ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲು ಸಾರುವ ಚೋದ್ಯಗಳೇನು?

ಜೆಡಿಎಸ್ ತೊರೆದು ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ (೨೦೦೬) ಗೆದ್ದು ರಾಜಕೀಯ ಪುನರ್ಜನ್ಮ ಪಡೆದಿದ್ದ ಸಿದ್ದರಾಮಯ್ಯ ಅದೇ ಕ್ಷೇತ್ರದಲ್ಲಿ ಸೋತಿದ್ದಾರೆ. ಸೋಲಿಸಿಯೇ ಸೈ ಎಂದು ಪಣ ತೊಟ್ವವರೆಲ್ಲ ಜಯದ ನಗೆ ಬೀರಿದ್ದಾರೆ. ಸಿದ್ದರಾಮಯ್ಯ ಹಳೆ ವೈರಿಗಳ ಬಳಿ ನಿಂತಿದ್ದಾರೆ

ಹನ್ನೆರಡು ವರ್ಷದ ಹಿಂದೆ, ೨೦೦೬ರಲ್ಲಿ ಜೆಡಿಎಸ್ ಪಕ್ಷದ ಸಂಬಂಧ ಕಡಿದುಕೊಂಡು ಹೊರ ಬಂದು ಕಾಂಗ್ರೆಸ್ ಸೇರಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಉಪಚುನಾವಣಾ ಸಮರದಲ್ಲಿ ಕೇವಲ ೨೫೭ ಮತಗಳ ಅಂತರದಿಂದ ಗೆದ್ದು ರಾಜಕೀಯ ಪುನರ್ಜನ್ಮ ಪಡೆದಿದ್ದ ಸಿದ್ದರಾಮಯ್ಯ ಈಗ ಅದೇ ಕ್ಷೇತ್ರದಲ್ಲಿ ೩೬,೦೪೨ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಒಕ್ಕಲಿಗ ಪ್ರಾಬಲ್ಯ ಇರುವ ಈ ಕ್ಷೇತ್ರ “ಸುರಕ್ಷಿತ ಅಲ್ಲ,’’ ಎನ್ನುವ ಸಲಹೆ-ಎಚ್ಚರಿಕೆಗಳನ್ನು ಬದಿಗೆ ಸರಿಸಿ, ಹುಂಬು ಆತ್ಮವಿಶ್ವಾಸದಿಂದ ಪರೀಕ್ಷೆಗೆ ಒಡ್ಡಿಕೊಂಡ ಅವರು ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡರ ಮೂಲಕ ಒಳ-ಹೊರ ಶತ್ರುಗಳೆಲ್ಲ ಸಂಘಟಿತರಾಗಿ ಒಡ್ಡಿದ ಕಠಿಣ ಸವಾಲಿನ ಎದುರು ಮಣಿದಿದ್ದಾರೆ. ಇದನ್ನು ಹೀನಾಯ ಸೋಲೆನ್ನಬಹುದು. ಮುಖಭಂಗ, ಶರಣಾಗತಿ ಎನ್ನಲೂ ಬಹುದು. ಆದರೆ, ಅದಷ್ಟೆ ಅಲ್ಲ ಎನ್ನುವುದೂ ಕೂಡ ನಿಜ.

೨೦೦೬ರಲ್ಲಿ ಸಿದ್ದರಾಮಯ್ಯ ಅವರನ್ನು ಮಣಿಸಲು ಆಗ ಅಧಿಕಾರದಲ್ಲಿದ್ದ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಬಿಜೆಪಿ ಸಮ್ಮಿಶ್ರ ಸರ್ಕಾರವೇ ಟೊಂಕ ಕಟ್ಟಿ ನಿಂತಿತ್ತು. ಎರಡೂ ಪಕ್ಷದ ಕಟ್ಟಾಳುಗಳೆಲ್ಲ ಸೇರಿ, ಶಿವಬಸಪ್ಪ ಎನ್ನುವ ಲಿಂಗಾಯತ ಸಮುದಾಯದ ಹೆಚ್ಚು ಪರಿಚಿತರಲ್ಲದ ವ್ಯಕ್ತಿಯನ್ನು ಕಣಕ್ಕಿಳಿಸಿ, ಪ್ರಬಲ ಪೈಪೋಟಿಯನ್ನು ಕಟ್ಟಿ ನಿಲ್ಲಿಸಿದ್ದರು. ಆಗ, ಉಳಿದೆಲ್ಲ ಸಮುದಾಯಗಳು, ಅನೇಕ ಜನಪರ ಸಂಘಟನೆಗಳು ಒಟ್ಟು ನಿಂತಿದ್ದರ ಫಲವಾಗಿ ಸಿದ್ದರಾಮಯ್ಯ ಅಲ್ಪ ಮತಗಳಲ್ಲಿ ಜಯ ಗಳಿಸಿದ್ದರು. ಈಗ ಕೂಡ, ರಾಜಕೀಯವಾಗಿ ಅಂಥದೇ ಅಥವಾ ಅದಕ್ಕಿಂತ ಪ್ರಬಲ ಸ್ವರೂಪದ ಪೈಪೋಟಿ ವ್ಯಕ್ತವಾಗಿತ್ತು. ಪ್ರಬಲ ಜಾತಿ ಗಳಿಗೆ ಹೊರತಾದ ದೀನದುರ್ಬಲ ವರ್ಗಗಳು ಒಂದಾಗಿ ತಮ್ಮನ್ನು ಗೆಲ್ಲಿಸಬಹುದು; ತಮ್ಮ ಸರ್ಕಾರ ನೀಡಿದ ಹಲವು ಭಾಗ್ಯಗಳ ಫಲ ಉಂಡವರು ತಮಗೆ ಶಕ್ತಿ ತುಂಬಬಹುದೆನ್ನುವ ಸಣ್ಣದೊಂದು ನಿರೀಕ್ಷೆಯನ್ನು ಸಿದ್ದರಾಮಯ್ಯ ಕೊನೆಯ ವರೆಗೂ ಹೊಂದಿದ್ದರು. ಆದರೆ, ಮತದಾನದ ದಿನವೇ ನಿರೀಕ್ಷೆ ನಿಜವಾಗದೆನ್ನುವ ಸತ್ಯ ಅವರ ಅರಿವಿಗೆ ಬಂದಂತಿತ್ತು. ಮಂಗಳವಾರ ಬೆಳಗ್ಗೆ ಎಣಿಕೆ ಶುರುವಾಗಿ ಒಂದೆರಡು ತಾಸಿನಲ್ಲಿ ಅದು ದೃಢವಾಯಿತು. ಪ್ರತಿ ಸುತ್ತಿನ ಎಣಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡ ಜಿಟಿಡಿ, ಸಿದ್ದರಾಮಯ್ಯಗೆ ಚೇತರಿಸಿಕೊಳ್ಳುವ ಅವಕಾಶವನ್ನೇ ನೀಡಲಿಲ್ಲ. ಒಟ್ಟು ೧,೨೧,೩೨೫ ಮತಗಳನ್ನು ಪಡೆದ ಜಿಟಿಡಿ ೩೬,೦೪೨ ಮತಗಳ ಭಾರೀ ಅಂತರದಿಂದ ಸಿದ್ದರಾಮಯ್ಯ (೮೫,೨೮೩)ಅವರನ್ನು ಮಣಿಸಿದರು. ಬಿಜೆಪಿ ಅಭ್ಯರ್ಥಿ ಗೋಪಾಲ್‌ ರಾವ್‌ ೧೨,೦೬೪ ಮತ ಪಡೆಯಲಷ್ಟೆ ಶಕ್ತರಾದರು. ಉಳಿದೆಲ್ಲರದ್ದು ಮೂರಂಕಿ ಸಾಧನೆ.

ಅದೆಲ್ಲಕ್ಕಿಂತ ಗಮನಾರ್ಹ ಸಂಗತಿ ಫಲಿತಾಂಶದ ನಂತರದ ವಿದ್ಯಮಾನಗಳು. ಯಾವ ಜೆಡಿಎಸ್ ಪಕ್ಷವನ್ನು ತೊರೆದು, ಕಾಂಗ್ರೆಸ್ ಸೇರಿ ಪ್ರಬಲ ನಾಯಕನಾಗಿ ಹೊರ ಹೊಮ್ಮಿ ಮುಖ್ಯಮಂತ್ರಿಯೂ ಆದ ಸಿದ್ದರಾಮಯ್ಯ ಈಗ ಅದೇ ಜೆಡಿಎಸ್ ಪಕ್ಷಕ್ಕೆ “ರಾಜಕೀಯ ಶಕ್ತಿ’’ ನೀಡುವ ಅನಿವಾರ್ಯ ಸ್ಥಿತಿಗೆ ಒಡ್ಡಿಕೊಂಡಿದ್ದಾರೆ. ಅಂದರೆ,೧೨ ವರ್ಷಗಳಲ್ಲಿ ಸಿದ್ದರಾಮಯ್ಯ ಪಾಲಿನ ರಾಜಕೀಯ ಚಕ್ರ ಮತ್ತೊಂದು ಉರುಳು ಪೂರ್ಣಗೊಳಿಸಿದೆ. ಶತ್ರುಗಳಾದವರು ಮಿತ್ರರಾಗುವ, ಮಿತ್ರರು ಶತ್ರುಗಳಾಗುವ, ಅಂದದ್ದು, ಆಡಿದ್ದು ಎಲ್ಲವನ್ನೂ ಮರೆತು ಕೈ ಕೈ ಹಿಡಿದು ನಿಲ್ಲುವ “ರಾಜಕೀಯ ನಾಟಕ’’ ದಲ್ಲಿ ವರ್ಚಸ್ವಿ ನಾಯಕ ಸಿದ್ದರಾಮಯ್ಯ ಕೂಡ ಸಾಮಾನ್ಯ ಪಾತ್ರಧಾರಿಯಂತೆ ಗೋಚರಿಸತೊಡಗಿದ್ದಾರೆ. ಕೊನೆ ಕ್ಷಣದ ಮುನ್ನೆಚ್ಚರಿಕೆ ಫಲವಾಗಿ ಬಾದಾಮಿಯಿಂದಲೂ ಸ್ಪರ್ಧಿಸಿ, ಇದಕ್ಕಿಂತ ಘನಘೋರ ಮುಜುಗರದಿಂದ ಪಾರಾಗಿದ್ದಾರಾದರೂ, ಅವರ ಇಂದಿನ ಎಲ್ಲ ಸ್ಥಿತಿ ಮತ್ತು ಸ್ಥಿತ್ಯಂತರಕ್ಕೆ “ಚಾಮುಂಡೇಶ್ವರಿ ಕ್ಷೇತ್ರ’’ದ ಜಾತಿಬಲ ಪ್ರಧಾನ ರಾಜಕೀಯ ಮಹಿಮೆಯೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. “ ಚಾಮುಂಡೇಶ್ವರಿ ಸೇಫ್ ಅಲ್ಲ,’’ ಎನ್ನುವ ಎಚ್ಚರಿಕೆ ಮಾತುಗಳನ್ನೂ ಅಲಕ್ಷಿಸಿ ಅವರು ಇಲ್ಲಿ ಸ್ಪರ್ಧಿಸಿದ್ಯಾಕೆ, ಅವರ “ಆತ್ಮ ವಿಶ್ವಾಸ’’ ಕೈ ಕೊಟ್ಟದ್ದು ಹೇಗೆ ಎನ್ನುವುದು ಸದ್ಯದ ಕುತೂಹಲ. ಈ ಹಿನ್ನೆಲೆಯಲ್ಲಿ ಚರ್ಚಿಸಬಹುದಾದ ಕೆಲವು ಅಂಶಗಳಿವು:

  1. ಇಲ್ಲಿ ಸ್ಪರ್ಧಿಸುವ ನಿರ್ಧಾರ ತಳೆದು, ಹಳ್ಳಿಗಳಲ್ಲಿ ಸಂಚರಿಸಿದ ಸಂದರ್ಭದಲ್ಲೇ ತಮ್ಮ ವಿರುದ್ಧ ಜನಾಭಿಪ್ರಾಯ ಇರುವುದು ಸಿದ್ದರಾಮಯ್ಯ ಅರಿವಿಗೆ ಬಂದಿತ್ತು. ಕೆಲವು ಗ್ರಾಮಗಳ ಜನ ಅಭೂತಪೂರ್ವ ಸ್ವಾಗತ ನೀಡಿದರೆ, ಕೆಲವೆಡೆ ಅಸಮಾಧಾನ ವ್ಯಕ್ತವಾಗಿತ್ತು. ನಿರ್ದಿಷ್ಟ ಸಮುದಾಯದ ಜನರಂತೂ ಮೇಲ್ಮೇಲಕ್ಕೆ ನಗೆ ಬೀರಿ, ಒಳಗೇ ಹಲ್ಲು ಮಸೆಯುತ್ತಿದ್ದರು. ಆದರೆ,“ನಾಲ್ಕು ದಶಕದಿಂದ ಕ್ಷೇತ್ರದ ಹವಾಗುಣ, ಮತದಾರರ ಎದೆ ಬಡಿತ, ನಾಡಿ ಮಿಡಿತ ಬಲ್ಲೆ,’’ ಎನ್ನುವ ಅತಿ ಆತ್ಮವಿಶ್ವಾಸದಲ್ಲಿ, ಇಲ್ಲೇ ಸ್ಪರ್ಧಿಸಿ ಗೆಲ್ಲುವ ಪಣ ತೊಟ್ಟಿದ್ದು ಮುಳುವಾಯಿತು.
  2. ಚಾಮುಂಡೇಶ್ವರಿ ಹೊರತು ಬೇರೆಲ್ಲೂ ಸ್ಪರ್ಧೆ ಮಾಡಲ್ಲ ಎಂದು ಆರಂಭದಲ್ಲಿ ಹೇಳಿದ್ದ ಸಿದ್ದರಾಮಯ್ಯ, ಇಲ್ಲಿ ಗೆಲುವಿನ ವಿಶ್ವಾಸ ಹರಳು ಗಟ್ಟದೆ ಇದ್ದಾಗ ಆ ಭಾಗದ ಜನರ ಬೇಡಿಕೆ ಕಾರಣ ಮುಂದೊಡ್ಡಿ ಬಾದಾಮಿಯಲ್ಲೂ ಸ್ಪರ್ಧಿಸಿದರು. ಆ ನಿರ್ಧಾರ ಈಗ ಹೆಚ್ಚಿನ ಮುಜುಗರದಿಂದ ಅವರನ್ನು ಪಾರು ಮಾಡಿದ್ದು ಹೌದಾದರೂ, ಈ ಕ್ಷೇತ್ರದ ಪೈಪೋಟಿ ವಿಷಯದಲ್ಲಿ ಬೇರೆಯದೇ ಪರಿಣಾಮ ಬೀರಿತು.
  3. ೧೯೮೩ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜಕೀಯ ಜೀವನ ಆರಂಭಿಸಿದ ಕ್ಷೇತ್ರದಲ್ಲೇ ಕೊನೆ ಚುನಾವಣೆ ಎದುರಿಸುತ್ತೇನೆ ಎನ್ನುವ ಭಾವನಾತ್ಮಕ ಮಾತು ಹೆಚ್ಚು ಫಲ ನೀಡಲಿಲ್ಲ. ೨೦೦೬ರ ಉಪಚುನಾವಣೆಯಲ್ಲಿ ಗೆಲ್ಲಿಸಿ ರಾಜಕೀಯ ಮರುಜನ್ಮ ನೀಡಿದ್ದ ಜನ ನನ್ನ ಕೈ ಬಿಡಲ್ಲ. ಈಗ ಗೆಲ್ಲಿಸಿದರೆ ಮತ್ತೊಮ್ಮೆ ಸಿಎಂ ಆಗಿ,ಋಣ ತೀರಿಸುವೆ ಎನ್ನುವ ಭರವಸೆಗೂ ಕ್ಷೇತ್ರದ ಪ್ರಬಲ ಸಮುದಾಯ ಮನ್ನಣೆ ನೀಡಿಲ್ಲ.
  4. ಇಲ್ಲಿ ಎದುರಿಸಿದ ಏಳು ಚುನಾವಣೆಯಲ್ಲಿ ಐದರಲ್ಲಿ ಸಿದ್ದರಾಮಯ್ಯ ಗೆದ್ದಿದ್ದರು. ೨೦೧೩ರ ಚುನಾವಣೆ ಹೊರತು ಒಂದೋ ಕಾಂಗ್ರೆಸ್ ಗೆದ್ದಿದೆ; ಇಲ್ಲವೇ ಸಿದ್ದರಾಮಯ್ಯ ಗೆದ್ದಿದ್ದರು. ಈ ಬಾರಿ ಎರಡೂ ಅಂಶಗಳು ಒಟ್ಟಿಗಿರುವುದರಿಂದ ಗೆಲುವು ಕಷ್ಟಲ್ಲ ಎಂದು ಅವರು ಭಾವಿಸಿದ್ದರು. ಆದರೆ, ವರುಣಾಕ್ಕೆ ಕ್ಷೇತ್ರಾಂತರ ಮಾಡಿದ ನಂತರ ೧೦ ವರ್ಷಗಳಿಂದ ಕ್ಷೇತ್ರದ ಸಂಪರ್ಕ ಕಡಿದುಕೊಂಡದ್ದು ಸವಾಲಾಗಿ ಪರಿಣಮಿಸಿತು. “ಇಲ್ಲೇ ಕೊನೆಯ ಚುನಾವಣೆ ಎದುರಿಸಲು ಬಂದಿದ್ದೇನೆ,’’ಎನ್ನುವ ಹೇಳಿಕೆಯನ್ನು ಕೆಲವರು,“ ಮಗನಿಗೆ ವರುಣ ಬಿಟ್ಟುಕೊಡಲು ಇಲ್ಲಿಗೆ ಬಂದಿದ್ದಾರಷ್ಟೆ,’’ಎಂದು ವಿಶ್ಲೇಷಿಸಿದರು. “ಹತ್ತು ವರ್ಷದದಿಂದ ಬಾರದವರು,ಈಗ್ಯಾಕೆ ಬಂದಿರಿ,’’ ಎಂದು ಪ್ರಶ್ನಿಸಿದರು. ಕ್ಷೇತ್ರ ಮರುವಿಂಗಡಣೆ ನಂತರ ಬದಲಾದ ಜಾತಿ ವ್ಯಾಕರಣವನ್ನರಿಯುವಲ್ಲಿ ಅವರು ಸೋತರು.
  5. ೨೦೦೮ರಲ್ಲಿ ಇಲ್ಲಿ ಗೆದ್ದ ಎಂ. ಸತ್ಯನಾರಾಯಣ ಕ್ಷೇತ್ರಾಭಿವೃದ್ಧಿಗೆ, ಕಾಂಗ್ರೆಸ್ ಸಂಘಟನೆಗೆ ಗಮನ ಕೊಡಲಿಲ್ಲ. ಸಿದ್ದರಾಮಯ್ಯ ಪರ ದುಡಿಯುವವರ ಪಡೆ ಮೇಲ್ನೋಟಕ್ಕೆ ದೊಡ್ಡದಿದ್ದಂತೆ ಕಂಡರೂ ಹೆಚ್ಚಿನವರು ಸಿದ್ದರಾಮಯ್ಯ ಮೈಸೂರಿಗೆ ಬಂದಾಗ ಸುತ್ತಮುತ್ತ ಸುಳಿಯುವ ತೋರುಗಾಣಿಕೆಗೆ ಸೀಮಿತರಾಗಿದ್ದರು. ನಾನಾ ರೀತಿ ಲಾಭ ಪಡೆದವರು ಕ್ಷೇತ್ರ ಸುತ್ತಿ ಜನರ ಬೇಕು ಬೇಡಗಳಿಗೆ ಕಿವಿಯಾಗಲಿಲ್ಲ. ಸರ್ಕಾರದ ಜನ ಕಲ್ಯಾಣ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಲು ಪ್ರಯತ್ನಿಸಲಿಲ್ಲ. ಅದೇ, ೨೦೧೩ರಲ್ಲಿ ಜೆಡಿಎಸ್‌ ನಿಂದ ಗೆದ್ದ ಜಿ.ಟಿ.ದೇವೇಗೌಡ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿದರು. ಯುವಜನರ ಪಡೆಯನ್ನು ಸಂಘಟಿಸಿದ್ದರು. ಸ್ಥಳೀಯ ಆಡಳಿತಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವಂತೆ ಮಾಡಿದ್ದರು.
  6. ಸಿದ್ದರಾಮಯ್ಯ ಸುತ್ತ ಠಳಾಯಿಸುತ್ತಿದ್ದ ವಂದಿಮಾಗದರು, ಕಾಲು- ಬಾಲಗಳು ಜಾತಿ ರಾಜಕೀಯ ಮಾಡಿ ಕ್ಷೇತ್ರದ ಪ್ರಬಲ ಕೋಮಿನ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಪ್ರಬಲರ ಮತಗಳನ್ನು ಏಕತ್ರಗೊಳಿಸಿ, ಸಿದ್ದರಾಮಯ್ಯ ವಿರುದ್ಧ ಅಸ್ತ್ರವಾಗಿ ಪ್ರಯೋಗಿಸುವಲ್ಲಿ ಜೆಡಿಎಸ್ ಯಶಸ್ವಿಯಾಯಿತು. ಬಿಜೆಪಿ ಜೊತೆ ಒಳ ಒಪ್ಪಂದದ ಕಾರಣಕ್ಕೆ ಲಿಂಗಾಯತ, ನಾಯಕ ಸಮುದಾಯ ಸಹಿತ ಬಹುತೇಕ ಬಿಜೆಪಿ ಮತಗಳು ಜೆಡಿಎಸ್ ನತ್ತ ಹರಿದಿರುವುದೂ ಫಲಿತಾಂಶದಲ್ಲಿ ಎದ್ದುಕಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಈ ಭಾಗದ ಲಿಂಗಾಯತರು ಕಾಂಗ್ರೆಸ್ ನಿಂದ ದೂರ ಕಾಯ್ದುಕೊಳ್ಳುವಂತೆ ಮಾಡಿದೆ. ಲಿಂಗಾಯಿತ ಮತ್ತು ಬಿಜೆಪಿ ಮತಗಳನ್ನು ತಮ್ಮ ಪರ ತಿರುಗಿಸಿಕೊಳ್ಳಲು ಜಿಟಿಡಿ ಬಹಿರಂಗವಾಗಿಯೇ ಪ್ರಯತ್ನಿಸಿದರು.
  7. “ನನ್ನನ್ನು ಆಯ್ಕೆ ಮಾಡಿದರೆ ನಾನೇ ಮುಂದಿನ ಮುಖ್ಯಮಂತ್ರಿ,’’ ಎನ್ನುವ ಸಿದ್ದರಾಮಯ್ಯ ಆತ್ಮವಿಶ್ವಾಸದ ಮಾತು ಕೆಲವು ಕಡೆ ದುಬಾರಿಯಾಗಿ ಪರಿಣಮಿಸಿದೆ. “ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ, ದಲಿತರನ್ನು ಮುಖ್ಯಮಂತ್ರಿ ಮಾಡಲ್ಲ. ನಾವು ಅಧಿಕಾರಕ್ಕೆ ಬಂದರೆ ದಲಿತರನ್ನು ಡಿಸಿಎಂ ಮಾಡುತ್ತೇವೆ,’’ ಎಂದು ಜೆಡಿಎಸ್‌ ನಾಯಕರು ಸಾರುವ ಮೂಲಕ, ದಲಿತ ವರ್ಗ ಕಾಂಗ್ರೆಸ್ ವಿರುದ್ಧ ತಿರುಗಿವಂತೆ ಮಾಡಿದರು. ಬಿಎಸ್ಪಿ-ಜೆಡಿಎಸ್‌ ಮೈತ್ರಿಯೂ ದಲಿತ ಮತ ಚದುರಲು ಅಲ್ಲಲ್ಲಿ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ದಶಕಗಳಿಂದ ಬಲ್ಲ ಎಲ್ಲ ಸಮುದಾಯದ ಕೆಲ ಹಿರಿಯರು ಅವರನ್ನು ಗೆಲ್ಲಿಸಲು ನಿರ್ಣಯಿಸಿದ್ದರಾದರೂ,ಅವರ ಆಶಯ ಮನೆ ಮಂದಿಯನ್ನು, ಊರಿನ ಯುವಕರನ್ನು ತಟ್ಟಿದಂತಿಲ್ಲ.
  8. ಜೆಡಿಎಸ್ ಪಕ್ಷ ಮತ್ತು ನಾಯಕರ ವಿರುದ್ಧ ಸಿದ್ದರಾಮಯ್ಯ ಕಟು ಟೀಕಾ ಪ್ರಹಾರ ನಡೆಸಿದ್ದು ರಾಜಕೀಯ ತಂತ್ರವೇ ಆದರೂ,ಅದನ್ನು “ಸಿದ್ದರಾಮಯ್ಯ ಒಕ್ಕಲಿಗ ವಿರೋಧಿ’’ ಎಂದು ಬಿಂಬಿಸಲು ಜೆಡಿಎಸ್ ಸಮರ್ಥವಾಗಿ ಬಳಸಿಕೊಂಡಿತು. ಕೊನೆಯಲ್ಲಿ ದೇವೇಗೌಡ, ಕುಮಾರಸ್ವಾಮಿಯನ್ನು ಸಿದ್ದರಾಮಯ್ಯ ಏಕವಚನದಲ್ಲಿ ತಡವಿಕೊಂಡರು. ರೇವಣ್ಣ ವಿರುದ್ಧ ಮಂಜೇಗೌಡರನ್ನು ಕಣಕ್ಕಿಳಿಸಿ,ಆಡಿದ ಮಾತು ಸಮುದಾಯದ ಜನರನ್ನು ಕೆರಳಿಸಿದವು. ತುಸು “ಲಿಬರಲ್‌’’ ಆಗಿದ್ದ ಒಕ್ಕಲಿಗರು ಕೂಡ ಸಿದ್ದರಾಮಯ್ಯ ವಿರುದ್ಧ ನಿಂತರು. ಕೆಲವು ಒಕ್ಕಲಿಗ ಮುಖಂಡರನ್ನು ಜೆಡಿಎಸ್‌ ತೊರೆದು ಸಿದ್ದರಾಮಯ್ಯ ಕ್ಯಾಂಪ್‌ ಸೇರಿದರಾದರೂ,ಅವರು ತಮ್ಮೊಂದಿಗೆ ಜಾತಿ ಮತಗಳನ್ನು ಸೆಳೆದು ತರುವಲ್ಲಿ ಯಶಸ್ವಿಯಾದಂತಿಲ್ಲ. ಒಕ್ಕಲಿಗ ಮತದಾರರ ಮೇಲೆ ಪ್ರಭಾವ ಬೀರುವಂತ ಕಾಂಗ್ರೆಸ್ ಕಟ್ಟಾಳುಗಳು ಕೂಡ ಈ ಕ್ಷೇತ್ರದತ್ತ ಸುಳಿಯಲಿಲ್ಲ. ಕೊನೆಯಲ್ಲಿ, ಅಂಬರೀಶ್ ಕೂಡ ಕೈ ಎತ್ತಿದರು.
  9. ಸಿದ್ದರಾಮಯ್ಯ ಪರ ೨೦೦೬ರಲ್ಲಿದ್ದ “ರಾಜಕೀಯ ಅನುಕಂಪ’’ ಈಗಿರಲಿಲ್ಲ. ಆಗ ಜೊತೆಗಿದ್ದು,ಕೈಹಿಡಿದ ಎಚ್‌.ವಿಶ್ವನಾಥ್, ವಿ.ಶ್ರೀನಿವಾಸ ಪ್ರಸಾದ್‌ ಮತ್ತು ಸಿದ್ದರಾಮಯ್ಯ ಜೊತೆಗಿದ್ದು ಬೆಳೆದ ಅನೇಕರು ಬೇರೆ ಬೇರೆ ಪಕ್ಷದ ಪಾಲಾಗಿ,ಈಗ ಅವರ ಸೋಲನ್ನು ಹಂಬಲಿಸುತ್ತಿದ್ದರು. ಕೆಲವರು ಕೊನೆ ದಿನಗಳಲ್ಲಿ ಬಳಿ ಬಂದರಾದರೂ ಆ ವೇಳೆಗೆ ಸ್ಥಿತಿ ಕೈ ಮೀರಿತ್ತು. ಮಾತ್ರವಲ್ಲ, ಸಿದ್ದರಾಮಯ್ಯ ಜೊತೆ ದಶಕಗಳ ಕಾಲ ಇದ್ದ ಜಿಟಿಡಿ ಅವರ ಚುನಾವಣಾ ತಂತ್ರಗಾರಿಕೆ,ಗುಣ-ದೌರ್ಬಲ್ಯಗಳನ್ನು ಅರಿತಿದ್ದವರು. ಅವರಿಗೆ, ದೇವೇಗೌಡ,ಕುಮಾರಸ್ವಾಮಿ, ವಿಶ್ವನಾಥ್, ಬಿ.ಎಸ್.ಯಡಿಯೂರಪ್ಪ,ಶ್ರೀನಿವಾಸ ಪ್ರಸಾದ್ ಮುಂತಾದವರ ಪ್ರತ್ಯಕ್ಷ - ಪರೋಕ್ಷ ಬೆಂಬಲವಿತ್ತು.
  10. ಸಿದ್ದರಾಮಯ್ಯ ಶಾಸಕ, ಸಚಿವ,ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಯಾಗಿ ಮಾಡಿದ ಕೆಲಸಗಳು ಕೈಹಿಡಿಯಬಹುದೆನ್ನುವ ವಿಶ್ವಾಸ ಹೊಂದಿದ್ದರು. ತಾವು ಅಧಿಕಾರದಲ್ಲಿದ್ದಾಗ ಕ್ಷೇತ್ರಕ್ಕೆ ಮಾಡಿದ ಕೆಲಸಗಳನ್ನು ಪ್ರತಿ ಗ್ರಾಮಕ್ಕೆ ಹೋದಾಗ ವಿವರಿಸಿದರು. ಆದರೆ,ಅದ್ಯಾವುದೂ ಪರಿಣಾಮ ಬೀರಲಿಲ್ಲ. “ಸಿಎಂ ಒಳ್ಳೆ ಯೋಜನೆ ನೀಡಿರಬಹುದು. ನಮಗೆ ತಲುಪಿಲ್ಲ,’’ಎನ್ನುವ ಆಕ್ಷೇಪ ಅನೇಕ ಕಡೆ ದಟ್ಟವಾಗಿತ್ತು. ಅಬಿವೃದ್ಧಿ ಯೋಜನೆಗಳ ಹೆಸರಿನಲ್ಲಿ ತಾವು ಕೊಬ್ಬಿದ ಸ್ಥಳೀಯ ಕಾಂಗ್ರೆಸ್ ನಾಯಕರ ಬಗ್ಗೆ ಅನೇಕರು ಅಸಮಾಧಾನ ಹೊಂದಿದ್ದರು.

ಇಂಥ ಹತ್ತು ಹಲವು ಸಂಗತಿಗಳು ಸಿದ್ದರಾಮಯ್ಯ ಸೋಲಿನಲ್ಲಿ ಬೆರೆತಿವೆ. ಮುಖ್ಯಮಂತ್ರಿಯಾಗಿ ಐದು ವರ್ಷ ರಾಜ್ಯಭಾರ ನಡೆಸಿದ ವ್ಯಕ್ತಿ ಯಾವ ಕಾರಣಗಳಿಗೆ ಸೋಲಬಾರದಾಗಿತ್ತೋ, ಅವೆಲ್ಲಾ ಕಾರಣಗಳೂ ಅವರ ಸೋಲಿನಲ್ಲಿ ಸೇರಿವೆ. “ಸಿದ್ದರಾಮಯ್ಯ ರಾಜಕೀಯ ಭವಿಷ್ಯ ಆರಂಭವಾದ ಕ್ಷೇತ್ರದಲ್ಲೇ ಅಂತ್ಯವಾಗಲಿದೆ,’’ ಎನ್ನುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಬಹಿರಂಗ ಭವಿಷ್ಯ ತಕ್ಕ ಮಟ್ಟಿಗೆ ನಿಜವಾಗಿದೆ. “ಮುಖ್ಯಮಂತ್ರಿ ಕಚೇರಿಯಿಂದ ಎಚ್.ಡಿ. ದೇವೇಗೌಡರ ಫೋಟೋ ಕಿತ್ತೆಸೆದವರನ್ನು ಅಧಿಕಾರದಿಂದ ಕಿತ್ತೆಸೆಯಿರಿ,’’ ಎನ್ನುವ ಜಿ.ಟಿ.ದೇವೇಗೌಡರ ಎತ್ತಿಕಟ್ಟುವ ಹೇಳಿಕೆ ಕೂಡ ಪರಿಣಾಮ ಬೀರಿದೆ. ಒಕ್ಕಲಿಗರ ಐಕಾನ್‌ ಕೆಂಪೇಗೌಡರ ಹೆಸರಿನಲ್ಲಿ ಜಯಂತಿ ಆಚರಣೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಟ್ಟದ್ದು, ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದನ್ನು ಹೇಳಿ ಒಕ್ಕಲಿಗರ ಮನ ಒಲಿಸಿಕೊಳ್ಳುವ ಸಿದ್ದರಾಮಯ್ಯ ಕೊನೆಯ ಪ್ರಯತ್ನ ಕೂಡ ಕೈಗೂಡಲಿಲ್ಲ. “ಜಾತಿ ಮತಗಳನ್ನು ಮುಂದೊಡ್ಡಿ ರಾಜಕೀಯ ಮಾಡುವುದು ಈ ಕಾಲದಲ್ಲಿ ನಡೆಯಲ್ಲ. ಯಾರು ಕೆಲಸ ಮಾಡಿದ್ದಾರೆ; ಯಾರು ಕೇವಲ ಮಾತನಾಡುತ್ತಾರೆ ಎನ್ನುವುದನ್ನು ಜನ ಬಲ್ಲರು,’’ ಎಂದು ಅವರು ಮತ್ತೆ ಮತ್ತೆ ಹೇಳಿದ ಮಾತು ಸೋತಿದೆ.

ಇದನ್ನೂ ಓದಿ : ಚಾಮುಂಡೇಶ್ವರಿ: ಕೊನೆ ಕ್ಷಣದಲ್ಲೂ ನಿರೂಪಿತ ಜಿಟಿಡಿ- ಸಿದ್ದರಾಮಯ್ಯ ಹಣಾಹಣಿ!

ಕೆಲವು ಪ್ರಬಲ ಜಾತಿಗಳು ಒಗ್ಗಟ್ಟಾದರೆ ಚುನಾವಣಾ ಫಲಿತಾಂಶವನ್ನು ಪೂರ್ವದಲ್ಲೇ ನಿರ್ಣಯಿಸಬಹುದೆನ್ನುವ ಅಲಿಖಿತ ಸಂದೇಶವನ್ನು ಈ ಕ್ಷೇತ್ರ ರವಾನಿಸಿದೆ. ಇದನ್ನು ಹೇಗೆ ಬೇಕಾದರೂ ವ್ಯಾಖ್ಯಾನಿಸಬಹುದು: “ಇದು ಸಿದ್ದರಾಮಯ್ಯ ಸೋಲಷ್ಟೆ ಅಲ್ಲ.ಜನತಂತ್ರದ ಆಶಯಗಳ ಸೋಲು,’’ಎನ್ನಬಹುದು. “ ಹೇಗೆ ಸೋತರೂ ಅದು ಸೋಲು. ಜನ ನೀಡಿದ ತೀರ್ಪಿಗೆ ತಲೆ ಬಾಗಬೇಕಷ್ಟೆ,’’ಎಂದೂ ಹೇಳಬಹುದು. ಅದೇನಿದ್ದರೂ, ರಾಜಕೀಯವಾಗಿ ತಮ್ಮನ್ನು “ಮುಗಿಸಲು’’ ಹೊರಟ ಗೌಡರ ಪಕ್ಷಕ್ಕೆ ಅದೇ ಸಿದ್ದರಾಮಯ್ಯ ಪ್ರಾಣವಾಯುವಾಗಿ ಪರಿಣಮಿಸಿದ್ದಾರೆ. ಇಷ್ಟು ಕಾಲ ಎದೆಯುಬ್ಬಿಸಿ,ಗುಟುರು ಹಾಕುತ್ತಿದ್ದವರು, ಹಲವು ಸವಾಲುಗಳಿಗೆ ಎದೆಯೊಡ್ಡಿ ಐದು ವರ್ಷ ಸ್ಧಿರ ಅಧಿಕಾರ ನಡೆಸಿದವರು “ವಿರೋಧಿ ಶಕ್ತಿ’’ಗಳೆದುರು ತಣ್ಣಗೆ ಕೈ ಕಟ್ಟಿ ನಿಂತಿದ್ದಾರೆ. ಇದು ಈ ಕ್ಷೇತ್ರದ ಮತ್ತು ರಾಜ್ಯದ ಜನ ನೀಡಿದ ಫಲಿತಾಂಶದಲ್ಲಿ ಅಡಗಿರುವ ಚೋದ್ಯ. “ ಹೆಂಗಿದ್ದವರು, ಹೆಂಗಾದರು,’’ ಎಂದು ಕುಚೋದ್ಯವನ್ನೂ ಮಾಡಬಹುದು.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More