ಮುಂಬೈ ಕರ್ನಾಟಕ; ಕಾಂಗ್ರೆಸ್‌ನ ಕೈಹಿಡಿಯದ ಲಿಂಗಾಯತ ಧರ್ಮ ವಿಚಾರ

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕಾಂಗ್ರೆಸ್ಸಿಗೆ ಮುಂಬೈ ಕರ್ನಾಟಕ ಒಳಗೊಂಡು ಉ.ಕರ್ನಾಟಕದಲ್ಲಿ ಹೆಚ್ಚಿನ ಲಾಭ ತಂದುಕೊಡಲಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಚುನಾವಣೆ ಫಲಿತಾಂಶ ನೋಡಿದರೆ, ಈ ಭಾಗದಲ್ಲಿ ಜನರು ಬದಲಾವಣೆ ಬಯಸಿದಂತೆ ಕಂಡುಬಂದಿದ್ದು, ಕಾಂಗ್ರೆಸ್ಸನ್ನು ಹಿಂದಕ್ಕೆ ಸರಿಸಿದ್ದಾರೆ

ಪ್ರಾದೇಶಿಕವಾಗಿ ಕರ್ನಾಟಕದ ಚುನಾವಣೆಯ ಫಲಿತಾಂಶವನ್ನು ನೋಡುವುದಾದರೆ ಮೈಸೂರು ಪ್ರಾಂತವನ್ನು ಬಿಟ್ಟರೇ ಎರಡನೇ ದೊಡ್ಡ ಪ್ರದೇಶ ಮುಂಬೈ ಕರ್ನಾಟಕ. ಆರು ಜಿಲ್ಲೆಗಳನ್ನು ಒಳಗೊಂಡಿರುವ ಮುಂಬೈ ಕರ್ನಾಟಕ ಒಟ್ಟು ೫೦ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಈ ಚುನಾವಣೆ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಕೇಳಿಬಂದ ಪ್ರಮುಖ ಸಂಗತಿಗಳು ಮಹದಾಯಿ ಹಾಗೂ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಕಾಂಗ್ರೆಸ್ಸಿಗೆ ಮುಂಬೈ ಕರ್ನಾಟಕ ಒಳಗೊಂಡು ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಲಾಭ ತಂದು ಕೊಡಲಿದೆ ಎಂಬುದನ್ನು ನಿರೀಕ್ಷಿಸಲಾಗಿತ್ತು. ಈ ಚುನಾವಣೆ ಫಲಿತಾಂಶ ನೋಡಿದರೆ, ಈ ಭಾಗದಲ್ಲಿ ಜನರು ಬದಲಾವಣೆ ಬಯಸಿದಂತೆ ಕಂಡುಬಂದಿದ್ದು, ಕಾಂಗ್ರೆಸ್ಸನ್ನು ಹಿಂದಕ್ಕೆ ಸರಿಸಿದ್ದಾರೆ. ೨೦೧೩ ಚುನಾವಣೆಯಲ್ಲಿ ೫೦ ಕ್ಷೇತ್ರಗಳ ಪೈಕಿ ೩೧ ಕ್ಷೇತ್ರಗಳನ್ನು ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಬಿಜೆಪಿ ಎರಡು ಬಣಗಳಾಗಿದ್ದರಿಂದ ಬಿಜೆಪಿ ಮತ್ತು ಕೆಜೆಪಿ ಪಕ್ಷ ೧೩ ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದವು. ಜೊತೆಗೆ ಜೆಡಿಎಸ್ ೧ ಕ್ಷೇತ್ರದಲ್ಲಿ ಗೆದ್ದಿದ್ದರೆ ಇತರರು ೫ ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದರು.

ಚುನಾವಣೆಗೂ ಮುನ್ನ ಇದ್ದ ವಾತಾವರಣ, ಕೇಳಿಬಂದ ವಿಶ್ಲೇಷಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಈ ಭಾಗದಲ್ಲಿ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಎಲ್ಲ ನಿರೀಕ್ಷೆಗಳು ಈಗ ತಲೆ ಕೆಳಗಾಗಿದ್ದು, ಬಿಜೆಪಿ ೩೦ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದು, ಕಾಂಗ್ರೆಸ್ ೧೭ ಕ್ಷೇತ್ರಗಳಿಗೆ ತೃಪ್ತಿಪಟ್ಟಿದೆ. ಹಾಗೆ ನೋಡಿದರೆ ಕಾಂಗ್ರೆಸ್ ಇಲ್ಲಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ. ಹಿಂದೆ ಗೆದ್ದಿದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿ ೧೩ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಜೆಡಿಎಸ್ ಹಿಂದಿಗಿಂತ ಒಂದು ಸ್ಥಾನವನ್ನು ಹೆಚ್ಚಿಗೆ ಪಡೆದಿದ್ದು, ಇತರೆ ೧ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಲಿಂಗಾಯತ ಧರ್ಮದ ವಿಚಾರ ಬಿಜೆಪಿಗೆ ಮುಳುವಾಗದೇ ಎಲ್ಲ ಮತಗಳು ಕೈ ಹಿಡಿದಿರುವ ಸಾಧ್ಯತೆ ಇದ್ದು, ಅಲ್ಲದೇ ಕೆಜೆಪಿ ಮತ್ತು ಬಿಜೆಪಿ ಒಂದಾಗಿದ್ದರಿಂದ ಈ ಬಾರಿ ಹೆಚ್ಚಿನ ಸ್ಥಾನಗಳು ಬಿಜೆಪಿ ಗೆದ್ದುಕೊಳ್ಳಲು ಸಫಲವಾಗಿದೆ.

ಈ ಭಾಗದ ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಮಹದಾಯಿ ಕಾವು ಚುನಾವಣೆಗೂ ಮುನ್ನ ಜೋರಾಗಿಯೇ ಇತ್ತು. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಈ ವಿಷಯ ನಿರ್ಣಾಯಕವಾಗಬಲ್ಲದು ಎನ್ನುವ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಇದ್ದವು. ಆದರೆ, ಈ ನಾಲ್ಕು ಜಿಲ್ಲೆಗಳ ಚುನಾವಣೆ ಫಲಿತಾಂಶ ಗಮನಿಸಿದರೆ ಮಾತ್ರ ಇಲ್ಲಿ ಮಹದಾಯಿ ಅಷ್ಟು ನಿರ್ಣಾಯಕ ಪರಿಣಾಮ ಬೀರಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಹದಾಯಿ ವಿಚಾರದಲ್ಲಿ ಬಿಜೆಪಿ ತಟಸ್ಥವಾಗಿದ್ದರಿಂದ ಬಿಜೆಪಿಗೆ ಅನನುಕೂಲವಾಗುವ ಸಾಧ್ಯತೆಯೇ ಹೆಚ್ಚು ಎನ್ನುವುದು ತಲೆಕೆಳಗಾಗಿ, ಬಿಜೆಪಿ ಈ ನಾಲ್ಕು ಜಿಲ್ಲೆಗಳಲ್ಲಿ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ.

ಬೆಳಗಾವಿ ಚಿತ್ರಣ

ರಾಜ್ಯದಲ್ಲಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಗಳ ಪೈಕಿ ಬೆಳಗಾವಿ ಎರಡನೆಯದು. ಒಟ್ಟು ಈ ಜಿಲ್ಲೆ ೧೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಕಳೆದ ಬಾರಿಯ ಫಲಿತಾಂಶವನ್ನು ಅವಲೋಕಿಸಿದರೆ ಬಿಜೆಪಿ ೮, ಕಾಂಗ್ರೆಸ್ ೬ ಕೆಜೆಪಿ, ಬಿಎಸ್ ಆರ್ ಕಾಂಗ್ರೆಸ್ ಮತ್ತು ಪಕ್ಷೇತರ ತಲಾ ಒಂದು ಕ್ಷೇತ್ರಗಳನ್ನು ಈ ಜಿಲ್ಲೆಯಲ್ಲಿ ಗೆದ್ದುಕೊಂಡಿದ್ದವು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಸಮ ಬಲ ಕಾಯ್ದುಕೊಂಡು ತಲಾ ೯ ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿವೆ.

ಕಳೆದ ಬಾರಿ ಸೋಲು ಕಂಡಿದ್ದ ಲಕ್ಷ್ಮೀ ಹೆಬ್ಬಾಳ್ಕರ್, ೧,೦೨,೦೪೦ ಮತಗಳನ್ನು ಪಡೆಯುವ ಮೂಲಕ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದಾರೆ. ನಿಪ್ಪಾಣಿ ಹಾಗೂ ಚಿಕ್ಕೋಡಿ-ಸದಲಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಾಗಿ ಗಂಡ ಹೆಂಡತಿ ಸ್ಪರ್ಧಿಸಿದ್ದರು. ಅದರಲ್ಲಿ ಶಶಿಕಲಾ ಜೊಲ್ಲೆ ಮಾತ್ರ ಗೆಲವು ಸಾಧಿಸಿದ್ದು, ಗಂಡ ಅಣ್ಣಾಸಾಹೇಬ್ ಜೊಲ್ಲೆ ಸೋಲು ಕಂಡಿದ್ದಾರೆ. ಯಮಕನಮರಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹುರಿಯಾಳು ಸತೀಶ್ ಜಾರಕಿಹೊಳಿ ೭೩,೫೧೨ ಮತಗಳನ್ನು ಪಡೆಯುವ ಮೂಲಕ ತಮ್ಮ ಗೆಲುವಿನ ಸವಾರಿಯನ್ನು ಮುಂದುವರಿಸಿದ್ದಾರೆ.

ಧಾರವಾಡ ಜಿಲ್ಲೆಯ ಚಿತ್ರಣ

ಧಾರವಾಡ ಜಿಲ್ಲೆಯ ೭ ಕ್ಷೇತ್ರಗಳ ಪೈಕಿ ಹಿಂದಿನ ಬಾರಿ ಕಾಂಗ್ರೆಸ್ ೪ ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಈ ಬಾರಿ ಅದು ೨ ಸ್ಥಾನಗಳಿಗೆ ಕುಸಿದಿದ್ದು, ಬಿಜೆಪಿ ಕಳೆದ ಬಾರಿಗಿಂತ ೩ ಸ್ಥಾನ ಹೆಚ್ಚಿಸಿಕೊಂಡಿದೆ. ಜೆಡಿಎಸ್ ಈ ಬಾರಿ ಇಲ್ಲಿ ಖಾತೆ ತೆರೆಯಲು ವಿಫಲವಾಗಿದ್ದು ಎನ್ ಎಚ್ ಕೋನರೆಡ್ಡಿ ಸೋಲುಕಂಡಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಧಾರವಾಡ ಗ್ರಾಮೀಣ ಭಾಗದ ಅಭ್ಯರ್ಥಿ ಸಚಿವ ವಿನಯ್ ಕುಲಕರ್ಣಿ ಈ ಬಾರಿ ಸೋಲು ಕಂಡಿದ್ದು, ಇವರ ವಿರುದ್ಧ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಗೆಲುವಿನ ನಗೆ ಬೀರಿದ್ದಾರೆ. ಕಲಘಟಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಅವರನ್ನು ಸೋಲಿಸುವ ಮೂಲಕ ಸಿ ಎಂ ನಿಂಬಣ್ಣವರ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ಹಾಗೂ ಕುಂದಗೋಳದಲ್ಲಿ ಮಾತ್ರ ಕಾಂಗ್ರೆಸ್ ಜಯ ಸಾಧಿಸಿದೆ.

ಗದಗ ಜಿಲ್ಲೆಯ ಚಿತ್ರಣ

೨೦೧೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಗದಗ ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಈ ಬಾರಿ ೩ ಕ್ಷೇತ್ರಗಳು ಬಿಜೆಪಿ ಪಾಲಾಗಿವೆ. ಗದಗ ಕ್ಷೇತ್ರದಲ್ಲಿ ಮಾತ್ರ ಎಚ್ ಕೆ ಪಾಟೀಲ್ ಅವರು ಸೋಲಿನ ಅಂಚಿನಿಂದ ಪಾರಾಗಿ ಗೆಲುವಿನ ನಗೆ ಬಿರಿದ್ದಾರೆ. ಬಿಜೆಪಿಯ ಹುರಿಯಾಳುಗಳಾದ ಶಿರಹಟ್ಟಿಯಲ್ಲಿ ರಾಮಕೃಷ್ಣ ದೊಡ್ಡಮನಿ, ರೋಣದಲ್ಲಿ ಕಳಕಪ್ಪ ಬಂಡಿ, ನರಗುಂದದಲ್ಲಿ ಸಿ ಸಿ ಪಾಟೀಲ್ ಗೆಲುವಿನ ನಗೆ ಬಿರಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಚಿತ್ರಣ

ಬಾಗಲಕೋಟೆ ಜಿಲ್ಲೆಯ ೭ ಕ್ಷೇತ್ರಗಳ ಪೈಕಿ ಹಿಂದಿನ ಬಾರಿ ೬ ಕ್ಷೇತ್ರಗಳನ್ನು ಕಾಂಗ್ರೆಸ್ ವಶ ಪಡಿಸಿಕಕೊಂಡಿತ್ತು. ಆದರೆ ಈ ಬಾರಿ ಕೇವಲ ೨ ಸ್ಥಾನಗಳಿಗೆ ಕಾಂಗ್ರೆಸ್ ಸೀಮಿತವಾಗಿದೆ. ಅದರಲ್ಲೂ ಕೂತುಹಳ ಸೃಷ್ಟಿಸಿದ್ದ ಬಾದಾಮಿಯಿಂದ ಸ್ಪರ್ಧಿಸಿದ್ದ ಸಿದ್ದರಾಮಯ್ಯ ಅವರು ಕೇವಲ ೧,೭೯೭ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕುರುಬ ಸಮುದಾಯದ ಮತಗಳು ಕೈ ಹಿಡಿದ ಹಿನ್ನೆಲೆಯಲ್ಲಿ ಬಾದಾಮಿಯಲ್ಲಿ ಗೆಲವು ಸಾಧಿಸಿರುವ ಸಾಧ್ಯತೆಯೇ ಹೆಚ್ಚಾಗಿದೆ. ಇತ್ತ ರಾಮುಲು ಕೂಡ ಪ್ರಬಲ ಪೈಪೋಟಿ ನೀಡಿ ಸೋಲು ಕಂಡಿದ್ದಾರೆ. ಉಳಿದ ಮುಧೋಳ, ತೇರದಾಳ, ಬೀಳಗಿ, ಬಾಗಲಕೋಟೆ ಹಾಗೂ ಹುನಗುಂದದಲ್ಲಿ ಬಿಜೆಪಿ ಗೆಲವು ಕಂಡಿದೆ. ತೇರದಾಳದಿಂದ ಸ್ಪರ್ಧಿಸಿದ್ದ ಸಚಿವೆ ಉಮಾಶ್ರೀ ಈ ಬಾರಿ ಸೋಲು ಕಂಡಿದ್ದಾರೆ. ಹಾಗೆಯೇ ಬಾಗಲಕೋಟೆಯಲ್ಲಿ ಎಚ್ ವೈ ಮೇಟಿ ಅವರನ್ನು ಸೋಲಿಸುವ ಮೂಲಕ ವೀರಣ್ಣ ಚರಂತಿಮಠ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿಯನ್ನು ಬಹುಮತದಿಂದ ದೂರ ನಿಲ್ಲಿಸಿತೇ ಕಾಂಗ್ರೆಸ್‌ನ ಲಿಂಗಾಯತ ಧರ್ಮ ದಾಳ?

ವಿಜಯಪುರ ಜಿಲ್ಲೆಯ ಚಿತ್ರಣ

ಈ ಬಾರಿ ವಿಜಯಪುರ ಜಿಲ್ಲೆಯ ೮ ಕ್ಷೇತ್ರಗಳ ಪೈಕಿ ಗಮನ ಸೆಳೆದಿದ್ದು ಬಬಲೇಶ್ವರ ವಿಧಾನಸಭಾ ಕ್ಷೇತ್ರ. ನೀರಾವರಿ ಸಚಿವ ಎಂ ಬಿ ಪಾಟೀಲ್ ಈ ಕ್ಷೇತ್ರವನ್ನು ಕಾಂಗ್ರೆಸ್ಸಿನಿಂದ ಪ್ರತಿನಿಧಿಸುತ್ತ ಬಂದಿದ್ದಾರೆ. ಈ ಬಾರಿ ಅವರು ‘ಲಿಂಗಾಯತ ಸ್ವತಂತ್ರ ಧರ್ಮದ’ ವಿಚಾರದಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದರಿಂದಾಗಿ ಈ ಕ್ಷೇತ್ರ ಕೂತುಹಲ ಕೆರಳಿಸಿತ್ತು. ನಿರೀಕ್ಷೆಯಂತೆ ಎಂ ಬಿ ಪಾಟೀಲ್ ಅವರು ೩೦ ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಈ ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ. ಒಟ್ಟಾರೆ ಜಿಲ್ಲೆಯ ಚಿತ್ರಣ ಗಮನಿಸಿದಾಗ ಕಳೆದ ಬಾರಿ ಕಾಂಗ್ರೆಸ್ ೬ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ ಮೂರು ಕ್ಷೇತ್ರಗಳನ್ನು ಕಳೆದುಕೊಂಡಿದ್ದು, ಭಾರಿ ಹಿನ್ನಡೆ ಅನುಭವಿಸಿದೆ. ಇತ್ತ ಬಿಜೆಪಿ ಹಿಂದಿಗಿಂತ ಎರಡು ಕ್ಷೇತ್ರಗಳನ್ನು ಹೆಚ್ಚಿಸಿಕೊಂಡಿದೆ. ಇಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲವು ಕಂಡಿದ್ದು, ನಾಗಠಾಣದಲ್ಲಿ ದೇವಾನಂದ ಚೌಹಾನ್ ಹಾಗೂ ಸಿಂಧಗಿಯಲ್ಲಿ ಮಲ್ಲಪ್ಪ ಮನಗೂಳಿ ಜಯ ಸಾಧಿಸಿದ್ದಾರೆ. ವಿಜಯಪುರ ನಗರದಲ್ಲಿ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಬಸನಗೌಡ ಯತ್ನಾಳ ಗೆಲುವಿನ ನಗೆ ಬೀರಿದ್ದಾರೆ.

ಹಾವೇರಿ ಜಿಲ್ಲೆಯ ಚಿತ್ರಣ

ಹಾವೇರಿ ಜಿಲ್ಲೆಯ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಕಹಿಯನ್ನೇ ಊಣಿಸಿದೆ. ಕಳೆದ ಬಾರಿ ೪ ಕ್ಷೇತ್ರಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ ಒಂದು ಸ್ಥಾನವನ್ನು ಗೆದ್ದುಕೊಂಡಿದೆ. ಹಿಂದೆ ೧ ಸ್ಥಾನ ಗೆದ್ದಿದ್ದ ಬಿಜೆಪಿ ೩ ಸ್ಥಾನಗಳನ್ನು ಹೆಚ್ಚಿಸಿಕೊಂಡಿದೆ. ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್ ಶಂಕರ್ ಅವರು ಸ್ಪೀಕರ್ ಕೆ ಬಿ ಕೋಳಿವಾಡ ಅವರನ್ನು ಮಣಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಹಿರೇಕೆರೂರಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಬಿ ಸಿ ಪಾಟೀಲ್ ಜಯ ಸಾಧಿಸಿದ್ದು, ಬಿಜೆಪಿಯಿಂದ ಹಾನಗಲ್ ನಲ್ಲಿ ಸಿ ಎಂ ಉದಾಸಿ, ಶಿಗ್ಗಾವಿಯಲ್ಲಿ ಬಸವರಾಜ ಬೊಮ್ಮಾಯಿ, ಹಾವೇರಿಯಲ್ಲಿ ನೆಹರೂ ಓಲೆಕರ್ ಹಾಗೂ ಬ್ಯಾಡಗಿಯಿಂದ ವಿರೂಪಾಕ್ಷಪ್ಪ ಬಳ್ಳಾರಿ ಗೆಲುವು ಕಂಡಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More