ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಎಲ್ಲೆಡೆಯೂ ಕುಸಿತ ಕಂಡ ಕಾಂಗ್ರೆಸ್

ಒಟ್ಟಾರೆ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಅವಲೋಕಿಸಿದಾಗ ಬಹುತೇಕ ಎಲ್ಲ ಪ್ರಾಂತಗಳಲ್ಲೂ ಕಾಂಗ್ರೆಸ್‌ ಕುಸಿದಿದೆ.  ಬೆಂಗಳೂರಿನಲ್ಲಿ ಮಾತ್ರ ಕಳೆದ ಬಾರಿಯ ಸ್ಥಾನಗಳನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಶಕ್ಯವಾಗಿದೆ. ಚುನಾವಣಾ ಫಲಿತಾಂಶದ ಪ್ರಾಂತವಾರು ವಿಶ್ಲೇಷಣೆ ಇಲ್ಲಿದೆ

ಕರ್ನಾಟಕದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಯಾವುದೇ ಪಕ್ಷಕ್ಕೂ ಸಂಪೂರ್ಣ ಬಹುಮತ ಸಿಕ್ಕಿಲ್ಲ. ಆದರೆ, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ೧೦೪ ಸ್ಥಾನಗಳನ್ನು ಪಡೆದಿದ್ದರೆ, ಕಾಂಗ್ರೆಸ್ ೭೮ ಸ್ಥಾನಗಳನ್ನು ಪಡೆದು ಎರಡನೇ ಸ್ಥಾನದಲ್ಲಿದೆ. ಜೆಡಿಎಸ್ ೩೮ ಸ್ಥಾನ ಮತ್ತು ಇತರರು ೨ ಸ್ಥಾನಗಳಲ್ಲಿ ಗೆದ್ದಿದ್ದಾರೆ. ಈ ಒಟ್ಟಾರೆ ಫಲಿತಾಂಶವನ್ನು ಪ್ರಾಂತವಾರು ವಿಶ್ಲೇಷಣೆ ನಡೆಸಿದಲ್ಲಿ ಕಾಂಗ್ರೆಸ್ ಬೆಂಗಳೂರು ನಗರ ಹೊರತುಪಡಿಸಿದಂತೆ ಉಳಿದೆಲ್ಲ ಕಡೆಗೂ ೨೦೧೩ರಲ್ಲಿ ಸಿಕ್ಕಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಕರಾವಳಿ ಮತ್ತು ಮುಂಬೈ ಕರ್ನಾಟಕವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡರೆ, ಜೆಡಿಎಸ್ ಹಳೇ ಮೈಸೂರಿನಲ್ಲಿ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ದಕ್ಷಿಣ ಕರ್ನಾಟಕವೆಂದು ನಾವು ಕರೆಯುವ ಹಳೇ ಮೈಸೂರು ಪ್ರಾಂತದ ೬೩ ವಿಧಾನಸಭಾ ಕ್ಷೇತ್ರಗಳಲ್ಲಿ ೨೦೧೩ರಲ್ಲಿ ಕಾಂಗ್ರೆಸ್ ೩೧ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಕೇವಲ ೨೦ ಸ್ಥಾನಗಳನ್ನಷ್ಟೇ ಪಡೆದಿದೆ. ಕಳೆದ ಬಾರಿ ಕೇವಲ ಐದು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ೧೭ ಸ್ಥಾನಗಳಿಗೆ ಏರಿದೆ, ಜೆಡಿಎಸ್ ಕೂಡ ಕಳೆದ ಬಾರಿಯ ತನ್ನ ೨೨ ಸ್ಥಾನಗಳಿಂದ ಈ ಬಾರಿ ೨೫ ಸ್ಥಾನಕ್ಕೆಏರಿದೆ. ಒಟ್ಟಾರೆಯಾಗಿ ಹಳೇ ಮೈಸೂರು ವಿಭಾಗದ ೧೧ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಇದ್ದಿರಬಹುದಾದ ಆಡಳಿತ ವಿರೋಧಿ ಅಲೆಯ ಲಾಭವನ್ನು ಬಿಜೆಪಿ ಮತ್ತು ಜೆಡಿಎಸ್ ಪಡೆದುಕೊಂಡಿವೆ.

೨೦೧೩ರಲ್ಲಿ ದಕ್ಷಿಣ ಕರ್ನಾಟಕದಲ್ಲಿ ಸ್ಪಷ್ಟವಾಗಿ ಕಾಂಗ್ರೆಸ್ ಅಲೆ ಇತ್ತು. ಆದರೆ, ಕಳೆದ ಬಾರಿ ಕಾಂಗ್ರೆಸ್ ಕೈ ಹಿಡಿದಿದ್ದ ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಪ್ರಾಂತ್ಯ ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಕಡೆಗೆ ವಾಲಿದೆ. ಜೆಡಿಎಸ್ ಈ ಪ್ರಾಂತದಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆ ಇತ್ತಾದರೂ, ಒಕ್ಕಲಿಗ ಸಮುದಾಯದ ಒಲವು ಪಡೆದುಕೊಳ್ಳುವ ಬಿಜೆಪಿಯ ಪ್ರಯತ್ನಕ್ಕೆ ಬಲ ಸಿಗುವ ನಿರೀಕ್ಷೆ ಇರಲಿಲ್ಲ. ಆದರೆ, ಕಳೆದ ಬಾರಿಗೆ ಹೋಲಿಸಿದಲ್ಲಿ ಈ ಬಾರಿ ೧೨ ಸ್ಥಾನಗಳನ್ನು ವೃದ್ಧಿಸಿಕೊಂಡಿರುವುದು ಒಕ್ಕಲಿಗ ಸಮುದಾಯ ಬಿಜೆಪಿಯ ಕೈಹಿಡಿದಿರುವುದನ್ನು ಸಾಬೀತುಪಡಿಸುತ್ತದೆ. ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಅಹಿಂದ ನಾಯಕರೆಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ ಅವರು ಈ ಪ್ರಾಂತ್ಯದಲ್ಲಿ ಜನಪ್ರಿಯ ನಾಯಕರೆಂದೇ ಪರಿಗಣಿಸಿ ಕಾಂಗ್ರೆಸ್ ಲಾಭವನ್ನು ನಿರೀಕ್ಷಿಸಲಾಗಿತ್ತು. ಅಲ್ಲದೆ, ಕಳೆದ ಬಾರಿ ಈ ಪ್ರಾಂತದ ಮುಸ್ಲಿಂ ಸಮುದಾಯದ ಮೇಲೂ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಿತ್ತು. ಆದರೆ ಈ ಬಾರಿ ಅಹಿಂದ ಲೆಕ್ಕಾಚಾರಗಳು ಕಾಂಗ್ರೆಸ್‌ಗೆ ತಲೆಕೆಳಗಾಗಿರುವುದು ಗೋಚರವಾಗುತ್ತದೆ.

ಹಳೇ ಮೈಸೂರು

2013

ಕಾಂಗ್ರೆಸ್- 31

ಬಿಜೆಪಿ- 5

ಜೆಡಿಎಸ್-22

2018

ಕಾಂಗ್ರೆಸ್- 20

ಬಿಜೆಪಿ- 17

ಜೆಡಿಎಸ್-25

ಈ ಬಾರಿ ಬೆಂಗಳೂರು ನಗರ ಪ್ರಾಂತ್ಯದಲ್ಲಿ ಮಾತ್ರ ಕಾಂಗ್ರೆಸ್ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಕಳೆದ ಬಾರಿ ೧೩ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿಯೂ ಅಷ್ಟೇ ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ ಕಳೆದ ಬಾರಿ ೧೨ ಸ್ಥಾನಗಳನ್ನು ಪಡೆದಿದ್ದರೆ ಈ ಬಾರಿ ೧೧ ಸ್ಥಾನಗಳನ್ನು ಪಡೆದಿದೆ. ಜೆಡಿಎಸ್ ಕಳೆದ ಬಾರಿ ೩ ಸ್ಥಾನಗಳನ್ನು ಗೆದ್ದಿದ್ದರೆ, ಈ ಬಾರಿ ೨ ಸ್ಥಾನಗಳನ್ನಷ್ಟೇ ಗೆದ್ದಿದೆ. ಬೆಂಗಳೂರು ನಗರದ ೨ ಸ್ಥಾನಗಳಲ್ಲಿ ಇನ್ನೂ ಚುನಾವಣೆ ನಡೆದಿಲ್ಲ. ಬೆಂಗಳೂರು ನಗರದಲ್ಲಿ ಜೆಡಿಎಸ್ ಪ್ರಭಾವ ಕಡಿಮೆ ಇರುವ ಕಾರಣದಿಂದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಆಗಿರುವ ನೇರ ಹೋರಾಟ ಕಾಂಗ್ರೆಸ್ಗೆ ಲಾಭ ತಂದುಕೊಟ್ಟಿರಬಹುದು ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

ಬೆಂಗಳೂರು ನಗರ

2013

ಕಾಂಗ್ರೆಸ್- 13

ಬಿಜೆಪಿ- 12

ಜೆಡಿಎಸ್-3

2018

ಕಾಂಗ್ರೆಸ್- 13

ಬಿಜೆಪಿ- 11

ಜೆಡಿಎಸ್-2

ಮಧ್ಯ ಕರ್ನಾಟಕದ ಮೂರು ಜಿಲ್ಲೆಗಳ ೨೪ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕಾಂಗ್ರೆಸ್ ೧೧ ಗೆದ್ದುಕೊಂಡಿದ್ದರೆ, ಈ ಬಾರಿ ಕೇವಲ ಆರು ಸ್ಥಾನಗಳನ್ನು ಗಳಿಸಿದೆ. ಕಳೆದ ಬಾರಿ ಕೇವಲ ೪ ಸ್ಥಾನಗಳಿಗೆ ತೃಪ್ತಿಪಡೆದಿದ್ದ ಬಿಜೆಪಿ ಈ ಬಾರಿ ೧೧ ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಎಸ್ ಮಧ್ಯ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ನಷ್ಟ ಮಾಡಿಕೊಂಡಿದೆ. ೨೦೧೩ರಲ್ಲಿ ೯ ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಈ ಬಾರಿ ೨ ಸ್ಥಾನಗಳನ್ನಷ್ಟೇ ಗೆದ್ದುಕೊಂಡಿದೆ. ಬಿಜೆಪಿ ಈ ಪ್ರಾಂತದಲ್ಲಿ ಲಾಭ ಪಡೆದುಕೊಳ್ಳುವ ನಿರೀಕ್ಷೆ ಇತ್ತು. ಮಧ್ಯ ಕರ್ನಾಟಕದಲ್ಲಿ ಲಿಂಗಾಯತ/ವೀರಶೈವ ವಿಚಾರವಾಗಿ ಬಹಳ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಬಿಜೆಪಿ ಈ ವಿಚಾರವಾಗಿ ಲಾಭ ಮಾಡಿಕೊಂಡಿದೆ ಎನ್ನುವುದು ಚುನಾವಣಾ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ : ಕರ್ನಾಟಕ ಫಲಿತಾಂಶ; ನಿಜಕ್ಕೂ ಯಾರು ಬೀಗಬೇಕು, ಯಾರು ಆತಂಕಪಡಬೇಕು?

ಮಧ್ಯ ಕರ್ನಾಟಕ

2013

ಕಾಂಗ್ರೆಸ್- 11

ಬಿಜೆಪಿ- 4

ಜೆಡಿಎಸ್-9

2018

ಕಾಂಗ್ರೆಸ್- 6

ಬಿಜೆಪಿ- 11

ಜೆಡಿಎಸ್-2

ಕರಾವಳಿ ಮೂರು ಜಿಲ್ಲೆಗಳು ಈ ಬಾರಿ ಬಿಜೆಪಿ ಅಲೆಯಲ್ಲಿ ಕೊಚ್ಚಿ ಹೋಗಿವೆ. ಕರಾವಳಿಯಲ್ಲಿ ೨೦೧೩ರಲ್ಲಿ ೧೩ ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ೩ ಸ್ಥಾನಗಳನ್ನಷ್ಟೇ ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಕೇವಲ ೩ ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ೧೬ ಸ್ಥಾನಗಳನ್ನು ಗೆದ್ದುಕೊಂಡು ದೊಡ್ಡ ಪ್ರಮಾಣದ ಬಲ ಪಡೆದುಕೊಂಡಿದೆ. ಕರಾವಳಿಯಲ್ಲಿ ಬಿಜೆಪಿಯ ಕೋಮುವಾದದ ರಾಜಕೀಯಕ್ಕೆ ಬೆಲೆ ಸಿಕ್ಕಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿ ಕಾರ್ಯಕರ್ತರ ಕೊಲೆ, ಕೋಮು ಗಲಭೆಗಳು ಮತ್ತು ಬಿಜೆಪಿಯ ಕಟ್ಟರ್ ಪಂಥೀಯ ರಾಜಕಾರಣಿಗಳು ಸತತ ರ್ಯಾಲಿಗಳನ್ನು ಮಾಡಿರುವುದು ಕರಾವಳಿಯಲ್ಲಿ ಬಿಜೆಪಿ ಅಲೆ ಬೀಸಲು ಕಾರಣ ಎಂದೂ ವಿಶ್ಲೇಷಿಸಲಾಗುತ್ತಿದೆ.

ಕರಾವಳಿ ಕರ್ನಾಟಕ

2013

ಕಾಂಗ್ರೆಸ್- 13

ಬಿಜೆಪಿ- 3

ಜೆಡಿಎಸ್-0

2018

ಕಾಂಗ್ರೆಸ್- 3

ಬಿಜೆಪಿ- 16

ಜೆಡಿಎಸ್-0

ಮುಂಬೈ ಕರ್ನಾಟಕದಲ್ಲಿ ೨೦೧೩ರ ಚುನಾವಣೆಯಲ್ಲಿ ೩೧ ಸ್ಥಾನಗಳನ್ನು ಪಡೆದುಕೊಂಡಿದ್ದ ಕಾಂಗ್ರೆಸ್ ಈ ಬಾರಿ ಕೇವಲ ೧೭ ಸ್ಥಾನಗಳಿಗಷ್ಟೇ ತೃಪ್ತಿ ಪಡೆದಿದೆ. ಬಿಜೆಪಿ/ಕೆಜೆಪಿ/ಬಿಎಸ್ಆರ್ ಸೇರಿಕೊಂಡು ಕಳೆದ ಬಾರಿ ೧೬ ಸ್ಥಾನಗಳನ್ನಷ್ಟೇ ಗೆದ್ದಿದ್ದವು. ಆದರೆ ಈ ಬಾರಿ ಬಿಜೆಪಿ ಪಡೆ ಮುಂಬೈ ಭಾಗದಲ್ಲಿ ಬರೋಬ್ಬರಿ ೩೦ ಸ್ಥಾನಗಳನ್ನು ಗೆದ್ದುಕೊಂಡಿವೆ. ಜೆಡಿಎಸ್ ಕಳೆದ ಬಾರಿ ೧ ಸ್ಥಾನ ಪಡೆದಿದ್ದರೆ, ಈ ಬಾರಿ ೨ ಸ್ಥಾನಗಳನ್ನು ಪಡೆದುಕೊಂಡಿದೆ. ಲಿಂಗಾಯತ ಸಮುದಾಯದ ಬಾಹುಳ್ಯವಿರುವ ಪ್ರಾಂತ ಎಂದೂ ಈ ಭಾಗವನ್ನು ತಿಳಿಯಲಾಗುತ್ತದೆ. ಹೀಗಾಗಿ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳುವ ಕಾಂಗ್ರೆಸ್ ಪ್ರಯತ್ನಕ್ಕೆ ಬೆಲೆ ಸಿಗಲಿಲ್ಲ ಎಂದೂ ಹೇಳಲಾಗುತ್ತಿದೆ. ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಹೆಚ್ಚು ನಷ್ಟ ಮಾಡಿಕೊಳ್ಳದೇ ಇದ್ದರೂ ಕಳೆದ ಬಾರಿಯ ಸ್ಥಾನಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ೨೦೧೩ರಲ್ಲಿ ಕಾಂಗ್ರೆಸ್ ೨೩ ಸ್ಥಾನಗಳನ್ನು ಗೆದ್ದುಕೊಂಡರೆ, ಈ ಬಾರಿ ೨೦ ಸ್ಥಾನಗಳನ್ನು ಗಳಿಸಿದೆ. ಬಿಜೆಪಿಗೆ ಕಳೆದ ಬಾರಿ ೧೦ ಸ್ಥಾನಗಳು ಸಿಕ್ಕಿದ್ದರೆ, ಈ ಬಾರಿ ೧೬ಕ್ಕೆ ಏರಿದೆ. ಜೆಡಿಎಸ್ ಕಳೆದ ಬಾರಿಯ ೫ ಸ್ಥಾನಗಳನ್ನು ಉಳಿಸಿಕೊಂಡಿದೆ. ಹೈದರಾಬಾದ್ ಕರ್ನಾಟಕ ಭಾಗವೂ ಲಿಂಗಾಯತ ಸಮುದಾಯ ಹೆಚ್ಚು ಪ್ರಾಬಲ್ಯ ಹೊಂದಿರುವ ಪ್ರದೇಶ. ವಾಸ್ತವದಲ್ಲಿ ಲಿಂಗಾಯತ ವಿಚಾರವೇ ಚುನಾವಣೆಯಲ್ಲಿ ಮುಖ್ಯಪಾತ್ರ ವಹಿಸುತ್ತಿದ್ದಲ್ಲಿ ಇಲ್ಲಿ ಕಾಂಗ್ರೆಸ್‌ಗೆ ದೊಡ್ಡ ಲಾಭ ಅಥವಾ ನಷ್ಟ ಮಾಡಬೇಕಾಗಿತ್ತು. ಆದರೆ ಚುನಾವಣಾ ಫಲಿತಾಂಶ ಅಂತಹ ಯಾವುದೇ ವಿಚಾರಕ್ಕೆ ಪುಷ್ಠಿ ನೀಡುವುದಿಲ್ಲ.

ಮುಂಬೈ ಕರ್ನಾಟಕ

2013

ಕಾಂಗ್ರೆಸ್- 31

ಬಿಜೆಪಿ- 16

ಜೆಡಿಎಸ್-1

2018

ಕಾಂಗ್ರೆಸ್- 17

ಬಿಜೆಪಿ- 30

ಜೆಡಿಎಸ್-2

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More