ದಿನವಿಡೀ ನಾಟಕೀಯ ಬೆಳವಣಿಗೆ; ಕೊನೆಗೆ ಕಂಡ ಸಿದ್ದು-ಎಚ್‌ಡಿಕೆ ಚಿತ್ರ ಅಂತಿಮವೇ?

ಕರ್ನಾಟಕದ ೧೫ನೇ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸ್ವಲ್ಪದರಲ್ಲಿಯೇ ಸರಳ ಬಹುಮತದಿಂದ ಬಿಜೆಪಿ ವಂಚಿತವಾಗಿದೆ. ಸಮಯೋಚಿತವಾಗಿ ದಾಳ ಉರುಳಿಸಿದ ಕಾಂಗ್ರೆಸ್‌-ಜೆಡಿಎಸ್‌, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಯಶಸ್ವಿಯಾಗುವವೇ?

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯದೇ ಇರುವುದರಿಂದ ಸಮ್ಮಿಶ್ರ ಸರ್ಕಾರ ಅಸ್ವಿತ್ವಕ್ಕೆ ಬರುವ ಸಂದರ್ಭ ನಿರ್ಮಾಣವಾಗಿದೆ.

ಮಂಗಳವಾರ ಬೆಳಿಗ್ಗೆ ಮತ ಎಣಿಕೆ ಆರಂಭವಾದಾಗಿನಿಂದಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿಯು ಅಂತಿಮವಾಗಿ ೧೦೪ ಸ್ಥಾನ ಪಡೆಯುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಬಿಜೆಪಿ ಮುನ್ನಡೆ ಸಾಧಿಸುವುದು ತಿಳಿಯುತ್ತಿದ್ದಂತೆ ಬೆಂಗಳೂರಿನ ಬಿಜೆಪಿ ಕಚೇರಿಯ ಮುಂದೆ ಸಂಭ್ರಮ ಮನೆಮಾಡಿತ್ತು. ಬಿಜೆಪಿ ಕಾರ್ಯಕರ್ತರು, ನಾಯಕರು, ಮೋದಿ ವೇಷಧಾರಿಗಳು ಕುಣಿದು ಕುಪ್ಪಳಿಸಿದರು. ಒಂದು ಹಂತದಲ್ಲಿ ೧೧೫ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿಯು ಸರಳ ಬಹುಮತ ಪಡೆಯಲಿದೆ ಎಂದು ಭಾವಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚಾರಣೆಯಲ್ಲಿ ತೊಡಗಿದ್ದರು.

ಕಾಂಗ್ರೆಸ್‌ನ ಸಚಿವರು, ಬಲಾಢ್ಯರು ಸೋಲುತ್ತಿರುವುದನ್ನು ಟಿವಿಯಲ್ಲಿ ನೋಡಿ ವಿಜಯೋತ್ಸವ ಮುಂದುವರಿಸಿದ ಬಿಜೆಪಿ ಕಾರ್ಯಕರ್ತರಿಗೆ ಮಧ್ಯಾಹ್ನದ ವೇಳೆಗೆ ಬಿಜೆಪಿ ಬಹುಮತ ಗಳಿಸುವುದು ಕಷ್ಟ ಎಂಬುದು ಅರಿವಿಗೆ ಬಂದಂತಿತ್ತು. ಬಿಜೆಪಿ ಶಾಸಕರ ಸಂಖ್ಯೆ ೧೦೫ರ ಅಸುಪಾಸಿಗೆ ಇಳಿಯುತ್ತಿದ್ದಂತೆ ಅತಂತ್ರ ವಿಧಾನಸಭೆ ನಿರ್ಮಾಣ ಸ್ಪಷ್ಟವಾಗಿತ್ತು. ಈ ವೇಳಗೆ ೭೮ ಸ್ಥಾನ ಗಳಿಸಿದ್ದ ಕಾಂಗ್ರೆಸ್‌, ೩೮ ಸ್ಥಾನ ಗಳಿಸಿದ್ದ ಜೆಡಿಎಸ್‌ಗೆ ಬೆಂಬಲ ನೀಡುವುದಾಗಿ ಘೋಷಿಸುವ ಸುದ್ದಿ ಬಹಿರಂಗಗೊಂಡಿದ್ದು ಬಿಜೆಪಿ ಪಾಳೆಯಕ್ಕೆ ಬರಸಿಡಿಲಿನಂತೆ ಬಂದೆರಗಿತು. ಇದರಿಂದ ಆಘಾತಕ್ಕೊಳಗಾದ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಗೆ ತಡೆಹಾಕಿ ಟಿವಿ ಮುಂದೆ ಜಮಾಯಿಸಿದ್ದರು. ಈ ವೇಳೆಗಾಗಲೇ ಗೆಲುವಿನ ಸಂಭ್ರಮದಲ್ಲಿ ತೊಡಗಿದ್ದ ಬಿಜೆಪಿ ಪಾಳೆಯದಲ್ಲಿ ಆತಂಕದ ಕಾರ್ಮೋಡ ಸೃಷ್ಟಿಯಾಗಿ ಹೋಗಿತ್ತು.

ಈ ಮಧ್ಯೆ, ರಾಜಕೀಯ ಚಟುವಟಿಕೆಗಳು ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌ ಡಿ ಕುಮಾರಸ್ವಾಮಿ ಅವರ ಮನೆಗೆ ವರ್ಗಾವಾಯಿತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ದೇವೇಗೌಡರಿಗೆ ಕರೆ ಮಾಡಿ ಮೈತ್ರಿಗೆ ಮನವಿ ಮಾಡಿದ್ದರು. ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಎಸ್ಪಿ ನಾಯಕಿ ಮಾಯಾವತಿ ಅವರೂ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವಂತೆ ಸೂಚಿಸಿದ್ದರಿಂದ ಜೆಡಿಎಸ್‌, ಕಾಂಗ್ರೆಸ್‌ ಬೆಂಬಲವನ್ನು ಒಪ್ಪಿಕೊಂಡು ಸರ್ಕಾರ ರಚಿಸಲು ಮುಂದಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ನಾಯಕರು ಹಾಗೂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ ನಾಯಕರು ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಆಹ್ವಾನಿಸುವಂತೆ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ಮೈತ್ರಿಯ ವಿಚಾರ ಹೊರಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ನಿಯೋಗವು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚಿಸಲು ಅಗತ್ಯವಾದ ಸಂಖ್ಯಾಬಲ ಹೊಂದಿಸಲು ಒಂದು ವಾರದ ಕಾಲಾವಕಾಶ ಕೋರಿತು. ೧೦೩ ಸ್ಥಾನ ಪಡೆದಿರುವ ಬಿಜೆಪಿಯು ಬಹುಮತಕ್ಕೆ ಅಗತ್ಯವಾದ ೧೦ ಸ್ಥಾನ ಹೊಂದಿಸಬೇಕಿದೆ.

ಇದನ್ನೂ ಓದಿ : ಬಿಜೆಪಿಯನ್ನು ಬಹುಮತದಿಂದ ದೂರ ನಿಲ್ಲಿಸಿತೇ ಕಾಂಗ್ರೆಸ್‌ನ ಲಿಂಗಾಯತ ಧರ್ಮ ದಾಳ?

ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ವಿಶ್ವಾಸ ಹೊಂದಿದ್ದ ಬಿಜೆಪಿಯು ರಾಜಕೀಯವಾಗಿ ನಿರ್ಧಾರಕೈಗೊಳ್ಳಲು ತಡವರಿಸಿದ್ದ ಲಾಭ ಪಡೆದ ಕಾಂಗ್ರೆಸ್‌, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸದ್ಯಕ್ಕೆ ಯಶಸ್ವಿಯಾಗಿದೆ. ಜೆಡಿಎಸ್‌-ಕಾಂಗ್ರೆಸ್‌ ದೋಸ್ತಿ ಸರ್ಕಾರ ಹೊರಬೀಳುತ್ತಿದ್ದಂತೆ ಬಿಜೆಪಿಯ ಕೇಂದ್ರ ನಾಯಕತ್ವ ಮೈಕೊಡವಿಕೊಂಡು ಎದ್ದಿದೆ. ಕೇಂದ್ರ ಸಚಿವರಾದ ಜೆ ಪಿ ನಡ್ಡಾ, ಪ್ರಕಾಶ್ ಜಾವ್ಡೇಕರ್‌, ಧರ್ಮೇಂದ್ರ ಪ್ರಧಾನ್‌ ಅವರನ್ನು ಬೆಂಗಳೂರಿಗೆ ಕಳುಹಿಸಿದ್ದು, ಶತಾಯಗತಾಯ ಅಧಿಕಾರ ಹಿಡಿಯಲು ಪ್ರಯತ್ನ ಮುಂದುವರಿಸಿದೆ. ಜೆಡಿಎಸ್‌-ಕಾಂಗ್ರೆಸ್ ರಾಜಕೀಯ ಚಟುವಟಿಕೆಗೆ ಪ್ರತಿತಂತ್ರ ರೂಪಿಸಲಿರುವ ಬಿಜೆಪಿಯು, ಜೆಡಿಎಸ್‌-ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಶಾಸಕರನ್ನು ಸೆಳೆಯಲು ಯತ್ನಿಸುತ್ತಿದೆ ಎನ್ನಲಾಗಿದೆ. ಅಲ್ಲದೇ, ಆಪರೇಷನ್‌ ಕಮಲಕ್ಕೂ ಬಿಜೆಪಿ ನಾಯಕರು ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಧಿಕಾರದಿಂದ ದೂರ ಉಳಿಯುವ ಸ್ಥಿತಿ ಬಿಜೆಪಿಗೆ ಎದುರಾಗಿರುವುದು ಪರಿಸ್ಥಿತಿಯ ವ್ಯಂಗ್ಯವಾಗಿ ತೋರುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More