ಜೆಡಿಎಸ್‌ಗೆ ಇಂದು ಸಿಕ್ಕ ಅವಕಾಶವು ದೇವೇಗೌಡರ ಅಂದಿನ ಚಾಣಾಕ್ಷ ನಡೆಯ ಫಲ!

ಈ ಬಾರಿ ಮೇಲ್ಜಾತಿ ಮತದಾರರು ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿದ್ದುದು ಗೋಡೆಮೇಲಿನ ಬರಹದಷ್ಟೇ ಸ್ಪಷ್ಟವಾಗಿತ್ತು. ಆ ಮತಗಳು ಬಿಜೆಪಿಗೆ ಹೋಗುವುದನ್ನು ತಡೆಯಲು ಸಿದ್ದರಾಮಯ್ಯ ಮತ್ತು ದೇವೇಗೌಡ ಸರಿಯಾದ ದಾಳಗಳನ್ನೇ ಉರುಳಿಸಿದ್ದಾರೆ

“ಚುನಾವಣೆಗೆ ಮುನ್ನವೇ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ ಬಹುಮತದೊಂದಿಗೆ ಅಧಿಕಾರ ಹಿಡಿಯಬಹುದಿತ್ತು...”

“ಸಾಧ್ಯವೇ ಇರ್ತಿರಲಿಲ್ಲ, ಮೊದಲೇ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ರೆ ಜೆಡಿಎಸ್‌ಗೆ ಈಗ ಬಂದಿರುವಷ್ಟು ಸೀಟುಗಳೂ ಬರ್ತಿರಲಿಲ್ಲ...”

-ಇದು, ಹಿಂದೆಂದೂ ಇಲ್ಲದಷ್ಟು ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ದಿನವಾದ ಮಂಗಳವಾರ (ಮೇ 15) ಜೆಡಿಎಸ್ ಶಕ್ತಿಕೇಂದ್ರ ಮತ್ತು ಭದ್ರಕೋಟೆಯಾಗಿರುವ ಹಾಸನದ ಅಂಗಡಿಯೊಂದರ ಮುಂದೆ ಕಿವಿಗೆ ಬಿದ್ದ ಸಂಭಾಷಣೆ. ಈ ಸಂಭಾಷಣೆಯನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡರೆ ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ರಾಜಕೀಯ ನಡೆಯ ಮರ್ಮದ ಅರಿವಾಗುತ್ತದೆ.

ಈ ಬಾರಿ ಮೇಲ್ಜಾತಿ ಮತದಾರರು ಸಂಪೂರ್ಣವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವಾಗಿದ್ದುದು ಗೋಡೆಮೇಲಿನ ಬರಹದಷ್ಟೇ ಸ್ಪಷ್ಟವಾಗಿತ್ತು. ಆ ಮತಗಳು ಬಿಜೆಪಿಗೆ ಹೋಗುವುದನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡ ಸರಿಯಾದ ದಾಳಗಳನ್ನೇ ಉರುಳಿಸಿದ್ದಾರೆ. ಪರಸ್ಪರ ವಿರೋಧಿಸಿಕೊಂಡೇ ಇಬ್ಬರೂ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದಾರೆ ಎಂಬುದು ರಾಜಕೀಯ ಪ್ರಜ್ಞಾವಂತರ ವಿಶ್ಲೇಷಣೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ‘ಭಾಗ್ಯ’ ಯೋಜನೆಗಳ ವಿರುದ್ಧ ಮೊದಲಿನಿಂದಲೂ ವ್ಯವಸ್ಥಿತ ಅಪಪ್ರಚಾರ ನಡೆಸಿ, ಮೇಲ್ಜಾತಿ ಜನರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಬಿಜೆಪಿ ಮಾಡಿಕೊಂಡೇ ಬಂದಿತ್ತು. ಆ ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ತಂತ್ರಗಳನ್ನೂ ಪ್ರಯೋಗಿಸಿತ್ತು. ಆದರೆ, ಕಾಂಗ್ರೆಸ್ ವಿರುದ್ಧವಿರುವ ಸಿಟ್ಟು ಬಿಜೆಪಿಗೆ ವರದಾನವಾಗುವುದನ್ನು ತಡೆಯಲು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿಬೀಳುವ ಮೂಲಕ ಸರಿಯಾದ ದಾಳವನ್ನೇ ಉರುಳಿಸಿದರು. ಸಾಲದ್ದಕ್ಕೆ ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಎಂಬುದಾಗಿ ಕರೆಯುವ ಮೂಲಕ ಸಿದ್ದರಾಮಯ್ಯ ಸಹ ಮೇಲ್ಜಾತಿಯ ಮತಗಳು ಜೆಡಿಎಸ್‌ನತ್ತ ವಾಲಲು ಪೂರಕ ವಾತಾವರಣ ಸೃಷ್ಟಿಸುವಲ್ಲಿ ಯಶಸ್ವಿಯಾದರು. ಈ ತಂತ್ರ ಸರಿಯಾಗಿಯೇ ಫಲ ನೀಡಿದ್ದು ಹಳೇ ಮೈಸೂರು ಪ್ರಾಂತ್ಯದ ಜಿಲ್ಲೆಗಳಲ್ಲಿ ಮೇಲ್ಜಾತಿ ಜನರ ಮತಗಳನ್ನು ಹೆಚ್ಚಿನ ಮಟ್ಟದಲ್ಲಿ ಸೆಳೆದು ಜೆಡಿಎಸ್ ರಾಜ್ಯ ರಾಜಕೀಯದಲ್ಲಿ ತಮ್ಮ ಪಾತ್ರವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂಬುದನ್ನು ಎಚ್ ಡಿ ದೇವೇಗೌಡರು ಸಾಬೀತುಪಡಿಸಿದ್ದಾರೆ. ಅಲ್ಲದೆ ಮೇಲ್ಜಾತಿ ಮತಗಳನ್ನೇ ನಂಬಿಕೊಂಡಿರುವ ಬಿಜೆಪಿಯ ಸೀಟುಗಳ ಸಂಖ್ಯೆ ಕಡಿಮೆಗೊಳಿಸುವಲ್ಲಿ ಜೆಡಿಎಸ್ ಪ್ರಾಬಲ್ಯದ ಪಾತ್ರವನ್ನು ಕಡೆಗಣಿಸುವಂತಿಲ್ಲ. ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ಕೋಮುವಾದಿ ಮತ್ತು ಜಾತಿವಾದಿ ಎಂದು ಕರೆದು ತಳವರ್ಗಗಳು ಮತ್ತು ಅಲ್ಪಸಂಖ್ಯಾತರ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ತನ್ನ ಮಡಿಲಿಗೆ ಹಾಕಿಕೊಳ್ಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕಾಂಗ್ರೆಸ್ ಗೆ ತೀರಾ ಅವಮಾನಕರ ಸೋಲಾಗುವುದನ್ನು ತಪ್ಪಿಸಿದ್ದಾರೆ. ಒಟ್ಟಿನಲ್ಲಿ ಪರಸ್ಪರ ವಿರುದ್ಧ ನಿಂತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಕೋಮವಾದಿ ಹಣೆಪಟ್ಟಿ ಹೊಂದಿರುವ ಬಿಜೆಪಿ ಅಧಿಕಾರದ ದಡ ಹತ್ತದಂತೆ ತಡೆದು ನಿಲ್ಲಿಸುವಲ್ಲಿ ಯಶಸ್ವಿಯಾಗಿರುವುದು ಹಾಗೂ ಆ ಎರಡು ಪಕ್ಷಗಳೇ ಒಟ್ಟಿಗೆ ಸರ್ಕಾರ ರಚಿಸಲು ಮುಂದಾಗಿರುವುದು ತಂತ್ರ ರಾಜಕಾರಣದ ಅಚ್ಚರಿ ಮತ್ತು ಪ್ರಜಾಪ್ರಭುತ್ವದ ವೈಶಿಷ್ಟ್ಯ ಎನ್ನಲಡ್ಡಿಯಿಲ್ಲ.

ಎರಡು ವರ್ಷಗಳ ಹಿಂದೆ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭೆಗಳ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಗೆ ಬೆಂಬಲ ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈ ಬಲಪಡಿಸಿತ್ತು. ಅದುವರೆಗೂ ತಡೆರಹಿತವಾಗಿ ಏರುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಜನಪ್ರಿಯತೆಯ ಗ್ರಾಫ್ ಜರ್ರಂತ ಕೆಳಗಿಳಿಯಲಾರಂಭಿಸಿತು. ಪಕ್ಷದೊಳಗೇ ವಿರೋಧ ಎದುರಿಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗುಂಡ್ಲುಪೇಟೆ ಮತ್ತು ನಂಜನಗೂಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ನಂತರ ರಾಜ್ಯದಲ್ಲಿ ಪಕ್ಷದ ಪ್ರಶ್ನಾತೀತ ನಾಯಕರಾಗಿ ಬೆಳೆದಿದ್ದನ್ನು ರಾಜ್ಯ ಕಂಡಿದೆ. ಹೀಗೆ ಪರಸ್ಪರ ಕೊಡುಕೊಳ್ಳುವಿಕೆ ರಾಜಕಾರಣ ನಡೆಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇದ್ದಕ್ಕಿದ್ದಂತೆ ಹಾವು-ಮುಂಗುಸಿಯಂತೆ ಕಚ್ಚಾಡಿದ್ದರಲ್ಲೂ ಅರ್ಥವಿದೆ ಎಂಬುದು ಚುನಾವಣೆ ಫಲಿತಾಂಶದಿಂದ ನಿಚ್ಚಳವಾಗಿದೆ. ಒಂದು ವೇಳೆ ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಮುಂದುವರಿದಿದ್ದರೆ ಧ್ರುವೀಕರಣಗೊಳ್ಳುತ್ತಿದ್ದ ಮೇಲ್ಜಾತಿ ಮತಗಳು ಸಂಪೂರ್ಣ ಬಿಜೆಪಿ ಪಾಲಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಇಂದಿನ ಅನುಕೂಲಕರ ಸ್ಥಿತಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿಹಾಕಿದರೆ ಅವರು ಗುದ್ದಾಡಿಕೊಂಡೇ ದೊಡ್ಡದಾಗಿ ಬೆಳೆದಿರುವುದು ಎಂಬುದು ಸ್ಪಷ್ಟವಾಗುತ್ತದೆ. ಆ ಕಾರಣದಿಂದಾಗಿಯೇ ಇಂದಿಗೂ ರಾಜ್ಯ ರಾಜಕೀಯದಲ್ಲಿ ದೇವೇಗೌಡರು ಪ್ರಸ್ತುತವಾಗಿರುವುದು. ದೇಶದ ಅತ್ಯುನ್ನತ ಅಧಿಕಾರ ಸ್ಥಾನವಾದ ಪ್ರಧಾನಿ ಪಟ್ಟ ಏರಿ ಬಂದಿದ್ದರೂ ಗ್ರಾಮ ಪಂಚಾಯಿತಿ ಮಟ್ಟದ ರಾಜಕೀಯದಲ್ಲೂ ಸಕ್ರಿಯರಾಗುತ್ತಾರೆ ಎಂಬುದಾಗಿ ವಿರೋಧಿಗಳು ಟೀಕೆ ಮಾಡಿದರೂ ತಲೆ ಕೆಡಿಸಿಕೊಳ್ಳದೆ 24x7 ರಾಜಕೀಯ ನಡೆಸುವ ದೇವೇಗೌಡರ ರಾಜಕೀಯ ನಡೆಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ.

ಇದನ್ನೂ ಓದಿ : ಕೆ ಆರ್ ಪೇಟೆ ಕೃಷ್ಣ ಮನದ ಮಾತು | ದ್ವೇಷಾಸೂಯೆಯಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ಕಸಿನ್ಸ್!

ಸತತ ಹತ್ತು ವರ್ಷಗಳ ಕಾಲ ಅಧಿಕಾರವಿಲ್ಲದಿದ್ದರೂ ಮತ್ತು ಒಂದು ಕುಟುಂಬದ ಒಡೆತನದ ಪಕ್ಷ ಎಂಬ ಟೀಕೆಗಳನ್ನು ಎದುರಿಸಿಯೂ ಜೊತೆಗೆ ಕುಟುಂಬದೊಳಗಿನ ಸಂಘರ್ಷವನ್ನು ನಿಭಾಯಿಸಿಕೊಂಡು ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಂಡಿರುವುದರಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರ ಭಿನ್ನ ರಾಜಕೀಯ ನಡೆ ಮತ್ತು ಹೋರಾಟದ ಪಾತ್ರ ಇರುವುದನ್ನು ತಳ್ಳಿಹಾಕಲಾಗುವುದಿಲ್ಲ. ಬಿಎಸ್ಪಿಯೊಂದಿಗೆ ಚುನಾವಣಾಪೂರ್ವ ಹೊಂದಾಣಿಕೆ ಮಾಡಿಕೊಳ್ಳುವುದರ ಮೂಲಕ ದೇವೇಗೌಡರು ಜಾತ್ಯತೀತತೆಯನ್ನು ಸಾಬೀತುಪಡಿಸಲು ಹೆಣಗಿದರೆ, ಕುಮಾರಸ್ವಾಮಿ ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸುವ ಮೂಲಕ ಮೇಲ್ಜಾತಿ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು. ಚುನಾವಣಾ ಫಲಿತಾಂಶದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಿಂದೆ ಏನೂ ನಡೆದೇ ಇಲ್ಲ ಎಂಬಂತೆ ಒಟ್ಟಿಗೇ ರಾಜ್ಯಪಾಲರ ಮುಂದೆ ನೂತನ ಸರ್ಕಾರ ರಚನೆ ಪ್ರಸ್ತಾಪ ಮುಂದಿಟ್ಟಿರುವುದು ಬಿಜೆಪಿ ಎದುರಿಸಿದ ಪ್ರಜಾಪ್ರಭುತ್ವದ ಬಹುದೊಡ್ಡ ಶಾಕ್ ಎನ್ನಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More