ಬಿಜೆಪಿಯನ್ನು ಬಹುಮತದಿಂದ ದೂರ ನಿಲ್ಲಿಸಿತೇ ಕಾಂಗ್ರೆಸ್‌ನ ಲಿಂಗಾಯತ ಧರ್ಮ ದಾಳ?

ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ದಿಟ್ಟ ನಿರ್ಧಾರವನ್ನು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಕೈಗೊಂಡಿತ್ತು. ಪ್ರಸಕ್ತ ಚುನಾವಣೆಯಲ್ಲಿ ಲಿಂಗಾಯತ ವಿಚಾರ ಪ್ರಸ್ತಾಪವಾಗದೆ ಇದ್ದರೆ ಈ ಬಾರಿ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆ ಇತ್ತು ಎನ್ನುತ್ತವೆ ಅಂಕಿ-ಅಂಶಗಳು!

ಕರ್ನಾಟಕ ವಿಧಾನಸಭಾ ಚುನಾವಣೆ ಹೊರಬಿದ್ದಿದ್ದು, ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ. ಪ್ರಸಕ್ತ ಚುನಾವಣೆಯಲ್ಲಿ ರಾಷ್ಟ್ರದ ಗಮನಸೆಳೆದಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರವು ಮುಂಬೈ ಮತ್ತು ಹೈದರಾಬಾದ್‌ ಕರ್ನಾಟಕ ವಿಭಾಗದಲ್ಲಿ ಸ್ಪಲ್ಪಮಟ್ಟಿಗೆ ಕಾಂಗ್ರೆಸ್‌ಗೆ ಹೆಚ್ಚಿನ ಸೀಟು ತಂದುಕೊಟ್ಟಿದೆ. ಇದೇ ವಿಚಾರವು ಬಿಜೆಪಿಯ ಸರಳ ಬಹುಮತಕ್ಕೆ ಅಡ್ಡಗಾಲಾಗಿದೆ ಎನ್ನುತ್ತವೆ ೨೦೦೮ ಮತ್ತು ೨೦೧೮ರ ವಿಧಾನಸಭಾ ಚುನಾವಣೆಯ ಅಂಕಿ-ಅಂಶಗಳು.

ಲಿಂಗಾಯತ ಸಮುದಾಯದ ಬೇಡಿಕೆಗೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದನ್ನು ರಾಜಕೀಯಗೊಳಿಸಲು ಬಹಿರಂಗವಾಗಿ ಕಾಂಗ್ರೆಸ್ ನಾಯಕತ್ವ ಒಪ್ಪಿಕೊಳ್ಳದೇ ಇದ್ದರೂ ಲಿಂಗಾಯತ ಮತಗಳನ್ನು ವಿಭಜಿಸಿ ರಾಜಕೀಯ ಲಾಭ ಪಡೆಯುವುದು ಅವರ ಉದ್ದೇಶವಾಗಿತ್ತು. ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದ ಬಿಜೆಪಿಯು ಇಕ್ಕಟ್ಟಿಗೆ ಸಿಲುಕಿತ್ತು.

ಮುಂಬೈ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಿಜಲಿಂಗಪ್ಪ, ಎಸ್‌ ಆರ್‌ ಕಂಠಿ, ಜೆ ಎಚ್‌ ಪಟೇಲ್‌ ಅವರಂಥ ರಾಜಕಾರಣಿಗಳಲ್ಲಿ ತಮ್ಮ ನಾಯಕತ್ವ ಕಂಡುಕೊಂಡಿದ್ದ ಲಿಂಗಾಯತ ಸಮುದಾಯವು, ಆನಂತರ ಬ್ರಾಹ್ಮಣ ಸಮುದಾಯದ ರಾಮಕೃಷ್ಣ ಹೆಗಡೆ ಅವರಲ್ಲಿ ನಾಯಕತ್ವ ಗಳಿಸಿಕೊಂಡಿತ್ತು. ತದನಂತರದಲ್ಲಿ ಬಿ ಎಸ್‌ ಯಡಿಯೂರಪ್ಪ ಅವರ ಜೊತೆ ಲಿಂಗಾಯತ ಸಮುದಾಯ ಹೆಜ್ಜೆ ಹಾಕಿತ್ತು. ೨೦೧೩ರ ವಿಧಾನಸಭಾ ಚುನಾವಣೆ ವೇಳೆಗೆ ಬಿಜೆಪಿಯಿಂದ ಹೊರಬಂದಿದ್ದ ಯಡಿಯೂರಪ್ಪ ಅವರು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಿ ಕಣಕ್ಕಿಳಿದು ಬಿಜೆಪಿಯನ್ನು ಸೋಲಿಸಿದ್ದರು. ಬಿಜೆಪಿ ವಿರುದ್ಧದ ಆಡಳಿತ ವಿರೋಧಿ ಅಲೆಯ ಮತಗಳು ಕಾಂಗ್ರೆಸ್‌ಗೆ ವರ್ಗವಾಗಿದ್ದವು.

೨೦೦೮ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರ ವಚನಭ್ರಷ್ಟತೆಯ ಲಾಭ ಪಡೆದ ಯಡಿಯೂರಪ್ಪ ಅವರು, ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ೧೧೦ ಸ್ಥಾನ ಗೆದ್ದುಕೊಡುವ ಮೂಲಕ ಸರ್ಕಾರ ರಚಿಸಿದ್ದರು. ಆ ಸಂದರ್ಭದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಮುಂಬೈ ಕರ್ನಾಟಕದ ೫೦ ಸ್ಥಾನಗಳ ಪೈಕಿ ಬಿಜೆಪಿ ೩೬ ಸ್ಥಾನ ಗೆದ್ದಿತ್ತು. ಹೈದರಾಬಾದ್‌ ಕರ್ನಾಟಕದಲ್ಲಿ ೪೦ ಸ್ಥಾನಗಳ ಪೈಕಿ ೧೯ ಸ್ಥಾನ ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಅದೇ ಚುನಾವಣೆಯಲ್ಲಿ ಕಾಂಗ್ರೆಸ್‌, ಮುಂಬೈ ಕರ್ನಾಟಕದಲ್ಲಿ ೧೨ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ೧೫ ಸ್ಥಾನ ಪಡೆದಿತ್ತು. ಎರಡೂ ವಿಭಾಗಗಳ ೯೦ ಸ್ಥಾನಗಳ ಪೈಕಿ ಜೆಡಿಎಸ್‌ ಏಳು ಸ್ಥಾನ ಗಳಿಸಿತ್ತು.

ಇದನ್ನೂ ಓದಿ : ಬಿಜೆಪಿ ಜನಮಾನಸದಲ್ಲಿ ನೆಲೆಯೂರಿದೆ ಎಂಬುದು ಸಾಬೀತು: ಸದಾನಂದ ಗೌಡ

೨೦೧೮ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಮುಂಬೈ ಕರ್ನಾಟಕದಲ್ಲಿ ೩೦ ಸ್ಥಾನ ಪಡೆದಿದೆ. ಈ ಮೂಲಕ ೨೦೦೮ರ ಚುನಾವಣೆಯ ೩೬ ಸ್ಥಾನ ಗಳಿಸಿದ್ದ ಬಿಜೆಪಿಯು ಪ್ರಸಕ್ತ ಚುನಾವಣೆಯಲ್ಲಿ ೬ ಸ್ಥಾನ ಕಳೆದುಕೊಂಡಿದೆ. ಅದೂ ಮೋದಿಯವರ ಪ್ರಚಾರದ ತರುವಾಯ ಕೂಡ. ಹೈದರಾಬಾದ್‌ ಕರ್ನಾಟಕದಲ್ಲಿ ೨೦೦೮ರಲ್ಲಿ ೧೯ ಸ್ಥಾನ ಪಡೆದಿದ್ದ ಬಿಜೆಪಿಯು ಈ ಬಾರಿ ೧೫ ಸ್ಥಾನ ಪಡೆದು ೪ ಸ್ಥಾನ ಕಳೆದುಕೊಂಡಿದೆ. ಇದೇ ವೇಳೆ, ಮುಂಬೈ ಕರ್ನಾಟಕದಲ್ಲಿ ೨೦೦೮ರಲ್ಲಿ ಕೇವಲ ೧೨ ಸ್ಥಾನ ಗಳಿಸಿದ್ದ ಕಾಂಗ್ರೆಸ್‌, ೨೦೧೮ರಲ್ಲಿ ೧೭ ಸ್ಥಾನ ಪಡೆದು ೫ ಸ್ಥಾನ ಹೆಚ್ಚಿಗೆ ಪಡೆದಿದೆ. ಹೈದರಾಬಾದ್‌ ಕರ್ನಾಟಕದಲ್ಲಿ ೨೦೦೮ರಲ್ಲಿ ೧೫ ಸ್ಥಾನ ಪಡೆದಿದ್ದ ಕಾಂಗ್ರೆಸ್‌, ಈ ಬಾರಿ ೨೧ ಸ್ಥಾನ ಪಡೆದು ೬ ಸ್ಥಾನ ಹೆಚ್ಚಿಸಿಕೊಂಡಿದೆ. ಒಟ್ಟಾರೆ ೨೦೦೮-೨೦೧೮ರ ಚುನಾವಣೆಯಲ್ಲಿ ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ೧೧ ಸ್ಥಾನ ಹೆಚ್ಚಿಸಿಕೊಂಡಿದೆ. ಆದರೆ, ಬಿಜೆಪಿಯು ಇದೇ ಅವಧಿಯಲ್ಲಿ ೧೦ ಸ್ಥಾನ ಕಳೆದುಕೊಂಡಿದೆ. ಈ ಸ್ಥಾನಗಳು ಬಿಜೆಪಿಗೆ ದಕ್ಕಿದ್ದರೆ ಸರಳ ಬಹುಮತ ಕಷ್ಟವಾಗುತ್ತಿರಲಿಲ್ಲ.

೨೦೧೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರಬಂದಿದ್ದ ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದರು. ಪ್ರಬಲ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಬಿಜೆಪಿಯ ವಿರುದ್ಧ ಕಾಂಗ್ರೆಸ್ ಪ್ರಬಲ ಹೋರಾಟ ಸಂಘಟಿಸಿ ಜಯ ಗಳಿಸಿತ್ತು. ಯಡಿಯೂರಪ್ಪ ಅವರ ಕೆಜೆಪಿಯು ಮುಂಬೈ ಕರ್ನಾಟಕದಲ್ಲಿ ಬಿಜೆಪಿಯ ಶೇ.೯ರಷ್ಟು ಮತ ಕಸಿಯುವ ಮೂಲಕ ಬಿಜೆಪಿಯ ಸೋಲಿನಲ್ಲಿ ಪ್ರಮುಖ ಪಾತ್ರವ ಹಿಸಿತ್ತು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More