ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಉತ್ತರ ಕರ್ನಾಟಕದ ಪ್ರಬಲ ನಾಯಕರಾದ ಪಾಟೀಲ್‌ ಅವರಿಗೆ ಗಣಿ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಬಣದ ಅನಿಲ್ ಮೆಣಸಿನಕಾಯಿ ಸ್ಪರ್ಧೆಯೊಡ್ಡಿದ್ದಾರೆ.

ಯಮಕನಮರಡಿಯಲ್ಲಿ ಸತೀಶ್ ಜಾರಕಿಹೊಳಿ

ಎಐಸಿಸಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್‌ನ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸೋಲೇ ಕಾಣದ ಸತೀಶ್‌ ಜಾರಕಿಹೊಳಿ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದವರು.

ಬಳ್ಳಾರಿಯಲ್ಲಿ ಗಣಿಧಣಿಗಳ ಸ್ಪರ್ಧೆ‌

ಬಳ್ಳಾರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅನಿಲ್‌ ಲಾಡ್‌ ಹಾಗೂ ಬಿಜೆಪಿಯಿಂದ ಜನಾರ್ದನ ರೆಡ್ಡಿ ಸಹೋದರ ಸೋಮಶೇಖರ ರೆಡ್ಡಿ ಪೈಪೋಟಿ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಸಹೋದರರು ರಾಜ್ಯ ರಾಜಕಾರಣಕ್ಕೆ ಮರಳಿರುವುದು ಸಹಜವಾಗಿಯೇ ಬಳ್ಳಾರಿಯ ಕಣವನ್ನು ಗಮನಿಸುವಂತೆ ಮಾಡಿದೆ.

ಹೊಳಲ್ಕೆರೆಯಲ್ಲಿ ಆಂಜನೇಯಗೆ ತೀವ್ರ ಪೈಪೋಟಿ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್‌ ಆಂಜನೇಯ ಸ್ಪರ್ಧೆ ಮಾಡಿದ್ದಾರೆ. ಬಿಜೆಪಿಯಿಂದ ಎಂ ಚಂದ್ರಪ್ಪ, ಜೆಡಿಎಸ್‌ನ ಶ್ರೀನಿವಾಸ ಗದ್ದಿಗೆ ಅವರು ಆಂಜನೇಯ ಪ್ರಬಲ ಸ್ಪರ್ಧೆಯೊಡ್ಡಿದ್ದಾರೆ.

ಶಾಮನೂರು ಶಿವಶಂಕರಪ್ಪಗೆ ಸವಾಲು

ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಧಿಸಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸಿಗೆ ವಿರೋಧ ವ್ಯಕ್ತಪಡಿಸಿದ್ದ ಶ್ಯಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿಯ ಯಶವಂತರಾವ್‌ ಜಾಧವ್‌ ಸವಾಲೊಡ್ಡಿದ್ದಾರೆ.

ಪ್ರಮೋದ್‌ ಮಧ್ವರಾಜ್‌ಗೆ ರಘುಪತಿ ಭಟ್‌ ಎದುರಾಳಿ

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಪ್ರಮೋದ್‌ ಮಧ್ವರಾಜ್‌ಗೆ ಬಿಜೆಪಿಯ ರಘುಪತಿ ಭಟ್‌ ಎದುರಾಳಿಯಾಗಿದ್ದಾರೆ. ವಿವಾದದ ಸುಳಿಯಲ್ಲಿ ಸಿಲುಕಿದ್ದ ರಘುಪತಿ ಭಟ್‌ ಕಳೆದ ಬಾರಿ ಬಿಜೆಪಿ ಟಿಕೆಟ್‌ ಗಿಟ್ಟಿಸುವಲ್ಲಿ ಸೋತಿದ್ದರು. ಚುನಾವಣೆಗೂ ಮುನ್ನ ಪ್ರಮೋದ್‌ ಮಧ್ವರಾಜ್‌ ಬಿಜೆಪಿ ಸೇರುತ್ತಾರೆ ಎಂಬ ವಿಚಾರ ಸಾಕಷ್ಟು ಚರ್ಚೆಯಾಗಿತ್ತು.

ಇದನ್ನೂ ಓದಿ : ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳ ಕಾರುಬಾರು

ಸಾಗರದಲ್ಲಿ ಕಾಗೋಡು

ಶಿವಮೊಗ್ಗ ಜಿಲ್ಲೆಯ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ಅವರಿಗೆ ಬಿಜೆಪಿಯ ಹರತಾಳು ಹಾಲಪ್ಪ ಸ್ಪರ್ಧೆಯೊಡ್ಡಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಭಾರಿ ಮುಜುಗರ ಅನುಭವಿಸಿದ್ದ ಹಾಲಪ್ಪ ಅವರು ರಾಜಕೀಯ ಭವಿಷ್ಯ ಅರಸುತ್ತಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More