ದೇವೇಗೌಡರ ಕುಸ್ತಿ ಅಖಾಡದಲ್ಲಿ ಕೊನೆಗೂ ಸೋಲೊಪ್ಪಿದ ಸಿದ್ದರಾಮಯ್ಯ

ಮೈಸೂರು ಸೇರಿ ಕಾವೇರಿ ಕಣಿಯ ಐದು ಜಿಲ್ಲೆಯಲ್ಲಿ ಜೆಡಿಎಸ್ ಗೆದ್ದು ಬೀಗಿದೆ. ಇಲ್ಲಿ ದೊರತೆ ಜಾತಿ - ಮತ ಶಕ್ತಿಯಿಂದಲೇ ಕಡಿಮೆ ಸ್ಥಾನ ಪಡೆದರೂ ಸರ್ಕಾರ ರಚನೆಯ ಸದವಕಾಶ ಪಡೆಯುವ ಸಾಧ್ಯತೆಯನ್ನು ನಿಚ್ಚಳಗೊಳಿಸಿಕೊಂಡಿದೆ ಜೆಡಿಎಸ್. ಹಾಗಾದರೆ ಹೇಗಿದೆ ಈ ಭಾಗದ ಬಲಾಬಲ?

ರಾಜ್ಯದ ಎಲ್ಲೆಡೆಯ ಫಲಿತಾಂಶ ಹೇಗೇ ಇರಲಿ. ಕಾವೇರಿ ಕಣಿವೆಯ ಐದು ಜಿಲ್ಲೆಗಳಲ್ಲಿ ನಡೆದದ್ದು ಸಿದ್ದರಾಮಯ್ಯ ಮತ್ತು ಎಚ್‌ ಡಿ ದೇವೇಗೌಡರ ನಡುವಿನ ನೇರ ಹಣಾಹಣಿ. ಈ ಭಾಗದ ೩೧ ಕ್ಷೇತ್ರಗಳಲ್ಲಿ ಕೆಲವೇ ಕ್ಷೇತ್ರಗಳ ಹೊರತು ಉಳಿದೆಲ್ಲೆಡೆ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳೇ ಸೆಣಸಿದ್ದರು. ೫ ವರ್ಷದ ಹಿಂದೆ ಹೆಚ್ಚು ಸ್ಥಾನ ಗೆದ್ದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಈ ಬಾರಿ ಸೋತು ಸುಣ್ಣವಾಗಿದ್ದಾರೆ. ಹಿಂದಿನ ಅವಧಿಗಿಂತ ಹೆಚ್ಚು ಸ್ಥಾನ ಪಡೆದಿರುವ ಗೌಡರ ಪಡೆ, ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಜೊತೆ ಒಳಮೈತ್ರಿ ಮಾಡಿಕೊಂಡಿದ್ದು ಗುಟ್ಟಿನ ಸಂಗತಿಯೇನೂ ಆಗಿರಲಿಲ್ಲ.

ಪ್ರಚಾರದ ವೇಳೆ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಆಡಿದ, “ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ,’’ “ನನ್ನನ್ನು ಬೆಳೆಸಿದ್ದು ದೇವೇಗೌಡ ಅಲ್ಲ,” “ಜೆಡಿಎಸ್ ಬಿಜೆಪಿಯ ಬಿ ಟೀಂ,’’ ಇತ್ಯಾದಿ ದುಬಾರಿ ಮಾತು, ಟೀಕೆಗಳಿಂದ ಸಿಡಿದೆದ್ದ ಈ ಭಾಗದ ಒಕ್ಕಲಿಗ ಸಮುದಾಯ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಹಕ್ಕು ಚಲಾಯಿಸಿದ್ದು ಚಾಮುಂಡೇಶ್ವರಿ ಸಹಿತ ಹಲವು ಕ್ಷೇತ್ರಗಳ ಫಲಿತಾಂಶದಲ್ಲಿ ವ್ಯಕ್ತವಾಗಿದೆ. ಆದಾಗ್ಯೂ,ಗೌಡರ 'ಜಾತಿ-ಮತ' ಬಲವನ್ನು ಸ್ವಯಂ ಸೋಲಿನ ಅನುಭವದ ಸಮೇತ ಒಪ್ಪಿಕೊಂಡಂತಿರುವ ಅವರ ಒಂದು ಕಾಲದ ಒಡನಾಡಿ ಸಿದ್ದರಾಮಯ್ಯ, ರಾಜ್ಯಾಧಿಕಾರವನ್ನು ಗೌಡರು ಮತ್ತವರ ಕುಮಾರರ ‘ವಶ'ಕ್ಕೆ ಬಳುವಳಿ ರೂಪದಲ್ಲಿ ಒಪ್ಪಿಸುವಂತೆ ತೋರುತ್ತಿದೆ. ಜಾತಿ-ಮತ ಎತ್ತಿಕಟ್ಟುವ, ವೈಯಕ್ತಿಕ ಮಟ್ಟದ ನಿಂದನೆಯ ಮತ್ತು ನೀನಾ-ನಾನಾ ಎನ್ನುವಂಥ ಹಣಾಹಣಿ ನಡೆಸಿದ್ದವರು, ಈಗ ಒಂದಾಗಿ ಸಾಗುವ ನಿರ್ಧಾರಕ್ಕೆ ಮುಂದಾಗಿದ್ದಾರೆ. ಅಂದುಕೊಂಡಂತೆ ಅತಂತ್ರ ರಾಜಕೀಯ ಸ್ಥಿತಿಯ ಲಾಭ ಪಡೆಯುವಲ್ಲಿ ಜೆಡಿಎಸ್ ಯಶಸ್ವಿಯಾದಂತೆ ತೋರುತ್ತಿದೆ. “ಈ ಬಾರಿ ಕುಮಾರಣ್ಣ,’’ ಎಂಬ ಘೋಷಣೆಗೆ ಹೆಚ್ಚು ಶಕ್ತಿ, ಬಲ ತುಂಬಿರುವ ಈ ಭಾಗದ ಪ್ರಬಲ ಒಕ್ಕಲಿಗ ಸಮುದಾಯವೇ ಇದಕ್ಕೆಲ್ಲ ಕಾರಣ, ಪ್ರೇರಣೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಕಾವೇರಿ ಕಣಿವೆ ಪ್ರದೇಶದ ಐದು ಜಿಲ್ಲೆಗಳಲ್ಲಿ ೨೦೧೩ರ ಚುನಾವಣೆಯಲ್ಲಿ ಕಾಂಗ್ರೆಸ್ ೧೬ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಜೆಡಿಎಸ್ ೧೨, ಬಿಜೆಪಿ ಎರಡು ಮತ್ತು ಸರ್ವೋದಯ ಕರ್ನಾಟಕ ಒಂದು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದವು. ಒಕ್ಕಲಿಗ ಪ್ರಾಬಲ್ಯದ ಈ ಜಿಲ್ಲೆಗಳಲ್ಲಿ ಈ ಬಾರಿ ಎಚ್‌ ಡಿ ದೇವೇಗೌಡ ಮತ್ತು ಎಚ್‌ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜಯಭೇರಿ (೧೮ ಕ್ಷೇತ್ರ) ಬಾರಿಸಿದ್ದು, ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ (೦೫) ನೆಲ ಕಚ್ಚಿದೆ. ಬಿಜೆಪಿ ಮತ್ತೆ ತನ್ನ ಅಸ್ತಿತ್ವ (೭) ಅರಳಿಸಿಕೊಂಡಿದ್ದು ಕೆಲವೆಡೆ ಅಚ್ಚರಿಯ ಗೆಲುವು ದಾಖಲಿಸಿದೆ. ಜೆಡಿಎಸ್ ಜೊತೆ ಮೈತ್ರಿ ಹೊಂದಿದ್ದ ಬಿಎಸ್ಪಿ ಒಂದು ಕಡೆ ಗೆದ್ದಿದೆ. ಇಲ್ಲಿ ಕೆಲವು ಘಟಾನುಘಟಿಗಳು ಸೋತಿದ್ದಾರೆ. ಅಚ್ಚರಿಯ ರೀತಿಯಲ್ಲಿ ಕೆಲವರ ಅದೃಷ್ಟ ಕುಲಾಯಿಸಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕೆಲವೆಡೆ ಜೆಡಿಎಸ್ ಮತ್ತು ಜೆಡಿಎಸ್-ಬಿಜೆಪಿ 'ಸಖ್ಯ ರಾಜಕಾರಣ'ವೇ ಕಾರಣವಾಗಿರುವುದು ಗಮನಾರ್ಹ ಅಂಶ.

ಮೈಸೂರು ಜಿಲ್ಲೆಯ ೧೧ ಕ್ಷೇತ್ರಗಳಲ್ಲಿ ಜೆಡಿಎಸ್ ೫ ಸ್ಥಾನಗಳಲ್ಲಿ (ಕಳೆದ ಬಾರಿ ೩) ಗೆದ್ದಿದೆ. ಕಳೆದ ಬಾರಿ ೮ ಕಡೆ ಗೆದ್ದಿದ್ದ ಕಾಂಗ್ರೆಸ್, ಮೂರು ಕ್ಷೇತ್ರಕ್ಕೆ ಕುಸಿದಿದೆ, ಕಮಲ ಅರಳಿಸಿದೆ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ, ತಿ ನರಸೀಪುರದಲ್ಲಿ ಎಚ್‌ ಸಿ ಮಹದೇವಪ್ಪ, ಪಿರಿಯಾಪಟ್ಟಣದಲ್ಲಿ ಕೆ ವೆಂಕಟೇಶ್ ಮತ್ತಿತರ ಘಟಾನುಘಟಿಗಳು ಸೋತಿದ್ದಾರೆ. ಎಚ್‌ ಡಿ ಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್‌ ಚಿಕ್ಕಮಾದು ತಂದೆಯ ನಿಧನದ ಅನುಕಂಪದ ಲಾಭ ಪಡೆದಿದ್ದಾರೆ. ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದ ಎಚ್‌ ವಿಶ್ವನಾಥ್ ಹುಣಸೂರಿನಲ್ಲಿ ಗೆದ್ದರೆ, ವಿ ಶ್ರೀನಿವಾಸ ಪ್ರಸಾದ್ ನಂಜನಗೂಡಿನಲ್ಲಿ ತಮ್ಮ ಅಳಿಯನನ್ನು ಗೆಲ್ಲಿಸಿಕೊಂಡಿದ್ದಾರೆ. ವರುಣಾದಲ್ಲಿ ಮಗ ಯತೀಂದ್ರ ಗೆದ್ದದ್ದಷ್ಟೇ ಸಿದ್ದರಾಮಯ್ಯ ಪಾಲಿನ ಸಮಾಧಾನ. ಕಳೆದ ಬಾರಿ ಶೂನ್ಯ ಸಂಪಾದಿಸಿದ್ದ ಬಿಜೆಪಿ, ಮೂರು ಕ್ಷೇತ್ರಗಳಲ್ಲಿ (ಕೃಷ್ಣರಾಜ-ರಾಮದಾಸ್, ಚಾಮರಾಜ-ನಾಗೇಂದ್ರ, ನಂಜನಗೂಡು-ಹರ್ಷವರ್ಧನ) ಜಯ ದಾಖಲಿಸಿದೆ.

ಮಂಡ್ಯ ಜಿಲ್ಲೆಯಲ್ಲಿ ಎಲ್ಲ ಏಳೂ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ. ಗೌಡರ ಕುಟುಂಬದ ವಿರುದ್ಧ ಬಂಡೆದ್ದು, ಕಾಂಗ್ರೆಸ್ ಸೇರಿ ಕಣಕ್ಕಿಳಿದಿದ್ದ ಚಲುವರಾಯಸ್ವಾಮಿ (ನಾಗಮಂಗಲ) ಮತ್ತು ರಮೇಶ್ ಬಂಡೀಸಿದ್ದೇಗೌಡರ (ಶ್ರೀರಂಗಪಟ್ಟಣ) ಆಟ ನಡೆದಿಲ್ಲ. ಕಳೆದ ಬಾರಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಮಳವಳ್ಳಿ, ಮಂಡ್ಯ, ಸರ್ವೋದಯ ಕರ್ನಾಟಕದ ಅಭ್ಯರ್ಥಿ ಗೆದ್ದಿದ್ದ ಮೇಲುಕೋಟೆ ಕ್ಷೇತ್ರಗಳಲ್ಲಿ ಕೂಡ ಜೆಡಿಎಸ್ ಗೆದ್ದಿದೆ. ಕೆ ಎಸ್‌ ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಪರ ವ್ಯಕ್ತವಾಗಿದ್ದ ಅನುಕಂಪದ ಅಲೆ ಮತಗಳಾಗಿ ಪರಿವರ್ತನೆ ಆಗಿಲ್ಲ. ಇಲ್ಲಿ ಸಂಸದ ಸಿ ಎಸ್ ಪುಟ್ಟರಾಜು ಗೆಲುವು ದಾಖಲಿಸಿದ್ದಾರೆ. ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದ ನಟ ಅಂಬರೀಶ್, ಕೊನೆಯಲ್ಲಿ ಜೆಡಿಎಸ್ ಪರ ಒಲವು ತೋರಿದ್ದು ಮಂಡ್ಯ ಸಹಿತ ಹಲವೆಡೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ.

ಚಾಮರಾಜನಗರದಲ್ಲಿ ಕಳೆದ ಬಾರಿ ಎಲ್ಲ ೪ ಕ್ಷೇತ್ರಗಳಲ್ಲಿ ಗೆದ್ದಿದ್ದ ಕಾಂಗ್ರೆಸ್, ಈ ಬಾರಿ ಎರಡು ಕ್ಷೇತ್ರಗಳನ್ನು ಕೈಚೆಲ್ಲಿದೆ. ಚಾಮರಾಜನಗರ ಕ್ಷೇತ್ರದಲ್ಲಿ ಸಿ ಎಸ್ ಪುಟ್ಟರಂಗಶೆಟ್ಟಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದರೆ, ಹನೂರಿನಲ್ಲಿ ಆರ್ ನರೇಂದ್ರ ಗೆದ್ದು ಪಕ್ಷದ ಮರ್ಯಾದೆ ಉಳಿಸಿದ್ದಾರೆ. ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿದ್ದ ಗೀತಾ ಮಹದೇವ ಪ್ರಸಾದ್, ತಮ್ಮ ಗೆಲುವನ್ನು ನವೀಕರಿಸಿಕೊಳ್ಳುವಲ್ಲಿ ಸೋತಿದ್ದಾರೆ. ಇಲ್ಲಿ ಸತತ ಸೋಲು ಅನುಭವಿಸುತ್ತಿದ್ದ ಬಿಜೆಪಿಯ ನಿರಂಜನ ಕುಮಾರ್‌ ಕೊನೆಗೂ ಗೆಲುವಿನ ನಗೆ ಬೀರಿದ್ದಾರೆ. ಅದೇ ರೀತಿ, ಕೊಳ್ಳೇಗಾಲದಲ್ಲಿ ಸತತ ಸೋಲು ಅನುಭವಿಸುತ್ತಿದ್ದ ಬಿಎಸ್ಪಿಯ ಎನ್ ಮಹೇಶ್ ಗೆಲುವಿನ ಸವಿ ಉಂಡಿದ್ದಾರೆ. ಸಂತೇಮರಹಳ್ಳಿಯಲ್ಲಿ ಒಂದು ಮತದ ಅಂತರದಲ್ಲಿ ಸೋತು, ಸೋಲಿನ ಸುಳಿಯಲ್ಲೇ ಮುಳುಗಿರುವ ಎ ಆರ್‌ ಕೃಷ್ಣಮೂರ್ತಿ, ಕಾಂಗ್ರೆಸ್ ಸೇರಿಯೂ ಗೆಲುವನ್ನು ದಕ್ಕಿಸಿಕೊಳ್ಳುವಲ್ಲಿ ಸೋತಿದ್ದಾರೆ.

ಗೌಡರ ತವರು ಹಾಸನದಲ್ಲಿ ಕೂಡ ಒಂದು ಕ್ಷೇತ್ರದ ಹೊರತು ಎಲ್ಲ ಆರು ಕ್ಷೇತ್ರಗಳಲ್ಲಿ ಜೆಡಿಎಸ್ ಜಯಭೇರಿ ಭಾರಿಸಿದೆ. ಹಾಸನ ಕ್ಷೇತ್ರದಲ್ಲಿ ನಾಲ್ಕು ಅವಧಿ ಶಾಸಕರಾಗಿದ್ದ ಪ್ರಕಾಶ್ ಅವರಿಗೆ ವಿಶ್ರಾಂತಿ ನೀಡಿದ ಮತದಾರರು, ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡಗೆ ಮಣೆ ಹಾಕಿದ್ದಾರೆ. ಕುತೂಹಲ ಕೆರಳಿಸಿದ್ದ ಹೊಳೆನರಸೀಪುರದಲ್ಲಿ ಕಾಂಗ್ರೆಸ್ ಹುರಿಯಾಳು ಬಾಗೂರು ಮಂಜೇಗೌಡರನ್ನು ಎಚ್‌ ಡಿ ರೇವಣ್ಣ ೩೦ ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಮಣಿಸಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಕಾಂಗ್ರೆಸ್ ಅಬ್ಬರ ಎಬ್ಬಿಸಿದ್ದ ಎ ಮಂಜು ಅವರನ್ನು ಅರಕಲಗೂಡಿನಲ್ಲಿ ಮಣಿಸಿದ್ದಾರೆ ಎ ಟಿ ರಾಮಸ್ವಾಮಿ. ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೀರ್ತನಾ ಗೆ ಅನುಕಂಪ ಕೈ ಹಿಡಿದಿಲ್ಲ. ಇಲ್ಲಿ ಕೂಡ ಜೆಡಿಎಸ್‌ನ ಲಿಂಗೇಶ್ ಗೆದ್ದಿದ್ದಾರೆ. ಕೊಡಗಿನಲ್ಲಿ ಈ ಹಿಂದಿನಂತೆಯೇ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಹಿಡಿತ ಮುಂದುವರಿಸಿದೆ.

ಇದನ್ನೂ ಓದಿ : ಮತದಾನದ ನಂತರ ಸಿದ್ದರಾಮಯ್ಯ, ಬಿಎಸ್‌ವೈ, ಎಚ್‌ಡಿಕೆ ಹೇಳಿದ್ದೇನು?

ಈ ಭಾಗದಲ್ಲಿ ಕಾಂಗ್ರೆಸ್ ಪತನಕ್ಕೆ ಸಿದ್ದರಾಮಯ್ಯ ವಿರುದ್ಧ ಪ್ರಬಲ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯ ಹೊಂದಿದ ಸಿಟ್ಟಿನ ಜೊತೆಗೆ, ಹಲವು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಇದ್ದ ವ್ಯಕ್ತಿಗತ ಸಿಟ್ಟು ಕೂಡ ಕಾರಣ. ದಲಿತ, ಹಿಂದುಳಿದ ವರ್ಗದ ಮತಗಳು ಕೂಡ ಕಾಂಗ್ರೆಸ್ ಅಭ್ಯರ್ಥಿಗಳ ಪರ ಕ್ರೋಢೀಕರಣಗೊಂಡಿಲ್ಲ ಎನ್ನುವುದು ಹಲವು ಕ್ಷೇತ್ರಗಳ ಫಲಿತಾಂಶದಲ್ಲಿ ದೃಢವಾಗಿದೆ. ತಿ ನರಸೀಪುರದಲ್ಲಿ ಸತತ ಮೂರು ಬಾರಿ ಗೆದ್ದಿದ್ದ ಎಚ್‌ ಸಿ ಮಹದೇವಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿ ಅಶ್ವಿನ್‌ ಕುಮಾರ್ ದುರ್ಬಲ ಅಭ್ಯರ್ಥಿಯಂತೆ ಕಂಡಿದ್ದರಾದರೂ, ಮಹದೇವಪ್ಪ ಮತ್ತು ಅವರ ಪುತ್ರನ ವಿರುದ್ಧದ ಜನರ ಸಿಟ್ಟು ಫಲಿತಾಂಶದಲ್ಲಿ ವ್ಯಕ್ತವಾಗಿದೆ. ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ತಪ್ಪಿದ್ದರಿಂದ ಲಿಂಗಾಯತ ಸಮುದಾಯ ಪ್ರತಿಭಟನೆ ವ್ಯಕ್ತಪಡಿಸಿ, ನೋಟಾ ಚಲಾಯಿಸುವ ನಿರ್ಧಾರ ಮಾಡಿತಾದರೂ ಈ ಕ್ಷೇತ್ರದಲ್ಲಿ ಬೆಜೆಪಿ ಅಭ್ಯರ್ಥಿ ತೋಟದಪ್ಪ ಬಸವರಾಜು ೩೭,೮೧೯ ಮತ ಪಡೆಯುವಲ್ಲಿ ಶಕ್ತರಾಗಿದ್ದಾರೆ. ಇಲ್ಲಿ ೧೪೯೭ ನೋಟಾ ಮತ ಚಲಾವಣೆಗೊಂಡಿವೆ ಕೂಡ. ಹಾಸನದಲ್ಲಿ ಜೆಡಿಎಸ್ ವಿರುದ್ಧ ಸಮರ ಸಾರಿದ್ದ ಎ ಮಂಜು ಅರಕಲಗೂಡು ಕ್ಷೇತ್ರದಲ್ಲಿ ಸೋತದ್ದು ಕೂಡ ನಡವಳಿಕೆಯ ಕಾರಣಕ್ಕೆ. ಸಜ್ಜನ ರಾಜಕಾರಣ ಎ ಟಿ ರಾಮಸ್ವಾಮಿ ಮಂಜು ಅಬ್ಬರವನ್ನು ಅಡಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈವರೆಗೆ ಬಿಜೆಪಿಯ 'ಬಿ ಟೀಂ' ಎನ್ನಿಸಿಕೊಳ್ಳುತ್ತಿದ್ದ ಜೆಡಿಎಸ್ ಈಗ ಕಾಂಗ್ರೆಸ್‌ನ 'ಬಿ ಪ್ಲಾನ್‌'ನ ಭಾಗವಾಗಿದೆ. ಚುನಾವಣೆಯಲ್ಲಿ ಹಣಾಹಣಿ ಹೋರಾಡಿದ್ದವರು ಸ್ಥಳೀಯವಾಗಿ ಹೇಗೆ ಒಂದಾಗಿ ನಡೆಯುತ್ತಾರೆ, ಜೆಡಿಎಸ್‌ನಿಂದ ಬಂಡೆದ್ದು ಕಾಂಗ್ರೆಸ್ ಸೇರಿ ಸೋತವರ, ಗೆದ್ದವರ ಕತೆ ಏನಾಗಬಹುದು ಎನ್ನುವ ಕುತೂಹಲ ಮೂಡಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More