ಹೆಚ್ಚು ಮಾತನಾಡದ, ಏನನ್ನೂ ಮರೆಯದ ದೇವೇಗೌಡರ ತಲೆ ಹೇಗೆ ಓಡುತ್ತೆ? 

ನಿತ್ಯ ರಾಜಕೀಯದಿಂದ ದೂರ ಇರುವಂತೆ ವರ್ತಿಸುವ ದೇವೇಗೌಡರು ಪ್ರತಿಕ್ರಿಯಿಸುವುದಿಲ್ಲ. ಅಧ್ಯಯನ ಶೀಲತೆಯಿಂದಾಗಿ ಅವರು ಒಂದು ಇಲಾಖೆ ಅಥವಾ ಆಡಳಿತಾತ್ಮಕ ವಿಚಾರದ ವಿವರಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತ್ತಾರೆ. ತಾನು ಮಾಜಿ ಪ್ರಧಾನಿ ಎಂಬುದು ಅವರಿಗೆ ಆಗಾಗ ನೆನಪಾಗುತ್ತದೆ

ನಮ್ಮ ರಾಜ್ಯದ ರಾಜಕೀಯ ಭೀಷ್ಮ ದೇವೇಗೌಡರ ತಲೆ ಹೇಗೆ ಓಡುತ್ತೆ. ಅವರ ಲೆಕ್ಕಾಚಾರಗಳು ಹೇಗಿರುತ್ತವೆ ಎನ್ನುವುದೇ ಸೋಜಿಗ.

ಕೆಲವು ಅಂಶಗಳನ್ನು ಗಮನಿಸೋಣ 1. ಅವರು ಹೆಚ್ಚು ಮಾತಾಡೋದಿಲ್ಲ. 2. ಅವರು ಏನ್ನೂ ಮರೆಯೋದಿಲ್ಲ. 3. ಸಾಂದರ್ಭಿಕವಾಗಿ ಹೆಜ್ಜೆ ಹಿಂದಿಡಲು ಮುಜುಗರ ಪಡೊದಿಲ್ಲ. ಇಷ್ಟು ಹೇಳಿದರೆ ಸಾಲದು. ಅವರ ಬಲು ದೊಡ್ಡ ಶಕ್ತಿ ಸಣ್ಣ ಪುಟ್ಟ ಪಟ್ಟಣ ಊರುಗಳ ತುಂಡು ಲೀಡರುಗಳ ನೇರ ಪರಿಚಯ. ಅರಸು ಅವರಿಗೆ ಈ ಶಕ್ತಿ ಇತ್ತು. ಬಂಗಾರಪ್ಪ ಅವರಿಗೂ ಇತ್ತು. ಇವರೆಲ್ಲಾ “ಫಲಾಪೇಕ್ಷೆ ಇಲ್ಲದೇ ಗೌಡರ ಮಾತು ನಡೆಸಿ ಕೊಡುತ್ತಾರೆ,” ಎಂಬ ಪ್ರತೀತಿ ಇದೆ.

ಗೌಡರನ್ನು ಗೌಡರ ನಾಯಕ ಎಂದಾಗಲೂ ತಮ್ಮಪ್ರಭಾವ ಇರುವ ಹಳೇ ಮೈಸೂರಿನ ಪ್ರದೇಶದಲ್ಲಿ ಸಣ್ಣ ಪುಟ್ಟ ಜಾತಿಗಳ ಉಪಗ್ರಹದಂಥಾ ನಾಯಕರನ್ನೂ ಅವರು ಇಟ್ಟುಕೊಂಡಿದ್ದಾರೆ. ಇವರೆಲ್ಲಾ ಠಳಾಯಿಸುವ ದೇಶಾವರಿ ಮಟ್ಟದಿಂದ ಬೆಳೆದವರಲ್ಲ. ಆದರೆ ಚುನಾವಣೆಯ ಸಮಯಕ್ಕೆ ಒದಗಿ ಬರುವ ಮಂದಿ ಇವರು. ಅವರು ಸಲಿಗೆಯಿಂದ ಮಾತಾಡಿಸುವುದಿಲ್ಲ. ಜೋಕ್ ಮಾಡುವುದಿಲ್ಲ. ಆದರೆ ಕರೆದು ಪಕ್ಕ ಕೂರಿಸಿ ಮಾತಾಡುವಾಗ ಗೌಡರ ಬಾಡಿ ಲಾಂಗ್ವೇಜ್ ಪರಿಣಾಮಕಾರಿಯಾಗಿರುತ್ತದೆ. ‘ನೀನು ನನಗೆ ಮುಖ್ಯ, ನಿನ್ನ ನೆಚ್ಚಿಕೊಂಡಿದೀನಿ’ ಅನ್ನುವ ಭಾವ ಹುಟ್ಟಿಸುತ್ತಾರೆ. ಅದೊಂದು ಆತನಲ್ಲಿ ಆತನಿಗಷ್ಟೇ ಹೇಳಿದ; ಆತನಲ್ಲಷ್ಟೇ ಹಂಚಿಕೊಂಡ ವಿಷಯ ಎಂಬಂತೆ ಸಾದರಪಡಿಸುತ್ತಾರೆ.

ನಿತ್ಯ ರಾಜಕೀಯದಿಂದ ದೂರ ಇರುವಂತೆ ವರ್ತಿಸುವ ದೇವೇಗೌಡರು ಪ್ರತಿಕ್ರಿಯಿಸುವುದಿಲ್ಲ. ಅಧ್ಯಯನ ಶೀಲತೆಯಿಂದಾಗಿ ಅವರು ಒಂದು ಇಲಾಖೆ ಅಥವಾ ಆಡಳಿತಾತ್ಮಕ ವಿಚಾರದ ವಿವರಗಳನ್ನು ಕ್ಷಣಾರ್ಧದಲ್ಲಿ ಹಿಡಿಯುತ್ತಾರೆ. ತಾನು ಮಾಜಿ ಪ್ರಧಾನಿ ಎಂಬುದು ಅವರಿಗೆ ಆಗಾಗ ನೆನಪಾಗುತ್ತದೆ. ಅವರು ರಾಷ್ಟ್ರ ಮಟ್ಟದಲ್ಲಿ ಬೆಳೆಸಿಕೊಂಡ ಸ್ನೇಹದ ಮೂಲಕ ಎರಡೂ ರಾಷ್ಟ್ರೀಯ ಪಕ್ಷಗಳ ಸ್ಥಳೀಯ ನಾಯಕರನ್ನು ಪಿಗ್ಗಿ ಬೀಳಿಸಬಲ್ಲರು.

ಆದರೆ ಅವರ ಲೆಕ್ಕಾಚಾರ ತಪ್ಪಿದ್ದೂ ಇದೆ. ಈ ಬಾರಿಯೂ ಅಷ್ಟೇ. ಕಳೆದ ಬಾರಿ 1ರಿಂದ ಐದು ಸಾವಿರ ಮತಗಳಿಂದ ಸೋತ 38 ಕ್ಷೇತ್ರಗಳ ಪಟ್ಟಿ ಹಿಡಿದು ಲೆಕ್ಕಾಚಾರ ಹಾಕಿದರೂ ಅದು ಕೈಗೂಡಲಿ. ತಮ್ಮ ಹಿಡಿತದಲ್ಲಿರುವ ಐದಾರು ಸಾವಿರ ಮತಗಳನ್ನು ಅಲ್ಲಲ್ಲಿ ಚೌಕಾಸಿಗೆ ಬಳಸಬಹುದು ಎಂಬ ಲೆಕ್ಕಾಚಾರ ಅವರಿಗಿತ್ತು. ಆದರೆ ಅದು ಈ ಬಾರಿ ದೊಡ್ಡ ಪ್ರಮಾಣದಲ್ಲಿ ಕೈಕೊಟ್ಟಿದೆ. ಅಷ್ಟೇಕೆ, ಮುಸ್ಲಿಮರ ಮತ ಬಾರದು ಎಂಬ ಸತ್ಯ ಅರಿವಾಗಿದ್ದೇ, ಮಾಯಾವತಿಯವರನ್ನು ಕರೆತಂದರೂ ಎಡಗೈ ದಲಿತರು ಭಾಜಪದಿಂದ ಮಿಸುಕಲಿಲ್ಲ. ಇದು ಅರ್ಥವಾಗಿದ್ದೇ ಗೌಡರು ಮಾಯಾವತಿಯನ್ನೂ ನೆಚ್ಚಿಕೊಳ್ಳಲಿಲ್ಲ. ತಕ್ಷಣ ತನ್ನ strongholdಗಳ ಮೇಲೆ ಮಾತ್ರಾ ಗಮನ ಹರಿಸಿದರು.

ಅವರು ಟ್ರಿಗರ್ ಮಾಡುವ loyalty ಯ ಲಕ್ಷಣ ಎಂದರೆ ಸರ್ಕಾರ ಮಾಡಿ ಆಡಳಿತ- ಅಭಿವೃದ್ಧಿಯ ಕನಸಲ್ಲ. ಆಡಳಿತದಲ್ಲಿ ಪಾಲು ಪಡೆದು ಸ್ಥಳೀಯ ನಿಯಂತ್ರಣದ ಕನಸು. ಬಹುಪಾಲು ಅವರು ಗೆದ್ದಿರುವ ಕ್ಷೇತ್ರಗಳಲ್ಲಿ ಸ್ಥಳೀಯ ಆಡಳಿತದ ನಿಯಂತ್ರಣದ ವಾಂಛೆ ಕೆಲಸ ಮಾಡಿದೆ. ಉದಾ: ಇಂದಿಗೂ ತಾಲೂಕಾಫೀಸು- ಪೋಲೀಸ್ ಸ್ಟೇಷನ್ ನಿಯಂತ್ರಿಸುವುದು ನಮ್ಮ ರಾಜಕಾರಣಿಯ ಕನಸು.

ಈ ಚುನಾವಣೆ ಗಮನಿಸಿದರೆ ನಮ್ಮ ಮುಖ್ಯ ಫ್ಯೂಡಲ್ ಜಾತಿಗಳಾದ ಒಕ್ಕಲಿಗ ಮತ್ತು ಲಿಂಗಾಯತ ಎರಡೂ ತಮ್ಮ ತಮ್ಮನೆಲೆಯಲ್ಲಿ consolidate ಆಗಿರುವುದು ಗೊಚರಿಸುತ್ತದೆ. ಸೈದ್ಧಾಂತಿಕ ಭೂಮಿಕೆಯ ತರಬೇತಿ ಮೂಲಕ ಕಣಕ್ಕಿಳಿದವರಲ್ಲ ಗೌಡರು. ಅವರಿಗೆ ಅದು ರಾಜಕೀಯ ಜೀವನದ ಪ್ರಯಾಣದಲ್ಲಿ ಅಲ್ಲಿ ಇಲ್ಲಿ ಮೇದು ದಕ್ಕಿಸಿಕೊಂಡ ಸಂಗತಿ. ಸೆಕ್ಯುಲರ್ ಎಂಬುದೂ ಪಠ್ಯ ಪ್ರಣಿತವಲ್ಲ. ಮೇಲ್ಜಾತಿಯ ಲಿಬರಲ್ ಧೋರಣೆಯ ಮೂಲಕ ದಕ್ಕಿದ pragmatic ನಿಲುವು.

ಗೌಡರ ಇನ್ನೊಂದು ಲಕ್ಷಣ ಅಂದರೆ ಅವರು ಶಕ್ತಿ ಕೇಂದ್ರದ ಮೂಲದೊಂದಿಗೆ ಸಂಪರ್ಕ ಬಯಸುವುದು. ಆ ಮೂಲಕ ಸ್ಥಳೀಯ ತುಂಡಾಳುಗಳನ್ನು ಲೆಕ್ಕಕ್ಕಿಲ್ಲ ಎಂಬುದನ್ನು ಮನದಟ್ಟು ಮಾಡುವುದು. ಅವರು ರಾಹುಲನನ್ನೂ ಕೇರು ಮಾಡುವುದಿಲ್ಲ, ಅವರಿಗೆ ಸ್ವಯಂ ಸೋನಿಯಾನೇ ಮಾತಾಡಿಸಬೇಕು. ಅದೆಷ್ಟು ಹೋಂ ವರ್ಕ್ ಮಾಡಿ ಎದುರಾಳಿಗಳ ಮಾನಸಿಕ ಸ್ಥಿತಿಯನ್ನು ಅಳೆದಿರುತ್ತಾರೆಂದರೆ ಅವರು ಗಂಟೆಗಡ್ಡಲೆ ಮಾತಾಡುವುದಿಲ್ಲ. ಅದೊಂಥರಾ ಕಪ್ಪೆ ದೊಡ್ಡ ನಾಲಗೆ ಚಾಚಿದ ಹಾಗೆ. ಸರಕ್ಕನೆ ಚಾಚಿ ಮತ್ತೆ ಬಾಯಿ ಮುಚ್ಚಿ ಕೂರುವ ಬಗೆ. ಮುಂದೆ ಅವರ ಯೋಚನೆ, ನಡೆ ಏನಿರಬಹುದು ಎಂದು ಎದುರಾಳಿಗಳು ತಲೆ ಕೆಡಿಸಿಕೊಂಡು ಕೂರಬೇಕು.

ಗೋಡೆಗೊರಗಿದ ಬೆಕ್ಕನ್ನು ಸೋಲಿಸಲು ಸಾಧ್ಯವಿಲ್ಲ ; ತಮ್ಮ ಭೌಗೋಳಿಕ ಮಿತಿ ಮತ್ತು ಸಮುದಾಯದ ನಿಷ್ಠೆಯನ್ನು ಅರ್ಥ ಮಾಡಿಕೊಂಡು ಆಟವಾಡುವ ಬಗೆ ಅದು. ಗೆಲ್ಲುವುದ ಭೌಗೋಳಿಕ ಮಿತಿಯೊಳಗೆ ಆದರೆ ಅದರಿಂದಾಚೆಯ governanceನ್ನು ಒಂದು overview ಮೂಲಕ ಗಮನಿಸುವುದ ಅವರಿಗೆ ಸಿದ್ಧಿಸಿದೆ.

ಅವರ ಸಂಶಯ ಪ್ರವೃತ್ತಿ ಬಗ್ಗೆ ಎಲ್ಲರೂ ಹೇಳುವುದಿದೆ. ನಾನು ಕೇಳಿದ ಅತ್ಯುತ್ತಮ anecdote URA ಮೇಷ್ಟ್ರು ಹೇಳಿದ್ದು. ಸ್ವಯಂ ಪಟೇಲರೇ ಅವರಲ್ಲಿ ಹೇಳಿದ್ದಂತೆ. ಜೆ ಎಚ್ ಪಟೇಲರನ್ನು ಕೂರಿಸಿ ಗೌಡರು ದೆಹಲಿ ಗದ್ದುಗೆ ಹತ್ತಿದ ಸಮಯ ಅದು. ರಾಜ್ಯದ ನಿಯಂತ್ರಣದ ಬಗ್ಗೆ ಗೌಡರಿಗೆ ಗೀಳು. ಪಟೇಲರು ಅವರನ್ನು ಬೇಟಿ ಮಾಡಿ ಮಾತಾಡಿ ಹೊರಗೆ ಬಂದ ಮೇಲೆ, “ ನೋಡು ನಾನಿದೀನಿ ಜೊತೆಗೆ ಅಂದ್ರೆ ತಿರುಗಿತಿರುಗಿ ನೋಡ್ತಾ ನಡಿತಾನೆ ಈ ಗೌಡ,” ಅಂದರಂತೆ ಪಟೇಲರು. ಚಿತ್ರಕ ಶಕ್ತಿಯ ವಿವರ ಅದು.

ಗೌಡರಿಗೆ ಹರಟೆ ಹೊಡೆಯುವ ಗೆಳೆಯರಿದ್ದರಾ? ಗೊತ್ತಿಲ್ಲ. ಅವರ ಸಮಕಾಲೀನರೆಲ್ಲಾ ನೇಪಥ್ಯಕ್ಕೆ ಸರಿದಾಗಿದೆ. ಈಗೇನಿದ್ದರೂ, ‘ಗೌಡರು ಕರೆಸಿ ಆಪ್ತವಾಗಿ ಮಾತಾಡಿದರು” ಎಂಬ ಬೀಗುವ ಮಾತು ಮಾತ್ರಾ. ಮೋದಿಗೂ ಗೆಳೆಯರಿಲ್ಲ. ಕಣ್ಣಿಟ್ಟಿದ್ದಾರೆ ಎಂಬ ಭಯದ ಭಾವ ಬಿತ್ತುವ ಮೂಲಕ ಮತ್ತು occational ಸ್ನೇಹದ ಮಾತಿನ ಮೂಲಕ ಒಂದು ಪ್ರಭಾವಳಿ ಸೃಷ್ಟಿಸುವ ಪ್ರಯತ್ನ ಅದು. ಆದರೆ ಗೌಡರಿಗಿರುವ ಶಕ್ತಿ ಎಂದರೆ ತನ್ನಸಮುದಾಯದ ನಿಷ್ಠೆ.

ಅವರಿಗಿದ್ದ ಏಕಮಾತ್ರಾ ಗೆಳೆಯ ಅಂದರೆ ಹೊಳೆನರಸಿಪುರದ ಸಾಧನಾ ಕ್ಲಿನಿಕ್ಕಿನ ವೈದ್ಯರು. ಗೌಡರು ಮೊದಲ ಚುನಾವಣೆಗೆ ನಿಂತಾಗ ಬೆನ್ನಿಗಿದ್ದವರು. ಅವರೆಂದೂ ರಾಜಕೀಯ ಮಾಡಲಿಲ್ಲ. ಗೆಳೆತನವನ್ನು ಬಳಸಿಕೊಳ್ಳಲಿಲ್ಲ. ಅವರು ಸತ್ತಾಗ ಗೌಡರು ದೆಹಲಿಯಿಂದ ಬಂದು ಕಣ್ಣೀರಿಟ್ಟಿದ್ದರು.

ಕುಟುಂಬದ ಹಿಡಿತದಲ್ಲಿ ಪಕ್ಷ ಇಟ್ಟುಕೊಂಡಿರುವ ಅವರಿಗೆ ಮುಂದಿನ ತಲೆಮಾರು ಇದೇ ರಿತಿ ಉಳಿಸಿಕೊಂಡೀತು ಎಂಬ ವಿಶ್ವಾಸ ಇಲ್ಲ. ಆ ಆತಂಕವನ್ನೂ ತೋರಗೊಟ್ಟವರಲ್ಲ!!

ಇದನ್ನೂ ಓದಿ : ವೈರಲ್ ವಿಡಿಯೋ | ಬಿಜೆಪಿ-ಜೆಡಿಎಸ್ ಒಪ್ಪಂದ ಕುರಿತು ಜಿ ಟಿ ದೇವೇಗೌಡ ಮಾತು

ತನ್ನ ಅಣತಿ ಮೀರಿದ ಪಕ್ಷೀಯರನ್ನು; ತನ್ನನ್ನು ಅವಮಾನಿಸಿದ ವಿಪಕ್ಷೀಯರನ್ನು ವ್ಯವಸ್ಥಿತವಾಗಿ ರಾಜಕೀಯವಾಗಿ ಮುಗಿಸುವ ruthlessness ಕೂಡಾ ಜಗತ್ಪ್ರಸಿದ್ಧ. ಅದನ್ನೂ ಅವರು ತುಂಬಾ ತಲೆಗೆ ಹಚ್ಚಿಕೊಂಡವರಲ್ಲ; ತೋರಗೊಟ್ಟವರೂ ಅಲ್ಲ. ಜಂಭದ ಮಾತಾಡವುದಂತೂ ಇಲ್ಲವೇ ಇಲ್ಲ!!!

ಕ್ಷಣಕ್ಷಣವೂ ಎಚ್ಚರದಲ್ಲಿದ್ದು ಈ ಕ್ಷಣ ಮುಂದಿನ ಕ್ಷಣವನ್ನು ನಿರ್ಧರಿಸುವ ಪ್ರಕ್ರಿಯೆಯ ಧ್ಯಾನ ಅವರಿಗೆ ಕರಗತವಾಗಿದೆ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More