ಮಹದಾಯಿ ಹೋರಾಟದ ಕೇಂದ್ರಸ್ಥಾನದಲ್ಲಿಯೇ ಬಿಜೆಪಿ ಭರ್ಜರಿ ಜಯಭೇರಿ

ಬರೋಬ್ಬರಿ ಒಂದು ಸಾವಿರ ದಿನಗಳ ಕಾಲ ನಡೆದ ಮಹಾದಾಯಿ ಹೋರಾಟಕ್ಕೆ ಯಾವೊಂದು ಪಕ್ಷದಿಂದಲೂ ಸ್ಪಂದನೆ ಸಿಗದ ಕಾರಣಕ್ಕೆ ಈ ಭಾಗದ ರೈತರು, ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಇದಕ್ಕೆ ಸೂಕ್ತ ಉತ್ತರ ಸಿಗಲಿದೆ ಎಂದುಕೊಂಡವರಿಗೆ ಅಚ್ಚರಿಯಾಗಿದೆ

ಮಹದಾಯಿ ಹೋರಾಟ ಎಂದಾಕ್ಷಣ ನೆನಪಿಗೆ ಬರುವ ಚಿತ್ರಗಳಲ್ಲಿ, ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪನವರಿಗೆ ರೈತರು ಏರುದನಿಯಲ್ಲಿ ಪ್ರಶ್ನೆಗಳ ಸುರಿಮಳೆ ಸುರಿಸಿದ ಸಂದರ್ಭ. ಬರೋಬ್ಬರಿ ಒಂದು ಸಾವಿರ ದಿನಗಳ ಕಾಲ ನಡೆದ ಮಹದಾಯಿ ಹೋರಾಟಕ್ಕೆ ಯಾವೊಂದು ಪಕ್ಷದಿಂದಲೂ ಸ್ಪಂದನೆ ಸಿಗದ ಕಾರಣಕ್ಕೆ ಉತ್ತರ ಕರ್ನಾಟಕ ಭಾಗದ ರೈತರು, ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಚುನಾವಣೆಯಲ್ಲಿ ಇದಕ್ಕೆ ಸೂಕ್ತ ಉತ್ತರ ಸಿಗಲಿದೆಯೇ ಎಂದು ಅಂದುಕೊಂಡವರಿಗೆ ಮಾತ್ರ ಚುನಾವಣಾ ಫಲಿತಾಂಶ ಅಚ್ಚರಿ ಮೂಡಿಸಿದೆ.

ಗದಗ ಜಿಲ್ಲೆಯ ನರಗುಂದ ಹಾಗೂ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಬರೋಬ್ಬರಿ ಒಂದು ಸಾವಿರ ದಿನಗಳ ಕಾಲ ಮಹದಾಯಿ ಯೋಜನೆಗಾಗಿ ಆಗ್ರಹಿಸಿ ಹೋರಾಟ ನಡೆದಿತ್ತು. ಬಿಜೆಪಿಯಿಂದಲೇ ಹೋರಾಟಕ್ಕೆ ತೀವ್ರ ಹಿನ್ನಡೆಯಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿದರೆ, ಈ ಸಮಸ್ಯೆ ನಿಮಿಷಮಾತ್ರದಲ್ಲಿ ಬಗೆಹರಿಯುತ್ತದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಸಮಸ್ಯೆ ಬಗೆಹರಿಸಲು ಮನಸ್ಸು ಮಾಡುತ್ತಿಲ್ಲ ಎಂದು ಹೋರಾಟಗಾರರು ಆರೋಪಿಸಿ ಪ್ರತಿಭಟಿಸುತ್ತಿದ್ದರು. ಮಹದಾಯಿ ಹೋರಾಟದುದ್ದಕ್ಕೂ ಗಮನಿಸಿದರೆ, ಬಿಜೆಪಿಯೇ ಮೊದಲ ಆರೋಪಿಯಾಗಿ ಕಾಣುತ್ತಿತ್ತು. ಕಾಂಗ್ರೆಸ್ ಎರಡನೇ ಅಪರಾಧಿಯಂತೆ ಕಾಣುತ್ತಿತ್ತು. ಜೆಡಿಎಸ್ ಈ ಹೋರಾಟದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ಹೋರಾಟಗಾರರು ಮಾತ್ರ ಅವರ ಲಾಭಕ್ಕೆ ದಾರಿ ಮಾಡಿಕೊಟ್ಟಿರಲಿಲ್ಲ. ಹೋರಾಟದಲ್ಲಿ ಯಾವೊಂದೂ ಪಕ್ಷದ ನಾಯಕರು, ಕಾರ್ಯಕರ್ತರು ಸೇರದಂತೆ ಜಾಗೃತಿ ವಹಿಸಿಯೇ ಪಕ್ಷಾತೀತವಾಗಿ ಹೋರಾಟ ಕೈಗೊಂಡಿದ್ದರು. ಪ್ರತಿಯೊಂದು ಹೋರಾಟದ ಸಂದರ್ಭದಲ್ಲಿಯೂ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ಹೋರಾಟದಲ್ಲಿ ಉತ್ತರ ಕರ್ನಾಟಕ ಭಾಗದ ಜನ ಜನಾಂದೋಲನದಂತೆ ಬೆಂಬಲ ಸೂಚಿಸಿದ್ದರು. ದಕ್ಷಿಣ ಕರ್ನಾಟಕ ಭಾಗದಲ್ಲಿಯೂ ಈ ಹೋರಾಟಕ್ಕೆ ಸ್ಪಂದನೆ ದೊರೆತಿತ್ತು. ಆದರೆ, ಚುನಾವಣೆ ಸಂದರ್ಭದಲ್ಲಿ ಮಾತ್ರ ಜನ ಈ ಎರಡು ಪಕ್ಷಗಳಿಗೆ ಉತ್ತರ ನೀಡದೆ ಮೌನ ವಹಿಸಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿ, ಸಾಕಷ್ಟು ಸಂಶಯ ಮೂಡಿಸಿತ್ತು.

ಹೋರಾಟದ ಸಂದರ್ಭದಲ್ಲಿ ನವಲಗುಂದ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಲಾಠಿ ಚಾರ್ಜ್ ನಡೆದಿತ್ತು. ಮಹಿಳೆ, ಗೃಹಿಣಿಯರು ಹಾಗೂ ವೃದ್ಧರು ಎನ್ನದೆ ಪೊಲೀಸರು ಲಾಠಿ ಬೀಸಿದ್ದರು. ಆದರೆ, ಚುನಾವಣೆಯಲ್ಲಿ ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಬ್ಬರ ತಡೆಯುವವರು ಇರಲಿಲ್ಲ. ಅಷ್ಟೇ ಅಲ್ಲ, ನವಲಗುಂದ ಹಾಗೂ ನರಗುಂದ ಸೇರಿದಂತೆ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಭರ್ಜರಿಯಾಗಿ ಜಯ ಗಳಿಸಿದೆ. ನರಗುಂದದಲ್ಲಿ ಬಿಜೆಪಿ ಅಭ್ಯರ್ಥಿ ಸಿ ಸಿ ಪಾಟೀಲ 73,045 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್ ನ ಬಿ ಆರ್ ಯಾವಗಲ್ 65,066 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಈ ಹಿಂದೆ ನಡೆದ ಹಲವು ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸಿದ್ದ ಹೋರಾಟಗಾರರು ನೋಟಾಗೆ ಮತ ನೀಡಲು ಮನವಿ ಮಾಡಿದ್ದರು. ಆದರೆ, ಈ ಬಾರಿ ಅಂತಹ ಯಾವ ಹೇಳಿಕೆಯನ್ನೂ ಕೊಟ್ಟಿರಲಿಲ್ಲ. ಹಾಗೆಯೇ, ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರು ಕೂಡ ನೋಟಾಗೆ ಮತ ಹಾಕುವ ಪ್ರಮೇಯಕ್ಕೆ ಹೋಗಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ 1,173 ನೋಟಾ ಮತಗಳು ಬಿದ್ದಿವೆ. ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಂಕರಪಾಟೀಲ ಮುನೇನಕೊಪ್ಪ 65,718 ಮತಗಳನ್ನು ಗಳಿಸಿ ಜಯ ಗಳಿಸಿದ್ದಾರೆ. ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಎನ್ ಎಚ್ ಕೋನರಡ್ಡಿ 45,197 ಮತಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ನ ವಿನೋದ ಅಸೂಟಿ 38,906 ಮತಗಳನ್ನು ಗಳಿಸಿದ್ದಾರೆ. 1914 ನೋಟಾ ಮತಗಳು ಬಿದ್ದಿವೆ.

ಇದನ್ನೂ ಓದಿ : ಬಿಜೆಪಿ ಜನಮಾನಸದಲ್ಲಿ ನೆಲೆಯೂರಿದೆ ಎಂಬುದು ಸಾಬೀತು: ಸದಾನಂದ ಗೌಡ

ಒಂದು ವೇಳೆ, ಮಹದಾಯಿ ಯೋಜನೆ ಜಾರಿಗೊಂಡರೆ, ಅತಿ ಹೆಚ್ಚು ಲಾಭ ಪಡೆದುಕೊಳ್ಳಬೇಕಿದ್ದ ಗದಗ ಜಿಲ್ಲೆಯಲ್ಲಿ ಕೂಡ ಮೂವರು ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಿದ್ದರೆ, ಒಂದರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ. ಹೋರಾಟದ ಕೇಂದ್ರ ಸ್ಥಾನ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭರ್ಜರಿ ಜಯ ಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ 72,182 ಮತಗಳನ್ನು ಗಳಿಸಿ ಜಯ ಗಳಿಸಿದ್ದರೆ, ಕಾಂಗ್ರೆಸ್‌ನ ಮಹೇಶ ನಲವಾಡ 49,835 ಮತಗಳನ್ನು ಗಳಿಸಿ ಸೋಲು ಕಂಡಿದ್ದಾರೆ. ಇದನ್ನೆಲ್ಲ ಗಮನಿಸುತ್ತಿರುವ ಹಲವರು ಮಹದಾಯಿ ಹೋರಾಟ ಇಂದಿಗೂ ನಡೆಯುತ್ತಿದೆ. ಆದರೆ, ಚುನಾವಣೆ ಸಂದರ್ಭದಲ್ಲಿ ರಜೆ ಪಡೆಯಿತೇ ಎಂದು ಹಲವರು ವ್ಯಂಗ್ಯವಾಡುತ್ತಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More