ಯಡಿಯೂರಪ್ಪನವರ ‘ಅಣಕು’ ಪಟ್ಟಾಭಿಷೇಕವೂ ಗೌರವಯುತ ವಿದಾಯವೂ!

ಯಡಿಯೂರಪ್ಪನವರ ವರ್ಚಸ್ಸು ಲಿಂಗಾಯತ ಸಮುದಾಯದೊಳಗೆ ಮೊದಲಿನಷ್ಟು ಗಾಢವಾಗಿ ಇಲ್ಲ. ಚುನಾವಣಾ ವೇಳೆ ಅವರನ್ನು ಬದಿಗೆ ಸರಿಸಿ ಮತ್ತೊಬ್ಬರಿಗೆ ಪಕ್ಷದ ಉಸ್ತುವಾರಿ ನೀಡಿದರೆ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾವುದೆಂದು ಸುಮ್ಮನಿದ್ದ ಹೈಕಮಾಂಡ್ ಈಗ ‘ಅಣಕು’ ಕಾರ್ಯಾಚರಣೆಗೆ ಸಜ್ಜಾಗುತ್ತಿದೆ

ರಾಜ್ಯಭ್ರಷ್ಟ ವೃದ್ಧ ಅರಸನಿಗೊಂದು ಆಸೆಯಿತ್ತು. ಮರಳಿ ರಾಜ್ಯವ ಪಡೆದು ಒಂದು ದಿನದ ಮಟ್ಟಿಗಾದರೂ ತಾನು ಅರಸನಾಗಿ ರಾಜ್ಯವಾಳಬೇಕು ಎಂದು. ಅರಸನ ಸುತ್ತ ನೆರೆದಿದ್ದ ಮಾಂಡಳೀಕರಿಗೂ ಅದುವೇ ಬೇಕಿತ್ತು. ಏನಾದರೂ ಮಾಡಿ ಮಾಜಿ ಅರಸನ ಬಗ್ಗೆ ಪ್ರಜೆಗಳಲ್ಲಿ ಇರಬಹುದಾದ ಕನಿಕರವನ್ನು ಉದ್ದೀಪಿಸಿ, ದಂಗೆ ಏಳಿಸಿ ಸಿಂಹಾಸನದ ಮೇಲೆ ಕೂತವರನ್ನು ಕೆಡವಿ ತಾವುಗಳು ಅಧಿಕಾರ ಹಿಡಿಯಬೇಕು ಎಂದು. ಅದಕ್ಕಾಗಿ, ಅರಸನನ್ನು ಮುಂದಿಟ್ಟುಕೊಂಡು ಒಮ್ಮೆ ಸಿಂಹಾಸನ ಗೆದ್ದು ವೃದ್ಧ ಅರಸನಿಗೆ ಪಟ್ಟ ಕಟ್ಟಿ, ಆಸೆ ತೀರಿಸಿ, ಬಳಿಕ ಮೆಲ್ಲನೆ ಬದಿಗೆ ಸರಿಸಿ ತಾವುಗಳು ಸಿಂಹಾಸನದ ಮೇಲೆ ಕೂರಬಹುದು ಎನ್ನುವ ಲೆಕ್ಕಾಚಾರ ಅವರದು. ಹೀಗೆ, ರಾಜನನ್ನು ಕೆಲ ದಿನಗಳಿಗಾದರೂ ಸಿಂಹಾಸನದಲ್ಲಿ ಕೂರಿಸಿ ಆತನನ್ನು ನಿಧಾನವಾಗಿ ಬದಿಗೆ ಸರಿಸಿದರೆ ಇತ್ತ ಪ್ರಜೆಗಳ ವಿಶ್ವಾಸವೂ ತಮ್ಮ ಬಗ್ಗೆ ಉಳಿಯುತ್ತದೆ, ಮುಂದಿನ ದಿನಗಳಲ್ಲಿ ಅಧಿಕಾರವೂ ಉಳಿಯುತ್ತದೆ ಎನ್ನುವುದು ಈ ಮಾಂಡಳೀಕರ ಅಭಿಪ್ರಾಯ.

ಅಂತಿಮವಾಗಿ, ರಾಜ್ಯಭ್ರಷ್ಟ ಅರಸನನ್ನು ಮುಂದಿಟ್ಟುಕೊಂಡು ಚದುರಿದ್ದ ಸೇನೆಯನ್ನು ಒಗ್ಗೂಡಿಸಿ, ಪ್ರಜೆಗಳ ಸಹಕಾರದೊಂದಿಗೆ ಕಡೆಗೂ ರಾಜ್ಯವನ್ನು ಹಿಡಿಯಲಾಯಿತು. ಶುಭಮಹೂರ್ತವೊಂದನ್ನು ನೋಡಿ ವೃದ್ಧ ಸೇನಾನಿಗೆ ಪಟ್ಟಾಭಿಷೇಕವನ್ನೂ ಮಾಡಿ ಆಸೆ ತೀರಿಸಿದ್ದೂ ನಡೆಯಿತು. ತದನಂತರ ಕೆಲವೇ ದಿನಗಳಲ್ಲಿ ಪೂರ್ವತಂತ್ರದಂತೆ ರಾಜನನ್ನು ಬದಿಗೆ ಸರಿಸಿದ್ದಾಯಿತು. ರಾಜನನ್ನೇ ಬಲಿಕೊಟ್ಟು ರಾಜ್ಯದ ಅಧಿಕಾರ ಹಿಡಿಯಲಾಯಿತು.

ಈ ಕತೆ ಹೆಚ್ಚು ಕಡಿಮೆ ರಾಜ್ಯದ ಬಿಜೆಪಿಯ ಪ್ರಸಕ್ತ ಪರಿಸ್ಥಿತಿಗೆ ಹೊಂದುವಂತಿದೆ. ಪಕ್ಷದ ರಾಜ್ಯಾಧ್ಯಕ್ಷರಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಅಭ್ಯರ್ಥಿ ಬಿ ಎಸ್‌ ಯಡಿಯೂರಪ್ಪನವರ ಬೆನ್ನ ಹಿಂದೆ ನಿಂತು ತನ್ನ ಕೆಲಸವನ್ನು ಸಾಧಿಸಿಕೊಂಡಂತೆ ತೋರುತ್ತಿರುವ ಪಕ್ಷದ ವರಿಷ್ಠರು, ಇದೀಗ ಯಡಿಯೂರಪ್ಪ ಅವರನ್ನು ಬದಿಗೆ ಸರಿಸಲು ಒಂದು ‘ಗೌರವಯುತ ವಿದಾಯ’ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದ್ದಾರೆ ಎನ್ನುತ್ತವೆ ಪಕ್ಷದ ಮೂಲಗಳು. ಬಿಜೆಪಿಯ ಮೂಲಗಳನ್ನೇ ಆಧರಿಸುವುದಾದರೆ, ರಾಜ್ಯಪಾಲ ವಜುಭಾಯಿ ವಾಲಾ ಅವರು ಯಡಿಯೂರಪ್ಪನವರಿಗೆ ಸರ್ಕಾರ ರಚಿಸಲು ಆಹ್ವಾನಿಸಿದ್ದು, ಬಿಎಸ್‌ವೈ ಗುರುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಯಡಿಯೂರಪ್ಪನವರು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರ ಸಮ್ಮುಖದಲ್ಲಿ, ವಿವಿಧ ಬಿಜೆಪಿ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನು ಸ್ವೀಕರಿಸದೆ ಹೋದರೂ ರಾಜಭವನದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಇಲ್ಲವೇ ಗಾಜಿನ ಮನೆಯಲ್ಲಿ ಆಹ್ವಾನಿತ ಗಣ್ಯಾತಿಗಣ್ಯರ ಮುಂದೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅಲ್ಲಿಗೆ, ಮೇ ೧೭ನೇ ತಾರೀಖಿನಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಯಡಿಯೂರಪ್ಪನವರ ಆಸೆ ಕೈಗೂಡಲಿದೆ. ಆದರೆ, ಈ ಆಸೆ ಅಲ್ಪಾಯುವಾಗಲಿದ್ದು, ಯಡಿಯೂರಪ್ಪನವರು ಸದನದಲ್ಲಿ ವಿಶ್ವಾಸಮತವನ್ನು ಸಿದ್ಧಪಡಿಸಲಾಗದೆ ಸರ್ಕಾರ ಬಿದ್ದು ಹೋಗಲಿದೆ ಎನ್ನಲಾಗುತ್ತಿದೆ.

ಆ ಮೂಲಕ ಬಿಜೆಪಿಗೂ ಸಹ ಲಿಂಗಾಯತ ಸಮುದಾಯದ ಹಿರಿಯ ನಾಯಕನೊಬ್ಬನನ್ನು ಗೌರವಯುತವಾಗಿ ರಾಜ್ಯ ರಾಜಕಾರಣದಿಂದ ಬದಿಗೆ ಸರಿಸುವ ಅವಕಾಶ ಲಭ್ಯವಾಗಲಿದೆ, ಅದೂ ಲಿಂಗಾಯತ ಸಮುದಾಯದ ವಿಶ್ವಾಸವನ್ನು ತನ್ನೊಟ್ಟಿಗೇ ಇರಿಸಿಕೊಂಡು ಎನ್ನುವುದು ಇಲ್ಲಿ ಬಹುಮುಖ್ಯ.

ಹಾಗೆ ನೋಡಿದರೆ, ಯಡಿಯೂರಪ್ಪನವರ ವರ್ಚಸ್ಸು ಲಿಂಗಾಯತ ಸಮುದಾಯದೊಳಗೆ ಮೊದಲಿನಷ್ಟು ಗಾಢವಾಗಿ ಇಲ್ಲ. ಹಾಗಿದ್ದರೂ ಚುನಾವಣಾ ಸಂದರ್ಭದಲ್ಲಿ ತರಾತುರಿಯಲ್ಲಿ ಅವರನ್ನು ಬದಿಗೆ ಸರಿಸಿ ಮತ್ತೊಬ್ಬರಿಗೆ ಪಕ್ಷದ ಉಸ್ತುವಾರಿಯ ಹೊಣೆಗಾರಿಕೆ ನೀಡಿದರೆ ಸಮುದಾಯಕ್ಕೆ ಕೆಟ್ಟ ಸಂದೇಶ ರವಾನೆಯಾಗಬಹುದು, ಸಮುದಾಯ ಈ ಹಿಂದೆ ಪಕ್ಷದಿಂದ ದೂರಸರಿದಂತೆ ಈ ಬಾರಿಯೂ ದೂರ ಸರಿಯಬಹುದು ಎಂದು ಪಕ್ಷದ ವರಿಷ್ಠರು ಅಂತಹ ದುಸ್ಸಾಹಸಕ್ಕೆ ಕೈಹಾಕಲು ಹೋಗಿರಲಿಲ್ಲ. ಇದೀಗ ಯಡಿಯೂರಪ್ಪನವರು ‘ಖಾಲಿಯಾದ ಬತ್ತಳಿಕೆ’ ಎಂದು ಪಕ್ಷಕ್ಕೆ ಅರಿವಾಗಿದೆ. ಅಲ್ಲದೆ, ಅವರೊಂದಿಗೆ ಪ್ರತಿ ಬಾರಿಯೂ ಹಗ್ಗಜಗ್ಗಾಡುವುದರಿಂದ ಮೊದಲಿನಷ್ಟ ಪಕ್ಷಕ್ಕೇನೂ ಉಪಯೋಗವಾಗುತ್ತಿಲ್ಲ ಎನ್ನುವುದೂ ತಿಳಿದಿದೆ. ಹಾಗಾದರೆ, ಅವರನ್ನು ಈಗ ಏನು ಮಾಡುವುದು? ಈ ಪ್ರಶ್ನೆ ಪಕ್ಷದ ವರಿಷ್ಠರನ್ನು ಬಲವಾಗಿ ಕಾಡುತ್ತಿದೆ.

ಇದನ್ನೂ ಓದಿ : ಯಡಿಯೂರಪ್ಪ ಅವರ ಅತಿಯಾದ ಆತ್ಮವಿಶ್ವಾಸಕ್ಕೆ ಬಹುಶಃ ಈ 6 ಅಂಶಗಳೇ ಕಾರಣ

ಪ್ರಬಲ ಸಮುದಾಯದ ನಾಯಕರಾಗಿಲ್ಲದೆ ಹೋಗಿದ್ದರೆ ಯಡಿಯೂರಪ್ಪನವರನ್ನು ಸುಲಭವಾಗಿ ಬದಿಗೆ ಸರಿಸಬಹುದಿತ್ತು, ಈಗ ಹಾಗೆ ಮಾಡಿ ಸಮುದಾಯದ ವಿರೋಧ ಕಟ್ಟಿಕೊಳ್ಳಲಾಗುವುದಿಲ್ಲ. ಹಾಗಾಗಿ ಉಳಿದಿರುವ ಏಕೈಕ ಹಾದಿಯೆಂದರೆ ಮತ್ತೊಂದು ಬಾರಿ ಅವರಿಗೆ ‘ಅಣಕು’ ಪಟ್ಟಾಭಿಷೇಕವನ್ನು ಮಾಡಿ, ಸಮುದಾಯದ ವಿಶ್ವಾಸವನ್ನೂ ಉಳಿಸಿಕೊಂಡು, ಅತ್ತ ಬಹುಮತ ಸಾಬೀತಿಗೆ ಸಂಖ್ಯೆಯಿಲ್ಲದೆ ಹೋದಾಗ ತಾವಾಗಿಯೇ ಕೆಳಗಿಳಿಯುವಂತೆ ಮಾಡುವುದು. ಈ ಕಾರಣಕ್ಕೇ ಗುರುವಾರ ನಡೆಯಬಹುದಾದ ಪ್ರಮಾಣವಚನವನ್ನು ‘ಏಕ್‌ ದಿನ್‌ ಕಾ ಸುಲ್ತಾನ್‌’ನ ಪಟ್ಟಾಭಿಷೇಕ ಕಾರ್ಯಕ್ರಮ ಎಂದೇ ಪಕ್ಷದೊಳಗೆ ವ್ಯಾಖ್ಯಾನಿಸಲಾಗುತ್ತಿದೆ!

ಒಮ್ಮೆ, ಹೀಗೆ ಯಡಿಯೂರಪ್ಪನವರಿಗೆ ವಿದಾಯವನ್ನು ಹೇಳಿದರೆ, ಆನಂತರ, ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕೆ ಅತ್ಯಗತ್ಯವಾಗಿ ಬೇಕಿರುವ ನಾಯಕತ್ವವನ್ನು ರೂಪಿಸಬಹುದು ಎನ್ನುವ ಇಂಗಿತ ಪಕ್ಷದ ವರಿಷ್ಠರಿಗಿದೆ. ಈ ಅಭಿಪ್ರಾಯಕ್ಕೆ ರಾಜ್ಯದ ನಾಯಕರ ಸಮ್ಮತಿಯೂ ಇದೆ. ಹೊಸ ನಾಯಕತ್ವದಡಿ ೨೦೧೯ರ ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸುವ ಇಂಗಿತ ವರಿಷ್ಠರದು ಎನ್ನಲಾಗುತ್ತಿದೆ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More