ಮಲೆನಾಡು, ಮಧ್ಯ ಕರ್ನಾಟಕದಲ್ಲಿ ಕೇಸರಿ ಕಲರವ; ಕಾಂಗ್ರೆಸ್ ಅತಿರಥರಿಗೆ ಸೋಲು

ಐದು ವರ್ಷಗಳ ಬಳಿಕ ಬಿಜೆಪಿ ಮತ್ತೊಮ್ಮೆ ಮಲೆನಾಡು ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ತನ್ನ ಪ್ರಭುತ್ವ ಸ್ಥಾಪಿಸಿದೆ. ಶಿವಮೊಗ್ಗ, ದಾವಣಗೆರೆ ಜಿಲ್ಲೆಯಲ್ಲಂತೂ ಎಲ್ಲಾ ಲೆಕ್ಕಾಚಾರ ತಲೆಕೆಳಗೆ ಮಾಡಿ ಕಮಲ ಪಾಳೆಯದಲ್ಲಿ ಆಶ್ಚರ್ಯವಾಗುವ ರೀತಿಯಲ್ಲಿ ಜಯಭೇರಿ ಬಾರಿಸಿದೆ

ರಾಜ್ಯ ರಾಜಕಾರಣ ಕಳೆದ ಒಂದು ದಶಕದ ಬಳಿಕ, ಹಿಂದೆ ಎಲ್ಲಿಂದ ಆರಂಭವಾಗಿತ್ತೋ, ಅಲ್ಲಿಗೇ ವಾಪಸು ಬಂದು ನಿಂತಂತಾಗಿದೆ. ಮೂರು ಪ್ರಮುಖ ಪಕ್ಷಗಳಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೆ, ಕಾಂಗ್ರೆಸ್ ಎರಡನೇ ಅತಿದೊಡ್ಡ ಪಕ್ಷವಾಗಿ ಮತ್ತು ಜೆಡಿಎಸ್‌ ಕಿಂಗ್ ಮೇಕರ್ ಆಗಿ ಹೊರಹೊಮ್ಮಿದೆ.

ಬಿಜೆಪಿಗೆ ಅತಿಹೆಚ್ಚು ಸ್ಥಾನಗಳನ್ನು ಕೊಟ್ಟಿರುವ ಮತದಾರ, ಅದೇ ಹೊತ್ತಿಗೆ ಅವರ ಮಿಷನ್‌ ೧೫೦ಯ ಬಲೂನಿಗೆ ಸೂಜಿಮೊನೆ ತಾಕಿಸುವ ಮೂಲಕ ಅಧಿಕಾರದ ಕುರ್ಚಿಯ ಸಮೀಪಕ್ಕೆ ಹೋಗಿಯೂ ಠುಸ್ಸೆಂದು ಕುಸಿದು ಬೀಳುವ ಅತಂತ್ರ ಸ್ಥಿತಿ ಸೃಷ್ಟಿಸಿದ್ದಾನೆ. ಹಾಗಾಗಿ, ಸದ್ಯಕ್ಕೆ ರಾಜ್ಯದ ರಾಜಕೀಯ ಬೆಳವಣಿಗೆಗಳು ಇಡೀ ದೇಶದ ಗಮನ ಸೆಳೆದಿವೆ.

 • ಬಿಜೆಪಿಯ ಸ್ಥಾನಗಳಿಕೆಯ ಚಿತ್ರಣ ನೋಡಿದರೆ. ರಾಜ್ಯದ ಉಳಿದೆಲ್ಲ ಕಡೆಗಿಂತಲೂ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ಮಧ್ಯ ಕರ್ನಾಟಕ ಕಮಲ ಪಾಳೆಯಕ್ಕೆ ದೊಡ್ಡ ಬಲ ತುಂಬಿದೆ ಎಂಬುದು ಎದ್ದುಕಾಣುವ ಸಂಗತಿ. ಸ್ಥಾನಗಳಿಕೆಯ ವಿಷಯದಲ್ಲಿ ಬಹುತೇಕ ೨೦೦೯ರ ಚುನಾವಣೆ ಈ ಭಾಗದಲ್ಲಿ ಮರುಕಳಿಸಿದಂತಾಗಿದ್ದು, ನಾಲ್ಕು ಜಿಲ್ಲೆಗಳ ಒಟ್ಟು ೨೬ ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ೨೧ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ೨೦೧೩ರ ಚುನಾವಣೆಯಲ್ಲಿ ಈ ಭಾಗದಲ್ಲಿ ಒಟ್ಟು ೧೫ ಸ್ಥಾನಗಳಿಸಿ ದೊಡ್ಡ ಮಟ್ಟದ ಲಾಭ ಪಡೆದಿದ್ದ ಕಾಂಗ್ರೆಸ್ ಈ ಬಾರಿ ಕೇವಲ ೫ ಸ್ಥಾನಕ್ಕೆ ಕುಸಿದಿದೆ. ಕಳೆದ ಚುನಾವಣೆಯಲ್ಲಿ ಆರು ಸ್ಥಾನಗಳನ್ನು ಗಳಿಸಿದ್ದ ಜೆಡಿಎಸ್ ಈ ಬಾರಿ ಖಾತೆಯನ್ನೇ ತೆರೆದಿಲ್ಲ. ಅಂದರೆ, ಸಂಪೂರ್ಣ ಮಧ್ಯ ಕರ್ನಾಟಕದಿಂದ ಜೆಡಿಎಸ್ ಕಾಲ್ಕಿತ್ತಿದೆ. ಕೇಸರಿಪಡೆಯ ಅಲೆಗೆ ಸಿಲುಕಿ ಸಚಿವರು, ಮಾಜಿ ಸಚಿವರು ಸೇರಿದಂತೆ ಕಾಂಗ್ರೆಸ್ ಅತಿರಥ ಮಹಾರಥರು ಸಾಲು ಸಾಲಾಗಿ ಸೋಲು ಕಂಡಿದ್ದಾರೆ.
 • ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಭದ್ರಾವತಿ ಹೊರತುಪಡಿಸಿ ಉಳಿದ ಎಲ್ಲಾ ಕಡೆ ಬಿಜೆಪಿಯ ಕಮಲ ಅರಳಿದೆ. ಜಿಲ್ಲೆಯ ಎರಡು ಅಥವಾ ಮೂರು ಕಡೆ ಮಾತ್ರ ಬಿಜೆಪಿಯ ಗೆಲುವಿನ ಸಾಧ್ಯತೆ ಎಂಬ ಸಮೀಕ್ಷೆಗಳ ಲೆಕ್ಕಾಚಾರ ಮೀರಿ, ಜಯಭೇರಿ ಬಾರಿಸಿದ ಬಿಜೆಪಿ. ಕಳೆದ ಚುನಾವಣೆಯಲ್ಲಿ ಮೂರು ಕಾಂಗ್ರೆಸ್, ಮೂರು ಜೆಡಿಎಸ್‌ ಹಾಗೂ ಕೆಜೆಪಿ(ಉಪಚುನಾವಣೆಯಲ್ಲಿ ಬಿಜೆಪಿ) ಅಧಿಕಾರ ಹಿಡಿದಿದ್ದವು.
 • ಸಾಗರದಲ್ಲಿ ಹಿರಿಯ ಸಚಿವ ಕಾಗೋಡು ತಿಮ್ಮಪ್ಪ, ಸೊರಬದಲ್ಲಿ ಶಾಸಕ ಮಧು ಬಂಗಾರಪ್ಪ ಹಾಗೂ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕ ಶಾರದಾ ಪೂರ್ಯಾನಾಯ್ಕ ಅವರ ಸೋಲು ಒಂದು ರೀತಿಯಲ್ಲಿ ಅನಿರೀಕ್ಷಿತ.
 • ತೀರ್ಥಹಳ್ಳಿಯಲ್ಲಿ ಕೂಡ ಆರಂಭದಲ್ಲಿ ತ್ರಿಕೋನ ಸ್ಪರ್ಧೆಯನ್ನು ಊಹಿಸಲಾಗಿತ್ತಾದರೂ, ಮತದಾನದ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ಸಿನ ಕಿಮ್ಮನೆ ರತ್ನಾಕರ್ ಹಾಗೂ ಜೆಡಿಎಸ್‌ನ ಮಂಜುನಾಥ ಗೌಡ ನಡುವೆ ನೇರ ಹಣಾಹಣಿ ಎಂಬ ವಾತಾವರಣವಿತ್ತು. ಆದರೆ, ಅಂತಹ ಅಂದಾಜುಗಳನ್ನು ತಲೆಕೆಳಗು ಮಾಡಿ ಬಿಜೆಪಿಯ ಆರಗ ಜ್ಞಾನೇಂದ್ರ ಅವರು ಹತ್ತು ವರ್ಷಗಳ ಅಜ್ಞಾತವಾಸದ ಬಳಿಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.
 • ಶಿಕಾರಿಪುರದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್ ಯಡಿಯೂರಪ್ಪ ನಿರೀಕ್ಷೆಯಂತೆ ಜಯಭೇರಿ ಬಾರಿಸಿ, ತಮ್ಮ ಭದ್ರಕೋಟೆಯನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದ್ದಾರೆ. ೧೯೮೩ರ ಬಳಿಕ ೧೯೯೯ರ ಚುನಾವಣೆ ಹೊರತುಪಡಿಸಿ ನಿರಂತರ ಗೆಲುವು ಸಾಧಿಸಿದ ಹೆಗ್ಗಳಿಕೆ ಯಡಿಯೂರಪ್ಪ ಅವರದ್ದು.
 • ಭದ್ರಾವತಿಯಲ್ಲಿ ಎಂದಿನಂತೆ ಎಂ ಜೆ ಅಪ್ಪಾಜಿ ಮತ್ತು ಬಿ ಕೆ ಸಂಗಮೇಶ್ ನಡುವಿನ ಟಗರು ಕಾಳಗದ ಮೇಲಾಟ ಮುಂದುವರಿದಿದ್ದು, ಒಂದು ಬಾರಿ ಒಬ್ಬರು ಗೆದ್ದರೆ, ಮತ್ತೊಂದು ಬಾರಿ ಮತ್ತೊಬ್ಬರು ಎಂಬ ಇಲ್ಲಿನ ಅಘೋಷಿತ ನಿಯಮ ಈ ಬಾರಿಯೂ ಅನುಷ್ಠಾನಕ್ಕೆ ಬಂದಿದೆ. ಹಾಗಾಗಿ ಜೆಡಿಎಸ್ ಶಾಸಕ ಎಂ ಜೆ ಅಪ್ಪಾಜಿಯವರನ್ನು ತಳ್ಳಿಹಾಕಿರುವ ಉಕ್ಕಿನನಗರದ ಮತದಾರ, ಈ ಬಾರಿ ಕಾಂಗ್ರೆಸ್‌ನ ಬಿ ಕೆ ಸಂಗಮೇಶ್ ಅವರಿಗೆ ಮಣೆ ಹಾಕಿದ್ದಾರೆ.
 • ಚಿಕ್ಕಮಗಳೂರು ಹಿಂದುತ್ವದ ಪ್ರಯೋಗಶಾಲೆ ಎಂಬ ಹಣೆಪಟ್ಟಿ ಹಚ್ಚಿಕೊಂಡು ಬಹುತೇಕ ಎರಡು ದಶಕಗಳಾಗಿವೆ. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಭದ್ರಕೋಟೆಯಲ್ಲಿ ಮಿಶ್ರಫಲ ಸಿಕ್ಕಿತ್ತು. ಆದರೆ, ಈ ಬಾರಿ ಮತ್ತೆ ಇಡೀ ಜಿಲ್ಲೆಯ ಕೇಸರಿ ಪಡೆಯ ತೆಕ್ಕೆಗೆ ಸರಿದಿದ್ದು, ಒಟ್ಟು ಐದು ಕ್ಷೇತ್ರಗಳ ಪೈಕಿ ಒಂದು ಕಡೆ ಮಾತ್ರ ಕಾಂಗ್ರೆಸ್ ಅಸ್ತಿತ್ವ ಉಳಿಸಿಕೊಂಡಿದ್ದು, ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಮಲ ಅರಳಿದೆ. ಕಳೆದ ಬಾರಿ ಜಿಲ್ಲೆಯ ಎರಡು ಕಡೆ ಬಿಜೆಪಿ, ಎರಡು ಕಡೆ ಜೆಡಿಎಸ್ ಹಾಗೂ ಒಂದು ಕಡೆ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದ್ದವು.
 • ಅಭಿವೃದ್ಧಿ ಕಾರ್ಯಗಳ ಮೂಲಕ ಸಾಕಷ್ಟು ಜನಪ್ರಿಯತೆ, ಸರಳತೆ ಮತ್ತು ಸಭ್ಯ ರಾಜಕಾರಣದ ಹೊರತಾಗಿಯೂ ಜೆಡಿಎಸ್‌ನ ವೈಎಸ್‌ವಿ ದತ್ತ ಅವರು ಕಡೂರು ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಅಲ್ಲಿ ಬಿಜೆಪಿಯ ಬೆಳ್ಳಿ ಪ್ರಕಾಶ್ ಜಯಗಳಿಸಿದ್ದಾರೆ. ಹಾಗೇ ತೀವ್ರ ಆಡಳಿತವಿರೋಧಿ ಅಲೆಯ ಹೊರತಾಗಿಯೂ ಬಿಜೆಪಿಯ ಸಿ ಟಿ ರವಿ ಅವರು ಚಿಕ್ಕಮಗಳೂರು ಕ್ಷೇತ್ರದಲ್ಲಿ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ.
 • ಶೃಂಗೇರಿಯಲ್ಲಿ ಮೂರು ಅವಧಿ ಸತತ ಅಧಿಕಾರ ಹಿಡಿದಿದ್ದ ಬಿಜೆಪಿಯ ಜಿ ಎನ್‌ ಜೀವರಾಜ್ ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿಹೋಗಿದ್ದು, ಕಾಂಗ್ರೆಸ್ಸಿನ ಟಿ ಡಿ ರಾಜೇಗೌಡ ಸತತ ಎರಡು ಸೋಲಿನ ಬಳಿಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ತರೀಕೆಯಲ್ಲಿ ಈ ಬಾರಿ ಬಹುತೇಕ ಐವರು (ಬಿಜೆಪಿ, ಕಾಂಗ್ರೆಸ್ನ ತಲಾ ಇಬ್ಬರು, ಎರಡೂ ಪಕ್ಷಗಳ ತಲಾ ಇಬ್ಬರು ಬಂಡಾಯ ಅಭ್ಯರ್ಥಿಗಳು ಹಾಗೂ ಜೆಡಿಎಸ್‌ ಅಭ್ಯರ್ಥಿ) ಆಕಾಂಕ್ಷಿಗಳ ನಡುವೆ ಸಮಬಲದ ಸೆಣಸಾಟ ಊಹಿಸಲಾಗಿತ್ತು. ಆದರೆ, ಅಂತಿಮವಾಗಿ ಬಿಜೆಪಿಯ ಡಿ ಎಸ್ ಸುರೇಶ್ ಜಯ ಗಳಿಸಿದ್ದಾರೆ.
 • ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮ ಮತ್ತೊಮ್ಮೆ ಗೆಲುವಿನ ಅವಕಾಶದಿಂದ ವಂಚಿತರಾಗಿದ್ದು, ಮಾಜಿ ಶಾಸಕ ಬಿಜೆಪಿಯ ಎಂ ಪಿ ಕುಮಾರಸ್ವಾಮಿ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಹಾಲಿ ಶಾಸಕ ಜೆಡಿಎಸ್‌ನ ಬಿ ಬಿ ನಿಂಗಯ್ಯ ಸೋಲುಕಂಡಿದ್ದಾರೆ.
 • ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಬಾರಿ ಬಹುತೇಕ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್ ಈ ಬಾರಿ ಬಹುತೇಕ ಅಲ್ಲಿಂದ ಕಾಲುಕಿತ್ತಿದೆ. ಒಟ್ಟು ಆರು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿಯ ಕಮಲ ಅರಳಿದೆ. ಚಳ್ಳಕೆರೆಯಲ್ಲಿ ಮಾತ್ರ ಹಾಲಿ ಶಾಸಕ ಟಿ ರಘುಮೂರ್ತಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಅಸ್ತಿತ್ವ ಕಾಯ್ದುಕೊಂಡಿದ್ದಾರೆ.
 • ಹೊಳಲ್ಕೆರೆ ಮೀಸಲು ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಸಚಿವ ಎಚ್ ಆಂಜನೇಯ ಅವರು ಹೀನಾಯ ಸೋಲುಕೊಂಡಿದ್ದು, ಬಿಜೆಪಿಯ ಎಂ ಚಂದ್ರಪ್ಪ ಅವರಿಗೆ ಅಲ್ಲಿನ ಮತದಾರ ಮಣೆಹಾಕಿದ್ದಾರೆ.
 • ಗಣಿ ಧಣಿ ಆಪ್ತ ಶ್ರೀರಾಮುಲು ಸ್ಫರ್ಧೆಯ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದ್ದ ಮೊಳಕಾಲ್ಮುರು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಹಾಲಿ ಶಾಸಕ, ಬಿಜೆಪಿ ಟಿಕೆಟ್‌ ವಂಚಿತ ತಿಪ್ಪೇಸ್ವಾಮಿ ಪಕ್ಷೇತರರರಾಗಿ ಅಲ್ಲಿ ಶ್ರೀರಾಮುಲು ವಿರುದ್ಧ ಕಣಕ್ಕಿಳಿದಿದ್ದರು.
 • ಇನ್ನುಳಿದಂತೆ ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್, ಚಿತ್ರದುರ್ಗದಲ್ಲಿ ಜಿ ಎಚ್ ತಿಪ್ಪಾರೆಡ್ಡಿ ಮತ್ತು ಹಿರಿಯೂರಿನಲ್ಲಿ ಪೂರ್ಣಿಮಾ ಶ್ರೀನಿವಾಸ್ ಕಮಲವನ್ನು ಅರಳಿಸಿದ್ದಾರೆ.
 • ಮಧ್ಯಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಜಿಲ್ಲೆಯಲ್ಲಿ ಕಳೆದ ಬಾರಿ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್, ಈ ಬಾರಿ ಎರಡು ಸ್ಥಾನಕ್ಕೆ ಕುಸಿದಿದ್ದರೆ, ಕಳೆದ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಬಿಜೆಪಿ ಈ ಬಾರಿ ೬ ಸ್ಥಾನ ಕಡೆ ಖಾತೆ ತೆರೆದಿದೆ. ಕಳೆದ ಬಾರಿ ಇದ್ದ ಒಂದು ಕ್ಷೇತ್ರವನ್ನು ಕೂಡ ಈ ಬಾರಿ ಜೆಡಿಎಸ್ ಕಳೆದುಕೊಂಡಿದೆ.
 • ಸಚಿವ ಹಾಗೂ ಮಾಜಿ ಸಚಿವರ ಅಪ್ಪ-ಮಗನ ಜೋಡಿಯಲ್ಲಿ ಅಪ್ಪ ಗೆದ್ದು, ಮಗ ಸೋತಿರುವುದು ವಿಶೇಷ. ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಮರುಆಯ್ಕೆ ಆಗಿದ್ದಾರೆ. ಆದರೆ, ಅವರ ಪುತ್ರ, ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್ ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯ, ಮಾಜಿ ಸಚಿವ ಎಸ್ ಎ ರವೀಂದ್ರನಾಥ್ ವಿರುದ್ಧ ಸೋಲು ಕಂಡಿದ್ದಾರೆ.
ಇದನ್ನೂ ಓದಿ : ಡಾಟಾ ವಿಡಿಯೋ | ಬಿಜೆಪಿಯ ಭದ್ರಕೋಟೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ
 • ಹರಪನಹಳ್ಳಿಯಲ್ಲಿ ಶಾಸಕ ಎಂ ಪಿ ರವೀಂದ್ರ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡಿರುವ ಬಿಜೆಪಿಯ ಜಿ ಕರುಣಾಕರ ರೆಡ್ಡಿ ಈ ಬಾರಿ ಗೆಲುವಿನ ನಗೆ ಬೀರಿದ್ದಾರೆ. ಹರಿಹರದಲ್ಲಿ ಜೆಡಿಎಸ್ ಶಾಸಕ ಎಚ್ ಎಸ್ ಶಿವಶಂಕರ್ ಸ್ಥಾನ ಕಳೆದುಕೊಂಡಿದ್ದು, ಕಾಂಗ್ರೆಸ್ಸಿನ ಎಸ್ ರಾಮಪ್ಪ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಜಗಳೂರಿನಲ್ಲಿ ಬಿಜೆಪಿಯ ಎಸ್‌ ವಿ ರಾಮಚಂದ್ರ ಅವರು ಹಾಲಿ ಕಾಂಗ್ರೆಸ್ ಶಾಸಕ ಎಚ್ ಪಿ ರಾಜೇಶ್ ಅವರ ವಿರುದ್ಧ ಜಯ ಗಳಿಸಿದ್ದಾರೆ.
 • ಮಾಯಕೊಂಡ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಎನ್ ಲಿಂಗಣ್ಣ ಜಯ ಗಳಿಸಿದ್ದು, ಚನ್ನಗಿರಿಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ವಡ್ನಾಳ್ ರಾಜಣ್ಣ ವಿರುದ್ಧ ಬಿಜೆಪಿಯ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಹೊನ್ನಾಳಿಯಲ್ಲಿ ಶಾಸಕ ಡಿ ಜಿ ಶಾಂತನಗೌಡ ವಿರುದ್ಧ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ಜಯಭೇರಿ ಬಾರಿಸಿದ್ದಾರೆ.
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More