ವಿಡಿಯೋ ಸ್ಟೋರಿ | ಹೊತ್ತು ಇಳಿಯುತ್ತಿದ್ದಂತೆ ಕಮರಿದ ಬಿಜೆಪಿಯ ಬೆಳಗಿನ ಸಂಭ್ರಮ

ಸರಳ ಬಹುಮತದತ್ತ ಸಾಗುತ್ತಿದ್ದೇವೆ ಎಂಬ ಅಚಲ ವಿಶ್ವಾಸದಲ್ಲಿ ಮೇರೆ ಮೀರಿದ್ದ ಬಿಜೆಪಿ ಕಾರ್ಯಕರ್ತರ ಸಂಭ್ರಮ ಸಮಯ ಜಾರುತ್ತಿದ್ದಂತೆ ಕರಗಿಹೋಯಿತು. ಪಕ್ಷ ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಅಧಿಕಾರಕ್ಕೇರುತ್ತದೆ ಎಂಬ ಭ್ರಮೆಯಲ್ಲಿದ್ದ ಬಿಜೆಪಿ ಕಾರ್ಯಕರ್ತರ ಸಂಭ್ರಮ ಇದ್ದಕ್ಕಿದ್ದಂತೆ ತಣ್ಣಗಾಯಿತು 

ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶವು ಮಧ್ಯಾಹ್ನದ ಹೊತ್ತಿಗೆ ವಿಚಿತ್ರ ತಿರುವು ಪಡೆದುಕೊಂಡು ಅತಂತ್ರ ವಿಧಾನಸಭೆ ನಿರ್ಮಾಣವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಲ್ಲಿ ಉಂಟಾಗಿದ್ದ ಸಡಗರ, ಸಂಭ್ರಮಕ್ಕೂ ತೊಡಕಾಯಿತು. ಮಧ್ಯಾಹ್ನದವರೆಗೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಜೈಕಾರ ಹಾಕುವ ಕಾಯಕದಲ್ಲೇ ಮುಳುಗಿಹೋಗಿದ್ದ ಬಿಜೆಪಿ ಕಾರ್ಯಕರ್ತರು, ಪಕ್ಷಕ್ಕೆ ಪೂರ್ಣ ಬಹುಮತ ಸಿಗಲಿಲ್ಲ ಎಂಬ ಸತ್ಯ ವೇದ್ಯವಾದಾಗ ಚಡಪಡಿಸತೊಡಗಿದರು.

ಏತನ್ಮಧ್ಯೆ, ಕಚೇರಿಯ ಕೊಠಡಿಯೊಳಗೆ ಕುಳಿತಿದ್ದ ಮಾಜಿ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಮೊಗದಲ್ಲಿಯೂ ಕರಿಮೋಡ ಕಾಣಿಸಿಕೊಂಡಿತು. ''ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಯಡಿಯೂರಪ್ಪ ಅವರ ಜನಪರ ಆಡಳಿತಕ್ಕೆ ಜನ ಮತ್ತೊಮ್ಮೆ ಮನ್ನಣೆ ನೀಡಿದ್ದಾರೆ. ರಾಜ್ಯದ ಜನತೆಯ ಈ ನಿರ್ಧಾರ ಖುಷಿ ತಂದಿದೆ,'' ಎಂದು ಕಚೇರಿಯೊಳಗೆ ಪ್ರವೇಶಿಸುವ ಮುನ್ನ ಸುದ್ದಿಗಾರರ ಜೊತೆಗೆ ಹರ್ಷ ಹಂಚಿಕೊಂಡಿದ್ದ ಶೋಭಾ ಕರಂದ್ಲಾಜೆ, ನಂತರ ಇದ್ದಕ್ಕಿದ್ದಂತೆ ದುಗುಡಕ್ಕೆ ಒಳಗಾದರು.

ಕೈಗೆ ಬಂದ ತುತ್ತು ತಪ್ಪಿದ ಬೇಗುದಿ

ಇತ್ತ, ರಾಜ್ಯದ ಜನತೆಯನ್ನು ಕೋಮುವಾದಿ ಪಕ್ಷದ ಕೈಯಿಂದ ತಪ್ಪಿಸಲು ಸರ್ಕಾರ ರಚಿಸಲು ಜಾತ್ಯತೀತ ಜನತಾದಳಕ್ಕೆ (ಜೆಡಿಎಸ್) ಬೆಂಬಲ ಸೂಚಿಸುವುದಾಗಿ ಕಾಂಗ್ರೆಸ್ ಘೋಷಿಸುತ್ತಿದ್ದಂತೆ ಬಿಜೆಪಿ ಪಾಳೆಯದಲ್ಲಿನ ಬೇಗುದಿ ಇನ್ನಷ್ಟು ಹೆಚ್ಚಾಯಿತು. ಯಾರ ಹಂಗೂ ಇಲ್ಲದೆ ಸ್ವತಂತ್ರವಾಗಿ ಅಧಿಕಾರ ಗದ್ದುಗೆಗೇರುತ್ತೇನೆ ಎಂಬ ಬೆಳಗಿನ ವಿಶ್ವಾಸವು ಸಮಯ ಜಾರಿದಂತೆ ಮುರುಟಿಹೋಯಿತಲ್ಲ ಎಂಬ ದುಗುಡದಲ್ಲಿ ಅದುವರೆಗೆ ಚೀರಾಟದ, ಕೂಗಾಟದ ಅಬ್ಬರದಲ್ಲಿ ಮುಳುಗಿಹೋಗಿದ್ದ ರಾಜ್ಯ ಬಿಜೆಪಿ ಕಾರ್ಯಾಲಯವೂ ಒಂದು ಕ್ಷಣ ಸ್ತಬ್ಧವಾಯಿತು.

ಇತ್ತ, ಕಾಂಗ್ರೆಸ್ ಹಾಗೂ ಜೆಡಿಎಸ್ ನಿಯೋಗವು ಸಂಜೆ ರಾಜ್ಯಪಾಲರನ್ನು ಭೇಟಿಯಾಗಿ ಮೈತ್ರಿ ಸರ್ಕಾರದ ಮಾತುಕತೆಗೆ ಮುಂದಾಗುತ್ತಿದೆ ಎಂಬ ಬೆಳವಣಿಗೆ ಕೂಡ ಬಿಜೆಪಿಯ ಪಾಲಿಗೆ ಕಹಿಯಾಯಿತು. ಹೀಗಾಗಿ, ಬೆಳಗಿನ ಸಂತಸ, ಸಂಭ್ರಮ ಹಾಗೂ ಹರ್ಷೋದ್ಗಾರ ಸಂಜೆಯಾಗುತ್ತಿದ್ದಂತೆ ಸಂಪೂರ್ಣ ಸ್ತಬ್ಧವಾಯಿತು.

ಸಪ್ಪಗಾದರು ಯಡಿಯೂರಪ್ಪ

ಪಕ್ಷ ಸರಳ ಬಹುಮತದತ್ತ ದಾಪುಗಾಲಿಡುತ್ತಿದ್ದುದನ್ನು ಮನೆಯಲ್ಲೇ ಕೂತು ಸಂಭ್ರಮಿಸುತ್ತಿದ್ದ ಯಡಿಯೂರಪ್ಪ ಮಧ್ಯಾಹ್ನದ ಹೊತ್ತಿಗೆ ಪಕ್ಷದ ಕಚೇರಿಗೆ ಬಂದು ಸುದ್ದಿಗೋಷ್ಠಿ ನಡೆಸಿ ದೆಹಲಿಗೆ ತೆರಳುವ ಸಾಧ್ಯತೆ ಇತ್ತು. ಆದರೆ, ಚುನಾವಣಾ ಫಲಿತಾಂಶದಲ್ಲಿ ಪಕ್ಷ ಬಹುಮತ ಗಳಿಸಲು ವಿಫಲವಾಗಿ ಯಾವಾಗ ಅತಂತ್ರ ವಿಧಾನಸಭೆ ನಿರ್ಮಾಣದ ಸ್ಥಿತಿ ಉದ್ಭವವಾಯಿತೋ, ಯಡಿಯೂರಪ್ಪ ಕೂಡ ಸಪ್ಪಗಾದರು.

ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ

ಮಧ್ಯಾಹ್ನ ಸರಿಸುಮಾರು ೩.೩೦ರ ಹೊತ್ತಿಗೆ ಬಿಜೆಪಿ ಕಚೇರಿಗೆ ಆಗಮಿಸಿದ ಯಡಿಯೂರಪ್ಪ ಮೊಗದಲ್ಲಿ ಕೂಡ ಯಾವುದೇ ಉಲ್ಲಾಸವಿರಲಿಲ್ಲ. ಸುತ್ತುವರಿದ ಸುದ್ದಿಗಾರರು ಪರಿಪರಿಯಾಗಿ ಕೇಳಿದ ನಾನಾ ಪ್ರಶ್ನೆಗಳಿಗೆ ಅವರಿಂದ, "ಬಿಜೆಪಿಯ ಮುಂದಿನ ನಡೆಯನ್ನು ಹೈಕಮಾಂಡ್ ನಿರ್ಧರಿಸುತ್ತದೆ," ಎಂಬ ಸ್ಪಷ್ಟನೆಯೊಂದೇ ಸಿದ್ಧ ಉತ್ತರವಾಗಿತ್ತು. ಮತ್ತೂ ಒತ್ತಾಯಪೂರ್ವಕವಾಗಿ ಕೇಳಿದಾಗ, "ರಾಜ್ಯದ ಜನತೆ ಕಾಂಗ್ರೆಸ್ ಆಡಳಿತವನ್ನು ತಿರಸ್ಕರಿಸಿರುವುದು ಬಿಜೆಪಿ ಪಕ್ಷವಾಗಿ ಹೊರಹೊಮ್ಮಿರುವುದನ್ನು ಖಾತ್ರಿಪಡಿಸುತ್ತಿದೆ. ಒಟ್ಟಾರೆಯಾಗಿ ಬಿಜೆಪಿ ಪರ ಜನಾದೇಶವಾಗಿದೆ,'' ಎಂದಷ್ಟೇ ಹೇಳಿ, ಸುದ್ದಿಗೋಷ್ಠಿ ಆಯೋಜಿಸಲಾಗಿದ್ದ ಕೊಠಡಿಯತ್ತ ನಡೆದರು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More