ಅಹಿಂದ ರಾಜಕಾರಣ ಎಂಬ ಅವಾಸ್ತವ ಪರಿಕಲ್ಪನೆಯೇ ಸಿದ್ದರಾಮಯ್ಯಗೆ ಮುಳುವಾಯಿತೇ?

೨೦೧೩ರ ಚುನಾವಣೆಯಲ್ಲಿ ಅಹಿಂದ ರಾಜಕಾರಣದ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದ ಸಿದ್ದರಾಮಯ್ಯ, ೨೦೧೮ರ ಚುನಾವಣೆಯಲ್ಲಿ ಅಹಿಂದ ವರ್ಗಗಳ ಮೇಲೆ ಹಿಡಿತ ಕಳೆದುಕೊಂಡರೇ? ಅಷ್ಟಕ್ಕೂ ಅಹಿಂದ ವರ್ಗದ ರಾಜಕಾರಣವೆಂಬುದು ವಾಸ್ತವದ ಚುನಾವಣಾ ರಾಜಕಾರಣಕ್ಕೆ ಒದಗಿಬರದ ಪರಿಕಲ್ಪನೆಯಾಯಿತೇ?

ಸಿದ್ದರಾಮಯ್ಯನವರು ಮಂಗಳವಾರ ಮಾಧ್ಯಮಗಳ ಮುಂದೆ ಕೈಕಟ್ಟಿ ನಿಂತು ಕಾಂಗ್ರೆಸ್ ಪಕ್ಷವು‌ ಜೆಡಿಎಸ್‌ಗೆ ಬೆಂಬಲ ನೀಡಲಿದೆ ಎಂದು ಹೇಳುತ್ತಿದ್ದಾಗ ಅವರ ‘ಅಹಿಂದ’ ರಾಜಕಾರಣದ ಬಗ್ಗೆ ವಿಶೇಷ ಆಕ್ರೋಶವಿಟ್ಟುಕೊಂಡಿದ್ದ ವರ್ಗಗಳ ಅಹಂ ಸಹಜವಾಗಿಯೇ ತೃಪ್ತಗೊಂಡಂತೆ ಭಾಸವಾಗುತ್ತಿತ್ತು. ಇದು ಹೀಗೇಕೆಂದು ಕಾರಣವನ್ನು ಹುಡುಕುತ್ತ ಹೊರಟರೆ, ರಾಜ್ಯ ರಾಜಕಾರಣದಲ್ಲಿ ೨೦೦೪ರ ಚುನಾವಣೆಯ ನಂತರ ನಡೆದ ರಾಜಕೀಯ ಪಲ್ಲಟಗಳು ಗಮನ ಸೆಳೆಯುತ್ತವೆ. ಈ ಸಂದರ್ಭದಲ್ಲಿ ಮುನ್ನಲೆಗೆ ಬಂದ ಅಹಿಂದ ರಾಜಕಾರಣದ ಚರ್ಚೆ ಕಾಣಿಸತೊಡಗುತ್ತದೆ. ಸಿದ್ದರಾಮಯ್ಯನವರು ಜೆಡಿಎಸ್‌ ಅನ್ನು ತೊರೆದು ಹೊರಬಂದ ನಂತರ ಅವರನ್ನು ಮುಂದಿರಿಸಿಕೊಂಡು ಅಹಿಂದ ವರ್ಗಗಳನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸುವ ಪ್ರಯತ್ನ ನಡೆಯಿತು. ಅವರು ಈ ವರ್ಗಗಳಲ್ಲಿ ಹೊಂದಿದ್ದ ಜನಪ್ರಿಯತೆ ಮುಂದೆ ಅವರು ಕಾಂಗ್ರೆಸ್‌ನೊಂದಿಗೆ ವ್ಯವಹರಿಸುವಲ್ಲಿ ಪ್ರಮುಖವಾಯಿತು. ಇದುವೇ ಅವರು ಆನಂತರ ಕಾಂಗ್ರೆಸ್‌ ಸೇರಿ ಪ್ರತಿಪಕ್ಷ ನಾಯಕರಾಗಿ ಪಕ್ಷ ಸಂಘಟನೆಗೆ ಕೊಡುಗೆಯನ್ನು ನೀಡಲು ಕಾರಣವಾಯಿತು.

೨೦೧೩ರಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಬಲ ಸಮುದಾಯಗಳಲ್ಲಿ ಒಂದು ಬಗೆಯ ಆತಂಕ ಹಾಗೂ ಅಸಮಾಧಾನಗಳು ವ್ಯಕ್ತವಾಗತೊಡಗಿದವು. ಪ್ರಬಲ ವರ್ಗಗಳು ಹಾಗೂ ಹಿಂದುಳಿದ, ದಲಿತವರ್ಗಗಳ ನಡುವೆ ಸೀಳಿಕೊಂಡಿರುವಂತಹ ಆಡಳಿತಶಾಹಿಯಲ್ಲೂ ಇದು ಢಾಳಾಗಿ ಗೋಚರಿಸ ತೊಡಗಿತು. ಅಹಿಂದ ಹಿನ್ನೆಲೆಯಿಂದ ಬಂದಿರುವ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಪ್ರಬಲ ಸಮುದಾಯಗಳಿಗೆ ಮನ್ನಣೆ ಸಿಗುವುದಿಲ್ಲ ಎನ್ನುವ ಅಭಿಪ್ರಾಯವನ್ನು ವ್ಯವಸ್ಥಿತವಾಗಿ ಬಿತ್ತುವ, ಪ್ರಚುರಪಡಿಸುವ ಕೆಲಸಗಳು ವ್ಯಾಪಕವಾಗಿ ನಡೆದವು. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಮಾಡಿದ ಬದಲಾವಣೆಗಳನ್ನು ಪ್ರಬಲ ಸಮುದಾಯಗಳ ವಿರೋಧಿ ನಿಲುವು ಎಂದು ವ್ಯಾಖ್ಯಾನಿಸುವುದು ಸಾಮಾನ್ಯವಾಯಿತು. ಸಿದ್ದರಾಮಯ್ಯನವರ ಸುತ್ತ ನೆರೆದಿದ್ದ ಅಧಿಕಾರಶಾಹಿ ಹಾಗೂ ಆಪ್ತವರ್ಗಗಳಲ್ಲಿ ಯಾವ ಸಮುದಾಯದವರು ಹೆಚ್ಚಾಗಿದ್ದಾರೆ ಎನ್ನುವುದನ್ನು ಹುಡುಕಿನೋಡುವುದು ಹೆಚ್ಚಾಗತೊಡಗಿತು. ವಿಪರ್ಯಾಸವೆಂದರೆ, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಯಾವ ರೀತಿಯ ಪರಿಸ್ಥಿತಿ ಇತ್ತು ಎನ್ನುವುದನ್ನು ಯಾರೂ ವಿವರಿಸಲು ಹೋಗಲಿಲ್ಲ!

ಯಾವ ಅಹಿಂದ ವರ್ಗಗಳ ಅಲೆಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಗಾದಿಗೇರಿದ್ದರೋ ಅದೇ ಅಹಿಂದ ವರ್ಗದ ಮೇಲಿನ ಹಿಡಿತವನ್ನು ಅವರು ಮುಂದಿನ ದಿನಗಳಲ್ಲಿ ಉಳಿಸಿಕೊಳ್ಳುವಲ್ಲಿ ಸಫಲರಾದಂತೆ ಕಾಣಲಿಲ್ಲ. ಕುರುಬ ಸಮುದಾಯ ಅವರ ಹಿಂದೆ ಬಲವಾಗಿ ನಿಂತಂತೆ ಇತರೆ ಹಿಂದುಳಿದ ವರ್ಗಗಳು ಗಟ್ಟಿಯಾಗಿ ನಿಲ್ಲಲಿಲ್ಲ. ಸಿದ್ದರಾಮಯ್ಯನವರ ಕಾರಣಕ್ಕೆ ಅಹಿಂದ ವರ್ಗಗಳು ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಮೀರಿ ಅವರನ್ನು ಬೆಂಬಲಿಸಬಹುದು ಎನ್ನುವ ಊಹೆ ಚುನಾವಣಾ ಫಲಿತಾಂಶವನ್ನು ಗಮನಿಸಿದರೆ ತಪ್ಪಾಗಿರುವಂತೆ ಕಾಣುತ್ತಿದೆ. ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳಾಗಿದ್ದು ಗಣನೀಯ ಪ್ರಮಾಣದಲ್ಲಿ ಅದನ್ನು ಕಾಂಗ್ರೆಸ್ ತನ್ನತ್ತ ‌ ಆಕರ್ಷಿಸಬಹುದು, ಇದಕ್ಕೆ ಸಿದ್ದರಾಮಯ್ಯನವರ ಅಹಿಂದ ವರ್ಚಸ್ಸು ಪೂರಕವಾಗಬಹುದು ಎನ್ನುವ ಭಾವನೆಯೂ ಪೂರ್ಣ ಸತ್ಯವಾಗಿ ಹೊರಹೊಮ್ಮಿದಂತೆ ತೋರುತ್ತಿಲ್ಲ. ಜೆಡಿಎಸ್‌ ಸಹ ಅಲ್ಪಸಂಖ್ಯಾತ ಮತಗಳನ್ನು ತಕ್ಕಮಟ್ಟಿಗೆ ಗಳಿಸಿದಂತೆ ಕಾಣುತ್ತಿದೆ. ದಲಿತ ಸಮುದಾಯಗಳ ವಿಚಾರದಲ್ಲಿಯೂ ಕಾಂಗ್ರೆಸ್‌ನ ಲೆಕ್ಕಾಚಾರ ತಿರುವು ಮುರುವಾಗಿರುವಂತೆ ಗೋಚರಿಸುತ್ತಿದೆ. ಒಳಮೀಸಲಾತಿ ವಿಚಾರ ಕಾಂಗ್ರೆಸ್‌ ಕೈ ಹಿಡಿದಂತೆ ಕಾಣುತ್ತಿಲ್ಲ. ಫಲಿತಾಂಶವನ್ನು ಗಮನಿಸಿದರೆ, ಎಡಗೈ ಸಮುದಾಯ ಕಾಂಗ್ರೆಸ್‌ನಿಂದ ತಕ್ಕಮಟ್ಟಿಗೆ ಅಂತರ ಕಾಯ್ದುಕೊಂಡಿರಬಹುದಾದ ಸಾಧ್ಯತೆ ಇದೆ.

ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶ, ಜಾತಿಗಳನ್ನು ಓಲೈಸುವ ರೀತಿಯಲ್ಲಿ ಅಹಿಂದ ವರ್ಗವನ್ನು ಓಲೈಸುವುದು ಕಷ್ಟಸಾಧ್ಯ ಎನ್ನುವುದು. ಅಹಿಂದ ವರ್ಗ ಎನ್ನುವುದು ಪ್ರಬಲ ಜಾತಿಗಳಿಗೆ ಪ್ರತಿಯಾಗಿ ರೂಪಿಸಿದ ಉತ್ತಮ ಆಶಯಗಳ ಒಂದು ರಾಜಕೀಯ ಪರಿಕಲ್ಪನೆಯೇ ಹೊರತು ಸಾಮುದಾಯಿಕ ಸಂಘಟನೆಯಲ್ಲ. ಈ ವರ್ಗದಡಿ ಬರುವ ಪ್ರತಿಯೊಂದು ಜಾತಿ, ಸಮುದಾಯಗಳ ಆಶಯವೂ ವಿಭಿನ್ನವಾಗಿದ್ದು ತಮ್ಮ ಸಮುದಾಯಗಳನ್ನು ಯಾವ ಪಕ್ಷಗಳು ಹೆಚ್ಚು ಓಲೈಸುತ್ತವೋ, ಸಮುದಾಯದ ಹಿತಾಸಕ್ತಿಯನ್ನು ಕಾಪಾಡಲು ಉತ್ಸಾಹ ತೋರುತ್ತವೋ ಅಂತಹ ಪಕ್ಷಗಳತ್ತ ಅವು ಸುಲಭವಾಗಿ ವಾಲುತ್ತವೆ. ಇದೇ ಕಾರಣಕ್ಕೇ, ಪ್ರಬಲ ಜಾತಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಪಕ್ಷದ ಪರವಾದ ಒಲವನ್ನು ಅಹಿಂದ ವರ್ಗಗಳಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇದೇ ವೇಳೆ, ಸ್ಥಳೀಯವಾಗಿ ಅಹಿಂದ ವರ್ಗಗಳಲ್ಲಿಯೇ ಸಾಕಷ್ಟು ವಿಭಿನ್ನ ರೀತಿಯ ಜಾತಿ ಸಮೀಕರಣಗಳಿರುತ್ತವೆ. ಈ ಸಮುದಾಯಗಳ ನಡುವೆಯೇ ವಿವಿಧ ಕಾರಣಗಳಿಗೆ ಅಸಮಾಧಾನಗಳಿರುತ್ತವೆ. ಇದೆಲ್ಲವನ್ನೂ ಮೀರಿ ಈ ಸಮುದಾಯಗಳು ಅಹಿಂದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಮತ ಚಲಾಯಿಸುವಂತೆ ಮಾಡುವುದು ತ್ರಾಸದ ಕೆಲಸ. ಪ್ರಸ್ತುತ ಫಲಿತಾಂಶವನ್ನು ಗಮನಿಸಿದರೆ ಬಹುಶಃ ಕಾಂಗ್ರೆಸ್‌ ಹಾಗೂ ಸಿದ್ದರಾಮಯ್ಯನವರು‌ ಅಹಿಂದ ಪರಿಕಲ್ಪನೆಯ ವಿಚಾರದಲ್ಲಿ ವಾಸ್ತವದಿಂದ ಹೆಚ್ಚು ದೂರ ಸಾಗಿ ಯೋಚಿಸಿದಂತೆ ಭಾಸವಾಗುತ್ತದೆ.

ಇದನ್ನೂ ಓದಿ : ಕರ್ನಾಟಕ ಚುನಾವಣಾ ಫಲಿತಾಂಶ | ಬಾದಾಮಿಯಲ್ಲಿ ಸಿದ್ದರಾಮಯ್ಯ ಗೆಲುವು

ಸಿದ್ದರಾಮಯ್ಯನವರು ಅಹಿಂದ ವರ್ಗಗಳ ವಿಚಾರದಲ್ಲಿ ಇಟ್ಟುಕೊಂಡಿದ್ದ ಭರವಸೆ ಏನಿತ್ತು ಅದು ಕೈಜಾರಿದೆ. ಅಹಿಂದ ವರ್ಗಗಳ ವಿಚಾರದಲ್ಲಿ ಯಾವುದೇ ಒಬ್ಬ ನಾಯಕನನ್ನು ಇಡೀ ವರ್ಗದ ನಾಯಕ ಎಂದು ಗುರುತಿಸುವ, ಬಿಂಬಿಸುವ ಅಪಾಯವನ್ನು ಈ ಫಲಿತಾಂಶ ಹೇಳುತ್ತಿರುವಂತಿದೆ. ಮುಂದಿನ ದಿನಗಳಲ್ಲಿ ಇದು ದೊಡ್ಡ ರಾಜಕೀಯ ಬದಲಾವಣೆಗಳಿಗೂ ಕಾರಣವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸ್‌ ಅಹಿಂದ ಸಮುದಾಯದಡಿ ಬರುವ ವಿವಿಧ ಜಾತಿಗಳ ನಾಯಕರನ್ನು ಗುರುತಿಸಿ ಗಮನಾರ್ಹವಾಗಿ ಬೆಳೆಸುವ ಪ್ರಯತ್ನವನ್ನು ಮಾಡುವ ಮೂಲಕ ಆಯಾ ಸಮುದಾಯಗಳ ವಿಶ್ವಾಸವನ್ನು ಗಳಿಸುವ ಪ್ರಯತ್ನಕ್ಕೆ ಮುಂದಾಗಬಹುದು.

ಸದ್ಯದ ಪರಿಸ್ಥಿತಿಯನ್ನು ಅವಲೋಕಿಸಿದರೆ, ಹಿಂದುಳಿದ ಸಮುದಾಯಗಳಿಗೆ ದನಿ ನೀಡಿದ ದೇವರಾಜ ಅರಸು ಅವರು ತಮ್ಮ ರಾಜಕೀಯ ಜೀವನದ ಅಂತ್ಯದಲ್ಲಿ ಅನುಭವಿಸಿದ ತಳಮಳಗಳೇನಿವೆ, ಅವರನ್ನು ರಾಜಕೀಯ ಅಜ್ಞಾತವಾಸದೆಡೆಗೆ ದೂಡಿದ ಸಂಗತಿಗಳೇನಿವೆ ಅದೆಲ್ಲದರ ಗಾಢ ಕರಿನೆರಳು ಸಿದ್ದರಾಮಯ್ಯನವರ ಮೇಲೂ ಆವರಿಸಿದಂತೆ ಕಾಣುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More