ಕುತೂಹಲದ ಕೇಂದ್ರವಾದ ರಾಜಭವನ; ಸರ್ಕಾರ ರಚಿಸಲು ಜೆಡಿಎಸ್‌-ಕಾಂಗ್ರೆಸ್‌, ಬಿಜೆಪಿ ಕಸರತ್ತು

ಸಮ್ಮಿಶ್ರ ಸರ್ಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಯತ್ನಿಸುತ್ತಿವೆ. ಇತ್ತ ಬಿಜೆಪಿ ಸರ್ಕಾರ ರಚಿಸಲು ಸಾಕಷ್ಟು ಕಸರತ್ತು ನಡೆಸುತ್ತಿವೆ. ಮೂರು ಪಕ್ಷಗಳ ನಾಯಕರು ರಾಜ್ಯಪಾಲ ವಜೂಭಾಯಿ ವಾಲಾ ಅವರ ಕರೆಗೆ ಕಾಯುತ್ತಿದ್ದಾರೆ

ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿರುವುದರಿಂದ ಸರ್ಕಾರ ರಚಿಸಲು ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಬುಧವಾರ ಕಸರತ್ತು ಮುಂದುವರೆಸಿವೆ. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌ ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಜಿ ಪರಮೇಶ್ವರ್‌ ಅವರು ಮತ್ತೊಮ್ಮೆ ಮಾತುಕತೆ ನಡೆಸಿದ್ದು, ರಾಜ್ಯಪಾಲ ವಜೂಭಾಯಿ ವಾಲಾ ಅವರನ್ನು ಭೇಟಿ ಸರ್ಕಾರ ರಚಿಸಲು ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಮ್ಮಿಶ್ರ ಸರ್ಕಾರ ರಚಿಸಲು ಶಾಸಕರ ಸಹಿ ಒಳಗೊಂಡ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಿದ್ದಾರೆ.

ಈ ಮಧ್ಯೆ, ಬಿಜೆಪಿ ಶಾಸಕರು ಸರ್ವಾನುಮತದಿಂದ ಬಿ ಎಸ್‌ ಯಡಿಯೂರಪ್ಪ ಅವರನ್ನು ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಆಯ್ಕೆ ಮಾಡಿದ್ದಾರೆ. ಸಭೆಯಲ್ಲಿ ಸರ್ಕಾರ ರಚಿಸುವ ಬಗ್ಗೆ ಚರ್ಚೆ ನಡೆಸಿದ ಯಡಿಯೂರಪ್ಪ ಹಾಗೂ ದೆಹಲಿಯಿಂದ ಆಗಮಿಸಿರುವ ಕೇಂದ್ರ ಸಚಿವರುಗಳಾದ ಪ್ರಕಾಶ್‌ ಜಾವ್ಡೇಕರ್‌, ಧರ್ಮೇಂದ್ರ ಪ್ರಧಾನ್, ಜೆ ಪಿ ನಡ್ಡಾ‌ ಹಾಗೂ ಅನಂತ್ ‌ಕುಮಾರ್‌ ಚರ್ಚಿಸಿದರು. ಆನಂತರ ಸಭೆಯು ಯಡಿಯೂರಪ್ಪ ಅವರ ಮನೆಗೆ ವರ್ಗಗೊಂಡಿತು. ಅಲ್ಲಿಂದಲೇ ಬಿಜೆಪಿ ನಾಯಕರು ಸರ್ಕಾರ ರಚಿಸಲು ಕಸರತ್ತು ಮುಂದುವರಿಸಿದ್ದಾರೆ.

ಇತ್ತ ಕಾಂಗ್ರೆಸ್‌-ಜೆಡಿಎಸ್‌ ನಾಯಕರು ರಾಜ್ಯಪಾಲರಿಗೆ ಸರ್ಕಾರ ರಚಿಸಲು ತಮಗೆ ಒಪ್ಪಿಗೆ ಇರುವುದನ್ನು ಪತ್ರದ ಮುಖೇನ ತಿಳಿಸಿದ್ದಾರೆ. ಆಪರೇಷನ್ ಕಮಲದ ಆತಂಕದಲ್ಲಿರುವ ಕಾಂಗ್ರೆಸ್‌, ತನ್ನ ಶಾಸಕರನ್ನು ಬೆಂಗಳೂರಿನ ಬಿಡದಿ ಸಮೀಪದ ಈಗಲ್ಟನ್‌ ರೆಸಾರ್ಟ್‌ಗೆ ಕಳುಹಿಸಿಕೊಟ್ಟಿದೆ. ಈ ಪೈಕಿ ಬಳ್ಳಾರಿಯ ವಿಜಯಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಆನಂದ್ ಸಿಂಗ್‌ ಅವರು ಕಾಂಗ್ರೆಸ್‌ ನಾಯಕರಿಗೆ ಲಭ್ಯರಾಗಿಲ್ಲ ಎನ್ನಲಾಗಿದೆ. ಆನಂದ್‌ ಸಿಂಗ್‌ ಹೊರತುಪಡಿಸಿ ಪಕ್ಷೇತರರಾದ ಮುಳಬಾಗಿಲು ಶಾಸಕ ನಾಗೇಶ್‌ ಹಾಗೂ ರಾಣೆಬೆನ್ನೂರಿನ ಶಂಕರ್‌ ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ. ಇದರಿಂದ ಪಕ್ಷೇತರ ಶಾಸಕರೂ ಸೇರಿದಂತೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯ ಬೆಂಬಲ ೧೧೮ ಶಾಸಕರು ಲಭ್ಯವಾದಂತಾಗಿದೆ. ಬಿಜೆಪಿಯು ೧೦೪ ಸ್ಥಾನದ ಬಲ ಹೊಂದಿದ್ದು, ಸರ್ಕಾರ ರಚಿಸಲು ಇನ್ನೂ ೯ ಸ್ಥಾನಗಳ ಅಗತ್ಯವಿದೆ.

ಇದನ್ನೂ ಓದಿ : ಬಿಜೆಪಿಯಿಂದ ಜೆಡಿಎಸ್‌ ಶಾಸಕರಿಗೆ ೧೦೦ ಕೋಟಿ ರುಪಾಯಿ ಆಮಿಷ: ಎಚ್‌ಡಿಕೆ ಆರೋಪ

ಇದೆಲ್ಲದರ ಮಧ್ಯೆ, ಕುದುರೆ ವ್ಯಾಪಾರ ನಡೆಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಅಲ್ಲದೇ ಸರ್ಕಾರ ರಚಿಸಲು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಅವಕಾಶ ನೀಡಬೇಕು. ಹಿಂದೆ ಗೋವಾ, ಮಿಜೊರಾಂ ಹಾಗೂ ನಾಗಾಲ್ಯಾಂಡ್‌ನಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಅವಕಾಶ ನೀಡಿಲ್ಲ. ಈಗ ಬಹುಮತಕ್ಕೆ ಅಗತ್ಯವಾದ ಸಂಖ್ಯೆ ನಮ್ಮಲ್ಲಿರುವುದರಿಂದ ಅದೇ ನಿಯಮವನ್ನು ಅನುಸರಿಸಬೇಕು ಎಂದು ಕಾಂಗ್ರೆಸ್‌ ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡುವ ಯತ್ನ ನಡೆಸಿದ್ದವು.

ಇದೆಲ್ಲದರ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜೆಡಿಎಸ್‌ ನಾಯಕ ಎಚ್‌ ಡಿ ಕುಮಾರಸ್ವಾಮಿ ಅವರು ‘ಬಹುಮತವಿಲ್ಲದೇ ಬಿಜೆಪಿ ಸರ್ಕಾರ ರಚಿಸುವುದು ಅಸಾಧ್ಯ ಎಂದಿದ್ದಾರೆ. ಸರ್ಕಾರ ರಚಿಸಲು ಬಿಜೆಪಿ ನಾಯಕರು ವಾಮಮಾರ್ಗ ಅನುಸರಿಸುತ್ತಿದ್ದಾರೆ’ ಎಂದು ಗುಡುಗಿದ್ದಾರೆ.

ಈ ನಡುವೆ ಸಂಜೆ ದೆಹಲಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಪಿ ಚಿದಂಬರಂ, ಕಪಿಲ್ ಸಿಬಲ್‌, ಕರ್ನಾಟಕದ ರಾಜ್ಯಪಾಲರು ಬಿಜೆಪಿ ಸರ್ಕಾರ ರಚಿಸುವ ಅವಕಾಶವನ್ನು ನೀಡಿದರೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More