ಚಾಣಕ್ಯಪುರಿ | ಕರ್ನಾಟಕದ ಬಿಜೆಪಿ ನಾಯಕರಿಗೆ ಈಗ ಶ್ರೀರಾಮುಲು ಭಯ!

ಇತ್ತೀಚಿಗೆ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳು ಪಕ್ಷದೊಳಗೆ ಶ್ರೀರಾಮುಲು ಅವರ ಗ್ರಾಫನ್ನು ಮೇಲೇರಿಸಿದೆ. ಬಿ ಎಸ್ ಯಡಿಯೂರಪ್ಪ ನಂತರ ತಮ್ಮ ಸರದಿ ಎಂದು ಬಿಜೆಪಿಯೊಳಗೆ ನಾಯಕತ್ವದ ಕನಸು ಕಾಣುತ್ತಿರುವ ಮುಖಂಡರಿಗೆ ಈಗ ನಾಯಕ ಸಮುದಾಯದ ಶ್ರೀರಾಮುಲು ತೊಡಕಾಗುತ್ತಿದ್ದಾರಂತೆ

ರಾಜ್ಯ ಬಿಜೆಪಿಯ ಎರಡನೇ ಸಾಲಿನ ಮುಖಂಡರು ಪಕ್ಷದ ಏಕೈಕ ಜನನಾಯಕ ಬಿ ಎಸ್ ಯಡಿಯೂರಪ್ಪ ನಿರ್ಗಮನದ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಯಾವುದೇ ರೀತಿಯ ಫಲಿತಾಂಶ ಬಂದರೂ ಯಡಿಯೂರಪ್ಪ ಯುಗಾಂತ್ಯ ಖಚಿತ ಎನ್ನುವುದು ಇವರ ನಂಬಿಕೆ. ಅಧಿಕಾರ ಸಿಕ್ಕರೆ ಒಂದೆರಡು ವರ್ಷ ಅನುಭವಿಸಿ ನೇಪಥ್ಯಕ್ಕೆ ಸರಿಯುತ್ತಾರೆ, ಸಿಗದಿದ್ದರೆ ಈಗಲೇ ಆ ಕೆಲಸ ಆಗಿಬಿಡುತ್ತದೆ ಎಂಬ ಲೆಕ್ಕಾಚಾರ. ಜೊತೆಗೆ ಯಡಿಯೂರಪ್ಪ ನಿರ್ಗಮನದ ನಂತರ ನಮ್ಮದೇ ನಾಯಕತ್ವ ಎಂಬ ಕನಸು. ಹೀಗೆ ನಾಯಕತ್ವದ ಕನಸು ಕಾಣುತ್ತಿರುವ ಮುಖಂಡರಿಗೆ ಈಗ ನಾಯಕ ಸಮುದಾಯದ ಶ್ರೀರಾಮುಲು ತೊಡಕಾಗುತ್ತಿದ್ದಾರಂತೆ.

ಇತ್ತೀಚಿಗೆ ಬಿಜೆಪಿಯಲ್ಲಿ ನಡೆದ ಬೆಳವಣಿಗೆಗಳು ಪಕ್ಷದೊಳಗೆ ಶ್ರೀರಾಮುಲು ಅವರ ಗ್ರಾಫನ್ನು ಮೇಲೇರಿಸಿದೆ. ಲಿಂಗಾಯತರು ಬಿಜೆಪಿಯಿಂದ ದೂರ ಸರಿಯುತ್ತಿರುವ ಕಡುಕಷ್ಟದ ಕಾಲದಲ್ಲಿ ತಮ್ಮ ನಾಯಕ ಸಮುದಾಯವನ್ನು ಪಕ್ಷದತ್ತ ಸೆಳೆದರು, ಚುನಾವಣೆಯ ಹೊಸ್ತಿಲಲ್ಲಿ ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಎಸ್‌ಟಿ ವ್ಯಾಪ್ತಿಗೆ ತರಲು ಕೆಲಸ ಮಾಡಿದರು. ಅದರಿಂದಾಗಿ ನಾಯಕ ಸಮುದಾಯ ಬಿಜೆಪಿಯೆಡೆಗೆ ಬರುವಂತಾಯಿತು. ಇದಾದ ಬಳಿಕ ಸ್ವತಃ ಯಡಿಯೂರಪ್ಪ ಅವರೇ ಬಾದಾಮಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಯಲು ಹಿಂದೇಟು ಹಾಕಿದಾಗ ಶ್ರೀರಾಮುಲು ಸಂಭವನೀಯ ಸೋಲನ್ನು ಲೆಕ್ಕಿಸದೆ ಅಖಾಡಕ್ಕಿಳಿದರು. ತಾವು ಈ ಮೊದಲೇ ಕಣಕ್ಕಿಳಿದಿದ್ದ ಮೊಳಕಾಲ್ಮೂರಿನಲ್ಲಿ ಬಂಡಾಯದ ಕಾರಣಕ್ಕೆ ಕಷ್ಟ ಇದ್ದರೂ ಸಿದ್ದರಾಮಯ್ಯ ಅವರಿಗೆ ಪ್ರಬಲ ಸವಾಲೊಡ್ಡಬೇಕು ಎನ್ನುವ ಕಾರಣಕ್ಕೆ ಬಾದಾಮಿಯಿಂದಲೂ ಕಣಕ್ಕಿಳಿದರು. ಇದಾದ ಮೇಲೆ ಸ್ವತಃ ತಾವೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡೂ ಕಡೆ ತೀವ್ರ ಪೈಪೋಟಿ ಇದ್ದರೂ ನಾಯಕ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಇತರ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದರು. ಇದೆಲ್ಲದರ ಪರಿಣಾಮ ಚುನಾವಣೆಯ ಕಡೆ ದಿನಗಳಲ್ಲಿ ಬಿಜೆಪಿ ಬಿಡುಗಡೆ ಮಾಡಿದ ಎಲ್ಲ ಜಾಹೀರಾತುಗಳಲ್ಲಿ ಶ್ರೀರಾಮುಲು ಅವರಿಗೂ ಅವಕಾಶ ಸಕ್ಕಿತು. ಸ್ವತಃ ಅಮಿತ್ ಶಾ, ಶ್ರೀರಾಮುಲು ಅವರ ಧೈರ್ಯಕ್ಕೆ, ಕೆಲಸಕ್ಕೆ ಫಿದಾ ಆಗಿಬಿಟ್ಟಿದ್ದಾರಂತೆ.

ಶ್ರೀರಾಮುಲು ಗ್ರಾಫು ಮುಂದೆ ಇನ್ನೂ ಮೇಲಕ್ಕೆರಬಹುದು ಎನ್ನುವ ಕಾರಣಕ್ಕೆ ಕೆಲ ಬಿಜೆಪಿ ನಾಯಕರ ಬಿಪಿ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಈಗ ಬಿಜೆಪಿ ಮೇಲೆ ಬ್ರಾಹ್ಮಣರ ಪಕ್ಷ, ಮೇಲ್ವರ್ಗದವರ ಪಕ್ಷ ಎಂಬ ಟೀಕೆಗಳಿವೆ. ಶ್ರೀರಾಮುಲು ಮೂಲಕ ಆ ಆರೋಪದಿಂದ ಮುಕ್ತರಾಗಬಹುದು. ಯಡಿಯೂರಪ್ಪ ಮತ್ತು ಅನಂತಕುಮಾರ್ 'ಸ್ಪೆಂಟ್ ಫೋರ್ಸ್' ಆಗಿದ್ದಾರೆ. ಅನಂತ ಕುಮಾರ್ ಹೆಗಡೆ, ಪ್ರತಾಪ್ ಸಿಂಹ ಮತ್ತಿತರರು ಕರ್ನಾಟಕಕ್ಕೆ ಒಗ್ಗದ ಉಗ್ರ ಹಿಂದುತ್ವ ಪ್ರತಿಪಾದಿಸಲು ಹೊರಟಿದ್ದಾರೆ. ಸದಾನಂದ ಗೌಡ, ಆರ್ ಅಶೋಕ್ ಮತ್ತು ಸಿ ಟಿ ರವಿಗೆ ಒಕ್ಕಲಿಗರಲ್ಲೇ ಒಲವಿಲ್ಲ. ಇವರಲ್ಲಿ ಯಾರನ್ನೇ ಪಣಕ್ಕೊಡ್ಡಿದರೂ ಫಲ ಬರುವ ಖಾತರಿ ಇಲ್ಲ. ಹಾಗಾಗಿ ಶ್ರೀರಾಮುಲುಗೆ ಅಮಿತ್ ಶಾ ಪಕ್ಷದ ಪಟ್ಟಾಭಿಷೇಕ ಮಾಡಿಬಿಡಬಹುದೆಂಬ ಭಯ ಎರಡನೇ ಸಾಲಿನ ನಾಯಕರನ್ನು ಕಾಡುತ್ತಿದೆಯಂತೆ.

ಕಾಂಗ್ರೆಸ್ ಸೋತರೆ ದುಡ್ಡು ಮತ್ತು ದ್ವೇಷವೇ ಕಾರಣ!

ಈ ಬಾರಿಯ ಕರ್ನಾಟಕದ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಕಡೆವರೆಗೂ ಅತ್ಯಂತ ಸಮರ್ಥವಾಗಿ ನಿರ್ವಹಿಸಿ, ಅಮಿತ್ ಶಾ ಮತ್ತು ಮೋದಿಯಂತಹ ಅತಿರಥ-ಮಹಾರಥರನ್ನು ಮಣಿಸುವ ಮಟ್ಟಕ್ಕೆ ಸವಾಲೊಡ್ಡಿತ್ತು. ಅಭ್ಯರ್ಥಿಗಳ ಆಯ್ಕೆ, ಪ್ರವಾಸ, ಪ್ರಚಾರದ ಆದಿಯಾಗಿ ಎಲ್ಲ ವಿಷಯಗಳನ್ನೂ ವ್ಯವಸ್ಥಿತವಾಗಿ ಮಾಡಿತ್ತಂತೆ. ಆದರೆ, ಕಡೆಯ ಮೂರು ದಿನಗಳಲ್ಲಿ ಮುಗ್ಗರಿಸಲು ದುಡ್ಡಿನ ಕೊರತೆ ಕಾರಣ ಎನ್ನಲಾಗಿದೆ.

ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಈ ಭಾರಿ ದೊಡ್ಡ ಪ್ರಮಾಣದಲ್ಲಿ ದುಡ್ಡಿನ ಥೈಲಿಯನ್ನೇ ಹರಿಸುತ್ತದೆ ಎಂದು ಅಂದಾಜಿಸಲಾಗಿತ್ತು. ಅಷ್ಟೇ ಅಲ್ಲ, ಅದಕ್ಕೆ ಪ್ರತಿಯಾಗಿ ಪೈಪೋಟಿ ನೀಡಲು ಬೇಕಾದ ಹಣಕಾಸಿನ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ ಎಲ್ಲ ಅಭ್ಯರ್ಥಿಗಳಿಗೂ ಇಂತಿಷ್ಟು ಎಂದು ಹಣ ಕಳುಹಿಸಲಾಗಿತ್ತು. ಕೊನೆಯ ಮೂರು ದಿನಗಳಲ್ಲಿ ಯಾವ ನಾಯಕರು ಎಲ್ಲಿ ಪ್ರಚಾರ ಮಾಡಬೇಕು ಎನ್ನುವ ನಿರ್ಧಾರಗಳೆಲ್ಲ ಅಚ್ಚುಕಟ್ಟಾಗಿ ಮಾಡಲಾಗಿತ್ತು. ಆದರೆ, ಬಿಜೆಪಿಗೆ ಪೈಪೋಟಿಯಲ್ಲಿ ನಿರ್ವಹಣೆ ಮಾಡುವುದು ಕಾಂಗ್ರೆಸ್ನಿಂದ ಸಾಧ್ಯವಾಗಲಿಲ್ಲ.

“ಬಾದಾಮಿಯಲ್ಲಿ ಸ್ವತಃ ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರ ಮೇಲೆ ನಡೆಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಕಾಂಗ್ರೆಸ್ ಪಕ್ಷದ ಚುನಾವಣಾ ರಣತಂತ್ರವನ್ನು ಬುಡಮೇಲು ಮಾಡಿಬಿಟ್ಟಿತ್ತು. ಐಟಿ ದಾಳಿಯಿಂದಾಗಿ ಹಣ ಸಾಗಾಟ ಸಾಧ್ಯವಾಗಲಿಲ್ಲ. ಕನಿಷ್ಠ ಇಪ್ಪತ್ತರಿಂದ ಇಪ್ಪತೈದು ಕ್ಷೇತ್ರಗಳನ್ನು ಕಾಸಿನ ಕಾರಣಕ್ಕೆ ಕಳೆದುಕೊಳ್ಳುತ್ತಿದ್ದೇವೆ. ಪಕ್ಷ ಈ ಬಾರಿ ಸೋತರೆ ಅದಕ್ಕೆ ಬಿಜೆಪಿಯ ಸೇಡಿನ ರಾಜಕಾರಣವೇ ಕಾರಣ,” ಎನ್ನುವುದು ಕಾಂಗ್ರೆಸ್ ನಾಯಕರೊಬ್ಬರ ಅಳಲು.

ಪ್ರಚಾರದ ವಿಷಯದಲ್ಲಿ ಕಾಂಗ್ರೆಸ್-ಬಿಜೆಪಿಯದ್ದು ಒಂದೇ ಸಮಸ್ಯೆ

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಒಟ್ಟು ೨೧ ಸಮಾವೇಶ ಮಾಡಿದ್ದಾರೆ. ರಾಹುಲ್ ಗಾಂಧಿ ೨೦ ಸಭೆ ಮಾಡಿದ್ದಾರೆ. ಅದಲ್ಲದೆ ರೋಡ್ ಶೋಗಳು ಮತ್ತು ಕಾರ್ನರ್ ಮೀಟಿಂಗ್‌ಗಳನ್ನೂ ನಡೆಸಿದ್ದಾರೆ. ಆದರೂ ಎರಡೂ ಪಕ್ಷಗಳ ಹೈಕಮಾಂಡ್ ನಾಯಕರಿಗೆ ಸಮಾಧಾನವಾಗಿಲ್ಲ. ತಾವು ಖುದ್ದಾಗಿ ಮಾಡಿದ ಪ್ರಚಾರದ ಬಗ್ಗೆ ಸಾಕು ಎನಿಸಿದೆಯಾದರೂ ರಾಜ್ಯದ ಮುಂಚೂಣಿ ನಾಯಕರ ವಿಷಯದಲ್ಲಿ ತೃಪ್ತಿ ಸಿಕ್ಕಿಲ್ಲ. ರಾಜ್ಯ ನಾಯಕರು ಇನ್ನೂ ಹೆಚ್ಚಿನ ಪ್ರಚಾರ ನಡೆಸಬೇಕಿತ್ತು ಎನ್ನುವುದು ಎರಡೂ ಪಕ್ಷಗಳ ಹೈಕಮಾಂಡ್ ನಾಯಕರ ಗೊಣಗಾಟ.

ಯಡಿಯೂರಪ್ಪ ಬಗ್ಗೆ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಇದ್ದರೂ ಮತ ತಂದುಕೊಡಬಲ್ಲ ತಮ್ಮ ಪಕ್ಷದ ಏಕೈಕ ನಾಯಕ ಎಂದು ಬಿಜೆಪಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿತ್ತು. ಅವರಿಂದ ಬರಬಹುದಾಗಿದ್ದ ಲಿಂಗಾಯತ ಮತಗಳ ಮೇಲೆ ಪಕ್ಷ ಅವಲಂಬಿತವಾಗಿತ್ತು. ಯಡಿಯೂರಪ್ಪ ಭರಪೂರ ಪ್ರಚಾರ ಮಾಡುತ್ತಾರೆ ಎನ್ನುವ ವಿಶ್ವಾಸವೂ ಇತ್ತು. ಅದರಲ್ಲೂ, ಲಿಂಗಾಯತ ಬಾಹುಳ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಆದರೆ, ಯಡಿಯೂರಪ್ಪ ಪ್ರಚಾರದ ವಿಷಯದಲ್ಲಿ ಅಷ್ಟೇನೂ ಉತ್ಸಾಹ ತೋರಲಿಲ್ಲ. ಪ್ರಮುಖವಾಗಿ, ಉತ್ತರ ಕರ್ನಾಟಕದ ವಿಷಯದಲ್ಲಿ ಅವರು ವಿಮುಖರಾದವರಂತೆಯೇ ವರ್ತಿಸಿದರು. “ಯಡಿಯೂರಪ್ಪ ಏಕೆ ಹೀಗೆ ಮಾಡಿದರು?” ಎಂದು ಹೈಕಮಾಂಡ್ ತಲೆಕೆಡಿಸಿಕೊಂಡಿದೆಯಂತೆ.

ಕಾಂಗ್ರೆಸ್ ಕತೆ ಭಿನ್ನವಾಗೇನೂ ಇಲ್ಲ. ಸದಾ ನಾಯಕತ್ವದ ಭಾರದಿಂದ ಬಳಲುವ ಕಾಂಗ್ರೆಸ್ ಈ ಭಾರಿ ಘಟಾನುಘಟಿ ನಾಯಕರಿದ್ದರೂ ಪರಿಣಾಮಕಾರಿ ಪ್ರಚಾರ ಮಾಡಲು ಸಾಧ್ಯವಾಗಿಲ್ಲವಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿ ಬೇರೆಯವರು ರಾಜ್ಯ ಸುತ್ತಲಿಲ್ಲ. ಇದ್ದುದರಲ್ಲಿ ಡಿ ಕೆ ಶಿವಕುಮಾರ್ ಪರವಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮತ್ತು ಪರಮೇಶ್ವರ್ ಇನ್ನೂ ಹೆಚ್ಚಿನ ಪ್ರಚಾರ ಮಾಡಬೇಕಿತ್ತು. ದಲಿತರ ಪೈಕಿ ಎಡಗೈ ಸಮುದಾಯದ ಸುಲ್ತಾನ್ ಎಂದು ಬಿಂಬಿಸಿಕೊಳ್ಳುವ ಕೆ ಎಚ್ ಮುನಿಯಪ್ಪ, ಎಡಗೈನವರು ಇರುವ ಕಡೆ ಪ್ರಚಾರ ಮಾಡಬೇಕಿತ್ತು. ಸಚಿವರಾಗಿದ್ದ ಅವರು, ತಮ್ಮದಲ್ಲದೆ ಇನ್ನೊಂದು ಕ್ಷೇತ್ರದ ಉಸ್ತುವಾರಿಯನ್ನು ನೋಡಿಕೊಳ್ಳಬೇಕಿತ್ತು. ಎಲ್ಲರೂ ತಮ್ಮ ಕ್ಷೇತ್ರಗಳಿಗೆ ಸೀಮಿತರಾಗಿಬಿಟ್ಟರು ಎಂಬ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ : ಅಮಿತ್ ಶಾ ಸೀಕ್ರೆಟ್‌ ಡೈರಿ | ತಲೆ ಕೆಟ್ಟರೆ ರಾಮುಲುನೇ ಸಿಎಂ ಮಾಡಿಬಿಡ್ತೀನಿ!

ಚುನಾವಣಾ ಚಾಣಾಕ್ಷನಿಗೂ ಕಬ್ಬಿಣದ ಕಡಲೆಯಾದ ಕರ್ನಾಟಕ

ಚುನಾವಣೆಗಳ ಚಾಣಾಕ್ಷ ಎಂದು ಕರೆಯಲಾಗುವ ಅಮಿತ್ ಶಾ ಆತ್ಮವಿಶ್ವಾಸ ಬಿಟ್ಟುಕೊಟ್ಟ ಉದಾಹರಣೆ ಬಹಳ ಕಡಿಮೆ. ಆದರೆ, ಕರ್ನಾಟಕದ ವಿಷಯದಲ್ಲಿ ಅವರ ಆತ್ಮವಿಶ್ವಾಸ ಕುಗ್ಗಿರುವ ಕುರುಹುಗಳು ಗೋಚರಿಸತೊಡಗಿವೆ. ದೆಹಲಿ ಪತ್ರಕರ್ತರದುರು ಪರೋಕ್ಷವಾಗಿ ‘ಕರ್ನಾಟಕ ಕಬ್ಬಿಣದ ಕಡಲೆ’ ಎಂದು ಪರಿತಪಿಸಿದ್ದಾರೆ. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ, ಪರಿಚಯವೇ ಇಲ್ಲದ ಈಶಾನ್ಯ ರಾಜ್ಯಗಳಲ್ಲಿ ರಣತಂತ್ರ ರೂಪಿಸಿ ಗೆದ್ದು ಗದ್ದುಗೆ ಏರಿ ಬೀಗಿದ್ದವರು ಅವರು. ಕರ್ನಾಟಕ ಮಾತ್ರ ಮೊದಲ ದಿನದಿಂದ ಕಡೆವರೆಗೂ ಕಡುಕಷ್ಟವಾಗಿಯೇ ಇತ್ತಂತೆ. ಅದಕ್ಕವರು ಕೊಡುವ ಕಾರಣಗಳು; ಕರ್ನಾಟಕದ ರಾಜಕೀಯ ಸಂಸ್ಕೃತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿಯ ಒಳಜಗಳ.

ಬೇರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಕರ್ನಾಟಕದ ರಾಜಕಾರಣದ ಗುಣ ಸ್ವಭಾವವೇ ಭಿನ್ನ. ಅರ್ಥ ಮಾಡಿಕೊಳ್ಳುವುದು, ಅರಗಿಸಿಕೊಳ್ಳುವುದು ಎರಡೂ ಕಷ್ಟವೇ. ಇಲ್ಲಿನ ನಗರ ಪ್ರದೇಶದ ವಿಧಾನಸಭಾ ಕ್ಷೇತ್ರಗಳು ಕೂಡ ಗ್ರಾಮೀಣ ಕ್ಷೇತ್ರಗಳ ಗುಣಗಳನ್ನೇ ಮೈಗೂಡಿಸಿಕೊಂಡಿವೆ. ಜಿಲ್ಲೆಗೊಂದು, ಜಾತಿಗೊಂದು ಸಮೀಕರಣಗಳಿವೆ. ಮೇಲುನೋಟಕ್ಕೆ ಒಂಥರಾ, ಆಂತರ್ಯದಲ್ಲಿ ಇನ್ನೊಂಥರಾ ಇವೆ ಎಂದು ತಮಗೆ ಅರ್ಥವಾಗದ ಕರ್ನಾಟಕದ ರಾಜಕೀಯ ಸಂಸ್ಕೃತಿಯನ್ನು ದೆಹಲಿ ಪತ್ರಕರ್ತರಿಗೆ ಪರಿಚಯಿಸಲು ಪ್ರಯತ್ನಿಸಿದ್ದಾರೆ.

ಇದಾದ ಬಳಿಕ ಅವರಿಗೆ ಕಡೆವರಿಗೂ ಸವಾಲೆನಿಸಿದ್ದು ಸಿಎಂ ಸಿದ್ದರಾಮಯ್ಯ. “ಏಟು-ಎದಿರೇಟು ಎರಡೂ ವಿಷಯದಲ್ಲಿ ಸಿದ್ದರಾಮಯ್ಯ ಸದಾ ಮುಂದಿರುತ್ತಿದ್ದರು. ಅವರನ್ನು ಹತ್ತಿರದಿಂದ ಕಂಡಿದ್ದ ನಮ್ಮಪಕ್ಷದ ಸ್ಥಳೀಯ ನಾಯಕರು ಸೂಕ್ತವಾದ ರಣತಂತ್ರ ರೂಪಿಸಬೇಕಿತ್ತು. ಅದರೆ, ಯಾರೂ ಸರಿಸಾಟಿಯಾಗಲೇ ಇಲ್ಲ. ನಮ್ಮವರ ಕಚ್ಚಾಟ ಕಡೆವರೆಗೂ ಮುಗಿಯಲೇ ಇಲ್ಲ,” ಎಂಬರ್ಥದ, ಹೇಳಲಾಗದ ಮಾತುಗಳನ್ನು ನುಂಗಿ ನುಂಗಿ ಹೊರಹಾಕಿದ್ದಾರೆ ಅಮಿತ್ ಶಾ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More