ಅಚ್ಚರಿಯ ಫಲಿತಾಂಶಗಳೊಂದಿಗೆ ಮತ್ತೆ ರೆಕ್ಕೆಪುಕ್ಕ ಪಡೆದ ಇವಿಎಂ ಅಕ್ರಮ ವಿವಾದ

ದಕ್ಷಿಣ ಕನ್ನಡದಲ್ಲಿ ಸೋತ ಎಲ್ಲಾ ಏಳು ಶಾಸಕರು ಮತಯಂತ್ರಗಳ ಬಳಕೆ ವಿರುದ್ಧ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸಿದ್ದರಾಮಯ್ಯ, ದೇವೇಗೌಡ ಚುನಾವಣೆಗೂ ಹಲವು ದಿನಗಳ ಮೊದಲೇ ಮತಪತ್ರ ಬಳಸುವಂತೆ ಒತ್ತಾಯಿಸಿದ್ದರೂ ಚುನಾವಣಾ ಆಯೋಗ ತಲೆಕೆಡಿಸಿಕೊಳ್ಳಲಿಲ್ಲ ಏಕೆ?

ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ (ವಿದ್ಯುನ್ಮಾನ ಮತಯಂತ್ರ)ಗಳನ್ನು ತಿರುಚಿರುವ ಸಂಶಯ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ದಕ್ಷಿಣ ಕನ್ನಡದಲ್ಲಿ ಸೋಲನುಭವಿಸಿದ ಏಳು ಕಾಂಗ್ರೆಸ್ ಅಭ್ಯರ್ಥಿಗಳು ಈ ಸಂಬಂಧ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇತ್ತ ಇವಿಎಂ ಬಗ್ಗೆ ಸಂಶಯ ವ್ಯಕ್ತಪಡಿಸಿ ಧಾರವಾಡ ಗ್ರಾಮೀಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ವಿನಯ ಕುಲಕರ್ಣಿ ಬೆಂಬಲಿಗರು ಇವಿಎಂ ಯಂತ್ರಗಳ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಮತ್ತೊಂದೆಡೆ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಜುಗೌಡ ಪಾಟೀಲ ಕೂಡ 12 ಮತಯಂತ್ರಗಳು ಬದಲಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಆತ್ಮಹತ್ಯೆಯ ಬೆದರಿಕೆ ಒಡ್ಡಿದ್ದಾರೆ. ಇಲ್ಲಿಂದ ವಿಧಾನಸಭೆ ಪ್ರವೇಶಿಸಿದವರು ಕಾಂಗ್ರೆಸ್ಸಿನ ಎಂ ಬಿ ಪಾಟೀಲ.

ರಾಜ್ಯದಲ್ಲಿ ಮತಪತ್ರಗಳ ಮೂಲಕ ಚುನಾವಣೆ ನಡೆಸುವಂತೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಜನವರಿಯಲ್ಲೇ ಕೋರಿದ್ದರು. ಜೆಡಿಎಸ್ ವರಿಷ್ಠ ದೇವೇಗೌಡ ಕಳೆದ ಮಾರ್ಚಿನಲ್ಲಿ “ಮುಂದುವರಿದ ದೇಶಗಳಂತೆ ನಮ್ಮಲ್ಲಿ ಕೂಡ ಮತಪತ್ರಗಳ ಮೂಲಕವೇ ಚುನಾವಣೆ ನಡೆಸಬೇಕು,” ಎಂದು ಅಭಿಪ್ರಾಯಪಟ್ಟಿದ್ದರು. ಒಂದು ಚುನಾವಣೆಗೆ ಬಳಸಿದ ಯಂತ್ರವನ್ನು ಮೂರು ತಿಂಗಳು ಉಪಯೋಗಿಸಬಾರದು ಎಂಬ ನಿಯಮವಿದ್ದರೂ ಗುಜರಾತಿನಲ್ಲಿ ಬಳಸಿದ ಮತಯಂತ್ರಗಳನ್ನೇ ಕರ್ನಾಟಕಕ್ಕೆ ತರುತ್ತಿರುವುದೇಕೆ ಎಂದು ಪ್ರಶ್ನಿಸಿದ್ದರು. ಇದೆಲ್ಲದರ ನಡುವೆ ಇವಿಎಂ ಮೂಲಕವೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದ್ದೇಕೆ ಎಂಬ ಪ್ರಶ್ನೆಗಳು ಈಗ ಉದ್ಭವಿಸಿವೆ. ಮತದಾನದ ದಿನ ಹತ್ತಿರವಿದ್ದಾಗ ಕಾಂಗ್ರೆಸ್ ಅಥವಾ ಜೆಡಿಎಸ್ ಇವಿಎಂ ಬಗ್ಗೆ ಚಕಾರ ಎತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ತಾವೇ ಖುದ್ದಾಗಿ ‘ಕಾಂಗ್ರೆಸ್ ಸೋತರೆ ಇವಿಎಂಗಳ ಮೇಲೆ ಆರೋಪ ಹೊರಿಸುತ್ತದೆ’ ಎಂಬರ್ಥದ ಮಾತುಗಳನ್ನು ಪ್ರಚಾರದ ಸಂದರ್ಭದಲ್ಲಿ ಆಡಿದ್ದರು. ಇದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿತ್ತು. ಪ್ರತಿಪಕ್ಷಗಳೇ ಪ್ರಸ್ತಾಪಿಸದ ವಿಚಾರವನ್ನು ಪ್ರಧಾನಿ ಏಕೆ ಮುಂದುಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎದ್ದಿತ್ತು.

ಕಾಂಗ್ರೆಸ್ ಅಭ್ಯರ್ಥಿಗಳಾದ ಬಂಟ್ವಾಳದ ರಮಾನಾಥ ರೈ, ಪುತ್ತೂರಿನ ಶಕುಂತಲಾ ಶೆಟ್ಟಿ, ಮಂಗಳೂರು ಉತ್ತರ ಕ್ಷೇತ್ರದ ಮೋಯಿದ್ದೀನ್ ಬಾವಾ, ಮಂಗಳೂರು ದಕ್ಷಿಣ ಕ್ಷೇತ್ರದ ಜೆ ಆರ್ ಲೋಬೊ, ಸುಳ್ಯದ ಡಾ. ರಘು, ಮೂಡುಬಿದಿರೆ ಕ್ಷೇತ್ರದ ಅಭಯಚಂದ್ರ ಜೈನ್, ಬೆಳ್ತಂಗಡಿಯ ವಸಂತ ಬಂಗೇರ ಈ ಸಂಬಂಧ ಆಯಾ ಕ್ಷೇತ್ರಗಳ ರಿಟರ್ನಿಂಗ್ ಅಧಿಕಾರಿಗಳಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ. ಮೋಯಿದ್ದೀನ್ ಬಾವಾ ತನ್ನ ಸೋಲಿಗೆ ಇವಿಎಂ ಕಾರಣ ಎಂದು ನೇರ ಆರೋಪ ಮಾಡಿದ್ದಾರೆ. ಅವರು ಬಿಜೆಪಿಯ ಹೊಸಮುಖ ಡಾ. ಭರತ್ ಶೆಟ್ಟಿ ವಿರುದ್ಧ ಸೋಲನುಭವಿಸಿದ್ದಾರೆ. ಕರ್ನಾಟಕ ಚುನಾವಣೆಯ ಫಲಿತಾಂಶ ಹೊರಬರುತ್ತಿದ್ದಂತೆ ಇದು ಬಿಜೆಪಿಯ ಗೆಲುವಲ್ಲ ಮತಯಂತ್ರಗಳ ಗೆಲುವು ಎಂದು ಶಿವಸೇನೆ ಕುಹಕವಾಡಿತ್ತು. ಪಕ್ಷದ ಮುಖ್ಯಸ್ಥ ರಾಜ್ ಠಾಕ್ರೆ, “ತಾಕತ್ತಿದ್ದರೆ ಬಿಜೆಪಿ ಮತಪತ್ರಗಳ ಮೂಲಕ ಚುನಾವಣೆ ಎದುರಿಸಲಿ,” ಎಂದು ಸವಾಲು ಹಾಕಿದ್ದರು.

ಇದನ್ನೂ ಓದಿ : ರಾಜ್ಯ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದ ಇವಿಎಂ ಚರ್ಚೆ

ಉತ್ತರ ಪ್ರದೇಶ ಚುನಾವಣೆಯಲ್ಲಿ ಊಹೆಗೂ ಮೀರಿದ ಸ್ಥಾನಗಳನ್ನು ಬಿಜೆಪಿ ಪಡೆಯುವುದರೊಂದಿಗೆ ಇವಿಎಂ ವಿವಾದ ಮತ್ತೆ ಜೀವ ಪಡೆದುಕೊಂಡಿತ್ತು. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಕೂಡ ಮತಯಂತ್ರಗಳ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಮಾಯಾವತಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ಮೊದಲೂ ಇವಿಎಂಗಳ ಕಾರ್ಯವೈಖರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಕೇಜ್ರಿವಾಲ್ ಇವಿಎಂಗಳನ್ನು ಹ್ಯಾಕ್ ಮಾಡುವ ಕುರಿತಂತೆ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದ್ದರು. ಹ್ಯಾಕಿಂಗ್ ಸಾಧ್ಯವಿಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಲೇ ಬಂದಿತ್ತು. 2009ರಲ್ಲಿ ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ ಡಾ. ಸುಬ್ರಮಣಿಯನ್ ಸ್ವಾಮಿ ಆ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಹಲವೆಡೆ ಅಕ್ರಮ ನಡೆದಿದೆ ಎಂದು ದೆಹಲಿ ಹೈಕೋರ್ಟಿನಲ್ಲಿ ದೂರಿದ್ದರು.

ಅಮೆರಿಕ, ಬ್ರಿಟನ್ ಕೆನಡಾ ಸೇರಿದಂತೆ ಅನೇಕ ದೇಶಗಳು ಇವಿಎಂ ಉಪಯೋಗಿಸುತ್ತಿಲ್ಲ. ಆಸ್ಟ್ರೇಲಿಯಾ ರೀತಿಯ ರಾಷ್ಟ್ರಗಳಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮಾತ್ರ ಇವಿಎಂ ಬಳಕೆ ಇದೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಅವುಗಳನ್ನು ಬಳಸಲು ಹಿಂದೇಟು ಹಾಕಲಾಗುತ್ತಿದೆ. ಕೆಲವು ದೇಶಗಳಲ್ಲಿ ಅಂತರ್ಜಾಲದ ಮೂಲಕ ಮತ ಚಲಾಯಿಸುವ ಹಕ್ಕು ನೀಡಲಾಗಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More