ಫಲಿತಾಂಶ ಅತಂತ್ರ; ಮತದಾರರು ಮತ್ತು ಪಕ್ಷಗಳ ಲೆಕ್ಕಾಚಾರ ಹಳಿ ತಪ್ಪಿದ್ದೆಲ್ಲಿ?

ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶ ಅತಂತ್ರವಾದರೆ ಅದಕ್ಕೆ ರಾಜಕೀಯ ಪಕ್ಷಗಳು ಕಾರಣವೋ ಅಥವಾ ಮತದಾರರೇ ಕಾರಣವೋ? ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ಅತಂತ್ರ ಸ್ಥಿತಿ ತಲೆದೋರಿದೆ. ಈ ಪರಿಸ್ಥಿತಿ ಸೃಷ್ಟಿಯಾಗಲು ಕಾರಣವಾದರೂ ಏನು?

2004ರಲ್ಲಿ ಅತಂತ್ರ ವಿಧಾನಸಭೆಯ ತೀರ್ಪು ನೀಡಿದ್ದ ಕರ್ನಾಟಕ ಮತದಾರರು, 2018ರ ಚುನಾವಣೆಯಲ್ಲೂ ಮತ್ತೆ ಅದೇ ತಪ್ಪನ್ನು ಮಾಡಿದಂತಿದೆ. ಆಗ ಅತಂತ್ರ ವಿಧಾನಸಭೆಯ ಪರಿಣಾಮ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಯಲಿಲ್ಲ. ಅವಧಿಗೆ ಮುನ್ನವೇ ಚುನಾವಣೆ ನಡೆದಿತ್ತು. 2008ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 110 ಸ್ಥಾನ ಪಡೆದು ನಂತರ ಆಪರೇಷನ್ ಕಮಲ ನಡೆಸಿ ಹಾಗೂ ಹೀಗೂ ಮೂವರು ಮುಖ್ಯಮಂತ್ರಿಗಳೊಂದಿಗೆ ಅವಧಿ ಪೂರ್ಣಗೊಳಿಸಿತ್ತು. 2013ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ನೀಡಿದ ಪರಿಣಾಮ, ಸಿದ್ದರಾಮಯ್ಯ ಒಬ್ಬರೇ ಐದು ವರ್ಷ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಪೂರೈಸಿದರು.

2018ರಲ್ಲಿ 2004ರಲ್ಲಿ ನೀಡಿದ ಲೋಪಸಹಿತ ತೀರ್ಪನ್ನೇ ಮತದಾರರು ನೀಡಿದ್ದಾರೆ. ಅಂದರೆ, ಯಾವ ಪಕ್ಷಕ್ಕೂ ಪೂರ್ಣ ಬಹುಮತ ನೀಡಿಲ್ಲ. ಯಾವ ಪಕ್ಷವೂ ಬೇರೆ ಪಕ್ಷದ ನೆರವಿಲ್ಲದೆ ಸರ್ಕಾರ ರಚಿಸುವ ಅವಕಾಶ ಇಲ್ಲದಂತಹ ಸಂಕೀರ್ಣ ಫಲಿತಾಂಶವನ್ನು ಮತದಾರರು ನೀಡಿದ್ದಾರೆ. ಇಂತಹ ಫಲಿತಾಂಶಕ್ಕೆ ಕಾರಣವಾದರೂ ಏನು? ಮತದಾರರ ಲೆಕ್ಕಾಚಾರಗಳೇ ತಪ್ಪಾಗಿಹೋದವೇ ಅಥವಾ ಒಂದೇ ಪಕ್ಷಕ್ಕೆ ಬಹುಮತ ನೀಡುವಂತೆ ಮತದಾರರನ್ನು ಒಲಿಸುವಲ್ಲಿ ರಾಜಕೀಯ ಪಕ್ಷಗಳೇ ವಿಫಲವಾದವೇ?

ಪ್ರತಿ ಚುನಾವಣೆಯಲ್ಲೂ ಆಡಳಿತ ಪಕ್ಷವನ್ನು ಅಧಿಕಾರದಿಂದ ದೂರ ಇಡುವ ಸತ್ಸಂಪ್ರದಾಯವನ್ನು ಕರ್ನಾಟಕದ ಮತದಾರರು ಬಹಳ ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ. ಆ ಲೆಕ್ಕಕ್ಕೆ ಹೋದರೆ ಕರ್ನಾಟಕ ಮತದಾರರು ನೀಡಿರುವ ತೀರ್ಪು ರಾಜಕಾರಣದ ಐತಿಹಾಸಿಕ ಸತ್ಸಂಪ್ರದಾಯಕ್ಕೆ ಪೂರಕವಾಗಿಯೇ ಇದೆ. ಆದರೆ, ಆಡಳಿತಾರೂಢ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟ ಮತದಾರರು, ತಮ್ಮನ್ನು ಮುಂದಿನ ಐದು ವರ್ಷಗಳಿಗೆ ಯಾರು ಆಳಬೇಕು ಎಂಬುದರ ಬಗ್ಗೆ ಸ್ಪಷ್ಟವಾದ ತೀರ್ಪನ್ನು ನೀಡಿಲ್ಲ. ಈ ಅಸ್ಪಷ್ಟ ತೀರ್ಪು ಹೊರಬರಲು ಕಾರಣವೇನು? ರಾಜಕೀಯ ಪಕ್ಷಗಳ ಲೆಕ್ಕಾಚಾರವೇ ತಲೆಕೆಳಗಾಯಿತೇ ಅಥವಾ ಮತದಾರರೇ ತಪ್ಪಾಗಿ ಲೆಕ್ಕಾಚಾರ ಹಾಕಿದರೇ?

ಇಡೀ ಚುನಾವಣೆಯಲ್ಲಿ ಪ್ರಧಾನವಾಗಿ ಚರ್ಚೆಗೆ ಬಂದದ್ದು ಮತ್ತು ಆಡಳಿತರೂಢ ಕಾಂಗ್ರೆಸ್ ಸರಾಕಾತ್ಮಕವಾಗಿ ಬಳಸಿಕೊಂಡಿದ್ದು ಕನ್ನಡದ ಅಸ್ಮಿತೆಯನ್ನು. ಕನ್ನಡ ಭಾಷೆ, ಕನ್ನಡತನದ ವಿಚಾರದ ಬಗ್ಗೆ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಸಹ ಪ್ರಧಾನವಾಗಿ ಪ್ರಸ್ತಾಪಿಸಿತ್ತು. ಆ ಪ್ರಸ್ತಾಪದ ಹಿಂದೆ ಪ್ರಾದೇಶಿಕ ಪಕ್ಷಗಳು ಮಾತ್ರವೇ ನಾಡಿನ ಅಸ್ಮಿತೆಯನ್ನು ಕಾಪಾಡಬಲ್ಲವು ಎಂಬ ಪರೋಕ್ಷ ವಾದವಿತ್ತು. ಈ ವಾದದಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕೆಂಬ ಪರೋಕ್ಷ ಒತ್ತಾಯವಿತ್ತು. ಕಾಂಗ್ರೆಸ್ ಪಕ್ಷವು ರಾಷ್ಟ್ರೀಯ ಪಕ್ಷವಾದರೂ, ಹಿಂದಿ ಭಾಷೆ ಹೇರಿಕೆ ವಿಚಾರದಲ್ಲಿ ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ತಳೆದ ನಿಲವುಗಳು ರಾಜ್ಯದ ಹಿತಾಸಕ್ತಿಗೆ ವ್ಯತಿರಿಕ್ತವಾಗಿದ್ದ ಕಾರಣ, ಅದನ್ನು ಕಾಂಗ್ರೆಸ್ ಸಕಾರಾತ್ಮಕವಾಗಿ ಬಳಸಿಕೊಂಡಿತು. ಸಿದ್ದರಾಮಯ್ಯನವರ ಭಾಷಣದಲ್ಲಿ ಪದೇಪದೇ ಕನ್ನಡದ ಅಸ್ಮಿತೆ ಇಣುಕುತ್ತಿತ್ತು. ಕನ್ನಡ ಅಸ್ಮಿತೆಯು ಭಾವನಾತ್ಮಕ ವಿಷಯ. ಆದರೆ, ನಾವು ಜಾಗತಿಕ ಪ್ರಜೆಗಳಾಗುವತ್ತ ದಾಪುಗಾಲು ಹಾಕುತ್ತಿರುವ ಹೊತ್ತಿನಲ್ಲಿ ಕನ್ನಡ ಅಸ್ಮಿತೆ ಚುನಾವಣಾ ವಿಷಯವಾಗುವಲ್ಲಿ ವಿಫಲವಾಯಿತು ಅಥವಾ ಕನ್ನಡ ಅಸ್ಮಿತೆ ಪ್ರತಿಪಾದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಲಿಲ್ಲ. ಅದು ಫಲಿತಾಂಶದಲ್ಲಿ ಸ್ಪಷ್ಟವಾಗಿ ಪ್ರತಿಫಲಿತವಾಗಿದೆ.

ಸಿದ್ದರಾಮಯ್ಯ ಅವರಿಗೆ ರಾಜಕೀಯವಾಗಿ ಮರುಹುಟ್ಟು ನೀಡಿದ್ದೇ ಅಹಿಂದ ಸಿದ್ಧಾಂತ. 2013ರಲ್ಲಿ ಅಹಿಂದ ಸಿದ್ದಾಂತವನ್ನು ಮತಗಳಾಗಿ ಪರಿವರ್ತಿಸಿಕೊಂಡಿದ್ದ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಈ ಚುನಾವಣೆಯಲ್ಲಿ ಅಹಿಂದದ ಪೂರ್ಣ ಸಾಂದ್ರತೆಯನ್ನು ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಹಿಂದವನ್ನು ಲಿಂಗಾಯಿತ, ಒಕ್ಕಲಿಗ, ಕುರಬ ಮತ್ತಿತರ ಜಾತಿಯಂತೆ ಪರಿಭಾವಿಸಿಬಿಟ್ಟಿತ್ತು. ಅಹಿಂದ ಒಂದು ಜಾತಿಯಲ್ಲ, ಅದೊಂದು ವರ್ಗ ಎಂಬುದನ್ನು ಅರಿಯಲಿಲ್ಲ. ಅಲ್ಲದೆ, ಸಿದ್ದರಾಮಯ್ಯ ಅಹಿಂದ ನಾಯಕರಾಗಿರುವುದರಿಂದ ಅಹಿಂದ ಮತಗಳನ್ನು ಹೊತ್ತು ತರುವ ಹೊಣೆಯನ್ನು ಕಾಂಗ್ರೆಸ್ ಸಿದ್ದರಾಮಯ್ಯ ಹೆಗಲಿಗೆ ಹೊರಿಸಿಬಿಟ್ಟಿತು. ಇಡೀ ರಾಜ್ಯದ ಚುನಾವಣಾ ಪ್ರಚಾರದ ಜೊತೆಗೆ ಎರಡು ಕ್ಷೇತ್ರಗಳಲ್ಲಿ ಗೆಲ್ಲಬೇಕಿರುವ ಸವಾಲು ಮುಂದಿಟ್ಟುಕೊಂಡಿದ್ದ ಸಿದ್ದರಾಮಯ್ಯ ಅವರಿಗೆ ಅಹಿಂದ ವರ್ಗವನ್ನು ಕಳೆದ ಚುನಾವಣೆಯಲ್ಲಿ ಮುಟ್ಟಿದಷ್ಟು ಈ ಚುನಾವಣೆಯಲ್ಲಿ ಮುಟ್ಟಲಾಗಲಿಲ್ಲ. ಅದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು.

ಉತ್ತರ ಪ್ರದೇಶ ಚುನಾವಣೆಯಲ್ಲಿನ ಅಭೂತಪೂರ್ವ ಜಯಭೇರಿಯ ಗುಂಗಿನಿಂದ ಬಿಜೆಪಿ ಹೊರಬಂದಿಲ್ಲ ಎಂಬುದುು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ರಾಜ್ಯಮಟ್ಟದ ನಾಯಕರಲ್ಲಿದ್ದ ಭಿನ್ನಾಭಿಪ್ರಾಯವನ್ನು ನಿವಾರಿಸಿಕೊಂಡು ಸಂಘಟಿತ ಪ್ರಚಾರ ಮಾಡುವಲ್ಲಿ ಬಿಜೆಪಿ ನಾಯಕರು ವಿಫಲವಾದರು. ಹೇಗಿದ್ದರೂ ಮೋದಿ ಬರುತ್ತಾರೆ, ಬಂದು ಮ್ಯಾಜಿಕ್ ಮಾಡಿ ಗೆಲ್ಲಿಸುತ್ತಾರೆಂಬ ಅತಿಯಾದ ವಿಶ್ವಾಸ ಬಿಜೆಪಿಗೆ ಮುಳುವಾದಂತಿದೆ. ನಿಜ, ಮೋದಿ ಮಿಂಚಿನಂತೆ ಬಂದು ಬಿರುಗಾಳಿಯಂತೆ ಪ್ರಚಾರ ಮಾಡಿಹೋದರು. ಆದರೆ, ಕರ್ನಾಟಕವೇನು ಉತ್ತರ ಪ್ರದೇಶವೇ ಅಥವಾ ಗುಜರಾತೇ? ಕರ್ನಾಟಕದ ಜನತೆ ಇಂತಹ ಮಿಂಚಿನ ಸಂಚಾರ, ಬಿರುಗಾಳಿ ಪ್ರಚಾರಕ್ಕೆ ಜಗ್ಗುವವರಲ್ಲ. ಅದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. 2014ರ ಮೋದಿ ಅಲೆಯಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ 9 ಮತ್ತು ಜೆಡಿಎಸ್ ಪಕ್ಷ ಕ್ಕೆ 2 ಸ್ಥಾನವನ್ನು ಕರ್ನಾಟಕದ ಜನತೆ ಗೆಲ್ಲಿಸಿದ್ದಾರೆ. ಅದನ್ನು ಅರಿಯುವಲ್ಲಿ ಬಿಜೆಪಿ ನಾಯಕರು ವಿಫಲರಾದರು. ಮೋದಿ ಸಹ ಉತ್ತರ ಪ್ರದೇಶದಲ್ಲಿ ಭಾಷಣ ಮಾಡುವ ರೀತಿಯಲ್ಲೇ ಕರ್ನಾಟಕದಲ್ಲೂ ಭಾಷಣ ಮಾಡಿದರು.

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಪ್ರಧಾನಿ ಮೋದಿಗಿಂತ ರಾಜ್ಯದ ಜನರಿಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದೂ ಪ್ರಧಾನಿ ನರೇಂದ್ರ ಮೋದಿ ಸಿದ್ದು ಸರ್ಕಾರದ ವಿರುದ್ಧ ಮಾಡಿದ ಆರೋಪಗಳು, ಜೆಡಿಎಸ್ ಕುರಿತಂತೆ ತಳೆದ ದ್ವಂದ್ವ ನಿಲವುಗಳು ಬಿಜೆಪಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದವು. ಕನ್ನಡದಲ್ಲಿ ಮಾತನಾಡುವ ಭರದಲ್ಲಿ ತಪ್ಪು ತಪ್ಪು ಕನ್ನಡ ಮಾತನಾಡಿದ್ದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದನ್ನು ಬಿಜೆಪಿ ನಾಯಕರು ಪರಿಗಣಿಸಲೇ ಇಲ್ಲ. ‘ಹತ್ತು ಪರ್ಸೆಂಟ್ ಸರ್ಕಾರ’ ಮತ್ತು ‘ಸೀದಾ ರುಪಯ್ಯಾ’ ಎಂಬ ನರೇಂದ್ರ ಮೋದಿ ಅವರ ಪ್ರಾಸ ರೂಪದ ಆರೋಪಗಳು ಬಿಜೆಪಿ ಕಾರ್ಯಕರ್ತರ ಕಿವಿಗೆ ಇಂಪಾಗಿರಬಹುದು; ಆದರೆ, ಜನಸಾಮಾನ್ಯ ಮತದಾರರಿಗೆ ಅದು ಖಂಡಿತವಾಗಿಯೂ ಕರ್ಕಶವಾಗಿಯೇ ಕೇಳಿಸಿದೆ.

ದಲಿತ ಮತಗಳು ಕಾಂಗ್ರೆಸ್ ಪಕ್ಷದ ಜಹಗೀರು ಎಂಬ ಊಳಿಗಮಾನ್ಯ ಧೋರಣೆ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಉಳಿದಿದೆ. ಆ ಕಾರಣಕ್ಕಾಗಿ ದಲಿತ ವರ್ಗದವರನ್ನು ಅರ್ಥಪೂರ್ಣವಾಗಿ ಮತ್ತು ಕ್ರಿಯಾಶೀಲವಾಗಿ ಅಭಿವೃದ್ಧಿಗೆ ಅಭಿಮುಖವಾಗಿ ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕಿದ್ದ ಕಾಂಗ್ರೆಸ್ ವಿಫಲವಾಯಿತು. ದಲಿತ ವರ್ಗ ಆರ್ಥಿಕವಾಗಿ ಹಿಂದುಳಿದಿರಬಹುದು; ಅದರೆ, ಅವರಲ್ಲಿನ ರಾಜಕೀಯ ಪ್ರಜ್ಞೆ ಹಿಂದಿನಂತಿಲ್ಲ. ಅಪ್ಪ ಹಾಕಿದ ಆಲದ ಮರಕ್ಕೆ ನೇಣುಹಾಕಿಕೊಳ್ಳುವ ಮನೋಭಾವದಿಂದ ಹೊರಬಂದಿದ್ದಾರೆ. ಅವರಿಗೂ ರಾಜ್ಯ ರಾಜಕೀಯದಲ್ಲಿನ ಆಗುಹೋಗುಗಳ ಬಗೆಗೆ ಆಸಕ್ತಿ ಇದೆ ಮತ್ತು ಆಗುಹೋಗುಗಳಲ್ಲಿ ತಮಗೂ ಪಾಲು ಇರಬೇಕೆಂಬ ಅರಿವು ಬಂದಿದೆ. ಹೀಗಿದ್ದಾಗ, ಅವರನ್ನು ಒಲೈಸುವ ವ್ಯರ್ಥ ಪ್ರಯತ್ನ ಮಾಡುವ ಬದಲು ತಮ್ಮ ಸಕಾರಾತ್ಮಕ ಕಾರ್ಯಕ್ರಮಗಳ ಮೂಲಕ ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕಿತ್ತು. ಅದರಲ್ಲಿ ಕಾಂಗ್ರೆಸ್ ವಿಫಲವಾಯ್ತು. ಉಳಿದೆರಡು ಪಕ್ಷಗಳೂ ಮತ್ತದೇ ಹಣ, ಹೆಂಡದ ಮೂಲಕ ಓಲೈಸುವ ವ್ಯರ್ಥ ಪ್ರಯತ್ನ ಮಾಡಿದವು.

ಬಿಜೆಪಿ ಬಗೆಗಿನ ಅಸಮಾಧಾನದಿಂದಾಗಿ ಮುಸ್ಲಿಂ ಸಮುದಾಯ ತಮಗೆ ಮತ ಹಾಕುತ್ತದೆಂಬ ಹಳೆಯ ನಂಬಿಕೆಯಿಂದ ಕಾಂಗ್ರೆಸ್ ಹೊರಬಂದಂತಿಲ್ಲ. ಹೀಗಾಗಿ, ಮುಸ್ಲಿಂ ಸಮುದಾಯದ ಮತದಾರರನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಸಕಾರಾತ್ಮಕ ಯೋಜನೆಗಳು, ಯೋಚನೆಗಳನ್ನೇ ಮಾಡುತ್ತಿಲ್ಲ. ದಲಿತ ವರ್ಗದಂತೆ ಮುಸ್ಲಿಂ ಸಮುದಾಯದಲ್ಲೂ ರಾಜಕೀಯ ಪ್ರಜ್ಞೆ ಹೆಚ್ಚುತ್ತಿದೆ. ಮದರಸಾ ಅಥವಾ ಶಾದಿ ಮಹಲ್‌ ಕಟ್ಟಿಕೊಡುವುದನ್ನೂ ಮೀರಿದ ಹೆಚ್ಚು ರಚನಾತ್ಮಕ ಯೋಜನೆಗಳನ್ನು ಆ ಸಮುದಾಯ ನಿರೀಕ್ಷಿಸುತ್ತಿದೆ ಎಂಬುದನ್ನು ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷಗಳೂ ಅರಿತಿಲ್ಲ. ಹೀಗಾಗಿ ಮುಸ್ಲಿಂ ಮತಗಳು ಹಂಚಿಕೆಯಾಗಿವೆ. ಬಹುತೇಕ ಮತಹಂಚಿಕೆಗಳು ನಕಾರಾತ್ಮಕವಾಗಿ ಆಗಿವೆ. ಬಿಜೆಪಿಗೆ ಬೇಡ ಎಂಬ ಕಾರಣಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಚಲಾಯಿಸಿದ ಮತಗಳಾದರೆ ಅವು ನಕಾರಾತ್ಮಕ ಮತಗಳೇ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ಹೊತ್ತು ಇಳಿಯುತ್ತಿದ್ದಂತೆ ಕಮರಿದ ಬಿಜೆಪಿಯ ಬೆಳಗಿನ ಸಂಭ್ರಮ

ಅನ್ನಭಾಗ್ಯ ಸೇರಿದಂತೆ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ ಹಲವು ಯೋಜನೆಗಳು ಹೆಚ್ಚು ರಚನಾತ್ಮಕವಾಗಿದ್ದವು. ಅವು ಮತಗಳಿಕೆಯ ದೂರದೃಷ್ಟಿ ಇಲ್ಲದ ಸಮಾಜಮುಖಿ ಯೋಜನೆಗಳಾಗಿದ್ದವು. ಆ ಯೋಜನೆಗಳ ಮತಲಾಭ ಕಾಂಗ್ರೆಸ್ ಪಕ್ಷಕ್ಕೆ ಆದಂತಿಲ್ಲ. ಅದಕ್ಕೆ ಕಾರಣವೇನು? ಚುನಾವಣೆ ಘೋಷಣೆ ಆದ ಮೇಲೆ ಕೆಳವರ್ಗದ ಮತದಾರರಿಗೆ ಈ ಯೋಜನೆಗಳ ಮಹತ್ವವನ್ನು ಅರಿವು ಮಾಡಿಕೊಡುವಲ್ಲಿ ಮತ್ತು ಈ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯನವರಿಗೆ ಮತ ಹಾಕುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಫಲರಾಗಿದ್ದಾರೆ. ಮನೆಮನೆಗೆ ತೆರಳಿ ಪ್ರಚಾರ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿಯಿಂದ ಕಲಿಯಬೇಕಿದೆ. ಬಿಜೆಪಿಗೆ ಮತ ನೀಡಿ ಎಂದು ಕೇಳಲು ಆ ಪಕ್ಷಕ್ಕೆ ಅನ್ನಭಾಗ್ಯದಂತಹ ಯಾವ ಯೋಜನೆಯೂ ಇರಲಿಲ್ಲ. ಮೋದಿ ಘೋಷಿಸಿದ ಮೇಕ್ ಇನ್ ಇಂಡಿಯಾ, ಮೇಡ್‌ ಇನ್ ಇಂಡಿಯಾ, ಸ್ವಚ್ಛ ಭಾರತ್ ಇತ್ಯಾದಿ ಬಿಟ್ಟರೆ, ನೇರವಾಗಿ ಮತದಾರರಿಗೆ ನೆರವಾಗುವಂತಹ ಯಾವ ಯೋಜನೆಗಳೂ ಬಿಜೆಪಿ ಮುಂದಿರಲಿಲ್ಲ. ಆದರೂ ಬಿಜೆಪಿ ಕಾರ್ಯಕರ್ತರು ವ್ಯವಸ್ಥಿತ ರೀತಿಯಲ್ಲಿ ಪ್ರಚಾರ ಮಾಡುವುದು ಆ ಪಕ್ಷದ ಪಾಲಿಗೆ ಪ್ಲಸ್ ಪಾಯಿಂಟ್. ಒಂದು ವೇಳೆ, ಮನೆಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಸಿದ್ದರಾಮಯ್ಯ ಸರ್ಕಾರ ರೂಪಿಸಿದ್ದ ಜನಪರ ಯೋಜನೆಗಳ ಪ್ರಚಾರ ಮಾಡಿದ್ದರೆ ಫಲಿತಾಂಶ ಬೇರೆಯೇ ಆಗಿರುವ ಸಾಧ್ಯತೆ ಇತ್ತು.

ಪ್ರತಿ ಚುನಾವಣೆಗಳೂ ರಾಜಕೀಯ ಪಕ್ಷಗಳಿಗೆ ರಾಜಕೀಯ ನಾಯಕರಿಗೆ ಒಂದೊಂದು ಪಾಠ. ಸೋಲು ಗೆಲುವುಗಳಿಂದ ರಾಜಕಾರಣಿಗಳು ಪಾಠ ಕಲಿಯುತ್ತಾರೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಜವಾದ ಜಯ ದಕ್ಕುವುದು ಮತದಾರರಿಗೆ. ಆದರೆ, ಯಾವ ಪಕ್ಷಕ್ಕೂ ಬಹುಮತ ದಕ್ಕದ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗುವುದೆಂದರೆ ಪರೋಕ್ಷವಾಗಿ ಮತದಾರನಿಗೆ ಸೋಲಾದಂತೆಯೇ!

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More