ಗೋವಾ, ಮಣಿಪುರದಂತೆಯೇ ಕರ್ನಾಟಕದಲ್ಲೂ ತಂತ್ರ ಹೂಡಲಿದೆಯೇ ಬಿಜೆಪಿ? 

ಗೋವಾ, ಮಣಿಪುರ ಹಾಗೂ ಮೇಘಾಲಯಗಳಲ್ಲಿ ಅಧಿಕಾರಕ್ಕೇರಲು, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಬಿಜೆಪಿ ಮಾಡಿದ ತಂತ್ರಗಾರಿಕೆಯ ಬಗೆಗಿನ ಚರ್ಚೆ ಈಗ ಮುನ್ನೆಲೆಗೆ ಬಂದಿದೆ. ಈಗ ಕರ್ನಾಟಕದಲ್ಲಿ ಬಿಜೆಪಿಯ ಏನು ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ

ಕರ್ನಾಟಕ ವಿಧಾನಸಭೆ ಫಲಿತಾಂಶದಿಂದ ಅತಂತ್ರ ಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಬಿಜೆಪಿಯು ಯಾವು ತಂತ್ರ ಅನುಸರಿಸಲಿದೆ ಎಂಬುದು ಈಗ ಕುತೂಹಲ ಕೆರಳಿಸಿದೆ. ಪಲಿತಾಂಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾದ್ಯಕ್ಷ ಬಿ ಎಸ್‌ ಯಡಿಯೂರಪ್ಪನವರು ರಾಜ್ಯಪಾಲರನ್ನು ಬೇಟಿಯಾಗಿ ಎರಡು ದಿನ ಸಮಯ ಕೇಳಿದ್ದಾರೆ. ಇತ್ತ ಕಾಂಗ್ರೆಸ್‌ ಪಕ್ಷವು ಬೇಷರತ್ತಾಗಿ ಜೆಡಿಎಸ್‌ಗೆ ಬೆಂಬಲ ಸೂಚಿಸಿದೆ. ಈ ಬೆಂಬಲ ಒಪ್ಪಿಕೊಂಡಿರುವ ಕುಮಾರಸ್ವಾಮಿ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ರಾಜ್ಯಪಾಲರಲ್ಲಿ ಮನವಿ ಮಾಡಿದ್ದು, ರಾಜಭವನದಿಂದ ಯಾವ ನಿರ್ಧಾರ ಹೊರಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಫಲಿತಾಂಶ ಹೊರಬಂದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಬೆಂಗಳೂರಿಗೆ ದೌಡಾಯಿಸಿ ಕುಮಾರಸ್ವಾಮಿಯನ್ನು ಭೇಟಿಯಾಗಿದ್ದು, ರಾಜ್ಯ ಕಾಂಗ್ರೆಸ್‌ ಮುಖಂಡರು ದೇವೇಗೌಡರೊಂದಿಗೆ ಸಮಾಲೋಚನೆ ನಡೆಸಿದ್ದು, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ . ಈ ಹಿಂದೆ ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮದೆ ಇದ್ದರೂ ಬೇರೆ ಪಕ್ಷಗಳ ಜೊತೆ ಸೇರಿ ಸಂಖ್ಯಾಬಲ ಮುಂದಿಟ್ಟುಕೊಂಡು ಅಧಿಕಾರಕ್ಕೆ ಏರಿದೆ. ಬಿಜೆಪಿಯ ಈ ನಡೆ ಕಾಂಗ್ರೆಸ್‌ ನಾಯಕರಿಗೆ ಪಾಠ ಕಲಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಪಲಿತಾಂಶ ಹೊರಬಂದ ಬೆನ್ನಲ್ಲೇ ಕಾಂಗ್ರೆಸ್‌ ಮುಖಂಡರು ಮಾಜಿ ಪ್ರಧಾನಿ ದೇವೇಗೌಡರ ಮನೆಯ ಕದ ತಟ್ಟಿದ್ದು ಇದಕ್ಕೆ ಪುಷ್ಟಿ ಒದಗಿಸುತ್ತದೆ. ಗೋವಾ, ಮಣಿಪುರ ಹಾಗೂ ಮೇಘಾಲಯದಲ್ಲಿ ಅಧಿಕಾರಕ್ಕೇರಲು, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಬಿಜೆಪಿ ಮಾಡಿದ ತಂತ್ರಗಾರಿಕೆಯ ಬಗೆಗಿನ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಕಳೆದ ವರ್ಷ ನಡೆದ ಗೋವಾ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಕಾಂಗ್ರೆಸ್‌ ಹೊರಹೊಮ್ಮಿತು. 40 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಹೊಂದಲು ಯಾವುದೇ ಪಕ್ಷ 21 ಸ್ಥಾನ ಗಳಿಸಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 17 ಸ್ಥಾನಗಳು ದೊರೆತು, ಬಿಜೆಪಿ 13 ಸ್ಥಾನಗಳಲ್ಲಿ ಜಯ ಗಳಿಸಿತು. ಎನ್‌ಸಿಪಿ 1, ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ 3, ಗೋವಾ ಪಾರ್ವರ್ಡ್‌‌ ಪಕ್ಷ 3, ಪಕ್ಷೇತರಿಗೆ 3 ಸ್ಥಾನಗಳು ಲಭಿಸಿದ್ದವು. ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಯು ಎನ್‌‌ಸಿಪಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ, ಗೋವಾ ಪಾರ್ವರ್ಡ್‌ ಪಕ್ಷ ಹಾಗೂ ಪಕ್ಷೇತರರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾಯಿತು. ಬಿಜೆಪಿಯ ಈ ನಡೆಯನ್ನು ವಿರೋಧಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಮೊರೆಹೋಯಿತು. ತನ್ನ ಸಂಖ್ಯಾಬಲವನ್ನು ಸಾಬೀತು ಮಾಡಲು ಕಾಂಗ್ರೆಸ್‌ಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪು ಬಿಜೆಪಿ ಪರವಾಯಿತು. ಬಹುಮತವನ್ನು ಸಾಬೀತು ಮಾಡಿದ ಬಿಜೆಪಿ ನೇತೃತ್ವದ ಮೈತ್ರಿ ಸರ್ಕಾರ ಗೋವಾದಲ್ಲಿ ಅಧಿಕಾರ ಹಿಡಿಯಿತು.

ಈಶಾನ್ಯ ರಾಜ್ಯ ಮಣಿಪುರ ವಿಧಾನಸಭೆಗೆ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಒಟ್ಟು 60 ವಿಧಾನಸಭಾ ಸ್ಥಾನಗಳಲ್ಲಿ ಕಾಂಗ್ರೆಸ್‌ಗೆ 28 ಸ್ಥಾನಗಳು ಒಲಿದರೆ, ಬಿಜೆಪಿಯು 21 ಸ್ಥಾನಗಳಲ್ಲಿ ಜಯ ಗಳಿಸಿತು. 10 ಸ್ಥಾನಗಳನ್ನು ಪಕ್ಷೇತರರು ಪಡೆದರೆ, ಒಂದು ಸ್ಥಾನವನ್ನು ಟಿಎಂಸಿ ಗೆದ್ದುಕೊಂಡಿತು. ಬಹುಮತ ಸಾಧಿಸಲು 31 ಸ್ಥಾನಗಳ ಸಂಖ್ಯಾಬಲ ತೋರಿಸಬೇಕಿದ್ದ ಹಿನ್ನೆಲೆಯಲ್ಲಿ ಬಿಜೆಪಿಯು 10 ಜನ ಪಕ್ಷೇತರರನ್ನು ಸೆಳೆದು ಮನಿಪುರದಲ್ಲಿ ಅಧಿಕಾರದ ಗದ್ದುಗೆ ಏರಿತು.

ಇನ್ನೊಂದು ಈಶಾನ್ಯ ರಾಜ್ಯ ಮೇಘಾಲಯದ ರಾಜಕಾರಣದಲ್ಲಿ ನಡೆದಿದ್ದು ಇದೆಲ್ಲಕ್ಕಿಂತ ಭಿನ್ನ. ಮಾರ್ಚ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯು ಮಹಾಮೈತ್ರಿಯ ತಂತ್ರಗಾರಿಕೆಯಲ್ಲಿ ಸಫಲವಾಯಿತು. ಮೇಘಾಲಯ ವಿಧಾನಸಭೆಯಲ್ಲಿ ಒಟ್ಟು 60 ಸ್ಥಾನಗಳಿದ್ದು, ಇದರಲ್ಲಿ 21 ಸ್ಥಾನಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನ್ಯಾಷನಲ್ ಪೀಪಲ್ಸ್‌ ಪಾರ್ಟಿಯು 19 ಸ್ಥಾನಗಳನ್ನು ಪಡೆಯಿತು. ಬಿಜೆಪಿಯು ಕೇವಲ 2 ಸ್ಥಾನಗಳಲ್ಲಿ ಜಯಗಳಿಸಿತು. ಇಷ್ಟಾದರೂ, ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಬಿಜೆಪಿಯು ತಂತ್ರ ಹೆಣೆಯಿತು. ನ್ಯಾಷನಲ್ ಪೀಪಲ್ಸ್‌ ಪಕ್ಷದ ನೇತೃತ್ವದಲ್ಲಿ ಯುನೈಟೆಡ್‌ ಡೆಮಾಕ್ರಟಿಕ್‌ ಪಾರ್ಟಿ (6 ಸ್ಥಾನಗಳು), ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (4 ಸ್ಥಾನಗಳು), ಹಿಲ್‌ ಸ್ಟೇಟ್‌ ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ (2 ಸ್ಥಾನಗಳು) ಹಾಗೂ ಒಬ್ಬ ಪಕ್ಷೇತರರನ್ನು ಒಂದುಗೂಡಿಸುವಲ್ಲಿ ಬಿಜೆಪಿಯು ಮಹತ್ವದ ಪಾತ್ರ ವಹಿಸಿತು. ಈ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ದೂರವಿರಿಸುವಲ್ಲಿ ಸಫಲವಾಯಿತು.

ಇದನ್ನೂ ಓದಿ : ಉ.ಕರ್ನಾಟಕದಲ್ಲಿ ಲಿಂಗಾಯತ-ವೀರಶೈವ ಮತ ವಿಭಜನೆ ತಡೆಯಲು ಅಮಿತ್ ಶಾ ಮಠಯಾತ್ರೆ

ಕರ್ನಾಟಕದಲ್ಲಿ ಬಿಜೆಪಿ ಮುಂದಿದೆ ಇನ್ನೂ ಒಂದು ಆಯ್ಕೆ!

ಸುತ್ತು ಬಳಸಿ ಮತ್ತೊಂದು ವಿಧಾನವನ್ನೂ ಬಿಜೆಪಿ ಈಗ ಅನುಸರಿಸಬಹುದು. ಅತಿದೊಡ್ಡ ಪಕ್ಷವಾದ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ಕೊಡಬಹುದು. ಬಹುಮತ ಸಾಬೀತು ಮಾಡಲು ಎರಡು ವಾರಗಳ ಸಮಯ ನೀಡಬಹುದು. ಆ ಅವಧಿಯಲ್ಲಿ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದು. ಹೀಗೆ ಬಿಜೆಪಿಗೆ ಬೆಂಬಲಿಸಿದ ಶಾಸಕರ ವಿರುದ್ಧ ಪಕ್ಷಾಂತರ ಕಾಯ್ದೆಯನ್ವಯ ಸದಸ್ಯತ್ವ ರದ್ದು ಮಾಡುವಂತೆ ಸ್ಪೀಕರ್‌ಗೆ ಪಕ್ಷಾಂತರಿಗಳ ಪಕ್ಷ ಮನವಿ ಸಲ್ಲಿಸಬಹುದು. ಆದರೆ, ಸ್ಪೀಕರ್‌ ತಮ್ಮ ನಿರ್ಧಾರವನ್ನು ಎಷ್ಟು ವರ್ಷ ಕಾಲ ಬೇಕಾದರೂ ಮುಂದೂಡಬಹುದು. ಬಿಜೆಪಿ ಸುಗಮವಾಗಿ ಸರ್ಕಾರ ನಡೆಸುತ್ತ ಹೋಗಬಹುದು. ಕರ್ನಾಟಕದಲ್ಲಿ ಇಂಥ ಬೆಳವಣಿಗೆ ಈ ಹಿಂದೆ ನಡೆದಿದೆ. ಅದನ್ನೇ ಬಿಜೆಪಿ ಈಗ ಅನುಸರಿಸಿದರೆ ಆಶ್ಚರ್ಯವಿಲ್ಲ.

ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
ಕೇರಳದಲ್ಲಿ ಬಿಜೆಪಿಗೆ ರಾಜಕೀಯ ನೆಲೆ ಒದಗಿಸಲಿದೆಯೇ ಶಬರಿಮಲೆ ವಿವಾದ?
ಬಳ್ಳಾರಿ ಕಣದಲ್ಲಿ ಸಿದ್ದು-ರಾಮುಲು ವಾಕ್ಸಮರದಾಚೆಗೂ ಉಳಿಯುವ ಪ್ರಶ್ನೆಗಳೇನು?
Editor’s Pick More