ಕರಾವಳಿ | ಒಳಜಗಳದಿಂದ ಹೊರಬಂದ ಕಾಂಗ್ರೆಸ್ ಮೋದಿ ಅಲೆಯಲ್ಲಿ ಕೊಚ್ಚಿಹೋಯಿತೇ?

ಸ್ಥಳೀಯ ನಾಯಕರ ನಿರ್ಲಕ್ಷ್ಯ, ಆಂತರಿಕ ಕಚ್ಚಾಟ, ಅಭಿವೃದ್ಧಿಯನ್ನು ಲೆಕ್ಕಿಸದೆ ಹಿಂದುತ್ವಕ್ಕೆ ಮತದಾರರು ಒಲಿದದ್ದು, ಸಂಘಟನೆಯ ಕೊರತೆ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದ್ದು, ಅತಿ ಆತ್ಮವಿಶ್ವಾಸ, ಪ್ರಚಾರದ ಅಸಡ್ಡೆ ಹಾಗೂ ಐಟಿ ದಾಳಿಯ ಪರಿಣಾಮ ಕಾಂಗ್ರೆಸ್ ಕರಾವಳಿಯ ಬಹುತೇಕ ಕಡೆ ನೆಲಕಚ್ಚಿದೆ

ಸ್ಥಳೀಯ ನಾಯಕರ ನಿರ್ಲಕ್ಷ್ಯ, ಆಂತರಿಕ ಕಚ್ಚಾಟ, ಅಭಿವೃದ್ಧಿಯನ್ನು ಲೆಕ್ಕಿಸದೇ ಹಿಂದುತ್ವಕ್ಕೆ ಮತದಾರರು ಒಲಿದದ್ದು, ಸಂಘಟನೆಯ ಕೊರತೆ, ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದ್ದು, ಅತಿಯಾದ ಆತ್ಮವಿಶ್ವಾಸ, ಪ್ರಚಾರದ ಅಸಡ್ಡೆ ಹಾಗೂ ಐಟಿ ದಾಳಿಯ ಪರಿಣಾಮ ಕಾಂಗ್ರೆಸ್ ಕರಾವಳಿಯ ಬಹುತೇಕ ಕಡೆ ನೆಲಕಚ್ಚಿದೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ತಳಮಟ್ಟದ ಸಂಘಟನೆ, ಹೊಸಮುಖಗಳ ಪ್ರಯೋಗ, ಸಾಮಾಜಿಕ ಜಾಲತಾಣಗಳ ಸಕ್ರಿಯ ಬಳಕೆ, ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ, ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಹಿಂದುತ್ವ, ಭಾವನಾತ್ಮಕವಾಗಿ ಜನರನ್ನು ಸೆಳೆಯುವ ತಂತ್ರ ಇತ್ಯಾದಿ ಅಂಶಗಳು ಬಿಜೆಪಿಗೆ ವರದಾನವಾಗಿವೆ.

ದಕ್ಷಿಣ ಕನ್ನಡದಲ್ಲಿ ಸಂಸದ ನಳೀನ್ ಕುಮಾರ್ ಲೆಕ್ಕಾಚಾರ ಫಲ ನೀಡಿದೆ. ಮಂಗಳೂರು ಉತ್ತರ, ಮಂಗಳೂರು ದಕ್ಷಿಣ, ಬೆಳ್ತಂಗಡಿ ಕ್ಷೇತ್ರಗಳಲ್ಲಿ ಬಿಜೆಪಿಯ ಹೊಸಮುಖಗಳಿಗೆ ಮತದಾರರರು ಆದ್ಯತೆ ನೀಡಿದ್ದಾರೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಗೆಲುವು ನಳೀನ್ ಅವರಿಗೆ ಮುಖ್ಯವಾಗಿತ್ತು ಎಂದು ವಿಶ್ಲೇಷಿಸಲಾಗುತ್ತಿದೆ. ಗೆಲುವುದ ಸಾಧಿಸಿರುವ ಬಿಜೆಪಿಯ ಹೊಸಮುಖಗಳೆನಿಸಿದ ಹರೀಶ್ ಪೂಂಜಾ, ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ಪಕ್ಷದ ಅತೃಪ್ತ ಬಣಗಳಿಗೆ ಭಾರಿ ಪೆಟ್ಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಮೋಡಿಗೆ ಕರಾವಳಿ ಮನಸೋತಂತಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಬಿಜೆಪಿಯ ಪರವಾಗಿದ್ದ ಮತದಾರರಿಗೆ ಮೋದಿ ಭೇಟಿ ಇಂಬು ನೀಡಿರುವ ಸಾಧ್ಯತೆಗಳಿವೆ. ಉಡುಪಿಯ ಎಲ್ಲಾ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಉತ್ತರ ಕನ್ನಡದ ಬಹುತೇಕ ಕ್ಷೇತ್ರಗಳಲ್ಲಿ ಇದೇ ಸ್ಥಿತಿ ಕಂಡು ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ಸಿನ ಎಣಿಕೆಗಳೆಲ್ಲವೂ ತಲೆಕೆಳಕಾಗಿದೆ. ಬಿಲ್ಲವರಿಗೆ ಬಿಜೆಪಿ ಹೆಚ್ಚಿನ ಸ್ಥಾನ ನೀಡದಿರುವುದು ಕಾಂಗ್ರೆಸ್ಸಿಗೆ ವರದಾನವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ಮತದಾರರು ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಪಕ್ಷದ ಬಂಟ ಸಮುದಾಯದ ಅಭ್ಯರ್ಥಿಗಳಾದ ಭರತ್ ಶೆಟ್ಟಿ ಮತ್ತು ಹರೀಶ್ ಪೂಂಜಾ ಗೆದ್ದಿರುವುದು ಇದಕ್ಕೆ ಸಾಕ್ಷಿ. ಇತ್ತ ಬಿಲ್ಲವ ಸಮುದಾಯದ ನಾಯಕ ಜನಾರ್ದನ ಪೂಜಾರಿ ಅವರ ಪ್ರಭಾವ ಎಷ್ಟೆಂಬುದನ್ನು ಕೂಡ ಫಲಿತಾಂಶ ಸೂಚಿಸುತ್ತಿದೆ.

ಅಚ್ಚರಿಯ ಫಲಿತಾಂಶಗಳು ದಕ್ಷಿಣ ಕನ್ನಡದ ಅನೇಕ ಕಡೆ ಸಂಭವಿಸಿವೆ. ಬಂಟ್ವಾಳದಲ್ಲಿ ಅನೇಕರ ನಿರೀಕ್ಷೆಗಳನ್ನು ಹುಸಿಯಾಗಿಸಿ ರಮಾನಾಥ್ ರೈ ವಿರುದ್ಧ ಯು. ರಾಜೇಶ್ ನಾಯಕ್ ಗೆಲುವು ಸಾಧಿಸಿದ್ದಾರೆ. ಇದೊಂದು ಅಚ್ಚರಿಯ ಬೆಳವಣಿಗೆ ಎಂಬುದು ಅನೇಕರ ಅಭಿಪ್ರಾಯ. ಕ್ಷೇತ್ರದಲ್ಲಿ ರೈ ಅಭಿವೃದ್ಧಿಯನ್ನೇನೋ ಮಾಡಿದರು ಆದರೆ ಅದು ತಡವಾಗಿತ್ತು. ಹಲವು ಬಾರಿ ಗೆದ್ದ ರೈ ಈ ಬಾರಿ ಮಾತ್ರ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟರು ಎಂಬ ಮಾತುಗಳು ಕೇಳಿಬರುತ್ತಿವೆ.

ಮತ್ತೊಂದೆಡೆ, ಆರೆಸ್ಸಿಸಿನ ಒಂದು ಬಣದ ಆಶೀರ್ವಾದ, ಕಾಂಗ್ರೆಸ್ ಅತೃಪ್ತರ ಅಸಮಾಧಾನ ಶಮನವಾಗಿದ್ದರೂ ಶಕುಂತಲಾ ಶೆಟ್ಟಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ ಮಠಂದೂರು ಅನಾಯಾಸವಾಗಿ ಗೆಲುವು ದಾಖಲಿಸಿದ್ದಾರೆ. ಡಿ ವಿ ಸದಾನಂದ ಗೌಡರ ಆಪ್ತರಾಗಿರುವ ಮಠಂದೂರು ಕಳೆದ ಬಾರಿ ಶಕುಂತಲಾ ವಿರುದ್ಧ ಸೋಲನುಭವಿಸಿದ್ದರು.

ಇತ್ತ ಬಿಜೆಪಿ ಟಿಕೆಟ್ ಸಿಗದ ಸತ್ಯಜಿತ್ ಸುರತ್ಕಲ್, ಕೃಷ್ಣ ಪಾಲೇಮಾರ್ ಅಸಮಾಧಾನದ ನಡುವೆಯೂ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಡಾ. ಭರತ್ ಶೆಟ್ಟಿ ಕಾಂಗ್ರೆಸ್ಸಿನ ಮೋಯಿದ್ದೀನ್ ಬಾವಾ ಅವರನ್ನು ಮಣಿಸಿದ್ದಾರೆ. ಮಂಗಳೂರು ದಕ್ಷಿಣದಲ್ಲಿ ಗೆಲುವು ಸಾಧಿಸಿದ ವೇದವ್ಯಾಸ ಕಾಮತ್ ತಮ್ಮ ವಿರುದ್ಧ ಇದ್ದ ಅಡೆತಡೆಗಳನ್ನು ಮೀರಿ ಗೆದ್ದಿದ್ದಾರೆ. ಒಂದೆಡೆ ಲೋಬೊ, ಮತ್ತೊಂದೆಡೆ ಬಾಳಿಗ ಕೊಲೆ ಪ್ರಕರಣದ ಗುಮ್ಮ, ಇನ್ನೊಂದೆಡೆ ಶ್ರೀಕರಪ್ರಭು ಸ್ಪರ್ಧೆಯ ಹೊರತಾಗಿಯೂ ಅವರು ಆಶ್ಚರ್ಯದಾಯಕ ಫಲಿತಾಂಶವನ್ನು ನೀಡಿದ್ದಾರೆ.

2013ರ ಚುನಾವಣಾ ಫಲಿತಾಂಶವೇ ದಕ್ಷಿಣಕನ್ನಡದಲ್ಲಿ ತಿರುವುಮುರುವಾಗಿ ಪ್ರಕಟವಾಗಿದೆ. ಕಳೆದ ಬಾರಿ ಕಾಂಗ್ರೆಸ್ ಏಳು ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ ಬಿಜೆಪಿ ಏಳು ಸ್ಥಾನಗಳನ್ನು ಗೆದ್ದುಕೊಂಡಿದೆ. ದಕ್ಷಿಣ ಕನ್ನಡದ ಏಕೈಕ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಕಳೆದ ಬಾರಿ ಸುಳ್ಯದ ಎಸ್. ಅಂಗಾರ ಸಾಧಿಸಿದ್ದರು. ಈ ಬಾರಿ ಯು ಟಿ ಖಾದರ್ ಮಾತ್ರ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರಾಗಿ ಹೊರಹೊಮ್ಮಿದ್ದಾರೆ. 2008ರಂತೆ ಎರಡೂ ಪಕ್ಷಗಳಿಗೆ 50:50 ಸೀಟುಗಳು ಲಭಿಸಬಹುದು ಎಂಬ ರಾಜಕೀಯ ವಲಯದ ಲೆಕ್ಕಾಚಾರವೂ ಈ ಮೂಲಕ ತಲೆಕೆಳಕಾಗಿದೆ.

ಇನ್ನು. ಮಂಗಳೂರು ಕ್ಷೇತ್ರದಲ್ಲಿ ಯು ಟಿ ಖಾದರ್ ಗೆಲುವಿನ ಓಟಕ್ಕೆ ಲಗಾಮು ಹಾಕುವುದು ಬಿಜೆಪಿಯಿಂದ ಸಾಧ್ಯವಾಗಿಲ್ಲ. ಬಂಟ ಸಮುದಾಯದ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೊಳಿಯಾರು ಅವರನ್ನೇ ಪಕ್ಷದಿಂದ ಕಣಕ್ಕಿಳಿಸಿದ್ದರೂ ಇಲ್ಲಿ ಮತದಾರರ ಮನ ಗೆಲ್ಲಲು ಬಿಜೆಪಿ ವಿಫಲವಾಗಿದೆ. ಅವರು ಕ್ಷೇತ್ರಕ್ಕೆ ಹೊಸಬರಾಗಿರುವುದು ಮತ್ತು ಖಾದರ್ ಅವರ ಎಂದಿನ ಜನಪ್ರಿಯತೆಯಿಂದಾಗಿ ಕಾಂಗ್ರೆಸ್ ಇಲ್ಲಿ ಉಸಿರಾಡುವಂತಾಗಿದೆ.

ಇನ್ನು ಇಡೀ ಉಡುಪಿ ಜಿಲ್ಲೆಯಲ್ಲಿ 2013ರ ಇತಿಹಾಸವೇ ಮರುಕಳಿಸಲಿದೆ ಎಂದು ಅನೇಕರು ಎಣಿಸಿದ್ದರು. ಆದರೆ ಆ ಗಣಿತ ತಪ್ಪಾಗಿದೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂಬ ಲೆಕ್ಕಾಚಾರ ತಲೆಕೆಳಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪ್ರಮೋದ್ ಮಧ್ವರಾಜ್ ವಿರುದ್ಧ ಸ್ಪರ್ಧಿಸಿದ್ದ ರಘುಪತಿ ಭಟ್ ಗೆಲುವು ಸಾಧಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಇಬ್ಬರೂ ಕೆಲಸ ಮಾಡಿದ್ದಾರೆ ಎಂಬುದು ಕ್ಷೇತ್ರದ ಜನತೆಯ ಮಾತಾಗಿತ್ತು. ಅಂತಿಮವಾಗಿ ರಘುಪತಿ ಭಟ್ ಪರ ಮತದಾರರು ಒಲವು ತೋರಿದ್ದಾರೆ. ಅಭಿವೃದ್ಧಿಯ ಜೊತೆ ಜೊತೆಗೆ ಕಾಂಗ್ರೆಸ್ ಜನರ ಭಾವನಾತ್ಮಕ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದಿರುವುದೇ ಸೋಲಿಗೆ ಕಾರಣ ಎನ್ನಲಾಗುತ್ತಿದೆ. ಇದು ಪ್ರಮೋದ್ ಸೋಲಲ್ಲ ಬದಲಿಗೆ ಕಾಂಗ್ರೆಸ್ಸಿನ ಸೋಲು ಎಂದೂ ವಿಶ್ಲೇಷಿಸಲಾಗುತ್ತಿದೆ. ಇತ್ತ ರಘುಪತಿ ಭಟ್ ಅವರಿಗೆ ಟಿಕೆಟ್ ನೀಡಲು ಅಷ್ಟೇನೂ ಉತ್ಸಾಹ ತೋರದಿದ್ದ ಆರೆಸ್ಸೆಸ್ ಮೂಗಿನ ಮೇಲೆ ಬೆರಳಿಡುವಂತೆ ಫಲಿತಾಂಶ ಹೊರಬಿದ್ದಿದೆ. ಪ್ರಮೋದ್ ಮಧ್ವರಾಜ್ ಮತ್ತು ರಮಾನಾಥ ರೈ ವಿರುದ್ಧ ನಡೆದ ಐಟಿ ದಾಳಿ ಕೂಡ ಅವರ ಸೋಲಿಗೆ ಕಾರಣ ಎಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.

ಕಾಪುವಿನಲ್ಲಿ ವಿನಯಕುಮಾರ್ ಸೊರಕೆ ಗೆಲ್ಲುತ್ತಾರೆ ಎಂಬ ನಿರೀಕ್ಷೆಯನ್ನು ಮೀರಿ ಬಿಜೆಪಿಯ ಲಾಲಾಜಿ ಮೆಂಡನ್ ವಿಜಯ ಸಾಧಿಸಿದ್ದಾರೆ. ಲಾಲಾಜಿ ಅವರಿಗೆ ಟಿಕೆಟ್ ನೀಡಿದಾಗಲೇ ಸೊರಕೆ ಗೆಲುವು ನಿಶ್ಚಿತ ಎಂದುಕೊಂಡಿದ್ದವರ ಎಣಿಕೆಗಳು ಹುಸಿಯಾಗಿವೆ. ಲಾಲಾಜಿ ಮೆಂಡನ್ ಬಿಜೆಪಿಯಿಂದ ಶಾಸಕರಾಗಿ ಈಗಾಗಲೇ ಒಮ್ಮೆ ಆಯ್ಕೆಯಾಗಿದ್ದರು.

ಇನ್ನು ನಿರೀಕ್ಷೆಯಂತೆ ಕುಂದಾಪುರ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಕಳೆದ ಬಾರಿ ಪಕ್ಷೇತರರಾಗಿ ಗೆದ್ದಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿ ತಮ್ಮ ಮಾತೃಪಕ್ಷ ಬಿಜೆಪಿಯಿಂದಲೇ ಸ್ಪರ್ಧಿಸಿ ವಿಜಯ ಗಳಿಸಿದ್ದಾರೆ. ಕಾರ್ಕಳದ ಬಿಜೆಪಿ ಅಭ್ಯರ್ಥಿ ವಿ. ಸುನೀಲ್ ಕುಮಾರ್ ಕಾಂಗ್ರೆಸ್ಸಿನ ಗೋಪಾಲ ಭಂಡಾರಿ ಅವರಿಗೆ ಮತ್ತೆ ಸೋಲಿನ ರುಚಿ ತೋರಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ. ಅಭಿವೃದ್ಧಿಯನ್ನೇ ಮಾನದಂಡವಾಗಿಟ್ಟುಕೊಂಡು ಸುನೀಲ್ ಪರ ಮತ ಚಲಾವಣೆಯಾಗಿದೆ ಎಂಬುದು ಅನೇಕರ ಅಭಿಪ್ರಾಯ.

ಹಾಗೆಯೇ, ಉತ್ತರ ಕನ್ನಡದ ಕೆಲವು ಕಡೆಗಳಲ್ಲಿಯೂ ನಿರೀಕ್ಷೆಗೆ ಮೀರಿದ ಫಲಿತಾಂಶಗಳು ವ್ಯಕ್ತವಾಗಿವೆ. ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಭಾರಿ ಬಂಡಾಯವನ್ನು ಎದುರಿಸಿತ್ತು. ಪರಮೇಶ್ ಮೇಸ್ತಾ ಸಾವಿನ ನಂತರ ಮುಂಚೂಣಿಯ ಹೆಸರಾಗಿದ್ದ ಸೂರಜ್ ನಾಯ್ಕ ಸೋನಿ ಟಿಕೆಟ್ ದೊರೆಯದ ಕಾರಣಕ್ಕೆ ಬಂಡಾಯವೆದ್ದಿದ್ದರು. ಅತ್ತ ಯಶೋಧರ ನಾಯಕ್ ಕೂಡ ಪಕ್ಷೇತರರಾಗಿ ಸ್ಪರ್ಧೆ ಒಡ್ಡುತ್ತಾರೆ ಎಂಬ ನಿರೀಕ್ಷೆಗಳನ್ನು ಹುಸಿಯಾಗಿಸಿ ಬಿಜೆಪಿಯ ದಿನಕರ್ ಕೇಶವ ಶೆಟ್ಟಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಳೆದ ಬಾರಿ ಶಾಸಕರಾಗಿದ್ದ ಶಾರದಾ ಮೋಹನ್ ಶೆಟ್ಟಿ ಅಧಿಕಾರ ಕಳೆದುಕೊಂಡಿದ್ದಾರೆ. ಮೇಸ್ತಾ ಸಾವಿನ ನಂತರ ಉಂಟಾದ ಬೆಳವಣಿಗೆಗಳು ಹಾಗೂ ಅಭಿವೃದ್ಧಿಯ ವಿಚಾರ ಶಾರದಾ ಅವರಿಗೆ ಅಡ್ಡಿಯಾದಂತೆ ತೋರುತ್ತಿದೆ.

ಭಟ್ಕಳ-ಹೊನ್ನಾವರ ಕ್ಷೇತ್ರದಲ್ಲಿ ಕೂಡ ಮೇಸ್ತಾ ಸಾವು ಪ್ರತಿಧ್ವನಿಸುತ್ತಿತ್ತು. ಅಲ್ಲಿ ಕಾಂಗ್ರೆಸ್ಸಿನ ಮಂಕಾಳ ವೈದ್ಯ ಬಿಜೆಪಿಯ ಸುನೀಲ್ ಬಿ ನಾಯಕ್ ವಿರುದ್ಧ ಮಂಡಿಯೂರಿದ್ದಾರೆ. ಅಲ್ಪಸಂಖ್ಯಾತರ ಬೆಂಬಲದ ಹೊರತಾಗಿಯೂ ವೈದ್ಯ ಸೋಲುಂಡಿದ್ದಾರೆ.

ಇದನ್ನೂ ಓದಿ : ಚುನಾವಣೆಯುದ್ದಕ್ಕೂ ಕುತೂಹಲಕಾರಿ ಬೆಳವಣಿಗೆಗಳಿಗೆ ಸಾಕ್ಷಿಯಾದ ಕರಾವಳಿ

ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಸತೀಶ್ ಸೈಲ್ ಮತ್ತು ಜೆಡಿಎಸ್ಸಿನ ಆನಂದ್ ಅಸ್ನೋಟಿಕರ್ ನಡುವೆ ಸ್ಪರ್ಧೆ ಉಂಟಾಗಬಹುದು ಎಂಬ ನಿರೀಕ್ಷೆಯನ್ನು ಹುಸಿಗೊಳಿಸಿ, ಬಿಜೆಪಿಯ ರೂಪಾಲಿ ನಾಯಕ್ ಅವರನ್ನು ಮತದಾರರು ಗೆಲ್ಲಿಸಿದ್ದಾರೆ. ಅಸ್ನೋಟಿಕರ್ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಹಳಿಯಾಳದಲ್ಲಿ ಎಂದಿನಂತೆ ಕಾಂಗ್ರೆಸ್ಸಿನ ಆರ್ ವಿ ದೇಶಪಾಂಡೆ ಗೆಲುವು ಸಾಧಿಸಿದ್ದಾರೆ. ದೇಶಪಾಂಡೆ ಎದುರು ಸುನಿಲ್ ಹೆಗಡೆ ಸತತ ಎರಡನೇ ಬಾರಿ ಸೋಲುಂಡಿದ್ದಾರೆ. ಯಲ್ಲಾಪುರದಲ್ಲಿ ಕಾಂಗ್ರೆಸ್ಸಿನ ಅರಬೈಲ್ ಶಿವರಾಂ ಮತ್ತೆ ಗೆಲುವು ಸಾಧಿಸಿದಾರೆ. ಬಿಜೆಪಿಯ ಎವಿಎಸ್ ಪಾಟೀಲ ಅವರನ್ನು ಈ ಬಾರಿ ಮಣಿಸಿದ್ದಾರೆ. ಶಿವರಾಂ ಗೆಲುವು ಸಾಧಿಸಿರುವುದು 1,483 ಮತಗಳ ಅಂತರದಿಂದ ಮಾತ್ರ.

ಪರಿಷತ್ ಉಪಚುನಾವಣೆ: ಕೃತಕ ಬಿಕ್ಕಟ್ಟು ಸೃಷ್ಟಿಸಿದ್ದನ್ನು ಒಪ್ಪಿತೇ ಬಿಜೆಪಿ?
ಟ್ವಿಟರ್ ಸ್ಟೇಟ್ | ರಾಜತಾಂತ್ರಿಕ ಭಾಷೆಯ ಮೌಲ್ಯ ತಗ್ಗಿಸಿದ ಭಾರತ-ಪಾಕ್ ಬಗ್ಗೆ ಆಕ್ರೋಶ
ರಾಜಸ್ಥಾನ | ಪಕ್ಷ ತೊರೆದ ಮಾನ್ವೇಂದ್ರ ಸಿಂಗ್‌; ಚುನಾವಣೆಗೆ ಮೊದಲೇ ಬಿಜೆಪಿಗೆ ಹಿನ್ನಡೆ
Editor’s Pick More