ಕರ್ನಾಟಕ ಫಲಿತಾಂಶ; ನಿಜಕ್ಕೂ ಯಾರು ಬೀಗಬೇಕು, ಯಾರು ಆತಂಕಪಡಬೇಕು?

ಜೆಡಿಎಸ್‌ನ ಗೆಳೆಯರೊಬ್ಬರು, “ಇದು ತನ್ನ ಅಸ್ತಿತ್ವದ ಪ್ರಶ್ನೆ ಎಂಬಂತೆ ಭಾಜಪ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್‌ನವರಿಗೆ ಈ ದರ್ದು ಇಲ್ಲ,” ಎಂದದ್ದು ಇದೀಗ ನಿಜ ಎನ್ನಿಸತೊಡಗಿದೆ. ಇದಕ್ಕೆ ಕಾರಣವಾಗಿದ್ದು ಕಾಂಗ್ರೆಸ್‌ನ ಕುಖ್ಯಾತ ಸೋಂಬೇರಿತನ!

ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಭಾಜಪ  ಬೆಂಬಲಿಗರು  ಬೀಗುವುದು, ಪ್ರಗತಿಪರ ಯುವ ಗೆಳೆಯರು ಆತಂಕದಲ್ಲಿ ಬಾಯಿ  ಬಡಿದುಕೊಳ್ಳುತ್ತಿರುವುದು ನೋಡಿ ಈ ಜಾಹೀರು!

  1. ಭಾಜಪದ ಸ್ಥಾನ ಮತ್ತು ಮತ ಗಳಿಕೆ ಪ್ರಮಾಣ 2008ಕ್ಕಿಂತ ಏರಿಲ್ಲ! ಹಾಗಿದ್ದರೆ ಮೋದಿ ಅಲೆ ಎಲ್ಲಿ?  2008ರಲ್ಲಿ ಯಡಿಯೂರಪ್ಪನವರಿಗೆ ಅನುಕಂಪದ ಅಲೆ ಇತ್ತು. ಹಾಗಂತ ಭಾಜಪದ ದೊಡ್ಡ ನಾಯಕರ ಪ್ರಭಾವಿ ವರ್ಚಸ್ಸಿನ ಅನುಕೂಲ ಇರಲಿಲ್ಲ. ಏಕಾಂಗಿಯಾಗಿ ಅವರು ಇಷ್ಟು ಸ್ಥಾನ ದೊರಕಿಸಿಕೊಟ್ಟರು. ಇನ್ನು, ಹಿಂದುತ್ವದ ಪ್ರಯೋಗಶಾಲೆ ಅನ್ನಿಸಿಕೊಂಡಿರುವ ದ.ಕನ್ನಡದಲ್ಲೂ ಕಳೆದುಕೊಂಡ ಸ್ಥಾನ ಮರಳಿ ಪಡೆದರು ಅಷ್ಟೇ. ಈ ಬಾರಿ ಶಾ ಮತ್ತು ಹೈಕಮಾಂಡಿನಿಂದ ಸತತವಾಗಿ ನಿರ್ಲಕ್ಕೊಳಗಾಗಿ ಸಪ್ಪೆಯಾಗಿದ್ದ ಯಡಿಯೂರಪ್ಪನವರನ್ನು ಬೆಂಬಲಿಸದಿದ್ದರೆ ಲಿಂಗಾಯತ ನಾಯಕತ್ವ ಕೈ ತಪ್ಪುತ್ತೆ ಎಂಬ ಭಾವನೆಯಿಂದ ಉತ್ತರ ಕರ್ನಾಟಕದ ಲಿಂಗಾಯತರು ಬೆಂಬಲಿಸಿರುವ ಸಾಧ್ಯತೆ ಬಗ್ಗೆ ಭಾಜಪದ ಗೆಳೆಯರೊಬ್ಬರು ಹೇಳಿದರು. ಈ ಬಾರಿ ಸಮ್ಮೋಹಕ ನಾಯಕ ಮೋದಿ ಮತ್ತು ‘ಚಾಣಕ್ಯ' ಅಮಿತ್ ಶಾ ಇದ್ದರು, ಕಾಸೂ ಇತ್ತು, ಮಾಧ್ಯಮದ ಮಹಾಪೂರವೇ ಇತ್ತು. ಆದರೂ ಭಾಜಪ 2008ರಿಂದ ಒಂದಿಂಚೂ ಮುಂದಕ್ಕೆ ಸರಿಯಲಿಲ್ಲ; ಯಾಕೆ? ಆಡಳಿತಾರೂಢ ಪಕ್ಷವಾದ ಕಾಂಗ್ರೆಸ್ಸಿಗೆ ಈ ಬೆಳವಣಿಗೆಯನ್ನು ಸ್ಥಗಿತಗೊಳಿಸುವ ಶಕ್ತಿ ಇದ್ದ ಪುರಾವೆಗಳಿಲ್ಲ. ನಿಜಕ್ಕೂ ಈ ಕೆಲಸ ಮಾಡಿದ್ದು ಸಂಘಟಿತಗೊಂಡ ಕರ್ನಾಟಕದ ಪ್ರಗತಿಪರ ಶಕ್ತಿಗಳು.
  2. ಕಳೆದೆರಡು ವರ್ಷಗಳಿಂದ ಸಣ್ಣಪುಟ್ಟ ಸೈದ್ಧಾಂತಿಕ ಭಿನ್ನತೆ ಮರೆತು ರಾಜ್ಯದ ಪ್ರಗತಿಪರ ಶಕ್ತಿಗಳು ಒಗ್ಗೂಡಿ ಹೋರಾಟಗಳನ್ನೂ ಜನಾಭಿಪ್ರಾಯವನ್ನೂ ಸಂಘಟಿಸಿದ್ದವು. ಕರ್ನಾಟಕದ ವೈಶಿಷ್ಟ್ಯವೆಂದರೆ, ಪ್ರತಿ ಜಿಲ್ಲೆಯಲ್ಲೂ ಇಂಥ ಸಂಘಟನೆಗಳು ಕ್ರಿಯಾಶೀಲವಾದದ್ದು. ಇದರ ಪರಿಣಾಮವಾಗಿ, ಭಾಜಪದ ನೆಲೆ ವಿಸ್ತಾರಗೊಳ್ಲಲಿಲ್ಲ. ಮೋದಿ juggernut ಅನ್ನು ಹಿಮ್ಮೆಟ್ಟಿಸಲಾಗದಿದ್ದರೂ ಅದನ್ನು ಮುಂದೊತ್ತದಂತೆ ತಡೆದಿರುವುದು ಚರಿತ್ರಾರ್ಹ. ಇದು ಪ್ರಗತಿಪರರ ಗೆಲುವು.
  3. ಈ ಬಾರಿ ಆಡಳಿತ ವಿರೋಧಿ ಅಲೆಯ ಅನುಕೂಲ, ದೇಶ ಕಂಡುಕೇಳರಿಯದ 'ಮಹಾನ್ ನಾಯಕ’ ಮೋದಿ, ದೇಶ ಬೆರಗಾಗಿರುವ ‘ಚಾಣಕ್ಯ’ ಎಂಬ ಆಪಾದನೆ ಇರುವ ಅಮಿತ್ ಶಾ ಇದ್ದೂ ಅಷ್ಟೇ! ಭಾಜಪ ದಾಪುಗಾಲು ಹಾಕಲಿಲ್ಲ. ಇದರರ್ಥ, ಈ ಇಬ್ಬರೂ ಅಂಥ ಪ್ರಭಾವಿಗಳೇನೂ ಅಲ್ಲ; ಅವರ ಶಕ್ತಿಯೂ ಅತಿರಂಜಿತ ಎಂಬುದು ಸಾಬೀತಾಗಿದೆ. ವಿವರ ನೋಡಿದರೆ, ಜನ ಮತ ಹಾಕಿದ್ದು ಸ್ಥಳೀಯ ಅಸಮಾಧಾನಕ್ಕೇ ಎಂಬುದು ಸ್ಪಷ್ಟ.
  4. ಜೆಡಿಎಸ್ ಅನ್ನು ನಿರ್ಲಕ್ಷಿಸಬೇಡಿ ಎಂದು ನನ್ನಂಥವರು ಹಲವಾರು ಬಾರಿ ಹೇಳಿದ್ದಿತ್ತು. ಆದರೆ, ಸಿದ್ದರಾಮಯ್ಯನವರಿಗೆ ನಮ್ಮ ಸಾಹಿತಿ ಇತ್ಯಾದಿ ಗಡಣ ಬೆಂಬಲ ನೀಡಿದ ರೀತಿಯಲ್ಲಿ ದೇವೇಗೌಡರನ್ನು ಗೌರವದಿಂದ ಮಾತಾಡಿಸಲಿಲ್ಲ. ಸಿದ್ದರಾಮಯ್ಯನವರು ಮಾಡಿದ fatal mistake ಎಂದರೆ, ಜೆಡಿಎಸ್‌ನ ಶಾಸಕರನ್ನು ಖರೀದಿಸಿ ಅವರಿಗೆ ಟಿಕೆಟ್ ಕೊಟ್ಟಿದ್ದು. ಇದು ಅನೈತಿಕ ಎಂದು ಸಿದ್ಧರಾಮಯ್ಯನವರನ್ನು ಮೆಚ್ಚಿದ್ದ ಪ್ರಗತಿಪರ ಗುಂಪು ಹೇಳಲೇ ಇಲ್ಲ. ದೇವೇಗೌಡರ ತಣ್ಣನೆ ಸೇಡು ಗೊತ್ತಿರಬೇಕಿತ್ತು!
  5. ಇನ್ನು, ಭಾಜಪದ ಕ್ಷಣಿಕ ಸಂಭ್ರಮಕ್ಕೂ ಅರ್ಥವಿಲ್ಲ. ಕರ್ನಾಟಕದಲ್ಲಿ 1983ರಿಂದ ಸುಮಾರಾಗಿ ಪೆಂಡ್ಯುಲಂ ಥರ ಸರ್ಕಾರಗಳನ್ನು ನಮ್ಮ ಜನ ಬದಲಾಯಿಸಿದ್ದಾರೆ. ಕಾಂಗ್ರೆಸ್ ವಿರೋಧಿ ಮತಗಳು ಜನತಾದಳದಿಂದ ರಾಮಕೃಷ್ಣ ಹೆಗಡೆ ಕಾಲದಲ್ಲೇ ಇಬ್ಭಾಗವಾಗಿ ಉತ್ತರ ಕರ್ನಾಟಕ ಮತಗಳನ್ನು ಭಾಜಪಕ್ಕೆ ಧಾರೆ ಎರೆಯಲಾಗಿದೆ. ಈ ಮತಗಳು ಐದು ವರ್ಷಕ್ಕೊಮ್ಮೆ ಕಾಂಗ್ರೆಸ್ಸಿಗೆ ಸೋಲುಣಿಸುತ್ತಿವೆ. ಈ ಆವೃತ್ತವನ್ನು ಹಿಂದುತ್ವದವರು ತಮ್ಮ ಗೆಲುವು ಎಂದು ನಂಬುವುದು; ಹೌದೆಂದು ಪ್ರಗತಿಪರ ಹುಡುಗರೂ ಭಾವಿಸುವುದು ತಪ್ಪು!
  6. ಭಾಜಪ ಸ್ಥಾನ ಗೆದ್ದಾಗ ಈ ಹಿಂದುತ್ವದ ಪಡ್ಡೆ ಗುಂಪು ಹಾರಾಡುವುದು ಸದಾ ಇದೆ. ಆದರೆ ಅವರು ಗೆದ್ದಿಲ್ಲ; ಬದಲು, ಅಭಿವೃದ್ಧಿಯ ಹಂಬಲ ಇಟ್ಟುಕೊಂಡಿರುವ ಸಾಮಾನ್ಯ ಮತದಾರರು ಭಾಜಪವನ್ನು ಗೆಲ್ಲಿಸಿದ್ದಾರೆ- ಈ ಹಿಂದೆ ಕಾಂಗ್ರಸ್ಸನ್ನು ಗೆಲ್ಲಿಸಿದಂತೆ. ಆದರೆ, ಈ ಪಡ್ಡೆ ಗುಂಪು ಈ ಗೆಲುವಿನ ಮೇಲೆ ಸವಾರಿ ಮಾಡುವುದು ನಿಜ.
  7. ಭಾಜಪ ಗುಂಡುಕಲ್ಲು ಸುತ್ತಿದ ಹಾಗೆ 2008ರ ಮಟ್ಟದಲ್ಲೇ ಇದೆ. ಆದ್ದರಿಂದ ಪ್ರಗತಿಪರರ ಶ್ರಮಕ್ಕೆ ಫಲ ಸಿಕ್ಕಿದೆ. ಆದರೆ, ಕಾಂಗ್ರೆಸ್ ತನ್ನ ಕುಖ್ಯಾತ ಸೋಂಬೇರಿತನ ಮತ್ತು ನಿಷ್ಕ್ರಿಯ ಸಂತೃಪ್ತಿಗೆ ಬೆಲೆ ತೆತ್ತಿದೆ. ಜೆಡಿಎಸ್‌ನ ಗೆಳೆಯರೊಬ್ಬರು ಹೇಳಿದ ಹಾಗೆ, “ಇದು ತನ್ನ ಅಸ್ತಿತ್ವದ ಪ್ರಶ್ನೆ ಎಂಬಂತೆ ಭಾಜಪ ಮತ್ತು ಜೆಡಿಎಸ್ ನಾಯಕರು, ಕಾರ್ಯಕರ್ತರು ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್ ಎಂಎಲ್ಎಗಳೀಗೇ ಈ ದರ್ದು ಇಲ್ಲ ಸಾರ್,” ಎಂಬ ಮಾತು ನಿಜ ಅನ್ನಿಸುತ್ತೆ.
  8. ಮುಂದಿನ ವರ್ಷದ ಲೋಕಸಭಾ ಚುನಾವಣೆಯಲ್ಲಿ ಆರೆಸ್ಸೆಸ್, ಮೋದಿ, ಅಮಿತ್ ಶಾಗೆ ಕಾಡುತ್ತಿರುವ ಸಂಗತಿ ಎಂದರೆ, ಭಾಜಪ 9 ರಾಜ್ಯಗಳಲ್ಲಿ ಶೇ.90ರಷ್ಟು ಸ್ಥಾನ ಈಗಾಗಲೇ ಗೆದ್ದಿದೆ. ಇನ್ನು ಗೆಲ್ಲಲು ಅಲ್ಲಿ ಸ್ಥಾನಗಳಿಲ್ಲ. ಒಂದು ವೇಳೆ, ಉತ್ತರ ಭಾರತದಲ್ಲಿ ಈ 50 ಸ್ಥಾನ ಕಳೆದುಕೊಂಡರೂ ಅದನ್ನು ಸರಿದೂಗಿಸಲು ಬೇರೆಡೆ ಅವಕಾಶ ಇಲ್ಲ. ಅರ್ಥಾತ್, ಅಲೆಕ್ಸಾಂಡರ್‌ನಂಥ ಮೋದಿ ಮನಮೋಹನ್ ಸಿಂಗ್ ಥರ ಸಣ್ಣಪುಟ್ಟ ನಾಯಕರ ಮುಷ್ಠಿಗೆ ಬೀಳುತ್ತಾರೆ. ಅಲ್ಲಿಗೆ ಅವರು ಈ ಪಾಳೇಗಾರರ ದಾಹ ತೀರಿಸುತ್ತ ಅಗ್ಗವಾಗುತ್ತ ಸವೆದುಹೊಗುವುದು ಖಚಿತ. ಈ Nightmare ನಿಜವಾಗುತ್ತದೆ. ಅದರೊಂದಿಗೇ ಜನಸಾಮಾನ್ಯರ ಆಶೋತ್ತರದೊಂದಿಗೆ ಅಧಿಕಾರಕ್ಕೆ ಬರುತ್ತಿರುವ ಭಾಜಪದ ಹೆಗಲೇರಿರುವ ಹಿಂದುತ್ವದ ಕಪಿಸೈನ್ಯ ಕಾಡುಪಾಲಾಗುವುದು ನಿಶ್ಚಿತ. ಆದರೆ ನಮ್ಮ ಶ್ರಮ ಇನ್ನಷ್ಟು ಬೇಕಷ್ಟೆ.
ಇದನ್ನೂ ಓದಿ : ಫಲಿತಾಂಶ ಅತಂತ್ರ; ಮತದಾರರು ಮತ್ತು ಪಕ್ಷಗಳ ಲೆಕ್ಕಾಚಾರ ಹಳಿ ತಪ್ಪಿದ್ದೆಲ್ಲಿ?
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More