‘ಪಾನಿವಾಲಾ ಮೇಯರ್’ ನೀರಿನ ದಾಹವನ್ನಷ್ಟೇ ಅಲ್ಲ, ಅಧಿಕಾರ ದಾಹವನ್ನೂ ತಣಿಸಿದವರು!

ತಮ್ಮ ಸ್ವಾಮಿನಿಷ್ಠೆಯ ಕಾರಣಕ್ಕಾಗಿಯೇ ಬಿಜೆಪಿಯಲ್ಲಿ ಹೆಸರಾಗಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಇದೀಗ ಸವಾಲಿನ ದಿನಗಳನ್ನು ಎದುರಿಸುತ್ತಿದ್ದಾರೆ. ರಾಜಕೀಯ ಬಿಕ್ಕಟ್ಟಿನ, ಸಂದಿಗ್ಧತೆಯ ಹೊತ್ತಲ್ಲಿ ಅನುಸರಿಸಲೇಬೇಕಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಾದರಿಗಳ ಮುಂದೆ ಅವರ ಸ್ವಾಮಿನಿಷ್ಠೆ ಯಾವ ಮಟ್ಟಿಗಿನ ಪಾತ್ರ ವಹಿಸುತ್ತದೆಂಬುದನ್ನು ದೇಶದ ಜನತೆ ಎದುರುನೋಡುತ್ತಿದ್ದಾರೆ

ವಜುಭಾಯಿ ವಾಲಾ…

ಅತಂತ್ರ ವಿಧಾನಸಭೆಯ ಜೋಕಾಲಿಗೆ ಸಿಲುಕಿ ಹೊಯ್ದಾಡುತ್ತಿರುವ ಕರ್ನಾಟಕದ ರಾಜಕಾರಣಕ್ಕೆ ಒಂದು ನಿಲುಗಡೆಯನ್ನು ನೀಡಲು ಶಕ್ತರು ಎಂಬ ಹಿನ್ನೆಲೆಯಲ್ಲಿ ಇಡೀ ದೇಶದ ಗಮನ ಈಗ ರಾಜ್ಯಪಾಲರಾಗಿರುವ ಇವರ ಮೇಲಿದೆ.

೧೧೬ ಸ್ಥಾನಬಲದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಅವಕಾಶ ನೀಡದೆ, ಕೇವಲ ೧೦೪ ಸ್ಥಾನದ ಬಿಜೆಪಿಗೆ ಸರ್ಕಾರದ ರಚನೆಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯಪಾಲ ವಜುಭಾಯಿ ವಾಲಾ, ಅವರ ನಡೆಯ ಬಗ್ಗೆ ಸಾಕಷ್ಟು ಚರ್ಚೆಗೊಳಗಾಗಿದೆ. ಆದರೆ, ವಾಲಾ ಅವರ ರಾಜಕೀಯ ಹಿನ್ನೆಲೆಯನ್ನು ಅರಿತವರಿಗೆ ಅವರ ಈ ನಿರ್ಧಾರ ಅಂತಹ ಅಚ್ಚರಿಯ ಸಂಗತಿಯೇನಲ್ಲ.

ಅಷ್ಟಕ್ಕೂ, ವಾಲಾ ರಾಜಕೀಯ ವಲಯದಲ್ಲಿ, ಅದರಲ್ಲೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಪರಿವಾರದ ವಲಯದಲ್ಲಿ, ತಮ್ಮ ಪಕ್ಷನಿಷ್ಠೆಗಾಗಿಯೇ ಹೆಸರಾದವರು. ತಮ್ಮ ಸ್ವಂತದ ಹಿತಾಸಕ್ತಿಯನ್ನು ಬದಿಗಿಟ್ಟು ಪಕ್ಷದ ಮತ್ತು ಪಕ್ಷದ ನಾಯಕರ ಪರವಾಗಿ ಗಟ್ಟಿಯಾಗಿ ನಿಂತ ಹಲವು ಉದಾಹರಣೆಗಳು ಅವರ ರಾಜಕೀಯ ಜೀವನದುದ್ದಕ್ಕೂ ಸಾಲುಗಟ್ಟಿವೆ.

ಸ್ವತಃ ಪ್ರಧಾನಿ ಮೋದಿಯವರು ೨೦೦೧ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಅವರನ್ನು ವಿಧಾನಸಭೆಗೆ ಆಯ್ಕೆಮಾಡಿ ಕಳಿಸುವ ಸಲುವಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮ ಸಾಂಪ್ರದಾಯಿಕ ರಾಜ್‌ಕೋಟ್‌ ಕ್ಷೇತ್ರವನ್ನೇ ಬಿಟ್ಟುಕೊಟ್ಟಿದ್ದ ಪಕ್ಷನಿಷ್ಠೆ ಮತ್ತು ನಾಯಕನಿಷ್ಠೆ ವಜುಭಾಯಿ ವಾಲಾ ಅವರದ್ದು. ಶಾಸಕರಾಗಿ ಅಷ್ಟೇ ಅಲ್ಲ; ಗುಜರಾತ್ ಬಿಜೆಪಿಯ ಅಧ್ಯಕ್ಷರಾಗಿಯೂ ಅವರು ಇಂತಹ ತ್ಯಾಗಗಳನ್ನು ಮಾಡಿದ್ದಾರೆ. ೨೦೦೬ರಲ್ಲಿ ಪುರುಷೋತ್ತಮ್ ರುಪಾಲ ಅವರಿಗೆ ಪಕ್ಷದ ಅಧ್ಯಕ್ಷ ಪಟ್ಟ ಕಟ್ಟಲು ವರಿಷ್ಠರು ತೀರ್ಮಾನಿಸಿದಾಗ, ಅವರ ಆಣತಿಯಂತೆ ಗುಜರಾತ್ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು.

ಅಂತಹ ತ್ಯಾಗಗಳಿಗೆ ಪ್ರತಿಫಲವಾಗಿಯೇ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ವಾಲಾ ಅವರಿಗೆ ಕರ್ನಾಟಕದ ರಾಜ್ಯಪಾಲ ಹುದ್ದೆ ಒಲಿಯಿತು. ಮೋದಿ ಸರ್ಕಾರದ ನೇಮಕ ಮಾಡಿದ ರಾಜ್ಯಪಾಲರ ಪೈಕಿ ವಾಲಾ ಅವರೇ ಮೊದಲಿಗರು ಎಂಬುದು ಕೂಡ ಅವರ ಪಕ್ಷ ಮತ್ತು ಮೋದಿನಿಷ್ಠೆಗೆ ಮತ್ತೊಂದು ನಿದರ್ಶನ.

ಹಾಗೇ, ರಾಜ್‌ಕೋಟ್‌ನ ಜನ ಅವರನ್ನು ಇಂದಿಗೂ ‘ಪಾನಿವಾಲಾ ಮೇಯರ್’ ಎಂದೇ ಕರೆಯುತ್ತಾರೆ. ೧೯೮೬ರ ಹೊತ್ತಿಗೆ ಗುಜರಾತ್ ಭೀಕರ ಬರಕ್ಕೆ ತುತ್ತಾಗಿದ್ದಾಗ, ಸೌರಾಷ್ಟ್ರ ಮತ್ತು ರಾಜ್‌ಕೋಟ್‌ ಪ್ರದೇಶದಲ್ಲಿ ಕುಡಿಯುವ ನೀರಿನ ಹಾಹಾಕಾರವೇ ಉಂಟಾಗಿತ್ತು. ಅಂತಹ ಕ್ಷಾಮದ ಹೊತ್ತಲ್ಲಿ ಒಬ್ಬ ಶಾಸಕರಾಗಿ ಮತ್ತು ಮಾಜಿ ಮೇಯರ್ ಆಗಿ ಅಲ್ಲಿನ ಜನರ ಸಂಕಷ್ಟವನ್ನು ರಾಜ್ಯ ಸರ್ಕಾರದ ಮುಂದೆ ಸಮರ್ಥವಾಗಿ ಮಂಡಿಸಿದ್ದ ವಾಲಾ, ವಿವಿಧ ಜಲಾಶಯಗಳ ನೀರನ್ನು ರೈಲಿನ ಮೂಲಕ ರಾಜ್‌ಕೋಟ್ ಮತ್ತು ಸೌರಾಷ್ಟ್ರ ವಲಯಕ್ಕೆ ಸಾಗಿಸುವ ವ್ಯವಸ್ಥೆ ಮಾಡಿದ್ದರು. ಅವರ ಆ ಭಗೀರಥ ಪ್ರಯತ್ನಕ್ಕಾಗಿ ಅವರನ್ನು ರಾಜ್‌ಕೋಟ್‌ ಜನ ಪಾನಿವಾಲಾ ಮೇಯರ್ ಎಂದೇ ಕರೆಯತೊಡಗಿದ್ದರು.

ಹೀಗೆ ಪಾನಿವಾಲಾ ಮೇಯರ್, ಕೇವಲ ರಾಜ್‌ಕೋಟ್‌ ಜನರ ನೀರಿನ ದಾಹವನ್ನು ಮಾತ್ರವಲ್ಲ; ಕಾಲಕಾಲಕ್ಕೆ ಗುಜರಾತ್ ಬಿಜೆಪಿಯ ನಾಯಕರ ಅಧಿಕಾರ ದಾಹವನ್ನೂ ತಣಿಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ ಎಂಬುದು ಅವರ ಹೆಗ್ಗಳಿಕೆ.

ಬಾಲ್ಯದಿಂದಲೇ ಕಟ್ಟಾ ಆರ್‌ಎಸ್‌ಎಸ್‌ ಕಾರ್ಯಕರ್ತರಾಗಿದ್ದ ವಾಲಾ, ೧೯೭೧ರಲ್ಲಿ ಬಿಜೆಪಿಯ ಪೂರ್ವಾಶ್ರಮ ಜನಸಂಘವನ್ನು ಸೇರುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದರು. ೧೯೮೫ರಲ್ಲಿ ರಾಜ್‌ಕೋಟ್‌ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಅವರು, ಏಳು ಬಾರಿ ಆ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಮೂರು ಬಾರಿ ಗುಜರಾತ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಣಕಾಸು ಸಚಿವರಾಗಿಯೂ ೧೧ ಬಾರಿ ಗುಜರಾತ್ ಬಜೆಟ್ ಮಂಡಿಸಿರುವ ಅವರು, ಮೋದಿ ಅವರ ಗುಜರಾತ್ ಸಚಿವ ಸಂಪುಟದಲ್ಲಿ ಕೂಡ ಒಂಭತ್ತು ವರ್ಷ ಸಚಿವರಾಗಿದ್ದರು. ೧೯೯೦ರಿಂದ ಸಚಿವರಾಗಿ ಹಣಕಾಸು, ಇಂಧನ, ಕಂದಾಯ ಸೇರಿದಂತೆ ವಿವಿಧ ಖಾತೆಗಳನ್ನು ನಿರ್ವಹಿಸಿರುವ ಅವರು, ೯೦ರ ದಶಕದಲ್ಲಿ ಗುಜರಾತ್ ಬಿಜೆಪಿಯ ಸಂಕಷ್ಟದ ದಿನಗಳಲ್ಲಿಯೂ ಪಕ್ಷದ ನೆಲೆ ಕಾಯ್ದುಕೊಳ್ಳಲು ಸಾಕಷ್ಟು ಶ್ರಮಿಸಿದ್ದಾರೆ.

ಬಿಜೆಪಿ ಪಕ್ಷದ ವಿಷಯದಲ್ಲಿ ವಾಲಾ ಅವರಿಗಿರುವ ನಿಷ್ಠೆಯ ಕಾರಣಕ್ಕಾಗಿಯೇ, ೧೯೯೬ರಲ್ಲಿ ಅಂದಿನ ಪ್ರಧಾನಿ ದೇವೇಗೌಡ ಮತ್ತು ವಾಲಾ ನಡುವೆ ರಾಜಕೀಯ ಸಂಘರ್ಷವೇ ನಡೆದುಹೋಗಿತ್ತು.

ಗುಜರಾತ್ ಬಿಜೆಪಿಯಲ್ಲಿ ಬಣ ಸಂಘರ್ಷ ತಾರಕಕ್ಕೇರಿ, ಎರಡೂ ಬಣಗಳ ನಡುವೆ ವಿಧಾನಸಭೆಯ ಸಭಾಂಗಣದಲ್ಲೇ ಭಾರೀ ಹಿಂಸಾಚಾರ ನಡೆದಿತ್ತು. ಆ ಹಿನ್ನೆಲೆಯಲ್ಲಿ ಅಂದಿನ ರಾಜ್ಯಪಾಲ ಕೆ ಪಿ ಸಿಂಗ್ ಬಿಜೆಪಿ ಸರ್ಕಾರವನ್ನು ಅಮಾನತು ಮಾಡಿದ್ದರು. ಸುರೇಶ್ ಮೆಹ್ತಾ ನೇತೃತ್ವದ ಬಿಜೆಪಿ ಸರ್ಕಾರ ವಿಶ್ವಾಸ ಮತ ಯಾಚನೆಯನ್ನು ಗೆದ್ದ ಬಳಿಕವೂ ಸರ್ಕಾರವನ್ನು ಅಮಾನತುಗೊಳಿಸಿದ ರಾಜ್ಯಪಾಲರ ಕ್ರಮಕ್ಕೆ ಪ್ರಧಾನಿ ಮೌನ ಸಮ್ಮತಿ ನೀಡಿದ್ದರು ಎಂಬುದು ಅಂದು ಗುಜರಾತ್ ಬಿಜೆಪಿ ಅಧ್ಯಕ್ಷರಾಗಿದ್ದ ವಜುಭಾಯಿ ವಾಲಾ ಅವರ ಆರೋಪವಾಗಿತ್ತು. ಬಳಿಕ ರಾಜ್ಯಪಾಲರ ಎದುರು ಶಾಸಕರ ಪರೇಡ್ ನಡೆಸಿ ಬಹುಮತ ಖಚಿತಪಡಿಸಲಾಗಿತ್ತು.

ಇದೀಗ ಕಾಲ ಒಂದು ಸುತ್ತು ಬಂದಿದೆ. ರಾಜಭವನದಲ್ಲಿ ಅಂದಿನ ಗುಜರಾತ್ ಬಿಜೆಪಿ ಅಧ್ಯಕ್ಷ ವಜುಭಾಯಿ ವಾಲಾ ಇದ್ದಾರೆ. ರಾಜಭವನದ ಮುಂದೆ ಶಾಸಕರ ಪರೇಡ್ ನಡೆಸುವ ಸಂಕಷ್ಟದ ಸ್ಥಿತಿಯಲ್ಲಿ ಅದೇ ದೇವೇಗೌಡರ ಜೆಡಿಎಸ್‌ ಪಕ್ಷ ಮತ್ತು ಅವರ ಪುತ್ರ ಎಚ್ ಡಿ ಕುಮಾರಸ್ವಾಮಿ ಇದ್ದಾರೆ.

ಇದನ್ನೂ ಓದಿ : ಆಸ್ತಿ ವಿವರ ಘೋಷಿಸದ ಲೋಕಾಯುಕ್ತ; ರಾಜ್ಯಪಾಲ, ಸ್ಪೀಕರ್‌, ಸಿಎಂಗೆ ನೋಟಿಸ್‌

“ವಜುಭಾಯಿ ಬಹಳ ಹಾಸ್ಯಪ್ರಜ್ಞೆಯ, ಸರಳ ವ್ಯಕ್ತಿತ್ವದ ಮತ್ತು ಸ್ವಾಮಿನಿಷ್ಠೆಯ ಮನುಷ್ಯ. ಹಾಗೇ, ಸ್ವಾಮಿನಿಷ್ಠೆಯೊಂದಿಗೆ ಅವರೊಬ್ಬ ಒಳ್ಳೆಯ ವಕೀಲರೂ ಕೂಡ. ಎಲ್ಲರ ಮಾತನ್ನೂ ಚಿತ್ತಕೊಟ್ಟು ಆಲಿಸುವ ಅವರು, ಅಂತಿಮವಾಗಿ ತಮಗೆ ಅನಿಸಿದ್ದನ್ನೇ ಮಾಡುವವರು” ಎಂಬುದು ಗುಜರಾತ್ ಮಾಜಿ ಮುಖ್ಯಮಂತ್ರಿ ಶಂಕರ್ ಸಿಂಗ್ ವಘೇಲಾ ಅವರು ವಾಲಾ ವ್ಯಕ್ತಿತ್ವನ್ನು ಬಣ್ಣಿಸುವ ಪರಿ.

ಒಂದು ಕಾಲದಲ್ಲಿ ವಾಲಾ ಅವರ ಕಟು ಪಕ್ಷನಿಷ್ಠೆಯ ಕಾರಣಕ್ಕಾಗಿ ರಾಜಕೀಯವಾಗಿ ಸಾಕಷ್ಟು ಏಳುಬೀಳು ಕಂಡ ವಘೇಲಾ ಅವರ ಈ ಮಾತುಗಳು ಈಗಿನ ಕರ್ನಾಟಕದ ರಾಜಕಾರಣದ ಹಿನ್ನೆಲೆಯಲ್ಲೂ ಸಾಕಷ್ಟು ಅರ್ಥ ಪಡೆದುಕೊಂಡಿವೆ. ರಾಜಕೀಯ ಬಿಕ್ಕಟ್ಟಿನ, ಸಂದಿಗ್ಧತೆಯ ಹೊತ್ತಲ್ಲಿ ಅನುಸರಿಸಲೇಬೇಕಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮಾದರಿಗಳ ಮುಂದೆ ಅವರ ಸ್ವಾಮಿನಿಷ್ಠೆ ಯಾವ ಮಟ್ಟಿಗಿನ ಪಾತ್ರ ವಹಿಸುತ್ತದೆ ಎಂಬುದನ್ನು ದೇಶದ ಜನತೆ ಈಗ ಎದುರುನೋಡುತ್ತಿದ್ದಾರೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More